ಅಲೆನ್ ಟೇಟ್
ಜಾನ್ ಓರ್ಲೆ ಅಲೆನ್ ಟೇಟ್ ( ಅಲೆನ್ ಟೇಟ್ ಎಂದು ಹೆಚ್ಚು ಬಳಕೆಯಲ್ಲಿ) (1899-1979). ಅಮೆರಿಕದ ಒಬ್ಬ ಪ್ರಸಿದ್ಧ ಕವಿ ಮತ್ತು ವಿಮರ್ಶಕ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಕೆಂಟುಕಿಯ ವಿಂಚೆಸ್ಟರ್ ಎಂಬಲ್ಲಿ. ವ್ಯಾಂಡರ್‍ಬಿಲ್ಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಗಳಿಸಿ ದಕ್ಷಿಣದ ಹಲವಾರು ಶಾಲೆಗಳಲ್ಲಿ ಮತ್ತು ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಲ್ಲಿ, (1939-42), ಸಾಹಿತ್ಯವನ್ನು ಬೋಧಿಸಿದ.
ದೇಶಭ್ರಷ್ಟರ ಮತ್ತು ಭೂಚಳವಳಿಗಾರರ ನಿಕಟ ಸಂಪರ್ಕ ಹೊಂದಿದ್ದ ಟೇಟ್ ಅವರಂತೆಯೆ ಸಂಪ್ರದಾಯವಾದಿಯಾಗಿದ್ದ. ಹೌಂಡ್ ಅಂಡ್ ಹಾರ್ನ್ (1931-1934) ಮತ್ತು ಸವ್ಯಾನ ರಿವ್ಯೂಗಳ (1944-1946) ಸಂಪಾದಕನಾಗಿ ಕೆಲಸ ಮಾಡಿದ.
ಕಾವ್ಯ
[ಬದಲಾಯಿಸಿ]ಇವನ ಕವನಗಳಲ್ಲಿ ದಕ್ಷಿಣದ ಭಾವನೆಗಳನ್ನೂ ಶಾಸ್ತ್ರೀಯ ಕಠಿಣತೆಯನ್ನೂ ಧಾರ್ಮಿಕ ಸಂಕೇತವನ್ನೂ ಸಾಮಾಜಿಕ ವಿಡಂಬನೆಯನ್ನೂ ಬೌದ್ಧಿಕ ಸಂಕೀರ್ಣತೆಯನ್ನೂ ಕಾಣಬಹುದು. ಇಪ್ಪತ್ತನೆಯ ಶತಮಾನದ ಇನ್ನೊಬ್ಬ ಪ್ರಸಿದ್ಧ ಇಂಗ್ಲಿಷ್ ಕವಿಯಾದ ಟಿ.ಎಸ್ ಎಲಿಯಟ್‍ನ ಕಾವ್ಯದ ಪ್ರಭಾವವನ್ನು ಇವನ ಕಾವ್ಯದಲ್ಲಿ ಗುರುತಿಸಬಹುದು. ಅತ್ಯಂತ ಪ್ರಚಾರ ಪಡೆದ ಇವನ ಕವನ ಓಡ್ ಟು ದಿ ಕಾನ್‍ಫಡರೇಟ್ ಡೆಡ್ ಆಗಾಗ್ಗೆ ಆರಿಸಲ್ಪಟ್ಟ ಕಾವ್ಯಮಂಜರಿಗಳಲ್ಲಿ ಕಾಣಿಸಿಕೊಂಡಿದೆ.
ಈ ಕವಿಯ ಇತರ ಕವನಗಳು : ಮಿಸ್ಟರ್ ಪೋಪ್ ಅಂಡ್ ಅದರ್ ಪೊಯೆಮ್ಸ್ (1928), ಪೊಯೆಮ್ಸ್-1928-31 (1932) ದಿ ಮೆಡಿಟರೇನಿಯನ್ ಅಂಡ್ ಅದರ್ ಪೂಯೆಮ್ಸ್ (1936) ಮತ್ತು ಪೊಯೆಮ್ಸ್-1922-47-(1948).
ದಿ ಫಾದರ್ಸ್ (1938) ಎಂಬುದು ಈತನ ಕಾದಂಬರಿ.
ವಿಮರ್ಶೆ
[ಬದಲಾಯಿಸಿ]ಟೇಟ್ ಕವಿಯಾಗಿ ಎಷ್ಟು ಖ್ಯಾತಿ ಗಳಿಸಿದ್ದಾನೊ ವಿಮರ್ಶಕನಾಗಿಯೂ ಅಷ್ಟೇ ಖ್ಯಾತಿಯನ್ನು ಗಳಿಸಿದ. ಆಧುನಿಕ ವಿಮರ್ಶೆಯ ಮಾರ್ಗಸೂಚಿಗಳಾದ ಹಲವಾರು ವಿಮರ್ಶಾತ್ಮಕ ಪ್ರಬಂಧ ಸಂಕಲನಗಳನ್ನು ಈತ ಪ್ರಕಟಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದವು: ರಿಆ್ಯಕ್ಷನರಿ ಎಸ್ಸೇಸ್ ಇನ್ ಪೊಯೆಟ್ರಿ ಅಂಡ್ ಐಡಿಯಾಸ್ (1936), ರೀಸನ್ ಇನ್ ಮ್ಯಾಡ್‍ನೆಸ್ (1941), ಆನ್ ದಿ ಲಿಮಿಟ್ಸ್ ಆಫ್ ಪೊಯೆಟ್ರಿ (1948) ಇವು ಪ್ರಸಿದ್ಧ ವಿಮರ್ಶೆಗಳು. ದಿ ಹೋವರಿಂಗ್ ಫ್ಲೈ (1949), ದಿ ಫರ್‍ಲೋರನ್ ಡೆವಿಲ್ (1952), ಕಲೆಕ್ಟಡ್ ಎಸ್ಸೇಸ್ (1959) ಇವು ಪ್ರಬಂಧಗಳು. ಇವುಗಳ ಜತೆಗೆ ಸ್ಟೋನ್‍ವಾಲ್ ಜ್ಯಾಕ್ಸನ್ (1928) ಮತ್ತು ಜೆಫರ್‍ಸನ್ ಡೇವಿಸ್ (1929) ಎಂಬ ಜೀವನ ಚರಿತ್ರೆಗಳನ್ನೂ ಬರೆದಿದ್ದಾನೆ.
ಕಾವ್ಯದ ಅಧ್ಯಯನಕ್ಕೆ ಟೇಟ್‍ನ ಸೂತ್ರ ಕರ್ಷಣ ಶಕ್ತಿ (ಟೆನ್‍ಷನ್). ಈ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸುತ್ತಾನೆ. ಇದನ್ನು ತರ್ಕಶಾಸ್ತ್ರದ ಎಕ್ಸ್‍ಟೆನ್‍ಷನ್ ಮತ್ತು ಇನ್‍ಟೆನ್‍ಷನ್ ಪದಗಳಿಂದ ಸೃಷ್ಟಿಸಿದ್ದಾನೆ. ಪದದ ಎಕ್ಸ್‍ಟೆನ್‍ಷನ್ ಎಂದರೆ ಆ ಪದವನ್ನು ಯಾವ ಯಾವ ಪ್ರತ್ಯೇಕ ವಸ್ತುಗಳಿಗೆ ಮತ್ತು ಕಲ್ಪನೆಗಳಿಗೆ ಬಳಸಬಹುದೊ ಅವೆಲ್ಲವುಗಳ ಮೊತ್ತ. ಇನ್‍ಟೆನ್‍ಷನ್ ಎಂದರೆ ಅದು ಸೂಚಿಸುವ ಗುಣಗಳ ಸಮುದಾಯ. ಈ ಎರಡೂ ಅರ್ಥಗಳೂ ಏಕಕಾಲದಲ್ಲಿ ಇದಾವುದೇ ಟೆನ್‍ಷನ್. ಈ ಎರಡು ಅರ್ಥಗಳಲ್ಲಿ ಒಂದರಿಂದ ಪ್ರಾರಂಭಿಸಿ ಇನ್ನೊಂದನ್ನು ಬೆಳೆಸಬಹುದು. ಟೇಟ್ ಪೊಯ್‍ಟ್ರಿ ಆಫ್ ದ ಸೆಂಟರ್ ಎಂದು ಕರೆಯುವ ಶ್ರೇಷ್ಠ ಕಾವ್ಯದಲ್ಲಿ ಕವಿ ಬಳಸುವ ವಿಶಿಷ್ಟ ತಂತ್ರ ಏಕಪರಿಣಾಮವನ್ನು ಸಾಧಿಸುವದರಲ್ಲಿ ಕರಗಿಹೋಗಿರುತ್ತದೆ ಎನ್ನುತ್ತಾನೆ.