ವಿಷಯಕ್ಕೆ ಹೋಗು

ಗೋಪಾಲದಾಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಪಾಲದಾಸ - ಕನ್ನಡ ನಾಡಿನ ಹರಿದಾಸರಲ್ಲಿ ಅಗ್ರಗಣ್ಯ; ವಿಜಯ ದಾಸನ ಶಿಷ್ಯ. `ಭಕ್ತಿಯಲ್ಲಿ ಭಾಗಣ್ಣ ಎಂಬ ಸ್ತುತಿಗೆ ಪಾತ್ರನಾದವ. ಕಾಲ ಹದಿನೆಂಟನೆಯ ಶತಮಾನ. ಹರಿದಾಸರ ಪೀಳಿಗೆಯನ್ನು ನಿರೂಪಿಸುವಲ್ಲಿ ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರುಗಳನ್ನು ಒಟ್ಟಿಗೆ ದಾಸ ಚತುಷ್ಟಯರೆಂದು ನಿರ್ದೇಶಿಸುವ ಸಂಪ್ರದಾಯ ಉಂಟು.[]

ಬಾಲ್ಯ

[ಬದಲಾಯಿಸಿ]

ಗೋಪಾಲದಾಸ ಹುಟ್ಟಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ" ಮೊಸರು ಕಲ್ಲು " ಗ್ರಾಮದಲ್ಲಿ.ಮೊದಲ ಹೆಸರು ಭಾಗಣ್ಣ. ಈತ ಹುಟ್ಟಿದ ಕೆಲವು ವರ್ಷಗಳಲ್ಲಿ ತಂದೆ ಮುರಾರಿರಾಯ ಕಾಲವಾದುದರಿಂದ ಈತನ ತಾಯಿ ವೆಂಕಮ್ಮ ತನ್ನ ನಾಲ್ವರು ಗಂಡುಮಕ್ಕಳೊಂದಿಗೆ ದಿಕ್ಕಿಲ್ಲದೆ ಸಂಕಾಪುರಕ್ಕೆ ಬಂದು ಅಲ್ಲಿನ ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದಳು. ಆಕೆಗೆ ಮಕ್ಕಳನ್ನು ಸಾಕುವುದು ತುಂಬ ಕಷ್ಟವಾಗಿತ್ತು.

ಸ್ವಲ್ಪ ವಯಸ್ಸಿಗೆ ಬಂದು ವಿದ್ಯಾವಂತನಾದ, ಗೋಪಾಲದಾಸ ತಾಯಿಯ ಬವಣೆಯನ್ನು ತಪ್ಪಿಸುವ ಉದ್ದೇಶದಿಂದ ಸಂಪಾದಿಸುವ ಮನಸ್ಸು ಮಾಡಿದ. ಗಾಯತ್ರೀ ಮಂತ್ರ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತನಾದ. ದಿನದಿನಕ್ಕೆ ಈತನ ಬಗ್ಗೆ ಜನಾನುರಾಗ ಹೆಚ್ಚಿತು. ಇದಲ್ಲದೆ ಕವಿತೆ ರಚಿಸುವ ಸಾಮಥ್ರ್ಯವೂ ಈತನಿಗೆ ದೈವ ದತ್ತವಾಗಿ ಲಭಿಸಿತ್ತು. ಮಗನ ಈ ಏಳಿಗೆಯಿಂದ ವೆಂಕಮ್ಮನ ಕಷ್ಟಗಳು ಕ್ರಮಕ್ರಮವಾಗಿ ಕಡಿಮೆಯಾಯಿತಾಗಿ ಆಕೆ ಮಕ್ಕಳೊಂದಿಗೆ ಊರ ಹೊರಗಿನ ಮಾರುತಿ ದೇವಾಲಯದಿಂದ, ಉತ್ತನೂರಿಗೆ ಬಂದು ನೆಲೆಸಿದಳು. ಅಲ್ಲಿನ ವೆಂಕಟೇಶನ ಗುಡಿಯೇಶ್ವರ ಗೋಪಾಲದಾಸನ ಕಾರ್ಯಕ್ಷೇತ್ರವಾಯಿತು.

ಹರಿದಾಸ

[ಬದಲಾಯಿಸಿ]

ಹರಿದಾಸರಲ್ಲಿ ಪ್ರಸಿದ್ಧನಾಗಿದ್ದ ವಿಜಯದಾಸನ ಸಂದರ್ಶನ ಗೋಪಾಲದಾಸನಿಗೆ ಲಭ್ಯವಾದದ್ದು ಅಲ್ಲಿಯೇ. ಅವನಿಂದ ಗೋಪಾಲದಾಸ ಗೋಪಾಲವಿಠಲ ಎಂಬ ಅಂಕಿತವನ್ನು ಪಡೆದು, ಹರಿದಾಸ ದೀಕ್ಷೆಯನ್ನು ಕೈಕೊಂಡ. ಅಣ್ಣನ ಈ ದೀಕ್ಷೆಯನ್ನು ಕಂಡು ತಮ್ಮಂದಿರೂ ಆ ಕೈಂಕರ್ಯದಲ್ಲಿಯೇ ತೊಡಗಿ ಕೀರ್ತನೆಗಳನ್ನು ರಚಿಸಿ ಕೃತಾರ್ಥರಾದರು. ವಿಜಯದಾಸನ ಪರಮಾನುಗ್ರಹಕ್ಕೆ ಪಾತ್ರನಾಗಿದ್ದ ಗೋಪಾಲದಾಸ ವಿಖ್ಯಾತನಾದ ಮಾನ್ವಿಯ ಶ್ರೀನಿವಾಸಾಚಾರ್ಯನಿಗೆ (ಜಗನ್ನಾಥದಾಸ) ತನ್ನ ಆಯಸ್ಸಿನ ಸ್ವಲ್ಪ ಅವಧಿಯನ್ನು ದಾನ ಮಾಡಿ, ಆತ ಹರಿದಾಸ ದೀಕ್ಷೆಯಲ್ಲಿ ನಿರತನಾಗುವಂತೆ ಮಾಡಿದ ಸಂಗತಿಯಂತೂ ಅಸದೃಶ್ಯವೂ ಆಶ್ಚರ್ಯಕರವೂ ಆದುದು. ಹೀಗೆಯೇ ಗೋಪಾಲದಾಸ ತನ್ನ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದನಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಭೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆ ಉಲ್ಲೇಖನಾರ್ಹವಾದುದು. ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸನ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು. ಗೋಪಾಲದಾಸ ಕೀರ್ತನಕಾರನಾಗಿದ್ದದ್ದಂತೆಯೇ ಕುಶಲಿಯಾದ ಚಿತ್ರಕಾರನೂ ಆಗಿದ್ದ. ಆ ಕಲೆಯನ್ನು ತನ್ನ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಒಂದು ಸಾಧನವನ್ನಾಗಿ ಬಳಸಿಕೊಂಡ. ಈತನಿಂದ ರಚಿತವಾದ ಎಷ್ಟೋ ಚಿತ್ರಪಟಗಳನ್ನು ಭಕ್ತರು ಪೂಜಿಸಿ, ತಮ್ಮ ಇಷ್ಟಾರ್ಥವನ್ನು ಪಡೆದರೆಂದು ತಿಳಿದುಬರುತ್ತದೆ.ಗೋಪಾಲ ವಿಠಲ ಎಂಬುದು ಗೋಪಾಲದಾಸರ ಅಂಕಿತವಾಗಿದೆ. ಇದಕ್ಕೂ ಮೊದಲು ವೆಂಕಟಕೃಷ್ಣ ಎನ್ನುವ ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚಿಸಿರಬಹುದೆಂಬ ಉಲ್ಲೇಖಗಳಿದ್ದರೂ ಸ್ವಷ್ಟ ಆಧಾರಗಳಿಲ್ಲ.

ಕೃತಿಗಳು

[ಬದಲಾಯಿಸಿ]

ಗೋಪಾಲದಾಸ ರಚಿಸಿರುವ ಧನ್ವಂತ್ರಿಸ್ತುತಿ, ಪಂಡರಾಪುರದ ಪಾಂಡುರಂಗನ ದರ್ಶನವಿತ್ತ ಸಂದರ್ಭವನ್ನು ಕುರಿತ ಒಂದು ಸುಳಾದಿ, ಕರ್ತೃವಿನ ಅಂತರಂಗದ ಅಭೀಷ್ಟ ಮತ್ತು ಆಧ್ಯಾತ್ಮಿಕ ಪ್ರಗತಿಗಳನ್ನು ಚಿತ್ರಿಸುವ ಹಲವಾರು ರಚನೆಗಳು - ಹರಿದಾಸ ಸಾಹಿತ್ಯದಲ್ಲಿ ತುಂಬ ಮನ್ನಣೆ ಗಳಿಸಿವೆ. ಲಭ್ಯಸಾಹಿತ್ಯ : ೯೬ ಕೀರ್ತನೆಗಳು,೨೧ ಉಗಾಭೋಗಗಳು,೭೦ ಸುಳಾದಿಗಳು

ಸಮಾಧಿ

[ಬದಲಾಯಿಸಿ]

ಉತ್ತನೂರು ಗೊಪಾಲಾದಾಸರ ಬ್ರ0ದಾವನ ಇರುವ ಸ್ತಳ

ಹರಿದಾಸ ಸಾಹಿತ್ಯ

[ಬದಲಾಯಿಸಿ]

ಹರಿದಾಸ ಸಾಹಿತ್ಯ ಶ್ರೀ ಪಾದರಾಜರಿಂದ ಮೊದಲಾಗಿ ವ್ಯಾಸರಾಯರು ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲಕಾಲ ಅಜ್ಞಾತವಾಸವನನುಭವಿಸಿತು. ಮುಂದೆ ನೂರಾರು ವರ್ಷಗಳ ನಂತರ ಶ್ರೀ ರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃ ದಾಸಕೂಟವೂ ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸ ಸಾಹಿತ್ಯದ ಮರುಹುಟ್ಟು, ಬೆಳವಣಿಗೆಗೆ ಕಾರಣರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ರಚನೆಗಳು ವಿಜಯದಾಸರಿಂದ ಪ್ರಾರಂಭವಾಯಿತು ಎನ್ನಲಾಗಿದೆ. ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ. ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು . ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು. ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತಪದವೊಂದನ್ನು ರಚಿಸುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ.

ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ. ಇವರು ಗಣಪತಿಯ ಅವತಾರ. ಇವರ ಕಾಲ 1722-1762. ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು, ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು. ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು. ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು. ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು. ಸಾವಿರಾರು ಕೀರ್ತನೆಗಳನ್ನೂ ಸುಳಾದಿಗಳನ್ನೂ ರಚಿಸಿದ್ದಾರೆ. ಇವರ ಪ್ರಮುಖ ಕೀರ್ತನೆಗಳು – ರಥವಾನೇರಿದ ರಾಘವೇಂದ್ರ, ವೈರಾಗ್ಯ ಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಬಕುತರ ಪ್ರಿಯ, ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯ,ಇತ್ಯಾದಿ ಕೀರ್ತನೆಗಳು. ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಸಪ್ತಮಿಯಂದು ತಮ್ಮ ಕೊನೆಯುಸಿರೆಳೆದರು.

ಉಲ್ಲೇಖಗಳು

[ಬದಲಾಯಿಸಿ]
  1. "haridasa/dasas/gopala.html". www.dvaita.org ,13 May 2017. Archived from the original on 3 ಸೆಪ್ಟೆಂಬರ್ 2017. Retrieved 13 ಮೇ 2017.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: