ಜಸ್ಟೀಸಿಯ
ಜಸ್ಟೀಸಿಯ - ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಇಲ್ಲವೆ ಪೊದೆ. ಸ್ಕಾಟ್ಲೆಂಡಿನ ಪ್ರಸಿದ್ಧ ತೋಟಗಾರ ಜೇಮ್ಸ್ ಜಸ್ಟಿಸನ ಗೌರವಾರ್ಥವಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ. ಇದರ ಹೂಗಳು ಬಹಳ ಸುಂದರವಾಗಿದ್ದು ಗಿಡದಲ್ಲಿ ಬಹಳ ಕಾಲ ಉಳಿಯುವುದರಿಂದ ಇದನ್ನು ಅಲಂಕಾರಕ್ಕೋಸ್ಕರವಾಗಿ ಬೆಳೆಸುವರು. ಇದಕ್ಕೆ ಔಷಧೀಯ ಪ್ರಾಮುಖ್ಯವೂ ಉಂಟು. ಇದರಲ್ಲಿ ಸುಮಾರು 250-300 ಪ್ರಭೇದಗಳಿವೆ. ಇವುಗಳಲ್ಲಿ ಹೆಚ್ಚಿನವು ಮೂಲಿಕೆ ಸಸ್ಯಗಳು.
ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ತೈರ್ಸ್ ಇಲ್ಲವೆ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪಾತ್ರೆ ನಾಲ್ಕು ಪತ್ರಗಳಿಂದ ಕೂಡಿದೆ. ದಳ ಸಮೂಹ ಇರ್ತುಟಿಯಾಕಾರದ್ದು. ದಳಗಳ ಬಣ್ಣ ಕೆಂಪು ಅಥವಾ ಹಳದಿ. ಕೇಸರಗಳು 2; ದಳಸಮೂಹದ ಕೊಳವೆಯ ಗಂಟಲಿಗೆ ಅಂಟಿಕೊಂಡಿವೆ. ಅಂಡಾಶಯ ಉಚ್ಚಸ್ಥಾನದ್ದು ; 2 ಕಾರ್ಪೆಲುಗಳಿಂದ ಕೂಡಿದೆ. ಫಲ ಸಂಪುಟ ಮಾದರಿಯದು. ಬೀಜಗಳ ಸಂಖ್ಯೆ 4,
ಉದ್ಯಾನಗಾರಿಕೆಯ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧವಾಗಿರುವ ಪ್ರಭೇದಗಳು ಇವು: ಜ.ಬೆಟೋನಿಕ, ಜ.ಸುಕುಂಡ, ಜ.ಜೆಂಡರೂಸ ಮತ್ತು ಜ.ಪ್ರೊಕಂಬೆನ್ಸ್. ಇವನ್ನು ಕಾಂಡ ತುಂಡುಗಳಿಂದ ವೃದ್ಧಿಸಲಾಗುತ್ತದೆ. ಮರಳುಮಿಶ್ರಿತ ಗೋಡುಮಣ್ಣು ಇವುಗಳ ಬೆಳೆವಣಿಗೆಗೆ ಅತ್ಯುತ್ತಮ. ತುಂಡುಗಳನ್ನು ನೆಡುವ ಕಾಲ ಮಾರ್ಚಿ-ಏಪ್ರಿಲ್. ಜ.ಪ್ರೊಕಂಬೆನ್ಸ್ ಪ್ರಭೇದವನ್ನು ವಿರೇಚಕ, ಕಫಹಾರಕ, ಮೂತ್ರಸ್ರಾವ ಉತ್ತೇಜಕ ಹಾಗೂ ದೇಹದ ಪೋಷಣ ವ್ಯಾಪಾರಗಳನ್ನು ಬದಲಿಸಿ ಆರೋಗ್ಯ ಸ್ಥಿತಿಗೆ ತರುವ ಔಷಧಿಯಾಗಿ ಬಳಸುವುದುಂಟು.
ಚಿತ್ರಸಂಪುಟ
[ಬದಲಾಯಿಸಿ]-
Justicia trinervia
-
Justicia brandegeeana
-
Justicia glauca
-
Justicia procumbens var simplex
-
Justicia Carnea Nica