ಲಂಗರು
ಲಂಗರು ಎಂದರೆ ಹಡಗು ಅಥವಾ ದೋಣಿಯು ನೀರಿನ ಮೇಲೆ ತೇಲಿ ಹೋಗದೆ ಒಂದೇ ಸ್ಥಳದಲ್ಲಿ ನಿಲ್ಲುವಂತೆ ಮಾಡಲು ಉಪಯೋಗಿಸುವ ಲೋಹದ ಒಂದು ಸಲಕರಣೆ (ಆ್ಯಂಕರ್). ಲೋಹ ಸರಪಳಿಯ ಒಂದು ತುದಿ ಹಡಗು ಅಥವಾ ದೋಣಿಗೆ ಭದ್ರವಾಗಿ ಬಂಧಿತವಾಗಿದ್ದು ಇನ್ನೊಂದು ತುದಿಗೆ ಬಿಗಿದ ಲಂಗರನ್ನು ನೀರಿಗೆ ಇಳಿಸುತ್ತಾರೆ. ಇದು ಸಾಕಷ್ಟು ತೂಕವಾಗಿದ್ದು ಇದರ ಬಾಹುಗಳ ಕೆಳಭಾಗದಲ್ಲಿ ತ್ರಿಕೋನಾಕೃತಿಯ ಚೂಪಾದ ಮೂತಿಯುಳ್ಳ ಲೋಹದ ತಗಡು ಕೆಳಮುಖವಾಗಿ ಚಾಚಿರುತ್ತದೆ. ಇದಕ್ಕೆ ಫ್ಲೂಕ್ ಎಂದು ಹೆಸರು. ಲಂಗರನ್ನು ಕೆಳಗೆ ಬಿಟ್ಟಾಗ ಈ ಫ್ಲೂಕಿನ ಮೊನಚಾದ ಮೂತಿ ತಳದಲ್ಲಿ ಊರಿ ನೆಲವನ್ನು ಕಚ್ಚಿ ಹಿಡಿದು ಹಡಗು ಚಲಿಸದಂತೆ ಮಾಡುತ್ತದೆ.
ಪ್ರಾಚೀನ ಕಾಲದಲ್ಲಿ ದೊಡ್ಡ ದೊಡ್ಡ ಕಲ್ಲುಗಳು, ಕಲ್ಲು ತುಂಬಿದ ಬುಟ್ಟಿಗಳು, ಮರಳು ತುಂಬಿದ ಚೀಲಗಳು ಅಥವಾ ಸೀಸದಿಂದ ಭಾರಗೊಳಿಸದ ಮರದ ದಿಮ್ಮಿಗಳನ್ನು ಲಂಗರಾಗಿ ಬಳಸುತ್ತಿದ್ದರು. ಇವನ್ನು ನೀರಿನ ತಳಕ್ಕೆ ಇಳಿಸಿದಾಗ ಅಲ್ಲಿ ತಳದ ನೆಲದೊಡನೆ ಉಂಟಾಗುವ ಘರ್ಷಣೆಯಿಂದ ಹಡಗುಗಳು ಚಲಿಸದೆ ನಿಲ್ಲುತ್ತಿದ್ದುವು. ಆದರೆ ಹಡಗುಗಳ ಗಾತ್ರ ಹೆಚ್ಚಾದಂತೆಲ್ಲ ಈ ಲಂಗರುಗಳ ದಕ್ಷತೆ ಸಾಲದೆ ಇನ್ನೂ ಪರಿಣಾಮಕಾರಿಯಾದ ಲಂಗರುಗಳ ಅಗತ್ಯ ಉಂಟಾಗಿ ನೆಲವನ್ನು ಕಚ್ಚಿ ಹಿಡಿಯಲು ಮರದ ಕೊಕ್ಕೆಗಳನ್ನು ಉಪಯೋಗಿಸಿದರು. ಕ್ರಮೇಣ ಮರದ ಕೊಕ್ಕೆಗಳ ಬದಲು ಕಬ್ಬಿಣದ ಕೊಕ್ಕೆಗಳ ಬಳಕೆ ಬಂತು. ಲಂಗರನ್ನೆಳೆದಾಗ ನೆಲವನ್ನು ಸೀಳಿ ಊರಿಕೊಳ್ಳಲು ಕಬ್ಬಿಣದ ಹಲ್ಲುಗಳು ಮತ್ತು ತ್ರಿಕೋಣಾಕಾರದ ಚೂಪು ಮೂತಿಯಿರುವ ಫ್ಲೂಕ್ಗಳು ಸೇರಿಕೊಂಡುವು. ಅನಂತರ ಒಂದು ಪೀಠವನ್ನು (ಸ್ಟಾಕ್) ಸೇರಿಸಲಾಯಿತು. ಈ ಪೀಠ ಕ್ಷಿತಿಜೀಯವಾಗಿದ್ದು ಇದಕ್ಕೆ ಕೆಳಮೊಗವಾಗಿರುವ ಚೂಪು ಮೂತಿಯ ಫ್ಲೂಕ್ಗಳು ಪೀಠಕ್ಕೆ ಲಂಬವಾಗಿರುವಂತೆ ಅಳವಡಿಸಲಾಯಿತು. ಈ ರೀತಿಯ ಪೀಠ ಲಂಗರು ಹಲವು ಶತಮಾನಗಳವರೆಗೆ ಬಳಕೆಯಲ್ಲಿತ್ತು. ಅಮೆರಿಕದಲ್ಲಿ ಇದಕ್ಕೆ ಪೀಠಲಂಗರು ಎಂದೂ ಇಂಗ್ಲೆಂಡಿನಲ್ಲಿ ಮೀನುಗಾರರ ಲಂಗರೆಂದೂ ಹೆಸರುಂಟು.
19ನೆಯ ಶತಮಾನದ ಪ್ರಾರಂಭದಲ್ಲಿ ಲಂಗರಿನ ನೇರವಾದ ಬಾಹುಗಳ ಬದಲು ವಕ್ರವಾದ ಬಾಹುಗಳು ಬಳಕೆಗೆ ಬಂದುವು. ಈ ಮಾದರಿಯ ಲಂಗರನ್ನು ಈಗಲೂ ದೋಣಿಗಳಿಗೆ ಹಾಗೂ ಇನ್ನಿತರ ಲಘು ಕೆಲಸಗಳಿಗೆ ಉಪಯೋಗಿಸುತ್ತಾರೆ. ಇದರ ರಚನೆಯಲ್ಲಿ ಒಂದು ಉಂಗುರವಿದೆ. ಇದಕ್ಕೆ ಲೋಹದ ಸರಪಳಿ ಅಥವಾ ಹೊರಜಿಯನ್ನು ಕಟ್ಟಲಾಗುತ್ತದೆ. ಪೀಠವನ್ನು ಒಂದು ಕಡೆ ಕೀಲಿಯ ಸಹಾಯದಿಂದ ಲಂಗರಿನ ನೆತ್ತಿಗೆ ಜೋಡಿಸಿರುತ್ತಾರೆ. ಈ ತಡೆ ಕೀಲನ್ನು ತೆಗೆದು ಪೀಠವನ್ನು ಲಂಗರಿನಿಂದ ಬೇರ್ಪಡಿಸಿ ಇಡಬಹುದು. ಲಂಗರಿನ ದಿಂಡಿನ ನೆತ್ತಿಗೆ ವಕ್ರಬಾಹುಗಳನ್ನು ಜೋಡಿಸಿರುತ್ತಾರೆ. ಲಂಗರನ್ನು ಯಾವಾಗಲೂ ಸಮತೋಲದಲ್ಲಿಡಲು ಅದರ ಗುರುತ್ವ ಕೇಂದ್ರದಲ್ಲಿ ಒಂದು ಸಮತೋಲನ ಪಟ್ಟಿಯನ್ನು ಜೋಡಿಸುತ್ತಾರೆ. ಲಂಗರನ್ನು ಮೇಲಕ್ಕೆತ್ತಿದಾಗ ಅಥವಾ ಕೆಳಗೆ ಇಳಿಸಿದಾಗ ಇದು ಯಾವಾಗಲೂ ಕ್ಷಿತಿಜೀಯವಾಗಿರುವಂತೆ ಮಾಡುತ್ತದೆ.
ದೊಡ್ಡ ಹಡಗುಗಳಲ್ಲಿ ಬಳಸಲು ಅನುಕೂಲವಾಗುವಂತೆ ಇಂಗ್ಲೆಂಡ್ನಲ್ಲಿ ಪೀಠರಹಿತ ಲಂಗರುಗಳು ಬಳಕೆಗೆ ಬಂದುವು (1821). ಇದರ ನೆತ್ತಿ, ಬಾಹುಗಳು ಮತ್ತು ಫ್ಲೂಕ್ಗಳನ್ನು ಒಂದೇ ಅಚ್ಚಿನಲ್ಲಿ ಎರಕಹೊಯ್ದು ಸಂಯುಕ್ತವಾಗಿ ತಯಾರಿಸುತ್ತಾರೆ. ಇದರ ಬಾಹುಗಳು ಉದ್ಧವಾಗಿದ್ದು ಫ್ಲೂಕ್ಗಳು ತೂಕವಾಗಿರುತ್ತವೆ. ಇವು ಲಂಗರಿನ ದಿಂಡಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಸ್ವಲ್ಪವೇ ತಿರುಗುತ್ತವೆ. ಇದರಿಂದಾಗಿ ಲಂಗರನ್ನಿಳಿಸಿ ಎಳೆದಾಗ ಬಾಹುಗಳು ಫ್ಲೂಕ್ಗಳನ್ನು ಒತ್ತಿ ಹಿಡಿದು ಲಂಗರು ತಳವೂರುವಂತೆ ಮಾಡುತ್ತವೆ. ಈ ಲಂಗರುಗಳು ಇಂದಿಗೂ ಉಪಯೋಗದಲ್ಲಿವೆ.
ಅಲ್ಲಿಂದೀಚಿಗೆ ವಿವಿಧ ಉದ್ದೇಶಗಳಿಗಾಗಿ ಬಳಸುವ ಬೇರೆ ಬೇರೆ ವಿನ್ಯಾಸದ ಲಂಗರುಗಳು ಬಳಕೆಗೆ ಬಂದಿವೆ. ಇವುಗಳಲ್ಲಿ ಲಘು ಲಂಗರು, ಸ್ಯಾನ್ಫೋರ್ತ್ ಲಂಗರು, ಉಳುವ ಲಂಗರು ಹಾಗೂ ಕೆಳವೇಗವಾದ ಅಣಬೆಯಂತಿರುವ ಅಣಬೆ ಲಂಗರು ಮುಖ್ಯವಾದವು.