ಟೈಗ್ರಿಸ್
ಟೈಗ್ರಿಸ್ ಆಗ್ನೇಯ ತುರ್ಕಿಯಲ್ಲಿ ಹುಟ್ಟಿ ಇರಾಕಿನ ಮೂಲಕ ಪರ್ಷಿಯನ್ ಕೊಲ್ಲಿಯತ್ತ ಹರಿಯುವ ಒಂದು ನದಿ. ಯಮಳ ನದಿಗಳಲ್ಲಿ ಒಂದು (ಇನ್ನೊಂದು ನದಿ ಯುಫ್ರೇಟೀಸ್). ಉದ್ದ ಸುಮಾರು 1.150 ಮೈ. ಬೈಬಲಿನಲ್ಲಿ ಹಿದ್ದೆಕಿ ಅಥವಾ ಹಿದ್ದೆಕಲ್ ಎಂದೂ ಅರಬ್ಬೀ ಭಾಷೆಯಲ್ಲಿ ನಹ್ರ್ ದಿಜಲಾಹ್ ಅಥವಾ ಶತ್ ದಿಜ್ಲಾ ಎಂದೂ ತುರ್ಕಿ ಭಾಷೆಯಲ್ಲಿ ಐಕ್ಲೆ ನೆಹ್ರಿ ಎಂದೂ ಸುಮೇರಿಯನ್ ಭಾಷೆಯಲ್ಲಿ ಇದಿಗ್ನಾ ಎಂದೂ ಬ್ಯಾಬಿಲೋನಿಯದ ಮತ್ತು ಅಸ್ಸೀರಿಯದ ಭಾಷೆಗಳಲ್ಲಿ ಇದಿಗ್ಲಾತ್ ಎಚಿದೂ ಪ್ರಾಚೀನ ಪರ್ಷಿಯನ್ ಭಾಷೆಯಲ್ಲಿ ಟೈಗ್ರಾ ಎಂದೂ ವ್ಯವಹೃತವಾಗಿರುವ ಇದನ್ನು ಸೂಚಿಸಲು ಹಿರಾಡೂಟಸ್ (ಕ್ರಿ. ಪೂ. 5ನೆಯ ಶತಮಾನ) ಟೈಗ್ರೀಸ್ ಎಂಬ ಗ್ರೀಕ್ ರೂಪವನ್ನೂ ಬಳಸಿದ.
ಹುಟ್ಟು ಹರಿವು
[ಬದಲಾಯಿಸಿ]ಪೂರ್ವ ಆನಟೋಲಿಯದ ಪರ್ವತಪ್ರದೇಶದಲ್ಲಿ ಹಲವು ತೊರೆಗಳ ಕೂಡಿಕೆಯಿಂದ ಉದ್ಭವಿಸುವ ಟೈಗ್ರಿಸ್ ನದಿ ಊಟೆಗಳ ನೀರಿನಿಂದಲೂ ಹಿಮ ಕರಗಿದ ನೀರಿನಿಂದಲೂ ತುಂಬಿ ಸ್ಥೂಲವಾಗಿ ಆಗ್ನೇಯ ದಿಕ್ಕಿಗೆ ಹರಿಯುತ್ತದೆ. ಉಗಮಸ್ಥಾನದಿಂದ ಸುಮಾರು 280 ಮೈ. ದೂರ ಇದು ತುರ್ಕಿಯ ನದಿ. ಇರಾಕನ್ನು ಪ್ರವೇಶಿಸುವುದಕ್ಕೆ ಮುಂಚೆ 20 ಮೈ. ದೂರ. ಸಿರಿಯದ ಎಲ್ಲೆಯಾಗಿ ಪರಿಣಮಿಸಿದೆ. ಮೋಸೂಲ್ ಬಳಿಯಲ್ಲಿ ಜಬ್-ಅಲ್-ಕಬೀರ್ ನದಿಯೂ ತಿಕ್ರಿತ್ ಬಳಿಯಲ್ಲಿ ಜಬ್-ಅಲ್-ಅಸ್‍ಫಲ್ ನದಿಯೂ ಬಾಗ್ದಾದ್ ಬಳಿಯಲ್ಲಿ ದಿಯಾಲ್ ನದಿಯೂ ಅನಂತರ ಶತ್-ಅಲ್-ಅದ್ ಹೈಮ್ ನದಿಯೂ ಪೂರ್ವ ದಡದಲ್ಲಿ ಇದನ್ನು ಸೇರುತ್ತವೆ. ಉಗಮದ ಎಡೆಯಿಂದ ಸು. 1,180 ಮೈಲಿ ಹರಿದ ಮೇಲೆ ಯುಫ್ರೇಟೀಸನ್ನು ಕೂಡಿ ಷತ್-ಅಲ್ ಅರಬ್ ಎನಿಸಿಕೊಂಡು ಸು. 110 ಮೈಲಿ ದೂರ ಹರಿದು ಫ್ಯಾವು ರೇವು ಪಟ್ಟಣದ ಬಳಿ ಪರ್ಷಿಯನ್ ಖಾರಿಯನ್ನು ಸೇರುತ್ತದೆ.
ಸಂಚಾರಸಾರಿಗೆ
[ಬದಲಾಯಿಸಿ]ಅನೇಕ ಶತಮಾನಗಳಿಂದ ಟೈಗ್ರೀಸ್ ನದಿಯ ಮೇಲೆ ಸಂಚಾರ ನಡೆದಿದ್ದೆ ಹೆಚ್ಚು ಆಳಕ್ಕೆ ಇಳಿಯದ ಉಗಿದೋಣಿಗಳು ಮುಖದ ಬಳಿಯಿಂದ ಬಾಗ್ದಾದಿನವರೆಗೂ ಸಂಚರಿಸುತ್ತವೆ. ಆದರೆ ರಸ್ತೆ ಸಾರಿಗೆಯ ಪ್ರಗತಿಯಿಂದ ನದೀ ಸಾರಿಗೆ ಈಚಿಗೆ ಕಡಿಮೆಯಾಗಿದೆ. ನದಿಯ ಪಾತ್ರ ಅಲ್ಲಲ್ಲಿ ಕಿರಿದಾಗುವುದರಿಂದಲೂ ಅದರಲ್ಲಿ ಅನೇಕ ತಿರುವುಗಳಿರುವುದರಿಂದಲೂ ಅದರೊಳಗಿನ ಮರಳುದಿಬ್ಬಗಳು ಸ್ಥಳಾಂತಗೊಳ್ಳುತ್ತಿರುವುದರಿಂದ ಅಲ್ಲಲ್ಲಿ ನದೀಪಾತ್ರ ತೆಟ್ಟೆಯಾಗಿ ಪರಿಣಮಿಸುವುದರಿಂದಲೂ ಇದರ ಮೇಲೆ ಯಾನ ಮಾಡುವುದು ಅನೇಕ ಅಡಚಣೆಗಳಿಂದ ಕೂಡಿರುತ್ತದೆ.
ಟೈಗ್ರಿಸ್ ನದಿ ಹರಿಯುವ ಇರಾಕ್ ಭಾಗದಲ್ಲಿಯ ಮುಖ್ಯ ಪಟ್ಟಣಗಳು ಬಾಗ್ದಾದ್ (ರಾಜಧಾನಿ), ಬಾಸ್ರ (ಪ್ರಮುಖ ಬಂದರು) ಮತ್ತು ಮೋಸೂಲ್ ಷತ್-ಅಲ್-ಅರಬ್‍ನ ದಂಡೆಯ ಮೇಲೆ ಇರಾನಿನ ಆಬದಾನ್ ಮತ್ತು ಕಾರಮ್‍ಷಾರ್ ಪಟ್ಟಣಗಳಿವೆ. ಆಬದಾನ್ ಬಿಟ್ಟು ಉಳಿದೆಲ್ಲ ನದೀತೀರ ಪಟ್ಟಣಗಳನ್ನು ಕೂಡಿಸುವ ರೈಲ್ವೆ ವ್ಯವಸ್ಥೆಯಿದೆ.
ಟೈಗ್ರಿಸ್ ಮತ್ತು ಯುಫ್ರೇಟೀಸ್ ನದಿಗಳ ನಡುವಣ ಸ್ವಾಭಿವಿಕ ಕಣಿವೆಯಲ್ಲಿ ನಿರ್ಮಿಸಲಾಗಿರುವ ವಾದಿ ಅದ್ ತಾರ್ತರ್ ಯೋಜನೆ 1956 ರಲ್ಲಿ ಪೂರ್ಣಗೊಂಡಿತು. ಇದರಿಂದ ಪ್ರವಾಹನಿಯಂತ್ರಣ ಸಾಧ್ಯವಾಗಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳುಗಳಲ್ಲಿ ನದಿಯ ಪ್ರವಾಹದಿಂದ ಮೈದಾನದ ಹಲವು ಭಾಗಗಳು ಮುಳುಗಿಹೋಗುತ್ತಿದ್ದುವು. 14 ನೆಯ ಶತಮಾನದಲ್ಲಿ ನೀರಾವರಿ ವ್ಯವಸ್ಥೆ ಮುರಿದುಬಿದ್ದಂದಿನಿಂದ ನೆರೆಯ ಹಾವಳಿಯಿಂದ ಬಾಗ್ದಾದ್ ನಗರಕ್ಕೆ ಸಂಭವಿಸುತ್ತಿದ್ದ ಅಪಾಯವನ್ನು ಬೆಳೆಯ ನಾಶವನ್ನೂ ಇದರಿಂದ ತಪ್ಪಿಸಿದಂತಾಗಿದೆ.
ಇತಿಹಾಸ
[ಬದಲಾಯಿಸಿ]ಟೈಗ್ರಿಸ್-ಯುಫ್ರೇಟೀಸ್ó ಕಣಿವೆಯಲ್ಲಿ ಎಲ್ಲೋ ಒಂದು ಕಡೆ ಈಡನ್ ತೋಟ ಇದ್ದಿರಬೇಕೆಂದು ಬೈಬಲ್ ಕಾರರು ಭಾವಿಸಿದ್ದರಿಂದು ಪುರಾತತ್ವಜ್ಞರು ನಂಬಿದ್ದಾರೆ. ನೋವಿನ ಹಡಗಿನ ಕಥೆಯ ಘಟನೆ. ಈ ಕಣಿವೆಯ ಈಶಾನ್ಯ ಪ್ರಸ್ಥಭೂಮಿಯಲ್ಲಿ ನಡೆದಿರಬಹುದೆಂದೂ ಊಹಿಸಲಾಗಿದೆ. ಟೈಗ್ರಿಸ್-ಯುಫ್ರೇಟೀಸ್ ಕಣಿವೆಯ ದಕ್ಷಿಣಭಾಗದಲ್ಲಿ, ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಗಳು ವಿಕಸಿಸಿದುವು. ನೀರಾವರಿ ಕಾರ್ಯಗಳಿಗೆ ಟೈಗ್ರಿಸ್ ನದಿಯನ್ನು ಬಳಸಿಕೊಳ್ಳುವುದಕ್ಕಾಗಿ ಕ್ರಿ. ಪೂ. 2400 ಹೊತ್ತಿಗೇ ಸುಮೇರಿಯನರು ಒಂದು ಕಾಲುವೆಯನ್ನು ನಿರ್ಮಿಸಿದ್ದರೆಂದು ಹೇಳಲಾಗಿದೆ. ಆದಿಮ ಮಾನವ ಜನಾಂಗದ ವಸತಿಗೆ ಈ ವಲಯ ಬಹುಶಃ ಅನುಕೂಲವಾಗಿಲ್ಲದಿದ್ದುದು ಹಾಗೂ ಪೂರ್ವ ದಿಕ್ಕಿನ ಕಡೆಯಿಂದ ಸುಲಭವಾಗಿ ಇದು ಆಕ್ರಮಣಕ್ಕೆ ಪಕ್ಕಾಗುತ್ತಿದ್ದುದು ಈ ನದಿಯ ದಂಡೆಗಳಲ್ಲಿ ಪ್ರಾಚೀನ ನಗರಗಳ ಅವಶೇಷಗಳು ಕಂಡುಬಂದಿಲ್ಲದೆ ಇರುವುದಕ್ಕೆ ಕಾರಣವಾಗಿದ್ದಿರಬೇಕೆಂದು ಇತಿಹಾಸಕಾರರು ಭಾವಿಸಿದ್ದಾರೆ. ನದಿಯ ಪಾತ್ರದಲ್ಲಿ ಅಂಥ ಗಮನಾರ್ಹ ಬದಲಾವಣೆಗಳೇನೂ ಆದಂತೆ ಕಂಡುಬಂದಿಲ್ಲ, 6 ಮತ್ತು 7 ಶತಮಾನಗಳಲ್ಲಿ ಒಮ್ಮೆ ಇದು ತನ್ನ ಪಾತ್ರವನ್ನು ಬದಲಿಸತೆಂದು, ಶತ್-ಅಲ್-ಅಮರಾಹ್ ಮೂಲಕ ಹರಿಯುವುದನ್ನು ಬಿಟ್ಟು ಶತ್-ಅಲ್-ಘರ್ರಾಫ್ ಮೂಲಕ ಹರಿಯತೊಡಗಿತೆಂದು, ತಿಳಿದು ಬಂದಿದೆ. ಹೊಸ ಪಾತ್ರದ ಬದಿಯಲ್ಲಿ 703ರಲ್ಲಿ ವಾಸಿತ್ ನಗರವನ್ನು ಸ್ಥಾಪಿಸಲಾಯಿತು. ನದಿ ತನ್ನ ಹಿಂದಿನ ಪಾತ್ರದಲ್ಲಿ ಮರಳಿ ಹರಿಯುವ ವರೆಗೆ, ಸು. 15ನೆಯ ಶತಮಾನದ ವರೆಗೆ, ಇದು ಪ್ರಮುಖ ನಗರವಾಗಿತ್ತು. ನಡುವಣ ಮೈದಾನ ಪ್ರದೇಶದಲ್ಲಿ ಸು. 900ರ ವರೆಗೆ ನೀರಾವರಿ ವ್ಯವಸಾಯ ಸಾಂದ್ರವಾಗಿ ನಡೆಯುತ್ತಿತ್ತು. ಪಶ್ಚಿಮಕ್ಕಿರುವ ಯುಫ್ರೇಟೀಸ್ó ನದಿಯ ಬಹುತೇಕ ಕಾಲುವೆಗಳು ಟೈಗ್ರಿಸಿಗೇ ಬಂದು ಸೇರುತ್ತದೆ. ಹೆಲಿನಿಸ್ಟಿಕ್ ಅವಧಿಗಿಂತಲೂ ಪ್ರಾಚೀನ ಕಾಲದವೆಂದು ಹೇಳಲಾಗಿರುವ ಅನೇಕ ಕಾಲುವೆಗಳೂ ನಿವೇಶನಗಳೂ ಹೂಳಿನ ಅಡಿಯಲ್ಲಿ ಮುಚ್ಚಿಹೋಗಿವೆ. 250ರ ಹೊತ್ತಿಗೆ, ಎಂದರೆ ಸಸೇನಿಯನ್ ಅವಧಿಯಲ್ಲಿ, ಪೂರ್ವದಿಕ್ಕಿನ ಮೈದಾನಕ್ಕೆ ನೀರಾವರಿ ಸೌಲಭ್ಯ ಒದಗಿಸುವ ನಹ್ರ್ ನಹ್ರವಾನ್ ಎಂಬ ಬೃಹತ್ ಕಾಲುವೆ ನಿರ್ಮಾಣವಾಗಿತ್ತೆಂದು ಹೇಳಲಾಗಿದೆ. ಅಕೆಮಿನಿಡ್ ಸಾಮ್ರಾಜ್ಯದ ಪತನಾ ನಂತರ (ಕಿ.ಪೂ.330) ಈ ಸಂಪದ್ಭರಿತ ವಲಯ ಕ್ರಮೇಣ ಸಿಲ್ಯೂಸಿಡ್, ಪಾರ್ತಿಯನ್ ಮತ್ತು ಸಸೇನಿಯನ್ ವಂಶಗಳು ಮಸೊಪೊಟೇಮಿಯ, ಸೆಲ್ಯೂಷಿಯ ಮತ್ತು ಟೆಸಿಫಾನ್‍ಗಳ ರಾಜಕೀಯ ಹಾಗೂ ವಾಣಿಜ್ಯ ಚಟುವಟಿಕೆಗಳ ನೆಲೆಯಾಗಿತ್ತು. ಈ ನದಿಯ ಪಾತ್ರಕ್ಕೆ ಹೊಂದಿದಂತೆ ತಿಕ್ರಿತ್‍ಗೆ ಉತ್ತರದಲ್ಲಿರುವ ಪ್ರದೇಶ ಕ್ರಿ.ಪೂ. 2ನೆಯ ಸಹಸ್ರಮಾನದ ಆದಿಕಾಲದಿಂದ ಕ್ರಿ.ಪೂ.612ರ ವರೆಗೆ ಅಸ್ಸೀರಿಯ ಸಾಮ್ರಾಜ್ಯವಾಗಿತ್ತು. ಅದರ ರಾಜಧಾನಿಗಳಾಗಿದ್ದ ಆಶರ್, ನಿಮ್ರೂಡ್ ಮತ್ತು ನಿನವ ಇವು ಟೈಗ್ರಿಸ್ ನದಿಯ ದಡದಲ್ಲಿದ್ದವು.
ಆದರೂ ಅಸ್ಸಿರಿಯದ ಬಖೈರುಗಳಲ್ಲಾಗಲಿ, ಅನಂತರ ಗ್ರೀಕ್ ಮತ್ತು ರೋಮನ್ ಲೇಖಕರ ಬರಹಗಳಲ್ಲಾಗಲಿ ಈ ಕಣಿವೆಯ ಭೌಗೋಳಿಕ ಅಥವಾ ಭೂವೈಜ್ಞಾನಿಕ ವಿವರಗಳೇನೂ ಹೆಚ್ಚು ದೊರೆಯುವುದಿಲ್ಲ. ಮೋಸೂಲ್ ನಗರಕ್ಕೆ ಉತ್ತರದ ಟೈಗ್ರಿಸ್ ನದೀ ಭಾಗ 197-237ರಲ್ಲಿ ರೋಮನ್ ಮೆಸೊಪೊಟೋಮಿಯ ಮತ್ತು ಪಾರ್ತಿಯನ್ ಆಡೀಯಬೀನೀಗಳ ನಡುವಣ ಮೇರೆಯಾಗಿತ್ತು. ಕೋಟೆಯಿಂದ ಆವೃತವಾದ ಆಮಿದ ನಗರದ ಬಗ್ಗೆ ಉಲ್ಲೇಖಗಳು ಅನಂತರದ ರೋಮನ್ ಮತ್ತು ಇತರ ಮಧ್ಯಕಾಲೀನ ವೃತ್ತಾಂತಗಳಲ್ಲಿ ಇವೆ. ಅಬ್ಬಾಸಿದರ ಕಾಲದಲ್ಲಿ ಮೋಸುಲ್ ನಗರ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಹಾಗೂ 12,13ನೆಯ ಶತಮಾನಗಳಲ್ಲಿ ಸೆಲ್ಜೂಕ್ ಆಟಾಬೇಗ್ ವಂಶದ ರಾಜಧಾನಿಯೂ ಆಗಿತ್ತು. ಮಧ್ಯ ಯುಗದಲ್ಲಿ ಬಾಗ್ದಾದಿಗೆ ಸಂಪರ್ಕ ಕಲ್ಪಿಸಿದ್ದ ಮಧ್ಯಯುಗದ ರಸ್ತೆ ಟೈಗ್ರಿಸ್ ನದಿಯ ಪೂರ್ವ ದಂಡೆಯಲ್ಲಿ ಸಾಗಿತ್ತು. ಈ ಮಾರ್ಗದ ಪಕ್ಕದಲ್ಲಿದ್ದ ಜನವಸತಿಗಳನ್ನು ಅನೇಕ ಅರಬ್ ಭೂಗೋಳಶಾಸ್ತ್ರಜ್ಞರು ವರ್ಣಿಸಿದ್ದಾರೆ. 16ನೆಯ ಶತಮಾನದ ತರುವಾಯ ಆಗೊಮ್ಮೆ ಈಗೊಮ್ಮೆ ಐರೋಪ್ಯ ಪ್ರವಾಸಿಗರು ಟೈಗ್ರೀಸ್ ನದಿಯ ಮೇಲೆ ಸಂಚಾರ ಮಾಡುತ್ತಿದ್ದರು. 1581ರಲ್ಲಿ ಜೆ. ನ್ಯೂಬೆರಿ ಎಂಬವನು ಬಾಗ್ದಾದಿನಿಂದ ಬಾಸ್ರಕ್ಕೆ ದೋಣಿಯಲ್ಲಿ ಪ್ರಯಾಣ ಮಾಡಿದನೆಂದೂ ಶತ್-ಅಲ್-ಅಮ್ರಾಹ್ ಪ್ರಯಾಣಯೋಗ್ಯವಾದ ಕಾಲುವೆಯೆಂದು ಮೊಟ್ಟಮೊದಲಿಗೆ ಘೋಷಿಸಿದವನು ಇವನೇ ಎಂದೂ ಹೇಳಲಾಗಿದೆ. 1652 ರಲ್ಲಿ ಷಾóನ್ ಬ್ಯಾಪ್ಟಿಸ್ಟ್ ಟ್ಯಾವನ್ರ್ಯೇ ಎಂಬ ಫ್ರೆಂಚ್ ನಾವಿಕ ಮೋಸುಲ್‍ನಿಂದ ಬಾಗ್ದಾದಿನ ವರೆಗೆ ತೆಪ್ಪದಲ್ಲೂ ಬಾಗ್ದಾದಿನಿಂದ ಬಾಸ್ರದ ವರೆಗೆ ದೋಣಿಯಲ್ಲೂ ಪ್ರಯಾಣ ಮಾಡಿದ. ಟೈಗ್ರಿಸ್ ನದಿಯ ಪ್ರಥಮ ವೈಜ್ಞಾನಿಕ ಸರ್ವೇಕ್ಷಣ ನಡೆದಿದ್ದು 1836 ರಲ್ಲಿ, ಫ್ರಾನ್ಸಿಸ್ ರಾಡನ್ ಜಿಸ್ನೆಯ ನಾಯಕತ್ವದ ಯುಫ್ರೇಟೀಸ್ ಪರಿಶೋಧನಾ ಪ್ರವಾಸಿ ತಂಡದಿಂದ. 1846 ಮತ್ತು 1848 ರಲ್ಲಿ ಫೆಲಿಕ್ಸ್ ಜೋನ್ಸ್ ಈ ಕೆಲಸವನ್ನು ಮುಂದುವರೆಸಿದ. 1661 ರಲ್ಲಿ ಬಾಗ್ದಾದ್ ಮತ್ತು ಬಾಸ್ರಗಳ ನಡುವೆ ಉಗಿಹಡಗು ಸಂಚಾರವನ್ನು ಆರಂಭಿಸಲು ಸಾಧ್ಯವಾದ್ದು ಈ ಅಧ್ಯಯನಗಳ ಫಲ. 1914-18ರ ಒಂದನೆಯ ಮಹಾಯುದ್ಧದ ಅಂಗವಾಗಿ ಬ್ರಿಟನ್ನು ಇರಾಕಿನ ಮೇಲೆ ಆಕ್ರಮಣಕ್ಕೆ ಟೈಗ್ರಿಸ್ ನದಿಯೇ ಸಾಮಾಗ್ರಿ ಪೊರೈಕೆಯ ಮಾರ್ಗವಾಗಿತ್ತು.