ವಿಷಯಕ್ಕೆ ಹೋಗು

ವಾಫ಼ಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಫ಼ಲ್ ಹುದುಗು ಬಂದ ಕಲಸಿದ ಹಿಟ್ಟು ಯಾ ಕಣಕದಿಂದ ತಯಾರಿಸಲಾದ ಒಂದು ಖಾದ್ಯ. ಇದನ್ನು ವಿಶಿಷ್ಟ ಗಾತ್ರ, ಆಕಾರ ಮತ್ತು ಮೇಲ್ಮೈ ಛಾಪು ಕೊಡಲು ಮಾದರಿಯಿರುವ ಎರಡು ತಟ್ಟೆಗಳ ನಡುವಿಟ್ಟು ಬೇಯಿಸಲಾಗುತ್ತದೆ. ವಾಫ಼ಲ್ ಕಾವಲಿಯ ಬಗೆ ಮತ್ತು ಬಳಸಲಾದ ಪಾಕವಿಧಾನವನ್ನು ಆಧರಿಸಿ ಅನೇಕ ವಿಶಿಷ್ಟ ರೂಪಗಳಿವೆ. ವಾಫ಼ಲ್‍ಗಳನ್ನು ವಿಶ್ವದಾದ್ಯಂತ ತಿನ್ನಲಾಗುತ್ತದೆ, ವಿಶೇಷವಾಗಿ ಹನ್ನೆರಡಕ್ಕಿಂತ ಹೆಚ್ಚು ಪ್ರಾದೇಶಿಕ ವೈವಿಧ್ಯಗಳನ್ನು ಹೊಂದಿರುವ ಬೆಲ್ಜಿಯಮ್‍ನಲ್ಲಿ.[] ವಾಫ಼ಲ್‍ಗಳನ್ನು ತಾಜಾ ಆಗಿ ತಯಾರಿಸಬಹುದು ಅಥವಾ ಮೊದಲೇ ವಾಣಿಜ್ಯಿಕವಾಗಿ ಬೇಯಿಸಿ ಶೈತ್ಯೀಕರಿಸಿದ್ದನ್ನು ಬಿಸಿ ಮಾಡಬಹುದು.

ವಾಫ಼ಲ್‍ಗಳ ಅನೇಕ ವೈವಿಧ್ಯಗಳಿವೆ. ಜನಪ್ರಿಯವಿರುವ ಒಂದು ವಿಧವಾದ ಬ್ರಸಲ್ಸ್ ವಾಫ಼ಲ್‍ಗಳನ್ನು ಮೊಟ್ಟೆಯ ಬಿಳಿ ಅಥವಾ ಮಡ್ಡಿಯಿಂದ (ಸಾಂಪ್ರದಾಯಿಕವಾಗಿ ಏಲ್ ಮಡ್ಡಿ) ಹುದುಗು ಬರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ; ಸಾಂದರ್ಭಿಕವಾಗಿ ಎರಡೂ ಬಗೆಯ ಹುದುಗುಗಳನ್ನು ಒಟ್ಟಾಗಿ ಬಳಸಲಾಗುತ್ತದೆ. ಇತರ ಐರೋಪ್ಯ ವಾಫ಼ಲ್ ವೈವಿಧ್ಯಗಳಿಗೆ ಹೋಲಿಸಿದರೆ ಇವು ಹೆಚ್ಚು ಹಗುರ, ಗರಿಗರಿಯಾಗಿದ್ದು ಹೆಚ್ಚು ದೊಡ್ಡ ಪೊಳ್ಳುಭಾಗಗಳನ್ನು ಹೊಂದಿರುತ್ತವೆ ಮತ್ತು ಆಯತಾಕಾರದ ಬದಿಗಳನ್ನು ಹೊಂದಿರುತ್ತವೆ. ಬೆಲ್ಜಿಯಮ್‍ನಲ್ಲಿ, ಬಹುತೇಕ ವಾಫ಼ಲ್‍ಗಳನ್ನು ರಸ್ತೆ ಮಾರಾಟಗಾರರು ಬಿಸಿಬಿಸಿಯಾಗಿ ಮಿಠಾಯಿ ಸಕ್ಕರೆಯನ್ನು ಸಿಂಪಡಿಸಿ ಬಡಿಸುತ್ತಾರೆ. ಆದರೆ ಪ್ರವಾಸಿ ಪ್ರದೇಶಗಳಲ್ಲಿ ವಾಫ಼ಲ್‍ಗಳನ್ನು ಕಡಿದ ಕೆನೆ, ಮೃದು ಹಣ್ಣು ಅಥವಾ ಚಾಕಲಿಟ್ ಸ್ಪ್ರೆಡ್ ಇಂದ ಅಲಂಕರಿಸಬಹುದು. ಬ್ರಸಲ್ಸ್ ವಾಫ಼ಲ್‍ನ ಅತ್ಯಂತ ಹಳೆಯ ಉಲ್ಲೇಖವನ್ನು ೧೮೪೨/೪೩ ರಿಂದ ಸ್ವಿಸ್ ಬೇಕರ್ ಫ಼್ಲೋರಿಯಾನ್ ಡಾಚರ್‌ಗೆ ಆರೋಪಿಸಲಾಗಿದೆ. ಆದರೆ ಇವನು ಪಾಕವಿಧಾನವನ್ನು ಸೃಷ್ಟಿಸಿದವನಲ್ಲ; ಇವನು ಅಸ್ತಿತ್ವದಲ್ಲಿರುವ ಒಂದು ಪಾಕವಿಧಾನವನ್ನು ಬ್ರಸಲ್ಸ್ ವಾಫ಼ಲ್ ಎಂದು ಕೇವಲ ಜನಪ್ರಿಯಗೊಳಿಸಿ ಔಪಚಾರಿಕಗೊಳಿಸಿದನು.

ಅಮೇರಿಕನ್ ವಾಫ಼ಲ್‍ಗಳು ಗಣನೀಯವಾಗಿ ಬದಲಾಗುತ್ತವೆ. ಸಾಮಾನ್ಯವಾಗಿ ಬೆಲ್ಜಿಯನ್ ವಾಫ಼ಲ್‍ಗಿಂತ ಹೆಚ್ಚು ದಟ್ಟ ಮತ್ತು ಹೆಚ್ಚು ತೆಳುವಾಗಿರುವ ಇವನ್ನು ಹಲವುವೇಳೆ ಉಬ್ಬುಪುಡಿಯಿಂದ ಹುದುಗು ಬರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ಹಿಟ್ಟಿನಲ್ಲಿ ಕೆಲವೊಮ್ಮೆ ಪೀಕನ್, ಚಾಕಲೇಟ್ ಹನಿಗಳು ಅಥವಾ ಬೆರಿಗಳನ್ನು ಮಿಶ್ರಣ ಮಾಡಲಾಗುತ್ತದೆ ಮತ್ತು ಇವು ದುಂಡು, ಚೌಕ ಅಥವಾ ಆಯತಾಕಾರವಾಗಿರಬಹುದು. ಅಮೇರಿಕನ್ ಪ್ಯಾನ್‍ಕೇಕ್‍ಗಳಂತೆ, ಇವನ್ನು ಸಾಮಾನ್ಯವಾಗಿ ಸಿಹಿ ತಿಂಡಿ ಆಹಾರವಾಗಿ ಬಡಿಸಲಾಗುತ್ತದೆ ಮತ್ತು ಮೇಲೆ ಬೆಣ್ಣೆ ಹಾಗೂ ಮೇಪಲ್ ಸಿರಪ್, ಇತರ ಹಣ್ಣಿನ ಸಿರಪ್‍ಗಳು, ಜೇನುತುಪ್ಪ ಅಥವಾ ಪುಡಿ ಸಕ್ಕರೆಯ ಅಲಂಕಾರದ ಹರಹು ಇರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Les Gaufres Belges". Gaufresbelges.com. Retrieved on 2013-04-07.
"https://kn.wikipedia.org/w/index.php?title=ವಾಫ಼ಲ್&oldid=838612" ಇಂದ ಪಡೆಯಲ್ಪಟ್ಟಿದೆ