ಕೆಟ್ಟದೃಷ್ಟಿ
ಕೆಟ್ಟದೃಷ್ಟಿ ಎಂದರೆ ಕೇಡು ಬಗೆಯುವ ನೋಟವು ಬೀರುತ್ತದೆ ಎಂದು ನಂಬಲಾದ ಶಾಪ ಅಥವಾ ಕಥೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಅರಿವಿಲ್ಲದಿದ್ದಾಗ ಕೊಡಲ್ಪಟ್ಟದ್ದು. ಕೆಟ್ಟದೃಷ್ಟಿಯನ್ನು ಪಡೆಯುವುದು ದುರಾದೃಷ್ಟ ಅಥವಾ ಗಾಯವನ್ನು ಉಂಟುಮಾಡುತ್ತದೆ ಎಂದು ಅನೇಕ ಸಂಸ್ಕೃತಿಗಳು ನಂಬುತ್ತವೆ.[೧] ಕೆಟ್ಟದೃಷ್ಟಿಯ ವಿರುದ್ಧ ರಕ್ಷಿಸಲು ತಾಯಿತಗಳನ್ನು ಸೃಷ್ಟಿಸಲಾಗುತ್ತದೆ. ಈ ಪದದಿಂದ ವ್ಯಕ್ತವಾದ ಕಲ್ಪನೆಯು ಅನೇಕ ಭಿನ್ನ ಸಂಸ್ಕೃತಿಗಳು ಇದರ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ಈ ಪರಿಕಲ್ಪನೆ ಮತ್ತು ಅದರ ಮಹತ್ವವು ಭಿನ್ನ ಸಂಸ್ಕೃತಿಗಳಲ್ಲಿ ವ್ಯಾಪಕವಾಗಿ ಬದಲಾಗುತ್ತವೆ, ಮುಖ್ಯವಾಗಿ ಪಶ್ಚಿಮ ಏಷ್ಯಾದಲ್ಲಿ. ಈ ಕಲ್ಪನೆಯು ಯಹೂದಿ ರಬ್ಬಿ ಸಾಹಿತ್ಯದಲ್ಲಿ ಅನೇಕ ಬಾರಿ ಕಾಣಿಸುತ್ತದೆ. ಇದು ಅನೇಕ ಮೆಡಿಟರೇನಿಯನ್ ಮತ್ತು ಏಷ್ಯನ್ ಬುಡಕಟ್ಟುಗಳು ಮತ್ತು ಸಂಸ್ಕೃತಿಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದ್ದ ನಂಬಿಕೆಯಾಗಿತ್ತು. ಕೆಟ್ಟದೃಷ್ಟಿಯನ್ನು ಹೋಗಲಾಡಿಸಲು ಬಳಸಲಾಗುವ ನಜ಼ರ್ ಎಂದು ಕರೆಯಲ್ಪಡುವ ಕಣ್ಣಿನಂಥ ಸಂಕೇತಗಳಿರುವ ತಾಯಿತಗಳು ಮತ್ತು ಅಲಂಕಾರಗಳು ಪಶ್ಚಿಮ ಏಷ್ಯಾ, ಪಾಕಿಸ್ತಾನ, ಭಾರತಗಳಲ್ಲಿ ಸಾಮಾನ್ಯವಾಗಿ ಕಾಣುತ್ತವೆ, ಮತ್ತು ಪರ್ಯಟಕರಲ್ಲಿ ಸ್ಮಾರಕ ವಸ್ತುಗಳಾಗಿ ಜನಪ್ರಿಯ ಆಯ್ಕೆಗಳಾಗಿವೆ.
ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣಾ, ಉತ್ತರಾಖಂಡ್ ಮತ್ತು ಹಿಮಾಚಲ್ ಪ್ರದೇಶದಂತಹ ಉತ್ತರ ಭಾರತದ ರಾಜ್ಯಗಳಲ್ಲಿ, ಕೆಟ್ಟದೃಷ್ಟಿಯನ್ನು "ದೃಷ್ಟಿ" ಅಥವಾ ಹೆಚ್ಚು ಸಾಮಾನ್ಯವಾಗಿ ಬುರಿ ನಜ಼ರ್ ಎಂದು ಕರೆಯಲಾಗುತ್ತದೆ. ಕೆಟ್ಟದೃಷ್ಟಿಯನ್ನು ನಿವಾರಿಸಲು ತಾಯಿತ ಕಂಕಣ, ಹಚ್ಚೆ ಅಥವಾ ಇತರ ವಸ್ತುವನ್ನು (ನಜ಼ರ್ ಬಟ್ಟು), ಅಥವಾ ಘೋಷಣಾ ವಾಕ್ಯವನ್ನು (ಚಶ್ಮೆ ಬದ್ದೂರ್) ಬಳಸಬಹುದು. ಕೆಟ್ಟದೃಷ್ಟಿಯನ್ನು ನಿವಾರಿಸಲು ಕೆಲವು ಟ್ರಕ್ ಚಾಲಕರು "ಬುರಿ ನಜ಼ರ್ ವಾಲೆ ತೇರಾ ಮೂಹ್ ಕಾಲಾ" ("ಕೆಟ್ಟದೃಷ್ಟಿಯವನೇ, ನಿನ್ನ ಮುಖ ಕಪ್ಪಾಗಲಿ") ಎಂಬ ಘೋಷಣಾವಾಕ್ಯವನ್ನು ಬರೆಯುತ್ತಾರೆ. ಸಾಮಾನ್ಯವಾಗಿ ಭಾರತದಲ್ಲಿ ಐತಿಹಾಸಿಕ ಪುರಾಣಗಳಷ್ಟು ಹಿಂದೆ ಹೋದರೆ, ಕೂಸುಗಳು ಮತ್ತು ನವಜಾತ ಶಿಶುಗಳ ಕಣ್ಣಿಗೆ ಕಾಡಿಗೆಯನ್ನು ಹಚ್ಚಲಾಗುತ್ತದೆ. ಇದು ಕಪ್ಪು ಬಣ್ಣದ್ದಾಗಿರುತ್ತದೆ, ಏಕೆಂದರೆ ಕಪ್ಪು ಬಣ್ಣವು ಕೆಟ್ಟದೃಷ್ಟಿಯನ್ನು ಅಥವಾ ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತದೆ ಎಂದು ಭಾರತದಲ್ಲಿ ನಂಬಲಾಗುತ್ತದೆ. ದೃಷ್ಟಿಯನ್ನು ತೆಗೆಯಲು ಜನರು ತಮ್ಮ ಸಂಸ್ಕೃತಿ/ಪ್ರದೇಶವನ್ನು ಅವಲಂಬಿಸಿ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ದೃಷ್ಟಿ ತೆಗೆಯಲು ಬಳಸಲಾದ ವಸ್ತುಗಳಲ್ಲಿ ಕಲ್ಲುಪ್ಪು ಅಥವಾ ಕೆಂಪು ಮೆಣಸಿನಕಾಯಿಗಳು ಅಥವಾ ಎಣ್ಣೆಯಾಗಿಸಿದ ಬಟ್ಟೆ. ಈ ವಸ್ತುಗಳಲ್ಲಿ ಯಾವುದನ್ನಾದರೂ ಒಂದನ್ನು ತೆಗೆದುಕೊಂಡು, ಆ ವಸ್ತುವನ್ನು ಹಿಡಿದು ಬಾಧಿತವಾದ ವ್ಯಕ್ತಿಯ ಸುತ್ತ ತಮ್ಮ ಕೈಯನ್ನು ತಿರುಗಿಸಿ ಜನರು ದೃಷ್ಟಿ ತೆಗೆಯುತ್ತಾರೆ ಮತ್ತು ನಂತರ ಆ ವಸ್ತುವನ್ನು ಸುಟ್ಟುಬಿಡುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Ross, C (2010). "Hypothesis:The Electrophysicological Basis of the Evil Eye Belief". Anthropology of Consciousness. 21: 47. doi:10.1111/j.1556-3537.2010.01020.x.