ಢಾಕಾದಲ್ಲಿ ದಾಳಿ:ಜುಲೈ 2016
ಗೋಚರ
(ಢಾಕಾದಲ್ಲಿ ಧಾಳಿ ಜುಲೈ ೨೦೧೬ ಇಂದ ಪುನರ್ನಿರ್ದೇಶಿತ)
ಬಾಂಗ್ಲಾದಲ್ಲಿ ಉಗ್ರರು
[ಬದಲಾಯಿಸಿ]- ೨-೭-೨೦೧೬:
- ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ದಿ.1-7-2016 ಶುಕ್ರವಾರ ರಾತ್ರಿ ಜನನಿಬಿಡ ಗುಲ್ಷನ್ ಪ್ರದೇಶದ ಹೋಲಿ ಆರ್ಟಿಸಾನ್ ಬೇಕರಿಗೆ ನುಗ್ಗಿ 35ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿಟ್ಟು ಕೊಂಡಿದ್ದ 7 ಉಗ್ರರ ತಂಡ, ಭಾರತೀಯ ಯುವತಿ ಸೇರಿದಂತೆ 20 ಜನರ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದೆ.
- ವಿದೇಶಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ರೆಸ್ಟೋರೆಂಟ್‌ಗೆ ನುಗ್ಗಿದ ಉಗ್ರರು 20 ಮಂದಿಯನ್ನು ಒತ್ತೆಯಿರಿಸಿಕೊಂಡಿದ್ದರು. ಸಶಸ್ತ್ರ ಪಡೆಗಳು ಜಂಟಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನವೇ ಒತ್ತೆಯಾಳುಗಳನ್ನು ಉಗ್ರರು ಕೊಂದು ಹಾಕಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಯಭಾರ ಕಚೇರಿಗಳಿರುವ ಅತಿಭದ್ರತೆಯ ಪ್ರದೇಶದಲ್ಲಿಯೇ ಈ ಘಟನೆ ನಡೆದಿದೆ.
- ರಾತ್ರಿಯಿಡೀ ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದ ಉಗ್ರರು ಮುಸ್ಲಿಮರಲ್ಲದವರಿಗೆ ಚಿತ್ರ ಹಿಂಸೆ ನೀಡಿ, ಕುರಾನ್ ಪಠಿಸಲು ಬರದ 20 ಜನರ ಕತ್ತು ಸೀಳಿ ಹತ್ಯೆಗೈದಿದ್ದಾರೆ.
- ಉಗ್ರರ ದಾಳಿಯಲ್ಲಿ ಸತ್ತವರಲ್ಲಿ ಭಾರತದ 19 ವರ್ಷದ ಯುವತಿ ಸೇರಿದ್ದಾಳೆ. ಭಾರತೀಯ ಯುವತಿ ತಾರಿಷಿ ಜೈನ್ ಮೃತಪಟ್ಟಿದ್ದಾಳೆ. ಬಾಂಗ್ಲಾದ ಗಾರ್ವೆಂಟ್ ಉದ್ಯಮಿ ಮಗಳಾದ ಈಕೆ ಢಾಕಾದ ಅಮೆರಿಕನ್ ಸ್ಕೂಲ್ನಲ್ಲಿ ಪದವಿ ಪಡೆದಿದ್ದಳು. ಸದ್ಯ ಬೆರ್ಕಲಿ ಕ್ಯಾಲಿಫೋನಿರ್ಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಈಕೆ ರಜೆಯ ನಿಮಿತ್ತ ಬಾಂಗ್ಲಾಗೆ ಆಗಮಿಸಿದ್ದಳು.ಆಕೆಯ ತಂದೆ ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದವರಾಗಿದ್ದು, ಬಾಂಗ್ಲಾದಲ್ಲಿ 15–20 ವರ್ಷಗಳಿಂದ ಜವಳಿ ಉದ್ಯಮ ನಡೆಸುತ್ತಿದ್ದಾರೆ.[೧]
ಆಪರೇಶನ್ ಥಂಡರ್‌ಬೋಲ್ಟ್
[ಬದಲಾಯಿಸಿ]- ಆಪರೇಶನ್ ‘ಥಂಡರ್‌ಬೋಲ್ಟ್’ ಹೆಸರಿನಲ್ಲಿ ಆರಂಭಗೊಂಡ ಕಾರ್ಯಾಚರಣೆ ಒಂದು ಗಂಟೆಯೊಳಗೆ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಭಾರಿ ಪ್ರಮಾಣದ ಗುಂಡಿನ ದಾಳಿ ನಡೆದಿದೆ. ಸುಮಾರು 1 ಸಾವಿರ ಸುತ್ತು ಗುಂಡು ಹಾರಿಸಲಾಗಿದ್ದು, 100ಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ ಮಾಡಲಾಗಿದೆ. ರಾತ್ರಿಯಾಗುತ್ತಿದ್ದಂತೆ ಕೆಫೆಯ ಎಲ್ಲ ದೀಪಗಳನ್ನೂ ಆರಿಸಿದ್ದ ಉಗ್ರರು ಸಿಸಿಟಿವಿಗಳನ್ನೂ ನಾಶ ಮಾಡಿದ್ದರು ಎಂದು ರಕ್ಷಿಸಲ್ಪಟ್ಟ ಒತ್ತೆಯಾಳುಗಳು ಹೇಳಿದ್ದಾರೆ.
ಮೃತರು 29 ಜನ
[ಬದಲಾಯಿಸಿ]- ಭಾರತೀಯರೂ ಸೇರಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಪೈಕಿ ಮೂರು ಬಾಂಗ್ಲಾದೇಶೀಯರು.ಇಟಲಿಯ ಒಂಭತ್ತು, ಜಪಾನಿನ 7, ಅಮೆರಿಕದ ಓರ್ವ ಮೃತಪಟ್ಟಿದ್ದಾರೆ. ಅಲ್ಲದೆ ಇಬ್ಬರು(2) ಪೊಲೀಸರು ಮತ್ತು 5 ಜನ ಉಗ್ರರು 1 ಬೇಕರಿ ಅಡಿಗೆಯವನು, ನಂತರ ಆಸ್ಪತ್ರೆಯಲ್ಲಿ (1)ಒಬ್ಬರು , ಮೃತರಾಗಿದ್ದಾರೆ. ಸೇನೆಯು 13 ನಿಮಿಷಗಳಲ್ಲಿ ಆರು ಉಗ್ರರನ್ನು ಕೊಂದು ಹಾಕಿತು ಎಂದು ಎಂದು ಬಾಂಗ್ಲಾದೇಶ ಸೇನೆ ತಿಳಿಸಿದೆ. ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಿಂದ ಉಗ್ರರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಢಾಕಾ ದಾಳಿಯ ಹೊಣೆಗಾರಿಕೆಯನ್ನು ಐಸಿಸ್ ಹೊತ್ತುಕೊಂಡಿದೆ.ಘಟನೆಯಲ್ಲಿ ಗಾಯಗೊಂಡಿರುವ ಒತ್ತೆಯಾಳಾಗಿದ್ದ ನಾಗರಿಕರನ್ನು ಪ್ರಥಮ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.[೨]
ಕಮ್ಯಾಂಡೋ ಪಡೆ
[ಬದಲಾಯಿಸಿ]- ಒತ್ತೆಯಾಳು ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸೇನೆ ಮಧ್ಯಪ್ರವೇಶಿಸುವಂತೆ ಪ್ರಧಾನಿ ಶೇಖ್ ಹಸೀನಾ ಅವರು ಆದೇಶಿಸಿದ ಬಳಿಕ ಬೆಳಗಿನ ಜಾವ ‘ಆಪರೇಷನ್ ಥಂಡರ್‌ಬೋಲ್ಟ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಚಾಲನೆ ನೀಡಲಾಯಿತು. 100 ಕಮಾಂಡೋಗಳ ತಂಡ ಸತತ 14 ಗಂಟೆ ಕಾರ್ಯಾಚರಣೆ ನಡೆಸಿ ಶನಿವಾರ ಆರು ಉಗ್ರರನ್ನು ಹತೈಗೈಯ್ಯುವಲ್ಲಿ ಯಶಸ್ವಿಯಾಗಿದ್ದು, ಓರ್ವನನ್ನು ಜೀವಂತವಾಗಿ ಸೆರೆಹಿಡಿದೆ.*ಸೇನೆಯ ಅರೆ ಕಮಾಂಡೊ ಘಟಕದ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 13 ನಿಮಿಷದಲ್ಲೇ ಆರು ಉಗ್ರರನ್ನು ಕೊಂದು ಹಾಕಲಾಯಿತು ಎಂದು ಸೇನಾ ಕಾರ್ಯಾಚರಣೆಗಳ ನಿರ್ದೇಶಕ ಬ್ರಿಗೇಡಿಯರ್ ಜನರಲ್ ನಯೀಮ್ ಅಶ್ಫಕ್ ಚೌಧುರಿ ತಿಳಿಸಿದ್ದಾರೆ.ಉಗ್ರರು ಬಳಸಿದ ಪಿಸ್ತೂಲುಗಳು, ಎಕೆ 22 ರೈಫಲ್, ಐಇಡಿ, ವಾಕಿ ಟಾಕಿ ಸೆಟ್ ಜತೆಗೆ ಭಾರಿ ಪ್ರಮಾಣದ ತಲವಾರು ಗಳನ್ನು ವಶಕ್ಕೆ ಪಡೆಯಲಾಗಿದೆ.
- ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಉಗ್ರರ ಗುಂಡೇಟಿಗೆ ಬಲಿಯಾಗಿದರು. 13 ಒತ್ತೆಯಾಳುಗಳನ್ನು ರಕ್ಷಣೆ ಮಾಡಲಾಯಿತು. ಶುಕ್ರವಾರ ರಾತ್ರಿ 9.30ರ ಸುಮಾರಿಗೆ 6 ರಿಂದ 10 ಉಗ್ರರು ಕೆಫೆಗೆ ನುಗ್ಗಿದ್ದರು. ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಗುಂಡು ಹಾರಿಸಲು ಆರಂಭಿಸಿದ್ದರು. ಕೆಫೆ ಒಳಗಿನಿಂದಲೇ ಗುಂಡು ಹಾರಿಸಿದ ಉಗ್ರರು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿದ್ದಾರೆ. ಅಲ್ಲದೆ ಆಗಾಗ್ಗೆ ಗ್ರೆನೇಡ್ ಹಾಗೂ ಗುಂಡಿನ ದಾಳಿಯನ್ನು ಉಗ್ರರು ನಡೆಸುತ್ತಿದ್ದರು. ರಾತ್ರಿಯಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸದ ಪೊಲೀಸರು ಬೆಳಗ್ಗೆ 7.30ರಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಕೆಫೆಗೆ ತಾಗಿಕೊಂಡಿದ್ದ ಇನ್ನೊಂದು ಕಟ್ಟಡದ ಗೋಡೆ ಒಡೆದು ನುಗ್ಗಿದ ಬಾಂಗ್ಲಾದೇಶದ ಸೇನಾ ಸಿಬ್ಬಂದಿ, ಉಗ್ರರನ್ನು ಸಂಹರಿಸಿದ್ದಾರೆ.prajavani/ಢಾಕಾ-20-ವಿದೇಶಿಯರ-ಹತ್ಯೆ:[[೬]]
ಐಸಿಸ್ ಉಗ್ರರ ಕೃತ್ಯ
[ಬದಲಾಯಿಸಿ]- ಐಸಿಸ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ. ಈ ಬಗ್ಗೆ ಐಸಿಸ್, ಅಮಾಕ್ ನ್ಯೂಸ್ ಏಜೆನ್ಸಿಗೆ ಮಾಹಿತಿ ನೀಡಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವೆಬ್ಸೈಟ್ ವಿವರಿಸಿದೆ. ಅಮಾಕ್ ನ್ಯೂಸ್ ಏಜೆನ್ಸಿಯನ್ನು ಐಸಿಸ್ ಉಗ್ರ ಸಂಘಟನೆ ನಿರ್ವಹಿಸುತ್ತಿದೆ. ಈ ವರದಿಯಲ್ಲಿ ಹಲವು ಫೊಟೋಗಳನ್ನು ನೀಡಲಾಗಿದ್ದು, ಕೆಫೆಯೊಳಗಿನ ಉಗ್ರಕೃತ್ಯದ ಚಿತ್ರಣವಿದೆ. ಹತ್ತಾರು ಶವಗಳು ಬಿದ್ದಿರುವ ಚಿತ್ರವನ್ನು ಈ ವರದಿಯ ಜತೆ ಪ್ರಕಟಿಸಲಾಗಿದೆ. ಆದರೆ ಆ ಧಾಳಿಕೋರರೆಲ್ಲಾ ಸ್ಥಳೀಯರು.
ಪ್ರತಿಕ್ರಿಯೆ
[ಬದಲಾಯಿಸಿ]- "ಇದು ಅತ್ಯಂತ ಕ್ರೂರ. ಇವರು ಯಾವ ರೀತಿಯ ಮುಸ್ಲಿಮರು? ಅವರಿಗೆ ಯಾವ ಧರ್ಮವೂ ಇಲ್ಲ. ರಂಜಾನ್ ವಿಶೇಷ ಪ್ರಾರ್ಥನೆ ಬಿಟ್ಟು ಜನರನ್ನು ಕೊಲ್ಲಲು ಹೊರಟಿದ್ದಾರೆ. ಅವರು ಜನರನ್ನು ಹತ್ಯೆಗೈದಿದ್ದನ್ನು ಸಹಿಸುವುದು ಅಸಾಧ್ಯ, ಅವರಿಗೆ ಭಯೋತ್ಪಾದನೆಯೇ ಧರ್ಮ" ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯಿಸಿದ್ದಾರೆ.
- "ಬಾಂಗ್ಲಾದೇಶದಲ್ಲಿ ಕಂಡಯರಿಯದ ರಕ್ತಪಾತ ಮಾಡಿ, ವಿದೇಶೀಯರನ್ನು ಬರ್ಬರವಾಗಿ ಕೊಂದ ಉಗ್ರರ ಮೂಲವನ್ನು ಮತ್ತು ಅವರಿಗೆ ಶಸ್ತ್ರಾಸ್ತಗಳನ್ನು ಪೂರೈಸಿದವರನ್ನು ಪತ್ತೆ ಹಚ್ಚದೆ ಬಿಡುವುದಿಲ್ಲ", ಎಂದಿದ್ದಾರೆ ಶೇಖ್ ಹಸೀನಾ, ಬಾಂಗ್ಲಾದೇಶ ಪ್ರಧಾನಿ
ಪಾಕಿಸ್ತಾನದ ಐಎಸ್ಐ ಉಗ್ರರಿಗೆ ಬೆಂಬಲ?
[ಬದಲಾಯಿಸಿ]- ಢಾಕಾದ ರೆಸ್ಟೋರೆಂಟ್ ನಲ್ಲಿ ನಡೆದ ಉಗ್ರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ನೀಡಿರುವ ಕುರಿತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರ ಹುಸೇನ್ ತೌಫೀಕ್ ಇಮಾಮ್ ಆರೋಪಿಸಿದ್ದಾರೆ. "ಹಿಂದಿನಿಂದಲೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಹಿಂದೆ ಪಾಕಿಸ್ತಾನ ನಿರಂತರ ಪ್ರೋತ್ಸಾಹ ಹಾಗೂ ನೆರವು ನೀಡುತ್ತಿದೆ" ಎಂದು ಆರೋಪಿಸಿದ್ದಾರೆ.
- ಅಲ್ಲದೆ "ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಉಗ್ರರಿಗೆ ತರಬೇತಿ ಮತ್ತು ನೆರವು ನೀಡುವ ಮೂಲಕ ಬಾಂಗ್ಲಾದೇಶದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಐಎಸ್ಐ ಮತ್ತು ಬಾಂಗ್ಲಾದೇಶದ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ನೊಂದಿಗೆ ಕೈ ಜೋಡಿಸಿರುವ ಕುರಿತು ಶಂಕೆ ಇದ್ದು, ದಾಳಿಯಲ್ಲಿ ಇಸಿಸ್ ಹೆಸರು ಬಳಕೆಯಾಗಿದೆ ಅಷ್ಟೇ. ಆದರೆ ದಾಳಿ ಹಿಂದೆ ಐಎಸ್ಐನ ಕೈವಾಡವಿದೆ. ಬಾಂಗ್ಲಾದೇಶದಲ್ಲಿ ಇಸಿಸ್ ಉಗ್ರಗಾಮಿ ಸಂಘಟನೆಯ ಆಸ್ತಿತ್ವವೇ ಇಲ್ಲ ಎಂದಾಗ ದಾಳಿ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.[೩]
ಹಂತಕರು ಶ್ರೀಮಂತ ಕುಟುಂಬಗಳಿಗೆ ಸೇರಿದವರು
[ಬದಲಾಯಿಸಿ]- ಢಾಕಾಗಲ್ಲಿನ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಹಂತಕರು ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದರು. ಉಗ್ರರು 20ರಿಂದ 21 ವರ್ಷ ವಯಸ್ಸಿನವರಾಗಿದ್ದು, ಉತ್ತರ- ದಕ್ಷಿಣ ವಿವಿ ವಿದ್ಯಾರ್ಥಿಗಳಾಗಿದ್ದರು. ಅಲ್ಲದೆ ಸ್ಕಾಲಸ್ಟಿಕಾ ಹಾಗೂ ಟರ್ಕಿಶ್ ಇಂಟರ್‌ನ್ಯಾಷನಲ್ ಸ್ಕೂಲ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದರು. ದಾಳಿ ವೇಳೆ ಬಂಗಾಳಿ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾಹಿತಿಯಿಂದಾಗಿ ಶ್ರೀಮಂತ ಕುಟುಂಬಗಳ ಮಕ್ಕಳು ಧರ್ಮಾಂಧರಾಗಿ ಉಗ್ರವಾದ ಅಪ್ಪಿಕೊಳ್ಳುತ್ತಿರುವುದರ ಜತೆಗೆ, ಶಿಕ್ಷಣ ಸಂಸ್ಥೆಗಳಲ್ಲೂ ಉಗ್ರವಾದ ಪಸರಿಸುತ್ತಿರುವುದು ವೇದ್ಯವಾಗುತ್ತದೆನ್ನಲಾಗಿದೆ.
ಅವರ 3 ಬೇಡಿಕೆಗಳು
[ಬದಲಾಯಿಸಿ]- 'ಹೋಲಿ ಆರ್ಟಿಸನ್ ಬೇಕರಿ' ರೆಸ್ಟೋರೆಂಟ್‌ಗೆ ನುಗ್ಗಿದ್ದ ಉಗ್ರರ ಗುಂಪು 3 ಬೇಡಿಕೆ ಇಟ್ಟಿತ್ತು. 'ಜಮಾತ್ ಉಲ್ ಮುಜಾ ಹಿದೀನ್ ಬಾಂಗ್ಲಾ' ಉಗ್ರ ಮುಖ್ಯಸ್ಥನನ್ನು ಬಿಡುಗಡೆ ಮಾಡಬೇಕು, ಆತನ ಬಿಡುಗಡೆ ಬಳಿಕ ನಾವು ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡಬೇಕು ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ದೇಶ ಎಂದು ಘೋಷಿಸಿ, ದೇಶದಲ್ಲಿ ಷರಿಯಾ ಆಡಳಿತ ಜಾರಿಗೆ ತರಬೇಕು" ಇವು ಉಗ್ರರ ಬೇಡಿಕೆಗಳು ಈ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದ ಬಳಿಕ ಒತ್ತೆಯಾಳುಗಳನ್ನು ಕೊಂದರು ಎನ್ನಲಾಗಿದೆ.[೪]
ಅರ್ಚಕನ ಮೇಲೆ ದಾಳಿ
[ಬದಲಾಯಿಸಿ]- ಶುಕ್ರವಾರವಷ್ಟೇ ಓರ್ವ ಅರ್ಚಕ ಹಾಗೂ ಬೌದ್ಧ ನಾಯಕರನ್ನು ಹತ್ಯೆಗೈದಿದ್ದ ಐಸಿಸ್ ಉಗ್ರರು ಶನಿವಾರ ಇನ್ನೊಬ್ಬ ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಶಖಿರಾ ಜಿಲ್ಲೆಯ ಶ್ರೀ ಶ್ರೀ ರಾಧಾಗೋವಿಂದ ದೇಗುಲದ ಅರ್ಚಕ ಬಾಬಾಸಿಂಧು ರಾಯ್ ಮೇಲೆ ದೇಗುಲದ ಆವರಣದಲ್ಲೇ ಹಲ್ಲೆ ನಡೆಸಲಾಗಿದೆ.[೫]
ಐಸಿಸ್ ಬೆದರಿಕೆ
[ಬದಲಾಯಿಸಿ]- ಜುಲೈ 6 2016 ರಲ್ಲಿ, ಸಿರಿಯಾದಿಂದ ಎಸ್,ಐ.ಟಿ. ಗುಪ್ತಚರ ವೆಬ್ಸೈಟ್ ಸೈಟ್ ಮೂಲಕ ಒಂದು ವೀಡಿಯೊ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂರು ಬಂಗಾಳಿ ಭಾಷಿಕರು ಬಾಂಗ್ಲಾದೇಶದ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. "ಈಗ ನೀವು ಬಾಂಗ್ಲಾದೇಶದಲ್ಲಿ ಏನು ಕಂಡಿದ್ದೀರಿ, ... ಅದು ಒಂದು ಸಣ್ಣ ಮಿನುಗು ನೋಟ. ಇದು ಪುನಃ ಪುನಃ ಪುನಃ ಪುನರಾವರ್ತಿಸುತ್ತದೆ; ಅದು ನೀವು ನೀವು ಪೂರ್ಣ ಸೋಲುವವರೆಗೆ ಮತ್ತು ನಾವು ಗೆಲ್ಲುವವರೆಗೆ ಪುನರಾವರ್ತಿಸುತ್ತದೆ; ಮತ್ತು ಷರಿಯಾ ಕಾನೂನು ಪ್ರಪಂಚದಾದ್ಯಂತ ನೆಲೆಗೊಳ್ಳುವ ವರೆಗೆ; ಇಂದು ಮಾಡಿದ ಈ ಜಿಹಾದ್ ಯುದ್ಧ ಕಾಲಿಫೆಟ್ ಆಶ್ರಯದಲ್ಲಿ ನಡೆದ ಜಿಹಾದ್ ಆಗಿದೆ.[೬]
ಸಂಶಿತರ ಬಂಧನಗಳು
[ಬದಲಾಯಿಸಿ]- ದಿ.16 ಜುಲೈ 2016, ಪೊಲೀಸರು, ಬಸುಂದರ ವಸತಿ ಪ್ರದೇಶದಲ್ಲಿ ಒಂದು ಫ್ಲಾಟ್’ನ್ನು ಈ ಭಯೋತ್ಪದರಿಗೆ ಬಾಡಿಗೆಗೆ ಕೊಡಿಸಿದ ಮೂರು ಜನರನ್ನು ಬಂಧಿಸಿದ್ದಾರೆ. ಅದರಲ್ಲಿ ಒಬ್ಬನು ಗಿಯಾಸ್ ಉದ್ದೀನ್ ಅಹ್ಸನ್ ಉತ್ತರ-ದಕ್ಷಿಣ ವಿಶ್ವವಿದ್ಯಾಲಯ ಪರ-ಉಪಕುಲಪತಿ. ಉಳಿದ ಇಬ್ಬರು ಅವರ ಸೋದರಳಿಯ ಆಲಂ ಚೌಧರಿ ಮತ್ತು 'ಮಹಬಬೂರ್ ರಹಮಾನ್ ತುಹಿನ್'ಎಂಬ ಕಟ್ಟಡದ ಮ್ಯಾನೇಜರ್. ಅಲ್ಲಿ ಪೊಲೀಸರು ಮರಳು ತುಂಬಿದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವನ್ನು ಧಾಳಿಕೋರರು ಧಾಳಿಯ ಸಂದರ್ಭದಲ್ಲಿ ಉಪಯೋಗಿಸಿದ ಗ್ರನೇಡ್‍ಗಳನ್ನು ಸಾಗಿಸಲು ಮತ್ತು ಉಪಯೋಗಿಸಿದ ಬಟ್ಟೆ ಸಾಗಿಸಲು ಉಪಯೋಗಿಸಿರಬೇಕೆಂದು ಊಹಿಸಿದ್ದಾರೆ. ಪೊಲೀಸರು, ಧಾಳಿಕೋರರು ಮತ್ತು ಶಂಕಿತ ಅವರ ಸಹವರ್ತಿಗಳು ರಂಜಾನ್ ಸಮಯದಲ್ಲಿ ಅಲ್ಲಿ ಉಳಿದು ದಾಳಿಗೆ ಕರಡು ಯೋಜನೆ ತಯಾರಿಸಿರಬೇಕೆಂದು ಊಹಿಸಿದ್ದರೆ.
ಮತ್ತೆ ನಾಲ್ವರ ಬಂಧನ
[ಬದಲಾಯಿಸಿ]- 22/07/2016:
- ಬಾಂಗ್ಲಾದಲ್ಲಿ ರೆಸ್ಟೋರೆಂಟ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಂಘಟನೆ ಜಮಾತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ)ಮುಖಂಡ ಸೇರಿದಂತೆ ನಾಲ್ವರು ಉಗ್ರರನ್ನು ವಿಶೇಷ ಭದ್ರತಾ ಪಡೆ ಗುರುವಾರ ಬಂಧಿಸಿದೆ. ಬಂಧಿತರಲ್ಲಿ ಉಗ್ರಗಾಮಿ ಸಂಘಟನೆಯ ಮುಖಂಡ ಮಹಮ್ಮದುಲ್ ಹಸನ್ ತನ್ವೀರ್ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಗಾಝಿಪುರದ ಟೋಂಗಿಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ ವಿಶೇಷ ಭದ್ರತಾ ಪಡೆ ಉಗ್ರರನ್ನು ಬಂಧಿಸಿದೆ. ಉಗ್ರರು ಅಡಗಿದ್ದ ಮನೆಯಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಹಾಗೂ ಬಾಂಬ್ ತಯಾರಿಸುವ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. [೮]
ಪ್ರತ್ಯಕ್ಷದರ್ಶಿಯ ಅನಿಸಿಕೆ
[ಬದಲಾಯಿಸಿ]- ಇನ್ನು ಮೊದಲಿನಂತಾಗದು ನನ್ನ ಬಾಂಗ್ಲಾ
- ಆ ಶುಕ್ರವಾರದ (01/07/2016) ಸಂಜೆ ಅಲ್ಲಿಗೆ ದೊಡ್ಡ ಸಂಖ್ಯೆಯ ಜನರನ್ನು ಸೆಳೆದಿದ್ದವು. ಬಾಂಗ್ಲಾದೇಶಿಯರ ಜೊತೆ ಅಲ್ಲಿ ವಿದೇಶಿಯರೂ ಇದ್ದರು. ರಾತ್ರಿ 8.45ರ ಸುಮಾರಿಗೆ ಅಲ್ಲಿಗೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು, ಊಟ ಮಾಡುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡರು. .....
- ಇಲ್ಲಿ ಫರಾಜ್ ಅಯಾಜ್ ಹುಸೇನ್ ಎಂಬ ಯುವಕ ತೋರಿದ ಧೈರ್ಯ ಇತರರ ಅನುಭವಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. 20 ವರ್ಷ ವಯಸ್ಸಿನ, ಬಾಂಗ್ಲಾ ಪ್ರಜೆ ಹುಸೇನ್ ಅವರು ಅಲ್ಲಿಗೆ ತರುಷಿ ಜೈನ್ ಮತ್ತು ಅಬಿಂತಾ ಕಬೀರ್ ಜೊತೆ ಊಟ ಮಾಡಲು ಹೋಗಿದ್ದರು. ಕಬೀರ್ ಅಮೆರಿಕದ ಪ್ರಜೆ. ಹುಸೇನ್ ಮತ್ತು ಕಬೀರ್ ಅಮೆರಿಕದ ಅಟ್ಲಾಂಟದ ಎಮೊರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಭಾರತದ ತರುಷಿ ಜೈನ್, ಬರ್ಕಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲಿದ್ದ ಕೆಲವರ ಪ್ರಕಾರ, ಹುಸೇನ್ ಅವರು ಬಾಂಗ್ಲಾ ಪ್ರಜೆ ಎಂದು ಗೊತ್ತಾದಾಗ ಅವರನ್ನು ಬಿಟ್ಟುಬಿಡಲು ಉಗ್ರರು ಮುಂದಾದರು. ಆದರೆ, ತಮ್ಮ ಇಬ್ಬರು ಸ್ನೇಹಿತರನ್ನು ಬಿಟ್ಟುಹೋಗಲು ಹುಸೇನ್ ಒಪ್ಪಲಿಲ್ಲ. ಉಗ್ರರನ್ನು ಕೊಂದು ಭದ್ರತಾ ಸಿಬ್ಬಂದಿ ರೆಸ್ಟೊರೆಂಟ್ ಆವರಣ ಪ್ರವೇಶಿಸಿದಾಗ, ಅಲ್ಲಿ ಹುಸೇನ್, ತರುಷಿ ಮತ್ತು ಕಬೀರ್ ಅವರ ಮೃತದೇಹಗಳು ಇದ್ದವು. ಹುಸೇನ್ ಅವರು ಉಗ್ರರ ಜೊತೆ ಕಾದಾಡಿದ್ದ ಗುರುತಾಗಿ ದೇಹದ ಮೇಲೆ ಗಾಯಗಳಿದ್ದವು.....
- ಈ ಕೊಲೆಗಡುಕರಿಗೆ ಜೀವನದಲ್ಲಿ ಎಲ್ಲವೂ ಸಿಕ್ಕಿತ್ತು. ಆದರೂ ಅವರು ಎಲ್ಲ ನೈತಿಕ ಮೌಲ್ಯಗಳನ್ನು ಬದಿಗಿಟ್ಟು ಇಂಥ ಮಾರ್ಗ ತುಳಿದರು.
- ನಮ್ಮ ನಗರ, ನಮ್ಮ ದೇಶ ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ ಎಂಬುದು ನಮಗೆ ಗೊತ್ತಿದೆ.: (ತಸ್ಲೀಮಾ ಅನಾಮ್: ಲೇಖಕಿ ಕಾದಂಬರಿಕಾರ್ತಿ) [೯]
ನೋಡಿ
[ಬದಲಾಯಿಸಿ]- ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ (ಟಿಟಿಪಿ)
- ಪ್ಯಾರಿಸ್ ನಲ್ಲಿರುವ ಚಾರ್ಲಿ ಹೆಬ್ಡೊಗೆ ದಾಳಿ/7-1-2015
- ಫ್ರಾನ್ಸ್ನ ನೀಸ್ ನಗರದಲ್ಲಿ ಭಯೋತ್ಪಾದಕ ದಾಳಿ 2016
- ಬಾಂಗ್ಲಾದೇಶ
ಉಲ್ಲೇಖ
[ಬದಲಾಯಿಸಿ]- ↑ 03/07/2016ಮೃತರಲ್ಲಿ ಭಾರತದ ಯುವತಿ:[[೧]]
- ↑ vijayavani[[ಶಾಶ್ವತವಾಗಿ ಮಡಿದ ಕೊಂಡಿ]]
- ↑ ಢಾಕಾ ದಾಳಿ ನಡೆಸಿದ್ದು ಇಸಿಸ್ ಅಲ್ಲ "ಐಎಸ್ಐ"!:[[೨]]
- ↑ ಹಂತಕರು ಶ್ರೀಮಂತ ಕುಟುಂಬಗಳಿಗೆ ಸೇರಿದವರು[[https://web.archive.org/web/20160715184553/http://www.udayavani.com/kannada/news/world-news/156571/bangladesh-attack-related-news Archived 2016-07-15 ವೇಬ್ಯಾಕ್ ಮೆಷಿನ್ ನಲ್ಲಿ.]]
- ↑ ಅರ್ಚಕನ ಮೇಲೆ ದಾಳಿ[[ಶಾಶ್ವತವಾಗಿ ಮಡಿದ ಕೊಂಡಿ]]
- ↑ Dhaka cafe slaughter is trailer of what is to come, warns Islamic State in new video[[೩]]
- ↑ Dhaka attack: Bangladesh police arrests Universitys acting Pro-VC and 2 others":[[೪]]
- ↑ www.prajavani.net/article/ಬಾಂಗ್ಲಾ-ರೆಸ್ಟೋರೆಂಟ್-ದಾಳಿ-ಪ್ರಕರಣ-ನಾಲ್ವರು-ಉಗ್ರರ-ಬಂಧನ
- ↑ 13/07/2016:prajavani[[೫]]