ವಿಷಯಕ್ಕೆ ಹೋಗು

ಒಳದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂಡೊಸ್ಕೊಪಿ
ಎಂಡೊಸ್ಕೊಪಿ

ಒಳದರ್ಶನ : ಮೈ ಒಳಗಡೆ ಆಳದಲ್ಲಿರುವ, ಜಠರದಂಥ ಯಾವುದಾದರೂ ಒಂದು ಅಂಗವನ್ನು, ಬಾಯಿಯಂತೆ ಸಹಜವಾಗಿರುವ ಒಂದು ಕಂಡಿಯ ಮೂಲಕ ಕೊಳವೆ ತೂರಿಸಿ ಬೆಳಗಿಸಿ ನೋಡಿ ನಡೆಸುವ ಪರೀಕ್ಷೆ (ಎಂಡೊಸ್ಕೊಪಿ). ಕೊಳವೆ ತೂರಿಸಲು ಹಿಗ್ಗಿಸುವ ಭಾಗಗಳಲ್ಲಿ ನೋವಾಗದಂತೆ ಮದ್ದು ಹಾಕಿ ಅರಿವಿರದಂತೆ ಮಾಡಿರಬೇಕು. ಕೊಳವೆ ಲೋಹದ್ದೋ ಗಟ್ಟಿ ತಂತುವಿನದೋ ಆಗಿದ್ದು, ಆಯಾ ಅಂಗಗಳ ಸಹಜ ಅಂಕುಡೊಂಕುಗಳಿಗೆ ತಕ್ಕಂತೆ ಸುಲಭವಾಗಿ ಬಾಗುವಂತಿರುವುದು. ಕೆಲವೇಳೆ, ಕೇವಲ ಒಳಗಡೆ ನೋಡುವುದೇ ಅಲ್ಲದೆ, ಪರೀಕ್ಷೆಗಾಗಿ ರೋಗ ಹತ್ತಿರಬಹುದಾದ ಒಳಭಾಗದ ಒಂದು ಚೂರನ್ನೋ ರೋಗಿ ಅಕಸ್ಮಾತ್ ನುಂಗಿದ ಸೂಜಿ, ಮೊಳೆ, ಗೋಲಿ ಮುಂತಾದ ಹೊರವಸ್ತುವನ್ನೋ ಹೊರದೆಗೆಯಬಹುದು.

ಒಳದರ್ಶಕಗಳಲ್ಲಿ (ಎಂಡೊಸ್ಕೋಪ್ಸ್‌) ಹಲವಾರು ಬಗೆಗಳಿವೆ. ದನಿನಾಳ, ಉಸಿರ್ನಾಳ, ಅನ್ನನಾಳ, ಜಠರಗಳನ್ನು ಪರೀಕ್ಷಿಸುವವನನ್ನು ಬಾಯಿ ಮೂಲಕ ಒಳದರ್ಶಕವನ್ನು ಒಳ ತೂರಿಸಬೇಕಾಗುತ್ತದೆ. ಇವುಗಳ ಆಚೆ ತುದಿಯಲ್ಲಿ ವಿದ್ಯುತ್ತಿನ ಬೆಳಕು ಚೆಲ್ಲುತ್ತದೆ. ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ಆಸ್ಪತ್ರೆಗಳಲ್ಲಿ ಮಾತ್ರ ಮಾಡುವುದಾದರೂ ರೋಗಿ ಅಲ್ಲಿ ತಂಗಬೇಕಿಲ್ಲ. ಗುದ, ನೆಟ್ಟಗರುಳು, ಹೆಗ್ಗರುಳಿನ ಕೆಳಭಾಗಗಳ ಒಳಗಡೆ ನೋಡುವ ಒಳದರ್ಶಕ ತೂರಿಸಲು ಅರಿವಳಿಸಬೇಕಾಗಿಲ್ಲ. ಆದರೆ ಕಂಕೋಶದೊಳಕ್ಕೆ (ಮೂತ್ರಕೋಶ) ಮೂತ್ರನಾಳದ ಮೂಲಕ ತೂರಿಸಿ ನೋಡಲು ಅರಿವಳಿ ಬಳಸಲೇಬೇಕು. ಸಹಜ ಕಂಡಿಗಳು ಇಲ್ಲವಾದರೂ ಎದೆ, ಹೊಟ್ಟೆಗಳಲ್ಲಿನ ಜೀವಾಳದ ಒಳಾಂಗಗಳನ್ನು ಹೀಗೇ ಇಣಿಕಿ ನೋಡಲೂ ಸಾಧ್ಯ. ಆದರೆ ಇದಕ್ಕಾಗಿ ಶಸ್ತ್ರಕ್ರಿಯೆಯಿಂದ ಇರಿದು ಕಂಡಿ ಮಾಡಬೇಕಾಗುತ್ತದೆ. ಬೆಳಗುವ ಕೊಳವೆಯನ್ನು ಒಳತೂರಿಸಿ ಪರೀಕ್ಷಿಸಿದ ಮೇಲೆ ಆ ಕಂಡಿಯನ್ನು ಹೊಲಿಗೆ ಹಾಕಿ ಮುಚ್ಚಬೇಕು. ಕ್ಷಯರೋಗಿಗಳಲ್ಲಿ ಎದೆಗೂಡಿನ ಒಳಗೆ ಪುಪ್ಪುಸ ಗೋಡೆಗೆ ಬಲವಾಗಿ ಅಂಟಿಕೊಂಡಿದ್ದರೆ, ಅದನ್ನು ಬರೆಗುಣದಿಂದ (ಕಾಟರಿ) ಸುಟ್ಟು ಬಿಡಿಸಬಹುದು. ಇದಕ್ಕಾಗಿ ಒಳದರ್ಶಕವನ್ನು ಪಕ್ಕೆಲುಬುಗಳ ನಡುವೆ ತೂರಿಸಬೇಕು. ಹೊಕ್ಕುಳ ಕೆಳಗೆ ಹೊಟ್ಟೆಯ ಗೋಡೆಯಲ್ಲಿ ಕಂಡಿ ಇರಿದರೆ ಕೆಳಹೊಟ್ಟೆಯಲ್ಲಿರುವ ಹೆಂಗಸರ ಜನನಾಂಗಗಳ ಪರೀಕ್ಷೆಗೆ ಅನುಕೂಲ. ಅಲ್ಲದೆ, ಕೆಳಗಿನಿಂದ ಯೋನಿಯ ಮೇಲಿನ ಗೋಡೆಯ ಮೂಲಕವೂ ಒಳದರ್ಶಕವನ್ನು ತೂರಿಸಿದರೆ ಹೆಣ್ಣಿನ ಕಿಳ್ಗುಳಿಯ (ಪೆಲ್ವಿಸ್) ಜನನಾಂಗವನ್ನು ಸುಲಭವಾಗಿ ಪರೀಕ್ಷಿಸಬಹುದು. ಹಾಗೇ ಹೊಟ್ಟೆಕುಳಿಯಲ್ಲಿ (ಎಪಿಗ್ಯಾಸ್ಟ್ರಿಯಂ) ಸಣ್ಣದಾಗಿ ಕೊಯ್ದು ತೂರಿಸಿ, ಜಠರ, ಈಲಿ, ಪಿತ್ತಕೋಶ, ಮಾಂಸಲಿ, ತೊರಳೆ, ಸಣ್ಣ ಕರುಳು, ಹೆಗ್ಗರುಳೇ ಮುಂತಾದುವನ್ನು ಪರೀಕ್ಷಿಸಬಹುದು. ಕಣ್ಣೊಳಕ್ಕೆ ಬೆಳಕನ್ನು ಬಿಂಬಿಸಿ ಒಳಗಿರುವ ಕಣ್ಣಾಲವನ್ನು (ರೆಟೀನ) ನೋಡುವುದು ಕಣ್ಣು ವೈದ್ಯರ ಮುಖ್ಯ ಕೆಲಸ. ಒಳಾಂಗದ ಕೆಲಸ ಕೆಟ್ಟಿರುವ ಅನುಮಾನ ಬಂದು, ಹೊರಗಿಂದ ನಡೆಸಿದ ಯಾವ ಪರೀಕ್ಷೆಗಳಿಂದಲೂ ಬೇನೆಯ ರೂಪ ನಿರ್ಧಾರವಾಗದೆ, ಶಸ್ತ್ರಕ್ರಿಯೆ ಮಾಡಿ ಕಣ್ಣಾರೆ ಕಾಣುವುದನ್ನು ತಪ್ಪಿಸುವುದೇ ಒಳದರ್ಶನದಿಂದ ದೊರೆವ ಮಹಾ ಅನುಕೂಲ. ಕೆಲವೇ ಮಿಲಿಮೀಟರುಗಳ ಗಾತ್ರದ ಭಾವಚಿತ್ರಕವನ್ನು (ಕ್ಯಾಮೆರ) ಒಳತೂರಿಸಿ, ಒಳಗೆಲ್ಲ ಚಿತ್ರಗಳನ್ನು ಹಿಡಿದು ಹೊರತರುವ ಹೊಸವಿಧಾನ ಇತ್ತೀಚೆಗೆ ಗೊತ್ತಾಗಿದೆ. ಹಾಗೆ ಒಳಗಿವಿಯಲ್ಲಿ ಶಸ್ತ್ರಕ್ರಿಯೆ ನಡೆಸಲು ಮೈಕ್ರೊಸ್ಕೋಪಿನ ಬಳಕೆ ಕಿವಿ ಮೂಗು ಗಂಟಲುವೈದ್ಯಪಟುವಿಗೆ ಒಂದು ಮಹಾ ವರ. []

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಒಳದರ್ಶನ&oldid=1249809" ಇಂದ ಪಡೆಯಲ್ಪಟ್ಟಿದೆ