ಗುರಿ
ಗುರಿ ಎಂದರೆ ಪಿಸ್ತೂಲು, ರೈಫ಼ಲ್, ಶಾಟ್‍ಗನ್ ಹಾಗೂ ಇತರ ಬಂದೂಕುಗಾರಿಕೆ ಕ್ರೀಡೆಗಳಿಗಾಗಿ, ಜೊತೆಗೆ ಡಾರ್ಟ್ಸ್, ಬಿಲ್ಲುಗಾರಿಕೆ, ಅಡ್ಡಬಿಲ್ಲುಗಾರಿಕೆ/ಸಿಡಿಬಿಲ್ಲುಗಾರಿಕೆ ಮತ್ತು ಇತರ ಬಂದೂಕೇತರ ಸಂಬಂಧಿ ಕ್ರೀಡೆಗಳಲ್ಲಿ ಬಳಸಲಾಗುವ ವಿವಿಧ ರೂಪಗಳಲ್ಲಿ ಮತ್ತು ಆಕಾರಗಳಲ್ಲಿರುವ ಒಂದು ವಸ್ತು. ಗುರಿಯ ಕೇಂದ್ರವನ್ನು ಹಲವುವೇಳೆ ಗುರಿಹಲಗೆಯ ಕಣ್ಣು (ಬುಲ್ಸ್ಐ) ಎಂದು ಕರೆಯಲಾಗುತ್ತದೆ. ಉದಾಹರಣೆ ಕೊಡಬೇಕೆಂದರೆ ಗುರಿಗಳನ್ನು ಕಾಗದ, ತಾನೇ ಸರಿಯಾಗುವ ರಬ್ಬರ್ ಅಥವಾ ಉಕ್ಕಿನಿಂದ ತಯಾರಿಸಬಹುದು. ವಿದ್ಯುನ್ಮಾನ ಗುರಿಗಳೂ ಇರುತ್ತವೆ. ಇವು ವಿದ್ಯುನ್ಮಾನ ರೀತಿಯಲ್ಲಿ ಗುರಿಕಾರನಿಗೆ ಹೊಡೆತದ ಪೂರ್ವನಿಯೋಜಿತ ಸ್ಥಳದ ನಿಖರ ಮರುಮಾಹಿತಿಯನ್ನು ಒದಗಿಸಬಲ್ಲದು.
ಇಂದು ಗುರಿಯಿಡುವಿಕೆ ಕ್ರೀಡೆಗಳಲ್ಲಿ ಬಳಸಲಾದ ಬಹುತೇಕ ಗುರಿಗಳು ಅಮೂರ್ತ ಆಕೃತಿಗಳಾಗಿವೆ ಮತ್ತು ಹಲವುವೇಳೆ ಇವುಗಳ ಮೂಲಗಳ ಬಗ್ಗೆ ಹೆಚ್ಚು ವಿಚಾರ ಮಾಡಲಾಗುವುದಿಲ್ಲ. ಆದರೆ, ಬಹುತೇಕ ಗುರಿಯಿಡುವಿಕೆ ವಿಭಾಗಗಳನ್ನು ಆರಂಭಿಸಿದ ಸೇನಾ ಮತ್ತು ಬೇಟೆ ಮೂಲಗಳನ್ನು ಪರಿಗಣಿಸಿದಾಗ, ಯಾವುದೋ ಹಂತದಲ್ಲಿ ಅನೇಕ ಗುರಿಗಳು ಮೂಲತಃ ಕಾಳಗದಲ್ಲಿನ ಮಾನವ ಪ್ರತಿಸ್ಪರ್ಧಿಗಳು ಅಥವಾ ಬೇಟೆಯಲ್ಲಿನ ಪ್ರಾಣಿಗಳನ್ನು ಹೋಲುತ್ತಿದ್ದವು ಎಂದು ತಿಳಿಯುವುದು ಕಷ್ಟವಿಲ್ಲ. ಉದಾಹರಣೆಗೆ, ಸುಪರಿಚಿತವಾದ ವೃತ್ತಾಕಾರದ ಕಣ್ಣುಳ್ಳ ಗುರಿಹಲಗೆಯು ಮೂಲತಃ ಮಾನವ ಮುಂಡ ಅಥವಾ ಬೇಟೆಯಾಡಲಾಗುತ್ತಿದ್ದ ಪ್ರಾಣಿಯನ್ನು ಹೋಲುತ್ತಿದ್ದಿರಬಹುದು. ಇಂದು ಅಮೂರ್ತವೆಂದು ಪರಿಗಣಿಸಲಾದ ನಾರ್ವೇಯ ಸ್ವಯಂಪ್ರೇರಿತ ಗುರಿಯಿಡುವಿಕೆ ಸಂಘದ ಬಯಲು ಗುರಿಗಳು ಸಮರ ಮೂಲಗಳಿರುವ ಗುರಿಗಳ ಗಮನಾರ್ಹ ಉದಾಹರಣೆಗಳಾಗಿವೆ. ಇದರ ಇತರ ಉದ್ದೇಶಗಳ ಪೈಕೆ ಮೂಲ ಉದ್ದೇಶ ವಾಹನಗಳ ಗಾಲಿಗಳು, ಪೀಪಾಯಿಗಳು, ಯೋಧತಡೆ ರಂಧ್ರಗಳು ಅಥವಾ ಶತ್ರು ಸಿಬ್ಬಂದಿ ಇತ್ಯಾದಿಗಳನ್ನು ಹೋಲುವುದಾಗಿತ್ತು. ಸಾಮಾನ್ಯವಾಗಿ ಈ ಗುರಿಗಳ ಮೂಲದ ಮೇಲೆ ಹೆಚ್ಚು ಗಮನ ಹರಿಸಲಾಗುವುದಿಲ್ಲ. ಬಹುತೇಕ ಗುರಿಕಾರರಿಗೆ ಇದು ತಿಳಿದಿರುವುದೂ ಇಲ್ಲ ಮತ್ತು ಇವನ್ನು ಬದಲಾವಣೆ ಮತ್ತು ಸಂಪ್ರದಾಯಕ್ಕಾಗಿ ಇಡಲಾಗಿದೆ.
ಗುರಿಗಳ ಕೆಲವು ಬಗೆಗಳೆಂದರೆ: ಉಕ್ಕಿನ ಗುರಿಗಳು, ಕಾಗದ ಅಥವಾ ರಟ್ಟು ಕಾಗದದ ಗುರಿಗಳು, ಶಿಥಿಲ/ಸೂಕ್ಷ್ಮ ಗುರಿಗಳು (ಉದಾಹರಣೆಗೆ ಜೇಡಿಮಣ್ಣು ಅಥವಾ ಹೆಂಚುಗಳು), ತಾನೇ ಸರಿಯಾಗುವ ರಬ್ಬರ್‌ನ ಗುರಿಗಳು. ಹೊಡೆತ ಬಿದ್ದಾಗ ನೆಲದ ಉದ್ದಕ್ಕೆ ಚಲಿಸುವಂತೆ ಮತ್ತು/ಅಥವಾ ಪುಟಿಯುವಂತೆ ಪ್ರತಿಕ್ರಿಯಾತ್ಮಕ ಗುರಿಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಅನೌಪಚಾರಿಕ ಗುರಿಯಿಡುವಿಕೆ ಅಭ್ಯಾಸದಲ್ಲಿ ಹಲವುವೇಳೆ ಪ್ರತಿಕ್ರಿಯಾತ್ಮಕ ಗುರಿಗಳನ್ನು ಬಳಸಲಾಗುತ್ತದೆ. ಇದರಲ್ಲಿ ಅನೌಪಚಾರಿಕ ತವರದ ಡಬ್ಬಿಗಳು, ಗಾಜಿನ ಬಾಟಲಿಗಳು, ಉಕ್ಕಿನ ಪೀಪಾಯಿಗಳು/ತಟ್ಟೆಗಳು ಅಥವಾ ಗುರಿಕಾರನ ಗಮನವನ್ನು ಸೆಳೆಯುವ ಇತರ ಯಾವುದೇ ವಸ್ತುವಿನಂತಹ ಗುರಿ ವಸ್ತುಗಳಿಗೆ ಗುರಿಯಿಡಲಾಗುತ್ತದೆ.