ಕುಂಟೆ
ಕುಂಟೆಯು ದ್ವಿತೀಯಕ ಉಳುವಿಕೆಗೆ ಬಳಸಲಾದ ಕೃಷಿ ಉಪಕರಣಗಳ ಹಲವಾರು ಬಗೆಗಳಲ್ಲಿ ಯಾವುದಾದರೂ ಒಂದು. ಈ ಹೆಸರಿನ ಒಂದು ಅರ್ಥ ಮಣ್ಣಿನ ಮೂಲಕ ರೇಖೀಯವಾಗಿ ಎಳೆಯಲ್ಪಟ್ಟಾಗ ಮಣ್ಣಿನೊಳಗೆ ತೂರುವ ಹಲ್ಲಿರುವ (ಕಾಂಡ ಎಂದೂ ಕರೆಯಲ್ಪಡುತ್ತದೆ) ಚೌಕಟ್ಟುಗಳನ್ನು ಸೂಚಿಸುತ್ತದೆ. ಮತ್ತೊಂದು ಅರ್ಥವು ಅದೇ ರೀತಿಯ ಪರಿಣಾಮವನ್ನು ಸಾಧಿಸಲು ಬಿಲ್ಲೆಗಳು ಅಥವಾ ಹಲ್ಲುಗಳ ಪರಿಭ್ರಾಮಕ ಚಲನೆಯನ್ನು ಬಳಸುವ ಯಂತ್ರಗಳನ್ನು ಸೂಚಿಸುತ್ತದೆ. ಪರಿಭ್ರಾಮಕ ಉಳುಮೆ ಯಂತ್ರವು ಇದರ ಪ್ರಧಾನ ಉದಾಹರಣೆಯಾಗಿದೆ. ಕುಂಟೆಗಳು ಮಣ್ಣನ್ನು ಕಲಕಿ ಪುಡಿಮಾಡುತ್ತವೆ, ಸಸ್ಯ ನೆಡುವ ಮುಂಚೆ (ಮಣ್ಣಿನಲ್ಲಿ ಗಾಳಿ ಹರಿಸಲು ಮತ್ತು ನಯವಾದ, ಸಡಿಲ ಬೀಜದ ಪಾತಿಯನ್ನು ಸಿದ್ಧಪಡಿಸಲು) ಅಥವಾ ಬೆಳೆಯು ಬೆಳೆಯಲು ಆರಂಭಿಸಿದ ನಂತರ (ಕಳೆಗಳನ್ನು ಕೊಲ್ಲಲು - ಬೆಳೆಸಸ್ಯಗಳ ಹತ್ತಿರದ ಮಣ್ಣಿನ ಮೇಲ್ಪದರವನ್ನು ನಿಯಂತ್ರಿತ ರೀತಿಯಲ್ಲಿ ಕಲುಕಿದಾಗ ಸುತ್ತಲಿನ ಕಳೆಗಳು ಕಿತ್ತುಬಂದು ಸಾಯುತ್ತವೆ, ದ್ಯುತಿಸಂಶ್ಲೇಷಣೆಯನ್ನು ಅಡ್ಡಿಪಡಿಸಲು ಅವುಗಳ ಎಲೆಗಳನ್ನು ಹೂಳಲಾಗುತ್ತದೆ, ಅಥವಾ ಇವೆರಡರ ಸಂಯೋಜನೆಯನ್ನು ಬಳಸಲಾಗುತ್ತದೆ).