ಕರ್ನಾಟಕದ ಬಂಡವಾಳ ಮತ್ತು ಆರ್ಥಿಕತೆ
ಗೋಚರ
ಕರ್ನಾಟಕದ ಬಂಡವಾಳ ಮತ್ತು ಆರ್ಥಿಕತೆ
[ಬದಲಾಯಿಸಿ]- ವಿಶ್ವಬ್ಯಾಂಕ್‌ನಿಂದ ನವೆಂಬರ್, 2016 ಹೊರ ಬಿದ್ದ ವರದಿಯೊಂದು ರಾಜ್ಯ ಸರ್ಕಾರದ ಪಾಲಿಗೆ ಎಚ್ಚರಿಕೆಯ ಸೂಚನೆಯಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಕೈಗಾರಿಕೆ ಮತ್ತು ಉದ್ದಿಮೆ ಗಳನ್ನು ಆರಂಭಿಸಲು ‘ಉದ್ಯಮ ಸ್ನೇಹಿ’ ಪೂರಕ ಪರಿಸರ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡುವ ವಿಚಾರದಲ್ಲಿ, ಕರ್ನಾಟಕ 13ನೇ ಸ್ಥಾನದಲ್ಲಿ ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಗಳು (ಡಿಐಪಿಪಿ) 350ಕ್ಕೂ ಅಧಿಕ ಮಾನದಂಡಗಳನ್ನು ಆಧರಿಸಿ ನಡೆಸಿದ ಅಧ್ಯಯನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
- ಮೈಸೂರು ಮಹಾರಾಜರ ದಿವಾನರು ಉತ್ತಮ ಕೆಲಸದಿಂದಾಗಿ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿಯೇ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಭಾರಿ ಪ್ರಗತಿಯ ಪಥದಲ್ಲಿತ್ತು. ಅದರ ಫಲವಾಗಿಯೇ ರಾಜ್ಯಗಳ ಪುನರ್‌ವಿಂಗಡನೆಯಾದ ಆರಂಭದ ದಶಕಗಳಲ್ಲಿ ರಾಜ್ಯದ ಕೈಗಾರಿಕಾ ಪ್ರಗತಿ ಉತ್ತಮ ಮಟ್ಟವನ್ನೇ ಕಾಯ್ದುಕೊಂಡಿತ್ತು.ಆದರೆ, ನಂತರ ಅದೇ ವೇಗವನ್ನು ಕಾಯ್ದುಕೊಂಡು ಹೋಗಲಾಗಿಲ್ಲ. ಮುಖ್ಯವಾಗಿ ಸರಕುಗಳ ತಯಾರಿಕಾ ಕ್ಷೇತ್ರದಲ್ಲಿ ಹೆಚ್ಚು , ಹೆಚ್ಚು ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ರಾಜ್ಯವು ಸಾಕಷ್ಟು ಸಫಲತೆಹೊಂದಿಲ್ಲ. ಇದರ ಫಲವಾಗಿಯೇ ಕೆಲವು ವರ್ಷಗಳಿಂದೀಚೆಗೆ ರಾಜ್ಯದ ಒಟ್ಟಾರೆ ಆಂತರಿಕ ಉತ್ಪಾದನಾ ಪ್ರಮಾಣ (ಜಿಎಸ್‌ಡಿಪಿ) ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಮೂಲ ಸೌಕರ್ಯ ಒದಗಿಸುವುದು
[ಬದಲಾಯಿಸಿ]- ರಾಜ್ಯದತ್ತ ಅದರಲ್ಲೂ ಮುಖ್ಯವಾಗಿ ತಯಾರಿಕಾ ಕ್ಷೇತ್ರದತ್ತ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವಂತೆ ಮಾಡುವುದೇ ರಾಜ್ಯವಕ್ಕೆ ಸದ್ಯಕ್ಕೆ ದೊಡ್ಡ ಸವಾಲಾಗಿದೆ. ಇದು ಕಠಿಣವಾದ ಸವಾಲಾಗಿದೆ. ಬಂಡವಾಳ ಹೂಡಿಕೆಯನ್ನು ಸೆಳೆಯಲು ಹಲವು ದೇಶಗಳು ಮತ್ತು ರಾಜ್ಯಗಳು ಇಂದು ಗರಿಷ್ಠ ಪ್ರಯತ್ನ ಮಾಡುತ್ತಿವೆ. ‘ಉದ್ಯಮ ಸ್ನೇಹಿ’ ವಾತಾವರಣ ಇದ್ದಲ್ಲಿ ಮಾತ್ರ ಬಂಡವಾಳ ಹರಿದು ಬರುವುದು. ಬಂಡವಾಳ ಹರಿದುಬರಲು ಉತ್ತಮ ವಾತಾವರಣ, ಮೂಲಸೌಲಭ್ಯ ಮತ್ತು ಉದ್ಯಮ ಆರಂಭಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವವರತ್ತ ಸರ್ಕಾರ ಗಮನಕೊಡಬೇಕು.
ಶೇ 3.5ರಷ್ಟು ಮಾತ್ರ ಪ್ರಗತಿ
[ಬದಲಾಯಿಸಿ]- 2017ರಲ್ಲಿ ಜಾಗತಿಕ ಆರ್ಥಿಕತೆ ಶೇ 3.5ರಷ್ಟು ಮಾತ್ರ ಪ್ರಗತಿ ಸಾಧಿಸಬಹುದು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಅಂದರೆ, ವಿಶ್ವದಲ್ಲಿ ಆರ್ಥಿಕ ಹಿಂಜರಿತ ಪರಿಸ್ಥಿತಿಯು ಮುಂದೆಯೂ ಮುಂದುವರಿಯಲಿದೆ ಎಂಬುದನ್ನು ಅದು ಸೂಚ್ಯವಾಗಿಯೇ ತಿಳಿಸಿದೆ. 2008ರಿಂದ ಆರಂಭವಾದ ಆರ್ಥಿಕ ಹಿಂಜರಿತ ಈಗಲೂ ಇದೆ ಎಂಬುದನ್ನೂ ಇದು ತೋರಿಸುತ್ತದೆ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲೂ ಭಾರತ ಮತ್ತು ಚೀನಾ ದೇಶಗಳು ಮಾತ್ರ ಸ್ಥರ ಆರ್ಥಿಕತೆ ಹೊಂದಿದ್ದು ಇಡೀ ವಿಶ್ವದ ಗಮನ ಸೆಳೆದಿದೆ.ಆದರೆ ಈ ಮೂರು ನಾಲ್ಕು ವರ್ಷದಲ್ಲಿ ಭಾರತದಲ್ಲಿ ಹೂಡಿಕೆ ಅವಕಾಶಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಲ್ಲ.
- ಈ ಮೊದಲು ಸೃಷ್ಟಿಸಿದ ಅಧಿಕ ಸಾಮರ್ಥ್ಯಗಳ ಬಳಕೆಯಿಂದಷ್ಟೇ ಈಗಿನ ಪ್ರಗತಿ ಸಾಧ್ಯವಾಗಿದೆ. ಆದಾಗ್ಯೂ, ಸೇವಾ ಕ್ಷೇತ್ರ ಇಂದು ಆರೋಗ್ಯಕರ ಬೆಳವಣಿಗೆಯ ಗತಿಯನ್ನು ಕಾಯ್ದುಕೊಂಡಿದೆ. ನಿಜಕ್ಕೂ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿರುವುದೇ ಈ ಕ್ಷೇತ್ರವೇ. ಈ ಪರಿಸ್ಥಿತಿ ಮುಂದುವರಿಯುವ ವಾತಾವರಣ ಉಂಟಾಗಬೇಕು. ಕಳೆದ ಆರು ತ್ರೈಮಾಸಿಕಗಳಿಗೆ ಹೋಲಿಸಿದರೆ ಕೊನೆಯ ತ್ರೈಮಾಸಿಕದಲ್ಲಿ ಉದ್ದಿಮೆ ವಹಿವಾಟಿನ ಆತ್ಮವಿಶ್ವಾಸವು ಗರಿಷ್ಠ ಪ್ರಮಾಣಕ್ಕೆ ತಲುಪಿದೆ ಎಂಬುದನ್ನು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಒಕ್ಕೂಟದ (ಫಿಕ್ಕಿ) ಅಧ್ಯಯನ ಹೇಳಿದೆ. ಇದು ಆಶಾದಾಯಕ ಬೆಳವಣಿಗೆ.
ಬಂಡವಾಳ ಹೂಡಿಕೆಗೆ ಸಮಸ್ಯೆ
[ಬದಲಾಯಿಸಿ]- ಕರ್ನಾಟಕವು ದೇಶದಲ್ಲೇ ‘ಜ್ಞಾನದ ರಾಜಧಾನಿ’ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಹೂಡಿಕೆ ನಡೆಸುವುದಕ್ಕೆ ಜಗತ್ತಿನ ಗಮನವನ್ನು ರಾಜ್ಯವು ನಿರಂತರವಾಗಿ ಸೆಳೆಯುತ್ತಲೇ ಇದೆ. ಹೊಸ ಉದ್ಯಮ ಸ್ಥಾಪನೆಗೆ ಪ್ರಮುಖ ಅಡಚಣೆಗಳೆಂದರೆ ಭೂಮಿಯ ದರ, ಮೂಲಸೌಲಭ್ಯ ವೆಚ್ಚ, ತೆರಿಗೆಯ ಹೊರೆ, ಅನುಮತಿ ಪಡೆಯಲು ಕಿರಿಕಿರಿ ಮೊದಲಾದವುಗಳು. ತಾಂತ್ರಿಕ ಸುಧಾರಣೆಯ ಗೊಂದಲ. ಎಲ್ಲ ಚಟುವಟಿಕೆಗಳನ್ನೂ ಹೊರಗುತ್ತಿಗೆ ಕೊಡುವ ಮೂಲಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರಷ್ಟೇ ಈಗಿನ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ತರಲು ಸಾಧ್ಯವೆಂಬ ಅಭಿಪ್ರಾಯವಿದೆ.
[[೩]
ಬಂಡವಾಳ ತರಲು ಅಲ್ಪಾವಧಿ, ದೀರ್ಘಾವಧಿ ಕಾರ್ಯಕ್ರಮಗಳು
[ಬದಲಾಯಿಸಿ]- ಖಾಸಗಿ ಬಂಡವಾಳ ಆಕರ್ಷಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ
- ಮುಖ್ಯಮಂತ್ರಿ ನೇತೃತ್ವದಲ್ಲಿ ಬಂಡವಾಳ ಹೂಡಿಕೆ ಸಚಿವಾಲಯ ರಚನೆ
- ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿ ಇರುವ ರಾಜ್ಯಗಳ ನೀತಿಯ ಅಧ್ಯಯನ, ಸೂಕ್ತಬದಲಾವಣೆಯೊಡನೆ ಅನುಸರಣೆ,
- ಡಿಜಿಟಲ್ ತಂತ್ರಜ್ಞಾನದ ವ್ಯಾಪಕ ಸಮರ್ಥ ಬಳಕೆ.(ಈಗ ಅರೆಬರೆ ಬಳಕೆ ಇದೆ)
- ಉತ್ಪಾದನಾ ಕ್ಷೇತ್ರದ ಜೊತೆ ಜೊತೆಗೇ ಸಂಶೋಧನೆಗೆ ಪ್ರೋತ್ಸಾಹ; ಜ್ಞಾನಾಧಾರಿತ ಕ್ಷೇತ್ರವನ್ನು ಉತ್ತಮಪಡಿಸುವುದು.
ಅಂಕೆ ಸಂಖ್ಯೆ - ವಿವರ
[ಬದಲಾಯಿಸಿ]- ಐ ಟಿ ಬಿ ಟಿ ವಿವರ [೪]:
ವಿವರ | ಪ್ರಮಾಣ/ಸಂಖ್ಯೆ |
---|---|
ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು | 400 ಕ್ಕೂ ಹೆಚ್ಚು |
ರಾಜ್ಯದಲ್ಲಿರುವ ಐಟಿ ಕಂಪನಿಗಳು | 350 |
ಬಹುರಾಷ್ಟ್ರೀಯ ಕಂಪನಿಗಳ ಸಂಖ್ಯೆ | 750 |
ಬಹುರಾಷ್ಟ್ರೀಯಕಂಪನಿಗಳಿಂದ ಉದ್ಯೋಗ ಸೃಷ್ಟಿ | 10 ಲಕ್ಷ |
ಐ ಟಿ ಯಿಂದ ಮತ್ತು ಇತರೆ ಹೊರಗುತ್ತಿಗೆ ವರಮಾನ | ರೂ.3.35 ಲಕ್ಷ ಕೋಟಿ |
ರಾಜ್ಯದಲ್ಲಿರುವ ಜೈವಿಕ ತಂತ್ರಜ್ಞಾನದ ಘಟಕಗಳು | 60% (ಐಟಿಯ) |
ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಬರವ ವರಮಾನದಲ್ಲಿ ರಾಜ್ಯದ ಸ್ಥಾನ | 2 |
ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಅಪ್ ಸ್ಥಾಪನೆಯಲ್ಲಿ ಬೆಂಗಳೂರಿನ ಸ್ಥಾನ | 1 |
ಮೂಲ ಸೌಕರ್ಯ ಸಿಬಿಇಸಿ ಮತ್ತು ಬಿಎಂಇಸಿ ಸೌಕಯ ್ ಹೊಂದಿದ ರಾಜ್ಯ | ಕರ್ನಾಟಕ ಒಂದೇ |
ಔಷಧಿಗಳು ಮತ್ತು ಇತರೆ ಸೇವೆ
[ಬದಲಾಯಿಸಿ]ಶಿರೋಲೇಖ | |
---|---|
ಔಷಧಿತಯಾರಿಕಾ ಘಟಕಗಳು | 221 |
ಔಷಧಿ ಉತ್ಪನ್ನಗಳ ರಫ್ತು | 40% |
ಜವಳಿ ಮತ್ತು ಉಡುಪು | |
ಕಚ್ಚಾ ರೇಷ್ಮೆ ಉತ್ಪಾದನೆ | 65 % |
ಉಣ್ಣೆ | 11% |
ಉಡುಪು ರಫ್ತಿನಲ್ಲಿ ರಾಜ್ಯದ ಸ್ಥಾನ | 2 |
ಕೌಶಲ ಅಭಿವೃದ್ಧಿ ಕೇಮದ್ರಗಳು | 144 |
ಖಾಸಗಿ ತರಬೇತಿ ಕೇಂದ್ರಗಳು | 168 |
ಟೆಕ್ಷ್ಟೈಲ್ ಪಾರ್ಕ್‍ಗಳು | 7 |
ಆಟೋಮೊಬೈಲ್ ತಯಾರಿಕಾ ಸಮೂಹಗಳು | 5 |
ಮಶೀನ್ ಟೂಲ್ಸ್ ಮತ್ತು ಬೃಹತ್ ಇಂಜನೀಯರಿಂಗ್ | 17% |
ಇಂಜನೀಯರಿಂಗ ಸೇವೆಗಳ ರಫ್ತು ಮೌಲ್ಯ | ರೂ.20,100ಕೋಟಿ |
ಬಂಡವಾಳ ಮತ್ತು ಇತರೆ
[ಬದಲಾಯಿಸಿ]- ಒಟ್ಟು ಆಂತರಿಕ ಉತ್ಪನ್ನ (ಎಸ್ ಜಿ ಡಿ ಪಿ) =7%
- ವಿದೇಶೀ ನೇರಬಂಡವಾಳ ಹೂಡಿಕೆಯಲ್ಲಿ (ಎಫ್ ಡಿ ಐ) =4ನೇ ಸ್ಥಾನ
- ಜಾಗತಿಕ ತಂತ್ರಜ್ಞಾನ ಕೇಂದ್ರ =4ನೇ ಸ್ಥಾನ
- ಪರಿಣಿತ ಅತಿ ದೊಡ್ಡ ಕಾರ್ಯ ಪಡೆ =4ನೇ ಸ್ಥಾನ
- ವೈವಿಧ್ಯಯ ಮಯ ಕೃಷಿ ಪರಿಸರ = 4 ನೇ ಸ್ಥಾನ
- ಭೂಬ್ಯಾಂಕ ಲಭ್ಯತೆ = 90 ಸಾವಿರ ಎಕರೆ
- ಇತರ ಆದ್ಯತೆಗಳು
- ಕೈಗಾರಿಕೀಕರಣ ಐ.ಟಿ. ಜೈವಿಕ ತಂತ್ರಜ್ಞಾನ ವೈಮಾಂತರಿಕ್ಷ ಸ್ಟಾಟ್ ್ ಅಪ್ ನೀತಿ =ಮೊದಲನೇ ರಾಜ್ಯ
- ಗರಿಷ್ಟ ಪ್ಮಾಣದಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡ ಮತ್ತು ವ್ಯಾಪಾರಕ್ಕೆ ಮುಕ್ತ ರಾಜ್ಯ =ಕರ್ನಾಟಕ
- ಕೈಗಾರಿಕಾ ಸ್ನೇಹಿ ಮತ್ತು ಕೈಗಾರಕಾ ಶಾಂತಿಯ ನಾಡು; ಕಾರ್ಮಿಕ ಉತ್ತಮ ಸಂಬಂಧ =ಕರ್ನಾಟಕ
- ಬಹು ಸಂಸ್ಕøತಿಯ ನಾಡು ; ಉತ್ತಮ ನೆಲೆವೀಡು ; ವಿದೇಶೀಯರ ಕೆಲಸಕ್ಕೆ=ಸೂಕ್ತ ತಾಣ
ವಿಷಯ | ವಿವರ |
---|---|
ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜೆಡಿಪಿ) | 8 ಲಕ್ಷ ಕೋಟಿ |
ಕೈಗಾರಿಕಾ ಉತ್ಪಾದನೆ | 4.12 ಲಕ್ಷ ಕೋಟಿ |
2000 ದಿಂದ ಈಚೆಗೆ ಒಟ್ಟು ವಿದೇಶೀ ನೇರ ಬಂಡವಾಳ ಹೂಡಿಕೆ | 1.22ಲಕ್ಷ ಕೋಟಿ |
ರಾಜ್ಯದ ರಫ್ತು ವಹಿವಾಟು | 3.28 ಲಕ್ಷ ಕೋಟಿ |
ದೇಶೀ ರಫ್ತಿನಲ್ಲಿ ರಾಜ್ಯದ ಪಾಲು | 13% |
ಕೃಷಿ ಆಹಾರ | ಇತ್ಯಾದಿ |
ದೇಶದಲ್ಲಿಯೇ ಅತಿ ಹೆಚ್ಚು ಪ್ರವಾಸಿ ತಾಣಗಳು | 319 |
ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ ಫುಡ್ ಪಾರ್ಕ | 7 |
ರಾಷ್ಟ್ರೀಯ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು | 5 |
ಉತ್ಪಾದನಾ ಮೌಲ್ಯ | 67 ಸಾವಿರ ಕೋಟಿ |
[೪]
ಸಮಸ್ಯೆಗಳು
[ಬದಲಾಯಿಸಿ]- ಮುಂದಿನ 40 ವರ್ಷಗಳಲ್ಲಿ ಕರ್ನಾಟಕದ ಪರಿಸರ ಸಂವರ್ಧನೆಗೆ ಮೊದಲ ಆದ್ಯತೆ ನೀಡದಿದ್ದರೆ ಇತರ ಎಲ್ಲ ಮುನ್ನೋಟದ ಯೋಜನೆಗಳೂ ಮುಗ್ಗರಿಸುತ್ತ ಹೋಗುತ್ತವೆ.
- ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜಾಗೃತಿ ತುಂಬ ಹಿಂದೆಯೇ ಮೂಡಿದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ನಡೆದಿರದಷ್ಟು ವೈವಿಧ್ಯಮಯ ಪರಿಸರ ಚಳವಳಿಗಳು 1980ರ ದಶಕದಲ್ಲೇ ನಡೆದಿವೆ. ಈಗಲೂ ನಡೆಯುತ್ತಿವೆ. ಬೇಡ್ತಿ ಚಳವಳಿಯಿಂದ ಹಿಡಿದು ಈಚಿನ ಉಕ್ಕಿನ ಸೇತುವೆಯವರೆಗಿನ ವಿವಾದಗಳು ಇದಕ್ಕೆ ಸಾಕ್ಷಿಗಳಾಗಿವೆ. ಬೇರೆಲ್ಲ ರಾಜ್ಯಗಳಿಗಿಂತ ಮೊದಲು, ಬೇರೆಲ್ಲ ರಾಜ್ಯಗಳಿಗಿಂತ ವಿಸ್ತೃತವಾದ ‘ಪರಿಸರ ಪರಿಸ್ಥಿತಿ ಅಧ್ಯಯನ’ಗಳು ಕರ್ನಾಟಕದಲ್ಲಿ ನಡೆದಿವೆ.
- ಪರಿಸರ ಸಮಸ್ಯೆ ಎಲ್ಲ ಕಡೆ ತೀವ್ರ ಸ್ವರೂಪ ತಾಳುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂಬರುವ ದಿನಗಳು ಇನ್ನಷ್ಟು ಕಠಿಣವಾಗಲಿವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಎಚ್ಚರಿಸದಿದ್ದರೂ ನಮಗೇ ನೇರ ಗೊತ್ತಾಗುವಷ್ಟು ತೀವ್ರತೆಯಲ್ಲಿ ಪ್ರಕೃತಿ ಮುನಿದೇಳುತ್ತಿದೆ. ಮಳೆ, ಚಳಿ, ಬೇಸಿಗೆ ಈ ಮೂರೂ ಋತುಗಳು ದಿನದಿನಕ್ಕೆ ಭೀಕರವಾಗುತ್ತ ಹೋಗುತ್ತಿವೆ. ದಿಲ್ಲಿಯ ಚಳಿಗಾಲ, ಚೆನ್ನೈ ಮಳೆಗಾಲ, ಭುವನೇಶ್ವರದ ಬೇಸಿಗೆಯ ತುರ್ತುಸ್ಥಿತಿ ನಾಳೆ ನಮ್ಮಲ್ಲೂ ಬಂದೀತು.
- ನಗರಭಾಗ್ಯಕ್ಕಾಗಿ ನಿಸರ್ಗವನ್ನು ಕಡೆಗಣಿಸಿದ್ದರಿಂದ ನಮ್ಮ ಅರಣ್ಯಗಳು ಚಿಂದಿಯಾಗಿವೆ. ಮೃಗಪಕ್ಷಿಗಳು ಕಣ್ಮರೆಯಾಗುತ್ತಿವೆ, ಕೆರೆನದಿಗಳು ಬರಿದಾಗುತ್ತಿವೆ. ಅಂತರ್ಜಲ ಖಾಲಿಯಾಗುತ್ತಿದೆ. ದಟ್ಟ ಜನವಸತಿ ಇದ್ದಲೆಲ್ಲ, ಕೊಚ್ಚೆನೀರು, ಪ್ಲಾಸ್ಟಿಕ್ ಬಗ್ಗಡಗಳೇ ಭರ್ತಿಯಾಗುತ್ತಿವೆ. ತುರ್ತುಸ್ಥಿತಿ ಬಂದಾಗ ಮಾತ್ರ ರಣವೈದ್ಯಕ್ಕೆ ಮೊರೆ ಹೊಕ್ಕರಾಯಿತೆಂದು ಮುಗುಮ್ಮಾಗಿ ಕೂರುವಂತಿಲ್ಲ. ಮುಂದಿನ 40 ವರ್ಷಗಳಲ್ಲಿ ಕರ್ನಾಟಕದ ಪರಿಸರ ಸಂವರ್ಧನೆಗೆ ಮೊದಲ ಆದ್ಯತೆ ನೀಡದಿದ್ದರೆ ಇತರ ಎಲ್ಲ ಯೋಜನೆಗಳೂ ಮುಗ್ಗರಿಸುತ್ತ ಹೋಗುತ್ತವೆ.
ಮೂಲ ಸೌಲಭ್ಯಗಳ ಮೂರು ವಿಧಗಳು
[ಬದಲಾಯಿಸಿ]- ಮೂಲ ಸೌಲಭ್ಯ ಎಂದರೆ ಬರೀ ಹೆದ್ದಾರಿ, ಸೇತುವೆ, ವಿದ್ಯುತ್ ಸ್ಥಾವರ, ಅಣೆಕಟ್ಟು, ಪೈಪ್‌ಲೈನ್, ಬಂದರು, ನಿಲ್ದಾಣ ಇಂಥ ಭಾರಿ ಬಂಡವಾಳದ ನಿರ್ಮಾಣಗಳನ್ನೇ ಯೋಜನಾತಜ್ಞರು ಮುಂದೊಡ್ಡುತ್ತಾರೆ. ಅಧಿಕಾರಿ ವರ್ಗ, ರಾಜಕಾರಣಿಗಳು ಮತ್ತು ಗುತ್ತಿಗೆದಾರರೆಂಬ ಮೂರು ಭುಜಗಳ ಉಕ್ಕಿನ ತ್ರಿಕೋನಕ್ಕೆ ಅದೇ ಮೃಷ್ಟಾನ್ನವಾಗಿದೆ.
- ಮೂಲ ಸೌಲಭ್ಯ ಎಂದರೆ ಅವಿಷ್ಟೇ ಅಲ್ಲ. ಅವೆಲ್ಲಕ್ಕೆ ಬುನಾದಿಯಾಗಿ ಪ್ರಕೃತಿಯ ಮೂಲ ಸೌಲಭ್ಯಗಳು (ಕೆರೆ-ತೊರೆ, ಗೋಮಾಳ, ಅರಣ್ಯಗಳು) ಬೆಳೆಯಬೇಕು. ಜೊತೆಗೆ ಸಾಮಾಜಿಕ ಮೂಲಸೌಲಭ್ಯಗಳು (ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ) ಬೆಳೆಯಬೇಕು.ಜಲಸಾಕ್ಷರತೆ, ಪರಿಸರ ಸಾಕ್ಷರತೆಗೆ ಆದ್ಯತೆ ನೀಡಿದರೆ ಸುಸ್ಥಿರ ಭವಿಷ್ಯದತ್ತ ರಾಜ್ಯವನ್ನು ಮುನ್ನಡೆಸಲು ಅಷ್ಟೊಂದು ಶ್ರಮ ಬೇಕಾಗಿಯೇ ಇಲ್ಲ.
ಪರಿಹಾರಗಳು
[ಬದಲಾಯಿಸಿ]- ಪರಿಸರ ನಿರ್ವಹಣೆಯ ಹತ್ತು ಮಾದರಿಗಳು
- ಹವಾಮಾನ ಬದಲಾವಣೆಯ ಸಂಕಟಗಳನ್ನು ಎದುರಿಸಬೇಕೆಂದರೆ ನೀರಿನ ನಿರ್ವಹಣೆ, ಬರ ನಿರ್ವಹಣೆ, ತ್ಯಾಜ್ಯ ಮರುಬಳಕೆ ಮತ್ತು ಶಕ್ತಿ ಉತ್ಪಾದನೆಯ ಸಮಗ್ರ ತಂತ್ರಜ್ಞಾನ ಜನರಿಗೆ ಲಭ್ಯವಿರಬೇಕು. ಅದರಲ್ಲೇ ಉದ್ಯೋಗ ಸೃಷ್ಟಿ ಕೂಡ ಸಾಧ್ಯವಾಗಬೇಕು. ಇವುಗಳ ಬಗ್ಗೆ ಲೇಖನ, ಭಾಷಣಗಳು ಬಂದರೆ ಸಾಲದು; ಯುವಜನರಿಗೆ ಅವೆಲ್ಲ ಕಣ್ಣಾರೆ ನೋಡಲು ಸಿಗಬೇಕು. ಅಂಥ ಹತ್ತು ಮಾದರಿ ಪ್ರಾತ್ಯಕ್ಷಿಕೆಗಳನ್ನು ಇನ್ನು ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು.
- 1. ಮಳೆಕೊಯ್ಲಿನ ಪ್ರಾತ್ಯಕ್ಷಿಕೆ: ಬರಪೀಡಿತ ಪ್ರತಿ ಜಿಲ್ಲೆಯ ಯಾವುದೇ ಒಂದು ಹಳ್ಳಿಯಲ್ಲಿ ಒಂದು ನೈಜ ಮಳೆನೀರಿನ ಘಟಕವನ್ನು ಆರಂಭಿಸಬೇಕು. ಜನವರಿಯಿಂದ ಜೂನ್‌ವರೆಗೆ ಬಾಯಾರಿಕೆಗೆ ಹಾಗೂ ಅಡುಗೆಗೆ ಸಾಲುವಷ್ಟು ನೀರಿನ ಉಸ್ತುವಾರಿ ಹೇಗೆಂದು ಜನರಿಗೆ ತಿಳಿಯಬೇಕು. ಅಂಥ ಕೊಯ್ಲುಕಟ್ಟೆಯ ನಿರ್ಮಾಣಕ್ಕೆ ಅದೇ ಹಳ್ಳಿಯ ಜನರಿಗೆ ತರಬೇತಿ ನೀಡಿ, ತ್ಯಾಜ್ಯನೀರಿನ ಯುಕ್ತಬಳಕೆಯ ವಿಧಾನವನ್ನೂ ತಿಳಿಸಬೇಕು.
- 2. ಬದಲೀ ಶಕ್ತಿಯ ಪ್ರಾತ್ಯಕ್ಷಿಕೆ: ರಾಜ್ಯದ ಒಂದಾದರೂ ಇಡೀ ಪಟ್ಟಣ ಸೌರಶಕ್ತಿ, ಗಾಳಿಶಕ್ತಿ ಮತ್ತು ತನ್ನದೇ ತಿಪ್ಪೆಶಕ್ತಿಯಿಂದ ತನ್ನ ಅಗತ್ಯದ 100% ವಿದ್ಯುತ್ತನ್ನು ಪಡೆಯುವಂತೆ ಯೋಜನೆ ರೂಪಿಸಬೇಕು. ಪ್ರತಿ ತಾಲ್ಲೂಕಿನ ಒಂದು ಪಂಚಾಯ್ತಿ ಕಚೇರಿ ಇಂಥ ನವೀಕೃತ ಶಕ್ತಿಮೂಲಗಳಿಂದ ತನಗೆ ಬೇಕಾದ ವಿದ್ಯುತ್ ಶಕ್ತಿಯನ್ನು ತಾನೇ ಪಡೆಯುವಂತಿರಬೇಕು.
- 3. ಜೈವಿಕ ಇಂಧನದ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯಲ್ಲೂ ಒಂದು ಶಕ್ತಿವನವನ್ನು ಬೆಳೆಸಬೇಕು. ಇಂಧನ ಸಸ್ಯಗಳ ಮೊಳಕೆ, ನರ್ಸರಿಯಿಂದ ಆರಂಭಿಸಿ ಎಣ್ಣೆ ತೆಗೆಯುವ ಗಾಣ, ಆ ಎಣ್ಣೆಯಿಂದ ಓಡುವ ಪಂಪ್‌ಸೆಟ್ ತನಕ ಎಲ್ಲವೂ ಅಲ್ಲಿರಬೇಕು. ಕನಿಷ್ಠ ಒಂದು ಹಳ್ಳಿಯಾದರೂ ಇನ್ನು ಹತ್ತು ವರ್ಷಗಳಲ್ಲಿ ತನ್ನ ಮೋಟಾರು ಇಂಧನ ಅಗತ್ಯದ ಶೇ. 50ರಷ್ಟನ್ನಾದರೂ ತಾನೇ ಉತ್ಪಾದಿಸುವಂಥ ಮಾದರಿ ಅಲ್ಲಿ ರೂಪುಗೊಳ್ಳಬೇಕು.
- 4 ಜಲಪೂರಣ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯ ಒಂದಾದರೂ ಅತಿಚಿಕ್ಕ ಜಲಾನಯನ ಪ್ರದೇಶದ ಪ್ರತಿ ಹನಿ ಮಳೆಯೂ ನೆಲದಲ್ಲಿ ಇಂಗುವಂತೆ ಮಾದರಿ ರೂಪಿಸಬೇಕು. ಎಂಥ ದೊಡ್ಡ ಮಳೆ ಬಂದರೂ ನೀರಿನ ಒಂದು ಹನಿಯೂ ಹಳ್ಳದಗುಂಟ ಹರಿದು ಹೋಗದಂಥ ವ್ಯವಸ್ಥೆ ಅಲ್ಲಿರಬೇಕು.
- 5. ಉಪ್ಪಿನಂಶ ನಿವಾರಣಾ ಘಟಕ: ಕರಾವಳಿಯ ಪ್ರತಿ ತಾಲ್ಲೂಕಿನಲ್ಲಿ ಸಮುದ್ರದ ನೀರನ್ನು ಸೌರಶಕ್ತಿಯ ಮೂಲಕ ಸಿಹಿನೀರನ್ನಾಗಿ ಪರಿವರ್ತಿಸುವ ಒಂದೊಂದು ಘಟಕವನ್ನು ಸ್ಥಾಪಿಸಬೇಕು.
- 6. ಗೋಬರ್ ಅನಿಲದ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯಲ್ಲೂ ಒಂದಾದರೂ ಮಾದರಿ ಡೈರಿಯನ್ನು ಸ್ಥಾಪಿಸಬೇಕು. ಹಾಲು ಉತ್ಪಾದಿಸುವ ಎಲ್ಲರ ಮನೆಯಲ್ಲೂ ಗೋಬರ್ ಅನಿಲದಿಂದ ವಿದ್ಯುತ್ ಉತ್ಪಾದನೆ, ನೀರಿನ ಮಿತಬಳಕೆ ಹಾಗೂ ಎರೆಹುಳು ಗೊಬ್ಬರ ಪ್ರಾತ್ಯಕ್ಷಿಕೆ ಇರಬೇಕು.
- 7. ಇಂಧನರಹಿತ ಇಟ್ಟಿಗೆ ಬಟ್ಟಿ: ಸೌದೆಯ ಅಥವಾ ಭತ್ತದ ಹೊಟ್ಟಿನ ಶಾಖವನ್ನು ಬಳಸದೆ ಹಸಿಮಣ್ಣಿನ ಒತ್ತಿಟ್ಟಿಗೆ ತಯಾರಿಸುವ ಘಟಕವೊಂದನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಶ್ರಮಶಕ್ತಿಯಿಂದಲೇ ಅಂಥ ಇಟ್ಟಿಗೆಯಿಂದ ಕಟ್ಟಿದ ಮನೆಯೊಂದು ನೋಡಲು ಸಿಗಬೇಕು.
- 8. ಹೂಳುಗುಂಡಿ ಅನಿಲ ಘಟಕ: ಪ್ರತಿ ಜಿಲ್ಲೆಯಲ್ಲೂ ಒಂದು ಪಟ್ಟಣದ ಎಲ್ಲ ಜೈವಿಕ ತ್ಯಾಜ್ಯಗಳನ್ನೂ ಒಂದೆಡೆ ಸಂಗ್ರಹಿಸಿ ಮೀಥೇನ್ ಅನಿಲದಿಂದ ವಿದ್ಯುತ್ ಉತ್ಪಾದನೆ ಹೇಗೆಂದು ತೋರಿಸಬೇಕು. ಹೀಗೆ ಪಡೆದ ವಿದ್ಯುತ್ ಶಕ್ತಿಯಿಂದ ಅದೇ ಊರಿನ ಚರಂಡಿ ನೀರನ್ನು ಸಂಸ್ಕರಿಸಿ, ಆ ನೀರಿನಲ್ಲಿ ಶಕ್ತಿವನವನ್ನು ಬೆಳೆಸಬೇಕು.
- 9. ಜೈವಿಕ ತ್ಯಾಜ್ಯ ಮರುಬಳಕೆ ಪ್ರಾತ್ಯಕ್ಷಿಕೆ: ರಾಜ್ಯದ ಒಂದಾದರೂ ಅಕ್ಕಿಗಿರಣಿಯ ಬಳಿ ಎಲ್ಲ ಭತ್ತದ ಹೊಟ್ಟನ್ನು ಪ್ಲೈಬೋರ್ಡ್‌ಗಳನ್ನಾಗಿ ಪರಿವರ್ತಿಸುವ ಮಾದರಿ ಘಟಕ ಇರಬೇಕು. ರೈತರು ಬಿಸಾಕುವ ಹೆಚ್ಚುವರಿ ಕಬ್ಬಿನ ರವುದಿ, ಮೆಕ್ಕೆ ಜೋಳದ ದಂಟು, ತೆಂಗಿನ ನಾರು ಇವುಗಳನ್ನೂ ತರಿಸಿ ಜೈವಿಕ ಪ್ಲಾಸ್ಟಿಕ್ ಉತ್ಪಾದನೆಯ ಘಟಕ ಅಲ್ಲಿರಬೇಕು. ಅದಕ್ಕೆ ಬೇಕಾದ ಶಕ್ತಿ ಕೂಡ ಅಲ್ಲೇ ಸಿಗಬೇಕು.
- 10. ಪರಿಸರ ನಿರ್ವಹಣಾ ಡಿಪ್ಲೊಮಾ: ರಾಜ್ಯದ ಒಂದಾದರೂ ಜಲಾನಯನ ಪ್ರದೇಶದಲ್ಲಿ ಈ ಒಂಬತ್ತೂ ಪ್ರಾತ್ಯಕ್ಷಿಕೆಗಳು ಯಾವುದೇ ದೋಷವಿಲ್ಲದೆ ಕೆಲಸ ನಿರ್ವಹಿಸುವ ವ್ಯವಸ್ಥೆಯಾಗಬೇಕು. ಅದನ್ನು ವರ್ಷವಿಡೀ ನಿರ್ವಹಿಸುವಲ್ಲಿ ತರಬೇತಿ ಪಡೆದವರಿಗೆ ಡಿಪ್ಲೊಮಾ ನೀಡಬೇಕು.
- ನಾವೂ ಅಷ್ಟೆ, ಯೋಜನೆಗಳನ್ನು ರೂಪಿಸುವಾಗ ಕಾಡಾನೆ, ಸಿಂಗಳೀಕ, ಕಾಳಿಂಗ ಸರ್ಪಗಳು, ಮಂಗಟ್ಟೆ ಪಕ್ಷಿಗಳೇ ಮುಂತಾದ ಪ್ರಾಣಿಲೋಕದ ಸದಸ್ಯರು ನಮ್ಮ ನಾಡಿನ ಜೀವಿಗಳು ಎಂಬುದೂ ಗಮನಕ್ಕೇ ತಂದುಕೊಳ್ಳಬೇಕು. ಕರ್ನಾಟಕದ ಅಭಿವೃದ್ಧಿ ಎಂದರೆ ಮತ ಹಾಕುವವರನ್ನು ಮೆಚ್ಚಿಸುವುದಷ್ಟೇ ಅಲ್ಲ.[೫]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ About Karnataka: Information Exports, Economy & Geography
- ↑ "Economy of Karnataka". Archived from the original on 2016-05-14. Retrieved 2016-11-08.
- ↑ http://kannada.eenaduindia.com/Bangalore/BangaloreCity/2016/11/02220653/Lost-the-top-spot-in-Karnataka-in-investment-Deshpande.vpf ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಕರ್ನಾಟಕ]
- ↑ "ಬಂಡವಾಳ ಹೂಡಿಕೆ ಆಕರ್ಷಣೆಗೆ ಎರವಾಗದಿರಲಿ;ಡಿ. ಮುರಳೀಧರ;8 Nov, 2016". Archived from the original on 2016-11-08. Retrieved 2016-11-08.
- ↑ ನೀಲನಕ್ಷೆ ಎಷ್ಟೋ ಇವೆ, ಕಡತಗಳಾಚೆ ಬರಬೇಕಿವೆ;ನಾಗೇಶ ಹೆಗಡೆ;11 Nov, 2016
ಹೆಚ್ಚಿನ ಓದಿಗೆ
[ಬದಲಾಯಿಸಿ]- ಕರ್ನಾಟಕದ ನಾಳೆಗಳು;ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ವಿಭಿನ್ನ;ಚಿಂತನೆ;ಡಾ. ಅಶ್ವಿನ್ ಮಹೇಶ್;10 Nov, 2016 Archived 2016-11-10 ವೇಬ್ಯಾಕ್ ಮೆಷಿನ್ ನಲ್ಲಿ.