ಪಾಪಾಸುಕಳ್ಳಿ
ಪಾಪಾಸುಕಳ್ಳಿಯು ಭಾರತತಾದ್ಯಂತ ಬಂಜರು ಪ್ರದೇಶಗಳಲ್ಲಿ ಕಳೆಗಿಡದಂತೆ ಬೆಳೆಯುವ ಮುಳ್ಳಿರುವ ಕುರುಚಲು ಕಳ್ಳಿ. ಹಿಮಾಲಯದ ಸುಮಾರು 2000 ಮೀ ಎತ್ತರದ ಪ್ರದೇಶಗಳಲ್ಲೂ ಇದನ್ನು ಕಾಣಬಹುದು. ಆದರೂ ಈ ಸಸ್ಯ ಭಾರತದ ಸ್ಥಳೀಯ ಸಸ್ಯವಲ್ಲ. ಇದರ ಮೂಲಸ್ಥಾನ ಅಮೆರಿಕಾ ಖಂಡಗಳು. ಅಲ್ಲಿಂದ ಪೋರ್ಚುಗೀಸರು ಇದನ್ನು ಭಾರತಕ್ಕೆ ತಂದರೆಂದು ಹೇಳಲಾಗಿದೆ. ಈಗ ಇದು ಇಲ್ಲಿಯ ಹವೆ ಮತ್ತು ಮಣ್ಣಿಗೆ ಚೆನ್ನಾಗಿ ಒಗ್ಗಿಕೊಂಡು ಹಬ್ಬಿ ಕಳೆಗಿಡವಾಗಿದೆ. ಇದು ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದೆ. ಒಪನ್ಶಿಯ ಇದರ ಶಾಸ್ತ್ರೀಯ ಹೆಸರು.
ಪಾಪಾಸುಕಳ್ಳಿಯ ಕಾಂಡ ಇತರ ಕಳ್ಳಿಗಳ ಕಾಂಡದಂತೆ ಎಲೆಯ ರೂಪದ ಕಾಂಡವಾಗಿ ಮಾರ್ಪಾಟಾಗಿದೆ. ಅಂದರೆ ಚಪ್ಪಟೆಯಾಗಿಯೂ (ಅಥವಾ ಸ್ತಂಭಾಕಾರವಾಗಿಯೂ)ದಪ್ಪವಾಗಿಯೂ ಇದ್ದು ಹಸಿರು ಬಣ್ಣದ್ದಾಗಿದೆ. ಈ ಮಾರ್ಪಾಡಿನಿಂದಾಗಿ ಇದು ನೀರಿಲ್ಲದಂಥ ಪ್ರದೇಶಗಳಲ್ಲೂ ಬದುಕಬಲ್ಲದು. ಇದರಲ್ಲಿ ಎಲೆಗಳು ಮುಳ್ಳುಗಳಾಗಿ ಮಾರ್ಪಾಟಾಗಿವೆ. ಆದ್ದರಿಂದ ಬಾಷ್ಪವಿಸರ್ಜನೆಯಿಂದ ಇತರ ಸಸ್ಯಗಳಲ್ಲಾಗುವಷ್ಟು ನೀರಿನ ನಷ್ಟ ಇವುಗಳಲ್ಲಾಗುವುದಿಲ್ಲ. ಆದರೆ ಕಾಂಡದಲ್ಲಿ ಕ್ಲೋರೊಫಿಲ್ ಇದೆಯಾಗಿ ಅದೇ ದ್ಯುತಿಸಂಶ್ಲೇಷಣೆಯನ್ನು ನಡೆಸುತ್ತದೆ. ಅಲ್ಲದೆ ಪಾಪಾಸುಕಳ್ಳಿಯ ಕಾಂಡದಲ್ಲಿ ಲೋಳೆಯನ್ನೊಳಗೊಂಡ ಅಂಗಾಂಶವಿದೆ. ಇದರಿಂದಾಗಿ ನೀರು ಬಹುಕಾಲದವರೆಗೆ ಸಂಗ್ರಹವಾಗಿರಬಲ್ಲದು.
ಚೆನ್ನಾಗಿ ಬೆಳೆದ ಪಾಪಾಸುಕಳ್ಳಿಯಲ್ಲಿ ಮೂಲಕಾಂಡಸ್ತಂಭಾಕೃತಿಯದು. ಮೇಲಿನ ಕವಲುಗಳು ಚಪ್ಪಟೆಯಾಗಿರುವ ಅಂಡಾಕಾರದ ಅನೇಕ ತುಂಡುಗಳ ಜೋಡಣೆಯಂತೆ ಕಾಣುವುವು. ಇವುಗಳ ಮೇಲೆ ಅನೇಕ ಗುಬಟುಗಳಿವೆ. ಪ್ರತಿಯೊಂದು ಗುಬಟಿನ ಮೇಲೆಯೂ ಮುಳ್ಳುಗಳ ಗೊಂಚಲಿದೆ. ಈ ಮುಳ್ಳುಗಳ ಮಧ್ಯೆ ಕೊಂಕುತುದಿಯುಳ್ಳ ಬಿರುಗೂದಲುಗಳಿವೆ. ಕಾಂಡದ ಎಳೆಯ ಕವಲುಗಳಲ್ಲಿ ಎಲೆಗಳು ಪೊರೆಯಂತಿವೆಯಾದರೆ ಬಲಿತ ಕವಲುಗಳಲ್ಲಿ ಎಲೆಗಳು ಬಿದ್ದುಹೋಗಿ ಅವುಗಳ ಕಂಕುಳಲ್ಲಿ ಗುಬಟುಗಳಂತಿರುವ ಕಂಕುಳಮೊಗ್ಗುಗಳ ಎಲೆಗಳು ಮುಳ್ಳುಗಳಾಗಿ ಬೆಳೆಯುತ್ತವೆ. ಪಾಪಾಸುಕಳ್ಳಿ ವರ್ಷವಿಡೀ ಹೂಬಿಡುತ್ತದೆ. ಹೂಗಳು ದೊಡ್ಡಗಾತ್ರದವು; ಸುಂದರವಾಗಿಯೂ ಹಾಗೂ ಆಕರ್ಷಕವಾಗಿಯೂ ಇವೆ. ಕಾಂಡದ ಕವಲುಗಳ ಮೇಲೆ ಒಂಟೊಂಟಿಯಾಗಿ ಒಂದು ಬದಿಯಲ್ಲಿ ಬೆಳೆಯುತ್ತವೆ. ಹೂವಿನ ಬಣ್ಣ ಕೆಂಪು, ಬಿಳಿ, ಹಳದಿ, ಕೇಸರಿ ಹೀಗೆ ವೈವಿಧ್ಯಮಯ. ಪುಷ್ಪಪಾತ್ರೆ ಅನೇಕ ಪುಷ್ಪಪತ್ರಗಳಿಂದ ಕೂಡಿದ್ದು ಅಂಡಾಶಯದೊಂದಿಗೆ ಕೂಡಿಕೊಂಡಿದೆ. ದಳಗಳು ಅನೇಕ. ಕೇಸರಗಳು ಅಸಂಖ್ಯಾತ. ಅಂಡಾಶಯ ನೀಚಸ್ಥಾನದ್ದು. ಅನೇಕ ಕಾರ್ಪೆಲುಗಳಿಂದ ರಚಿತವಾಗಿದೆ. ಕಾಯಿಯ ಆಕಾರ ನೇರಳೆಹಣ್ಣಿನಂತೆ. ಇದು ಮಾಂಸಲವಾಗಿದೆ. ಮಾಗಿದಾಗ ಕೆಂಪು ಅಥವಾ ನೇರಳೆ ಬಣ್ಣವನ್ನು ತಳೆಯುತ್ತದೆ. ಇದರ ಮೇಲೆ ಬಿರುಗೂದಲುಗಳುಳ್ಳ ಗುಬಟುಗಳುಂಟು.
ಈ ಸಸ್ಯದಲ್ಲಿ ಗೆಲ್ಲುಗಳಿಂದ ಮತ್ತು ಬೀಜಗಳಿಂದ ಸಂತಾನೋತ್ಪತ್ತಿ ಆಗುತ್ತದೆ. ಪಾಪಾಸುಕಳ್ಳಿಯಲ್ಲಿ ಸುಮಾರು 250-300 ಪ್ರಭೇದಗಳಿವೆ. ಇವುಗಳಲ್ಲಿ ಡಿಲೆನಿಯೈ, ಮಾನಕ್ಯಾಂತ, ಇಲೆಟಿಯರ್ ಎಂಬವು ಭಾರತದಲ್ಲಿ ಬೆಳೆಯುತ್ತವೆ. ಕಳೆಗಿಡವಾದರೂ ಪಾಪಾಸುಕಳ್ಳಿಯಿಂದ ಅನೇಕ ಉಪಯೋಗಗಳಿವೆ. ಇದೊಂದು ಮುಳ್ಳಿನ ಗಿಡವಾದ್ದರಿಂದ ಹೊಲ, ಮನೆಗಳನ್ನು ಶತ್ರುಗಳಿಂದ ರಕ್ಷಿಸುವ ಉತ್ತಮ ಬೇಲಿಗಿಡವಾಗಿದೆ. ಈ ಗಿಡಕ್ಕೆ ಔಷಧೀಯ ಗುಣಗಳೂ ಉಂಟು. ಕಾಂಡವನ್ನು ಗಾನರೀಯ ರೋಗಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಹಣ್ಣಿನ ರಸ ಪಿತ್ತ ರಸಸ್ರಾವಕ ಹಾಗೂ ಕೆಮ್ಮು, ಕಫ ನಿವಾರಕ, ಅಲ್ಲದೆ ಪಾಪಾಸುಕಳ್ಳಿಯ ಹಣ್ಣು ರುಚಿಯಾಗಿ ತಿನ್ನಲು ಯೋಗ್ಯವಾಗಿದೆ. ಇದಕ್ಕೆ ತಂಪುಕಾರಕ ಮತ್ತು ಚೈತನ್ಯದಾಯಕ ಗುಣಗಳಿವೆ. ಇದರಿಂದ ಮದ್ಯವನ್ನೂ ತಯಾರಿಸುವುದುಂಟು. ಮುಳ್ಳುಗಳನ್ನು ತೆಗೆದು ಹಾಕಿ ಕಾಂಡಗಳನ್ನು ದನಕರುಗಳಿಗೆ ಆಹಾರವಾಗಿ ಉಪಯೋಗಿಸಬಹುದು. ರಾಜಸ್ಥಾನದಲ್ಲಿ ಮುಳ್ಳಿಲ್ಲದ ಪಾಪಾಸು ಕಳ್ಳಿಯನ್ನೇ ಬೆಳೆಸಿ ದನಗಳ ಮೇವಾಗಿ ಬಳಸಲಾಗುತ್ತಿದೆ. ಈ ಸಸ್ಯದಿಂದ ಪಡೆದ ಒರಟುರೀತಿಯ ನಾರನ್ನು ಕಾಗದ ತಯಾರಿಕೆಯಲ್ಲಿ ಉಪಯೋಗಿಸಬಹುದು. ಕೆಲವು ಪ್ರಭೇದಗಳನ್ನು ಸೌಂದರ್ಯಕ್ಕಾಗಿ ಉದ್ಯಾನಗಳಲ್ಲೂ ಬೆಳೆಸುವುದಿದೆ.