ಜಿಪ್ಸಾಫಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಪ್ಸಾಫಿಲ -ಕ್ಯಾರಿಯೊಫಿಲೇಸೀ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ಹಾಗೂ ಬಹುವಾರ್ಷಿಕ ಅಲಂಕಾರ ಸಸ್ಯಜಾತಿ ಸಾಮಾನ್ಯ ಬಳಕೆಯ ಇಂಗ್ಲೀಷಿನಲ್ಲಿ ಇದಕ್ಕೆ ಬೇಬೀಸ್ ಬ್ರೆತ್, ಚಾಕ್ ಪ್ಲಾಂಟ್ ಎಂಬ ಹೆಸರುಗಳುಂಟು.

ಸುಂದರವಾದ ಸಣ್ಣ ಗಾತ್ರದ ಹೂಗಳನ್ನು ಬಿಡುವುದರಿಂದ ಇದನ್ನು ಕುಂಡಗಳಲ್ಲಿಯೂ ಪಸಲೆಗಳ ಅಂಚಿನಲ್ಲಿಯೂ ಮಡಿಗಳಲ್ಲಿಯೂ ಬೆಳೆಸುತ್ತಾರೆ. ಅಲ್ಲದೆ ಇದರ ಹೂಗಳನ್ನು ಮೇಜಿನ ಅಲಂಕಾರಕ್ಕಾಗಿ ಮತ್ತು ಹಾರಗಳನ್ನು ಕಟ್ಟಲು ಉಪಯೋಗಿಸುವುದುಂಟು.

ಇದರಲ್ಲಿ ಸುಮಾರು 75 ಪ್ರಬೇಧಗಳಿವೆ. ಆದರೆ ಉದ್ಯಾನಗಾರಿಕೆಯಲ್ಲಿ ಮುಖ್ಯವಾದವು ಮ್ಯುರಾಲಿಸ್, ಎಲಿಗನ್ಸ್, ಪರ್‍ಫೋಲಿಯೇಟ, ಪ್ಯಾನಿಕ್ಯುಲೇಟ, ಅಕ್ಯೂಟಿಪೋಲಿಯ, ರಿಪೆನ್ಸ್ ಮತ್ತು ಸ್ಟೀವನೈಗಳು ಮಾತ್ರ. ಬಹುಪಾಲು ಪ್ರಭೇದಗಳು ಸುಮಾರು 30-90 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆಗಳು. ಅಗಲವಾಗಿ ಹರಡಿ ಕೊಂಡು ಬೆಳೆಯುತ್ತವೆ. ಎಲೆಗಳು ರೇಖೀಯ ಇಲ್ಲವೆ ಚಮಚದಂತೆ ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಕೆಲವು ಪ್ರಭೇದಗಳಲ್ಲಿ ಎಲೆಗಳಿಗೆ ತೊಟ್ಟಿದೆ, ಇನ್ನು ಕೆಲವಲ್ಲಿ ಇಲ್ಲ. ಹೂಗಳು ಬಲುಚಿಕ್ಕ ಗಾತ್ರದವು; ಸೈಮೋಸ್ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಬಳಿ ಇಲ್ಲವೆ ನಸುಗೆಂಪು. ಪುಷ್ಪಪತ್ರಗಳು 5, ದಳಗಳು 5, ಕೇಸರಗಳು 10. ಅಂಡಾಶಯ ಎರಡು ಕಾರ್ಪೆಲುಗಳಿಂದ ಕೂಡಿದೆ. ಜಿಪ್ಸಾಫಿಲವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಇದರ ಸಸಿಗಳನ್ನು ನಾಟಿ ಮಾಡಲು ಆಗುವುದಿಲ್ಲವಾದ್ದರಿಂದ ಗಿಡಗಳು ಬೇಕಾದ ಕಡೆಯಲ್ಲಿಯೇ ಬೀಜ ಬಿತ್ತಬೇಕು. ಇದರ ಬೆಳವಣಿಗೆಗೆ ತಂಪು ಹವೆ ಅತ್ಯುತ್ತಮ. ಹಾಗೆಯೇ ಇದು ಗುಡ್ಡಸೀಮೆಗಳಲ್ಲಿ ಬೆಳೆದಷ್ಟು ಹುಲುಸಾಗಿ ಮೈದಾನ ಪ್ರದೇಶಗಳಲ್ಲಿ ಬೆಳೆಯಲಾರದು. ಮಣ್ಣಿನಲ್ಲಿ ಸುಣ್ಣದ ಅಂಶ ಹೆಚ್ಚಾಗಿದ್ದರೆ ಇದರ ಬೆಳವಣಿಗೆ ಸಮೃದ್ಧ. ಬಿತ್ತನೆಯ ಕಾಲ ಆಗಸ್ಟ್-ಅಕ್ಟೋಬರ್ ಇಲ್ಲವೆ ಮಾರ್ಚ್-ಏಪ್ರಿಲ್. ಬಿತ್ತಿದ 3 ತಿಂಗಳ ಅನಂತರ ಗಿಡ ಹೂ ಬಿಡಲು ಆರಂಭಿಸುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: