ಒರೆಸ್ಟೀಸ್
ಒರೆಸ್ಟೀಸ್: ಗ್ರೀಕ್ ಮಹಾಪುರಾಣಗಳ ಪ್ರಕಾರ ಆಗಮೆಮ್ನಾನ್ ಮತ್ತು ಕ್ಲೈಟಮ್ನೆಸ್ಟ್ರರ ಮಗ. ಇಫಿಜೀನಿಯ ಮತ್ತು ಎಲೆಕ್ಟ್ರರ ಸಹೋದರ. ತಾಯಿ ಕ್ಲೈಟಮ್ನೆಸ್ಟ್ರ ತನ್ನ ಪ್ರಿಯ ಈಜಿಸ್ತಸನೊಡಗೂಡಿ ಗಂಡ ಆಗಮೆಮ್ನಾನ್ನನ್ನು ಕೊಲೆ ಮಾಡಿದಾಗ ಈತ ಸಹೋದರಿ ಎಲೆಕ್ಟ್ರಳ ಸಹಾಯದಿಂದ ಜೀವಸಹಿತ ಪಾರಾಗಿ ಹೋಗಿ ಸ್ಟ್ರೋಪಿಯಸ್ ದೊರೆಯ ಆಶ್ರಯ ಪಡೆದು ಅಲ್ಲೇ ಬೆಳೆಯುತ್ತಾನಲ್ಲದೆ ಆ ದೊರೆಯ ಮಗನಾದ ಪೈಲಾಡ್ಸನ ಆಪ್ತಮಿತ್ರನಾಗುತ್ತಾನೆ. ಕೊನೆಗೊಮ್ಮೆ ಆರ್ಗಾಸಿಗೆ ಬಂದು ತಂದೆಯನ್ನು ಕೊಂದ ತನ್ನ ತಾಯಿ ಮತ್ತು ಆಕೆಯ ಪ್ರಿಯನನ್ನು ಕೊಲೆಮಾಡುತ್ತಾನೆ. ತಾಯಿಯನ್ನು ಹತಮಾಡಿದ ಪಾಪ ತಟ್ಟಲಾಗಿ ಹುಚ್ಚನಂತಾಗಿ ಉಗ್ರದೇವತೆಗಳ ಪೀಡನೆಗೊಳಗಾಗಿ ದೇಶ ದೇಶ ತೊಳಲುತ್ತಾನೆ. ಕೊನೆಗೊಮ್ಮೆ ಅಥೆನ್ಸಿಗೆ ಬಂದಾಗ ಅವನಿಗೆ ಪಾಪವಿಮೋಚನೆಯಾಗುತ್ತದೆ. ಪ್ರಾಯಶ್ಚಿತ್ತಕ್ಕಾಗಿ ಟಾರಿಸ್ನಲ್ಲಿದ್ದ ಆರ್ಟೆಮಿಸಳ ಪ್ರತಿಮೆಯನ್ನು ತರಲು ಹೋದಾಗ ಅಲ್ಲಿ ತನ್ನ ಸಹೋದರಿ ಇಫಿಜೀನಿಯಳನ್ನು ಗುರುತಿಸುತ್ತಾನೆ. ಇಬ್ಬರೂ ಆರ್ಟೆಮಿಸಳ ಪ್ರತಿಮೆಯೊಂದಿಗೆ ಗ್ರೀಸಿಗೆ ಓಡಿಬರುತ್ತಾರೆ. ಅನಂತರ ಮೈಸೀನೀ ಮತ್ತು ಆರ್ಗಾಸಿನ ದೊರೆಯಾಗಿ ಮೆನೆಲಾಸನ ಮಗಳಾದ ಹರ್ಮಿಯೊನೆಯನ್ನು ಮದುವೆಯಾಗುತ್ತಾನೆ.