ವಿಷಯಕ್ಕೆ ಹೋಗು

ಅಶ್ವಮೇಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಯಾಗದ ಬಗ್ಗೆ ಇದೆ. ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಶ್ವಮೇಧ (ಚಲನಚಿತ್ರ) ನೋಡಿ

ಅಶ್ವಮೇಧ, ಕುದುರೆಯನ್ನು ಬಲಿಕೊಡುವ ಒಂದು ಯಾಗ.ಸಾಮ್ರಾಜ್ಯ ಸ್ಥಾಪನೆ ಮತ್ತು ವಿಸ್ತರಣೆಯ ಪ್ರತೀಕವಾಗಿ ಭಾರತದಲ್ಲಿ ಆಚರಿಸಲಾಗುತ್ತಿದ್ದ ಕಾರ್ಯಕ್ರಮಗಳಲ್ಲಿ ಬಹು ಪ್ರಭಾವಯುತವೂ ಶಾಸ್ತ್ರೋಕ್ತವೂ ಪವಿತ್ರವೂ ಆದ ಒಂದು ಯಾಗ. ಯಾಗಗಳಲ್ಲೆಲ್ಲ ಅತ್ಯುತ್ತಮವಾದದ್ದೆಂಬ ಹೇಳಿಕೆಯೂ ಇದೆ. ದೇವತೃಪ್ತ್ಯರ್ಥವಾಗಿ ನಡೆಸುವ ವೈಭವದ ಸಮಾರಂಭಗಳಲ್ಲಿ ಒಂದು. ಋಗ್ವೇದದಷ್ಟು ಪ್ರಾಚೀನಕಾಲದಲ್ಲೇ ಈ ವಿಶಿಷ್ಟ ಸಮಾರಂಭಕ್ಕಾಗಿ ರಚಿತವಾದ ದೇವರ ಸ್ತೋತ್ರಗಳಿವೆ. ಈ ಮತಪ್ರಕ್ರಿಯೆಗಳಿಗಾಗಿಯೇ ರಚಿತವಾಗಿರುವ ಶತಪಥ ಬ್ರಾಹ್ಮಣ, ತೈತಿರೀಯ ಬ್ರಾಹ್ಮಣ, ಕಾತ್ಯಾಯನನ ಶ್ರೌತಸೂತ್ರಗಳು, ಸಾಂಖ್ಯಾಯಾನ, ಆಪಸ್ತಂಬ, ಆಶ್ವಲಾಯನ ಸೂತ್ರಗಳು-ಇವುಗಳಲ್ಲೂ ಅಶ್ವಮೇಧದ ವರ್ಣನೆಗಳಿವೆ. ಶ್ರೀರಾಮ ಈ ಯಜ್ಞವನ್ನಾಚರಿಸಿದ. ಕೌರವರೊಡನೆ ಯುದ್ಧಮಾಡಿ ಜಯಪಡೆದ ಯುಧಿಷ್ಠಿರ ತಾನು ಮಾಡಿದ ಪಾಪದಿಂದ ಪರಿಶುದ್ಧನಾಗಲು ನಡೆಸಿದ ಅಶ್ವಮೇಧದ ವರ್ಣನೆ ಮಹಾಭಾರತದಲ್ಲಿ ಇದೆ. ಈ ಯಾಗ ಮತ್ತು ಯಾಗಕ್ಕೆ ಸಂಬಂಧಿಸಿದ ಆಖ್ಯಾನಗಳೇ ದೊಡ್ಡ ಕಾವ್ಯಗಳಾಗಿ ಉಳಿದು ಬಂದಿವೆ. ಪರಮಾಧಿಕಾರವನ್ನು ಹೊಂದಿದ್ದ ಸಾರ್ವಭೌಮನೇ ಈ ಅಶ್ವಮೇಧವನ್ನು ನಡೆಸುವ ಅಧಿಕಾರವನ್ನುಳ್ಳವನಾಗಿದ್ದ. ಇದರ ಆಚರಣೆಯಿಂದ ಆ ರಾಜನ ಆಸೆ ಆಕಾಂಕ್ಷೆಗಳು ನೆರವೇರಿ ಆತನ ಸಾಮ್ರಾಜ್ಯ ವಿಸ್ತರಣೆ ಆಗಬೇಕೆಂಬ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿತ್ತು. ಇದು ಒಂದು ರಾಜ್ಯೋತ್ಸವವಾಗಿದ್ದು ಬಹು ಜನಪ್ರಿಯವಾಗಿತ್ತು. ವಸಂತ ಅಥವಾ ಗ್ರೀಷ್ಮಋತುಗಳಲ್ಲಿ ಪ್ರಾರಂಭವಾಗಿ ಒಂದು ವರ್ಷದ ಅವಧಿಯಲ್ಲಿ ಪುರ್ತಿಯಾಗುತ್ತಿತ್ತು. ಈ ಯಾಗಕ್ಕೆ ಒಂದು ಉತ್ತಮ ತಳಿಯ ಯಜ್ಞಾಶ್ವವನ್ನು ಆರಿಸಬೇಕಾಗಿತ್ತು. ಆ ಅಶ್ವವನ್ನು ಬಲಿಕಂಬಕ್ಕೆ ಹಗ್ಗದಿಂದ ಕಟ್ಟಿ ಸ್ನಾನ ಮಾಡಿಸಿದ ಮೇಲೆ ಒಂದು ವರ್ಷ ಸ್ವೇಚ್ಛೆಯಾಗಿ ಓಡಾಡಲು ಅದಕ್ಕೆ ಅವಕಾಶ ಕೊಡಲಾಗುತ್ತಿತ್ತು. ಹಿಂದುಗಡೆ ಬೆಂಗಾವಲಿಗಾಗಿ ರಾಜಕುಮಾರರು ಅಧಿಕಾರಿಗಳು ಆಯುಧಪಾಣಿಗಳಾಗಿ ಹೋಗುತ್ತಿದ್ದರು. ಹೀಗೆ ಸ್ವೇಚ್ಛೆಯಾಗಿ ಅಲೆದಾಡುತ್ತಿದ್ದಾಗ ಅದನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನಗಳು ನಡೆದು ಘರ್ಷಣೆಗಳಿಗೊ ಯುದ್ಧಗಳಿಗೊ ಆಸ್ಪದ ಕೊಡುತ್ತಿದ್ದುವು. ಅದು ಯಾವ ಯಾವ ರಾಜ್ಯದ ಮೇಲೆ ಹಾಯ್ದು ಹೋಗುತ್ತದೊ ಆ ರಾಜ್ಯದ ರಾಜ ಅಶ್ವಪ್ರಭುವಿನ ಸ್ವಾಮ್ಯವನ್ನು ಒಪ್ಪಿಕೊಂಡು ಕಪ್ಪಕಾಣಿಕೆಗಳನ್ನೊಪ್ಪಿಸಲೇ ಬೇಕಾಗುತ್ತಿತ್ತು. ಹೀಗೆ ಎಲ್ಲ ರಾಜರನ್ನೂ ಗೆದ್ದು ಬಂದ ಮೇಲೆಯೇ ಅಶ್ವಮೇಧ ಯಾಗ ಪ್ರಾರಂಭವಾಗುತ್ತಿತ್ತು. ಈ ಯಾಗದಲ್ಲಿ ಯಶಸ್ವಿಯಾದವನಿಗೆ ಉಳಿದ ರಾಜರೆಲ್ಲ ಅಧೀನರೊ ಸಾಮಂತರೊ ಆಗಬೇಕಾಗುತ್ತಿತ್ತು; ಮತ್ತು ಇವನಿಗೆ ಉಚ್ಚಮಟ್ಟದ ಸ್ವರ್ಗಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿತ್ತು. ಕುದುರೆ ಈ ರೀತಿ ದೂರಪ್ರದೇಶದಲ್ಲಿ ಅಲೆದಾಡುತ್ತಿದ್ದಾಗ ಯಾಗ ನಡೆಯಬೇಕಾಗಿದ್ದ ಸ್ಥಳದಲ್ಲಿ ದೇವತೆಗಳಿಗೆ ಹವಿಸ್ಸುಗಳನ್ನು ಕೊಡುವ ಉತ್ಸವಗಳು ನಡೆಯುತ್ತಿದ್ದುವು. ಮಂತ್ರಪಠಣಗಳೋ ಸಂಗೀತ ಕೊಳಲುವಾದನಗಳೋ ಆಶುಕವಿತೆಗಳ ವಾಚನಗಳೋ ನಡೆಯುತ್ತಿದ್ದುವು. ಯಜ್ಞಸಮಾರಂಭದ ಅವಧಿ ಮೂರು ದಿನಗಳಿದ್ದು ಯಜ್ಞಪಶುವಿನ ಜೊತೆಗೆ ಅನೇಕಾನೇಕ ಪಶುಗಳು ಬಲಿಯಾಗುತ್ತಿದ್ದವು. ಸೋಮರಸ ಪಾನವೂ ನಡೆಯುತ್ತಿತ್ತು. ಎರಡನೆಯ ದಿನ ಯಜ್ಞಾಶ್ವ ಸ್ವರ್ಣಾಭರಣ ಭೂಷಿತವಾಗಿ ಆ ಯಜ್ಞಪ್ರದೇಶದ ಸುತ್ತ ಪ್ರದಕ್ಷಿಣೆ ಮಾಡಬೇಕಾಗಿತ್ತು. ಆ ಯಜ್ಞಾಶ್ವವನ್ನು ಒಂದು ಹೋತದೊಂದಿಗೆ ಬಲಿಗಂಬಕ್ಕೆ ಕಟ್ಟಲಾಗುತ್ತಿತ್ತು. ಯಜ್ಞಾಶ್ವದ ಮೇಲೆ ಒಂದು ಬಟ್ಟೆಯನ್ನು ಹೊದ್ದಿಸಿ ಅದನ್ನು ಉಸಿರುಕಟ್ಟಿಸಿ ಕೊಲ್ಲಲಾಗುತ್ತಿತ್ತು. ಆಮೇಲೆ ಅದನ್ನು ಜಾಣತನದಿಂದ ಕತ್ತರಿಸಲಾಗುತ್ತಿತ್ತು. ಒಲೆಗಳ ಮೇಲೆ ಆ ಕುದುರೆಯ ಶರೀರ ಭಾಗಗಳನ್ನು ಸುಟ್ಟು ಪ್ರಜಾಪತಿಗೆ ಅರ್ಪಣೆ ಮಾಡಲಾಗುತ್ತಿತ್ತು. ಮೂರನೆಯ ದಿನ ದೊರೆಗೆ ಶುದ್ಧಿಸ್ನಾನವಾಗುತ್ತಿತ್ತು. ಯಜ್ಞನಿರ್ವಾಹಕರಾದ ಪುರೋಹಿತರಿಗೆ ಸಂಭಾವನೆಗಳನ್ನು ಕೊಡಲಾಗುತ್ತಿತ್ತು. ಭಾರತದ ಚರಿತ್ರೆಯಲ್ಲಿ ಸೂರ್ಯಗುಪ್ತ ಚಾಳುಕ್ಯ ರಾಷ್ಟ್ರಕೂಟವಂಶದ ಅನೇಕ ರಾಜರು ಈ ಯಾಗವನ್ನು ಆಚರಿಸಿದ್ದಾರೆ.ಯಜ್ಞಯಾಗ; ಬ್ರಾಹ್ಮಣಗಳು

ಉಲ್ಲೇಖ

[ಬದಲಾಯಿಸಿ]

ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರರು ನಿರೂಪಿಸಿದ್ದಾರೆ. ಇದನ್ನುನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನುಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ? ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂಪದದನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋಅದಕ್ಕೆ ಅಶ್ವ ವೆಂದುಹೆಸರು. ಇದನ್ನು ನಾವು ಶುದ್ಧ ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕಅರ್ಥ ೩]ಇವೆರಡರಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥದೊಡನೆ ರೂಢಿಯಿಂದ ಬಂದಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈಮಿತಿಯಿಲ್ಲ. ಒಂದು ಉಧಾಹರಣೆನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆಕೆಸರು ಜ ಎಂದರೆ ಹುಟ್ಟಿದ್ದು ಎಂದುಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವುಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿಕೇವಲ ಕಮಲ ಎಂದು ಕರೆಯಲಾಗಿದೆ. ಇದುಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆಯಾವುದು ತಿನ್ನುತ್ತದೋ ಅದು , ಎಂದಾಗಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನುತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನುತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂಅಶ್ವವೇ. ಅಂದರೆ ಯಾಸ್ಕರಾಚಾರ್ಯರುಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದುಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮಪಂಚೇಂದ್ರಿಯಗಳು. ಮೇಧ ಎಂದಾಗ ಒಂದುಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸುಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲುಏನು ಮಾಡಬೇಕೆಂಬುದು ಅದರ ಸಾರ. 

"https://kn.wikipedia.org/w/index.php?title=ಅಶ್ವಮೇಧ&oldid=1012448" ಇಂದ ಪಡೆಯಲ್ಪಟ್ಟಿದೆ