ಕರ್ಕಾಟಕ ಸಂಕ್ರಾಂತಿ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ : ಸಮಭಾಜಕ ವೃತ್ತಕ್ಕೆ (ಭೂಮಧ್ಯರೇಖೆ-ಟೆರ್ರೆಸ್ಟ್ರಿಯಲ್ ಇಕ್ವೇಟರ್) 23 ಡಿಗ್ರಿ 27’ಉತ್ತರದಲ್ಲಿ ಭೂಗೋಳದ ಮೇಲೆ ಎಳೆದ ಸಮಾಂತರ ಅಲ್ಪವೃತ್ತ (ಟ್ರಾಪಿಕ್ ಆಫ್ ಕ್ಯಾನ್ಸರ್). ಇದು ಸೂರ್ಯನ ದೈನಂದಿನ ಪಥಗಳ (ಸೂರ್ಯ ಮೂಡುವಲ್ಲಿಂದ ಕಂತುವ ತನಕ ಒಂದು ಹಗಲು ಆಕಾಶದಲ್ಲಿ ಸಾಗಿದ ದಾರಿಯ ಹೆಸರು ದೈನಂದಿನ ಪಥ) ಅತಿ ಉತ್ತರ ಗಡಿ ; ಎಂದರೆ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕಿಂತ ಉತ್ತರಕ್ಕೆ ಸೂರ್ಯನ ಸಂಚಾರವಿಲ್ಲ. ದೈನಂದಿನ ಪಥಗಳನ್ನು ನೆಲದ ಮೇಲಿನ ಯಾವುದೇ ಸ್ಥಿರ ನೆಲೆಗಳ ಆಧಾರದಿಂದ ಗುರುತಿಸುತ್ತ ಹೋಗಬೇಕು. ಆಗ ಒಂದು ವಿಶೇಷವನ್ನು ಗಮನಿಸಬಹುದು; ಡಿಸೆಂಬರ್ 21 ರಿಂದ ಜೂನ್ 22ರ ತನಕ ಈ ಪಥಗಳು ಕ್ರಮೇಣ ಉತ್ತರದೆಡೆಗೆ ಜಾರುತ್ತ ಸಾಗುವುವು; ಜೂನ್ 22ರಂದು ಉತ್ತರ ಎಲ್ಲೆಯನ್ನು ತಲಪಿ ಮರುದಿನದಿಂದ ದಕ್ಷಿಣದೆಡೆಗೆ ಜಾರತೊಡಗುವುವು. ಕರ್ಕಾಟಕ ಸಂಕ್ರಾಂತಿ ವೃತ್ತವೆಂಬ ಹೆಸರು ಉತ್ತರದ ಎಲ್ಲೆಗೆ ರೂಢಿಗೆ ಬಂದ ದಿವಸಗಳಂದು (ಸಹಸ್ರಾರು ವರ್ಷಗಳ ಹಿಂದೆ) ಕರ್ಕಾಟಕ ರಾಶಿ ಸೂರ್ಯನ ಅತಿ ಉತ್ತರಸ್ಥಾನವಾಗಿತ್ತು. ಸೂರ್ಯ ಈ ರಾಶಿಗೆ ಬಂದ ದಿವಸ ಕರ್ಕಾಟಕ ಸಂಕ್ರಮಣ; ಅಂದು ಸೂರ್ಯನದೈನಂದಿನ ಪಥ ವಿಷುವದ್ವೖತ್ತದಿಂದ (ಸೆಲೆಸ್ಟಿಯಲ್ ಇಕ್ವೇಟರ್) 23 ಡಿಗ್ರಿ 27’ ಉತ್ತರದಲ್ಲಿ ಅದಕ್ಕೆ ಸಮಾಂತರವಾದ ಅಲ್ಪ ವೃತ್ತ.
ಭೂಗೋಳದ ಮೇಲೆ ಇದರ ಸಂವಾದಿ ವೃತ್ತವೇ ಕರ್ಕಾಟಕ ಸಂಕ್ರಾಂತಿ ವೃತ್ತ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಾರ್ಷಿಕ ಚಲನೆಯಲ್ಲಿ ಸೂರ್ಯನ ಸಂಚಾರ, ಕರ್ಕಾಟಕ ಸಂಕ್ರಮಣ ದಿನದ ದೈನಂದಿನ ಪಥಕ್ಕಿಂತಲೂ ಉತ್ತರಕ್ಕೆ ಸಾಗುವುದು. ಆದ್ದರಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ವ್ಯಾಖ್ಯೆಯನ್ನು ಈ ಪರಿಚ್ಛೇದದ ಆರಂಭದಲ್ಲಿ ಬರೆದಂತೆ ತೆಗೆದುಕೊಳ್ಳಬೇಕು.