ವಿಷಯಕ್ಕೆ ಹೋಗು

ಅಸ್ತಿಭಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ತಳಹದಿ ಇಂದ ಪುನರ್ನಿರ್ದೇಶಿತ)

ಅಸ್ತಿಭಾರ ಎಂದರೆ ಮನೆ, ಸೇತುವೆ, ನೀರಾವರಿ ಕಟ್ಟೆ ಮುಂತಾದ ಕಟ್ಟಡಗಳ (ಸ್ಟ್ರಕ್ಚರ್ ಗಳು) ಭಾರವನ್ನು ತಳದ ವಸ್ತುಗಳಿಗೆ (ನೆಲ, ಕಲ್ಲು) ವರ್ಗಾಯಿಸುವ ಮತ್ತು ಆಯಾ ಕಟ್ಟಡಗಳ ಅಂಗವಾಗಿರುವ ರಚನೆ (ಪೌಂಡೇಷನ್). ತಳಪಾಯವೆಂದೂ ಹೆಸರಿದೆ. ಕಟ್ಟಡದ ರಚನೆ ಅಸ್ತಿಭಾರದಿಂದ ತೊಡಗಿ ಮೇಲಕ್ಕೂ ಮುಂದುವರಿಯುವುದು; ಆದರೆ ಕಟ್ಟಡದ ಸಂವಿಧಾನವನ್ನು (ಡಿಸೈನ್) ಮೇಲಿನಿಂದ ಅದರ ಭಾಗಗಳ ಮೇಲೆ ಬರುವ ಭಾರವನ್ನು ಧಾರಾಳವಾಗಿ ಹೊರುವಷ್ಟು ಭದ್ರವಾಗಿ ಮಾಡಬೇಕು. ಅಸ್ತಿಭಾರ ಈ ಎಲ್ಲ ಹೊರೆಗಳನ್ನು ಹೊರುವಂತಿರಬೇಕು.[]

ಭಾರದ ಬಗೆಗಳು

[ಬದಲಾಯಿಸಿ]

ಅಸ್ತಿಭಾರದ ಮೇಲೆ ಬೀಳುವ ಭಾರವನ್ನು ನಿಶ್ಚಲ ಭಾರ (ಲೈಡ್‍ಲೋಡ್) ಮತ್ತು ಚಲ ಭಾರ (ಲಿವ್‍ಲೋಡ್) ಎಂದು ಎರಡು ಭಾಗ ಮಾಡಬಹುದು. ಒಂದು ಸೇತುವೆಯ ಕಲ್ಲಿನ ಕಂಬಗಳು ಮತ್ತು ಕಮಾನಿನ ಭಾರ ನಿಶ್ಚಲ. ಅದರ ಮೇಲೆ ಓಡಾಡುವ ಜನರ ಮತ್ತು ವಾಹನಗಳ ಭಾರ ಚಲ. ಇವುಗಳಲ್ಲಿ ನಿಶ್ಚಲ ಭಾರವನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಆದರೆ ಚಲ ಭಾರ ಕಟ್ಟಡದ ಉಪಯೋಗಕ್ಕೆ ಅನುಸಾರವಾಗಿ ಕಾಲಕಾಲಕ್ಕೂ ವ್ಯತ್ಯಾಸವಾಗುತ್ತದೆ. ಗಾಳಿಯ ಹೊಡೆತ, ಮಂಜು ಇವು ಕೆಲವು ಕಾಲಗಳಲ್ಲಿ ಇರುವುದೇ ಇಲ್ಲ. ಇನ್ನು ಕೆಲವುಕಾಲಗಳಲ್ಲಿ ಪರಮಾವಧಿಯನ್ನು ಮುಟ್ಟುತ್ತವೆ. ಸೇತುವೆಗಳ ಮೇಲೆ ತಿರುಗಾಡುವ ಜನ ಮತ್ತು ವಾಹನಗಳ ಭಾರ ಅನಿಶ್ಚಿತವಾಗಿ ಕಾಲ ಕಾಲಕ್ಕೂ ಬದಲಾಗುತ್ತದೆ.[]

ಅಸ್ತಿಭಾರದ ವಿಧಗಳು

[ಬದಲಾಯಿಸಿ]

ಒಂದು ಕಟ್ಟಡದಲ್ಲಿ ಭೂಮಿಯ ಮಟ್ಟದ ಕೆಳಗಿರುವ ಕಲ್ಲುಕಟ್ಟಡವನ್ನೂ, ಬುಡದ ಕಾಂಕ್ರೀಟನ್ನೂ ಇವು ನಿಂತಿರುವ ನೈಸರ್ಗಿಕವಾದ ಕಲ್ಲು ಇಲ್ಲವೆ ಮಣ್ಣನ್ನೂ ಎರಡನ್ನೂ ರೂಢಿಯಲ್ಲಿ ಅಸ್ತಿಭಾರವೆಂದೇ ಕರೆಯುತ್ತಾರೆ. ಅಸ್ತಿಭಾರದ ಕಟ್ಟಡ ಮೇಲುಕಟ್ಟಡದ ಭಾರವನ್ನು ನೆಲದ ಇಲ್ಲವೆ ಹೊಳೆಯ ತಳದಕೆಳಗಡೆ ಮೇಲಿನ ಭಾರವನ್ನೆಲ್ಲಾ ವಿಕಾರವಾಗದೆ ಹೊರಬಲ್ಲ ಸಸ್ತಿಭಾರಕ್ಕೆ ಸಾಗಿಸುತ್ತವೆ. ಎಲ್ಲ ಅಸ್ತಿ ಭಾರಗಳಿಗೂ ಒಂದೇ ವಿಧವಾಗಿ ಭಾರವನ್ನು ಹೊರುವ ಸಾವಥ್ರ್ಯವಿರುವುದಿಲ್ಲ. ಭಾರ ಅದರ ಮೇಲೆ ಬಿದ್ದಾಗ ಗಟ್ಟಿಬಂಡೆಯ ಹೊರತು ಉಳಿದ ಅಸ್ತಿಭಾರಗಳೆಲ್ಲ ಹೆಚ್ಚಾಗಿಯೋ ಕಡಿಮೆಯಾಗಿಯೋ ಕುಗ್ಗುತ್ತವೆ. ಒಂದೊಂದು ಅಸ್ತಿಭಾರವೂ ಅದು ಕುಗ್ಗದ ಹಾಗೆ ಹೊರಬಹುದಾದ ಒತ್ತಡದಲ್ಲಿ ಮೇಲಿನ ಭಾರವನ್ನು ಸಾಗಿಸುವುದೇ ಅಸ್ತಿಭಾರದ ಉದ್ದೇಶ.[]

ಹರವು ಮತ್ತು ಆಳ

[ಬದಲಾಯಿಸಿ]

ಅಸ್ತಿಭಾರದ ಕಟ್ಟಡಗಳನ್ನು ಹರಡಿದ ಅಸ್ತಿಭಾರಗಳುಳ್ಳವು ಮತ್ತು ಆಳವಾದ ಅಸ್ತಿ ಭಾರಗಳುಳ್ಳವು ಎಂದು ವಿಂಗಡಿಸಬಹುದು. ಹರಡಿದ ಅಸ್ತಿಭಾರಗಳು ಭೂಮಿಯ ಮಟ್ಟದಿಂದ ಬಹಳ ಆಳವಾಗಿರುವುದಿಲ್ಲ. ಅಸ್ತಿಭಾರ ಒಂದು ಚದರಮೀಟರಿನ ಮೇಲೆ ಸುರಕ್ಷಿತವಾಗಿ ಹೊರಬಹುದಾದ ಭಾರಕ್ಕೆ ಅನುಗುಣವಾಗಿರುತ್ತದೆ. ಆಳವಾದ ಅಸ್ತಿಭಾರಗಳಲ್ಲಿ ಚದರ ಅಳತೆ ಕಡಿಮೆ. ಒಂದು ಚದರಮೀಟರ್ ಮೇಲೆ ಹೆಚ್ಚಿಗೆ ಭಾರವನ್ನು ಹೊರಬಲ್ಲ ಸಿಮೆಂಟ್‍ಕಾಂಕ್ರೀಟ್ ಮೊದಲಾದ ಸಾಮಾಗ್ರಿಗಳನ್ನು ಉಪಯೋಗಿಸಿ ಹೆಚ್ಚಿಗೆ ತಡೆಯುವಂತೆ ಮಾಡುತ್ತಾರೆ. ಗ್ರಿಲ್ಲೇಜ್ ಅಸ್ತಿ ಭಾರಗಳಲ್ಲಿ ಅಸ್ತಿಭಾರದ ಕಾಂಕ್ರೀಟಿನಲ್ಲಿ ಉಕ್ಕಿನ ಗರ್ಡರುಗಳನ್ನು ಹುದುಗಿಸಿರುತ್ತಾರೆ. ಆಗ ಕಾಂಕ್ರೀಟಿನ ದಪ್ಪವನ್ನು ಕಡಿಮೆಮಾಡಬಹುದು. ಅಥವಾ ಉಕ್ಕಿನ ಗರ್ಡರುಗಳನ್ನು ಎರಡು ವರಸೆಗಳಲ್ಲಿ ಒಂದರ ಕೆಳಗೆ ಇನ್ನೊಂದು ವರಸೆಯನ್ನು ಸಮಕೋನವಾಗಿಟ್ಟು ಎಲ್ಲವನ್ನೂ ಸಿಮೆಂಟ್ ಕಾಂಕ್ರೀಟಿನಿಂದ ಮುಚ್ಚಬಹುದು. ಉಕ್ಕಿನ ಗ್ರಿಲ್ಲೇಜಿಗೆ ಬದಲಾಗಿ ಪ್ರಬಲಿತ ಕಾಂಕ್ರೀಟನ್ನು ಹಾಕಬಹುದು. ಬಗೆಬಗೆಯ ದಸಿಗಳನ್ನು (ಪೈಲ್ಸ್) ನೆಲದಲ್ಲಿ ಹೂಳಬಹುದು. ಅಸ್ತಿಭಾರದ ಮಟ್ಟಗಳಲ್ಲಿ ಅಗಲದಲ್ಲಿ ಬದಲಾವಣೆಗಳನ್ನು ಮೆಟ್ಟಲು ಮೆಟ್ಟಲಾಗಿ ಮಾಡಬೇಕು.[]

ವರ್ಗೀಕರಣ

[ಬದಲಾಯಿಸಿ]

ಅಸ್ತಿಭಾರಗಳನ್ನು ವ್ಯವಹಾರಿಕವಾಗಿ ಕೆಳಗೆಕಂಡಂತೆ ವರ್ಗೀಕರಣ ಮಾಡಬಹುದು :-

ಕೆಲವು ಪ್ರದೇಶಗಳಲ್ಲಿ ಕಲ್ಲುಬಂಡೆಗಳು ನೆಲದಮೇಲೆ ಎದ್ದು ಕಾಣುತ್ತವೆ. ಇನ್ನು ಕೆಲವು ಕಡೆ ಕೊಂಚ ಆಳವಾಗಿ ಅಗೆದಾಗ ಕಲ್ಲು ಸಿಕ್ಕಬಹುದು. ಗಟ್ಟಿಯಾದ ಬಂಡೆಗಿಂತ ಉತ್ತಮವಾದ ಅಸ್ತಿಭಾರ ಇನ್ನೊಂದಿಲ್ಲ. ಅಗ್ನಿಶಿಲೆಗಳು, ದಪ್ಪವಾದ ಸುಣ್ಣಕಲ್ಲು ಮತ್ತು ಮರಳುಕಲ್ಲು ಚದರಡಿಗೆ 15 ಟನ್ ಭಾರವನ್ನು ಧಾರಾಳವಾಗಿ ಹೊರಬಲ್ಲವು. ಆದರೆ ಮೆದುವಾದ ಕಲ್ಲಿನ ಮೇಲೆ 8 ಟನ್ನಿನ ಮೇಲೆ ಭಾರವನ್ನು ಹಾಕತಕ್ಕದ್ದಲ್ಲ. ಕಲ್ಲುಬಂಡೆಯೇ ಶಿಥಿಲವಾಗಿ ಗ್ರ್ಯಾವೆಲ್, ಮರಳು, ಮಣ್ಣು, ಗೋಡು-ಇತ್ಯಾದಿ ಪ್ರಭೇದಗಳಾಗುತ್ತದೆ.

ಗ್ರಾವೆಲ್

[ಬದಲಾಯಿಸಿ]

ಇದು ನೀರಿನಲ್ಲಿ ನವೆದುಹೋದ ಬಂಡೆಯ ಪುಡಿ. ಇದರ ಅಳತೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿರುತ್ತವೆ. ಒತ್ತಾಗಿ ಒಟ್ಟುಗೂಡಿದ ಗ್ರ್ಯಾವೆಲ್ ಭದ್ರವಾದ ತಳದ ಮೇಲೆ ಇದ್ದರೆ ಚದರ ಅಡಿಗೆ 4 ಟನ್ ಭಾರವನ್ನು ತಡೆಯಬಲ್ಲದು.

ಆರು ಮಿ.ಮೀಗೂ ಕಡಿಮೆ ಅಳತೆಯ ಸಣ್ಣ ಕಲ್ಲಿನ ಕಣಗಳಿಗೆ ಮರಳು ಎನ್ನುತ್ತಾರೆ. ಮರಳಿನ ಅಸ್ತಿಭಾರ ಹರಿಯುವ ನೀರಿನಲ್ಲಿ ನಿಲ್ಲಬೇಕಾದರೆ ಅದು ಪಕ್ಕದಲ್ಲಿ ಜಾರಿಹೋಗದ ಹಾಗೆ ರಕ್ಷಣೆ ಬೇಕು. ಯಾವ ದಿಕ್ಕಿನಲ್ಲಿಯೂ ಹೊರಕ್ಕೆ ಹೋಗದ ಹಾಗೆ ನಿರ್ಬಂಧಿತವಾಗಿರುವ ಮರಳು ಚದರ ಅಡಿಗೆ 2 ರಿಂದ 4 ಟನ್ ಭಾರವನ್ನೂ ಹೊರಬಲ್ಲದು.

ಮಣ್ಣು

[ಬದಲಾಯಿಸಿ]

ಇದರ ಗುಣಗಳು ಮಣ್ಣಿನ ರಚನೆಗೆ ಅನುಗುಣವಾಗಿರುತ್ತವೆ. ಜೇಡಿಮಣ್ಣು ಜಿಗುಟಾಗಿರುತ್ತದೆ. ಮರಳು ಜಿಗುಟನ್ನು ತಗ್ಗಿಸುತ್ತದೆ. ನೀರು ಬಿದ್ದಾಗ ಅದು ಮೇಣದ ಹಾಗಾಗುತ್ತದೆ. ಜಿಗುಟು ವ್ಯತ್ಯಾಸವಾದ ಹಾಗೆ ಅದರ ಸಲೆ ಅಳತೆಯೂ ವ್ಯತ್ಯಾಸವಾಗುತ್ತದೆ. ಅದಕ್ಕಾಗಿ ಜಿಗುಟು ಮಣ್ಣಿನ ತೇವವನ್ನು ಒಂದೇ ತಗ್ಗಿನ ಮಟ್ಟದಲ್ಲಿಡಬೇಕು. ಅದಕ್ಕೆ ನೀರಿನ ಸಂಪರ್ಕವಿರಲೇಬಾರದು. ಇರಬಹುದಾದ ನೀರನ್ನು ಕಾಲುವೆಯ ಮೂಲಕ ಹೊರಕ್ಕೆ ಸಾಗಿಸಬೇಕು. ಈ ಅಸ್ತಿಭಾರಗಳು ನೆಲಮಟ್ಟದಿಂದ 1.20ಮೀ ಆಳದಲ್ಲಿರಬೇಕು. ಮಣ್ಣಿನ ಅಸ್ತಿಭಾರದ ಮೇಲೆ ಚದರಡಿಗೆ 2 ಟನ್ನುಗಳಿಗಿಂತ ಹೆಚ್ಚಿನ ಭಾರವನ್ನು ಹಾಕತಕ್ಕದ್ದಲ್ಲ.

(ಸಿಲ್ಟ್) ಹಿಂದೆ ಯಾವಾಗಲೋ ಅಗೆದ ಗುಂಡಿಗಳನ್ನು ತುಂಬಿದಾಗ ಅನೇಕ ವರ್ಷಗಳವರೆಗೂ ತುಂಬಿದ ಮಣ್ಣು ಕುಗ್ಗುತ್ತಲೇ ಇರುತ್ತದೆ. ಅಂಥ ಕಡೆಗಳಲ್ಲಿ ಕಟ್ಟುವಾಗ ಹಳೆಯ ನೆಲದ ಮಟ್ಟದವರೆಗೂ ಅಗೆಯಬೇಕು. ತಗ್ಗಾಗಿರುವ ಮೆದುವಾಗಿರುವ ಮಣ್ಣಿನ ಮೇಲೆ ಭಾರವನ್ನು ಒಂದೇ ಸಮವಾಗಿ ಹರಡುವ ಹಾಗೆ ಮರದ ಅಥವಾ ಪ್ರಬಲಿತ ಕಾಂಕ್ರೀಟಿನ ತೆಪ್ಪಗಳನ್ನು (ರಾಫ್ಟ್) ಕಟ್ಟಬೇಕಾಗುತ್ತದೆ. ಆಗ ತೆಪ್ಪದ ಕೆಳಗಿನ ಮಣ್ಣು ಒಂದೇ ಸಮವಾಗಿ ಕೊಂಚವೇ ಕುಗ್ಗುತ್ತದೆ.[]

ಕಾಂಕ್ರೀಟಿನ ಅಸ್ತಿಭಾರ ನಮೂನೆಗಳು

[ಬದಲಾಯಿಸಿ]

ಕಾಂಕ್ರೀಟಿನ ಅಸ್ತಿಭಾರಗಳಲ್ಲಿ ಅನೇಕ ನಮೂನೆಗಳಿವೆ. ಒಂದೊಂದು ಕಂಬಕ್ಕೂ ಪ್ರತ್ಯೇಕವಾದ ಅಸ್ತಿಭಾರವಿರಬಹುದು ಎರಡುಮೂರು ಕಂಬಗಳಿಗೂ ಸಾಲಾಗಿ ಒಂದೇ ಅಸ್ತಿಭಾರವಿರಬಹುದು ಚಚ್ಚೌಕವಾದ ನಾಲ್ಕು ಕಂಬಗಳ ಕೆಳಗೂ ಒಂದೇ ಚಪ್ಪಡಿಯನ್ನು ಹಾಕಬಹುದು ನೆಲದ ಕೆಳಗಡೆ ದಸಿಗಳನ್ನು ಹೂಳಬಹುದು ಸೇತುವೆಗಳ ಕಂಬಗಳ ಅಸ್ತಿಭಾರಗಳಲ್ಲಿ ಕೇಸನ್ ಮುಂತಾದ ವಿಶಿಷ್ಟ ಅಸ್ತಿಭಾರಗಳನ್ನು (ಕನ್ನಂಬಾಡಿ ಮೊದಲಾದ) ಕಲ್ಲಿನ ಕಟ್ಟೆಗಳಲ್ಲಿ ಗಟ್ಟಿಕಲ್ಲಿನ ಮೇಲೆ ಕಾಂಕ್ರೀಟಿನ ಅಸ್ತಿಭಾರಗಳನ್ನೂ ಉಪಯೋಗಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]