ವಿಕಿಪೀಡಿಯ:ಸಮ್ಮಿಲನ:ವಾರ್ಷಿಕೋತ್ಸವ:೯:ಪತ್ರಿಕಾ ಪ್ರಕಟಣೆ:ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಬೆಂಗಳೂರು, ಮೆ ೨೯, ೨೦೧೨): ವಿಕಿಪೀಡಿಯ ವಿಶ್ವಕೋಶದ ಕನ್ನಡದ ಅವತರಣಿಕೆಯಾದ ಕನ್ನಡ ವಿಕಿಪೀಡಿಯವು (http://kn.wikipedia.org) ಇದೇ ಜೂನ್ ೯ ರಂದು ೯ ವರ್ಷಗಳನ್ನು ಪೂರೈಸಲಿದೆ. ಈ ವಿಶೇಷ ದಿನವನ್ನು ಆಚರಿಸಲು ವಿಕಿಪೀಡಿಯನ್ನರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.

ವಿಕಿಪೀಡಿಯವು ವಿವಿಧ ವಿಷಯಗಳ ಬಗ್ಗೆ ೪೦ ಲಕ್ಷಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿರುವ, ೪೮.೯ ಕೋಟಿ ಜನರಿಂದ ಓದಲ್ಪಡುತ್ತಿರುವ ಒಂದು ಆನ್‌ಲೈನ್ ಸ್ವತಂತ್ರ ವಿಶ್ವಕೋಶ. ಇದು ವಿಶ್ವದಲ್ಲೇ ಅತಿ ಹೆಚ್ಚು ಜನರು ಭೇಟಿ ಕೊಡುವ ತಾಣಗಳಲ್ಲಿ ೫ನೆಯದು. ಇದು ಕನ್ನಡವೂ ಸೇರಿದಂತೆ ೨೦ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ ವಿಕಿಪೀಡಿಯವು ೧೨,೦೦೦ಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿದ್ದು, ಪ್ರತಿ ತಿಂಗಳು ೧೧.೫ ಲಕ್ಷ ಜನ ಸಂದರ್ಶಕರನ್ನು ಹೊಂದಿದೆ. ಬಹಳಷ್ಟು ಜನರಿಗೆ ತಿಳಿಯದ ವಿಷಯವೆಂದರೆ ವಿಕಿಪೀಡಿಯವು ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸ್ವಯಂಸೇವಕರ ಕಾಣಿಕೆಯಿಂದ ಕೂಡಿದೆ. ಪ್ರಸ್ತುತ, ವಿಶ್ವಾದ್ಯಂತ ೨೭ ಸ್ವಯಂಸೇವಕರು ಕನ್ನಡ ವಿಕಿಪೀಡಿಯಕ್ಕೆ ಕಾಣಿಕೆ ಸಲ್ಲಿಸುತ್ತಿದ್ದಾರೆ.

ಈ ಸಮುದಾಯದಲ್ಲಿನ ಸದಸ್ಯರು ಇನ್ನೊಬ್ಬರ ಜೊತೆ ಸಹಯೋಗ ನಡೆಸಿ ಅನೇಕ ವಿಷಯಗಳ ಬಗೆಗಿನ ಮಾಹಿತಿಯನ್ನು ಸೇರಿಸುತ್ತಾರೆ ಮತ್ತು ಉತ್ತಮಗೊಳಿಸುತ್ತಾರೆ. ಅವರವರ ಆಸಕ್ತಿಯ ಮೇಲೆ ಕರ್ನಾಟಕದ ಆಹಾರ-ಅಡುಗೆ ಪದ್ಧತಿ, ಸಂಸ್ಕೃತಿ, ಸಂಪ್ರದಾಯ, ಸಂಗೀತ ಇತ್ಯಾದಿ ವಿಷಯಗಳ ಬಗ್ಗೆ ಲೇಖನ ಸಂಪಾದಿಸುತ್ತಾರೆ. ಕೆಲವರು ಕನ್ನಡಿಗರು ಆಂಗ್ಲವನ್ನು ಕಲಿಯದೆಯೇ ವಿಶ್ವದ ಅನೇಕ ಸಂಗತಿಗಳನ್ನು ತಿಳಿಯಲು ಅನುವಾಗುವಂತೆ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ.

ಆದರೆ, ಈ ಪಯಣವು ಈಗಷ್ಟೇ ಆರಂಭವಾಗಿದೆ. ಯೋಜನೆಯ ಸಕ್ರಿಯ ಸದಸ್ಯರಾದ, ಓಂಶಿವಪ್ರಕಾಶ್ ಎಚ್ ಎಲ್ ಅವರು "ಕರ್ನಾಟಕದ ಅಮೂಲ್ಯವಾದ ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಧಾರವಾಡದ ಪೇಡದಿಂದ ಬಂಡೀಪುರದ ಕಾಡುಗಳು, ಕೂರ್ಗ್‌ನ ಕಾಫೀ ಎಸ್ಟೇಟುಗಳು ಇತ್ಯಾದಿಗಳವರೆಗೂ ವಿಕಿಪೀಡಿಯದಲ್ಲಿ ಕಲೆಹಾಕಲು, ಎಲ್ಲ ಕನ್ನಡದ ಪ್ರೇಮಿಗಳನ್ನು ಈ ಯೋಜನೆಗೆ ಸ್ವಾಗತಿಸುತ್ತೇವೆ. ಯೋಜನೆಯಲ್ಲಿ ಪಾಲ್ಗೊಳ್ಳಲು ನಿಮಗೆ ಕನ್ನಡ ಓದಲು ಮತ್ತು ಬರೆಯಲು ಬಂದರೆ ಸಾಕು ಮತ್ತು ಗಮನಾರ್ಹ ಲೇಖನಗಳ ಬಗ್ಗೆ ಬರೆಯುವಾಗ ನಿಷ್ಪಕ್ಷಪಾತ ಧೋರಣೆಯಿಂದ ಬರೆಯುವುದು, ಘಟನಾವಳಿಗಳ ಮೂಲದ ಉಲ್ಲೇಖವನ್ನು ನಮೂದಿಸುವುದು ಇತ್ಯಾದಿ ಸರಳ ನಿಯಮಗಳನ್ನು ಪಾಲಿಸಬೇಕು. ವಿಕಿಪೀಡಿಯದಲ್ಲಿ ಯಾವುದೇ ವಿಷಯದಲ್ಲಿ ಬದಲಾವಣೆಗಳನ್ನು ಮಾಡಲು (ಸಂಪಾದಿಸಿ) ಕೊಂಡಿಯ ಮೇಲೆ ಕ್ಲಿಕ್ಕಿಸಿ, ನಿಮಗೆ ತಿಳಿದಿರುವ ಹೆಚ್ಚಿನ ಮಾಹಿತಿಯನ್ನು ಸೇರಿಸಲು ಪ್ರಾರಂಭಿಸಬಹುದು.ನೀವು ಮಾಹಿತಿಯ ಉಲ್ಲೇಖಗಳನ್ನು ಪತ್ರಿಕೆ, ಪ್ರಕಟಣೆಗಳು, ಪುಸ್ತಕಗಳಿಂದ ತೆಗೆದುಕೊಳ್ಳಬಹುದು." ಎಂದು ಹೇಳುತ್ತಾರೆ.

೯ನೇ ವರ್ಷಾಚರಣೆಯ ಅಂಗವಾಗಿ ಕನ್ನಡ ವಿಕಿಪೀಡಿಯ ಸಮುದಾಯವು ಇಂದಿರಾನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ಭಾನುವಾರ ಜೂನ್ ೧೭ ರಂದು ಬೆಳಗ್ಗೆ ೧೦ ಘಂಟೆಗೆ ಸಮ್ಮಿಲನವನ್ನು ಆಯೋಜಿಸಿದೆ. ಹೊಸ ರೀತಿಯಲ್ಲಿ ಕನ್ನಡ ವಿಕಿಪೀಡಿಯವನ್ನು ಅಭಿವೃದ್ಧಿಗೊಳಿಸುವ ಮತ್ತು ಹೆಚ್ಚು ಜನರಿಗೆ ಇದರಲ್ಲಿ ಮಾಹಿತಿ ಸೇರಿಸುವ ಬಗ್ಗೆ ಚಿಂತನೆ ನಡೆಸಲಿದ್ದಾರೆ. ಜ್ಞಾನವನ್ನು ಹಂಚಲು ಮತ್ತು ಕನ್ನಡಿಗರ ಪರಂಪರೆಯನ್ನು ಸಂಭ್ರಮದಿಂದ ಆಚರಿಸಲಿಚ್ಛಿಸುವ - ವಿದ್ಯಾರ್ಥಿಗಳು, ವೃತ್ತಿನಿರತರು, ಗೃಹಿಣಿಯರು - ಎಲ್ಲರನ್ನೂ ಆಹ್ವಾನಿಸಲಾಗಿದೆ. ಬೆಂಗಳೂರಿನ ಇನ್ನೊಬ್ಬ ವಿಕಿಪೀಡಿಯನ್ ಆದ ತೇಜಸ್ ಜೈನ್ "ಜ್ಞಾನವನ್ನು ಮುಕ್ತವಾಗಿ ಹಂಚುವುದಕ್ಕಿಂತ ಹೆಚ್ಚು ತೃಪ್ತಿನೀಡುವಂತಹದ್ದು ಮತ್ತೊಂದಿಲ್ಲ; ಅದೂ ನಿಮ್ಮ ಮಾತೃ ಭಾಷೆಯಲ್ಲಿ..! ೫ ಕೋಟಿಗೂ ಮಿಗಿಲಾದ ಕನ್ನಡಿಗರು ನಿಮ್ಮ ಶ್ರಮದಿಂದ ಉಪಯೋಗ ಪಡೆಯಬಹುದು!" ಎನ್ನುತ್ತಾರೆ.

ವಿಕಿಮೀಡಿಯ ಫೌಂಡೇಷನ್ನಿನ ಭಾರತ ಕಾರ್ಯಕ್ರಮಗಳ ನೇತೃತ್ವ ವಹಿಸಿರುವ ಹಿಷಮ್ ಮುಂಡೊಲ್ ಹೇಳುತ್ತಾರೆ: "ವಿಕಿಪೀಡಿಯದ ಕನಸು ಜ್ಞಾನವನ್ನು ಎಲ್ಲರಿಗೂ ಸ್ವತಂತ್ರವಾಗಿ ದೊರೆಯುವಂತೆ ಮಾಡುವುದು. ಎಲ್ಲ ಕನ್ನಡಿಗರೂ, ಕನ್ನಡ ವಿಕಿಪೀಡಿಯನ್ನರ ಚಿಕ್ಕ ಹಾಗೂ ಸುಂದರ ಸಮುದಾಯವನ್ನು ಸೇರಿ ಕನ್ನಡವನ್ನು ಮಾತೃಭಾಷೆಯನ್ನಾಗಿ ಬಳಸುವ ಇತರೆ ಕೋಟ್ಯಾಂತರ ಮಂದಿಗೆ ಇದರ ಫಲಶೃತಿಯನ್ನು ಒದಗಿಸಿ ಎಂದು ಆಹ್ವಾನಿಸುತ್ತೇವೆ. ".

೯ನೇ ವರ್ಷದ ಆಚರಣೆಯ ಬಗ್ಗೆ ತಿಳಿಯಲು ಮತ್ತು ಪಾಲ್ಗೊಳ್ಳಲು, ನೀವು ಅವರನ್ನು (https://www.facebook.com/groups/kannadawikipedia/) ಅಲ್ಲಿ ಭೇಟಿಯಾಗಬಹುದು ಅಥವಾ wikikn-l@lists.wikimedia.org ಗೆ ಮಿಂಚಂಚೆ ಕಳುಹಿಸಬಹುದು.