ವಿಷಯಕ್ಕೆ ಹೋಗು

ಮೊಹಮ್ಮದ್ ಯೂನುಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೊಹಮ್ಮದ ಯೂನುಸ್ ಇಂದ ಪುನರ್ನಿರ್ದೇಶಿತ)
ಮೊಹಮ್ಮದ್ ಯೂನುಸ್
Bornಜೂನ್ ೨೮, ೧೯೪೦
ಬಾಂಗ್ಲಾದೇಶದ ಚಿತ್ತಗಾಂಗ್
Nationalityಬಾಂಗ್ಲಾದೇಶೀಯ
Alma materಡಾಕ್ಕಾ ವಿಶ್ವವಿದ್ಯಾಲಯ ಮತ್ತು ವಂದೆರ್ ಬಿಲ್ಟ್ ವಿಶ್ವವಿದ್ಯಾಲಯ
Occupationಬ್ಯಾಂಕರ್ ಮತ್ತು ಅರ್ಥಶಾಸ್ತ್ರಜ್ಞ
Awardsನೊಬೆಲ್ ಶಾಂತಿ ಪುರಸ್ಕಾರ (2006)

ಮೊಹಮ್ಮದ್ ಯೂನುಸ್ (ಜೂನ್ ೨೮, ೧೯೪೦) ಬಾಂಗ್ಲಾದೇಶದ ಪ್ರಥಮ ನೋಬೆಲ್ ಪ್ರಶಸ್ತಿ ಪುರಸ್ಕೃತ ವ್ಯಕ್ತಿ. ಬಡಜನರಿಗೆ ಸಣ್ಣ ಸಾಲ ಒದಗಿಸುವುದರ ಮೂಲಕ ವಿಶ್ವದಲ್ಲಿ ಮೈಕ್ರೋ ಕ್ರೆಡಿಟ್ ಎಂಬ ಆರ್ಥಿಕ ವ್ಯವಸ್ಥೆಗೆ ಬಲ ಬರುವಂತೆ ಮಾಡಿದ ಮಹಮ್ಮದ್ ಯೂನುಸ್ ಬಡವರ ಬ್ಯಾಂಕರ್ ಎಂದೇ ಪ್ರಖ್ಯಾತರಾಗಿದ್ದಾರೆ. ಬಡತನ ನಿವಾರಣೆಗಾಗಿನ ತಮ್ಮ ಈ ಕಾರ್ಯಕ್ಕಾಗಿ ೨೦೦೬ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರವೂ ಅಲ್ಲದೆ ಅವರಿಗೆ ವಿಶ್ವದಾದ್ಯಂತ ಹಲವಾರು ಗೌರವಗಳು ಪ್ರಧಾನವಾಗಿವೆ.

ಇವರು ಜೂನ್ ೨೮ ೧೯೪೦ರಲ್ಲಿಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಜನಿಸಿದರು.ತಂದೆ ಒಬ್ಬ ಒಡವೆ ವ್ಯಾಪಾರಿ.ಇವರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಯಾವಾಗಲೂ ಬಡವರ ಸಹಾಯಕ್ಕೆ ಧಾವಿಸುತ್ತಿದ್ದ ತಾಯಿ ಸೋಫಿಯ ಖಾತುಮ್.

ಬಾಲ್ಯದಿಂದಲೇ ಅಸಾಧಾರಣ ಪ್ರತಿಭಾವಂತ.೧೯೬೫ರಲ್ಲಿ ಅಮೆರಿಕದ ಟೆನ್ನೆಸ್ಸಿಯ ವಂಡರ್‍ಬಿಲ್ಟ್(Vanderbilt) ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ಮಾಡಲು ಫುಲ್‌ಬ್ರೈಟ್ ಫೆಲ್ಲೋಶಿಪ್(Fullbright Fellowship)ಪಡೆದ ವಿದ್ಯಾರ್ಥಿ.

ಬದುಕಿನುದ್ದಕ್ಕೂ ಬಡತನದ ಬವಣೆಯಲ್ಲಿ ನೊಂದು ಬೆಂದವರು. ಆ ಕಾರಣಕ್ಕಾಗಿಯೋ ಏನೋ ಯೂನಸ್ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಗಲೂ ಬಡವರ ಬದುಕನ್ನು ಮತ್ತೆ ಮತ್ತೆ ಕಣ್ಣಾರೆ ಕಾಣಲು ಪ್ರತೀವಾರ ಹಳ್ಳಿಗಳಿಗೆ ಹೋಗುತ್ತಿದ್ದರು.

ಬರಗಾಲ ತಂದ ಬದಲಾವಣೆ

[ಬದಲಾಯಿಸಿ]

ಹೀಗೆ ಹೋಗಿಬರುವ ಸಮಯ, ಅಂದರೆ ೧೯೭೬ರ ಆಸುಪಾಸಿನಲ್ಲಿ ಬಾಂಗ್ಲಾ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಹಳ್ಳಿಗಳಿಗೆ ಸ್ಮಶಾನಮೌನ ಮುತ್ತಿಕೊಂಡಿತ್ತು. ಹಳ್ಳಿಯ ಬಡವರು ಶ್ರೀಮಂತರಿಂದ ಸಾಲ ಪಡೆದು, ಹೆಚ್ಚಿನ ಬಡ್ಡಿ ತೆತ್ತು ಪಡಬಾರದ ಯಾತನೆ ಪಡುತ್ತಿದ್ದರು. ಯೂನಸ್ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮನ ಮರುಗಿತು. ಕಲಿತಿದ್ದ ಅರ್ಥಶಾಸ್ತ್ರ ಬ್ಯಾಂಕಿಗೆ ಕರೆದುಕೊಂಡುಹೋಯಿತು.

ಆದರೆ, ಬ್ಯಾಂಕಿಗೆ ಬೇಕಾಗಿರುವುದು ಅನುಕೂಲಸ್ಥರು, ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರೇ ಹೊರತು ಬಡವರಲ್ಲ. ಬಡವರ ಬಳಿ ಆಸ್ತಿ, ಪಾಸ್ತಿ ಇಲ್ಲ. ಅವರು ಸಾಲ ತೀರಿಸುತ್ತಾರೆಂಬುದಕ್ಕೆ ಗ್ಯಾರಂಟಿಯೂ ಇಲ್ಲ. ಹಾಗಾಗಿ ಅವರು ಬಡವರಿಗೆ ಸಾಲ ಕೊಡಲಿಲ್ಲ. ಯೂನಸ್ ಅವರ ಅರ್ಥಶಾಸ್ತ್ರ ಬಡವರ ಬವಣೆ ನೀಗಲು ನೆರವಾಗಲಿಲ್ಲ. ಆದರೆ, ಯೂನಸ್ ಹಿಂಜರಿಯಲಿಲ್ಲ. ತಾವೇ ಜಾಮೀನು ನೀಡಿ ಹಳ್ಳಿಯ ನಾಲ್ಕು ಹೆಂಗಸರಿಗೆ ಏಳು ಸಾವಿರ ಸಾಲ ಕೊಡಿಸಿದರು.

ಇಲ್ಲಿ ಅವರು ನಂಬಿದ್ದು ನಂಬಿಕೆಯನ್ನು, ಹಳ್ಳಿಯ ಹೆಂಗಸರ ಆತ್ಮವಿಶ್ವಾಸವನ್ನು. ಯೂನಸ್ ಅವರ ನಂಬಿಕೆಗೆ ದ್ರೋಹ ಬಗೆಯಲು ಇಚ್ಚಿಸದ ಸಾಲ ಪಡೆದ ಹಳ್ಳಿಯ ಹೆಂಗಸರು ಬಿದಿರು ಖರೀದಿಸಿ, ಬುಟ್ಟಿ ತಯಾರಿಸಿ, ಮಾರಿ ಹಣ ಸಂಪಾದಿಸಿದರು. ಸಾಲ ತೀರಿಸಿದರು. ಯೂನಸ್ ಸ್ಫೂರ್ತಿಗೊಂಡು ಇನ್ನಷ್ಟು ಹೆಂಗಸರಿಗೆ ಸಾಲ ಕೊಡಿಸಿದರು.

ಗ್ರಾಮೀಣ ಬ್ಯಾಂಕ್

[ಬದಲಾಯಿಸಿ]

ಇದು ಹೀಗೆಯೇ ಮುಂದುವರೆಯುತ್ತಿದ್ದಾಗ, ಇದು ಇಷ್ಟಕ್ಕೇ ಸೀಮಿತವಾಗಿ ಮಹತ್ತರವಾದದ್ದು ಏನೂ ಸಾಧಿಸಲಾಗದು ಎಂದರಿತಾಗ ಮತ್ತೆ ತಮ್ಮೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರವಾದ. ಆ ಎಚ್ಚರದ ಫಲವೇ ಗ್ರಾಮೀಣ ಬ್ಯಾಂಕ್ ಸ್ಥಾಪನೆ. ೧೯೮೩ರಲ್ಲಿ ಬಡವರಿಂದ ಜಾಮೀನು ಕೇಳದೆ ಸಾಲ ನೀಡುವುದಕ್ಕಾಗಿಯೇ ಹುಟ್ಟಿಕೊಂಡದ್ದು ಈ ಗ್ರಾಮೀಣ ಬ್ಯಾಂಕ್. ಇಲ್ಲಿ ನಂಬಿಕೆ, ವಿಶ್ವಾಸ, ಜವಾಬ್ದಾರಿಗಳೇ ಅಡಿಪಾಯ. ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಯ ಹೆಂಗಸರೆ ಈ ಬ್ಯಾಂಕಿನ ಉಸ್ತುವಾರಿ ಹೊತ್ತ ಒಡೆಯರು.

ಯಾಕೆಂದರೆ, ಗಂಡಸರಿಗಿಂತ ಹೆಂಗಸರು ಹೆಚ್ಚು ನಂಬಿಕಸ್ಥರು ಮತ್ತು ಜವಾಬ್ದಾರಿಯುಳ್ಳವರು ಎಂಬುದು ಯೂನಸ್ ರ ಅನುಭವವಾಗಿತ್ತು. ಮತ್ತು ಹೆಂಗಸರ ಕೈಗೆ ಹಣ ಸಿಕ್ಕರೆ ಅವರು ಸಬಲರಾಗಿ, ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ತಾವು ಬದುಕುವುದಷ್ಟೇ ಅಲ್ಲ, ತಮ್ಮ ಕುಟುಂಬವನ್ನು, ಆ ಮೂಲಕ ತಮ್ಮ ಹಳ್ಳಿಯನ್ನು ಬದುಕಿಸುತ್ತಾರೆ ಎಂಬುದು ಯೂನಸ್ ಅವರ ನಂಬಿಕೆಯಾಗಿತ್ತು.

ಯೂನಸ್ ಅವರ ಅಂದಿನ ಆ ಯೋಚನೆ ಗ್ರಾಮೀಣ ಬ್ಯಾಂಕ್ ಗಳ ಮೂಲಕ ಇಂದು ಫಲ ನೀಡಿದೆ. ಇಂದು ಬಾಂಗ್ಲಾದ ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಬಡತನದ ಬಿಗಿಮುಷ್ಟಿಯಿಂದ ಹೊರಬಂದು ದೇಶದ ರಾಜಕೀಯದತ್ತ ಗಮನ ಹರಿಸುತ್ತಿದ್ದಾರೆ. ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಂಗಸರ ಮತ ಚಲಾವಣೆ ಗಂಡಸರಿಗಿಂತ ಹೆಚ್ಚಾಗುತ್ತಿದೆ. ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಸುಖೀ ಕುಟುಂಬ, ಹೆಂಗಸರಿಗೆ ಸ್ಥಾನಮಾನ ತಂದುಕೊಡುತ್ತಿದೆ.

ನಾಲ್ಕು ಹೆಂಗಸರಿಗೆ ಸಾಲ ಕೊಡಿಸುವ ಮೂಲಕ ಶುರುವಾದ ಸಾಲ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಯೂನಸ್ ಅವರ ಗ್ರಾಮೀಣ ಬ್ಯಾಂಕ್ ದೇಶದಾದ್ಯಂತ ೨,೨೨೬ ಶಾಖೆಗಳನ್ನು ಹೊಂದಿ, ೬ ಮಿಲಿಯನ್ ಸಾಲಗಾರರಿಗೆ ೫.೭ ಬಿಲಿಯನ್ ಡಾಲರ್ ಸಾಲ ಕೊಟ್ಟು, ೭೧,೩೭೧ ಹಳ್ಳಿಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಇದು ಇತರ ದೇಶಗಳಿಗೂ ಮಾದರಿಯಾಗುತ್ತಿದೆ. ಇದನ್ನರಿತ ಬಾಂಗ್ಲಾ ಸರ್ಕಾರ ಈ ಗ್ರಾಮೀಣ ಬ್ಯಾಂಕುಗಳಿಗೆ ಸಹಾಯಹಸ್ತ ನೀಡಿದೆ. ಆದರೆ ಬ್ಯಾಂಕಿನ ಒಡೆತನದಲ್ಲಿ ಸಾಲಗಾರರಾದ ಹಳ್ಳಿಯ ಶೇರುದಾರರದೇ ಸಿಂಹಪಾಲು. ಸರ್ಕಾರದ್ದು ಕೇವಲ ಶೇಕಡ ೬ರಷ್ಟು ಒಡೆತನ ಮಾತ್ರ.

ಗ್ರಾಮೀಣ ಬ್ಯಾಂಕ್ ಬಾಂಗ್ಲಾ ದೇಶದಲ್ಲಷ್ಟೇ ಅಲ್ಲದೆ ಅಮೆರಿಕ ದೇಶವನ್ನೂ ಒಳಗೊಂಡಂತೆ ಹಲವೆಡೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ.

ಪ್ರಶಸ್ತಿ ಹಾಗು ಪುರಸ್ಕಾರಗಳು

[ಬದಲಾಯಿಸಿ]

ನೊಬೆಲ್ ಪಾರಿತೋಷಕವೇ ಅಲ್ಲದೆ ಮಹಮ್ಮದ್ ಯೂನುಸ್ ಅವರಿಗೆ ವಿಶ್ವದಾದ್ಯಂತ ಅನೇಕ ಗೌರವಗಳು ಸಲ್ಲುತ್ತಿವೆ. ೨೦೧೩ರ ವರ್ಷದ ಎಪ್ರಿಲ್ ಮಾಸದಲ್ಲಿ ಅವರು ಅಮೆರಿಕ ದೇಶದ ಕಾಂಗ್ರಿಗೇಶನ್ ಸ್ವರ್ಣ ಪದಕವನ್ನೂ ಸ್ವೀಕರಿಸಿದರು. ೨೦೦೮ರ ವರ್ಷದ ಫಾರಿನ್ ಪಾಲಿಸಿ ಮ್ಯಾಗಜಿನ್ ಮಹಮ್ಮದ್ ಯೂನುಸ್ ಅವರನ್ನು ವಿಶ್ವದ ಶ್ರೇಷ್ಠ ನೂರು ಚಿಂತಕರ ಪಟ್ಟಿಯಲ್ಲಿ ಎರಡನೆಯವರನ್ನಾಗಿ ಹೆಸರಿಸಿತು. ೨೦೧೨ರ ವರ್ಷದಲ್ಲಿ ಸ್ಕಾಟ್ಲೆಂಡಿನ ಗ್ಲಾಸ್ಗೋ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯವು ಮಹಮ್ಮದ್ ಯೂನುಸ್ ಅವರನ್ನು ತನ್ನ ಚಾನ್ಸೆಲರ್ ಎಂದು ಹೆಸರಿಸಿ ಗೌರವಿಸಿದೆ. ಮಹಮ್ಮದ್ ಯೂನುಸ್ ಅವರು ೧೯೯೮ರ ವರ್ಷದಲ್ಲಿ ಟೆಡ್ ಟರ್ನರ್ ಅವರು ಸ್ಥಾಪಿಸಿರುವ ಒಂದು ಬಿಲ್ಲಿಯನ್ ಡಾಲರ್ ಸಹಾಯ ನಿಧಿಯ ಮೇಲ್ವಿಚಾರಕ ಮಂಡಲಿಯ ನಿರ್ದೇಶಕರೂ ಆಗಿದ್ದಾರೆ.

ಬರಹಗಳು

[ಬದಲಾಯಿಸಿ]

ಮಹಮ್ಮದ್ ಯೂನುಸ್ ಅವರು ತಮ್ಮ ಆರ್ಥಿಕ ಚಿಂತನೆಗಳ ಕುರಿತಾಗಿ ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

ರಾಜಕೀಯದಲ್ಲಿ

[ಬದಲಾಯಿಸಿ]

ಯೂನುಸ್‌ರವರು "ನಾಗೊರಿಕ ಶಕ್ತಿ" ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ.

ಗ್ರಾಮೀಣ ಬ್ಯಾಂಕಿನಿಂದ ಉಚ್ಚಾಟನೆ

[ಬದಲಾಯಿಸಿ]

ಬಾಂಗ್ಲಾದೇಶದ ಸರ್ಕಾರ ೨೦೧೧ರ ವರ್ಷದಿಂದ ಗ್ರಾಮೀಣ ಬ್ಯಾಂಕಿನಲ್ಲಿ ಮಹಮ್ಮದ್ ಯೂನುಸ್ ಅವರಿಗಿರುವ ಅಧಿಕಾರವನ್ನು ಕಿತ್ತುಕೊಂಡಿದೆ. ಈ ಕುರಿತು ಅವರ ಹೋರಾಟ ನಡೆಯುತ್ತಿದೆ.

ಮಾಹಿತಿ ಕೃಪೆ

[ಬದಲಾಯಿಸಿ]

ಕೆಂಡಸಂಪಿಗೆಯಲ್ಲಿ ಮೂಡಿಬಂದ ಬಸವರಾಜು ಅವರ ಲೇಖನ ಮತ್ತು ವಿಕಿಪೀಡಿಯಾ ಇಂಗ್ಲಿಷಿನಲ್ಲಿರುವ ಕೆಲವು ಮಾಹಿತಿಗಳು