ವಿಷಯಕ್ಕೆ ಹೋಗು

ತುಳಸಿಗೇರಿಯ ಹನುಮಪ್ಪನ ಜಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಾಮೀಣ ಪ್ರದೇಶದಲ್ಲಿ ಊರ ದೇವರ ಜಾತ್ರೆ ಎಂದರೆ ಅಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಆ ವಿಶೇಷತೆಯ ಹಿಂದೆ ಅನಾದಿ ಕಾಲದಿಂದಲೂ ನಡೆದು ಬಂದಿರುವ ಸಂಸ್ಕಾರ ಹಾಗೂ ಸಂಸ್ಕøತಿಗಳು ಅಲ್ಲಿ ನಡೆಯುವ ಆಚರಣೆಗಳ ಮೂಲಕ ಅನಾವರಣಗೊಳ್ಳುತ್ತವೆ ಎಂಬುದಕ್ಕೆ ಬಾಗಲಕೋಟೆ ಜಿಲ್ಲೆ ತುಳಸಿಗೇರಿಯಲ್ಲಿ ನಡೆಯುವ ಓಕಳಿ ಹಬ್ಬವೇ ಸಾಕ್ಷಿ.

ಭಕ್ತರ ಸಮೂಹದ ಆರಾಧ್ಯ ದೇವರು:

ತುಳಸಿಗೇರಿ ಗ್ರಾಮದ ಆಂಜನೇಯ ದೇವರಿಗೆ ಬಾಗಲಕೋಟೆ ಸೇರಿದಂತೆ ಸುತ್ತಲಿನ ವಿವಿಧ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಭಕ್ತರು ಇದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಯಾವುದೇ ಪ್ರದೇಶದಲ್ಲಿರಲಿ ತಪ್ಪದೆ ಬಂದು ಆಂಜನೇಯನ ಬಣ್ಣದ ಹೊಂಡದಲ್ಲಿ ಮಿಂದು ಓಕಳಿಯಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಅಷ್ಟೆ ಏಕೆ ರಾಜಕೀಯ ವ್ಯಕ್ತಿಗಳು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ, ರೈತರು ಬಿತ್ತನೆ ಆರಂಭಿಸುವಾಗ, ಮಳೆಯ ಮುನ್ಸೂಚನೆ, ಬೆಳೆ ಕೊಯ್ಲು, ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡುವ ಸಮಯ, ಗಂಡನ ಮನೆಗೆ ಮಗಳನ್ನು ಕಳಿಸಲು, ಹೊಸ ಮನೆಗೆ ಪಾಯ ತೋಡಲು, ರೋಗ ರುಜಿನಗಳಿಗೆ... ಹೀಗೆ ಎಲ್ಲ ಶುಭ ಮುಹೂರ್ತಗಳಿಗೆ, ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಗೆ ಭಕ್ತರು ಈ ಆಂಜನೇಯನ ಮೊರೆ ಹೋಗುತ್ತಾರೆ. ದೂರ ದೂರದಿಂದ ಇಲ್ಲಿಗೆ ಬರುವ ಭಕ್ತರು ಅರ್ಚಕರ ಮೂಲಕ ದೇವರ ಮೂರ್ತಿಗೆ ಕೌಲು (ಹೂವು) ಕಟ್ಟುವುದರ ಮೂಲಕ ಬೇಡಿಕೊಳ್ಳುತ್ತಾರೆ. ಆಂಜನೇಯ ತನ್ನ ಬಲಭಾಗದಿಂದ ಹೂವು ಉದುರಿಸುವುದರ ಮೂಲಕ ಭಕ್ತರಿಗೆ ವರ ನೀಡಿದರೆ ಅದು ಶುಭಶಕುನ ಎಂದು ಎಡಭಾಗದಿಂದ ನೀಡಿದರೆ ಅದು ಅಪಶಕುನ ಎಂದು ತಿಳಿದುಕೊಳ್ಳುತ್ತಾರೆ. ಅಪಶಕುನ ಬಂದರೆ ದೇವರಿಗೆ ಹರಕೆ ಹೊರುವುದರ ಮೂಲಕ ಮತ್ತೆ ಕೌಲು ಕಟ್ಟಿ ಆಂಜನೆಯಯನಿಂದ ವರ ಪಡೆದುಕೊಳ್ಳುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ಎಲ್ಲ ಕಾರಣಗಳಿಂದ ಭಕ್ತರು ಈ ದೇವಸ್ಥಾನಕ್ಕೆ ಬರುವುದರಿಂದ ವರ್ಷದ ಎಲ್ಲ ದಿನಗಳಲ್ಲೂ ಈ ದೇವಸ್ಥಾನ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ಓಕಳಿ ಹಿಂದೆ ಕಠಿಣ ಸಂಪ್ರದಾಯ:

ಈ ಗ್ರಾಮಸ್ಥರು ಆಚರಿಸುತ್ತಿರುವ ಓಕಳಿ ಹಬ್ಬಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮೊದಲು ಐದು ವರ್ಷಗಳಿಗೊಮ್ಮೆ ಆಚರಿಸುತ್ತಿದ್ದ ಮಾರುತೇಶ್ವರ ಓಕಳಿ ಆಚರಣೆಯನ್ನು ನಂತರದ ದಿನಗಳಲ್ಲಿ ಮೂರು ವರ್ಷಕ್ಕೊಮ್ಮೆ, ಕಳೆದ 10 ವರ್ಷದಿಂದ ವರ್ಷಕ್ಕೊಮ್ಮೆ ಆಚರಿಸುತ್ತಿದ್ದಾರೆ.

ಓಕಳಿ ಆಚರಿಸಿದ ವರ್ಷ ಕಟ್ಟುನಿಟ್ಟಾದ ನಿಯಮಗಳನ್ನು ಆ ಗ್ರಾಮಸ್ಥರು ಪಾಲಿಸಬೇಕು ಎಂಬುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಅಂದ ಹಾಗೆ ಆಂಜನೇಯಸ್ವಾಮಿಯ ಜಾತ್ರೆಯ ಆರಂಭದಲ್ಲಿ ನಡೆಯುವ ಓಕಳಿ ಹಬ್ಬದ ಬಳಿಕ ಗ್ರಾಮದಲ್ಲಿ ಆರು ತಿಂಗಳವರೆಗೆ ಗಂಡು ಮಕ್ಕಳಿಗೆ ಮದುವೆ ಮಾಡುವಂತಿಲ್ಲ, ಮನೆಗಳಿಗೆ ಸುಣ್ಣ- ಬಣ್ಣ ಬಳಿಯುವಂತಿಲ್ಲ, ಕಾರಹುಣ್ಣಿಮೆ ಆಚರಣೆ ಮಾಡುವಂತಿಲ್ಲ, ಜಾನುವಾರುಗಳನ್ನು ಶೃಂಗರಿಸುವಂತೆ ಇಲ್ಲ, ಮನೆಗೆ ಪೊರಕೆ ತರುವಂತೆಯೂ ಇಲ್ಲ. ಒಟ್ಟಾರೆ ಗ್ರಾಮಸ್ಥರು ಯಾವ ಶುಭ ಕಾರ್ಯಗಳೂ ಮಾಡುವಂತಿಲ್ಲ. ಇದೇನು ವಿಚಿತ್ರ ಸಂಪ್ರದಾಯ ಅಂತ ಹುಬ್ಬೇರಿಸಿಬೇಡಿ ಇದು ಈ ಗ್ರಾಮದ ಮಾರುತೇಶ್ವರ ಓಕಳಿ ಸಂಭ್ರಮದ ಹಿಂದೆ ಅಡಗಿರುವ ಸೋಜಿಗ ಸಮಾಚಾರ. ಒಂದು ವೇಳೆ ಸಂಪ್ರದಾಯ ಮುರಿದರೆ ತೊಂದರೆ ಎದುರಾಗುತ್ತದೆ ಎಂಬುದು ಅವರ  ಬಲವಾದ ನಂಬಿಕೆ. ನಿಯಮಗಳು ಕಠಿಣವೆನಿಸಿದರೂ ಸ್ಥಳೀಯರಿಗೆ ಅವೆಲ್ಲ ಸಾಮಾನ್ಯವಾಗಿವೆ. ಆದರೆ ಹೆಣ್ಣು ಮಕ್ಕಳ ಮದುವೆ ನಡೆಯಲು ಯಾವ ಅಡ್ಡಿಯೂ ಇಲ್ಲ. “ಹೆಣ್ಣು ಮಕ್ಕಳ ಮದುವೆ ಗಂಡಿನ ಮನೆಯ ಮುಂದೆ ನಡೆಯುವ ಕಾರಣವಾಗಿ ಈ ಪದ್ಧತಿ ಅವರಿಗೆ ಅನ್ವಯಿಸುವುದಿಲ್ಲ, ಈ ಕಾರಣವಾಗಿ ನಾವೆಲ್ಲ ಮದುವೆ ನಡೆಯುವ ವರನ ಊರಿಗೆ ಹೋಗಿ ವಿವಾಹ ನೆರವೇರಿಸಿ ಬರುತ್ತೇವೆ’ ಎಂದು ಸ್ಥಳೀಯ ಯಜಮಾನ ಹನುಮಂತ ಪಾಟೀಲ ವಿವರಣೆ ನೀಡುತ್ತಾರೆ. ಕಾರ್ತಿಕ ಮಾಸದ ತುಳಸಿ ಲಗ್ನದ ಬಳಿಕ ಗ್ರಾಮದಲ್ಲಿ ಹುಡುಗರ ಮದುವೆ ಸೇರಿದಂತೆ ಎಲ್ಲ ಬಗೆಯ ಶುಭ ಕಾರ್ಯಗಳು ಆರಂಭವಾಗುತ್ತವೆ.

ದೇವಾಲಯದ ಮುಂದೆ ಓಕಳಿ ಸಂಭ್ರಮ:

ಓಕುಳಿ ಹಬ್ಬ ಆಚರಣೆ ವೇಳೆ ದೇವಾಲಯದ ಆವರಣದಲ್ಲಿರುವ ಚಿಕ್ಕ ಹೊಂಡದಲ್ಲಿ ಮೊದಲು ಓಕುಳಿಗೆ ಬೇಕಾದ ಎಲ್ಲ ವಸ್ತುಗಳನ್ನ ಸಿದ್ಧಪಡಿಸಲಾಗುತ್ತದೆ. ಓಕಳಿ ಎರಚಲು ಬೇಕಾಗುವ 3,665 ಕೊಡಗಳಷ್ಟು ನೀರನ್ನು ಹೊಂಡದಲ್ಲಿ ಶೇಖರಿಸಲಾಗುತ್ತದೆ. ಹೊಂಡದ ಸುತ್ತಲೂ ಹಸಿರು ಚಪ್ಪರ, ಹೂವು, ಹಣ್ಣು, ಹಸಿರು ತೋರಣ, ಕಜ್ಜಾಯ ತೋರಣ ಕಟ್ಟಿರಲಾಗುತ್ತದೆ. ತಿಳಿ ನೀರ ಬಣ್ಣದ ಹೊಂಡದಲ್ಲಿ ರಂಗು ರಂಗಿನ ನೀರಿನ ಚಮಕ್ ಕಾಣುತ್ತಿರುತ್ತದೆ. ಬಳಿಕ ನೀರಬೂದಿಹಾಳ ಗ್ರಾಮದಿಂದ ಬೆಳ್ಳಿ ಪಲ್ಲಕ್ಕಿಯನ್ನ ತಂದು ಊರ ತುಂಬ ಮೆರವಣಿಗೆ ಮಾಡಲಾಗುತ್ತದೆ. ಸಂಜೆ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲಗಂಬ ಮತ್ತು ಒಳಕಲ್ಲು ಪೂಜೆಗಳನ್ನು ನೆರವೇರಿಸುವುದರೊಂದಿಗೆ ಓಕುಳಿಯ ಆಚರಣೆಗೆ ಚಾಲನೆ ನೀಡಲಾಗುತ್ತದೆ.  ಯುವಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಎಲ್ಲರನ್ನ ಓಕುಳಿಯತ್ತ ಎಳೆಯುವ ಮೂಲಕ ಓಕುಳಿ ಆಚರಣೆಗೆ ಮತ್ತಷ್ಟು ರಂಗು ತರುತ್ತಾರೆ. ಓಕುಳಿಯಲ್ಲಿ ಮಿಂದೇಳುವುದರಿಂದ ತಮಗೆ ಯಾವ ಕೆಡಕು, ತೊಂದರೆ ಆಗುವುದಿಲ್ಲ ಎನ್ನುವುದು ಜನರ ನಂಬಿಕೆ. ಈ ಓಕುಳಿಯ ಇನ್ನೊಂದು ವಿಶೇಷವೇನೆಂದರೆ ಬಣ್ಣದ ಓಕುಳಿ ಹೊಂಡದಲ್ಲಿರುವವರು ಹೊಂಡದ ದಂಡೆಗೆ ಸುತ್ತುತ್ತಿರೋ ಒಂಬತ್ತು ಜನ ಸೇವಕರಿಗೆ ನೀರನ್ನು ಎರಚಲು ಮುಂದಾಗುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಒಂಬತ್ತು ಜನರು ಬಣ್ಣ ಹಾಕಿದವರಿಗೆ ಕೈಯಲ್ಲಿರುವ ಬಿದಿರಿನಿಂದ ಬಡಿಯುವಂತಹ ದೃಶ್ಯಗಳು ಅಚ್ಚರಿಯಾಗಿರುತ್ತವೆ. ಹೀಗೆ ಪರಸ್ಪರ ಮುಳ್ಳಿನಿಂದ ಹೊಡೆಯುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಬದುಕಿನಲ್ಲಿ ಏನಾದರೂ ತಪ್ಪು ಕೆಲಸಗಳು ನಡೆದಿದ್ದರೆ ದೇವರ ಸೇವಕರು ನೀಡುವ ಏಟಿನಿಂದ ಅವುಗಳಿಗೆ ಪರಿಹಾರ ದೊರಕುತ್ತದೆ ಎಂಬುದು ಅಚಲ ನಂಬಿಕೆಯಾಗಿದೆ. ಅಲ್ಲದೆ ಬಿದಿರಿನಿಂದ ಹೊಡೆಯುವ ದೇವರ ಸೇವಕ ಆ ಸಮಯದಲ್ಲಿ ದೇವತಾ ಸ್ವರೂಪಿಯಾಗಿರುತ್ತಾನೆ ಎಂಬುದು ಜನರ ನಂಬಿಕೆ. ಈ ಕಾರಣದಿಂದ ಓಕಳಿಗೆ ಬಂದವರು ದೇವರ ಸೇವಕರಿಗೆ ಬಣ್ಣ ಹಾಕಿ ಅವರಿಂದ ಏಟುಗಳನ್ನು ತಿನ್ನುವುದು ಅದೊಂದು ಪ್ರಸಾದ ಎಂದೇ ಅರಿತುಕೊಳ್ಳುತ್ತಾರೆ. ಸುತ್ತೆಲ್ಲ ಭಾಗದಲ್ಲಿ ಓಕಳಿ ಸಂಪ್ರದಾಯ ಮಾತ್ರ ಅತ್ಯಂತ ವಿಶಿಷ್ಟ ಮತ್ತು ಅಚ್ಚರಿ ಮೂಡಿಸುವಂತಾಗಿದ್ದರಿಂದ ತುಳಸಿಗೇರಿಗೆ ಪಕ್ಕದ ಹಳ್ಳಿ, ಪಟ್ಟಣಗಳಿಂದಲೂ ಜನ ಬಂದು ಓಕಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಓಕಳಿಗಾಗಿ ವಾರವಿಡಿ ಸಿದ್ಧಗೊಳ್ಳುವ ಗ್ರಾಮವು ಜಾತಿ, ಮತ, ಪಂಥ ಮೀರಿ ಎಲ್ಲರನ್ನೊಳಗೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅಲ್ಲದೆ ಈ ಓಕಳಿ ಹಬ್ಬಕ್ಕೆ ತಗಲುವ ಎಲ್ಲ ವೆಚ್ಚವನ್ನು ಒಂದೇ ಕುಟುಂಬ ನಿಭಾಯಿಸುತ್ತದೆ.

ಕಡುಬಿನ ರಾಶಿ ರಾಶಿ:

[ಬದಲಾಯಿಸಿ]

ಜಾತ್ರೆಯಲ್ಲಿ ಓಕಳಿಯ ಸಂಭ್ರಮ ಮುಗಿದ ನಂತರ ಮಾರನೆ ದಿವಸ ದೇವಸ್ಥಾನದಲ್ಲಿ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಗ್ರಾಮದ ನೂರಾರು ಮಹೆಣ್ಣುಮಕ್ಕಳು ಒಲೆಯ ಮುಂದೆ ಕುಳಿತು ಹೂರಣದ ಕಡುಬುಗಳನ್ನು ಸಿದ್ಧಪಡಿಸುತ್ತಿರುತ್ತಾರೆ. ನೂರಾರು ಮಹೆಂಗಳೆಯರು ಕಡುಬಿಗೆ ಹೂರಣ ತುಂಬುವುದು, ಹೂರಣ ರುಬ್ಬುವುದು, ಒಲೆ ಹಚ್ಚುವುದು... ದೇವಾಲಯದ ಅಂಗಳವೇ ವಿಶಾಲ ಅಡುಗೆ ಮನೆಯಂತೆ ಕಾಣುತ್ತಿರುತ್ತದೆ. ನೂರಾರು ,ಒಲೆಗಳ ಮುಂದಿನ ಕಡಾಯಗಳಲ್ಲಿ .ಕಡುಬು ಕರಿಯುತ್ತಿದ್ದಂತೆ ಅತ್ತ ತಯಾರಾದ ಕಡುಬುಗಳನ್ನು ಒಂದು ಕೊಣೆಯಲ್ಲಿ ಸಂಗ್ರಹಿಸುವ ಕೆಲಸ ನಡೆದಿರುತ್ತದೆ.