ಫ್ರೆಡ್ರಿಕ್ ಝೀಗ್ಲರ್
ಫ್ರೆಡ್ರಿಕ್ ಝೀಗ್ಲರ್ (1820-1906). ಜರ್ಮನ್ ಪಾದ್ರಿ. ಧರ್ಮ ಪ್ರಸಾರಕಾರ್ಯಕ್ಕಾಗಿ ಕರ್ನಾಟಕಕ್ಕೆ ಬಂದ ಈತ ಕನ್ನಡ ನಾಡಿನಲ್ಲೇ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳಿಗೆ ಮಿಗಿಲಾದ ಸೇವೆಯನ್ನು ಸಲ್ಲಿಸಿದ್ದಾನೆ.
ಬದುಕು ಮತ್ತು ಸಾಧನೆ
[ಬದಲಾಯಿಸಿ]ಜರ್ಮನಿಯಲ್ಲಿ ಜನ್ಮತೆಳೆದ ಝೀಗ್ಲರ್ ತನ್ನ ವಿದ್ಯಾಭ್ಯಾಸವನ್ನೆಲ್ಲ ತಾಯ್ನಾಡಿನಲ್ಲೇ ಮುಗಿಸಿಕೊಂಡು ಬಾಸೆಲ್ ಮಿಷನ್ ಪರವಾಗಿ ಧರ್ಮಪ್ರಸಾರ ಕಾರ್ಯಕ್ಕಾಗಿ 1862ರಲ್ಲಿ ಜರ್ಮನಿಯಿಂದ ಭಾರತಕ್ಕೆ ಬಂದು ಮಂಗಳೂರಿನಲ್ಲಿ ನೆಲೆಸಿದ. ಸುಮಾರು ಏಳು ವರ್ಷಗಳ ಕಾಲ ಅಲ್ಲಿದ್ದ ಮೇಲೆ ಉತ್ತರಕರ್ನಾಟಕದ ಧಾರವಾಡಕ್ಕೆ ತನ್ನ ಕಾರ್ಯ ಕ್ಷೇತ್ರವನ್ನು ಬದಲಾಯಿಸಿದ. ಸ್ವಯಂ ಶಿಕ್ಷಕನಾಗಿದ್ದ ಈತ ತನ್ನ ಜೀವಮಾನವನ್ನೆಲ್ಲ ವಿದ್ಯಾಪ್ರಸಾರಕ್ಕಾಗಿಯೇ ಮುಡುಪಾಗಿಟ್ಟ. ಅಲ್ಲಿನ ಬಾಸೆಲ್ ಮಿಷನ್ನಿನ ಪ್ರಧಾನ ಕಾರ್ಯದರ್ಶಿಯಾಗಿ ದುಡಿದನಲ್ಲದೆ ಮುಂಬಯಿ ಕರ್ನಾಟಕದ ಮಿಷನ್ ಶಾಲೆಗಳ ಇನ್‍ಸ್ಪಕ್ಟರ್ ಆಗಿಯೂ ಕೆಲಸ ಮಾಡಿದ. ಅಲ್ಲದೆ ಧಾರವಾಡದಲ್ಲಿ ಒಂದು ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಮುಖ್ಯೋಪಾಧ್ಯಾಯನೂ ಆದ.
ಶಿಕ್ಷಣ ಕ್ಷೇತ್ರಕ್ಕೆ ಝೀಗ್ಲರ್ ಸಲ್ಲಿಸಿರುವ ಸೇವೆ ಮಹತ್ತರವಾದುದು. ಕ್ರೈಸ್ತರಿಗಾಗಿಯೆ ಸೀಮಿತವಾಗಿದ್ದ ಶಾಲೆಗಳಲ್ಲಿ ಕ್ರೈಸ್ತೇತರರಿಗೂ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು ಈತ ಸಾಧಿಸಿದ ಮಹತ್ಕಾರ್ಯಗಳಲ್ಲಿ ಒಂದು. ಆದ್ದರಿಂದಲೇ ಉತ್ತರ ಕರ್ನಾಟಕದಲ್ಲಿ ಈತನ ಹೆಸರು ಚಿರಪರಿಚತವಾಗಿತ್ತು. ಡೆಪ್ಯುಟಿ ಚೆನ್ನಬಸಪ್ಪ, ತೂರಮರಿ, ವೆಂಕಟ ರಂಗೋ ಕಟ್ಟಿ ಮೊದಲಾದ ದೇಶೀಯ ವಿದ್ವಾಂಸರಿಗೆ ಈತ ವಿಶೇಷ ಪ್ರೋತ್ಸಾಹವನ್ನು ಕೊಟ್ಟಿದ್ದಾನೆ. ಉತ್ತರ ಕರ್ನಾಟಕದ ಸಾಹಿತ್ಯಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ದುಡಿದ ಈತನನ್ನು ಕರ್ನಾಟಕ ವಿದ್ಯಾವರ್ಧಕ ಸಂಘದವರು 1893-94ನೆಯ ಸಾಲಿಗೆ ಅದರ ಅಧ್ಯಕ್ಷನನ್ನಾಗಿ ಆರಿಸಿ ಗೌರವಿಸಿದ್ದಾರೆ. ಇದು ಝೀಗ್ಲರನ ಕನ್ನಡ ಪ್ರೇಮಕ್ಕೂ ವಿದ್ವತ್ತಿಗೂ ಸಾಕ್ಷಿಯಾಗಿದೆ.
ಝೀಗ್ಲರ್ ಬೈಬಲ್ ಪರಿಷ್ಕರಣ ಸಮಿತಿಯ ಸದಸ್ಯನಾಗಿದ್ದ. ಈತ ವೈಯಕ್ತಿಕವಾಗಿಯೂ ಇತರ ವಿದ್ವಾಂಸರೊಡನೆ ಸೇರಿಯೂ ಕೆಲವು ಗ್ರಂಥಗಳನ್ನು ರಚಿಸಿದ್ದಾನೆ. ಕನ್ನಡವನ್ನು ಮೊದಲ ಬಾರಿಗೆ ಕಲಿಯುವ ವಿದೇಶಿ ವಿದ್ವಾಂಸರಿಗಾಗಿ ಎ ಪ್ರ್ಯಾಕ್ಟಿಕಲ್ ಕೀ ಟು ಕ್ಯಾನರೀಸ್ ಲ್ಯಾಂಗ್ವೇಜ್ ಎಂಬ ಗ್ರಂಥವನ್ನು 1872ರಲ್ಲಿ ಬರೆದು ಪ್ರಕಟಿಸಿದ. ರೆ. ಡಿಕಾಷ್ಟ ಎಂಬುವನೊಡನೆ ಸೇರಿ ಕನ್ನಡ ಬಾಲ ವ್ಯಾಕರಣವನ್ನು 1877ರಲ್ಲಿ ಬರೆದ. ಇದು ಉತ್ತರ ಕರ್ನಾಟಕದ ಶಾಲೆಗಳಿಗೆಲ್ಲ ಪಠ್ಯಪುಸ್ತಕದಂತೆ ಉಪಯೋಗವಾಗಿತ್ತು.
ಈತ ಬರೆದ ಇತರ ಗ್ರಂಥಗಳಿವು : ಕನ್ನಡ ಶಾಲಾ ವ್ಯಾಕರಣ (1866), ಗಣಿತ ನ್ಯಾಯ (1870), ಗಣಿತಾಭ್ಯಾಸದ ಉದಾಹರಣೆಗಳ ಗ್ರಂಥ (1877), ಪೂರ್ಣಾಂಕ ಗಣಿತಾಭ್ಯಾಸಕ್ಕೆ ಉದಾಹರಣೆಗಳು-ಎರಡು ಭಾಗಗಳು (1869), ಮಾರ್ಕನು ಬರೆದ ಸುವಾರ್ತೆ ಅಂದರೆ ಮುಕ್ತಿದಾಯಕನ ಚರಿತ್ರೆ (1896), ಲೂಕನು ಬರೆದ ಸುವಾರ್ತೆ ಅಂದರೆ ಜಗದ್ರಕ್ಷಕನ ಚರಿತ್ರೆ (1900), ಗೀತಗಳು ಎಂಬ ಒಂದು ಸಂಕಲನವನ್ನು 1867ರಲ್ಲಿ ಸಂಪಾದಿಸಿದ್ದಾನೆ.
ಇವೆಲ್ಲಕ್ಕಿಂತ ಮಿಗಿಲಾದುದು ಈತ ಬಹು ಪರಿಶ್ರಮದಿಂದ ಸಿದ್ಧಪಡಿಸಿರುವ (ಇಂಗ್ಲಿಷ್-ಕನ್ನಡ) ಶಾಲಾ ನಿಘಂಟು. ಝೀಗ್ಲರನ ಕೀರ್ತಿ ಶಾಶ್ವತವಾಗಿ ನಿಂತಿರುವುದು ಈ ನಿಘಂಟಿನಿಂದ. ಕನ್ನಡಕ್ಕೆ ಅಭೂತಪೂರ್ವವೂ ಶಾಸ್ತ್ರೀಯವೂ ಪ್ರಮಾಣಾರ್ಹವೂ ಆದ ನಿಘಂಟನ್ನು ರಚಿಸಿರುವ ರೆ. ಎಫ್. ಸಟ್ಸಿಲ್ ಝೀಗ್ಲರನಿಂದ ತನಗೆ ಆದ ಸಹಾಯವನ್ನು ಸ್ಮರಿಸಿದ್ದಾನೆ.
ಶಾಲಾನಿಘಂಟು ಮೊದಲ ಬಾರಿಗೆ ಪ್ರಕಟವಾದದ್ದು 1876ರಲ್ಲಿ, ಎರಡನೆಯ ಮುದ್ರಣ 1888ರಲ್ಲಿ ಬಂತು. ನಿಘಂಟು ರಚನೆಯಲ್ಲಿ ರೆ. ಎಂ. ವಾಲ್ಜ್ ಮತ್ತು ಕ್ರಿಸ್ಟೊಫರ್ ವಾಟ್‍ಸ ಎಂಬುವವರು ಈತನೊಂದಿಗೆ ಕೆಲಸ ಮಾಡಿದ್ದಾರೆ. ಇದು ಇಂಗ್ಲಿಷ್ ಕಲಿಯುವ ಕನ್ನಡ ವಿದ್ಯಾರ್ಥಿಗಳಿಗೆ ಹೇಗೊ ಹಾಗೆ ಕನ್ನಡ ಬಾರದ ಇತರ ಭಾಷಾವಿದ್ಯಾರ್ಥಿಗಳಿಗೂ ಬಹು ಉಪಯುಕ್ತವಾದ ನಿಘಂಟು.
ಈ ನಿಘಂಟು ಆ ಕಾಲದಲ್ಲಿ ಅತ್ಯಂತ ಪ್ರಚುರವಾಗಿತ್ತೆಂದು ಕಂಡುಬರುತ್ತದೆ. 1929ರ ವೇಳೆಗಾಗಲೇ ಅದು ಆರನೆಯ ಮುದ್ರಣವನ್ನು ಕಂಡಿತ್ತೆಂದರೆ ಅದರ ಉಪಯುಕ್ತತೆ ಎಷ್ಟೆಂಬುದು ವ್ಯಕ್ತವಾಗುತ್ತದೆ. ಆರನೆಯ ಮುದ್ರಣದಲ್ಲಿ 611 ಪುಟಗಳಿವೆ. ಪ್ರತಿ ಪುಟದಲ್ಲಿಯೂ ಎರಡೆರಡೆ ಕಾಲಂಗಳಿವೆ. ಮೊದಲು ಮುಖ್ಯ ಶಬ್ದವನ್ನು ಕೊಟ್ಟು ಅದರ ಮುಂದೆ ಅದರ ವಾಚಕವನ್ನು (ನಾಮಪದ, ಕ್ರಿಯಾಪದ, ಗುಣವಾಚಕ, ಅವ್ಯಯ ಇತ್ಯಾದಿ) ನಿರ್ದೇಶಿಸಿ ಆಮೇಲೆ ಅರ್ಧವನ್ನು ಕೊಟ್ಟಿದೆ. ಒಂದಕ್ಕಿಂತ ಹೆಚ್ಚು ಅರ್ಥಗಳಿದ್ದ ಕಡೆ ಅದನ್ನು ಸಂಖ್ಯೆಗಳಿಂದ ಸೂಚಿಸಿದೆ. ಹಾಗೆಯೇ ಕ್ರಿಯಾಪದ ಸಕರ್ಮಕ-ಅಕರ್ಮಕ ಅರ್ಥಗಳೆರಡÀನ್ನೂ ಸ್ಪಷ್ಟಪಡಿಸಲಾಗಿದೆ. ಒಂದು ಮುಖ್ಯ ಶಬ್ದದಿಂದ ನಿಷ್ಪನ್ನವಾದ ಇತರ ರೂಪಗಳನ್ನೆಲ್ಲ ಆ ಶಬ್ದದ ಅರ್ಥವಾದೊಡನೆಯೇ ಕೊಡಲಾಗಿದೆ. ಜೊತೆಗೆ ಆ ಶಬ್ದದ ನುಡಿಗಟ್ಟುಗಳನ್ನೂ ಅಲ್ಲೇ ಕೊಟ್ಟು ಒಂದು ಶಬ್ದಕ್ಕಿರುವ ಎಲ್ಲ ಮಾಹಿತಿಯನ್ನೂ ಕ್ರೋಢೀಕರಿಸಲಾಗಿದೆ. ಶಬ್ದದ ಉಚ್ಚಾರಣೆಯನ್ನು ವಿವರಣ ಚಿಹ್ನೆಗಳಿಂದ ಸೂಚಿಸಲಾಗಿದೆ.