ವಿಷಯಕ್ಕೆ ಹೋಗು

ಚುಕ್ಕಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉದ್ದನೆಯ ಕೆಂಪು ಆಯತಾಕಾರದ ಭಾಗ, ಪ್ರೊಪೆಲರ್‌ನ ಹಿಂಭಾಗದಲ್ಲಿ

ದೋಣಿ ನಡೆಸುವಾಗ ಅದನ್ನು ಮುಂದೂಡುವುದಕ್ಕೂ ಅದರ ಚಲನದಿಶೆ ಮತ್ತು ಗತಿಯನ್ನು ನಿಯಂತ್ರಿಸುವುದಕ್ಕೂ ಬಳಸುವ ಸಾಧನ (ರಡರ್).[] ವ್ಯಾಪಕಾರ್ಥದಲ್ಲಿ ವಿಮಾನ ಮತ್ತು ಹಡುಗುಗಳಲ್ಲಿ ದಿಙÉ್ನಯಂತ್ರಕವಾಗಿ ವರ್ತಿಸುವ ಅಳವಡಿಕೆ. ಹಡಗಿನಲ್ಲಿ ಚುಕ್ಕಾಣಿ ಅಗಲ, ಚಪ್ಪಟೆ ಮತ್ತು ನುಣುಪಾಗಿ ಇರುವ ಮರದ ಅಥವಾ ಉಕ್ಕಿನ ಅಲಗುಗಳ ಒಂದು ಚೌಕಟ್ಟು. ಹಡಗಿನ ಹಿಂಬದಿಯ ಮಧ್ಯದ ಕೆಳಭಾಗದಲ್ಲಿ, ಅದರ ಹೊರಮೈಯಲ್ಲಿ ನೆಟ್ಟಗೆ ನಿಂತಿರುವ ಬೆನ್ನುಕಂಬಕ್ಕೆ, ಚುಕ್ಕಾಣಿ ತಿರುಗಣಿ ಕೀಲಿನಿಂದ ಭದ್ರವಾಗಿ ನೆಟ್ಟಗೆ ಬಿಗಿಯಲ್ಪಟ್ಟಿರುತ್ತದೆ. ಇದನ್ನು ತಿರುಗಣಿ ಕೀಲಿನ ಮೆಲೆ ಪಕ್ಕದಿಂದ ಪಕ್ಕಕ್ಕೆ ತಿರುಗಿಸಲಾಗುತ್ತದೆ. ಪೈಲಟ್ ಹೌಸ್ ಎಂಬ ಕೊಠಡಿಯಲ್ಲಿರುವ ಚುಕ್ಕಾಣಿಚಕ್ರವನ್ನು (ಸ್ಟಿಯರಿಂಗ್ ವ್ಹೀಲ್) ದಪ್ಪವಾದ ಕೇಬಲುಗಳಿಂದ ಅಥವಾ ಎಣ್ಣೆ ತುಂಬಿದ ನಳಿಗೆಗಳಿಂದ ಚುಕ್ಕಾಣಿಗೆ ಸೇರಿಸಿದೆ. ಆ ಚಕ್ರವನ್ನು ತಿರುಗಿಸಿ ಚುಕ್ಕಾಣಿಯನ್ನು ಬೇಕಾದ ಕಡೆಗೆ ತಿರುಗಿಸಲಾಗುತ್ತದೆ. ದೋಣಿಗಳಲ್ಲಿ ಅದನ್ನು ಕೈಯಿಂದ ತಿರುಗಿಸಬಹುದು. ದೊಡ್ಡ ಹಡಗುಗಳಲ್ಲಿ ಹೀಗೆ ಮಾಡಲಾಗುವುದಿಲ್ಲ. ಕ್ವೀನ್ ಎಲಿeóÉಬೆತ್ ಎಂಬ ದೊಡ್ಡ ಹಡಗಿನ ಚುಕ್ಕಾಣಿಯ ತೂಕ 140 ಟನ್ನುಗಳು. ಅಂಥ ಚಕ್ರಗಳನ್ನು ಉಗಿಯಂತ್ರ ಅಥವಾ ವಿದ್ಯುತ್ ಯಂತ್ರದಿಂದ ತಿರುಗಿಸಲಾಗುತ್ತದೆ. ಹಡಗಿನ ಅತ್ಯಂತ ತಳಭಾಗದ ಹಲಗೆಯ ಮಟ್ಟದಲ್ಲಿ ಚುಕ್ಕಾಣಿ ಇರುವಾಗ ಅದನ್ನು ಹಾದುಹೋಗುವ ನೀರಿನ ಒತ್ತಡ ಅದರ ಎರಡು ಪಾಶ್ರ್ವಗಳಲ್ಲಿಯೂ ಒಂದೇ ಸಮವಾಗಿರುವುದರಿಂದ ಚುಕ್ಕಾಣಿ ಸಮಸ್ಥಿತಿಯಲ್ಲಿರುತ್ತದೆ. ಚಕ್ರವನ್ನು ತಿರುಗಿಸಿ ಚುಕ್ಕಾಣಿಯನ್ನು ಒಂದು ಪಾಶ್ರ್ವಕ್ಕೆ ಹೊರಳಿಸಿದರೆ, ಅದರ ಎದುರು ಪಕ್ಕದಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಚುಕ್ಕಾಣಿಯನ್ನು ತಿರುಗಿಸಿದ ಪಾಶ್ರ್ವದಲ್ಲಿ ನೀರಿನ ಒತ್ತಡ ಹೆಚ್ಚಾಗುತ್ತದೆ. ಆಗ ಚುಕ್ಕಾಣಿ ನೀರಿನ ಅಸಮ ಒತ್ತಡದ ನಿಯಮದ ಪ್ರಕಾರ ವರ್ತಿಸುತ್ತದೆ. ನೀರು ತಿರುಗಣಿ ಗೂಟವನ್ನು ಗುರುತ್ವ ಕೇಂದ್ರವನ್ನಾಗಿ ಮಾಡಿಕೊಂಡು ಚುಕ್ಕಾಣಿಯನ್ನು ಹೆಚ್ಚು ಒತ್ತಡದ ಪಾಶ್ರ್ವದಿಂದ ದಬ್ಬುತ್ತದೆ. ಆಗ ಹಡಗಿನ ಹಿಂಭಾಗ ತಿರುಗುತ್ತದೆ ಮತ್ತು ಹಡಗಿನ ಮುಂಭಾಗ ಚುಕ್ಕಾಣಿ ತಿರುಗಿದ ದಿಶೆಯಲ್ಲಿ ತಿರುಗುತ್ತದೆ. ಆದ್ದರಿಂದ ಹಡಗು ಮೊದಲು ಹೋಗುತ್ತಿದ್ದ ಹಾದಿಯಿಂದ ತಿರುಗಿ ಬೇರೆ ದಿಶೆಯಲ್ಲಿ ಹೋಗುತ್ತದೆ. ಚುಕ್ಕಾಣಿಗಾರ ಚಕ್ರವನ್ನು ಎಡ ಬದಿಗೆ ತಿರುಗಿಸಿದಾಗ ಚುಕ್ಕಾಣಿ ಎಡಕ್ಕೆ ತಿರುಗುತ್ತದೆ. ಆಗ ನೀರಿನ ರಭಸ ಚುಕ್ಕಾಣಿಯ ಎಡಬದಿಯನ್ನು ಒತ್ತುತ್ತದೆ; ಚುಕ್ಕಾಣಿ ಬಲಕ್ಕೆ ಚಲಿಸುತ್ತದೆ. ಆಗ ಹಡಗಿನ ಮುಂಭಾಗ ಎಡಗಡೆಗೆ ತಿರುಗುತ್ತದೆ. ಚಕ್ರವನ್ನು ಹಡಗಿಗೆ ಬಲಗಡೆಗೆ ತಿರುಗಿಸಿದರ ಚುಕ್ಕಾಣಿ ಬಲಪಾಶ್ರ್ವಕ್ಕೆ ತಿರುಗುತ್ತದೆ. ಹಡಗು ಬಲಗಡೆಗೆ ಹೋಗುತ್ತದೆ. ಈ ರೀತಿ ಚುಕ್ಕಾಣಿ ಕೆಲವು ಸಲ ನೀರಿನ ಒಂದು ಬದಿಯಲ್ಲೂ ಮತ್ತೆ ಕೆಲವು ಸಲ ಇನ್ನೊಂದು ಬದಿಯಲ್ಲೂ ನೀರನ್ನು ಎದುರಿಸಿ ಎರಡನೆಯ ವರ್ಗದ ಸನ್ನೆಕೋಲಿನಂತೆ (ಲೀವರ್) ವರ್ತಿಸಿ, ಹಡಗು ಇತ್ತ ಕಡೆ, ಅತ್ತಕಡೆ, ಬೇಕಾದ ದಿಕ್ಕಿನಲ್ಲಿ ಸಂಚಲಿಸುವಂತೆ ಮಾಡುತ್ತದೆ. ಹಡಗು ಹಿಮ್ಮೊಗವಾಗಿ ಹೋಗಲೂ ವ್ಯವಸ್ಥೆ ಉಂಟು. ಹಡಗುಗಳನ್ನು ಇನ್ನೂ ಹೆಚ್ಚು ಪ್ರಬಲವಾಗಿ ನಡೆಸಲು ವಿಶೇಷ ಬಗೆಯ ಚುಕ್ಕಾಣಿಗಳಿವೆ. ಅವುಗಳಿಗೆ ವಿವಿಧ ಆಕಾರಗಳ ಅಲಗುಗಳಿವೆ. ಕಿಟ್‍ಚಿನ್ ಚುಕ್ಕಾಣಿಗೆ ಅರ್ಧ ವರ್ತುಳಾಕೃತಿಯ ಎರಡು ಅಲಗುಗಳಿವೆ. ಅವನ್ನು ನೀರಿನ ಪ್ರವಾಹಕ್ಕೆ ವಿವಿಧ ಕೋನಗಳಲ್ಲಿ ಅಳವಡಿಸಿ ನೀರೊತ್ತಡದ ದಿಕ್ಕನ್ನು ಬದಲಿಸಲು ಸಾಧ್ಯ.

ವಾಯುಯಾನದಲ್ಲಿ ಬಳಸುವ ಎಲ್ಲ ಸಾಧನೆಗಳಿಗೂ ಚುಕ್ಕಾಣಿಗಳಿವೆ. ವಿಮಾನದ ಹಿಂಭಾಗದಲ್ಲಿ ಮೇಲುಗಡೆಗೆ ಚುಕ್ಕಾಣಿಯನ್ನು ಅಳವಡಿಸಿರುತ್ತಾರೆ. ಚಾಲಕ ತನ್ನ ಸ್ಥಾನದಲ್ಲಿ ಕುಳಿತು ಚುಕ್ಕಾಣಿಯ ವಿನ್ಯಾಸವನ್ನು ನಿಯಂತ್ರಿಸುವ ಏರ್ಪಾಡು ಉಂಟು. ಅತ್ಯಂತ ವೇಗಯುತವಾದ ವಿಮಾನಗಳಲ್ಲಿ ಮಾನವರಹಿತ ಕ್ಷಿಪಣಿ ಮುಂತಾದವುಗಳಲ್ಲಿ ಸ್ವಯಂಚಲಿ ಚುಕ್ಕಾಣಿಗಳನ್ನು ಅಳವಡಿಸಲಾಗಿರುವುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]
  1. rudder.Encyclopædia Britannica. Retrieved August 8, 2008, from Encyclopædia Britannica 2006 Ultimate Reference Suite DVD