ವಿಷಯಕ್ಕೆ ಹೋಗು

ನಗರೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಗರೀಕರಣ ರಾಷ್ಟ್ರವೊಂದರಲ್ಲಿ ವಿಫುಲ ಅವಕಾಶಗಳು ಉಳ್ಳ ನಗರಗಳು ಹೆಚ್ಚಾಗುವ ಪ್ರಕ್ರಿಯೆ ಅನ್ನು ನಗರೀಕರಣ ಎಂದು ಕರೆಯಲಾಗುತ್ತದೆ. ವ್ಯಾಪಕ ನಗರೀಕರಣ ೨೦ನೆ ಶತಮಾನದ ಪ್ರಮುಖ ಬೆಳವಣಿಗೆ.

ವ್ಯಾಖ್ಯಾನ

[ಬದಲಾಯಿಸಿ]

ಒಂದು ದೇಶದ ಜನರನ್ನು ಗ್ರಾಮೀಣ, ನಗರೀಯ ಎಂದು ವರ್ಗೀಕರಿಸಬಹುದು. ಒಂದು ದೇಶದಲ್ಲಿ ಗ್ರಾಮೀಣ ಜನಸಂಖ್ಯೆಗೂ ನಗರೀಯ ಜನಸಂಖ್ಯೆಗೂ ಇರುವ ಅನುಪಾತ ಅಲ್ಲಿಯ ಆರ್ಥಿಕ, ಸಾಮಾಜಿಕ ಹಾಗೂ ಜನವಲಸೆಯ ಸ್ವರೂಪಗಳಿಗೆ ಅನುಗುಣವಾಗಿರುತ್ತದೆ. ನಗರ ಪ್ರದೇಶದ ಸಾಪೇಕ್ಷ ಬೆಳವಣಿಗೆಯ ಪ್ರಕ್ರಿಯೆಯೇ ನಗರೀಕರಣ. ನಗರ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯಿಂದ ನಗರೀಕರಣದ ಪ್ರಮಾಣವನ್ನು ಅರಿಯಬಹುದು. ನಗರೀಯ ಕೇಂದ್ರಗಳು ಆರ್ಥಿಕ ಪ್ರಗತಿಯ ವೇಗವರ್ಧನೆಯ ಸಾಧನಗಳಾಗಿರುವುದುಂಟು. ಆದ್ದರಿಂದ ಅವುಗಳಿಂದ ಕೆಲವು ಅನುಕೂಲಗಳುಂಟು. ಆದರೆ ಅವುಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕøತಿಕವಾಗಿ ಕೆಲವು ಸಮಸ್ಯೆಗಳೂ ಉದ್ಭವಿಸುತ್ತವೆ. ಅನುಕೂಲಗಳನ್ನು ಬಳಸಿಕೊಳ್ಳುವ ಮತ್ತು ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಒಂದು ದೇಶದ ನಗರೀಕರಣದ ಅಧ್ಯಯನ ಅಗತ್ಯವೆನಿಸುತ್ತದೆ. ಜನಗಣತಿಯಲ್ಲಿ ನಗರೀಕರಣಕ್ಕೆ ಸಂಬಂಧಿಸಿದ ವಿವರಗಳನ್ನೂ ಸಾಮಾನ್ಯವಾಗಿ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ದೇಶದ ಜನಸಂಖ್ಯೆಯನ್ನೂ ಸಾಮಾನ್ಯವಾಗಿ ನಗರೀಯ ಹಾಗೂ ಗ್ರಾಮೀಣ ಎಂದು ವರ್ಗೀಕರಿಸುವುದು ಸಾಮಾನ್ಯವಾದರೂ ಈ ವಿಚಾರದಲ್ಲಿ ಎಲ್ಲ ದೇಶಗಳೂ ಒಂದೇ ಮಾನದಂಡವನ್ನು ಇಟ್ಟುಕೊಂಡಿರುವುದಿಲ್ಲ. ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ.

ದೇಶಾವಾರು ತುಲನೆ

[ಬದಲಾಯಿಸಿ]

ಉದಾಹರಣೆಗೆ ಸ್ವೀಡನ್ನಿನಲ್ಲಿ ೨೦೦ ಜನರಿರುವ ವಸತಿ ಪ್ರದೇಶವನ್ನು ನಗರೀಯವೆಂದು ಹೇಳಲಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ೫೦೦, ಕೆನಡದಲ್ಲಿ ೧೦೦೦, ಪೂರ್ವ ಜರ್ಮನಿಯಲ್ಲಿ ೨೦೦೦, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ೨೫೦೦, ಜಾರ್ಡನಿನಲ್ಲಿ ೧೦೦೦೦ ಜನರಿರುವ ಪ್ರದೇಶಗಳನ್ನು ನಗರೀಯ ಎಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ಒಂದು ಪ್ರದೇಶವನ್ನು ನಗರ ಪ್ರದೇಶ ಎಂದು ಎನ್ನಬೇಕಾದರೆ

  • ಅಲ್ಲಿ ಕನಿಷ್ಠ ೫೦೦೦ ಜನಸಂಖ್ಯೆ ಇರಬೇಕು.
  • ಅಲ್ಲಿಯ ಪುರುಷ ದುಡಿಮೆಗಾರರಲ್ಲಿ ಕನಿಷ್ಠ ಮುಕ್ಕಾಲು ಪಾಲು ಜನ ಕೃಷಿಯನ್ನು ಹೊರತು ಪಡಿಸಿದ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿರಬೇಕು
  • ಪ್ರತಿ ಚ.ಕಿಮೀ.ಗೆ ಕನಿಷ್ಠ ೪೦೦ರಂತೆ (ಚ.ಮೈ.ಗೆ ೧೦೦೦)ಜನಸಾಂದ್ರತೆ ಇರಬೇಕು.
  • ಪೌರಸಭಾ, ಕಾರ್ಪೊರೇಷನ್ ಅಥವಾ ದಂಡು ಇರುವ, ಇಲ್ಲವೇ ನಗರಪ್ರದೇಶವೆಂದು ಅಧಿಸೂಚಿತವಾಗಿರುವ ಎಲ್ಲ ಸ್ಥಳಗಳೂ ನಗರೀಯ ಪ್ರದೇಶಗಳೆನಿಸಿಕೊಳ್ಳುತ್ತವೆ.

[]

ಕಾರಣಗಳು

[ಬದಲಾಯಿಸಿ]

ನಗರೀಕರಣ ಪ್ರಪಂಚಾದ್ಯಂತ ವೇಗವಾಗಿ ಆಗುತ್ತಿರುವುದು, ೨೦ನೆ ಶತಮಾನದ ಪ್ರಮುಖ ಬೆಳವಣಿಗೆ. ಏಷ್ಯ ಮತ್ತು ಆಫ್ರಿಕಗಳಂಥ ಹಿಂದುಳಿದ ಪ್ರದೇಶಗಳಿಗಿಂತ ಅಮೆರಿಕ, ಯೂರೋಪ್, ಓಷಿಯಾನಿಯ ಈ ಪ್ರದೇಶಗಳಲ್ಲಿ ನಗರೀಕರಣ ಹೆಚ್ಚಿನ ವೇಗದಲ್ಲಿ ಸಂಭವಿಸಿದೆ. ಮುಂದುವರಿದ ಪ್ರದೇಶಗಳಲ್ಲಿ ತೀವ್ರಗತಿಯಲ್ಲಿ ನಗರೀಕರಣವಾಗುತ್ತಿರಲು ಕಾರಣ ಅಲ್ಲಿಯ ಕೈಗಾರಿಕಾಭಿವೃದ್ಧಿ ಮತ್ತು ಅದರಿಂದ ಹೆಚ್ಚಿದ ವಾಣಿಜ್ಯ ಚಟುವಟಿಕೆಗಳಿಗೆ ಅಲ್ಲಿ ತೀವ್ರವಾಗಿ ಏರುತ್ತಿರುವ ಬೇಡಿಕೆ, ಕಾರಣವಾಗಿತ್ತು.

ನಗರೀಕರಣಕ್ಕೆ ಕಾರಣವಾದ ಅಂಶಗಳು ಸಾಮಾನ್ಯವಾಗಿ ಎರಡು:

  1. ಜನಸಂಖ್ಯೆಯ ಸ್ವಾಭಾವಿಕ ಬೆಳವಣಿಗೆಯ ಫಲವಾದ ಏರಿಕೆ.
  2. ಗ್ರಾಮಪ್ರದೇಶಗಳಿಂದ ಪಟ್ಟಣಗಳಿಗೆ ಜನರ ವಲಸೆ.

ಪಟ್ಟಣಪ್ರದೇಶಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಆಹಾರ ಗುಣಮಟ್ಟ ಉತ್ತಮವಾಗಿರುವುದರಿಂದ ಗ್ರಾಮಪ್ರದೇಶಗಳಲ್ಲಿರುವುದಕ್ಕಿಂತ ನಗರಪ್ರದೇಶಗಳಲ್ಲಿ ಮರಣದರ ಕಡಿಮೆಯಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾನದಲ್ಲಿ ಜನಸಂಖ್ಯೆಯ ಏರಿಕೆ ಆಗುವ ಸಾಧ್ಯತೆ ಇರುತ್ತದೆ. ಎರಡನೆಯದಾಗಿ, ಗ್ರಾಮ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಆದ್ದರಿಂದ ಅಲ್ಲಿಯ ಜನರು ಉದ್ಯೋಗಾಕಾಂಕ್ಷೆಯಿಂದ ಪಟ್ಟಣಗಳಿಗೆ ಹೋಗುತ್ತಾರೆ. ಪಟ್ಟಣಗಳಲ್ಲಿಯ ಹೆಚ್ಚಿನ ಉದ್ಯೋಗಾವಕಾಶಗಳು, ಮನೋರಂಜನೆ, ಆರೋಗ್ಯ, ನೈರ್ಮಲ್ಯ, ಶಿಕ್ಷಣಸೌಲಭ್ಯ ಮೊದಲಾದ ಅನುಕೂಲಗಳು ಗ್ರಾಮವಾಸಿಗಳನ್ನು ಅವುಗಳತ್ತ ಸೆಳೆಯುತ್ತವೆ. ಇದರಿಂದ ನಗರೀಕರಣದ ವೇಗ ಹೆಚ್ಚುತ್ತದೆ. ೧೯೮೦ರಿಂದ ಭಾರತದ ಗ್ರಾಮಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಾ, ಕೂಲಿಯನ್ನು ಅರಸಿ, ಗ್ರಾಮಸ್ಥರು ನಗರಗಳಿಗೆ ವಲಸೆಯಾಗುವ ಪ್ರಕ್ರಿಯೆ ಹೆಚ್ಚಾಯಿತು.[[en:Urbanisation_in_India ]]೧೯೦೧ರಲ್ಲಿ ೧೧.೪% ಭಾರತೀಯರು ನಗರಗಳಲ್ಲಿ ವಾಸ ಮಾಡುತ್ತ್ತ ಇದ್ದರು ಎಂಬುದು ಜನಗಣತಿಯ ಲೆಕ್ಕ ಆಗಿತ್ತು.[]೨೦೦೧ರ ಜನಗಣತಿಯಂತೆ ಇದು ಶೇಕಡ ೨೮.೫೩% ಇದೆ.[]

ಭಾರತದಲ್ಲಿ ನಗರೀಕರಣ

[ಬದಲಾಯಿಸಿ]

ಪ್ರಪಂಚದ ಉಳಿದ ಪ್ರದೇಶಗಳಂತೆಯೇ ಭಾರತದಲ್ಲೂ ದೊಡ್ಡ ನಗರಗಳ ಬೆಳವಣಿಗೆಯಾಗುತ್ತಿದೆ. ೧೯೦೧ರಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯುಳ್ಳ ನಗರಗಳ ಸಂಖ್ಯೆ ೨೫ ಮಾತ್ರವಿತ್ತು; ೧೯೭೧ರ್ ವೇಳೆಗೆ ಅಂಥ ನಗರಗಳ ಸಂಖ್ಯೆ ೧೫೧. ನಗರ ಪ್ರದೇಶದ ಒಟ್ಟು ಜನಸಂಖ್ಯೆಯ ಮೂರನೆಯ ಎರಡು ಪಾಲು ಜನ ಇಂಥ ನಗರಗಳಲ್ಲಿಯೇ ವಾಸಿಸುತ್ತಾರೆ. ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಉಳ್ಳ ನಗರಗಳ ಸಂಖ್ಯೆ ೧೯೧೧ರಲ್ಲಿ ೨ ಮಾತ್ರವಿತ್ತು; ೧೯೭೧ರಲ್ಲಿ ಅಂತಹ ೮ ನಗರಗಳು ಇದ್ದವು. ಅದಾಗ ಅವುಗಳನ್ನು ಮೆಟ್ರೋ ನಗರಗಳು ಎಂದು ಪರಿಗಣಗೆ ಮಾಡಲಾಯಿತು. ಅವುಗಳ ಪೈಕಿ ಮುಂಬಯಿ, ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್ ಅತಿ ಹೆಚ್ಚಿನ ದರದಲ್ಲಿ ಬೆಳೆಯುತ್ತಿತ್ತು. (ಉಳಿದ ನಾಲ್ಕು ದೊಡ್ಡ ನಗರಗಳು ಕಲ್ಕತ್ತ, ಮದ್ರಾಸ್, ಹೈದರಾಬಾದ್ ಮತ್ತು ಕಾನ್ಪುರ). ೨೦೦೧ರ ಜನಗಣತಿಯಲ್ಲಿ ಇಂತಹ ೫೦೦ ನಗರಗಳು ಇದ್ದವು.೨೦೫೦ರ ಹೊತ್ತಿಗೆ, ೮೦ ಕೋಟೀಗೂ ಮಿಗಿಲಾಗಿ ಭಾರತೀಯರು ನಗರಗಳಲ್ಲಿ ವಾಸಿಸುತ್ತಾರೆ ಎಂದು ಅಂದಾಜು ಮಾಡಲಾಗಿದೆ.[]

ಸಮಸ್ಯೆಗಳು

[ಬದಲಾಯಿಸಿ]

ಆರ್ಥಿಕ ಬೆಳವಣಿಗೆ ಮತ್ತು ಔದ್ಯೋಗಿಕ ರಚನೆಯ ಬದಲಾವಣೆಯನ್ನು ನಗರೀಕರಣ ಸೂಚಿಸುತ್ತದೆ. ಆದರೆ ನಗರಗಳ ಅತಿಯಾದ ಬೆಳವಣಿಗೆಯಿಂದ ಕೆಲವು ಸಮಸ್ಯೆಗಳು ಉದ್ಭವಿಸುತ್ತದೆ. ತೀವ್ರಗತಿಯ ನಗರ ಬೆಳವಣಿಗೆಯಿಂದ ವಿದ್ಯಾಭ್ಯಾಸ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್ತು, ಸಾರಿಗೆ-ಸಂಪರ್ಕ ಮುಂತಾದ ಅವಶ್ಯಕ ಸೇವೆಗಳ ಮೇಲೆ ಒತ್ತಡ ಉಂಟಾಗಿ ಸರ್ಕಾರ ಮತ್ತು ಪೌರಸಭೆಗಳಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಯೋಜಿತವಲ್ಲದ ನಗರಗಳ ಬೆಳವಣಿಗೆ ಕೊಳೆಗೇರಿಗಳ ಅವಕಾಶ ಉಂಟು ಮಾಡುವುದಲ್ಲದೆ ಕಳ್ಳತನ, ದರೋಡೆ, ವೇಶ್ಯಾಗಾರಿಕೆ ಮುಂತಾದ ಸಾಮಾಜಿಕ ಬೇನೆಗಳಿಗೆ ಎಡೆಮಾಡಿಕೊಡುತ್ತದೆ. []ಆದ್ದರಿಂದ ನಗರ ಬೆಳವಣಿಗೆಯನ್ನು ಯೋಜಿತ ರೀತಿಯಲ್ಲಿ ಕೊಂಡೊಯ್ಯುವ ದೃಷ್ಟಿಯಿಂದಲೂ ಮೇಲಿನ ಸಮಸ್ಯೆಗಳ ಪ್ರಖರತೆಯನ್ನು ಕಡಿಮೆಮಾಡುವ ದೃಷ್ಟಿಯಿಂದಲೂ ನಗರಾಡಳಿತ ಸಂಸ್ಥೆಗಳು ನಗರ ಯೋಜನೆಗಳನ್ನು ತಯಾರಿಸಿ ಅನುಷ್ಠಾನಕ್ಕೆ ತರುವುದುಂಟು.
ಕೊಳಚೆ ಪ್ರದೇಶಗಳು, ಪರಿಸರ ಮಾಲಿನ್ಯ (ನೀರು, ಗಾಳಿ ಮತ್ತು ಭೂಮಿ) ಮತ್ತು ಎಲ್ಲಕ್ಕಿಂತಲೂ ಜನಸಾಂದ್ರತೆಯಿಂದ ಸಂಚಾರ ಮತ್ತು ಇತರೇ ನಾಗರೀಕ ಸೌಲಭ್ಯಗಳು ಬಲು ದುಬಾರಿ ಮತ್ತು ಕಷ್ಟಕರವಾಗುತ್ತವೆ.[]


ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2019-12-26. Retrieved 2019-12-12.
  2. https://books.google.com/books?id=RG3sTfBh47YC
  3. https://timesofindia.indiatimes.com/realtime/Economic_Survey_2017_18.pdf
  4. https://www.mckinsey.com/featured-insights/urbanization/urban-awakening-in-india
  5. https://books.google.com/books?id=wVHu1souvqYC&pg=PA1
  6. "ಆರ್ಕೈವ್ ನಕಲು". Archived from the original on 2018-08-31. Retrieved 2019-12-12.
"https://kn.wikipedia.org/w/index.php?title=ನಗರೀಕರಣ&oldid=1202782" ಇಂದ ಪಡೆಯಲ್ಪಟ್ಟಿದೆ