ಗುರುಕುಲ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಗುರುಕುಲವು ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ ನಿರ್ವಹಿಸುತ್ತಿದ್ದರು. ಉಪನಯನವಾದ ಅನಂತರ ವಿದ್ಯಾರ್ಥಿ ಶಿಕ್ಷಣಕ್ಕಾಗಿ ತನ್ನ ಗುರುವಿನ ಮನೆಗೆ ಹೋಗಿ, ಶಿಕ್ಷಣವನ್ನು ಮುಗಿಸಿ
ಗುರುಕುಲದಲ್ಲಿ ವಿದ್ಯಾರ್ಥಿಜೀವನ
[ಬದಲಾಯಿಸಿ]ಗುರುಗಳ ಮನೆಯಲ್ಲಿ ವಾಸಿಸುವ ವಿದ್ಯಾರ್ಥಿಯನ್ನು ಛಾಂದೋಗ್ಯ ಉಪನಿಷತ್ತು ಆಚಾರ್ಯಕುಲವಾಸಿಯೆಂದು ಸಂಬೋಧಿಸಿ ಆ ಕಾಲದಲ್ಲಿ ವಿದ್ಯಾರ್ಥಿ ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ವಿವರಿಸುತ್ತದೆ. ಗುರುಗಳು ಏಳುವುದಕ್ಕೆ ಮುಂಚೆ ಎಂದರೆ ಮುಂಜಾನೆ ನಾಲ್ಕೂವರೆ ಗಂಟೆಗೆ ಶಿಷ್ಯ ಏಳಬೇಕು. ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಸ್ನಾನಮಾಡಬೇಕು. ಅನಂತರ ಬೆಳಗಿನ ಪ್ರಾರ್ಥನೆ (ಸಂಧ್ಯಾ). ಮುಗಿಸಿ ಯಜ್ಞಕುಂಡವನ್ನು ಸಿದ್ಧಪಡಿಸಬೇಕು. ಅಲ್ಲದೆ ಗುರುಗಳಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು ಸ್ನಾನಕ್ಕೆ ನೀರು ಕೊಡುವುದು, ಅವರ ಆಸನವನ್ನು ಸಿದ್ಧಪಡಿಸುವುದು, ಪಾತ್ರೆ ಪದಾರ್ಥಗಳನ್ನು ತೊಳೆದಿಡುವುದು. ದನಕರುಗಳಿದ್ದರೆ ಅವನ್ನು ಮೇವಿಗೆ ಬಿಡುವುದು-ಇವೇ ಮುಂತಾದ ಮನೆಗೆಲಸಗಳನ್ನೂ ಮಾಡಬೇಕಾಗಿತ್ತು. ಬೆಳಗಿನ ಅಧ್ಯಯನಾನಂತರ ಭಿಕ್ಷಾಟನೆಗೆ ಹೋಗಿ, ತಂದ ಅನ್ನವನ್ನು ಗುರುಗಳಿಗೆ ತೋರಿಸಿ ಊಟ ಮಾಡಬೇಕಾಗಿತ್ತು. ಮಧ್ಯಾಹ್ನದ ಅಧ್ಯಯನಾನಂತರ ಸಂಜೆ ಅಗ್ನಿಹೋತ್ರಕ್ಕೆ ಸಂಬಂಧಿಸಿದ ಕಾಷ್ಠಸಂಚಯನಾದಿ ಕ್ರಿಯೆಗಳನ್ನು ನಿರ್ವಹಿಸಬೇಕಾಗಿತ್ತು. ರಾತ್ರಿ ಊಟಕ್ಕೆ ಹೋಗುವವರೆಗೆ ಸ್ವತಃ ಅಧ್ಯಯನ ಮಾಡಬೇಕಾಗಿತ್ತು. ಪುಸ್ತಕಗಳು ಇಲ್ಲದಿದ್ದ ಆ ಕಾಲದಲ್ಲಿ ವೇದಪಠನ, ಚರ್ಚೆ ಮುಂತಾದ ವ್ಯಾಸಂಗ ವಿಧಾನವನ್ನು ಅನುಸರಿಸುತ್ತಿದ್ದರು. ಗುರುಗಳು ಮಲಗಿದ ಮೇಲೆ ಶಿಷ್ಯ ಮಲಗಬೇಕಾಗಿತ್ತು.
ವೈದಿಕ ಬ್ರಾಹ್ಮಣರ ಹಾಗೂ ಪುರೋಹಿತರ ಮನೆಗಳಲ್ಲಿ ಅಗ್ನಿಹೋತ್ರ ಇತ್ತೀಚಿನವರೆಗೂ ಎಂದರೆ, ಕ್ರಿ.ಶ. 10ನೆಯ ಶತಮಾನದವರೆಗೂ ಪ್ರಚಾರದಲ್ಲಿತ್ತು. ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ವಿವಾಹವಾಗಿ ಗೃಹಸ್ಥಾಶ್ರಮವನ್ನು ಸೇರಿದ ಮೇಲೆ ಅಗ್ನಿಹೋತ್ರ ಒಂದು ವ್ರತಾಚರಣೆಯಾಗಿ ನಡೆದುಕೊಂಡು ಬರುತ್ತಿತ್ತು. ಆದ್ದರಿಂದ ಗುರುಕುಲ ಜೀವನದಲ್ಲಿ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೆಲ್ಲ ತಪ್ಪದೆ ಅಭ್ಯಸಿಸಬೇಕಾಗಿತ್ತು. ಪೌರೋಹಿತ್ಯವನ್ನು ಮುಂದೆ ವೃತ್ತಿಯಾಗಿ ಅನುಸರಿಸುವವರಿಗಂತೂ ಅದು ಅಗತ್ಯವೇ ಆಗುತ್ತಿತ್ತು.
ವಿದ್ಯಾಭ್ಯಾಸಕ್ಕೆ ಗುರುಕುಲ ಪದ್ಧತಿಯಲ್ಲಿದ್ದ ಸೌಲಭ್ಯಗಳು
[ಬದಲಾಯಿಸಿ]ವಿದ್ಯಾಭ್ಯಾಸಕ್ಕೆ ಗುರುಕುಲ ಪದ್ಧತಿ ಸೂಕ್ತವಾದ ವ್ಯವಸ್ಥೇಯೆಂದು ಅಂದಿನ ಶಿಕ್ಷಣವೇತ್ತರು ಅರಿತಿದ್ದರು. ಬರೆವಣಿಗೆ ಇನ್ನೂ ಗೊತ್ತಿರದ ಹಾಗೂ ಪುಸ್ತಕಗಳೂ ಇಲ್ಲದ ಆ ಕಾಲದಲ್ಲಿ ಎಲ್ಲವನ್ನೂ ಗುರುಗಳ ಬಾಯಿಂದ ಕೇಳಿ ತಿಳಿದುಕೊಳ್ಳಬೇಕಾಗಿತ್ತು. ವೇದಗಳಂಥ ಪವಿತ್ರ ಸಾಹಿತ್ಯವನ್ನು ಅದರ ಶುದ್ಧ ಸ್ವರೂಪದಲ್ಲಿ ಪಠಿಸಿ ಕಲಿಯಬೇಕಾಗಿದ್ದುದರಿಂದ ಅಧ್ಯಯನಕಾಲದಲ್ಲಿ ಗುರುಗಳ ನೇತೃತ್ವ ಅನಿವಾರ್ಯವೇ ಆಗುತ್ತಿತ್ತು. ಸಂಜೆಯ ವೇಳೆಯಲ್ಲಿ ಬಾಯಿಪಾಠದ ಮೂಲಕ ಹೃದ್ಗತಮಾಡಿಕೊಳ್ಳುವಾಗ ದೋಷಗಳನ್ನು ತಿದ್ದಿಕೊಳ್ಳಲು ಗುರುಗಳ ಸಮ್ಮುಖದಲ್ಲಿ ಆ ಕಾರ್ಯವನ್ನು ಮಾಡುವುದೂ ಅಗತ್ಯವಾಗುತ್ತಿತ್ತು. ಜೊತೆಗೆ ತಂದೆಯ ಮನೆಯಿಂದ ದೂರವಾಗಿ ಗುರುಗಳ ಮನೆಯಲ್ಲಿರುವುದರಿಂದ ಲಭಿಸಬಹುದಾದ ಇತರ ಶಿಕ್ಷಣ ಸೌಲಭ್ಯಗಳನ್ನೂ ಅಂದಿನವರು ಅರಿತುಕೊಂಡಿದ್ದರು. ತಮ್ಮ ನಗರದಲ್ಲೆ ಪ್ರಸಿದ್ಧರೆನಿಸಿದ ಗುರುಗಳಿದ್ದರೂ ರಾಜಗೃಹ, ವಾರಾಣಸಿ, ಮುಂತಾದ ನಗರಗಳ ರಾಜಮಹಾರಾಜರು ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಬಹುದೂರದಲ್ಲಿದ್ದ ತಕ್ಷಶಿಲೆಯಂಥ ವಿದ್ಯಾಕೇಂದ್ರಗಳಿಗೆ ಕಳಿಸುತ್ತಿದ್ದ ಅಂಶವನ್ನು ತಿಲಮುಟ್ಟಿ ಜಾತಕ ತಿಳಿಸುತ್ತದೆ. ಅದರಿಂದ ತಮ್ಮ ಮಕ್ಕಳಲ್ಲಿರಬಹುದಾದ ಸಿರಿವಂತಿಕೆಯ ಗರ್ವ ಅಹಂಕಾರಾದಿ ಹಮ್ಮುಬಿಮ್ಮುಗಳು ನಿರ್ಮೂಲವಾಗಿ ಅವರು ಜೀವನದಲ್ಲಿ ಶೀತೋಷ್ಣಾದಿ ಕಷ್ಟಗಳನ್ನು ತಡೆದುಕೊಳ್ಳುವ ಶಕ್ತಿಪಡೆಯುವರೆಂದೂ ಜೀವನದ ರೀತಿನೀತಿಗಳನ್ನು ಅರಿತುಕೊಳ್ಳುವರೆಂದೂ ಭಾವಿಸಿದ್ದರು. ಗುರುಗಳ ಮನೆಯಲ್ಲಿ ಉಳಿದುಕೊಂಡು ಅವರ ನೇತೃತ್ವದಲ್ಲಿ ಜೀವನ ನಡೆಸಬೇಕಾಗಿದ್ದುದರಿಂದ ವ್ಯಾಸಂಗ ಸುಸೂತ್ರವಾಗಿ ನಡೆಯುವುದರ ಜೊತೆಗೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅನುಕರಿಸುವ ಅವಕಾಶವೂ ದೊರೆಯುತ್ತಿತ್ತು. ಸಮಾನ ವಯಸ್ಸಿನ ಇತರ ವಿದ್ಯಾರ್ಥಿಗಳೊಡನೆಯೂ ಸುತ್ತಣ ಸಾಮಾನ್ಯ ಜನತೆಯೊಡನೆಯೂ ವರ್ತಿಸುವಾಗ ವಿದ್ಯಾರ್ಥಿಗಳಲ್ಲಿ ಇದ್ದಿರಬಹುದಾದ ಭಾವಾತಿರೇಕಗಳೂ ನಡೆನುಡಿಯ ಓರೆಕೋರೆಗಳೂ ಸರಿಹೋಗಿ ಸಮಾಜದಲ್ಲಿ ನಡೆದುಕೊಳ್ಳಬೇಕಾದ ಕ್ರಮದ ಪರಿಚಯವಾಗಲೂ ಅವಕಾಶವಿತ್ತು. ವಿದ್ಯಾರ್ಥಿಗಳ ಊರು ಹತ್ತಿರದಲಿದ್ದರೆ ಹಬ್ಬ ಹುಣ್ಣಿಮೆಗಳಲ್ಲಿ ಹೋಗಿ ಬರಲು ಅನುಮತಿಯಿರುತ್ತಿದ್ದರೂ ನೂರಾರು ಮೈಲಿಗಳಿಂದ ಬಂದಿರುತ್ತಿದ್ದ ವಿದ್ಯಾರ್ಥಿಗಳಿಗೆ ಅದು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣವನ್ನು ಮುಗಿಸಿ ಸಮಾವರ್ತನವಾದ ಮೇಲೆಯೆ ಊರಿಗೆ ಅವರು ಹಿಂದಿರುಗಬೇಕಾಗುತ್ತಿತ್ತು. ರಸ್ತೆ ಮತ್ತು ವಾಹನ ಸೌಲಭ್ಯಗಳು ಅಷ್ಟಾಗಿ ಇಲ್ಲದಿದ್ದ ಆ ಕಾಲದಲ್ಲಿ ಅದು ಅನಿವಾರ್ಯವೇ ಆಗುತ್ತಿತ್ತು. ಹಲವು ಸಂದರ್ಭಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಶಿಕ್ಷಣ ಮುಗಿಸಿ ಬರುವುದನ್ನು ಚಾತಕಪಕ್ಷಿಗಳಂತೆ ಕಾದು ನೋಡಬೇಕಾಗುತ್ತಿತ್ತು. ಕೆಲವರಂತು ತಮ್ಮ ಜೀವಿತಕಾಲದಲ್ಲಿ ಮಕ್ಕಳನ್ನು ನೋಡಬಲ್ಲೆವೇ ಎಂದು ಅನುಮಾನಿಸುತ್ತಿದ್ದುದೂ ಉಂಟು.
ಗುರುಕುಲ ಪದ್ಧತಿ ಶಿಕ್ಷಣಕ್ಕೆ ಉತ್ತಮವಿಧಾನವೆಂದು ಅಂದಿನ ಶಿಕ್ಷಣವೇತ್ತರು ಪರಿಗಣಿಸಿದ್ದರೂ ಎಲ್ಲ ವಿದ್ಯಾರ್ಥಿಗಳೂ ಗುರುಗಳ ಬಳಿಯಲ್ಲೆ ಇದ್ದುಕೊಂಡು ಶಿಕ್ಷಣ ಪಡಿಯುತ್ತಿದ್ದಂತೆ ತೋರುವುದಿಲ್ಲ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೆ ಇದ್ದುಕೊಂಡು ಹತ್ತಿರದ ಗುರುಮಠವೊಂದಕ್ಕೆ ಹೋಗಿ ಬರುತ್ತಿದ್ದರು. ಉಪನಯನಾನಂತರ ವಿದ್ಯಾರ್ಥಿಗಳು ಗುರುವಿನ ಮನೆಗೆ ಶಿಕ್ಷಣಕ್ಕೆ ಹೋಗಬೇಕೆಂದು ಸ್ಮøತಿ ಸೂಚಿಸುತ್ತದೆ. ಪೂರ್ವ ಮತ್ತು ಮಧ್ಯ ಭಾರತದಿಂದ ಪಶ್ಚಿಮ ಭಾರತದಲ್ಲಿದ್ದ ತಕ್ಷಶಿಲೆಯಂಥ ದೂರದ ವಿದ್ಯಾಕೇಂದ್ರಗಳಿಗೆ ವೇದ ಮತ್ತು ಹದಿನೆಂಟು ಶಾಸ್ತ್ರಗಳಲ್ಲಿ ಅಧ್ಯಯನ ನಡೆಸತಕ್ಕವರು ಮಾತ್ರ ಹೋಗುತ್ತಿದ್ದರು. ಅಷ್ಟು ದೂರದ ಪ್ರಯಾಣವನ್ನು ಕೈಕೊಳ್ಳಲು ಅವರಿಗೆ 15-16 ವರ್ಷ ವಯಸ್ಸಾದರೂ ಆಗಿರಬೇಕಾಗಿತ್ತು. ಬಡವರ ಮಕ್ಕಳು ಮಾತ್ರ ಅವುಗಳ ಶಿಕ್ಷಣಕ್ಕೆ 12 - 13ನೆಯ ವರ್ಷ ವಯಸ್ಸಿನಲ್ಲೇ ಗುರುಗಳ ಮನೆಯನ್ನು ಸೇರುತ್ತಿದ್ದಂತೆ ತೋರುತ್ತದೆ. ಅವರು ತಮ್ಮ ಆಹಾರಕ್ಕಾಗಿ ಭಿಕ್ಷಾಟನೆ ಮಾಡಬೇಕಾಗುತ್ತಿತ್ತು. ಶ್ರೀಮಂತರು ತಮ್ಮ ಮಕ್ಕಳು ತಮ್ಮ ತಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳುವಷ್ಟು ದೊಡ್ಡವರಾಗುವ ತನಕ ಉಪನಯನವಾಗಿದ್ದರೂ ಹತ್ತಿರದ ಯಾರಾದರೂ ಗುರುಗಳ ಬಳಿ ಶಿಕ್ಷಣ ಪಡೆಯಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಿರಬೇಕು. ಬೇಕಾದ ಹಾಗೆ ಐಶ್ವರ್ಯ ಹೊಂದಿದ್ದ ರಾಜ ಮಹಾರಾಜರಂಥ ಶ್ರೀಮಂತರು ಅಗತ್ಯವ್ಯವಸ್ಥೆಯನ್ನು ಮಾಡಿಕೊಂಡು ತಮಗೆ ಉಚಿತವೆನಿಸುವ ಗುರುಗಳಿದ್ದ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಕಳಿಸುತ್ತಿದ್ದರು. ಗುರುಗಳು ಒಂದೇ ಊರಿನಲ್ಲಿದ್ದ ಪಕ್ಷದಲ್ಲಿ ವಿದ್ಯಾರ್ಥಿಗಳು ತಂದೆಯ ಮನೆಗೆ ಬದಲು ಗುರುಗಳ ಮನೆಯಲ್ಲಿ ವಾಸಿಸುತ್ತಿದ್ದರೇ ಎಂಬುದು ತಿಳಿಯದ ವಿಷಯ.
ವನಾಂತರ ಪ್ರದೇಶಗಳಲ್ಲಿ ಗುರುಕುಲಗಳು
[ಬದಲಾಯಿಸಿ]ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವೀಯುತ್ತಿದ್ದ ಆಶ್ರಮಗಳಂತೆ ಗುರುಕುಲಗಳೂ ವನಾಂತರದ ನೀರವ ಪ್ರದೇಶಗಳಲ್ಲಿ ಏರ್ಪಟ್ಟಿದ್ದುವೆನ್ನುವುದು ನಿಜ. ಭಾರತದ ಸಂಸ್ಕøತಿ ನಾಗರಿಕತೆಗಳು ವಿಕಸಿಸಿದ್ದು ನಗರಗಳಲ್ಲಲ್ಲ; ವನಾಂತರದ ನೀರವವೂ ರಮ್ಯವೂ ಆದ ಪವಿತ್ರ ಕ್ಷೇತ್ರಗಳಲ್ಲಿ. ಆದರೆ ಈ ಮಾತು ಮುಖ್ಯವಾಗಿ ಧರ್ಮ ಮತ್ತು ತತ್ತ್ವ ಸಿದ್ಧಾಂತಗಳ ವಿಕಾಸಕ್ಕೆ ಅನ್ವಯಿಸುತ್ತದೆ. ವೇದಾಧ್ಯಯನ ಪವಿತ್ರ ಕಾರ್ಯವೆಂದು ಪರಿಗಣಿಸಿದ್ದುದರಿಂದ ಮೊದಮೊದಲು ಅದಕ್ಕಾಗಿ ವನಾಂತರದ ನಿರ್ಜನ ಪ್ರದೇಶಗಳನ್ನು ಆರಿಸಿಕೊಳ್ಳಲಾಗುತ್ತಿತ್ತು. ಗೋಪಥ ಮತ್ತು ಸಾಮ ವಿಧಾನ ಬ್ರಾಹ್ಮಣಗಳು ಬ್ರಹ್ಮಚಾರಿ ಭಿಕ್ಷಾಟನೆಗೆ ಮಾತ್ರ ಊರಿಗೆ ಹೋಗಬೇಕೆಂದೂ ಮಿಕ್ಕ ಕಾಲಗಳಲ್ಲಿ ಊರಹೊರಗಿನ ನೀರವ ವಾತಾವರಣದಲ್ಲಿರಬೇಕೆಂದೂ ವಿಧಿಸುತ್ತವೆ. ಉಪನಿಷತ್ತಿನ ಋಷಿಗಳು ಬೌದ್ಧಗುರುಗಳೂ ತಮ್ಮ ತತ್ತ್ವಸಿದ್ಧಾಂತಗಳನ್ನು ಮೊದಲು ಅಂಥ ವನಾಂತರದ ನೀರವ ಪ್ರದೇಶಗಳಲ್ಲಿ ಕಂಡುಕೊಂಡು ಅನಂತರ ಅವನ್ನು ತಮ್ಮ ಅನುಯಾಯಿಗಳಿಗೆ ಬೋಧಿಸಿದರು. ವಾಲ್ಮೀಕಿ, ಕಣ್ವ, ಸಾಂದೀಪನಿ, ಮುಂತಾದ ಋಷಿಗಳು ತಮ್ಮ ಆಶ್ರಮದಲ್ಲಿ ವೈದಿಕ, ಧಾರ್ಮಿಕ ಮತ್ತು ತತ್ತ್ವಶಾಸ್ತ್ರದ ಶಿಕ್ಷಣದಂತೆ ವ್ಯಾಕರಣ, ಭಾಷಾ ಶಾಸ್ತ್ರ, ಖಗೋಳಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದ್ದರೂ ವನಾಂತರ ಪ್ರದೇಶಗಳಲ್ಲೆ ಜೀವಿಸುತ್ತಿದ್ದರು. ವಾರಾಣಸಿಯ ಗುರುಗಳೊಬ್ಬರು ವೇದಾಧ್ಯಯನಕ್ಕಾಗಿ ನಗರ ಜೀವನದ ಜಂಜಡದಿಂದ ದೂರವಿರಲು ಹಿಮಾಲಯದ ತಪ್ಪಲಿಗೆ ತೆರಳಿದ ಅಂಶ ಜಾತಕವೊಂದರ (ತಿತ್ತಿರಿ) ಕಥೆಯಲ್ಲಿ ಬರುತ್ತದೆ. ಅವರ ಆಹಾರಾದಿ ಅವಶ್ಯಕತೆಗಳನ್ನು ಅಲ್ಲಿಗೆ ಅನತಿ ದೂರದಲ್ಲಿದ್ದ ಹಳ್ಳಿಯೊಂದರ ಜನತೆ ಪೂರೈಸುತ್ತಿದ್ದರಂತೆ. ಆದರೆ ಸಾಹಿತ್ಯಾತ್ಮಕ ಹಾಗೂ ವೃತ್ತಿಪರ ವಿದ್ಯೆಯನ್ನು ಕಲಿಯತಕ್ಕವರು ಕಾಡಿಗೆ ಅಧ್ಯಯನಕ್ಕೆ ಹೋಗುತ್ತಿರಲಿಲ್ಲವೆಂದು ತೋರುತ್ತದೆ. ಗ್ರಾಮ ಅಥವಾ ನಗರಗಳಲ್ಲಿ ವಾಸಿಸುತ್ತಿದ್ದ ಗುರುಗಳ ಮನೆಯಲ್ಲಿ ಉಳಿದುಕೊಂಡು ಅವರು ಅಧ್ಯಯನ ಮಾಡುತ್ತಿದ್ದಿರಬೇಕು. ತಕ್ಷಶಿಲೆಯ ವಿದ್ಯಾರ್ಥಿಗಳನೇಕರು ಗಾಂಧಾರದ ಮಹಾನಗರದಲ್ಲಿದ್ದ ತಮ್ಮ ಗುರುಗಳ ಬಳಿಯಲ್ಲಿದ್ದರೆಂಬ ಅಂಶವನ್ನು ಅನೇಕ ಜಾತಕದ ಕಥೆಗಳು ಸೂಚಿಸುತ್ತವೆ. ಸ್ಮøತಿಗಳೂ ಆ ಬಗ್ಗೆ ಸಾಕ್ಷ್ಯಗಳನ್ನೂ ಒದಗಿಸುತ್ತವೆ. ಊರಿನಲ್ಲಿ ಕಳ್ಳಕಾಕರ ಕಾಟ ಹೆಚ್ಚಿದಾಗ, ಅಥವಾ ಯಾರಾದರೂ ಸತ್ತಾಗ ಗುರುಕುಲಕ್ಕೆ ರಜೆ ಕೊಡಬೇಕೆಂದು ಮನುಸ್ಮøತಿ ಸೂಚಿಸುತ್ತದೆ. ಅಧ್ಯಾಪಕರೂ ವಿದ್ಯಾರ್ಥಿಗಳೂ ಕಾಡಿನಲ್ಲಿ ವಾಸಿಸುತ್ತಿದ್ದರೆ ಇಂಥ ಸೂಚನೆಗೆ ಅವಕಾಶವಿರುತ್ತಿರಲಿಲ್ಲ.
ನಿಷ್ಠೆಯ ಜೀವನ
[ಬದಲಾಯಿಸಿ]ಗುರುಕುಲದಲ್ಲಿ ವಿದ್ಯಾರ್ಥಿಗಳು ಬ್ರಹ್ಮಚರ್ಯದ ನಿಷ್ಠಾ ಜೀವನವನ್ನು ನಡೆಸಬೇಕಾಗಿತ್ತು. ಗುಣಶೀಲಗಳ ನಿರೂಪಣೆಗೆ ಮಹತ್ತ್ವವಿದ್ದ ಅಂದಿನ ಶಿಕ್ಷಣದ ಗುರಿಯ ಸಾಧನೆಗೆ ಇದು ತೀರ ಅಗತ್ಯವಾಗಿತ್ತು. ಒಬ್ಬೊಬ್ಬ ಗುರುವಿನ ಬಳಿಯೂ 10-15 ಮಂದಿ ವಿದ್ಯಾರ್ಥಿಗಳಿರುತ್ತಿದ್ದರು. ಅವರೆಲ್ಲರ ನೈತಿಕ ಮತ್ತು ಸಾಮಾಜಿಕ ವರ್ತನೆಗಳ ಮೇಲೂ ಗುರುಗಳು ಕಣ್ಣಿಟ್ಟು ನೋಡುತ್ತಿದ್ದರು. ಅವರಲ್ಲಿ ಬಡವಿದ್ಯಾರ್ಥಿಗಳು ಭಿಕ್ಷಾನ್ನದಿಂದ ಜೀವಿಸುತ್ತಿದ್ದರು. ಮಿಕ್ಕವರು ಗುರುಗಳ ಮನೆಯಲ್ಲಿ ಅವರ ಹಿರಿಯ ಮಕ್ಕಳಂತೆ ಊಟವಸತಿ ಪಡೆಯುತ್ತಿದ್ದರು. ಗುರುಗಳೊಬ್ಬರು ವಾರಾಣಸಿಯ ರಾಜಕುಮಾರನಿಗೂ ತಮ್ಮ ಮನೆಯಲ್ಲೆ ಊಟವಸತಿಗಳಿಗೆ ಏರ್ಪಡಿಸಿದ್ದುದೂ ಅದಕ್ಕಾಗಿ ಅವನು ಸೂಕ್ತವೆನಿಸುವಂತೆ ಗುರುದಕ್ಷಿಣೆ ಕೊಡಲಾಶಿಸಿದ್ದುದೂ ತಿಲಮುಟ್ಟಿ ಜಾತಕದಲ್ಲಿ ಉಲ್ಲೇಖವಾಗಿದೆ.
ಗುರುಕುಲದ ವಿದ್ಯಾರ್ಥಿಗಳು ಹಲವು ಸಾಮಾಜಿಕ ಮತ್ತು ನೈತಿಕ ನಿಯಮಗಳನ್ನು ಪಾಲಿಸುತ್ತಿದ್ದರು. ಗುರುಗಳನ್ನು ದೇವರೆಂದು ಭಾವಿಸಿ ಅನನ್ಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಅವರು ನೀಡುವ ಶಿಕ್ಷಣ ಮತ್ತು ಬೀರುವ ಆದರ್ಶ ಪರಿಣಾಮಕಾರಿಯಾಗಲು ಅದೆಲ್ಲ ತೀರ ಅಗತ್ಯವೆನಿಸಿತ್ತು. ಹಾಗೆಯೇ, ಅವರ ಮನೆಯ ಹಿರಿಯರ ಬಗ್ಗೆಯೂ ಗೌರವದಿಂದ ನಡೆದುಕೊಳ್ಳಬೇಕಾಗಿತ್ತು. ಸಮಾಜ ಎತ್ತಿಹಿಡಿದಿರುವ ಆದರ್ಶಮೌಲ್ಯಾದಿಗಳನ್ನು ನಿಷ್ಠೆಯಿಂದ ಪಾಲಿಸಬೇಕಾಗಿತ್ತು. ಜೂಜುಗಾರಿಕೆ, ಸುಳ್ಳು ಹೇಳುವುದು, ಇತರರಿಗೆ ಕೇಡುಬಯಸುವುದು, ಚಾಡಿ ಹೇಳುವುದು-ಇವೆಲ್ಲ ನಿಷಿದ್ಧವೆನಿಸಿದ್ದವು. ವಿದ್ಯಾರ್ಥಿಗಳು ತಲೆ ಪೂರ್ತಿ ಕ್ಷೌರಮಾಡಿಸಿಕೊಳ್ಳಬೇಕಾಗಿತ್ತು. ಇಲ್ಲವೆ ಜುಟ್ಟು ಬಿಡಬೇಕಾಗಿತ್ತು. ಕೊಡೆ ಹಿಡಿದುಕೊಳ್ಳುವುದು, ಚಡಾವು ಮುಂತಾದ ಪಾದರಕ್ಷೆಗಳನ್ನು ಧರಿಸುವುದು, ಮೋಜುಗಾರಿಕೆಯ ಅತ್ತರು ಮುಂತಾದ ಅಲಂಕಾರ ವಸ್ತುಗಳನ್ನು ಬಳಸುವುದು, ಗುರುಗಳಿಗಿಂತ ಹೆಚ್ಚಿನ ಆಡಂಬರದ ಉಡುಪು ತೊಡುವುದು, ಅವರಿಗಿಂತ ಎತ್ತರದ ಸ್ಥಳದಲ್ಲಿ ಕೂಡುವುದು-ಇವಕ್ಕೆಲ್ಲ ಅವಕಾಶವಿರಲಿಲ್ಲ. ಮುಖ್ಯವಾಗಿ ಅವರು ಸರಳಜೀವನವನ್ನು ನಡೆಸಬೇಕಾಗಿತ್ತು. ನಿತ್ಯ ಸ್ನಾನಮಾಡಿ ಚೊಕ್ಕಟವಾದ ಮಡಿ ಬಟ್ಟೆಯನ್ನು ಧರಿಸಬೇಕಾಗಿತ್ತು. ಮಾಂಸಾಹಾರ ತ್ಯಾಜ್ಯವೆನಿಸಿತ್ತು. ಅಧಿಕವಾಗಿ ಸಿಹಿತಿಂಡಿಗಳನ್ನಾಗಲೀ ಸಂಬಾರ ಹೆಚ್ಚಿದ್ದ ಪದಾರ್ಥಗಳನ್ನಾಗಲೀ ತಿನ್ನಲು ಅವಕಾಶವಿರಲಿಲ್ಲ. ನೈತಿಕ ಜೀವನಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಆಚರಿಸಬೇಕಾಗಿದ್ದರೂ ಮಿಕ್ಕವಕ್ಕೆ ಅಗತ್ಯವೆನಿಸಿದಾಗ ವಿನಾಯಿತಿ ದೊರಕುತ್ತಿತ್ತು. ವೈದ್ಯಕಾರಣಕ್ಕಾಗಿ ಕೆಲವರಿಗೆ ಆಹಾರನಿಯಮದ ಬಗ್ಗೆ ವಿನಾಯಿತಿಯಿರುತ್ತಿತ್ತು. ಬಿಸಿಲಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾದಾಗ ವಿದ್ಯಾರ್ಥಿಗಳು ಕೊಡೆ, ಪಾದರಕ್ಷೆ ಮುಂತಾದವನ್ನು ಬಳಸಬಹುದಾಗಿತ್ತು. ನೀತಿನಿಯಮಗಳ ಪಾಲನೆ ವ್ಯಾಸಂಗಕ್ಕೂ ಗುಣಶೀಲಗಳ ನಿರೂಪಣೆಗೂ ಅಗತ್ಯವೆಂದು ಭಾವಿಸಲಾಗಿತ್ತೇ ಹೊರತು ವಿದ್ಯಾರ್ಥಿಗಳು ಜೀವನದ ಸುಖ ಸೌಲಭ್ಯಗಳನ್ನು ತೊರೆದು ಸಂನ್ಯಾಸಿಗಳಾಗಿ ಬಾಳಬೇಕೆಂಬ ಭಾವನೆ ಇರಲಿಲ್ಲ. ದೇಹವನ್ನು ದಂಡಿಸಬೇಕೆಂದು ದೇಹಕ್ಕೆ ಅಸಾಧ್ಯವಾದ ದುಡಿಮೆ ಕೊಡುತ್ತಿರಲಿಲ್ಲ. ವಿದ್ಯಾರ್ಥಿ ದೆಶೆ ದೇಹವರ್ಧನದ ಕಾಲವೆಂಬುದನ್ನು ಅರಿತಿದ್ದ ಅಂದಿನವರು ಮಕ್ಕಳು ತಕ್ಕಷ್ಟು ಪುಷ್ಟಿಕರವಾದ ಆಹಾರವನ್ನು ಸೇವಿಸುವ ಅಗತ್ಯವನ್ನು ಎತ್ತಿಹಿಡಿದಿದ್ದರು. ಚಿಕ್ಕ ಮಕ್ಕಳಿಗೂ ರೋಗಿಗಳಿಗೂ ಆಹಾರನಿಯಮಗಳನ್ನು ಸಡಿಲಗೊಳಿಸುತ್ತಿದ್ದರು. ಸರಳ ಜೀವನವನ್ನು ನಡೆಸುತ್ತಿದ್ದ ಅವರು ಜ್ಞಾನಾರ್ಜನೆಯ ಜೊತೆಗೆ ಸಮಾಜ ಜೀವನಕ್ಕೆ ವಿಹಿತವೆನಿಸುವ ಗುಣಶೀಲಗಳನ್ನೂ ಬೆಳೆಸಿಕೊಳ್ಳಬೇಕೆಂದು ಒತ್ತಿ ಹೇಳುತ್ತಿದ್ದರು. ಅದಕ್ಕೆ ಅನುಕೂಲಿಸುವಂತೆ ನೀತಿನಿಯಮಗಳನ್ನು ರೂಪಿಸಿದ್ದರು.
ಗುರುಕುಲ ಪದ್ಧತಿಯ ಪ್ರಭಾವ
[ಬದಲಾಯಿಸಿ]ಶಿಕ್ಷಣ ಪರಿಣಾಮಕಾರಿಯಾಗುವುದಕ್ಕೂ ಸೂಕ್ತರೀತಿಯ ವ್ಯಕ್ತಿತ್ವದ ನಿರೂಪಣೆಗೂ ಅನುಕೂಲವೆನಿಸುವ ಅನೇಕ ಲಕ್ಷಣಗಳು ಗುರುಕುಲ ಪದ್ಧತಿಯಲ್ಲಿ ಅಡಕವಾಗಿದ್ದವು. ಆಧುನಿಕ ತತ್ತ್ವ ಚಿಂತಕರು ಅದನ್ನು ಮನಗಂಡುಕೊಂಡಿರುವರು. ಈಚೆಗೆ ಭಾರತದಲ್ಲಿ ಅದರ ಉತ್ತಮಾಂಶಗಳನ್ನು ಅಳವಡಿಸಿಕೊಂಡಂತೆ ಕೆಲವು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಿದೆ. ಆ ಮೂಲಕ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯ ವಿಹಿತಲಕ್ಷಣಗಳನ್ನು ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಪುನರುಜ್ಜೀವನಗೊಳಿಸುವ ಯತ್ನ ನಡೆದಿದೆ.