ಟಾನ್ಸಿಲ್
ಟಾನ್ಸಿಲ್ ಲೋಳೆಪೊರೆಯೇ ಹೊದ್ದಿಕೆಯಾಗಿರುವ ದುಗ್ಧರಸಗ್ರಂಥಿಗಳ ಸಾಮಾನ್ಯ ಹೆಸರು.
ಜೀರ್ಣನಾಳ ಹಾಗೂ ಶ್ವಾಸಮಾರ್ಗದ ಮೊದಲ ಅರ್ಧದಲ್ಲಿ ಇಂಥ ಗ್ರಂಥಿಗಳು ಹೇರಳವಾಗಿ ಇವೆ. ಸಣ್ಣಕರುಳಿನ ಅಂತ್ಯಾರ್ಧದಲ್ಲಿರುವ ಇಂಥ ಗ್ರಂಥಿಗಳಿಗೆ ಪೇಯರನ ಕ್ಷೇತ್ರಾಂಶಗಳು (ಪೇಯರ್ಸ್ ಪ್ಯಾಚಸ್) ಎಂದು ಹೆಸರು. ಮೂಗು, ಬಾಯಿ, ಗಂಟಲು-ಈ ಪ್ರದೇಶಗಳಲ್ಲಿರುವ ಗ್ರಂಥಿಗಳನ್ನು ಟಾನ್ಸಿಲ್ಲುಗಳೆಂದು ಕರೆಯಲಾಗಿದೆ. ಇಲ್ಲಿ ಈ ಗ್ರಂಥಿಗಳು ವರ್ತುಲಕಾರವಾಗಿ ನೆಲೆಗೊಂಡಿವೆ. ಈ ವರ್ತುಲಕ್ಕೆ ವಾಲ್ಡೈಯರನ ವರ್ತುಲವೆಂದು (ರಿಂಗ್ ಆಫ್ ವಾಲ್ಡೈಯರ್) ಹೆಸರು. ವತುಲದ ಹಿಂಭಾಗ ಮೂಗು ಗಂಟಲಿನ (ಫ್ಯಾರಿಂಜಿಯಲ್) ಟಾನ್ಸಿಲ್ಲಿನಿಂದ, ಮುಂಭಾಗ ನಾಲಿಗೆಯ (ಲಿಂಗ್ವಲ್) ಟಾನ್ಸಿಲ್ಲಿನಿಂದ ಮತ್ತು ಪಕ್ಕಗಳು ಅಟ್ಟದ (ಪ್ಯಾಲಟೈನ್) ಎರಡೂ ಟಾನ್ಸಿಲ್ಲುಗಳಿಂದ ಆಗಿವೆ. ಎಲ್ಲ ಟಾನ್ಸಿಲ್ಲುಗಳಿಗೂ ರಕ್ತಪೂರೈಕೆ ಹೆಚ್ಚಾಗಿಯೇ ಇದೆ. ನಾಲಿಗೆಯ ಟಾನ್ಸಿಲ್ ನಾಲಿಗೆ ಬುಡದಲ್ಲಿ ಅಷ್ಟಗಲಕ್ಕೂ ಪಸರಿಸಿರುವ ಒಂದೇ ಅಂಗ. ಇದಕ್ಕೆ ತೊಟ್ಟು (ಪಿಡನ್‍ಕಲ್) ಇಲ್ಲ; ಇದು ನಾಲಿಗೆಯ ಅಂಗಾಂಶಗಳಲ್ಲಿ ಹುದುಗಿ ಹೋಗಿದೆ. ಆದ್ದರಿಂದ ಅಗತ್ಯವೆನ್ನಿಸಿದಾಗ ಶಸ್ತ್ರಕ್ರಿಯೆಯಿಂದ ಇದನ್ನು ಬಿಡಿಸಿ ತೆಗೆಯುವುದು ಕಷ್ಟ. ಅಲ್ಲದೆ ಅಂಥ ಚಿಕಿತ್ಸೆಯಿಂದ ಸುತ್ತಲೂ ಗಾಯಕಲೆ ಉಂಟಾಗಿ ಮುಂದಕ್ಕೆ ತೊಂದರೆ ಆಗುತ್ತದೆ. ಮೂಗು ಗಂಟಲು ಪ್ರದೇಶದಲ್ಲಿರುವ ಟಾನ್ಸಿಲ್ ಗ್ರಂಥಿಗಳು ಬಹಳ. ಗಂಟಲಿನ ಹಿಂದಿನ ಭತ್ತಿಯಲ್ಲಿ ಹುದುಗಿರುವುದು ಗಂಟಲಿನ ಟಾನ್ಸಿಲ್. ಅದರ ಇಕ್ಕೆಲಗಳಲ್ಲೂ ಪಸರಿಸಿ ಬಾಯಿಯ ಅಟ್ಟವನ್ನು ಆಕ್ರಮಿಸಿರುವ ಅನೇಕ ಸಣ್ಣ ಗ್ರಂಥಿಗಳಿಗೆ ಒಟ್ಟಾಗಿ ಅಡಿನಾಯ್ಡುಗಳೆಂದು ಹೆಸರು. ಇವು ಕ್ಷೇತ್ರಮಟ್ಟದಿಂದ ಬಹುವಾಗಿ ಉಬ್ಬಿರುವುದರಿಂದ ಇವನ್ನು ಸುಲಭವಾಗಿ ತೆಗೆದುಹಾಕಬಹುದು. ಸಾಮಾನ್ಯವಾಗಿ ಟಾನ್ಸಿಲ್ ಅಂದರೆ ಅಟ್ಟದ ಟಾನ್ಸಿಲ್ (ಪೆಲೇಟಲ್ ಟಾನ್ಸಿಲ್) ಎಂದು ಗಣಿಸುವುದು ವಾಡಿಕೆ. ಇವು ಬಾಯಿ-ಗಂಟಲು ಸಂಧಿಸುವಲ್ಲಿ ಎಡಬಲ ಎರಡು ಪಕ್ಕಗಳಲ್ಲೂ ಇರುವ ಬಾದಾಮಿ ಆಕಾರದ ಅಂಗಗಳು. ಈ ಭಾಗಗಳಲ್ಲಿ ಬಾಯಿಯ ಅಟ್ಟವನ್ನೂ ತಳವನ್ನೂ ಸೇರಿಸುವ ಕಂಬಗಳಂತಿರುವ (ಕಮಾನುಗಳಂತಿರುವ ಎಂದೂ ವಿವರಿಸಲಾಗಿದೆ) ಪೆಲಾಟೋ ಗ್ಲಾಸಸ್ ಸ್ನಾಯು (ಇದು ಮುಂಭಾಗದಲ್ಲಿದೆ) ಮತ್ತು ಪೆಲಾಟೋಫೆರಿಂಜಿಯಸ್ ಸ್ನಾಯು (ಇದು ಹಿಂಭಾಗದಲ್ಲಿದೆ) ಇವುಗಳ ನಡುವೆ ನೆಲೆಗೊಂಡಿದೆ. ಟಾನ್ಸಿಲ್ ಕ್ಷೇತ್ರಮಟ್ಟದಿಂದ ಉಬ್ಬಿಕೊಂಡಿರುವುದರಿಂದ ಸ್ಥಳೀಯ ಲೋಳೆಪೊರೆ ಅರ್ಧಕ್ಕಿಂತ ಹೆಚ್ಚಾಗಿಯೇ ಅದನ್ನು ಹೊದ್ದಿಕೊಂಡಿದೆ. ಟಾನ್ಸಿಲ್ಲಿನ ಮೇಲ್ಮೈಯಲ್ಲಿ ಅಲ್ಲಲ್ಲಿ ಸೀಳುಗಳುಂಟು. ಇವು ಟಾನ್ಸಿಲ್ಲಿನ ಒಳಗೂ ಪೊಟರೆಯಂತೆ ಪಸರಿಸಿ ಅದನ್ನು ಅಪೂರ್ಣವಾಗಿ ಭಿನ್ನ ಭಾಗಗಳಾಗಿರುವಂತೆ ಮಾಡಿವೆ. ಈ ಸೀಳುಗಳ ನೆರೆಯಲ್ಲಿ ಸೋಂಕು ಉಂಟಾದರೆ ಅದು ಬಹುಕಾಲಿಕವಾಗಿ ನೆಲೆಗೊಳ್ಳುವುದೇ ಅಲ್ಲದೆ ತತ್ಫಲವಾದ ಜೀವಿವಿಷ (ಟಾಕ್ಸಿನ್) ಸುಲಭವಾಗಿ ರಕ್ತಗತವಾಗಿ ವಿಷಮತೆಯನ್ನು (ಸೆಪ್ಟಿಸೀಮಿಯ) ಉಂಟುಮಾಡುತ್ತದೆ. ಅಲ್ಲದೆ ಸ್ಥಳೀಯ ದುಗ್ಧರಸಗ್ರಂಥಿಗಳು ಊದಿಕೊಂಡುಗಳಲೆ ಕಟ್ಟಿಕೊಳ್ಳುತ್ತವೆ. ಪಾಶ್ಚರೀಕರಿಸದ ಹಸಿಹಾಲನ್ನು ಕುಡಿಯುವವರಲ್ಲಿ ಟಾನ್ಸಿಲ್ಲುಗಳಿಗೆ ಕ್ಷಯರೋಗಾಣುಗಳ ಸೋಂಕು ಉಂಟಾಗಿ ಕುತ್ತಿಗೆಯ ಹಿಂಭಾಗದಲ್ಲಿ ಗಳಲೆ ಕಟ್ಟಿಕೊಳ್ಳುವುದು ಇದಕ್ಕೆ ಉತ್ತಮ ನಿದರ್ಶನ. ರಕ್ತಗತವಾದ ಜೀವಿವಿಷ ದೇಹದಲ್ಲಿ ಇತರ ಭಾಗಗಳಲ್ಲೂ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲದು. ಮಜ್ಜೆಯ ಮೇಲೆ ಪರಿಣಮಿಸುವುದರ ಫಲ ರಕ್ತಹೀನತೆ. ಮೂತ್ರಪಿಂಡಗಳ ಮೇಲೆ ಪರಿಣಮಿಸುವುದರ ಫಲ ಅವುಗಳ ಉರಿಊತ. ಗುಂಡಿಗೆಯ ಮೇಲಿನ ಪರಿಣಾಮ ಗುಂಡಿಗೆಯ ಸ್ನಾಯುವಿನ ಊತ (ಮೈಯೊ ಕಾರ್ಡೈಟಿಸ್) ಇತ್ಯಾದಿ. ಟಾನ್ಸಿಲ್ಲಿನ ಸೀಳುಗಳಲ್ಲಿ ಕಂಡುಬರುವ ಬಹುಕಾಲಿಕ ಸೋಂಕು ಔಷಧೋಪಚಾರಗಳಿಗೆ ಸಾಮಾನ್ಯವಾಗಿ ಸಗ್ಗದು. ಅಂಥ ಸಂದರ್ಭಗಳಲ್ಲಿ ಟಾನ್ಸಿಲ್ಲುಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ. ಮೇಲೆ ಹೇಳಿರುವ ಟಾನ್ಸಿಲ್ಲುಗಳಲ್ಲದೆ ನಾಳಗಳ ಟಾನ್ಸಿಲ್ಲುಗಳೆಂಬುವೂ (ಟ್ಯೂಬಲ್ ಟಾನ್ಸಿಲ್) ಉಂಟು. ಗಂಟಲು ಕಿವಿಗಳ ನಡುವೆ ಸಂಪರ್ಕ ಏರ್ಪಡಿಸುವ ಯೂಸ್ಟೇಕಿಯನ್ ನಾಳಗಳ ಗಂಟಲಿನ ಕಡೆ ದ್ವಾರಗಳ ಸುತ್ತಲೂ ಇವು ಪಸರಿಸಿರುತ್ತವೆ. ಸೋಂಕು ಉಂಟಾದಾಗ ಊತದಿಂದ ದ್ವಾರ ಕಿರಿದಾಗಿ ಸಂಪರ್ಕಕ್ಕೆ ಧಕ್ಕೆ ಆಗುವುದರಿಂದ ಶ್ರವಣಮಾಂದ್ಯ ಕಂಡುಬರಬಹುದು. ಇದರ ನಿವಾರಣೆಗಾಗಿ ರೋಗಗ್ರಸ್ತ ಟಾನ್ಸಿಲ್ಲನ್ನು ಚಿಕಿತ್ಸಿಸಬೇಕು. ಚಿಕಿತ್ಸೆಗೆ ಶಸ್ತ್ರಕ್ರಿಯೆಯನ್ನು ಅನುಸರಿಸಬಹುದು. ಇಲ್ಲವೇ ಆಳವಾಗಿ ಹೊಕ್ಕು ಪರಿಣಮಿಸುವ ಎಕ್ಸ್‍ಕಿರಣವನ್ನು (ಡೀಪ್ ಎಕ್ಸ್‍ರೇ) ಉಪಯೋಗಿಸಬಹುದು.
ಟಾನ್ಸಿಲ್ಲುಗಳ ನೈಜ ಕ್ರಿಯೆ ಏನೆಂಬುದು ಖಚಿತವಾಗಿ ತಿಳಿಯದು. ಬಹುಶಃ ಯಾವ ಅಂತಸ್ಸ್ರಾವವನ್ನೂ ಅವು ಸ್ರವಿಸುವುದಿಲ್ಲ. ಹುಟ್ಟಿದಾಗ ಟಾನ್ಸಿಲ್ಲುಗಳು ಗಣನೆಗೆ ಬಾರದಷ್ಟು ಸಣ್ಣವಾಗಿರುತ್ತವೆ. ಮುಂದಿನ ತಿಂಗಳುಗಳಲ್ಲಿ ಟಾರ್ಸಿಲ್ಲುಗಳ ಕ್ಷೇತ್ರದಲ್ಲಿ ಶ್ವೇತಕಣಗಳ ಆಕ್ರಮಣವಾಗಿ ಟಾನ್ಸಿಲ್ಲುಗಳು ಶ್ವೇತಕಣಗಳು ಕೋಠಿಯಾಗಿ ಮಾರ್ಪಡುವುದರಿಂದ ಮತ್ತು ಅಲ್ಪಸ್ವಲ್ಪ ಸೋಂಕು ಉಂಟಾಗಿ ಊತ ಉಂಟಾಗುವುದರಿಂದ ಅವುಗಳ ಗಾತ್ರ ಹೆಚ್ಚಾಗುತ್ತದೆ. ಪುನಃ 2 ವರ್ಷಗಳ ಅನಂತರ, ಮತ್ತೆ 3-4 ವರ್ಷಗಳ ಮೇಲೆ ಗಾತ್ರ ಇನ್ನೂ ಹೆಚ್ಚುವುದು ಸಾಮಾನ್ಯ. ಬಹುಕಾಲಿಕ ಸೋಂಕು ಉಂಟಾಗದಿದ್ದರೆ ಹದಿವಯಸ್ಸಿನಲ್ಲಿ ಟಾನ್ಸಿಲ್ಲಿನ ಗಾತ್ರ ಕುಂದಿ ಮುದಿತನದಲ್ಲಿ ಪುನಃ ಅದು ಅಗಣನೀಯ ಗಾತ್ರದ ಅಂಗವಾಗಿಬಿಡುತ್ತದೆ. ಅಪರೂಪವಾಗಿ ಹದಿವಯಸ್ಸಿನಲ್ಲಿ ಗಾತ್ರವೃದ್ಧಿಯಾಗುವುದೂ ಉಂಟು. ಟಾನ್ಸಿಲ್ಲುಗಳು ಶ್ವೇತಕಗಣಗಳ ಕೋಠಿಯಾಗಿರುವುದರಿಂದ ಬಹುಶಃ ಸೋಂಕಿನ ವಿರುದ್ಧ ಇವೇ ಪ್ರಥಮ ಈಡಾಗಿ ದೇಹವನ್ನು ರಕ್ಷಿಸುವುದೇ ಅಲ್ಲದೆ ಅನೇಕ ವಿಷಾಣು ವಿರೋಧವಸ್ತುಗಳನ್ನು ತಯಾರಿಸುವ ಅಂಗಗಳೂ ಆಗಿವೆ.
ಟಾನ್ಸಿಲ್ಲಿನ ರೋಗಗಳು
[ಬದಲಾಯಿಸಿ]ಅಟ್ಟದ ಟಾನ್ಸಿಲ್ಲುಗಳು ಸೋಂಕಿನಿಂದ ಆವೃತವಾಗಿ ಅವುಗಳಲ್ಲಿ ಉರಿಊತ ಕಂಡುಬರುವ ರೋಗಸ್ಥಿತಿಗೆ ಟಾನ್ಸಿಲ್ಲೈಟಿಸ್ ಎಂದು ಹೆಸರು. ಟಾನ್ಸಿಲ್ಲಿನ ಗಾತ್ರವೃದ್ಧಿ ಆಗಿರುವುದು ಇದರ ಮುಖ್ಯ ಲಕ್ಷಣ. ಇದರಲ್ಲಿ ನಾಲ್ಕು ಹಂತಗಳನ್ನು ಗುರುತಿಸಬಹುದು. ಮೊದಲ ಹಂತ ಕಫಯುಕ್ತ (ಕೆಟ್ಹಾರಲ್) ಟಾನ್ಸಿಲ್ಲೈಟಿಸ್. ಸೋಂಕು ಲೋಳೆಪೊರೆಗೆ ಸೀಮಿತ. ಇದು ತೀವ್ರವಾಗಿ ಮುಂದುವರಿದರೆ ಎರಡನೆಯ ಹಂತ ಫಲಿಸುವುದು. ಇದಕ್ಕೆ ಫಾಲಿಕ್ಯುಲರ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಇಲ್ಲಿ ಟಾನ್ಸಿಲ್ಲಿನಲ್ಲಿರುವ ಶ್ವೆತಕಣಗಂಟುಗಳು (ಲಿಂಫಾಯ್ಡ್ ಫಾಲಿಕಲ್ಸ್) ಸೋಂಕಿನಿಂದ ಆವೃತವಾಗಿ ಕೀವು ಉಂಟಾಗಿ, ಕೀವು ಟಾನ್ಸಿಲ್ಲಿನ ಮೇಲ್ಮೈಯಲ್ಲಿ ಅಲ್ಲಲ್ಲಿ ಜಿನುಗುತ್ತಿರುತ್ತದೆ. ಕೀವು ಅಧಿಕವಾಗಿದ್ದರೆ ಟಾನ್ಸಲ್ಲಿನ ಮೇಲೆ ಪೂರ ಕೀವು ಹರಡಿ ಬೆಳ್ಳಗಾಗಿ ಗಂಟಲಮಾರಿ (ಡಿಫ್ತಿರಿಯ) ರೋಗವೇನೋ ಎಂದು ಅಪಾರ್ಥಮಾಡಿಕೊಳ್ಳುವಂತಿರುತ್ತದೆ. ಸೋಂಕು ಇನ್ನೂ ತೀವ್ರವಾಗಿ ಇಲ್ಲವೇ ದೀರ್ಘಕಾಲಿಕವಾಗಿದ್ದರೆ ಟಾನ್ಸಿಲ್ಲಿನ ಒಳಭಾಗದಲ್ಲೆಲ್ಲ ಉರಿಊತ ಉಂಟಾಗುತ್ತದೆ. ಇದು ಮೂರನೆಯ ಹಂತ. ಇದಕ್ಕೆ ಪ್ಯಾರೆಂಕೈಮ್ಯಾಟನ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಹೀಗಾದಾಗ ಟಾನ್ಸಿಲ್ಲಿನ ಗಾತ್ರ ವೃದ್ಧಿಯಾಗಿರುವುದು ವ್ಯಕ್ತ. ಅಲ್ಲದೆ ಸುತ್ತಲಿನ ಲೋಳೆಪೊರೆ ಕೂಡ ಊತದಿಂದ ಕೆಂಪಾಗಿರುತ್ತದೆ. ನಾಲ್ಕನೆಯ ಹಂತ ಅತ್ಯಂತ ತೀವ್ರ ಸೋಂಕಿನಿಂದಾದುದು. ಇದಕ್ಕೆ ಸಪ್ಪುರೇಟಿವ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಇಡೀ ಟಾನ್ಸಿಲ್ಲೇ ನಾಶವಾಗಿ ಕೀವಾಗಿ ಮಾರ್ಪಟ್ಟು ಕೀವು ತುಂಬಿದ ಕೋಶದಂತೆ ಇರುತ್ತದೆ. ಇದು ಒಂದೇ ಕಡೆ ಇಲ್ಲವೇ ಎರಡು ಕಡೆಯೂ ಕಂಡುಬರುವುದು. ಕೀವು ಟಾನಿಸಲ್ ಪ್ರದೇಶಕ್ಕೆ ಸೀಮಿತವಾಗಿ ಇರುತ್ತದೆ. ಆದ್ದರಿಂದ ಕ್ವಿನ್ಸಿ ಮುಂತಾದ ಕೀವುತುಂಬಿದ ನೆರೆ ಪ್ರಾಂತ್ಯಗಳ ಬಾವುಗಳಿಂದ ಪ್ರತ್ಯೇಕವಾಗಿ ಇದನ್ನು ಗುರುತಿಸಬಹುದು. ಟಾನ್ಸಲ್ಲೈಟಿಸ್ 5-6 ವರ್ಷದ ಮಕ್ಕಳಲ್ಲಿ ಸಾಮಾನ್ಯ-ತತ್ರಾಪಿ ಬಡತನ, ಕೊಳಕು ಪ್ರದೇಶಗಳಲ್ಲಿ ವಾಸ, ಮಳೆ ಚಳಿಗಾಳಿಗಳಿಗೆ ಒಡ್ಡಲ್ಪಡುವುದು ಇಂಥ ಸಂದರ್ಭಗಳಲ್ಲಿ. ಕೈಶೋರ್ಯದಲ್ಲೂ ವಯಸ್ಸಾದ ಮೇಲೂ ಟಾನ್ಸಿಲ್ ಟಿಸ್ ಉಂಟಾಗಬಹುದು. ಗಂಟಲುನೋವು, ನುಂಗುವಾಗ ನೋವು. 40◦ಅ-41◦ಅ ಅಷ್ಟು ಕೂಡ ಜ್ವರ, ಇರಸುಮುರಸು, ಮೈಕೈನೋವು, ಕಣ್ಣುರಿ, ಕಣ್ಣಲ್ಲಿ ನೀರುಸುರಿಯುವಿಕೆ, ಕಿವಿನೋವು (ಮಕ್ಕಳಲ್ಲಿ ವಿಶೇಷವಾಗಿ), ಮಲಬದ್ಧತೆ ಇವು ಸಾಮಾನ್ಯ ಲಕ್ಷಣಗಳು. ಗಂಟಲುನೋವು ಸತತವಾಗಿ ಕಾಡಿಸುತ್ತದೆ. ಅಂದರೆ ಇದು ವಯಸ್ಕರಲ್ಲಿ ಮಾತ್ರ. ನುಂಗಿದಾಗ ನೋವೂ ಅಷ್ಟೇ. ಮಕ್ಕಳು ಗಂಟಲುನೋವಿನಿಂದ ಅಷ್ಟು ಬಾಧಿತರಾಗರೆಂದು ತೋರುವುದು. ಅದರೆ ಅವರ ಮೂಗಿನಲ್ಲಿ ಸುರಿಯುತ್ತದೆ. ಅಲ್ಲದೆ ಕಿವಿನೋವು ಚಿಕಿತ್ಸೆಗೆಂದೇ ಬಂದಾಗ ಅವರಿಗೆ ವಾಸ್ತವವಾಗಿ ಟಾನ್ಸಿಲ್ಲೈಟಿಸ್ ಆಗಿರುವುದು ವ್ಯಕ್ತಪಡುತ್ತದೆ. ಕೆಲವು ವೇಳೆ ಟಾನ್ಸಿಲ್ಲೈಟಿಸ್ ಅದ ಮಕ್ಕಳಿಗೆ ಜ್ವರ, ಮೈಕೈನೋವು ಮಾತ್ರ ಮೊದಲು ಮೊದಲು ಕಂಡುಬಂದು ನ್ಯೂಮೋನಿಯವೋ ಅಪೆಂಡಿಸೈಟಿಸ್ಸೋ ಎಂದು ಶಂಕಿಸುವಂತಿರುತ್ತದೆ. ಉಸಿರಾಡಿದಾಗ ಬಾಯಿಯಿಂದ ಕೆಟ್ಟ ವಾಸನೆ, ಅಜೀರ್ಣ, ಬಾಯರಿಕೆ, ಅಲ್ಪಮೂತ್ರ, ಅಸ್ಪಷ್ಟ ಮಾತು (ನೋವಿನಿಂದಾಗಿ) ಇವು (ವಿಶೇಷವಾಗಿ ವಯಸ್ಕರಲ್ಲಿ) ಕಂಡುಬರುವ ಇತರ ಲಕ್ಷಣಗಳು. ಸ್ಥಳೀಯ ದುಗ್ಧರಸಗ್ರಂಥಿಗಳು ಗಳಲೆ ಕಟ್ಟಿಕೊಂಡಿರುವುದೂ ನೋಯುವುದೂ ಸಾಮಾನ್ಯ. ಇಂಥ ಕೆಲವು ಲಕ್ಷ್ಷಣಗಳಿರುವ ಕೆಂಡಾಮಂಡಲಜ್ವರ (ಸ್ಕಾರ್ಲೆಟ್ ಫೀವರ್), ಗಂಟಲ ಮಾರಿ, ವಿನ್ಸೆಂಟನ ಊತರೋಗ (ವಿನ್‍ಸೆಂಟ್ಸ್ ಆಂಜೈನ), ಶ್ವೇತಕಣ ವಿರಳತೆ (ಎಗ್ರಾನ್ಯುಲೋಸ್ಟೆಟೋಸಿಸ್) ಇವುಗಳಿಂದ ಪ್ರತ್ಯೇಕಿಸಿ ಟಾನ್ಸಿಲ್ಲೈಟಿಸ್ಸನ್ನು ಗುರುತಿಸಬೇಕಾದ್ದು ಅಗತ್ಯ. ಟಾನ್ಸಿಲ್ಲೈಟಿಸ್ ಅದಾಗ ನೆರೆಕ್ಷೇತ್ರಗಳಲ್ಲಿ ಕೀವುಯುಕ್ತ ಹುಣ್ಣು (ಆಬ್ಸೆಸ್), ಧ್ವನಿಪೆಟ್ಟಿಗೆಯ ಊತ, ಕಿವಿನೋವು, ಕೂರಾದ ಸಂಧಿವಾತ, ಜ್ವರ ಕೂರಾದ ಮೂತ್ರಪಿಂಡ ಊತ, ವಿಷಮತೆ ಇಂಥ ಜಟಿಲತೆಗಳು ಉಂಟಾಗಬಹುದಾದರೂ ಇವು ಈಚಿನ ರಾಸಾಯನಿಕ ಔಷಧಗಳ ಉಪಯೋಗ ಕಾಲದಲ್ಲಿ ವಿರಳವಾಗಿವೆ.
ಚಿಕಿತ್ಸೆ
[ಬದಲಾಯಿಸಿ]ಟಾನ್ಸಿಲ್ಲೈಟಸ್ಸಿಗೆ ಚಿಕಿತ್ಸಯನ್ನು ಔಷಧೋಪಚಾರಗಳಿಂದಾಗಲಿ ಶಸ್ತ್ರಕಾರ್ಯದಿಂದಾಗಲಿ ಮಾಡಬಹುದು. ಹಾಸಿಗೆ ಮೇಲೆ ಮಲಗಿ ವಿಶ್ರಾಂತಿಪಡೆಯುವುದು, ಒದ್ದೆ ಬಟ್ಟೆಯಿಂದ ಮೈ ಒರಸಿಕೊಳ್ಳುವುದು, ಜ್ವರ ಮತ್ತು ಮೈಕೈನೋವಿಗಾಗಿ ಪ್ಯಾರೆಸಿಟಿಮಾಲ್ ಎಂಬ ಔಷದವನ್ನು ಪ್ರತಿಸಲವೂ 250 ಮಿಲಿಗ್ರಾಮಿನಷ್ಟು ದಿನಕ್ಕೆ ಮೂರು ಬಾರಿಯಂತೆ 5 ದಿವಸಗಳ ಕಾಲ ಬಿಡದೆ ತೆಗೆದುಕೊಳ್ಳುವುದು-ಇದು ಚಿಕಿತ್ಸಾಕ್ರಮ, ವಯಸ್ಕರು ಸುಮಾರು 1/2-1/4 ಗ್ರಾಮಿನಷ್ಟು ಆಸ್ಪಿರಿನ್ ಕರಗಿರುವ ಬಿಸಿನೀರನ್ನು ಗಂಟಲಿಗೆ ಹಾಕಿ ಗುಳುಗುಳುಮಾಡಿ ಉಗುಳುವುದರಿಂದ ಗಂಟಲು ನೋವನ್ನು ಶಮನವಾಡಿಕೊಳ್ಳಬಹುದು. ಈಚಿಗೆ ಕ್ರಮವರಿತು ಸಲ್ಫೋನೆಮೈಡ್, ಪೆನಿಸಿಲ್ಲಿನ್ ಇತ್ಯಾದಿಗಳನ್ನು ಚಿಕಿತ್ಸಕ ಔಷಧಗಳನ್ನಾಗಿ ಉಪಯೋಗಿಸುವುದಿದೆ. ರೋಗಿ ಈ ಔಷಧಗಳಿಗೆ ಒಗ್ಗದ ಪ್ರವೃತ್ತಿಯನ್ನು ತೋರಿಸುವಂತಿದ್ದರೆ ಟೆಟ್ರಸೈಕ್ಲಿನ್ನುಗಳನ್ನು ಕೊಡಬಹುದು. ಮಲಬದ್ಧತೆಯನ್ನು ತಕ್ಕ ಔಷಧಗಳಿಂದ ನಿವಾರಿಸಬೇಕು.
ದೀರ್ಘಕಾಲಿಕವಾಗಿ ಟಾನ್ಸಿಲ್ಲಿನ ಗಾತ್ರವೃದ್ಧಿ ಆಗುವುದು ಬಾಲ್ಯದ 3ನೆಯ ವರ್ಷ ಹಾಗೂ 5-6ನೆಯ ವರ್ಷಗಳಲ್ಲಿ ಸಾಮಾನ್ಯ ಎಂದು ಮೇಲೆ ಹೇಳಿದೆ. ಈ ವೇಳೆಯಲ್ಲಿ ಗಾತ್ರವೃದ್ಧಿ ಸೋಂಕಿನಿಂದಲ್ಲದೆ ನೈಸರ್ಗಿಕವಾಗಿಯೇ ಉಂಟಾಗಬಹುದು. ಅತಿಯಾಗಿದ್ದರೆ ಉಸಿರಾಡಲೂ ಆಹಾರಪದಾರ್ಥವನ್ನು ನುಂಗಲೂ ಕಷ್ಟವಾಗಿರುತ್ತದೆ. ಮಕ್ಕಳು ಕೃಶರಾಗುವರಲ್ಲದೆ ಪುಪ್ಫುಸ ರೋಗಗಳಿಗೂ ಕಿವಿನೋವಿಗೂ ಆಗಾಗ ತುತ್ತಾಗುತ್ತಾರೆ. ಸತತವಾಗಿ ಇಲ್ಲವೇ ಆಗಿಂದಾಗೆ ಗಂಟಲುನೋವು ಉಂಟಾಗುವುದು. ಕತ್ತಿನ ಹಿಂಭಾಗದಲ್ಲಿ ಗಳಲೆ ಕಟ್ಟಿಕೊಂಡಿರುವುದು. ಟಾನ್ಸಿಲ್ಲುಗಳು ಬಲುದಪ್ಪವಾಗಿರುವುದು. ಟಾನ್ಸಿಲ್ಲುಗಳ ಮುಂದಿರುವ ಸ್ನಾಯು ಕೆಂಪೇರಿರುವುದು, ಕೆಮ್ಮಿನಿಂದ ತೊಂದರೆಯಾಗುವುದು ಇವು ಸಣ್ಣ ವಯಸ್ಕರಲ್ಲಿ ದೀರ್ಘಕಾಲಿಕವಾಗಿ ಕಂಡುಬರುವ ಟಾನ್ಸಿಲ್ಲೈಟಿಸ್ಸಿನ ಲಕ್ಷಣಗಳು. ಅನೇಕ ವೇಳೆ ಸಮಕಾಲಿಕವಾಗಿಯೇ ಮೂಗುಗಂಟಲಿನ ಟಾನ್ಸಿಲ್ಲೂ ಅಡಿನಾಯ್ಡ್ ಗ್ರಂಥಿಗಳೂ ಊತಗೊಂಡಿರುತ್ತವೆ. ಇದರಿಂದಾಗಿ ಮೂಗಿನಿಂದ ಉಸಿರಾಡಲು, ಕಷ್ಟವಾಗಿ ಬಾಯಿಯಿಂದಲೇ ಉಸಿರಾಡಬೇಕಾಗಿ ಬಂದು ಆಹಾರ ತೆಗೆದುಕೊಳ್ಳುವಾಗ ಆಗಾಗ ಆಹಾರಸೇವನೆಯನ್ನು ನಿಲ್ಲಿಸಬೇಕಾಗುತ್ತದೆ. ಶೈಶವದಲ್ಲಿ ಇದರಿಂದ ಆಹಾರಸೇವನೆ ಮಿತಗೊಂಡು ಮಗುವಿನ ಬೆಳೆವಣಿಗೆ ಸ್ಥಗಿತವಾಗುತ್ತದೆ. ಬಾಯಿಯಿಂದಲೇ ಉಸಿರಾಡಬೇಕಾಗಿದ್ದು ಇದೇ ಅಭ್ಯಾಸವಾಗಿ ಮುಂದೂ ಉಸಿರಾಟಕ್ಕಾಗಿ ಯಾವಾಗಲೂ ಬಾಯಿ ತೆರೆದೇ ಇರುವ ರೂಢಿ ಉಂಟಾಗುತ್ತದೆ. ಮೂಗು ಗಂಟಲಿನಲ್ಲಿ ಅಡಚಣೆ ಉಂಟಾಗಿರುವುದರಿಂದ ಮೂಗಿನಲ್ಲಿ ಅಧಿಕವಾಗಿ ಸಿಂಬಳ ಸಂಗ್ರಹವಾಗಿ ಹೊರಸುರಿಯುವುದೂ ಸಾಮಾನ್ಯ. ಧ್ವನಿಬದಲಾವಣೆ ಆಗಿ ಮೂಗಿನಿಂದ ಮಾತಾಡುವಂತೆ ಆಗುತ್ತದೆ. ಮೂಗಿನ ಹೊಳ್ಳೆಗಳನ್ನು ಹಿಗ್ಗಿಸಲಾಗದೆ ಹೊಳ್ಳೆಗಳು ಕಿರಿದಾಗಿರುತ್ತವೆ. ಮೂಗಿನಿಂದ ಬಾಯಿಯ ಕೊನೆಗೆ ಬಂದು ಸೇರಿಕೊಳ್ಳುವ ಮಡಿಕೆ (ನೇಸೋಲೇಬಿಯಲ್ ಫೋಲ್ಡ್ಸ್) ಕಾಣದಾಗವುದೂ ತುಟಿ ದಪ್ಪವಾಗಿ, ಒಣಗಿ, ಅಲ್ಲಲ್ಲಿ ಒಡೆದಿರುವುದೂ ಹಲ್ಲುಗಳು ವಕ್ರವಾಗಿ ವಸಡಿನಿಂದ ಸುಲಭವಾಗಿ ರಕ್ತಸ್ರಾವವಾಗುವುದೂ ನಾಲಿಗೆ ದಪ್ಪವಾಗಿ ಮತ್ತು ಶುಷ್ಕವಾಗಿರುವುದೂ ಬಾಯಿಯ ಅಟ್ಟ ಎತ್ತಿಕೊಂಡಿರುವುದೂ ಕಣ್ಣಲ್ಲಿ ನೀರು ಸುರಿಯುವುದೂ ಇವು ಈ ರೋಗಸ್ಥಿತಿಯಿಂದ ನರಳುತ್ತಿರುವ ಮಗುವಿನಲ್ಲಿ ಕಂಡು ಬರುವ ಇತರ ಲಕ್ಷಣಗಳು. ಕಳೆಗುಂದಿದ ಹಾಗೂ ನಿರಾಸಕ್ತತೆಯನ್ನು ಹೊರಸೂಸುವ ಇಂಥ ಮುಖವಿರುವುದು ಈ ಮಕ್ಕಳ ವೈಶಿಷ್ಟ್ಯ. ಇದಕ್ಕೆ ಅಡಿನಾಯ್ಡ್ ಮುಖ (ಫೇಸಿಸ್) ಎಂದೇ ಕರೆಯಲಾಗಿದೆ. ಇದಲ್ಲದೆ ಬೆಳೆವಣಿಗೆ ಸ್ಥಗಿತವಾಗಿರುವುದು, ಕಿವಿಯಲ್ಲಿ ಸೋರುತ್ತಿರುವುದು, ಶ್ರವಣಮಾಂದ್ಯ, ಬುದ್ಧಿಮಾಂದ್ಯ, ಕತ್ತಲಿನಲ್ಲಿ ಹೆದರಿಕೊಳ್ಳುವುದು, ಹಾಸಿಗೆಯಲ್ಲಿ ಮೂತ್ರವಿಸರ್ಜನೆ, ರಾತ್ರಿ ಮೂಗಿನಿಂದ ರಕ್ತ ಸುರಿಯುವುದು, ನಿದ್ರೆಮಾಡುವಾಗ ಗೊರಕೆಹೊಡೆಯುವುದು-ಇವೂ ಅನೇಕ ವೇಳೆ ಕಂಡುಬರುತ್ತವೆ. ತೊಂದರೆ ಹೆಚ್ಚಾಗಿದ್ದರೆ ಗಾತ್ರಗೊಂಡ ಟಾನ್ಸಿಲ್ಲನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬೇಕು. ಅಷ್ಟು ಹೆಚ್ಚಾಗಿಲ್ಲದಿದ್ದರೆ ಎಲ್ಲ ವೈಟಮಿನ್ನುಗಳು ಹೆಚ್ಚಾಗಿ ಇರುವ ಒಳ್ಳೆ ಆಹಾರವನ್ನು ಕೊಟ್ಟು ಪೋಷಿಸಿದರೆ ಸಾಕು.
ಪದೇ ಪದೇ ಗಂಟಲುನೋವು ಜ್ವರ ಇವು ಬಂದು ತೊಂದರೆಗೊಳಿಸುತ್ತಿರುವುದು, ಔಷಧೋಪಚಾರಗಳಿಂದ ಗುಣವಾಗದಿರುವುದು, ನೆರೆಕ್ಷೇತ್ರದಲ್ಲಿ ಕೀವಿತುಂಬಿದ ಹುಣ್ಣಾಗಿರುವುದು, ಡಿಫ್ತೀರಿಯ ರೋಗಾಣು, ಸ್ಟ್ರೆಪ್ಟೋಕಾಕಸ್ ಇವು ಇಂಥ ಟಾನ್ಸಿಲಿನಲ್ಲಿ ನೆಲೆನಿಂತು ವ್ಯಕ್ತಿ ಸ್ವತಃ ಆಯಾ ರೋಗಗಳಿಂದ ನರಳದೇ ಇದ್ದರೂ ನೆರೆಯವರಿಗೆ ಸೋಂಕನ್ನು ಹರಡುತ್ತಿರುವ ಸನ್ನಿವೇಶ, ಉಸಿರಾಟಕ್ಕೆ ನುಂಗುವುದಕ್ಕೆ ತೊಂದರೆ, ಶೀತ ನೆಗಡಿ ಇವುಗಳಿಂದ ಆಗಾಗ ಕಿವಿಯ, ಹಿಂದೆ ಗಳಲೆ ಕಟ್ಟಿಕೊಂಡಿರುವ ಸ್ಥಿತಿ ಸಂಧಿವಾತ, ಮೂತ್ರಪಿಂಡದ ಊತ, ಕಣ್ಣುನೋವು ಚರ್ಮದಲ್ಲಿ ಕಜ್ಜಿಕುರುಗಳು, ನೆಗಡಿ, ಕೆಮ್ಮು, ತಲೆನೋವು ಮುಂತಾದವು ಟಾನ್ಸಿಲ್ಲೈಟಿಸ್ಸಿಗೆ ಸಂಬಂಧಿಸಿವೆ ಎನ್ನಿಸಿದಾಗ ಶಸ್ತ್ರಕಾರ್ಯದಿಂದ ಟಾನ್ಸಿಲ್ಲನ್ನೂ ಅಡ್ಡಿನಾಯ್ಡನ್ನೂ ತೆಗೆದುಹಾಕಬೇಕು. ಮಕ್ಕಳ ಬೆಳೆವಣಿಗೆ ಹಾಗೂ ಆರೋಗ್ಯ ತೃಪ್ತಿಕರವಾಗಿಲ್ಲದಿದ್ದಾಗ ಮತ್ತು ಸ್ನಾಯುಗಳು ತಕ್ಕಷ್ಟು ಬಿಗಿಯಾಗಿ ಇಲ್ಲದಿದ್ದಾಗ ಈ ಸ್ಥಿತಿಗಳಲ್ಲೂ ಟಾನ್ಸಿಲ್ಲುಗಳನ್ನು ಶಸ್ತ್ರಕಾರ್ಯದಿಂದ ತೆಗೆದುಹಾಕುವ ಯೋಚನೆ ಮಾಡಬಹುದು. ಆದರೆ ಕೂರಾದ ಅನ್ಯಸೋಂಕು ಉಂಟಾದಾಗ, ಮಧುಮೇಹ ತೀವ್ರವಾಗಿರುವವರಲ್ಲಿ, ರಕ್ತದ ಒತ್ತಡ ಅಧಿಕಾವಾಗಿರುವವರಲ್ಲಿ, ಪೋಲಿಯೋ ರೋಗ ಸಂಕ್ರಾಮಿಕವಾಗಿರುವಾಗ, ಲ್ಯುಕೀಮಿಯ, ಹೀಮೋಫೀಲಿಯ ಮುಂತಾದ ರೋಗಗಳಿಂದ ನರಳುತ್ತಿರುವವರಲ್ಲಿ ಶಸ್ತ್ರಚಿಕಿತ್ಸೆ ಕೂಡದು. ಈಚೆಗೆ ಹೀಮೋಫೀಲಿಯದಿಂದ ನರಳುವವರಲ್ಲಿ ವಿಶೇಷ ಸೂಜಿಮದ್ದನ್ನು ಉಪಯೋಗಿಸಿದ ಅನಂತರ ಶಸ್ತ್ರಚಿಕಿತ್ಸೆ ಸಾಧ್ಯವೆನಿಸಿದೆ. ಗಾಯಕರಲ್ಲಿ ಟಾನ್ಸಿಲ್ಲಿನ ಶಸ್ತ್ರಚಿಕಿತ್ಸೆ ವಿಶೇಷ ಸಂದರ್ಭ. ಇವರಲ್ಲಿ ಶಸ್ತ್ರಚಿಕಿತ್ಸೆಯ ಕಾಲದಲ್ಲಿ ರೋಗಗ್ರಸ್ತ ಅಂಗಾಂಶವನ್ನು ಮಾತ್ರ ತೆಗೆದುಹಾಕಬೇಕು. ಅನಾವಶ್ಯಕವಾಗಿ ನೆರೆಯ ಅಂಗಾಂಶಗಳನ್ನು ತೆಗೆದು ಹಾಕಲಾಗದು. ಏಕೆಂದರೆ ಹಾಗೆ ಮಾಡಿದರೆ ಅವರ ಧ್ವನಿ ಕೆಟ್ಟುಹೋಗಬುದು. ವಯಸ್ಕರಲ್ಲಿಯೂ ದೀರ್ಘಕಾಲಿಕವಾಗಿ ಟಾನ್ಸಿಲ್ಲಿನ ಗಾತ್ರವೃದ್ಧಿ ಆಗುವುದು ಉಂಟು. ಯಾವಾಗಲೂ ಗಂಟಲು ಕಸರುತ್ತಿರುವುದು ಆಗಾಗ ಗಂಟಲುನೋವು, ರಕ್ತಪೂರೈಕೆ ಅಧಿಕಗೊಂಡಿರುವುದರಿಂದ ಟಾನ್ಸಿಲ್ಲುಗಳು ಕೆಂಪೇರಿರುವುದು, ದುರ್ಗಂಧ ಉಸಿರು, ಟಾನ್ಸಿಲ್ಲನ್ನು ಅವುಕಿದರೆ ಕೆನೆಯಂಥ ದ್ರವ ಒಸರುವುದು-ಇವು ಈ ಸ್ಥಿತಿಯಲ್ಲಿ ಕಂಡುಬರುವ ಲಕ್ಷ್ಷಣಗಳು. ಅಲ್ಲದೆ ಇರಸಮುರಸು, ತಲೆ ನೋವು, ಬಳಿಕೆ, ಉಸಿರಾಟ ಕಷ್ಟವಾಗಿರುವಿಕೆ, ಸಂಧಿವಾತ ಇತ್ಯಾದಿಗಳೂ ಕಂಡು ಬರಬಹುದು, ಔಷಧೋಪಚಾರಗಳಿಂದ ಆಗುವ ಗುಣ ಅಷ್ಟಕ್ಕಷ್ಟೆ. ಕೆನೆಯಂತೆ ಒಸರುವ ದ್ರವವನ್ನು ಯಾಂತ್ರಿಕವಾಗಿ ಹೀರಿ ತೆಗೆದುಹಾಕಿ ಗಂಟಲಿಗೆ ಔಷಧ ಲೇಪನ ಮಾಡಬಹುದು ನಿಜವಾಗಿ ಉಪಯುಕ್ತ ಚಿಕಿತ್ಸೆ ಶಸ್ತ್ರಕ್ರಿಯೆಯೇ ಸರಿ.
ಟಾನ್ಸಿಲ್ಲನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಾದರೆ ಸಾಮಾನ್ಯವಾಗಿ ಎರಡು ವಿಧಾನಗಳನ್ನು ಅನುಸರಿಸಬಹುದು. ಗಿಲ್ಲೋಟನ್ ಎಂಬ ಶಸ್ತ್ರವನ್ನು ಉಪಯೋಗಿಸಿ ಟಾನ್ಸಿಲ್ಲನ್ನು ಆದಷ್ಟು ಬುಡಮಟ್ಟದಲ್ಲಿ ಕೊಯ್ದುಹಾಕುವುದು ಒಂದು. ಇದು ಈಚೆಗೆ ಬಲು ಅಪರೂಪವಾಗಿ ಎಲ್ಲೋ ಕೆಲವು ಕಡೆ ಮಾತ್ರ ಅನುಸರಿಸುವ ಕ್ರಮ. ಈ ಶಸ್ತ್ರಕಾರ್ಯಕ್ಕೆ ಜ್ಞಾನ ತಪ್ಪಿಸಬೇಕಾದದ್ದು ಅಗತ್ಯ. ಮೊದಲು ಅಟ್ರೊಪೀನ್ ಸಲ್ಫೇಟನ್ನು ಸೂಜಿಮದ್ಧಾಗಿ ಕೊಟ್ಟು ನೈಟ್ರಸ್ ಆಕ್ಸೈಡ್ ಮತ್ತು ಆಕ್ಸಿಜನ್ನಿನಿಂದ ಸಂವೇದನಾನಾಶವನ್ನು ಪ್ರಾರಂಬಿಸಿ 3%-4% ಹಾಲೋಥೇನಿನ ಉಪಯೋಗದಿಂದ ಪೂರ್ಣವಾಗಿ ಜಾÐನತಪ್ಪಿಸುವುದು ಒಳ್ಳೆಯ ಕ್ರಮವೆನ್ನಿಸಿದೆ. ಕೈಗಳನ್ನು ಒಳಸೇರಿಸಿ ಮಗುವನ್ನು ಬೆಚ್ಚನೆಯ ವಸ್ತ್ರದಿಂದ ಸುತ್ತಿಮಲಗಿಸಿ ಸಂವೇದನಾನಾಶಕ್ರಮವನ್ನು ಪ್ರಾರಂಭಿಸಬೇಕು. ಶ್ವಾಸನಾಳಕ್ಕೆ ರಕ್ತ ಹರಿದು ಹೋಗುವಂತೆ ಕತ್ತನ್ನು ಆದಷ್ಟು ಹಿಂಭಾಗಕ್ಕೆ ಬಾಗಿಸಬೇಕು. ಜ್ಞಾನತಪ್ಪಿದ ಮೇಲೆ ಡಾಯನ್ನಿನ ಕಡಿವಾಣವನ್ನು (ಮೌತ್‍ಗ್ಯಾಗ್) ಮೇಲಿನ ಮತ್ತು ಕೆಳಗಿನ ಕೋರೆಹಲ್ಲುಗಳ ನಡುವೆ ಇಟ್ಟು ಹಿಗ್ಗಲಿಸಿ ಸಾಕಾದಷ್ಟು ದೊಡ್ಡದಾಗಿ ಬಾಯಿ ತೆರೆದಿರುವಂತೆ ಮಾಡಬೇಕು. ಅನಂತರ ಗಿಲ್ಲೋಟಿನ್ನನ್ನು ನಾಲಿಗೆಯ ಮೇಲೆ ನೂಕುತ್ತ ಟಾನ್ಸಿಲ್ಲಿಗೆ ಸಿಕ್ಕಿಸಿ ಅದನ್ನು ಬುಡಹತ್ತ ಕತ್ತರಿಸಬೇಕು. ಇನ್ನೊಂದು ಕಡೆಯ ಟಾನ್ಸಿಲ್ಲನ್ನೂ ಇದೇ ರೀತಿ ಕತ್ತರಿಸಿ ವ್ಯಕ್ತಿಯನ್ನು ಮುಖದ ಮೇಲೆ ಮಲಗಿಸಿ ತಲೆಯನ್ನು ಪಕ್ಕಕ್ಕೆ ತಿರುಗಿಸಬೇಕು. ಶಸ್ತ್ರಕಾರ್ಯ ಮುಗಿದ 6 ಗಂಟೆಗಳ ತರುವಾಯ ಬರ್ಫಯುಕ್ತ ಜೆಲ್ಲಿ ಮುಂತಾದ ತಂಪಾಗಿ ಇರುವ ಮತ್ತು ಸುಲಭವಾಗಿ ನುಂಗಬಹುದಾಂಥ ಆಹಾರವನ್ನು ಕೊಡಲು ತೊಡಗಬೇಕು. ಎರಡು ದಿವಸಗಳಷ್ಟಾದರೂ ಮಲಗಿ ವಿಶ್ರಾಂತಿ ಪಡೆಯುವುದು ಅಗತ್ಯ. ಒಂದು ವಾರದ ತನಕ ದ್ರವಾಹರವನ್ನೇ ಸೇವಿಸುತ್ತಿರಬೇಕು. ಆಗಾಗ ವಿಷಾಣುನಾಶಕದ್ರಾವಣವನ್ನು ಬಾಯೊಳೆಗೆ ಹಾಕಿ ಗುಳಗುಳಮಾಡಿ ಉಗಿಯಬೇಕು. ಈ ಶಸ್ತ್ರಕಾರ್ಯವನ್ನು ಮಾಡಲು ಹೆಚ್ಚು ಕಾಲ ಬೇಕಿಲ್ಲ. ಟಾನ್ಸಿಲ್ಲಿನ ಬುಡ ಕ್ಷೇತ್ರಮಟ್ಟದಿಂದ ಮೇಲೆ ಇರುವ ಸಂದರ್ಭಗಳಲ್ಲಿ ಇದು ಸೂಕ್ತ. ಹಾಗಿಲ್ಲದೆ ಟಾನ್ಸಿಲ್ಲಿನ ಬುಡ ಹುದುಗಿದ್ದರೆ ಈ ಕ್ರಮವನ್ನು ಅನುಸರಿಸುವುದು ಅಷ್ಟು ಉಪಯುಕ್ತವಲ್ಲ. ಏಕೆಂದರೆ ಹುದುಗಿರುವ ಭಾಗವನ್ನು ಈ ಶಸ್ತ್ರದಿಂದ ತೆಗೆಯಲಾಗದೆ ರೋಗಗ್ರಸ್ತ ಟಾನ್ಸಿಲ್ಲು ಉಳಿದುಕೊಳ್ಳುತ್ತದೆ. ಅಲ್ಲದೆ ಅನೇಕ ವೇಳೆ ನೆರೆಪ್ರಾಂತ್ಯದಲ್ಲಿರುವ ಅಂಗಾಂಶಗಳು ಗಿಲ್ಲೊಟನ್ನಿಗೆ ಸಿಕ್ಕಿಕೊಂಡು ಆಕಸ್ಮಾತ್ತಾಗಿ ತೆಗೆದುಹಾಕಲ್ಪಟ್ಟು ಗಾಯದ ಕಲೆ ಆಗಿ ಸುಕ್ಕುಕಟ್ಟಿ ಧ್ವನಿ ಬದಲಾವಣೆ ಆಗಬಹುದು.
ಟಾನ್ಸಿಲ್ಲನ್ನು ನೆರೆ ಹಾಗೂ ಬುಡಕ್ಷೇತ್ರದಿಂದ ಬಿಡಿಸಿ ತೆಗೆದುಹಾಕುವುದು ಇನ್ನೊಂದು ಕ್ರಮ, ಇದು ಎಲ್ಲ ರೋಗಿಗಳಲ್ಲೂ ಯಾವಾಗಲೂ ಆಚರಿಸಬಹುದಾದ ವಿಧಾನ. ಅದರೆ ಈ ಕಾರ್ಯಚರಣೆಗೆ ಹೆಚ್ಚುಕಾಲ ಬೇಕಾಗುತ್ತದೆ. ರೋಗಗ್ರಸ್ತ ಟಾನ್ಸಿಲ್ಲನ್ನು ಈ ವಿಧಾನದಿಂದ ಪೂರ್ಣವಾಗಿ ಬೇರ್ಪಡಿಸಿ ತೆಗೆದು ಹಾಕಬಹುದು, ನೇರನೋಟ ಸಾಧ್ಯವಾಗಿರುವುದರಿಂದ ಈ ಕಾಲದಲ್ಲಿ ರಕ್ತಸ್ರಾವ ವಾಗುತ್ತಿರುವ ರಕ್ತನಾಳಗಳನ್ನು ದಾರದಿಂದ ಕಟ್ಟಿ ರಕ್ತನಷ್ಟವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಹುಟ್ಟಿದಾಗಿನಿಂದ ಗುಂಡಿಗೆ ರೋಗಗ್ರಸ್ತವಾಗಿರುವವರಲ್ಲಿ ಈ ವಿಧಾನ ವಿಧೇಯಕ. ಬಾಯಿಯ ಅಟ್ಟದಲ್ಲಿ ತೂತು ಇರುವ ಸಂದರ್ಭಗಳಲ್ಲಿಯೂ ಹಾಗೆಯೇ. ಕ್ವಿನ್ಸಿ ಎಂಬ ರೋಗಾವಸ್ಥೆಯ ಬಳಿಕ ಟಾನ್ಸಿಲ್ಲನ್ನು ತೆಗೆಯ ಬೇಕಾದಾಗಲೂ ಇದೇ ವಿಧಾನವನ್ನು ಅನುಸರಿಸಬೇಕು. ಜ್ಞಾನತಪ್ಪಿಸಿಯಾಗಲಿ ಇಲ್ಲವೆ ಜ್ಞಾನತಪ್ಪಿಸದೆ ಲಿಗ್ನೊಕೆಯ್ನನ್ನು ಸ್ಥಳೀಯ ಸಂವೇದನಾನಾಶಕವಸ್ತುವನ್ನಾಗಿ ಉಪಯೋಗಿಸಿಯಾಗಲಿ ಈ ಶಸ್ತ್ರಕಾರ್ಯವನ್ನು ಜರಗಿಸಬಹುದು. ಸುತ್ತಲೂ ಕತ್ತರಿಯಿಂದ ಬಿಡಿಸಿಕೊಂಡು ಅನಂತರ ಟಾನ್ಸಿಲ್ಲನ್ನು ಉರುಳಿನಲ್ಲಿ ಸಿಕ್ಕಿಸಿಕೊಂಡು ಅದನ್ನು ತೆಗೆದು ಹಾಕಬೇಕು. ರಕ್ತನಾಳಗಳನ್ನು ಸೂಕ್ತರೀತಿಯ ದಾರದಿಂದ ಕಟ್ಟಿ ರಕ್ತಸ್ರಾವವನ್ನು ತಡೆಗಟ್ಟಬೇಕು. ಎರಡು ರೀತಿಯ ಶಸ್ತ್ರಕ್ರಿಯೆಯಲ್ಲೂ ಅತಿಯಾಗಿ ರಕ್ತಸ್ರಾವವಾಗುವ ಹೆದರಿಕೆ ಇದ್ದೇ ಇದೆ. ಹಲ್ಲು ಕಿತ್ತುಬರುವ ಸಂಭವವೂ ಉಂಟು. ರೋಗಿ ಕತ್ತಲಿನಲ್ಲಿ ಅತಿಯಾಗಿ ಹೆದರುವ ಪ್ರಮೇಯ, ಗಂಟಲಿನಲ್ಲಿ ಕೀವುಯುಕ್ತ ಹುಣ್ಣಾಗುವುದು, ಕತ್ತು ಸ್ವಲ್ಪ ತಿರುಚಿದಂತಾಗುವುದು (ಟಾರ್ಟಿಕಾ ಲಿಸ್) ಇವು ಶಸ್ತ್ರಕಾರ್ಯದ ತರುವಾಯ ಕಂಡುಬರಬಹುದಾದ ಜಟಿಲತೆಗಳು. ಟಾನ್ಸಿಲ್ಲಿನ ನೆರೆಪ್ರಾಂತ್ಯದಲ್ಲಿ ಗಂಟಲಿನಲ್ಲೋ ಬಾಯಿಯ ಅಟ್ಟದಲ್ಲೋ ಕಂಡು ಬರುವ ಕೀವು ತುಂಬಿನ ಹುಣ್ಣಿಗೆ ಕ್ವಿನ್ಸಿ ಎಂದು ಹೆಸರು. ಇದು ಸಾಧಾರಣವಾಗಿ ವಯಸ್ಕರಲ್ಲಿ ಎಡಗಡೆ ಅಥವಾ ಬಲಗಡೆ ಟಾನ್ಸಿಲ್ಲಿನ ನೆರೆಯಲ್ಲಿ ಕಂಡುಬರುತ್ತದೆ. ಟಾನ್ಸಿಲ್ಲು ಬಹುಕಾಲಿಕ ಸೋಂಕಿನ ನೆಲೆಯಾಗಿ ಉರುಟುಗೊಂಡಿರುವುದು ಇಲ್ಲವೆ ಮುಂದಿನ ಅಥವಾ ಹಿಂದಿನ ಸ್ತಂಭಗಳಿಗೆ ಅಂಟಿಕೊಂಡಿರುವುದು ಇಂಥ ಸಂದರ್ಭಗಳಲ್ಲಿ ಕ್ವಿನ್ಸಿ ತಲೆದೋರುವುದು ಸಾಮಾನ್ಯ. ಗಿಲ್ಲೋಟಿನ್ ವಿಧಾನದಿಂದ ಟಾನ್ಸಿಲ್ಲನ್ನು ಅಸಂಪೂರ್ಣವಾಗಿ ತೆಗೆದುಹಾಕಿರುವ ಸಂದರ್ಭಗಳಲ್ಲೂ ಕ್ವಿನ್ಸಿ ಉಂಟಾಗಬಹುದು. ಗಂಟಲು ಅತಿಯಾಗಿ ನೋಯುವುದು, ಇರಸುಮುರಸು, ತಲೆ ನೋವು, ಮಲಬದ್ಧತೆ, ಜ್ವರ ಕಿವಿನೋವು, ಅತಿಯಾಗಿ ಜೊಲ್ಲುಸುರಿಯುವುದು, ಉಸಿರಾಡಿದಾಗ ಕೆಟ್ಟವಾಸನೆ, ಬಾಯಿ ತೆರೆಯುವುದಕ್ಕಾಗದಿರುವುದು, ಸರಿಯಾಗಿ ಮಾತನ್ನಾಡಲು ಕಷ್ಟವಾಗುವುದು, ಕತ್ತಿನಲ್ಲಿ ನೋಯುವ ಗಳಲೆ ಕಟ್ಟಿಕೊಳ್ಳುವುದು, ಗಂಟಲಿನಲ್ಲಿ ಕೀವುತುಂಬಿದ ಸ್ಥಳದ ಸುತ್ತ ಊದಿಕೊಂಡು ಕೆಂಪಾಗಿರುವುದು, ಕಿರುನಾಲಿಗೆ ಇನ್ನೊಂದು ಕಡೆಗೆ ತಳ್ಳಲ್ಪಟ್ಟಿರುವುದು-ಇವು ಕ್ವಿನ್ಸಿಯ ಲಕ್ಷಣಗಳು. ಒಡನೆ ಚಿಕಿತ್ಸಿಸದಿದ್ದರೆ ಹುಣ್ಣು ಒಡೆಯ ಕೀವು ಸುರಿಯುತ್ತದೆ. ಇದರಿಂದ ಉಸಿರುಕಟ್ಟುವ ಸಂಭವ ಉಂಟು. ಅದಲ್ಲದಿದ್ದರೆ ನೆರೆಪ್ರಾಂತ್ಯದ ಊತದಿಂದಾದರೂ ಶ್ವಾಸಕ್ರಮಕ್ಕೆ ತೊಂದರೆ ಆಗಬಹುದು. ಹೀಗಾದಾಗ ತತ್‍ಕ್ಷಣವೇ ಶ್ವಾಸನಾಳವನ್ನು ಛೇದಿಸಿ ಉಸಿರಾಟವನ್ನು ಸುಲಭಗೊಳಿಸಬೇಕಾಗುತ್ತದೆ. ಕ್ವಿನ್ಸಿ ಆದ ತರುಣದಲ್ಲೆ ಪತ್ತೆ ಆದರೆ ಪೆನಿಸಿಲ್ಲಿನ್ನನ್ನು ಸೂಜಿಮದ್ದಾಗಿ ಕೊಡಬೇಕಾಗುತ್ತದೆ. ಹಾಸಿಗೆ ಮೇಲೆ ಮಲಗಿ ವಿಶ್ರಾಂತಿ ಪಡೆಯುವುದು, ಹೊಟ್ಟೆತುಂಬ ಆಹಾರ ಮತ್ತು ಸಾಕಷ್ಟು ನೀರನ್ನು ಸೇವಿಸುವುದು ಇವು ಅಗತ್ಯ. ಕೀವುತುಂಬಿ ಒಡೆಯಬಹುದು ಎನ್ನುವ ಸಂದರ್ಭದಲ್ಲಿ ಕೊಯ್ದು ಕೀವನ್ನು ಹೊರಡಿಸಿ ಜೀವಿರೋಧಕಗಳನ್ನು ಕೊಟ್ಟು ಚಿಕಿತ್ಸಿಸಬೇಕು. ಮಕ್ಕಳಲ್ಲಿ ಇದನ್ನು ಜ್ಞಾನತಪ್ಪಿಸಿ ಮಾಡುವುದು ಒಳ್ಳೆಯದು. ದೊಡ್ಡವರಲ್ಲಿ ಪತ್ತೆ ಆದ ತತ್‍ಕ್ಷಣವೇ ಯಾವ ಸಂವೇದನಾನಾಶಕ ಕ್ರಮವನ್ನೂ ಅನುಸರಿಸದೆ ಜರೂರು ಶಸ್ತ್ರಕಾರ್ಯ ಜರಗಿಸುವುದು ಸರಿಯಾದ ಮಾರ್ಗ. ನೋವುಶಮನಕ್ಕೆ ಆಸ್ಪಿರಿನ್ನಾಗಲಿ, ಪ್ಯಾರೆಸಿಟಿಮಾಲನ್ನಾಗಲಿ ಕೊಡಬೇಕು. ನಾಲಿಗೆ ಟಾನ್ಸಿಲ್ಲಿನಲ್ಲೂ ಕೀವುಗೊಂಬಿದ ಹುಣ್ಣು ಉಂಟಾಗಬಹುದು ಗಂಟಲಿನಲ್ಲಿ ಹಾಗೂ ಕಿವಿಯಲ್ಲಿ ಅತಿನೋವು, ನುಂಗುವುದಕ್ಕೆ ತೀರ ಆಗದೇ ಇರುವುದು, ಮಾಡಲು ಕಷ್ಟವಾಗುವುದು, ಶ್ವಾಸನಾಳ ಊದಿಕೊಂಡು ಉಸಿರಾಡಲು ಕಷ್ಟವಾಗುವುದು:-ಇವು ಇತರ ಲಕ್ಷಣಗಳು. ವಯಸ್ಕರಲ್ಲಿ ಮಾತ್ರ ಇದು ಕಂಡುಬರುತ್ತದೆ. ಇದಕ್ಕೆ ಶಸ್ತ್ರಚಿಕಿತ್ಸೆ ಕಷ್ಟ. ಆದ್ದರಿಂದ ನಿರರ್ಥಕ. ಜೀವಿರೋಧಕಗಳನ್ನು ಕೊಟ್ಟು ಚಿಕಿತ್ಸಿಸುವುದು ಸೂಕ್ತ.
ಟಾನ್ಸಿಲುಗಳು ಮೇಲಿನ ಹೊದಿಕೆ ಒರಟಾಗಿ ಒಣಗಿಸಿಕೊಂಡು ಬಿರುಕು ಬಿಟ್ಟರುವ ಬಿಳಿ ಬೆನ್ನುಸಿಪ್ಪೆಯಂತೆ ಕಾಣಬರುವುದು ಇನ್ನೊಂದು ರೋಗಸ್ಥಿತಿ. ಇದಕ್ಕೆ ಟಾನ್ಸಿಲ್ಲಿನ ಕಿರಾಟೋಸಿಸ್ ಎನ್ನುತ್ತಾರೆ. ಇದರ ಕಾರಣವೇನು ಎನ್ನುವುದು ಸರಿಯಾಗಿ ತಿಳಿಯದು. ಬಹುಶಃ ವ್ಯಕ್ತಿಗೆ ಪೌಷ್ಠಿಕಾಂಶ ಸಾಲದೆ ಈ ಸ್ಥಿತಿ ಉಂಟಾಗುತ್ತದೆ ಎಂದು ತೋರುತ್ತದೆ. ಸುಮಾರು 15ರಿಂದ 30 ವರ್ಷ ವಯಸ್ಸಿನ ಗಂಡಸರು ಹೆಂಗಸರು ಇಬ್ಬರಲ್ಲೂ ಕಂಡುಬರುವುದು. ಗಂಟಲಿನಲ್ಲಿ ಏನೋ ಸಿಕ್ಕಿಹಾಕಿ ಕೊಂಡಿದೆಯೇ ಎಂಬ ಭಾವನೆ. ಕನ್ನಡಿಯಲ್ಲಿ ನೋಡಿಕೊಂಡರೆ ಡಿಫ್ತೀರಿಯದಲ್ಲಿನಂತೆ ಗಂಟಲಿನಲ್ಲಿ ಬೆಳ್ಳಗೆ ಕಟ್ಟಿಕೊಂಡರಿರುವುದು-ಇವು ಈ ಸ್ಥಿತಿಯ ಲಕ್ಪ್ಷಣಗಳು. ರೋಗಗ್ರಸ್ತ ಟಾನ್ಸಿಲ್ಲನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿ ಅನಂತರ ವೈಟಮಿನ್ ಂ ಯುಕ್ತ ಒಳ್ಳೆಯ ಆಹಾರವನ್ನು ಕೊಡುವುದು ಇದಕ್ಕೆ ತಕ್ಕ ಚಿಕಿತ್ಸೆ. ಟಾನ್ಸಿಲ್ಲಿನಲ್ಲಿ ಕಲ್ಲಿನಂಥ ಹರಳು (ಕ್ಯಾಲ್ಕ್ಯುಲಸ್) ಹುದುಗಿರುವುದು ಇನ್ನೊಂದು ರೋಗ ಸ್ಥಿತಿ. ಟಾನ್ಸಿಲ್ಲಿನೊಳಗೆ ಮೃದ್ವಸ್ತಿ ಮೂಳೆಗಳು ಉದ್ಭವಿಸಿರಬಹುದು. ಈ ಸ್ಥಿತಿಗಳಿಗೆ ಶಸ್ತ್ರಕಾರ್ಯದಿಂದ ಟಾನ್ಸಿಲ್ಲನ್ನು ತೆಗೆದುಹಾಕುವುದು ತಕ್ಕ ಚಿಕಿತ್ಸೆ. ಕ್ಷಯರೋಗಾಣುಗಳ ಸೋಂಕಿನಿಂದ ಟಾನ್ಸಿಲ್ಲೈಟಿಸ್ ಆಗಿರಬಹುದು. ಪಾಶ್ಜಲೀಕರಿಸಿದ ಹಾಲನ್ನು ಸೇವಿಸುವುದರಿಂದ ಈ ಸ್ಥಿತಿ ಉದ್ಭವಿಸಬಹುದು. ಕ್ಷಯರೋಗ ಚಿಕಿತ್ಸಯಿಂದ ಹಾಗೂ ಶಸ್ತ್ರಕ್ರಿಯೆಯಿಂದ ಇದನ್ನು ಗುಣಪಡಿಸುವುದು ಸಾಧ್ಯ. ಟಾನ್ಸಿಲ್ಲಿನಲ್ಲಿ ಏಡಿಗಂತಿ ತಲೆದೋರಬಹುದು. ಜೀವುಂಡಿಗೆ ವಿಧಾನದಿಂದ (ಬೈಯಾಪ್ಸಿ) ಊತಕವನ್ನು ಸೂಕ್ಷ್ಮ ದರ್ಶಕ ಪರೀಕ್ಷೆಗೆ ಒಳಪಡಿಸಿ ಸ್ಥಿತಿಯನ್ನು ಅರಿಯಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಆದಾದ ಮೇಲೆ ಕೋಬಾಲ್ಟ್-60ರಿಂದ ವಿಕಿರಣ ಚಿಕಿತ್ಸೆ ಇವು ಈ ಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮಗಳು. ಲಿಂಫೊ ಎಪಿಥೀಲಿಯೋಮ ಎಂಬುದು ಇನ್ನೊಂದು ಅರ್ಬುದ. ಟಾನ್ಸಿಲ್ಲುಗಳಲ್ಲಿ ಪೊಳ್ಳಾಗಿರುವ ಗಂಟುಗಳು ತಲೆದೋರಬಹುದು. ಈ ಎರಡು ಸ್ಥಿತಿಗಳಿಗೂ ಟಾನ್ಸಿಲ್ಲನ್ನು ಶಸ್ತ್ರಕಾರ್ಯದಿಂದ ತೆಗೆದುಹಾಕುವುದು. ತಕ್ಕ ಚಿಕಿತ್ಸೆ. ಟಾನ್ಸಿಲ್ಲಿನ ರೋಗ ಚಿಕಿತ್ಸೆಗೆ ಶಸ್ತ್ರಕ್ರಿಯೆಯನ್ನು ಅನುಸರಿಸುವಾಗ ಸಾಧಾರಣವಾಗಿ ಎರಡು ಕಡೆಯ ಟಾನ್ಸಿಲ್ಲುಗಳನ್ನೂ ತೆಗೆದು ಹಾಕುವುದು ರೂಢಿ. ಟಾನ್ಸಿಲ್ಲಿನ ನೈಜಕ್ರಿಯೆ ಏನೆಂಬುದು ಸರಿಯಾಗಿ ತಿಳಿಯದು ಬಹುಶಃ ಮುಖ್ಯವಾದದ್ದು ಏನೂ ಇರಲಾರದು; ಟಾನ್ಸಿಲ್ಲನ್ನು ತೆಗೆದು ಹಾಕುವುದರಿಂದ ಶರೀರಕ್ರಿಯೆಗೆ ಗಮನಾರ್ಹ ಧಕ್ಕೆ ಆಗಲಾರದು ಎಂಬ ಗಣನೆ ಕಾರಣವಿಲ್ಲದೆ ಟಾನ್ಸಿಲ್ಲುಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕುವುದಕ್ಕೆ ಬಹುವೇಳೆ ಮೂಲವಾಗಿದೆ. ಮೂಲಭೂತವಾಗಿ ಇಂಥ ಗಣನೆ ತಪ್ಪು. ಟಾನ್ಸಿಲ್ಲನ್ನು ತೆಗೆದು ಹಾಕಿದ ವ್ಯಕ್ತಿ ಶಸ್ತ್ರ ಕ್ರಿಯೆಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಇಲ್ಲವೇ ಚೇತರಿಸಿಕೊಂಡ ಕೂಡಲೇ ಯಾವುದಾದರೂ ವಿಷಾಣು ಸೋಂಕಿನಿಂದ ಪೀಡಿತನಾಗುವುದು ಬಹುವೇಳೆ ಕಂಡು ಬಂದಿದೆ. ಬಹುಶಃ ಸೋಂಕಿನ ವಿರುದ್ಧ ಪ್ರಥಮ ಈಡೆಂದು ಮೇಲೆ ಹೇಳಿರುವ ಟಾನ್ಸಿಲ್ಲನ್ನು ಕಳೆದುಕೊಂಡ ಫಲ ಇದು. ಆದ್ದರಿಂದ ವಿನಾ ಕಾರಣ ಟಾನ್ಸಿಲ್ಲಾಗಳನ್ನು ತೆಗೆದು ಹಾಕಬಾರದು. ಟಾನ್ಸಿಲ್ಲುಗಳಲ್ಲಿ ಮಾಮೂಲಾಗಿ ಶ್ವೇತಕಣಗಳ ಸಂಖ್ಯಾವೃದ್ಧಿಯೂ ತಕ್ಕಮಟ್ಟಿಗೆ ಆಗುತ್ತಿರುವುದರಿಂದ ಈ ಲಾಭವನ್ನು ಸಕಾರಣವಿಲ್ಲದೆ ಕಳೆದುಕೊಳ್ಳಬಾರದು.