ಉಷ್ಣಮಾಪನ
ಉಷ್ಣತೆಯನ್ನು ಅಳೆಯುವ ಕ್ರಿಯೆ (Temperature measurement), ಅಳೆಯುವ ಸಾಧನದ ಹೆಸರು ಉಷ್ಣತಾಮಾಪಕ. ಉಷ್ಣತಾಮಾಪಕದಲ್ಲಿ ಎರಡು ನಿಶ್ಚಿತ ಬಿಂದುಗಳಿವೆ: (೧) ಒಂದು ಶಿಷ್ಟ ವಾಯುಭಾರ ಒತ್ತಡದಲ್ಲಿ ಕರಗುತ್ತಿರುವ ಶುದ್ಧ ಬರ್ಫದಲ್ಲಿ ಉಷ್ಣತಾಮಾಪಕವನ್ನು ಅದ್ದಿದಾಗ ಪಾದರಸ ಸ್ತಂಭ ಸೂಚಿಸುವ ಕೆಳಬಿಂದು; (೨) ಅಷ್ಟೇ ಒತ್ತಡದಲ್ಲಿ ಕುದಿಯುತ್ತಿರುವ ಶುದ್ದ ನೀರಿನಲ್ಲಿ ಅದನ್ನು ಅದ್ದಿದಾಗ ಸ್ತಂಭ ಸೂಚಿಸುವ ಮೇಲುಬಿಂದು. (೧೩.೫೯೫೧ ಗ್ರಾಂ/ಘ.ಸೆಂ.ಮೀ. ಸಾಂದ್ರತೆ ಇರುವ ಪಾದರಸದ ಸ್ತಂಭವನ್ನು ೭೬೦ ಮಿ.ಮೀ. ಎತ್ತರಕ್ಕೆ ಗುರುತ್ತ್ವಾಕರ್ಷಣೆಯ ಬೆಲೆ ೯೮೦.೬೬೫ ಸೆಂ.ಮೀ./ಸೆ. ಇರುವ ಸ್ಥಳದಲ್ಲಿ ಏರಿಸುವ ಒತ್ತಡವೇ ಒಂದು ಶಿಷ್ಟ ವಾಯುಭಾರ ಒತ್ತಡ: ಇದನ್ನು ಡೈನು(Dyne)ಗಳಲ್ಲಿ ವ್ಯಕ್ತಪಡಿಸಬೇಕು.) ಈ ಬಿಂದುಗಳ ಹೆಸರು ಕ್ರಮವಾಗಿ ಬರ್ಫಬಿಂದು ಮತ್ತು ಉಗಿಬಿಂದು. ಇವೆರಡು ಬಿಂದುಗಳ ನಡುವಿನ ಅಂತರದ ಹೆಸರು ಮೂಲಾಂತರ.
ವಿವಿಧ ಮಾಪನ ಪದ್ಧತಿಗಳ ತುಲನೆ
[ಬದಲಾಯಿಸಿ]ಉಷ್ಣತಾಮಾನ ಪದ್ಧತಿ | ಬರ್ಫಬಿಂದುವಿನ ಉಷ್ಣತೆ | ಉಗಿಬಿಂದುವಿನ ಉಷ್ಣತೆ | ಮೂಲಾಂತರದ ಎಷ್ಟನೆಯ ಅಂಶ ೧'ಕ್ಕೆ ಸಮಾನ |
---|---|---|---|
ಸೆಂಟಿಗ್ರೇಡ್, (C-ಸೆಲ್ಸಿಯಸ್) | ೦ °C | ೧೦೦ °C | ೧/೧೦೦ |
ಫ್ಯಾರನ್ ಹೀಟ್ ,F | ೩೨ಲಿ F | ೨೧೨ಲಿ F | ೧/೧೮೦ |
ರೇಹಿಮೂರ್,R | ೦ಲಿ R | ೮೦ಲಿ R | ೧/೮೦ |
ವೈದ್ಯಕೀಯ ಉಷ್ಣಮಾಪನದ ಕಾರ್ಯ ನಿರ್ವಹಣೆ
[ಬದಲಾಯಿಸಿ]ಈ ಉಷ್ಣತಾಮಾಪಕದ ಬುರುಡೆಯನ್ನು ಬಾಯೊಳಗೆ ನಾಲಗೆಯ ಕೆಳಗೆ ಅಥವಾ ಬಗಲಲ್ಲಿ ಇರಿಸಿದಾಗ ದೇಹದ ಉಷ್ಣತೆಯಿಂದ ವಿಕಾಸಗೊಳ್ಳುವ ಪಾದರಸ ಲೋಮನಾಳದ ಮೂಲಕ ಏರಿ ಅದರ ಸ್ತಂಭ ಒಂದು ಮಿತಿಯಲ್ಲಿ ನಿಲ್ಲುವುದು. ಈ ಕೊನೆ ಬಿಂದು ತೋರಿಸುವ ಗುರತೇ ದೇಹದ ಉಷ್ಣತೆ. ಬುರುಡೆಯನ್ನು ದೇಹ ಸಂಪರ್ಕದಿಂದ ಸರಿಸಿದಾಗ ಪಾದರಸ ಸ್ತಂಭ ಸಂಕೋಚಗೊಂಡು ಹಿಂದಕ್ಕೆ ಇಳಿಯಬೇಕು. ಆದರೆ ಲೋಮನಾಳದ ಆರಂಭದಲ್ಲಿ ಅದನ್ನೇ ಸ್ವಲ್ಪ ತಿರುಚಿ ಪಾದರಸದ ಹಿಂಜರಿತಕ್ಕೆ ಅಲ್ಲೊಂದು ಅಡಚಣೆ ರಚಿಸಲಾಗಿದೆ. ಹೀಗಾಗಿ ಏರಿದ ಸ್ತಂಭ ಅಲುಗಾಡದೇ ಅದೇ ಸ್ಥಾನದಲ್ಲಿ ನಿಂತಿರುವುದು. ಒಂದು ಅಯಸ್ಕಾಂತವನ್ನು ಉಷ್ಣತಾಮಾಪಕದ ಗಾಜಿನ ಮೇಲೆ ಬುರುಡೆಯೆಡೆಗೆ ಸರಿಸುವುದರ ಮೂಲಕ ಅಥವಾ ಬುರುಡೆ ಕೆಳಮುಖವಾಗಿರುವಂತೆ ಇನ್ನೊಂದು ಕೊನೆಯನ್ನು ಹಿಡಿದು ಕೊಡುವುದರ ಮೂಲಕ ಪಾದರಸ ಸ್ತಂಭವನ್ನು ಬುರುಡೆಗೆ ಮರಳುವಂತೆ ಮಾಡಬಹುದು[೧].