ವಿಷಯಕ್ಕೆ ಹೋಗು

ಗಂಧರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಧರ್ವರು ಇತಿಹಾಸ ಪುರಾಣಗಳಲ್ಲಿ ಕಿನ್ನರರು, ಕಿಂಪುರುಷರಂತೆ ಪ್ರಸಿದ್ಧರಾದ ಒಂದು ಬಗೆಯ ಜನ. ಇವರನ್ನು ದೇವಯೋನಿಗಳು, ದೇವಗಾಯಕರು, ದೇವೀಮೂಲವುಳ್ಳವರು ಎಂದು ಕರೆಯುತ್ತಾರೆ. ಗಂಧರ್ವ ಶಬ್ದ ಋಗ್ವೇದದಲ್ಲಿ ಹಲವೆಡೆಗಳಲ್ಲಿ ಬರುತ್ತದೆ. ಅದರ ಪ್ರಕಾರ ವಿಶ್ವಾವಸು ಅಲ್ಲಿನ ಗಂಧರ್ವ. ಈತನಿಗೆ ವಾಯುಕೇಶನೆಂತಲೂ ಹೆಸರು. ಆಕಾಶ, ಈತನ ನೆಲೆ. ಸ್ವರ್ಗಲೋಕದ ಸೋಮರಸದ ರಕ್ಷಣೆಯ ಭಾರ ಈತನದು. ಕೆಲವು ಕಡೆ ಸ್ವರ್ಗದ ಗಂಧರ್ವ ಚಂದ್ರನೇ (ಸೋಮ) ಎಂಬ ಭಾವನೆಯೂ ಬರುತ್ತದೆ. ಪ್ರಪ್ರಥಮ ಮಾವವ್ಯಕ್ತಿಗಳಾದ ಯಮಯಮಿಯರಿಗೆ ತಂದೆ ಗಂಧರ್ವ. ಅಥರ್ವವೇದದ ಪ್ರಕಾರ ಹೆಂಗಸರ ವಶೀಕರಣ ಈತನ ಅಪೂರ್ವಶಕ್ತಿ. ಈ ಕಾರಣದಿಂದಲೇ ವೈವಾಹಿಕ ಸಂದರ್ಭಗಳಲ್ಲಿ ಗಂಧರ್ವನನ್ನು ಸ್ತುತಿಸಿ ಆಹ್ವಾನಿಸುತ್ತಿದ್ದರು. ಇವೇ ಗಂಧರ್ವರ ಸಾಮಾನ್ಯ ಗುಣಗಳು.

ವೇದಗಳಲ್ಲಿ ವರುಣ ಗಂಧರ್ವರಾಜ. ಸೋಮ ಅಪ್ಸರೆಸೆಯರು ಇವನ ಅಧೀನ. ಗಂಧರ್ವರು ಅನೇಕ ದೈವಿಕರಹಸ್ಯಗಳನ್ನು ಬಲ್ಲವರೆಂದೂ ಬ್ರಹ್ಮಾಂಡವನ್ನು ಅಳತೆಮಾಡಿ ದೇವತೆಗಳೆ ಸಂಚಾರಕ್ಕೆ ಆಗಮಾಡಿದವರೆಂದೂ ಹೇಳಲಾಗಿದೆ. ಅಥರ್ವವೇದದಲ್ಲಿ ಗಂಧರ್ವರೂ ಅಪ್ಸರಸೆಯರೂ ಹೆಸರಿಸಲ್ಪಟ್ಟಿದ್ದಾರೆ. ಅಥರ್ವವೇದದ ಪ್ರಕಾರ ಇವರು ಅನೇಕ ಔಷಧಿಗಳನ್ನು ಬಲ್ಲವರು. ತಪಃಶಕ್ತಿಯ ಮಾರ್ಗದರ್ಶಕರು. ಕನ್ಯೆಯರನ್ನು ಹಿಂಬಾಲಿಸುವುದು ಇವರ ಚಟ. ಋತುಮತಿಯಾದ ಕನ್ಯೆಯರು ಇವರ ಅಧೀನ. ಪಿಶಾಚರು ರಾಕ್ಷಸರು ಮುಂತಾದವರಿಗೆ ಹೆದರುವಂತೆ ಗಂಧರ್ವರಿಗೂ ಜನ ಹೆದರುತ್ತಿದ್ದರು. ಭಯ ನಿವಾರಣೆಗಾಗಿ ತಾಯಿತ ಕಟ್ಟಿಕೊಳ್ಳುತ್ತಿದ್ದರು. ಇವರನ್ನು ಸುಂದರಾಂಗರೆಂದೂ ಕುಬ್ಜರೆಂದೂ ಮೃಸ್ವರೂಪಿಗಳೆಂದೂ ವರ್ಣಿಸಲಾಗಿದೆ.

ಇತಿಹಾಸ, ಪುರಾಣಗಳಲ್ಲಿ ಬರುವ ಇವರು ಸ್ವರ್ಗದ ಗಾಯಕರು. ಇಂದ್ರನ ಸಭೆಯಲ್ಲಿನ ವಾದ್ಯಗೋಷ್ಠಿ ಇವರದು. ಇವರ ಕಲೆ ಸಂಗೀತ. ಇದೇ ಗಾಂಧರ್ವವೆಂಬ ಉಪವೇದವೆನಿಸಿದೆ. ಚಿತ್ರರಥ ಇವರ ಪ್ರಭು. ಜೈನಾಗಮಗಳ ಅಷ್ಟಗಣಗಳಲ್ಲಿ ಗಂಧರ್ವರೂ ಒಂದು ಗುಣ. ಹದಿನೇಳನೆಯ ತೀರ್ಥಂಕರನ ಕಿಂಕರ ಒಬ್ಬ ಗಂಧರ್ವ.ಕೆಲವು ಪುರಾಣಗಳು ಇವರನ್ನು ಕಶ್ಯಪಮುನಿಯ ಮಕ್ಕಳೆನ್ನಲಾಗಿದೆ.

ಗಂಧರ್ವರು ಸರಸಿಗಳು, ಇವರ ಸ್ತ್ರೀಯರು ಅಪ್ಸರಸೆಯರು. ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆ, ಘೃತಾಚೀ ಮುಂತಾದ ಸಪ್ತಕನ್ನಿಕೆಯರು ಗಂಧರ್ವಸ್ತ್ರೀಯರಲ್ಲಿ ಪ್ರಸಿದ್ಧರು. ಇಂದ್ರ ಇವರನ್ನು ಹಲವು ವೇಳೆ ವಿಶ್ವಾಮಿತ್ರನೇ ಮುಂತಾದ ಉಗ್ರತಪಸ್ವಿಗಳ ತಪೋಭಂಗಕ್ಕೆ ಉಪಯೋಗಿಸಿಕೊಂಡನೆಂದೂ ಐತಿಹ್ಯ. ಇವರ ಪ್ರೇಮಸಂಬಂಧ ಗಾಂಧರ್ವವೆಂದು ಪ್ರಸಿದ್ಧವಾಗಿದೆ. ಆದ್ದರಿಂದಲೆ ತಾಯಿ ತಂದೆಯರ ಅಥವಾ ನೆಂಟರಿಷ್ಟರ ಮಧ್ಯಸ್ತಿಕೆ ಇಲ್ಲದೆ ಪ್ರೇಮವೇ ಬುನಾದಿಯಾಗಿ ಆಗುವ ವಿವಾಹ ಸಂಬಂಧವನ್ನು ಗಾಂಧರ್ವ ಎಂದು ಮನುಸ್ಮತ್ಯಾದಿಗಳು ವಿವರಿಸುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಂಧರ್ವ&oldid=892899" ಇಂದ ಪಡೆಯಲ್ಪಟ್ಟಿದೆ