ಅತ್ತರು
ಅತ್ತರು ಸಸ್ಯಶಾಸ್ತ್ರೀಯ ಮೂಲಗಳಿಂದ ಪಡೆಯಲಾದ ಒಂದು ಸಾರಭೂತ ತೈಲ. ಅತ್ಯಂತ ಸಾಮಾನ್ಯವಾಗಿ ಈ ಎಣ್ಣೆಗಳನ್ನು ಜಲ ಅಥವಾ ಉಗಿ ಶುದ್ಧೀಕರಣದ ಮೂಲಕ ಹೊರತೆಗೆಯಲಾಗುತ್ತದೆ. ಅವನ್ನು ರಾಸಾಯನಿಕ ವಿಧಾನಗಳಿಂದಲೂ ಹಿಂಡಿತೆಗೆಯಬಹುದು ಆದರೆ ಸಾಮಾನ್ಯವಾಗಿ ಅತ್ತರುಗಳು ಎಂದು ಅರ್ಹತೆಪಡೆದ ನೈಸರ್ಗಿಕ ಸುಗಂಧದ್ರವ್ಯಗಳನ್ನು ನೀರಿನಿಂದ ಶುದ್ಧೀಕರಿಸಲಾಗುತ್ತದೆ. ಎಣ್ಣೆಗಳನ್ನು ಸಾಮಾನ್ಯವಾಗಿ ಗಂಧದಂತಹ ಒಂದು ದಾರು ಮೂಲಪದಾರ್ಥದೊಳಗೆ ಶುದ್ಧೀಕರಿಸಲಾಗುತ್ತದೆ ಮತ್ತು ನಂತರ ಹಳತಾಗಿಸಲಾಗುತ್ತದೆ. ಬಳಸಲಾದ ಸಸ್ಯಪದಾರ್ಥಗಳು ಮತ್ತು ಬಯಸಿದ ಪರಿಣಾಮಗಳನ್ನು ಆಧರಿಸಿ ಪಕ್ವಗೊಳಿಸುವ ಅವಧಿ ಒಂದರಿಂದ ಹತ್ತು ವರ್ಷಗಳವರೆಗೆ ಇರಬಹುದು.
ಅತ್ತರುಗಳು ಬಹಳ ಸಾಂದ್ರಣಯುಕ್ತವಾಗಿರುತ್ತವೆ ಮತ್ತು ಹಾಗಾಗಿ ಅವನ್ನು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಅಲಂಕೃತ ಆಕಾರಕೊಟ್ಟ ಸ್ಫಟಿಕ ಬಾಟಲಿಗಳು ಅಥವಾ ಚಿಕ್ಕ ರತ್ನಖಚಿತ ಬಸಿ ಸೀಸೆಗಳಲ್ಲಿ ಮಾರಾಟಮಾಡಲಾಗುತ್ತದೆ. ಅತ್ತರುಗಳು ಮಧ್ಯಪ್ರಾಚ್ಯದಾದ್ಯಂತ ಮತ್ತು ದೂರಪ್ರಾಚ್ಯದಲ್ಲಿಯೂ ಭಾರತ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಜನಪ್ರಿಯವಾಗಿವೆ. ಅತ್ತರುಗಳು ಅಗ್ಗವಾಗಿವೆ ಏಕೆಂದರೆ ಅವು ಎಷ್ಟು ಸಾಂದ್ರಣಯುಕ್ತವಾಗಿವೆಯೆಂದರೆ ಒಂದು ಸಣ್ಣ ಬಾಟಲಿಯನ್ನು ನಿಯಮಿತ ಬಳಕೆದಾರನು ಹಲವು ವಾರಗಳು ಅಥವಾ ತಿಂಗಳುಗಳು ಕೂಡ ಬಳಸಬಹುದು.
ತಾಂತ್ರಿಕವಾಗಿ ಅತ್ತರುಗಳು ಗಂಧದೆಣ್ಣೆ/ದ್ರವ ಪ್ಯಾರಫಿನ್‍ನಲ್ಲಿ ಹೂವುಗಳು, ಮೂಲಿಕೆಗಳು, ಸಾಂಬಾರ ಪದಾರ್ಥಗಳು ಮತ್ತು ಬಿಸಿಯಾಗಿಸಿದ ಮಣ್ಣಿನಂತಹ ಇತರ ನೈಸರ್ಗಿಕ ವಸ್ತುಗಳಿಂದ ಪಡೆದ ಪದಾರ್ಥಗಳು. ಅತ್ತರುಗಳನ್ನು ದೊಡ್ಡ ಕಡಾಯಿ ಮತ್ತು ಭಾಂಡದೊಂದಿಗೆ ಜಲ ಶುದ್ಧೀಕರಣ ತಂತ್ರ ಬಳಸಿ ತಯಾರಿಸಲಾಗುತ್ತದೆ. ಈ ತಂತ್ರಗಳು ಭಾರತದ ಕನ್ನೌಜ್‍ನಲ್ಲಿ ಇಂದೂ ಬಳಕೆಯಲ್ಲಿವೆ. ಮುಘಲ್ ಕುಲೀನರು ಅತ್ತರುಗಳ ಪ್ರೇಮಿಗಳಾಗಿದ್ದರು. ಮಲ್ಲಿಗೆ ಅತ್ತರು ಹೈದರಾಬಾದ್ ನಿಜಾಮರ ನೆಚ್ಚಿನ ಸುಗಂಧ ದ್ರವ್ಯವಾಗಿತ್ತು. ಸಾಂಪ್ರದಾಯಿಕವಾಗಿ ಪೂರ್ವ ವಿಶ್ವದಲ್ಲಿ, ತಮ್ಮ ಅತಿಥಿಗಳಿಗೆ ಬೀಳ್ಕೊಡುವ ಸಮಯದಲ್ಲಿ ಅತ್ತರು ಕೊಡುವುದು ಕುಲೀನರ ರೂಢಿಗತ ಪದ್ಧತಿಯಾಗಿತ್ತು. ಅತ್ತರುಗಳನ್ನು ಸಾಂಪ್ರದಾಯಿಕವಾಗಿ ಅತ್ತರುದಾನಿಗಳು ಎಂದು ಕರೆಯಲಾಗುವ ಅಲಂಕೃತ ಸ್ಫಟಿಕ ಬಾಟಲಿಗಳಲ್ಲಿ ಕೊಡಲಾಗುತ್ತದೆ. ಸೂಫಿ ಆರಾಧಕರಲ್ಲಿ ಧ್ಯಾನ ಗುಂಪುಗಳು ಮತ್ತು ಕುಣಿತಗಳ ಅವಧಿಯಲ್ಲಿ ಅತ್ತರುಗಳ ಬಳಕೆ ಸಾಮಾನ್ಯವಾಗಿದೆ.