ವಿಷಯಕ್ಕೆ ಹೋಗು

ಪ್ರಕಾಶ್ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರಕಾಶ್ ರಾಜ್ ಇಂದ ಪುನರ್ನಿರ್ದೇಶಿತ)
ಪ್ರಕಾಶ್ ರೈ / ಪ್ರಕಾಶ್ ರಾಜ್
ಪ್ರಕಾಶ್ ರೈ
ಜನನಮಾರ್ಚ್ ೨೬, ೧೯೬೫
ಪುತ್ತೂರು
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ

ಪ್ರಕಾಶ್ ರೈ ( ಮಾರ್ಚ್ ೨೬, ೧೯೬೫) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟರಾಗಿದ್ದಾರೆ. ಪ್ರಕಾಶ್ ರೈ ಎಂಬ ಮೂಲ ಹೆಸರಿನಿಂದ ತಮ್ಮ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿರುವ ಅವರು ಇತರ ಚಿತ್ರರಂಗಗಳಲ್ಲಿ ಪ್ರಕಾಶ್ ರಾಜ್ ಎಂದು ಪ್ರಖ್ಯಾತರು.

ನಮ್ಮ ಪುತ್ತೂರಿನವರಾದ ಪ್ರಕಾಶ್ ರೈ ಹುಟ್ಟಿದ ಹಬ್ಬ ಮಾರ್ಚ್ 26. ಬೆಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಓದಿನ ಸಮಯದಲ್ಲಿ ನಾಟಕಗಳಲ್ಲಿ ನಟಿಸಿ ಮುಂದೆ ಹವ್ಯಾಸಿ ರಂಗಭೂಮಿ ಮತ್ತು ದೂರದರ್ಶನದ ಪಾತ್ರಗಳಿಗೆ ಬಂದರು. ಪ್ರಕಾಶ್ ರೈ, ಅಂದಿನ ದಿನದಲ್ಲಿ ಬರುತ್ತಿದ್ದ ಗುಡ್ಡದ ಭೂತ, ಬಿಸಿಲು ಕುದುರೆ ಇತ್ಯಾದಿ ದೂರದರ್ಶನದ ಪಾತ್ರ ಹಾಗೂ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಲ ನೂಕುತ್ತಿದ್ದರು. ಹೀಗಿದ್ದ ದಿನಗಳಲ್ಲಿ ‘ಹರಕೆಯ ಕುರಿ’ ಎಂಬ ಚಿತ್ರದಲ್ಲಿನ ಪ್ರಕಾಶ್ ರೈ ಅಭಿನಯ ವಿಮರ್ಶಕರ ಮೆಚ್ಚುಗೆ ಗಳಿಸಿತು.

ಜನಪ್ರಿಯತೆ

[ಬದಲಾಯಿಸಿ]

ಹರಕೆಯ ಕುರಿ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ಧ ನಟಿ ಗೀತ ಅವರು ಪ್ರಕಾಶ್ ರೈ ಅವರನ್ನು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು. ಮುಂದಿನದು ಇತಿಹಾಸ. ಬಾಲಚಂದರ್ ಗರಡಿಯಲ್ಲಿ ಪಳಗಿ ಯಶಸ್ಸು ಗಳಿಸಿದ ಮೇಲೆ ಕೇಳಬೇಕೆ! ಆತನಿಗೆ ಬಿಡುವು ಸಿಗದಷ್ಟು ನಿರಂತರ ಕೆಲಸ. ಆತನ ಹೆಸರು ಪ್ರಕಾಶ್ ರಾಜ್ ಎಂದಾಗಿ ಬದಲಾಯಿತು. ಎಲ್ಲಾ ತಮಿಳು ಚಿತ್ರಗಳಲ್ಲೂ, ತೆಲುಗು ಚಿತ್ರಗಳಲ್ಲಿಯೂ ಆತ ಇರಲೇಬೇಕು ಎನ್ನುವಂತಾಗಿ ಹೋಯಿತು. ಮಲಯಾಳಂನಲ್ಲೂ ಪ್ರಸಿದ್ಧರಾದರು. ಆತ ಸರಾಗವಾಗಿ ನಟಿಸುವ ರೀತಿ, ಸಂಭಾಷಣೆ ಹೇಳುವ ಪರಿ, ಶಾರೀರಿಕ ಅಭಿವ್ಯಕ್ತಿ ಆತನನ್ನು ಉತ್ತುಂಗಕ್ಕೇರಿಸಿತು. ಬಹಳಷ್ಟು ನಿರ್ಮಾಪಕ ನಿರ್ದೇಶಕರು ಆತನನ್ನು ಉಪಯೋಗಿಸಿಕೊಂಡು ಆತನನ್ನೂ ಶ್ರೀಮಂತನನ್ನಾಗಿಸಿ ತಾವೂ ಶ್ರೀಮಂತರಾಗುವಂತಹ ವಾಣಿಜ್ಯಕ ವ್ಯವಹಾರ ಧ್ಯೇಯದ ಚಿತ್ರಗಳನ್ನು ನಿರ್ಮಿಸಿದ್ದೇ ಹೆಚ್ಚು. ಅವುಗಳಲ್ಲಿ ನಾಯಕಿಗೆ ಅಪ್ಪನಾಗಿ ನಾಯಕನಿಗೆ ಖಳನಾಗಿ ಮೂಡಿದ್ದುದು ಬಹುಪಾಲು.

ಪ್ರಶಸ್ತಿ, ಗೌರವಗಳು

[ಬದಲಾಯಿಸಿ]

ಪ್ರಕಾಶ್ ರೈ ಅವರಿಗೆ ಹೆಚ್ಚು ಪಾತ್ರಗಳು ದೊರೆತದ್ದು ವಾಣಿಜ್ಯ ಉದ್ಧೇಶದ ಚಿತ್ರಗಳಾದರೂ ಪ್ರಸಿದ್ಧಿ ನಿರ್ದೇಶಕರುಗಳಾದ ಕೆ. ಬಾಲಚಂದರ್, ಮಣಿರತ್ನಂ, ಪ್ರಿಯದರ್ಶನ್, ನಾಗಾಭರಣ ಅಂತಹವರಿಗೆ ಆತನ ಸಾಮರ್ಥ್ಯ ಕೂಡಾ ಗೊತ್ತಿತ್ತು. ಪ್ರಕಾಶ್ ರೈ 1998ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. 1999, 2002, 2003ರ ವರ್ಷಗಳಲ್ಲಿ ಆತನ ಅಭಿನಯ ರಾಷ್ಟ್ರಪ್ರಶಸ್ತಿ ಆಯ್ಕೆ ಮಂಡಳಿಯ ವಿಶೇಷ ಜ್ಯೂರಿಗಳ ಮೆಚ್ಚುಗೆ ಪಡೆಯಿತು. 2003ರ ವರ್ಷದಲ್ಲಿ ವಿಶೇಷ ಜ್ಯೂರಿ ಮೆಚ್ಚುಗೆಯ ಬಹುಮಾನ ನೀಡುವಾಗ ಆ ವರ್ಷದ ತಮಿಳು, ಕನ್ನಡ ಮತ್ತು ತೆಲುಗಿನ ಒಟ್ಟು ಹನ್ನೆರಡು ಚಿತ್ರಗಳಲ್ಲಿ ಪ್ರಶಂಸನೀಯ ಅಭಿನಯ ನೀಡಿದ್ದಾರೆ ಎಂದು ಕೊಂಡಾಡಿತು. ಇದು ಈ ನಟ ಎಷ್ಟು ಸಮರ್ಥ ಎಂಬುದಕ್ಕೆ ಒಂದು ನಿದರ್ಶನ. ರಾಷ್ಟ್ರಪ್ರಶಸ್ತಿಗಳಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಅಂದರೆ ಅವರು ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ ಎಂದು ಕೂಡಾ ಅರ್ಥವಿದೆ. ಹೀಗೆ ಹಲವು ಬಾರಿ ರಾಷ್ಟ್ರಪ್ರಶಸ್ತಿ ಪ್ರಕಾಶ್ ರೈ ಬಾಗಿಲ ಹೊಸ್ತಿಲವರೆಗೂ ಬಂದು ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿತ್ತು. 2008ರ ವರ್ಷದಲ್ಲಿ ಕಾಂಚೀವರಂ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೆ ಕಡೆಗೂ ಶ್ರೇಷ್ಠ ನಟ ಪ್ರಶಸ್ತಿ ಸಂದಿತು. ತಮಿಳು, ತೆಲುಗಿನ ಚಿತ್ರಗಳಲ್ಲಿ ಪ್ರಕಾಶ್ ರೈ ಅವರಿಗೆ ಸಂದಿರುವ ರಾಜ್ಯ ಮತ್ತು ಫಿಲಂ ಫೇರ್ ಅಂತಹ ಪ್ರಶಸ್ತಿಗಳು ಹಲವಾರು.

ಕನ್ನಡ ಚಿತ್ರಗಳಲ್ಲಿ

[ಬದಲಾಯಿಸಿ]

ಸುಮಾರು 300 ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರೈ ಆಗಾಗ ಕನ್ನಡದಲ್ಲೂ ಬಂದು ನಟಿಸಿ ಹೋಗುತ್ತಿದ್ದಾರೆ. ಅವರು ನಟಿಸಿದ ‘ನಾಗಮಂಡಲ’ದಲ್ಲಿನ ಅವರ ಅಭಿನಯ ಜನರ ಮನಸ್ಸಿನಲ್ಲಿ ಚಿರಸ್ಮರಣೀಯ. ಇತ್ತೀಚಿನ ವರ್ಷದಲ್ಲಿ ತಾವೇ ತಮ್ಮದೇ ಚಿಂತನೆಯಾದ ತಮಿಳು ಚಿತ್ರದ ಅವತರಣಿಕೆಯ ಕನ್ನಡ ಚಿತ್ರವೊಂದನ್ನು ಗೆಳೆಯ ಸುರೇಶ್ ಜೊತೆಗೂಡಿ ‘ನಾನು ನನ್ನ ಕನಸು’ ಎಂಬ ಚಿತ್ರವಾಗಿಸಿ, ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕೂಡಾ ಕಂಡರು. ಇನ್ನೂ ಕೆಲವು ಚಿತ್ರಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಕನ್ನಡದ ಪ್ರೀತಿಗಾಗಿ ಉತ್ತಮ ಚಿತ್ರಕತೆ ಇದ್ದ ಪಕ್ಷದಲ್ಲಿ ಕೆಲವೊಮ್ಮೆ ಹಣ ಕೂಡಾ ಸ್ವೀಕರಿಸದೆ ಇವರು ತಮ್ಮ ಹೃದಯವಂತಿಕೆ ಮೆರೆದಿದ್ದಾರೆ.

ಓದುಗ ಮತ್ತು ಚಿಂತಕ

[ಬದಲಾಯಿಸಿ]

ಪ್ರಕಾಶ್ ರೈ ಅತ್ಯುತ್ಕೃಷ್ಟ ಓದುಗ ಮತ್ತು ಚಿಂತಕ ಎಂಬುದು ಅವರ ಹಲವಾರು ಸಂದರ್ಶನಗಳಲ್ಲಿ ಕಾಣಬರುವ ಅಂಶ.