ಸದಸ್ಯ:Harsha 12345 salian
ಜೋಗ ಅಥವ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.[೧][೨] ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.
ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ೧೬ ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲೂ, ಹೊನ್ನಾವರದಿಂದ ೫೬ ಕಿಮೀ ದೂರದಲ್ಲೂ ಇದೆ. ಇಲ್ಲಿ ಶರಾವತಿ ನದಿ ೨೫೨.೭ ಮೀ (೮೨೯ ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (೨೪೦೦ ಅಡಿ), ಎವಾನ್ಸನ್ (೧೨೦೦ ಅಡಿ) ಮತ್ತು ಆರ್ವೆ (೧೧೦೦ ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (೧೬೪ ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ ೨೫೦ ಗಜಗಳಷ್ಟು ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ