ವಿಷಯಕ್ಕೆ ಹೋಗು

ಗ್ಯಾಲ್ವನೊಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಯಸ್ಕಾಂತ ಮತ್ತು ತಿರುಗುವ ಸುರುಳಿಯನ್ನು ತೋರಿಸುವ ಮುಂಚಿನ ಒಂದು ಗ್ಯಾಲ್ವನೊಮೀಟರ್

ಗ್ಯಾಲ್ವನೊಮೀಟರ್ ವಿದ್ಯುತ್ಪ್ರವಾಹವನ್ನು ಅಳೆಯುವ ಪ್ರಮುಖ ಸಾಧನ. ಕಾಂತಕ್ಷೇತ್ರದಲ್ಲಿ ವಿದ್ಯುತ್ತು ಹರಿಯುವಾಗ ಉತ್ಪತ್ತಿಯಾಗುವ ಬಲವನ್ನು ಇವು ಅವಲಂಬಿಸಿವೆ. ಎರಡು ಕಾಂತಧ್ರುವಗಳ ನಡುವೆ ಇರುವ ವಾಹಕ ಸುರುಳಿಯಲ್ಲಿ ವಿದ್ಯುತ್ಪ್ರವಾಹ ಹರಿಯುತ್ತಾ ಇರುವಾಗ ಆ ಸುರುಳಿಯ ಮೇಲೆ ಬಲಯುಗ್ಮ ಉಂಟಾಗುವುದು. ಇದೇ ಗ್ಯಾಲ್ವನೊಮೀಟರಿನ ಪ್ರಧಾನಯಂತ್ರತೆ. ಕಾಂತ ಅಥವಾ ಸುರುಳಿ ಚಲಿಸುವ ಮತ್ತು ಆ ಚಲನೆಯ ಪ್ರಮಾಣವನ್ನು ಸೂಚಿಯೊಂದರ ಹಾಗೂ ಯುಕ್ತ ಕ್ರಮಾಂಕನವಿರುವ (ಕ್ಯಾಲಿಬ್ರೇಶನ್) ಸ್ಕೇಲಿನ ನೆರವಿನಿಂದ ಅಳೆಯುವ ವ್ಯವಸ್ಥೆಯೂ ಇದೆ. ಚಲಿಸುವ ಭಾಗದ ಚಲನೆಯ ಪ್ರಮಾಣ ಅದರ ಮೇಲೆ ಪ್ರಯೋಗವಾದ ಬಲಯುಗ್ಮಕ್ಕೆ, ಅಂದರೆ ಸುರುಳಿಯಲ್ಲಿ ಹರಿದ ವಿದ್ಯುತ್ತಿನ ಪ್ರಮಾಣಕ್ಕೆ ಅನುಪಾತೀಯವಾಗಿರುವುದು. ವ್ಯವಹಾರದಲ್ಲಿ ವಿದ್ಯುತ್ಪ್ರವಾಹ ಅಳೆಯಲು ಬಳಸುವ ಆಮ್ಮೀಟರ್ (ವಿದ್ಯುತ್ ಪ್ರವಾಹ ಮಾಪಕ) ಈ ತತ್ತ್ವಾಧಾರಿತ ಉಪಕರಣ. ಗ್ಯಾಲ್ವನೊಮೀಟರಿನ ನಾಜೂಕು ಸುರುಳಿ ಅತ್ಯಲ್ಪ ಪ್ರಮಾಣದ ವಿದ್ಯುತ್ಪ್ರವಾಹವನ್ನು ಮಾತ್ರ ತಾಳಿಕೊಳ್ಳುತ್ತದೆ. ಆದ್ದರಿಂದ ವ್ಯವಹಾರದಲ್ಲಿ ಅದನ್ನು ಬಳಸಬಹುದಾದ ಸನ್ನಿವೇಶಗಳು ವಿರಳ. ಆಮ್ಮೀಟರುಗಳಲ್ಲಿ ವಿದ್ಯುತ್ಪ್ರವಾಹಕ್ಕೆ ಅನುಪಾತೀಯವಾದ ಅಲ್ಪ ಪ್ರಮಾಣದ ವಿದ್ಯುತ್ತು ಮಾತ್ರ ಸುರುಳಿಯಲ್ಲಿ ಹರಿಯುವಂತೆ ಮಾಡಿ ಉಳಿದ ಅಧಿಕಾಂಶವನ್ನು ‘ಷಂಟ್’ ಎಂಬ ಅಲ್ಪರೋಧದ ಮೂಲಕ ಕಳುಹಿಸುವ ವ್ಯವಸ್ಥೆ ಇದೆ. ಅಳೆಯಬೇಕಾದ ವಿದ್ಯುತ್ಪ್ರವಾಹದ ಪ್ರಮಾಣ, ಅಳತೆಯ ಅಪೇಕ್ಷಿತ ನಿಖರತೆ ಹಾಗೂ ವಿದ್ಯುತ್ಪ್ರವಾಹದ ಸ್ವರೂಪ (ಅರ್ಥಾತ್, ನೇರ ಅಥವಾ ಪರ್ಯಾಯಕ) ಇವನ್ನು ಆಧರಿಸಿ ಆಮ್ಮೀಟರ್ ರಚನೆಯಲ್ಲಿ ಯುಕ್ತ ಮಾರ್ಪಾಡು ಮಾಡುವುದುಂಟು. ಮೈಕ್ರೊಆಮ್ಮೀಟರ್, ಐರನ್ ವೇನ್ ಮಾಪಕಗಳು, ಉಷ್ಣಯುಗ್ಮ ಮಾಪಕಗಳು ಮುಂತಾದವು ವಿಶಿಷ್ಟ ಆಮ್ಮೀಟರುಗಳು.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: