ಕ.ವೆಂ.ರಾಘವಾಚಾರ್
ಗೋಚರ
- ಕ.ವೆಂ.ರಾಘವಾಚಾರ್ (೧೯೦೪-೭೭). ಪ್ರಸಿದ್ಧ ವಿದ್ವಾಂಸರು. ಗ್ರೀಕ್ ಭಾಷೆಯಲ್ಲಿ ಪರಿಣತರಾಗಿದ್ದ ಇವರು ಆ ಭಾಷೆಯ ಅನೇಕ ನಾಟಕಗಳನ್ನು ಕನ್ನಡಿಸಿದ್ದಾರೆ. ಇವರು ತುಮಕೂರು ಜಿಲ್ಲೆ ಕಡಬದವರು. ಹುಟ್ಟಿದ್ದು ತಾಯಿಯ ತವರಾದ ಬೇಲೂರಿನಲ್ಲಿ. ಇವರದು ಶ್ರೀವೈಷ್ಣವ ಮನೆತನ. ಇವರ ತಾತ ಶ್ರೀನಿವಾಸ ಭಟ್ಟರು ಆಚಾರನಿಷ್ಠರೂ ಶಾಸ್ತ್ರವೇತ್ತರೂ ಘನಪಂಡಿತರೂ ಆಗಿದ್ದರು. ತಂದೆ ವೆಂಕಟಾಚಾರ್ಯರು, ತಾಯಿ ತಿರುಮಲಮ್ಮ, ಅಣ್ಣ ರಾಮಸ್ವಾಮಿ, ಜೊತೆಗೆ ಒಬ್ಬ ತಂಗಿ. ತಂದೆ ವೆಂಕಟಾಚಾರ್ಯರು ತುಮಕೂರಿನಲ್ಲಿ ವಕೀಲರಾಗಿದ್ದರು. ಚಿಕ್ಕಂದಿನಲ್ಲಿಯೇ ತಾಯಿಯನ್ನೂ ಅಣ್ಣನನ್ನೂ ಕಳೆದುಕೊಂಡ ರಾಘವಾಚಾರ್ಯರು ಚಿಕ್ಕಪ್ಪ ಶ್ರೀನಿವಾಸಯ್ಯಂಗಾರರ ಪೋಷಣೆಯಲ್ಲಿ ಬೆಳೆದು ಅಭಿವೃದ್ಧಿಗೆ ಬಂದರು.
ಶಿಕ್ಷಣ
[ಬದಲಾಯಿಸಿ]- ರಾಘವಾಚಾರ್ಯರ ಪ್ರಾಥಮಿಕ ವ್ಯಾಸಂಗ ತುಮಕೂರಿನಲ್ಲಿ ಎ.ವಿ. ಸ್ಕೂಲಿನಲ್ಲಿಯೂ ಪ್ರೌಢಶಾಲೆಯ ವ್ಯಾಸಂಗ ಕೊಲೊಜೆಯೇಟ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅಲ್ಲಿಯ ಅಧ್ಯಾಪಕರಾದ ಕೃಷ್ಣಸ್ವಾಮಿ ಅಯ್ಯರ್ ಮೊದಲಾದವರ ಮಾರ್ಗದರ್ಶನ ರಾಘವಾಚಾರ್ಯರ ಮೇಲೆ ತುಂಬ ಪ್ರಭಾವ ಬೀರಿತು. ಆ ಕಾಲಕ್ಕೆ ಅಲ್ಲಿ ಹಬ್ಬಿದ ಪ್ಲೇಗಿನಿಂದಾಗಿ ಬೆಂಗಳೂರಿನ ಕೋಟೆ ಎ.ವಿ. ಸ್ಕೂಲಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದರು. ಅಲ್ಲಿ ಪತ್ತೇದಾರಿ ಕಾದಂಬರಿಕಾರರಾದ ವಿದ್ವಾನ್ ಬಾಲಸರಸ್ವತಿಯವರ ಶಿಷ್ಯರಾಗುವ ಯೋಗ ಒದಗಿತು; ಅವರ ಪ್ರಭಾವಕ್ಕೂ ಒಳಗಾದರು. ಈ ಮಧ್ಯೆ ತಮ್ಮ 16ನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಬೆಂಗಳೂರಿನಲ್ಲಿ ಚಿಕ್ಕಪ್ಪನವರ ಆಶ್ರಯದಲ್ಲಿದ್ದುಕೊಂಡು ವೆಸ್ಲಿಯನ್ ಹೈಸ್ಕೂಲಿಗೆ ಸೇರಿದರು. ಅಲ್ಲಿ ಉಪಾಧ್ಯಾಯರಾಗಿದ್ದ ಎಸ್. ವೆಂಕಟರಾಮನ್ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದರು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜನ್ನು ಸೇರಿ (1925-28) ಗಣಿತ ಮತ್ತು ಭೌತಶಾಸ್ತ್ರಗಳನ್ನು ವ್ಯಾಸಂಗ ಮಾಡಿ ಬಿ.ಎ. ಪದವಿ ಗಳಿಸಿದರು. ಆ ಕಾಲೇಜಿನ ಅಧ್ಯಾಪಕ ವರ್ಗದಲ್ಲಿದ್ದ ಮೆಟ್ಕಾಫ್, ವೆಂಕಟರಾವ್ ತೆಲಂಗ್,ಬಿ.ಎಸ್. ಮಾಧವರಾವ್, ಸಿ.ಎನ್. ಶ್ರೀನಿವಾಸಯ್ಯಂಗಾರ್, ವೆಂಕಟೇಶಾಚಾರ್ಯ, ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರೀ ಮುಂತಾದವರ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡರು. ಅನಂತರ ಮೈಸೂರಿಗೆ ಬಂದು ಕನ್ನಡ ಎಂ.ಎ. ತರಗತಿಗೆ ಮಹಾರಾಜ ಕಾಲೇಜು ಸೇರಿದರು (1928). ಅಲ್ಲಿ ಇಂಗ್ಲಿಷಿನ ಪ್ರಾಧ್ಯಾಪಕರೂ ಕನ್ನಡದ ಗೌರವ ಪ್ರಾಧ್ಯಾಪಕರೂ ಆಗಿದ್ದ ಬಿ.ಎಂ. ಶ್ರೀಕಂಠಯ್ಯನವರ ಪ್ರಭಾವಕ್ಕೆ ಒಳಗಾದರು. ಜೊತೆಗೆ ಟಿ.ಎನ್. ಸುಬ್ಬರಾಯಶಾಸ್ತ್ರೀ ಡಿ. ಶ್ರೀನಿವಾಸಾಚಾರ್ಯ, ಸಿ. ಆರ್. ನರಸಿಂಹಶಾಸ್ತ್ರಿ, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮೊದಲಾದ ಗುರುವರ್ಯರ ಮಾರ್ಗದರ್ಶನವೂ ಇವರಿಗೆ ಲಭಿಸಿತು. 1931 ರಲ್ಲಿ ಎಂ.ಎ. ಪದವಿ ಪಡೆದರು. ತೀ. ನಂ. ಶ್ರೀಕಂಠಯ್ಯ ಮತ್ತು ಜಿ.ಪಿ. ರಾಜರತ್ನಂ ಇವರ ಸಹಪಾಠಿಗಳಾಗಿದ್ದರು. ಎಂ. ಎ. ಪದವಿ ಪಡೆದ ಕೂಡಲೇ ಕೆಲಸ ಸಿಕ್ಕದಿದ್ದುದರಿಂದ ರಾಘವಾಚಾರ್ಯರು ಶಿಕ್ಷಣ ಕಾಲೇಜಿಗೆ ಸೇರಿ 1932ರಲ್ಲಿ ಬಿ.ಟಿ. ಪದವಿಯನ್ನು ಪಡೆದರು. ಆಗಲೂ ಕೆಲಸ ಸಿಕ್ಕದೇ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಬೆಂಗಳೂರಿಗೆ ಹೋಗಿ ಪಂಡಿತ ಪಿ.ಎಂ. ಸೋಮಸುಂದರಂ ಅವರಿಂದ ತಮಿಳನ್ನೂ ಕಂಟೋನ್‍ಮೆಂಟಿನ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಗ್ರೀಕ್ ಪಂಡಿತರಾಗಿದ್ದ ಎಚ್. ಕೆ. ಮೌಲ್ಟನ್ ಅವರಿಂದ ಗ್ರೀಕನ್ನೂ ಅಭ್ಯಾಸ ಮಾಡಿದ ಇವರು, ಅನಂತರ ಆ ಭಾಷೆ ಮತ್ತು ಸಾಹಿತ್ಯಗಳಲ್ಲಿ ಒಳ್ಳೆಯ ಪಾಂಡಿತ್ಯವನ್ನು ಸಂಪಾದಿಸಿಕೊಂಡರು.
ಉದ್ಯೋಗ
[ಬದಲಾಯಿಸಿ]- ಬೆಂಗಳೂರು ಇಂಟರ್‍ಮೀಡಿಯೆಟ್ ಕಾಲೇಜು ಮತ್ತು ಜಿಲ್ಲಾ ನಾರ್ಮಲ್ ಸ್ಕೂಲಿನಲ್ಲಿ ಸ್ವಲ್ಪಕಾಲ ಅಧ್ಯಾಪಕರಾಗಿ ಕೆಲಸಮಾಡಿದ ರಾಘವಾಚಾರ್ಯರು ಅನಂತರ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನಸಾಹಿತ್ಯ ಸಹಾಯಕರಾಗಿ ನೇಮಕಗೊಂಡರು. ನಿಘಂಟಿನ ಪ್ರಧಾನಸಂಪಾದಕರಾಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು ಆಚಾರ್ಯರ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದರು. ರಾಘವಾಚಾರ್ಯರು ವೆಂಕಟನಾರಣಪ್ಪನವರಿಗೆ ಬಲಗೈಯಂತಿದ್ದು ನಿಘಂಟಿನ ಕಾರ್ಯಭಾರವನ್ನು ಅತ್ಯಂತ ಆಸ್ಥೆಯಿಂದ ನಿರ್ವಹಿಸುತ್ತಿದ್ದರು. ಸುಮಾರು 9 ವರ್ಷಗಳ ಕಾಲ ನಿಘಂಟಿನ ಕೆಲಸ ಮಾಡಿದ ಮೇಲೆ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. ಈ ಮಧ್ಯೆ 1943ರಲ್ಲಿ ವೆಂಕಟನಾರಣಪ್ಪನವರು ತೀರಿಕೊಂಡ ಮೇಲೆ ಎಂ. ಆರ್. ಶ್ರೀನಿವಾಸಮೂರ್ತಿ ಅವರು ನಿಘಂಟಿನ ಪ್ರಧಾನ ಸಂಪಾದಕರಾದರು. ಆಗ ಮತ್ತೆ ನಿಘಂಟು ಕಚೇರಿಗೆ ಹೋದ ರಾಘವಾಚಾರ್ಯರು ಆ ಕಾರ್ಯವನ್ನು ಮುಗಿಸಿ 1946 ರಲ್ಲಿ ತಮ್ಮ ಮಹಾರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ಭಾಷಾಶಾಸ್ತ್ರವನ್ನು ಬೋಧಿಸುತ್ತಿದ್ದ ಆಚಾರ್ಯರು ಆ ವಿಭಾಗದ ಉಪಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿ 1959ರಲ್ಲಿ ನಿವೃತ್ತರಾದರು. ಅನಂತರ ದೆಹಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮೊಟ್ಟಮೊದಲ ಅಧ್ಯಾಪಕರಾಗಿ ನೇಮಕಗೊಂಡ ಆಚಾರ್ಯರು ಸುಮಾರು ಹತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. (1969).
ಕನ್ನಡ ನಿಘಂಟು ಮತ್ತು ಇಂಗ್ಲಿಷ್-ಕನ್ನಡ ನಿಘಂಟುಗಳ ಕೆಲಸ
[ಬದಲಾಯಿಸಿ]- ಕನ್ನಡ ನಿಘಂಟು ಮತ್ತು ಇಂಗ್ಲಿಷ್-ಕನ್ನಡ ನಿಘಂಟುಗಳಿಗೆ ರಾಘವಾಚಾರ್ಯರು ಸಲ್ಲಿಸಿರುವ ಸೇವೆ ಸ್ಮರಣೀಯವಾದುದು. ಹಲವಾರು ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದ ಆಚಾರ್ಯರಿಂದ ನಿಘಂಟಿನ ಕಾರ್ಯಕ್ಕೆ ಬಹಳಷ್ಟು ಪ್ರಯೋಜನವಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿಗೆ ಮೊದಲಿನಿಂದ ಕಡೆಯ ತನಕ ನಿರಂತರವಾಗಿ ದುಡಿದು, ಅಸಂಖ್ಯಾತ ಸಾರವತ್ತಾದ ಶಬ್ದಗಳನ್ನು ಸೃಷ್ಟಿಸಿ ಶಬ್ದಬ್ರಹ್ಮರೆನಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿಗೆ ಅದರ ಪ್ರಾರಂಭಾವಸ್ಥೆಯಿಂದ ದುಡಿದವರಲ್ಲಿ ರಾಘವಾಚಾರ್ಯರೂ ಒಬ್ಬರು. ಇವರು 1943 ರಿಂದ 1969 ರ ವರೆಗೆ ಸಂಪಾದಕ ಸಮಿತಿಯ ಸದಸ್ಯರಾಗಿದ್ದರು. ಆಮೇಲೆ 1969 ರಿಂದ 1971 ರ ವರೆಗೆ ಸಂಪಾದಕ ಸಮಿತಿಯ ಉಪಾಧ್ಯಕ್ಷರಾಗಿ, ತರುವಾಯ ಆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಇಂಗ್ಲಿಷ್ ಸಂಸ್ಕೃತ ತಮಿಳು ಭಾಷೆಗಳಲ್ಲಿಯೂ ಇವರಿಗಿದ್ದ ಆಳವಾದ ಪಾಂಡಿತ್ಯ ಕನ್ನಡ ನಿಘಂಟಿನ ಕಾರ್ಯಕ್ಕೆ ವಿಶೇಷವಾದ ಪ್ರಯೋಜನವಾಯಿತು.
ಸಮಾಜ ಸೇವೆ - ಸ್ವಾತಂತ್ರ್ಯ ಹೋರಾಟದ ನಾಯಕರೊಡನೆ
[ಬದಲಾಯಿಸಿ]- ಆಚಾರ್ಯರಿಗೆ ಬಾಲ್ಯದಿಂದಲೂ ಸೇವಾಕಾರ್ಯದಲ್ಲಿ ಅಮಿತವಾದ ಉತ್ಸಾಹ ಮತ್ತು ಶ್ರದ್ಧೆ. 1920ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಖಾದಿಧಾರಣೆ ಮಾಡಿದರು. ಅಂದಿನಿಂದ ಇವರ ಬಾಳಿನುದ್ದಕ್ಕೂ ಖಾದಿಯೇ ಇವರ ಖಾಸಗಿ ಮತ್ತು ಕಚೇರಿ ಉಡುಪಾಯಿತು. ಆ ಕಾಲಕ್ಕೇ ಇವರು ಕೋಹಿನೂರು ಸಂಘ ಎಂಬ ವಿದ್ಯಾರ್ಥಿ ಸಂಸ್ಥೆಯನ್ನು ಕಟ್ಟಿ ಎಂಟು ವರ್ಷಗಳು ಅದರ ಕಾರ್ಯ ಕಲಾಪಗಳನ್ನು ನಿರ್ವಹಿಸಿದರು. ಹಿಂದೂಸ್ತಾನಿ ಸೇವಾದಳದ ಬೆಂಗಳೂರು ಶಾಖೆಯ ಸ್ವಯಂಸೇವಕ ತಂಡದ ಸದಸ್ಯರಾಗಿ 1924 ರ ಡಿಸೆಂಬರ್ ತಿಂಗಳಲ್ಲಿ ಬೆಳಗಾಂವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿಸೇವೆ ಸಲ್ಲಿಸಿದರು. ಹಾಗೆಯೇ 1927 ರ ಡಿಸೆಂಬರ್ ತಿಂಗಳಲ್ಲಿ ಮದರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲೂ ಸ್ವಯಂ ಸೇವಕರಾಗಿ ಭಾಗವಹಿಸಿದರು. ಇದೇ ವರ್ಷದಲ್ಲಿ ಗಾಂಧೀಜಿ ಅವರು ನಂದಿಬೆಟ್ಟಕ್ಕೆ ಬಂದಿದ್ದಾಗ ಅವರ ಸಾನ್ನಿಧ್ಯ ಪಡೆದು ಸೇವೆಯನ್ನೂ ಮಾಡಿದ್ದರು. ಅಲ್ಲದೇ ರಾಜಾಜಿ, ಮಹದೇವ ದೇಸಾಯಿ, ಮದನಮೋಹನ ಮಾಲವೀಯ, ಮೋತಿಲಾಲ್ ನೆಹರು, ಕಸ್ತೂರಬಾ ಮೊದಲಾದ ರಾಷ್ಟ್ರನಾಯಕರ ಪರಿಚಯ ಸಾಹಚರ್ಯಗಳನ್ನೂ ಪಡೆದರು.
ಕನ್ನಡ ಸಾಹಿತ್ಯ ಸೇವೆ
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಕಾರ್ಯಗಳಲ್ಲೂ ಆಚಾರ್ಯರು ಸಹಕರಿಸಿದ್ದಾರೆ. ಪರಿಷತ್ತಿನ ಕಾರ್ಯದರ್ಶಿಗಳಾಗಿ (1942-43; 1944-45; 1946-47), ಕನ್ನಡ ನುಡಿಯ ಸಂಪಾದಕರಾಗಿ ಇವರು ಸೇವೆ ಸಲ್ಲಿಸಿದರಲ್ಲದೆ ಕನ್ನಡ ಬಾವುಟ, ಬಿ.ಎಂ. ಶ್ರೀ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥ `ಸಂಭಾವನೆ' ಈ ಕೃತಿಗಳ ಪ್ರಕಟಣೆಯಲ್ಲೂ ನೆರವಾಗಿದ್ದಾರೆ. ರಾಘವಾಚಾರ್ಯರ ಸಾಹಿತ್ಯ ಸೇವೆ ಬಹುಮುಖವಾದುದು. ಗ್ರೀಕ್ ಮೂಲದಿಂದಲೇ ಕನ್ನಡಕ್ಕೆ ಹಲವಾರು ನಾಟಕಗಳನ್ನು ತಂದುಕೊಟ್ಟದ್ದು ಇವರ ವಿಶಿಷ್ಟವಾದ ಕೊಡುಗೆ. ಇವರು ಭಾಷಾಂತರಿಸಿದ ಸಾಫೊಕ್ಲಿಸ್‍ನ ಅಂತಿಗೊನೆ 1956 ರಲ್ಲಿ ಪ್ರಕಟವಾಯಿತು. ಅನಂತರ ಇವರು ಭಾಷಾಂತರಿಸಿದ ಅಗಮೆಮ್ನನ್, ಒಯ್ದಿಪೌಸ್ ದೊರೆ, ಕಪ್ಪೆಗಳು (ಫ್ರಾಗ್ಸ್) - ಇವು ಮೂರು ಗ್ರೀಕ್ ನಾಟಕಗಳು ಎಂಬ ಹೆಸರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದವು. ಜನ್ನನ ಯಶೋಧರ ಚರಿತೆಯ ಒಂದು ಹೊಸ ಪರಿಷ್ಕರಣವನ್ನು ಮೈಸೂರು ವಿಶ್ವವಿದ್ಯಾನಿಲಯದ ಮೂಲಕ 1941 ರಲ್ಲಿ ಇವರು ಇವರು ಹೊರತಂದರು. ಇವರು ಅರಿಸ್ಟಾಟಲ್‍ನ ಕಾವ್ಯಮೀಮಾಂಸೆಯನ್ನೂ ಅನುವಾದಿಸಿದ್ದಾರೆ. ಇವರು ಸಾಹಿತ್ಯ, ಸಂಸ್ಕೃತಿ, ಭಾಷಾಶಾಸ್ತ್ರ ಇವೇ ಮೊದಲಾದ ವಿಷಯಗಳನ್ನು ಕುರಿತು ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದಿದ್ದಾರೆ. ಈ ಲೇಖನಗಳೆಲ್ಲ 'ನಂದಾನೆನಪು (1973)' ಎಂಬ ಸಂಪುಟದಲ್ಲಿ ಸಮಾವೇಶಗೊಂಡಿವೆ.[೧] [೨]