ಐಸಾಕ್ ಡಿಸ್ರೇಲಿ
ಐಸಾಕ್ ಡಿಸ್ರೇಲಿ (1776-1849). ಆಂಗ್ಲ ವಿದ್ವಾಂಸ, ಸಂಕೀರ್ಣ ಬರೆಹಗಾರ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಮಿಡ್ಲ್‍ಸೆಕ್ಸನ ಎಲ್‍ಫೀಲ್ಡ್‍ನಲ್ಲಿ. ಯೆಹೂದ್ಯ ವಂಶಜನಾದ ಈತನ ತಂದೆ ಬೆಂಜಮಿನ್ ಡಿಸ್ರೇಲಿ 1748ರಲ್ಲಿ ವೆನಿಸ್ಸಿನಿಂದ ಇಂಗ್ಲೆಂಡಿಗೆ ವಲಸೆ ಹೋಗಿ ಅಲ್ಲಿ ವ್ಯಾಪಾರೋದ್ಯಮದಿಂದ ಶ್ರೀಮಂತನಾಗಿ 1801ರಲ್ಲಿ ಬ್ರಿಟಿಷ್ ಪ್ರಜೆಯಾದ. ಐಸಾಕನ ಶಿಕ್ಷಣ ಖಾಸಗಿ ಶಾಲೆಯಲ್ಲಿ ನಡೆಯಿತು. ಮೊದಲಿನಿಂದಲೂ ವ್ಯಾಪಾರಧರ್ಮವನ್ನು ವಿರೋಧಿಸುತ್ತಿದ್ದ ಈತ ಚಿಕ್ಕವಯಸ್ಸಿನಲ್ಲಿಯೇ ಒಂದು ಕವಿತೆ ಬರೆದು ಆವೃತ್ತಿಯನ್ನು ತೆಗಳಿದ. 1788ರಲ್ಲಿ ಉಚ್ಚಶಿಕ್ಷಣಕ್ಕಾಗಿ ಫ್ರಾನ್ಸಿಗೆ ತೆರಳಿದ.
ಅಲ್ಲಿಂದ ಹಿಂತಿರುಗಿದ ಬಳಿದ ಪೀಟರ್ ಪಿಂಡಾರ್ ಎನ್ನುವ ಗುಪ್ತನಾಮದಿಂದ ಬರೆಯುತ್ತಿದ್ದ ಜಾನ್ ವಾಲ್ಕಾಟ್ ಎಂಬ ವಿಡಂಬನಕಾರನ ಕೃತಿಗಳಿಗೆ ಉತ್ತರವಾಗಿ ಆನ್ ದಿ ಅಬ್ಯೂಸ್ ಆಫ್ ಸ್ಯಾಟೈರ್ ಎನ್ನುವ ಕವಿತೆಯನ್ನು ಪ್ರಕಟಿಸಿದ (1789). ಈ ಕವಿತೆ ಆಸ್ಥಾನಕವಿಯಾದ ಹೆನ್ರಿ ಜೇಮ್ಸ್ ಪೈನ ಸ್ನೇಹ ದೊರಕಿಸಿತು. 1790ರಲ್ಲಿ ಐಸಾಕ್ ಪೈಗೆ ತನ್ನ ಡಿಫೆನ್ಸ್ ಆಫ್ ಪೊಯೆಟ್ರಿ ಎಂಬ ಕವಿತೆಯನ್ನು ಅರ್ಪಿಸಿದ. ಮುಂದೆ ಐಸಾಕ್ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದನಾದರೂ ಅವು ಅಷ್ಟೇನೂ ಪ್ರತಿಭಾಪೂರ್ಣವಾಗಿರಲಿಲ್ಲ. ಅಂತೆಯೇ ಈತನ ಕೆಲವು ಕಾದಂಬರಿಗಳೂ ಅಷ್ಟು ಯಶಸ್ವಿಯಾಗಿರಲಿಲ್ಲ.
ಈತನ ಮಹತ್ತ್ವದ ಕೃತಿಗಳು ಎಂದರೆ ಸಾಹಿತ್ಯ ಮತ್ತು ಐತಿಹಾಸಿಕ ಸಂಶೋಧನೆಗೆ ಸಂಬಂಧಪಟ್ಟವು.
1802ರಲ್ಲಿ ಈತ ಮಾರಿಯಾ ಬಾಸೇವಿ ಎಂಬುವಳನ್ನು ಮದುವೆಯಾದ. ಪ್ರಸಿದ್ಧ ರಾಜನೀತಿ ನಿಪುಣ ಲಾರ್ಡ್ ಬೀಕನ್ಸ್‍ಫೀಲ್ಡ್ ಇವರ ಐದು ಮಕ್ಕಳಲ್ಲಿ ಎರಡನೆಯವ.
ಈತ ಸ್ವತಃ ಕ್ರೈಸ್ತಧರ್ಮಕ್ಕೆ ಸೇರದಿದ್ದರೂ ತನ್ನ ಮಕ್ಕಳನ್ನು ಆ ಧರ್ಮಕ್ಕೆ ಸೇರಿಸಿದ. ಏಕಾಂತಪ್ರಿಯನಾಗಿ ವಿರಕ್ತ ಸಾಹಿತಿಯಂತೆ ತನ್ನ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದ ಐಸಾಕ್ ಬಕಿಂಗ್‍ಹ್ಯಾಮ್ ಷೈರಿನ ಬ್ರಾಡೆನ್‍ಹ್ಯಾಮ್‍ನಲ್ಲಿ ಸತ್ತ.
ಮಹತ್ತ್ವದ ಕೃತಿಗಳು
[ಬದಲಾಯಿಸಿ]1791ರಿಂದ 1834ರ ವರೆಗಿನ ಅವಧಿಯಲ್ಲಿ ಈತನ ಇತಿಹಾಸ ಮತ್ತು ಸಾಹಿತ್ಯದ ಐತಿಹ್ಯಗಳ ಸಂಗ್ರಹವಾದ ಕ್ಯೂರಿಯಾಸಿಟೀಸ್ ಆಫ್ ಲಿಟರೇಚರ್ ಎಂಬ ಕೃತಿಯನ್ನು 6 ಸಂಪುಟಗಳಲ್ಲಿ ಪ್ರಕಟಿಸಿದ. ಸಾಹಿತ್ಯಾಭಿರುಚಿಯನ್ನು ಜನ ಸಾಮಾನ್ಯರಲ್ಲಿ ಉಂಟುಮಾಡುವುದು ಸಾಧ್ಯವಿದೆಯೇ ಎನ್ನವುದನ್ನು ಕಂಡುಹಿಡಿಯುವುದಕ್ಕೆ ಪರೀಕ್ಷಾಪ್ರಯತ್ನವಾಗಿ ಪ್ರಾರಂಭಿಸಿದ ಈ ಕೃತಿ ಯಶಸ್ವಿಯಾಗಿ ಬಹು ಜನಾದರಣೀಯವಾಗಿ ಈತನ ಜೀವಮಾನದಲ್ಲೆ 12 ಮುದ್ರಣಗಳನ್ನು ಕಂಡಿತು. ಮಿಸೆಲೆನೀಸ್ (1796), ಕಲಾಮಿಟೀಸ್ ಆಫ್ ಆಥರ್ಸ್ (1812) ಮತ್ತು ಕ್ವಾರಲ್ಸ್ ಆಫ್ ಆತರ್ಸ್ (1814) ಇವು ಈತನ ಮೇಲಿನ ಕೃತಿಗೆ ಸದೃಶವಾದ ಕೃತಿಗಳು. ಕಾಮೆಂಟರೀಸ್ ಆನ್ ದಿ ಲೈಫ್ ಅಂಡ್ ರೇನ್ ಆಫ್ ಚಾಲ್ರ್ಸ್ 1 (5 ಸಂಪುಟಗಳು) ಎನ್ನುವುದು ಇವನ ಎರಡನೆಯ ಮಹತ್ತ್ವದ ಕೃತಿ. ಐತಿಹಾಸಿಕ ಸಂಶೋಧನೆಗೆ ಹೆಸರಾದ ಇದು ಈತನಿಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಗೌರವ ಪದವಿಯನ್ನು ತಂದಿತು. ಇನ್‍ಕ್ವಯರಿ ಇಂಟು ದಿ ಲಿಟರರಿ ಅಂಡ್ ಪೊಲಿಟಿಕಲ್ ಕ್ಯಾರೆಕ್ಟೆರ್ ಆಫ್ ಜೇಮ್ಸ್ 1 (1816); ಮತ್ತು ಯೆಹೂದ್ಯರ ಸಂಬಂಧವಾಗಿ ಬರೆದ ಜೀನಿಯಸ್ ಆಫ್ ಜೂಡೀಯಿಸಮ್ (1833) ಇವು ಈತನ ಇತರ ಐತಿಹಾಸಿಕ ಕೃತಿಗಳು. ವಾರಿಯನ್ (1797) ಮಜನೂ ಅಂಡ್ ಲೈಲಾ (1797); ಫ್ಲಿಮ್ ಫ್ಯ್ಲಾಮ್ಸ್ (1805) ಮತ್ತು ಡೆಸ್ಪಟಿಸಮ್, ಆರ್ ದಿ ಫಾಲ್ ಆಫ್ ದಿ ಜೆಸೂಯಿಟ್ಸ್ (1814)-ಇವು ಈತನ ಕಾದಂಬರಿಗಳು. ಈತನ ಅಮೆನಿಟೀಸ್ ಆಫ್ ಲಿಟರೇಚರ್ ಎಂಬ ಸಾಹಿತ್ಯ ಸಂಬಂಧವಾದ ಕೃತಿ 1839ರಲ್ಲಿ ಈತ ಕುರುಡನಾದ ಮೇಲೆ ಮಗಳು ಸಾರಾಳ ಸಹಾಯದಿಂದ ರಚಿತವಾಯಿತು (1841).