ವಿಷಯಕ್ಕೆ ಹೋಗು

ಗಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಲಿಯು ಲೋಹ, ಮರ ಇಲ್ಲವೇ ಇತರ ಗಡಸು ಪದಾರ್ಥಗಳಿಂದ ನಿರ್ಮಿಸಲ್ಪಟ್ಟ ವರ್ತುಲಾಕಾರದ ಚೌಕಟ್ಟು, ಪುರ್ಣವಾಗಿ ಇಲ್ಲವೇ ಆಂಶಿಕವಾಗಿ ಘನವಾಗಿರಬಹುದು. ಕೇಂದ್ರದಲ್ಲಿ ಒಂದು ಗುಂಬವಿದ್ದು ಅಲ್ಲಿ ಸಂಗಮಿಸುವ ಮತ್ತು ಪರಿಧಿಯೆಡೆಗೆ ಅರೀಯವಾಗಿ ಅಪಹರಿಸುವ ಅರಗಳಿರಬಹುದು (ಹ್ವೀಲ್). ಚಕ್ರ ಪರ್ಯಾಯ ನಾಮ. ಗಾಲಿಯ ಇತಿಹಾಸ ಪ್ರ.ಶ.ಪು. 6,500 ವರ್ಷಗಳಷ್ಟು ಹಳೆಯದು. ಮಾನವನ ಸಂಸ್ಕೃತಿಯ ಇತಿಹಾಸದಲ್ಲಿ ಗಾಲಿಯ ಪಾತ್ರ ವಿಶಿಷ್ಟವಾದುದೂ ಕ್ರಾಂತಿಕಾರಕವಾದುದೂ ಆಗಿದೆ. ಪ್ರಾಚೀನ ಮಾನವ ಜನಾಂಗ ಅಲೆಮಾರಿಯಾಗಿದ್ದು ಆಹಾರವನ್ನು ಹುಡುಕಿ ಸಂಪಾದಿಸುತ್ತಿದ್ದ ಕಾಲದಲ್ಲಿ ಆಹಾರ ಶೇಖರಣೆಯ ಆವಶ್ಯಕತೆಯೇ ಇರಲಿಲ್ಲ. ಆದರೆ ಕ್ರಮೇಣ ಆತ ಒಂದು ಕಡೆ ನೆಲೆನಿಂತು ತನ್ನ ಆಹಾರವನ್ನು ತಾನೇ ಬೆಳೆಸಲಾರಂಭಿಸಿದಾಗ ಹಾಗೆ ಬೆಳೆಸಿದ ಬೆಳೆಯನ್ನು ಶೇಖರಿಸಲು ಪಾತ್ರೆಗಳ ಆವಶ್ಯಕತೆ ಉಂಟಾಯಿತು. ಜೇಡಿಮಣ್ಣನ್ನು ಕಲಸಿ ಕೈಯಿಂದ ಸಣ್ಣ, ದೊಡ್ಡ ಮಡಿಕೆ, ಗಡಿಗೆ ಜಾಡಿಗಳನ್ನು ಮಾಡಿಕೊಳ್ಳುತ್ತಿದ್ದ. ಆದರೆ ಗಾಲಿಯನ್ನು ಸಮತಲವಾಗಿ ಕೆಳಗಿಟ್ಟು ತಿರುಗಿಸಿದಾಗ ಮಧ್ಯದ ಗುಂಬದಲ್ಲಿ ಮಣ್ಣನ್ನು ಎರೆದು, ತಿರುಗಿಸಿ ಹೆಚ್ಚು ನಯವಾದ, ಭದ್ರವಾದ ಮಡಿಕೆ ಮುಂತಾದ ಪಾತ್ರೆಗಳನ್ನು ಮಾಡಲು ಆತ ಕಲಿತ. ಹೀಗೆ ಮಾಡುವಾಗ ಕ್ರಮೇಣ ಅವನಲ್ಲಿ ಹುದುಗಿದ್ದ ಅಭಿರುಚಿ ಹೊಮ್ಮಿ ಅವುಗಳಿಗೆ ಬಣ್ಣ ಕೊಡುವುದನ್ನೂ ಅವುಗಳ ಮೇಲೆ ರೇಖಾ ಚಿತ್ರಗಳನ್ನು ಹೆಚ್ಚು ಕಲಾತ್ಮಕವಾಗಿ ಬಿಡಿಸುವುದನ್ನೂ ಆರಂಭಿಸಿದ. ಪುರಾತತ್ತ್ವ ಶೋಧಕರು ಪ್ರಾಚೀನಾವಶೇಷಗಳ ಕಾಲನಿರ್ಣಯ ಮಾಡುವಾಗ ನಿವೇಶನಗಳಲ್ಲಿ ದೊರೆತ ಮಡಿಕೆ ಮುಂತಾದ ಮೃತ್ಪಾತ್ರೆಗಳು ಕೈಯಿಂದ ಮಾಡಿದವೇ ಆಥವಾ ಕುಂಬಾರನ ಚಕ್ರದಿಂದ ಮಾಡಿದವೇ ಎಂಬುದನ್ನು ಸಹ ಗಮನಿಸುತ್ತಾರೆ. ಕುಂಬಾರನ ಮಡಿಕೆ ಪ್ರ.ಶ.ಪು. 6,500-5,500 ರಷ್ಟು ಪ್ರಾಚೀನವಾಗಿದೆ. ಚಕ್ರದ ಉಪಯೋಗವನ್ನು ಅರಿತ ಬಳಿಕ ಅದನ್ನೇ ಒಂದು ಕಸಬನ್ನಾಗಿ ಮಾಡಿ ಕೊಂಡವರು ಕುಂಬಾರರು. ಕುಂಬಾರನ ಚಕ್ರ ಸಾಂಸ್ಕೃತಿಕ ಪಯಣ ಒಂದು ವಿಶಿಷ್ಟ ಘಟ್ಟವನ್ನು ಸೇರಿದುದರ ಕುರುಹೆಂದು ಹೇಳಬಹುದು.

ಬಂಡಿಗಳಿಗೆ ಚಕ್ರದ ಉಪಯೋಗವಂತೂ ತಿಳಿದೇ ಇದೆ. ಮರದ ಕಾಂಡವನ್ನು ಕಡಿದು ಎರಡು ತುದಿಗಳ ಅಚ್ಚುಗಳನ್ನು ಕೆತ್ತಿ ಆ ಅಚ್ಚುಗಳಿಗೆ ಚಕ್ರಗಳನ್ನು ಜೋಡಿಸಿದಾಗ ಇವು ವೇಗವಾಗಿ ಹೋಗುವ ಪಯಣದ ಬಂಡಿಗಳಾದವು. ಪ್ರಾಚೀನ ಕಾಲದಲ್ಲಿ ಇವನ್ನು ಮಾಡಿತ್ತಿದ್ದುದರಿಂದ ಅತಿ ಪ್ರಾಚೀನವಾದ ಗಾಡಿ, ಎಂದರೆ ಗಾಡಿಯ ಚಕ್ರ, ಯಾರ ಕೊಡುಗೆ ಎಂದು ಹೇಳಲಾಗದು. ಹರಪ್ಪ ಸಂಸ್ಕೃತಿಯ ಕಾಲವಾದ ಪ್ರ.ಶ.ಪು. 2500 ಕ್ಕೂ ಮೊದಲೇ ಈ ಚಕ್ರಗಳ ಅರಿವು ಅಂದಿನವರಿಗಿತ್ತು. ಪ್ರ.ಶ.ಪು. 2500 ಕ್ಕೂ ಹಿಂದಿನ ಸುಮೇರಿಯನ್ ಸಂಸ್ಕೃತಿಯಲ್ಲೂ ಗಾಡಿಗಳ ಉಪಯೋಗವಿತ್ತು. ಇದಕ್ಕೂ ಹಿಂದಿನ ನವಶಿಲಾಯುಗದ ಕಾಲಕ್ಕೆ ಗಾಲಿಯ ಪ್ರಯೋಜನದ ಅರಿವು ಆ ಜನರಿಗಿತ್ತೇ ಎಂಬುದನ್ನು ಹೇಳಲಾಗದು. ಆದರೆ ಕುಂಬಾರನ ಚಕ್ರದ ಅರಿವಿದ್ದ ಈಜಿಪ್ಟ ಜನರಿಗೆ ಸುಮಾರು ಪ್ರ.ಶ.ಪು. 1650 ರ ವರೆಗೂ ಗಾಲಿಯ ಉಪಯೋಗವನ್ನು ಕುರಿತು ಏನೂ ತಿಳಿದಿರಲಿಲ್ಲವೆಂಬುದು ಆಶ್ಚರ್ಯಕರ ಸಂಗತಿ. ಚಕ್ರದ ಭಾವನಾತ್ಮಕ ಉಪಯೋಗ ವನ್ನು ಪಡೆದವರು ಭಾರತೀಯರು. ಬುದ್ಧ ತನ್ನ ಧರ್ಮವನ್ನು ಸಾರುವುದನ್ನು ಧರ್ಮಚಕ್ರ ಪ್ರವರ್ತನವೆಂದು ಕರೆಯಲಾಗಿದೆ. ಧರ್ಮವನ್ನು ಒಂದು ಚಕ್ರಕ್ಕೆ ಹೋಲಿಸಿ ಚಕ್ರ ಅವಿಚ್ಛಿನ್ನವಾಗಿ ತಿರುಗುತ್ತಿರುವಂತೆ ಬುದ್ಧ ಈ ಧರ್ಮಚಕ್ರವನ್ನು ಮೊದಲು ನಡೆಸಿದನಂತೆ. ಈ ಪ್ರತೀಕವನ್ನು ತಳೆದಿರುವಂತೆ ಇಂಥ ಚಕ್ರಗಳನ್ನು ಮೇಲು ಭಾಗದಲ್ಲಿ ಹೊತ್ತಿದ್ದ ಸುಮಾರು ಮೂವತ್ತು ಶಿಲಾಸ್ತಂಭಗಳನ್ನು ಅಶೋಕ ತನ್ನ ರಾಜ್ಯದ ಬೇರೆ ಬೇರೆ ಕಡೆ ನಿಲ್ಲಿಸಿದ. ಒಂದೊಂದು ಕಂಬದ ಮೇಲೂ ಸಾಮಾನ್ಯವಾಗಿ ಒಂದು ಚೌಕಾಕೃತಿಯ ಕಲ್ಲು, ಅದರ ಮೇಲೆ ಪೀಠ, ಅದರ ಮೇಲೆ ಚಕ್ರಾಕಾರದ ಇನ್ನೊಂದು ಕಲ್ಲು, ಅದರ ಸುತ್ತಲೂ ಹಂಸಗಳ, ವೃಷಭಗಳ, ಲತೆಗಳ ಸಾಲು, ಈ ಚಕ್ರದ ಮೇಲೆ ಒಂದು ವಿಗ್ರಹ ಇವು ಅಶೋಕನ ಸ್ತಂಭಗಳಲ್ಲಿ ನಾವು ಕಾಣುವ ವಿವರಗಳು. ಮೇಲುಭಾಗದ ವಿಗ್ರಹ ಸಿಂಹ, ವೃಷಭ, ಆನೆ, ಕುದುರೆ ಮುಂತಾದ ಯಾವುದಾದರೂ ಪ್ರಾಣಿಯದಾಗಿದ್ದು ಅವು ನಾಲ್ಕು ದಿಕ್ಕಿಗೆ ನಾಲ್ಕು ಮುಖಗಳನ್ನು ತೋರಿಸುತ್ತಿದ್ದವು. ಇವು ಧರ್ಮ ಸ್ತಂಭಗಳೆನಿಸಿವೆ. ಇವುಗಳ ಮೇಲೆ ಕಾಣುವುದೇ ಧರ್ಮಚಕ್ರ. ಸಾರಾನಾಥದಲ್ಲಿ ಇಂಥ ಕಂಬವೊಂದರ ಮೇಲೆ ನಾಲ್ಕು ಸಿಂಹಗಳನ್ನು ತೋರಿಸಲಾಗಿದೆ. ಭಾರತ ಧರ್ಮರಾಷ್ಟ್ರ, ಧರ್ಮಕ್ಷೇತ್ರವೆಂದು ಸಾರಲೆಂಬ ಭಾರತದ ರಾಜಚಿಹ್ನೆಯಾಗಿ ಈ ಸ್ತಂಭವನ್ನು ಸರ್ಕಾರ ಬಳಸುತ್ತಿದೆ.

ಪ್ರಾಚೀನತಮ ಗಾಲಿಗಳು, ಒಡ್ಡರ ಬಂಡಿಯ ಚಕ್ರಗಳಂತೆ, ಉಂಡೆಗಾಲಿಗಳು. ಉದಾಹರಣೆಗೆ ಮೆಸಪೊಟೇಮಿಯಾದ ಕೀಷ್ ಮತ್ತು ಸೂಸ ಎಂಬಲ್ಲಿ ದೊರೆತಿರುವ ಮಾದರಿಗಳು ಹೀಗಿವೆ. ಅವನ್ನು ಮೂರು ಮರದ ತುಂಡುಗಳಿಂದ ಮಾಡಲಾಗಿತ್ತು. ಮಧ್ಯದ ಮರದಲ್ಲಿ ಗುಂಬವಿದ್ದು (ಹಬ್) ಅದರ ಮೂಲಕ ಅಕ್ಷ ಎಂದರೆ ಇರಚಿ (ಆಯಕ್ಸಲ್) ಹಾದುಹೋಗುತ್ತಿತ್ತು. ಇವುಗಳಿಗೆ ಪ್ರತ್ಯೇಕ ನೇಮಿ (ಫೆಲ್ಲಿ) ಇರುತ್ತಿರಲಿಲ್ಲ. ಇಂಥ ಗಾಲಿಗಳು ದಪ್ಪವಾಗಿಯೂ ತೂಕವಾಗಿಯೂ ಇದ್ದುದರಿಂದ ಯುದ್ಧ ಕಾರ್ಯದ ರಥಗಳಿಗೆ ಅನುಪಯುಕ್ತವಾದ್ದವು. ಆದ್ದರಿಂದ ಗಾಲಿಗಳ ಉಪಯೋಗ ಬಲು ಸೀಮಿತವಾಗಿತ್ತು. ಪ್ರ.ಶ.ಪು. 3500 ರ ಕಾಲದ್ದೆಂದು ಹೇಳಲಾಗುವ ನಾಲ್ಕು ಗಾಲಿಗಳ ರಥವೊಂದು ಕತ್ತೆಗಳಿಂದ ಮತ್ತು ಎತ್ತುಗಳಿಂದ ಎಳೆಯಲ್ಪಡುತ್ತಿರುವ ಮಾದರಿಯೊಂದು ಕೀಷ್ನಲ್ಲಿ ದೊರೆತಿವೆ. ಪ್ರ.ಶ.ಪು. 2000 ದ ಹೊತ್ತಿಗೆ ಅರಳಿಗಳಿರುವ (ಸ್ಪೋಕ್ಸ) ಗಾಲಿಗಳ ಉಪಜ್ಞೆಯಾಗಿ (ಇನ್ವೆನ್ಷನ್) ಹಳೆಯ ಗಾಲಿಗಳು ಮರೆಯಾದವು. ಮೆಸಪೊಟೇಮಿಯ, ಪರ್ಷಿಯ ಮತ್ತು ಟರ್ಕಿ ಪ್ರಾಂತಗಳಲ್ಲಿ ರೂಢಿಗೆ ಬಂದ ಅರದ ಗಾಲಿಗಳು ಪ್ರ.ಶ.ಪು. 1600 ರ ವೇಳೆಗೆ ಈಜಿಪ್ಟ ಮತ್ತು ಕ್ರೀಟ್ ದ್ವೀಪಗಳಲ್ಲಿಯೂ ಪ್ರ.ಶ.ಪು. 1300 ರ ಹೊತ್ತಿಗೆ ಚೀನದಲ್ಲಿಯೂ ಪ್ರ.ಶ.ಪು. 1000 ದ ವೇಳೆಗೆ ಉತ್ತರ ಯುರೋಪಿನಲ್ಲಿಯೂ ಪ್ರ.ಶ.ಪು. ೫00 ರ ಹೊತ್ತಿಗೆ ಬ್ರಿಟನ್ನಿನಲ್ಲಿಯೂ ಕಾಣಿಸಿಕೊಂಡವು. ಈ ಗಾಲಿಗಳು ಗುಂಬ, ನೇಮಿ ಮತ್ತು ಅರಗಳಿಂದ ಕೂಡಿರುತ್ತಿದ್ದವು. ನೇಮಿ ಮತ್ತು ಗುಂಬಗಳನ್ನು ಅರಗಳು ಕೂಡಿಸುತ್ತಿದ್ದವು. ನೇಮಿಯ ಹೊರಭಾಗಕ್ಕೆ ಚರ್ಮದ ಅಥವಾ ಲೋಹದ ಪಟ್ಟಿಯನ್ನು ಕೂಡಿಸಲಾಗುತ್ತಿತ್ತು. ಕೇಂದ್ರದಲ್ಲಿರುವ ಗುಂಬದಿಂದ ಹೊರಡುವ ಅರಗಳು ಸಮಸಂಖ್ಯೆಯಲ್ಲಿದ್ದು ನೇಮಿಯನ್ನು ಸೇರುತ್ತಿದ್ದವು. ನಾಲ್ಕು ಅರಗಳಿರುವ ಗಾಲಿಗಳು ಬೊಹಿಮಿಯಾ ಮತ್ತು ಡೆನ್ಮಾರ್ಕ್ ಪ್ರದೇಶಗಳಲ್ಲಿ ರಚಿತವಾದುವು. ರೋಮನ್ ಯುಗದಲ್ಲಿದ್ದ ಸೆಲ್ಟಿಕ್ ಗಾಲಿ ಪ್ರವೀಣರು 14 ಅರಗಳುಳ್ಳಗಾಲಿ ಗಳನ್ನು ರಚಿಸಿದ್ದರು. ನೇಮಿಯ ಹೊರಭಾಗಕ್ಕೆ ಕಾಯಿಸಿದ ಲೋಹದ ಪಟ್ಟಿಯನ್ನು ಕೂರಿಸಿ ಅದನ್ನು ತಣಿಸಿದಾಗ ನೇಮಿಯನ್ನು ಈ ಪಟ್ಟಿ ಬಿಗಿಯಾಗಿ ಅಪ್ಪಿಕೊಳ್ಳುತ್ತಿತ್ತು. ಪ್ರಾರಂಭದಲ್ಲಿ ನೇಮಿಯನ್ನು ಒಂದೇ ಮರದ ತುಂಡಿನಿಂದ ಮಾಡುತ್ತಿದ್ದರು. ಅದನ್ನು 6-7 ಮರದ ತುಂಡುಗಳಿಂದ ಅಷ್ಟೇ ಅರಗಳಿರುವಂತೆ ರಚಿಸುತ್ತಿದ್ದುದ್ದೂ ಇತ್ತು. ನೇಮಿ ಭೂಮಿಯ ಮೇಲೆ ಉರುಳುವಾಗ ಅದರ ಮೇಲೆ ಬಿದ್ದ ತೂಕ ಅರಗಳ ಮೂಲಕ ಅಕ್ಷದ ಮೇಲೆಯೂ ಬೀಳುತ್ತದೆ. ಹೀಗಾಗಿ ಗುಂಬಗಳ ರಂಧ್ರ ಕಾಲಕ್ರಮೇಣ ಸವೆದು ದೊಡ್ಡದಾಗುವುದು. ಇದನ್ನು ತಪ್ಪಿಸಲು ಸೆಲಿಕ್ಟ ಪ್ರವೀಣರು ಬೇರಿಂಗುಗಳ (ಅಚ್ಚಿನ ಧಾರಕಗಳು) ಉಪಯುಕ್ತತೆಯನ್ನು ಕಂಡುಕೊಂಡರು. ಗುಂಬದಲ್ಲಿ ಉದ್ದಕ್ಕೆ ಕಾಲುವೆಗಳಂತೆ ಕೊರೆದು ಅವುಗಳಲ್ಲಿ ಮರದ ತುಂಡುಗಳನ್ನು ಸೇರಿಸುತ್ತಿದ್ದರು. ಇವು ಗುಂಬದ ದ್ವಾರ ಮತ್ತು ಇರಚಿಯ ಮಧ್ಯೆ ತಿರುಗುತ್ತಿದ್ದವು. ರೋಮನ್ನರು ಮರದ ತುಂಡುಗಳ ಬದಲು ಕಂಚಿನ ಉಂಗುರಗಳನ್ನು ಬಳಕೆಗೆ ತಂದರು. ಇದೇ ಇಂದಿನ ಬುಷ್ ಮಾದರಿಯ ಬೇರಿಂಗುಗಳ ಉಪಜ್ಞೆಗೆ ಕಾರಣವಾಯಿತು. ಅರದ ಗಾಲಿಗಳು ಹಗುರವಾಗಿಯೂ ಗಟ್ಟಿಯಾಗಿಯೂ ಇದ್ದುದರಿಂದ ಅವನ್ನು ಸಾಗಣೆ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಯಿತು. ಮಧ್ಯ ಯುಗದಲ್ಲಿ ಕೆಲವು ದೇಶಗಳು ರಸ್ತೆ ಹಾಳಾಗುವುದೆಂಬ ಕಾರಣಕ್ಕಾಗಿ ಲೋಹದ ಪಟ್ಟಿಗಳಿರುವ ಗಾಲಿಗಳನ್ನು ನಿಷೇಧಿಸಿದ್ದವು.

ಪ್ರಸಕ್ತ ಶತಮಾನವನ್ನು ಗಾಲಿಗಳ ಯುಗ ಎಂದು ಸಾರ್ಥಕವಾಗಿ ಹೆಸರಿಸಬಹುದು. ಕೈಗಾರಿಕೆಗಳ ಯಾಂತ್ರೀಕಿಕರಣ ಗಾಲಿಗಳ ಉಪಯೋಗವನ್ನು ಅನಿವಾರ್ಯವನ್ನಾಗಿಸಿದೆ. ಯಾವ ಕಾರ್ಖಾನೆಯೇ ಆಗಲಿ ಗಾಲಿ ಇಲ್ಲದೆ ಇರಲು ಸಾಧ್ಯವೇ ಇಲ್ಲ. ಪ್ರತಿಯೊಂದು ಯಂತ್ರದಲ್ಲಿಯೂ ಚಾಲಕ, ಚಾಲಿತ, ಅನುಚಾಲಿತ, ವೇಗವರ್ಧಕ, ವೇಗಪಾತಕ ಮೊದಲಾದ ಗಾಲಿಗಳಲ್ಲಿ ಒಂದಲ್ಲ ಒಂದು ಇದ್ದೇ ಇರುತ್ತದೆ. ಬಸ್ಸು, ಕಾರು ಮೊದಲಾದ ವಾಹನಗಳಲ್ಲಿ ರಬ್ಬರ್ ಗಾಲಿಗಳ ಜೊತೆಗೆ ಗಿಯರು ಚಕ್ರವೇ ಮೊದಲಾದ ಗಾಲಿ ಪ್ರತಿರೂಪಗಳು ಇದ್ದೇ ಇರುತ್ತವೆ. ಗಾಲಿಗಳ ಕ್ಷೇತ್ರದಲ್ಲಿ ಕಪ್ಪಿ (ಪುಲ್ಲಿ), ನಿಯಂತ್ರಕ (ಫ್ಲೈಹ್ವೀಲ್) ,ಮತ್ತು ಗಿಯರು ಚಕ್ರಗಳ ಉಪಜ್ಞೆ ಯಂತ್ರಸಾಮಥರ್ಯದ ವ್ಯಾಪ್ತಿಯ ದಿಗಂತವನ್ನು ಬಹುದೂರಕ್ಕೆ ತಳ್ಳಿಬಿಟ್ಟವೆ. ಎತ್ತಿನ ಗಾಡಿಯಿಂದ ಹಿಡಿದ ಅತ್ಯಂತ ಸಂಕೀರ್ಣಯಂತ್ರದವರೆಗೂ ಗಾಲಿಯ ಉಪಯೋಗ ಸರ್ವವ್ಯಾಪಿಯಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಾಲಿ&oldid=893785" ಇಂದ ಪಡೆಯಲ್ಪಟ್ಟಿದೆ