ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ
ಹಾಡುವಳ್ಳಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಕರ್ನಾಟಕದ ಪುರಾತನ ಬಸದಿಗಳಲ್ಲಿ ಒಂದು.
ಸ್ಥಳ
[ಬದಲಾಯಿಸಿ]ಈ ಬಸದಿಯು ಭಟ್ಕಳದಿಂದ ಸಾಗರಕ್ಕೆ ಹೋಗುವ ರಸ್ತೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಭದ್ರವಾದ ಪ್ರಕಾರದೊಳಗಿದೆ. ಈಗ ಈ ಬಸದಿಗೆ ನಡೆದುಕೊಳ್ಳುವವರು ಇಲ್ಲಿಯ ಜನರಂತೆ ಬೇರೆ ಕಡೆಯಿಂದ ಇಲ್ಲಿ ನೆಲೆಸಿದವರು ಆಗಿರುತ್ತಾರೆ.
ಇತಿಹಾಸ
[ಬದಲಾಯಿಸಿ]ಬೋಳಗಿ ಶಾಸನದಿಂದ ಇದು ಸ್ವಾದಿ ಮಠಕ್ಕೆ ಸೇರಿರುವಂತೆ ತಿಳಿದುಬರುತ್ತದೆ. ಈ ಬಸದಿಯನ್ನು ಕ್ರಿಸ್ತಶಕ ೧೪೧೪ ರಲ್ಲಿ ಆಳುತ್ತಿದ್ದ ಸ್ಥಳೀಯ ಸಾಳ್ವೇಂದ್ರ ಮಹಾರಾಜ ನಿರ್ಮಿಸಿದರೆಂದು ತಿಳಿದುಬರುತ್ತದೆ. ಆ ಬಳಿಕ ಇದು ಹಲವಾರು ಏರಿಳಿತಗಳನ್ನು ಕಂಡು ಇತ್ತೀಚೆಗೆ ೧೯೯೮-೯೯ರಲ್ಲಿ ಭಾರತ ವರ್ಷೀಯ ದಿಗಂಬರ ಜೈನ ಮಹಾಸಭಾ, ದೆಹಲಿ ಮತ್ತು ಸೋಂದೆ ಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಆರ್ಥಿಕ ನೆರವಿನಿಂದ ಜೀರ್ಣೋದ್ಧಾರಗೊಂಡಿದೆ. ಈಗ ಇದು ಸ್ಥಳೀಯ ಒಂದು ಟ್ರಸ್ಟಿನ ಮೂಲಕ ನಡೆಯುತ್ತಿದೆ.[೧]
ಆವರಣ
[ಬದಲಾಯಿಸಿ]ಈ ಬಸದಿಯು ಹಾಡುವಳ್ಳಿಯ ಇತರ ಬಸದಿಗಳಿಗಿಂತ ಸ್ವಲ್ಪ ಎತ್ತರ ಪ್ರದೇಶದಲ್ಲಿದೆ. ಇದರ ಬಲಬದಿಯಲ್ಲಿ ಚತುರ್ವಿಂಶತಿ ತೀರ್ಥಂಕರರ ಮತ್ತು ಅಮ್ಮನವರ ಬಸದಿ ಇದೆ. ಬಸದಿಗೆ ಹಂಚಿನ ಮಾಡನ್ನು ಮಾಡಲಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆ ಬಸದಿಯ ಮೂಲ ನಾಯಕ ಶ್ರೀ ಸಾವಿರದ ಎಂಟು ಚಂದ್ರನಾಥ ಸ್ವಾಮಿಯ ಕಲಾಪೂರ್ಣವಾದ ಅಮೃತಶಿಲೆಯ ಬಿಂಬ. ಅಲ್ಲಲ್ಲಿ ಹಸಿರು ಬಣ್ಣದ ಶಿಲೆಗಳಿವೆ. ಇದು ೪ ಅಡಿ ಎತ್ತರವಿದ್ದು ಸ್ವತಂತ್ರವಾಗಿ ಖಡ್ಗಾಸನ ಭಂಗಿಯಲ್ಲಿ ನಿಂತುಕೊಂಡಿದೆ. ಇದಕ್ಕೆ ಪ್ರಭಾವಳಿ ಇಲ್ಲ. ನಾಡಿನ ಬಹು ಆಕರ್ಷಕ ಜಿನಬಿಂಬಗಳಲ್ಲಿ ಇದು ಒಂದು.[೨]
ಧಾರ್ಮಿಕ ಕಾರ್ಯಗಳು
[ಬದಲಾಯಿಸಿ]ಇಲ್ಲಿ ಶ್ರೀ ಸ್ವಾಮಿಗೆ ಪ್ರತಿನಿತ್ಯ ಕ್ಷೀರಾಭಿಷೇಕ ಮತ್ತು ಜಲಾಭಿಷೇಕ ನಡೆಯುತ್ತದೆ. ದಿನಕ್ಕೆ ಒಂದು ಬಾರಿ ಮಾತ್ರ ಪೂಜೆ ನಡೆಯುತ್ತದೆ. ಪೂರ್ವ ದಿನಗಳಾದ ನವರಾತ್ರಿ, ಯುಗಾದಿ, ನೂಲಹುಣ್ಣಿಮೆ, ದೀಪಾವಳಿ ಮಹಾವೀರ ತೀರ್ಥಂಕರರ ಮೋಕ್ಷ ಕಲ್ಯಾಣೋತ್ಸವ ಜೀವದಯಾಷ್ಟಮಿ ಇತ್ಯಾದಿಗಳನ್ನು ಆಚರಿಸಲಾಗುತ್ತದೆ.
ಕಲಾಕೃತಿ
[ಬದಲಾಯಿಸಿ]ಈ ಬಸದಿಗೆ ಮೇಗಿನ ನೆಲೆಯಿಲ್ಲ. ಗರ್ಭಗೃಹದಲ್ಲಿ ಒಂದು ಅಂಕಣದ ಮೇಲೆ ಭಗವಾನ್ ನೇಮಿನಾಥ ಸ್ವಾಮಿಯ ಪರ್ಯಾಂಕಾಸನ ಶಿಲೆಯ ಮೂರ್ತಿ ಇದೆ. ಇನ್ನೊಂದು ಕಡೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಲೋಹದ ಜಿನಬಿಂಬವಿದ್ದು ಅದರ ಸುತ್ತಲಿನ ಪ್ರಭಾವಳಿಯಲ್ಲಿ ಪದ್ಮಾಸನಸ್ಥರಾದ ತ್ರಿಕಾಲ ತೀರ್ಥಂಕರರ ಚಿಕ್ಕದಾದ ಬಿಂಬಗಳು ವಿರಾಜಮಾನವಾಗಿದೆ. ಇದೊಂದು ವಿಶೇಷ. ಇಲ್ಲೇ ಇನ್ನೊಂದು ಪಂಚಲೋಹದ ಪ್ರಭಾವಳಿ ಸಹಿತ ಶ್ರೀ ಚಂದ್ರನಾಥ ಸ್ವಾಮಿಯ ಜಿನ ಬಿಂಬವಿದೆ. ಇವುಗಳಲ್ಲದೆ ಇನ್ನೂ ಎರಡು ಬಿಳಿ ಶಿಲೆಯ ಪರ್ಯಂಕಾಸನದ ಸುಂದರ ಜಿನಬಿಂಬಗಳಿವೆ.
ವಿಶೇಷತೆ
[ಬದಲಾಯಿಸಿ]ಈ ಜಿನಾಲಯದ ಇನ್ನೊಂದು ವಿಶೇಷವೆಂದರೆ ಬಸದಿಯ ಎದುರಿಗೆ ಸ್ವಲ್ಪ ದೂರದಲ್ಲಿ ಮಾನಸ್ತಂಭದ ಒಂದು ಶಿಥಿಲವಾದ ಪೀಠವಿದ್ದು ಹಿಂದಿನ ಕಾಲದಲ್ಲಿ ಇದರ ಮೇಲೆ ಒಂದು ಕಂಚಿನ ಮಾನಸ್ತಂಭವಿತ್ತಂತೆ. ಇದರ ಒಂದು ಅಂಕಣದಲ್ಲಿ ಒಂದು ಶಾಸನವನ್ನು ಬರೆಯಲಾಗುತ್ತಿತ್ತಂತೆ. ಆದರೆ ಇದು ಯಾವುದೂ ಈಗ ಇಲ್ಲಿ ಕಂಡುಬರುವುದಿಲ್ಲ.
ಸಧ್ಯದ ಸ್ಥಿತಿ
[ಬದಲಾಯಿಸಿ]ಈ ಬಸದಿಗೆ ಗರ್ಭಗೃಹ ಪ್ರಾರ್ಥನಾ ಮಂಟಪ ಹೊರಗಿನ ಜಗಲಿ ಮಾತ್ರ ಇದೆ, ಗಂಧ ಕುಟಿಯಿಲ್ಲ ಮತ್ತು ಬೇರೆ ಯಾವುದೇ ಜಿನಬಿಂಬಗಳಿಲ್ಲ. ಮೇಲೆ ಉಲ್ಲೇಖಿಸಿದ ಕೆಲವು ಜಿನ ಬಿಂಬಗಳ ಮೇಲೆ ಇರುವ ಬರವಣಿಗೆಯನ್ನು ಓದಲು ಸಾಧ್ಯವಾಗುವುದಿಲ್ಲ. ಇಲ್ಲಿ ಶ್ರೀ ಪದ್ಮಾವತಿಯ ಬಿಂಬ ಇಲ್ಲ. ಮಾನಸ್ತಂಭದ ಪೀಠದ ಬಳಿಯಲ್ಲಿ ಕೆಲವು ವೀರಗಲ್ಲುಗಳು ಕಾಣಬಹುದು. ಇವೆಲ್ಲವುಗಳ ವ್ಯವಸ್ಥಿತ ಅಧ್ಯಯನವಾಗಬೇಕು ಅಷ್ಟೇ. ಈ ಬಸದಿಗೆ ಕಛೇರಿ ಸಭಾಮಂಟಪ ಇತ್ಯಾದಿಗಳು ಯಾವುದು ಇಲ್ಲ. ಈ ಬಸದಿಗೆ ಶಾಶ್ವತವಾದ ಮೂಲವಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ https://www.jainheritagecentres.com/blogs/heritage-highlight/jain-heritage-of-haduvalli/
- ↑ ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.