ವಿಷಯಕ್ಕೆ ಹೋಗು

ಬಿ. ಎ. ಸಾಲತ್ತೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಬಿ. ಎ. ಸಾಲತ್ತೂರ ಇಂದ ಪುನರ್ನಿರ್ದೇಶಿತ)

ಡಾ. ಬಿ ಎ. ಸಾಲ್ತೊರೆ. ಅವರ ಪೂರ್ಣ ಹೆಸರು ಭಾಸ್ಕರ ಆನಂದ ಸಾಲತ್ತೂರು. ( ಹೆಸರನ್ನು ಕೆಲವರು ಸಾಲತೊರೆ ಎಂದೂ ಕರೆಯವರು ) ಅವರ ಜನನ ಅಕ್ಟೋಬರ್೧೧ , ೧೯೦೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ಗ್ರಾಮವಾದ ಸಾಲೊತ್ತೂರಿನಲ್ಲಿ ಆಯಿತು. ಅವರ ತಂದೆ ನಾರಾಯಣರಾಯರು ಆ ಗ್ರಾಮದ ಶಾನುಭೋಗರು. ಅವರು ಸುಶಿಕ್ಷಿತರು. ಮನೆಯಲ್ಲಿ ಸುಸಂಸ್ಕೃತ ವಾತಾವರಣ. ಆಗ ಮಂಗಳೂರಿನಲ್ಲಿ ಸಾಂಸ್ಕೃತಿಕ ಅರುಣೋದಯದ ಕಾಲ. ಅವರ ಪ್ರಾಥಮಿಕ ಶಿಕ್ಷಣ ತಮ್ಮ ಊರಿನಲ್ಲಿಯೇ ಆಯಿತು. ಡಾ. ಪಂಜೆ ಮಂಗೇಶರಾಯರು., ಬೆನಗಲ್ ರಾಮರಾವ್, ಕಾರ್ನಾಡ್ ಸದಾಶಿವರಾವ್, ಡಾ. ಗೋವಿಂದ ಪೈ ಮೊದಲಾದ ಕವಿಗಳು ವಿದ್ವಾಂಸರು ತಮ್ಮ ಉಜ್ವಲ ಭಾಷಣಗಳ ಮೂಲಕ ಜನಜಾಗೃತಿ ಮೂಡಿಸುತಿದ್ದರು. ಅವುಗಳ ಪ್ರಭಾವ ಬಾಲಕ ಆನಂದನ ಮೇಲೆ ಬಲವಾಗಿ ಆಯಿತು. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ಆಯಿತು. ಪದವಿ ಶಿಕ್ಷಣವನ್ನು ೧೯೨೨ರಲ್ಲಿ ಮಂಗಳೂರಿನ ಸೇಂಟ್‌ ಅಲೋಷಿಸಿಯಸ್ ಕಾಲೇಜಿನಲ್ಲಿ ಪಡೆದರು. ಪದವಿಯಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದ ವಿಷಯಗಳನ್ನು ಅಧ್ಯಯನ ಮಾಡಿದರು. ಅಷ್ಟೇ ಅಲ್ಲ ಅವರು ಮದ್ರಾಸಿನಲ್ಲಿ ಎಂ ಎ. ಮಾಡುವಾಗ ಆ ವಿಷಯಗಳಲ್ಲಿ ಸುವರ್ಣ ಪದಕ ವಿಜೇತರಾದರು. ನಂತರ ಮದ್ರಾಸಿನಲ್ಲಿ ಬಿಟಿ ಸಹಾ ಮುಗಿಸಿದರು. ಕಾಲೇಜಿನ ಹಂತದಲ್ಲಿ ಸುಪ್ರಸಿದ್ಧ ಇತಿಹಾಸತಜ್ಞ ಫಾದರ್ ಹೆರಾಸರ ಮೆಚ್ಚಿನ ಶಿಷ್ಯರಾದರು. ಹೆರಾಸ್ ಭಾರತದ ಹಿರಿಮೆಗೆ ಮಾರು ಹೋಗಿ ತಮ್ಮ ಜೀವನವನ್ನೇ ಭಾರತದ ಸೇವೆಗಾಗಿ ಮುಡಿಪಿಟ್ಟವರು. ಅವರ ಸನ್ನಿಧಿಯಲ್ಲಿ ಆನಂದರ ಸನಾತನ ಭಾರತದ ಬಗೆಗಿನ ಅಭಿಮಾನ ಜಾಗೃತವಾಯಿತು.

ಸ್ನಾತಕೋತ್ತರ ಪದವಿಯನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು ಅಲ್ಲಿ ಲಂಡ ವಿಶ್ವವಿದ್ಯಾಲಯದ ಪ್ರಖ್ಯಾತ ಪ್ರಾಚ್ಯ ತಜ್ಞರಾದ ಡಾ. ಎಲ್.ಡಿ. ಬಾರ್ನೆಟ್ ಮಾರ್ಗದರ್ಶನದಲ್ಲಿ “Social and Political life in the Vijayanagara Empire “ ಎಂಬ ವಿಷಯದಲ್ಲಿ ವಿಶೇಷ ಅಧ್ಯಯನಮಾಡಿ ೧೯೩೧ ರಲ್ಲಿ ಪಿ.ಎಚ್ ಡಿ ಪಡೆದರು. ಒಂದು ರಾಜಮನೆತನದ ಕುರಿತಾದ ಅಧ್ಯಯನ ಪ್ರಥಮ ಪ್ರಯತ್ನವಾಗಿದೆ. ಎರಡು ಸಂಪುಟಗಳಲ್ಲಿರುವ ಸುಮಾರು೧೦೦೦ ಪುಟದ ಈ ಕೃತಿಯು ಪ್ರಜಾ ಪ್ರಭುತ್ವವಾದಿ ಒಳ ನೋಟ ಹೊಂದಿರುವುದು. ಧರ್ಮಾಭಿಮಾನವನ್ನು ದೇಶಾಭಿಮಾನದ ಜೊತೆ ಸಮೀಕರಿಸಿರುವುದು ಅದರ ವೈಶಿಷ್ಟ್ಯವಾಗಿದೆ. ಅದುವರೆಗೂ ಲಭ್ಯವಿರುವ ಎಲ್ಲ ಕನ್ನಡ ಮತ್ತು ಸಂಸ್ಕೃತ ಶಾಸನಗಳನ್ನು ಬಳಸಿ ಸಾಮಾಜಿಕ ಇತಿಹಾಸ,ತಿಳಿಯಲು ಯತ್ನಿಸಿದ ಪ್ರಪ್ರಥಮ ಇತಿಹಾಸಕಾರ ಅವರು. ಸಂಶೋಧನೆಯನ್ನು ಮಾಡಿದ್ದು ಲಂಡನ್ ನಲ್ಲಾದರು ಕನ್ನಡ ಮೂಲದ ಆಕರಗಳನ್ನು ಇಂಡಿಯಾ ಆಫೀಸಿನಲ್ಲಿ ಪರಿಶೀಲಿಸುವ ಅವಕಾಶ ದೊರೆಯಿತು. ಭಾರತದಲ್ಲೇ ರಾಜವಂಶ ಒಂದನ್ನು ಇಷ್ಟು ಸಮಗ್ರವಾಗಿ ಸಾಮಾಜಿಕ ,ಆರ್ಥಿಕ, ಸ್ಥಿತಿ,ಸಾಮಾಜಿಕ ಶಾಸನಗಳು, ಸಂಘ ಸಂಸ್ಥೆಗಳು ಮತ್ತು ಆಡಳಿತ ವಿಧಾನವನ್ನು ಪ್ರತ್ಯೇಕವಾಗಿ ನೀಡಿರುವ ಮಾದರಿಯನ್ನೂ ಇಂದಿಗೂ ಸಂಶೋಧಕರು ಅನುಸರಿಸಲೇ ಬೇಕಾಗಿದೆ. ಅವರ ಬೃಹತ್ಗ್ರಂಥವು ವಿಷಯವನ್ನು ಐದು ನೆಲೆಗಳಲ್ಲಿ ವಿಷಯವನ್ನು ಪರಿಶೀಲಿಸಿದೆ. ೧) ದಂತಕತೆ ಮತ್ತು ಐತಿಹ್ಯಗಳು ೨) ಸ್ಥಳೀಯಮಾಹಿತಿ ೩)ವಿದೇಶಿ ಸಂಬಂಧಗಳು, ಮುಖ್ಯವಾಗಿ ಶಾಸನ ಆಧಾರಿತ, ೪) ಜಾನಪದ ಮತ್ತು ಸಾಂಪ್ರದಾಯಿಕ ಮೂಲಗಳು ೫) ಸಾಹಿತ್ಯ ಮೂಲಗಳನ್ನು ಸಮಗ್ರವಾಗಿ ಪರಿಗಣಿಸಿದರು. ನಂತರ ಜರ್ಮನಿಯ ಗ್ರಯರ್ಸ ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಅಧ್ಯಯನ ನಡೆಸಲು ಸಂಶೋಧನಾ ದತ್ತಿಯ ನೆರವು ದೊರೆಯಿತು. ಅಲ್ಲಿ ೧೯೩೩ ರಲ್ಲಿ ಎಂ. ಫಿಲ್ ಪಡೆದರು. ಆಗ ಜರ್ಮನಿಯಲ್ಲಿ ಹಿಟ್ಲರ್ ನ ಆಳ್ವಿಕೆ ಏರು ಮುಖದಲ್ಲಿತ್ತು.

ಭಾರತಕ್ಕೆ ಮರಳಿದೊಡನೆ ಮುಂಬಯಿ ಪ್ರಾಂತ್ಯದ ಸರ್ಪರಶುರಾಮ ಬಾವು ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕ ಹುದ್ದೆ ದೊರೆಯಿತು .ಅವರ ಸ್ವತಂತಂತ್ರ ಮನೋವೃತ್ತಿ ಮತ್ತು ನೇರ ನಡೆ, ನುಡಿಗಳಿಂದ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾದರು. ಕಾಲೇಜುಗಳ ಬದಲಾವಣೆ ಆಗುತಿತ್ತು ಉದ್ಯೋಗ ಭದ್ರತೆಯ ಕಡೆ ಗಮನ ಹರಿಸದೆ ತಮ್ಮ ತತ್ವ ಆದರ್ಶಗಳಿಗೆ ಅನುಗುಣವಾಗಿ ನಡೆಯುತ್ತಿದ್ದುದರಿಂದ ಪ್ರಾರಂಭದಲ್ಲಿ ಪದೇ ಪದೇ ಸ್ಥಳ ಬದಲಾವಣೆ ಆಗುತಿದ್ದರೂ ಅವರು ವಿಚಲಿತರಾಗುತ್ತಿರಲಿಲ್ಲ. ನಂತರ ಗುಜರಾತಿನ ಅಹ್ಮದಾಬಾದ್ ಮತ್ತು ಮುಂಬಯಿ ಕಾಲೇಜುಗಳಲ್ಲೂ ಸೇವೆ ಸಲ್ಲಿಸಿದರು.ಕ್ರಮೇಣ ಅವರ ಸಂಶೋಧನ ಸಾಮರ್ಥ್ಯ, ಆಳವಾದ ಇತಿಹಾಸದ ಅಧ್ಯಯನ ಮತ್ತು ಆಡಳಿತದ ಅನುಭವ ಸರ್ಕಾರದ ಗಮನ ಸೆಳೆಯಿತು. ಪರಿಣಾಮವಾಗಿ ಅವರನ್ನು ಭಾರತ ಸರ್ಕಾರವು ೧೯೫೭ ರಾಷ್ಟ್ರೀಯ ಪತ್ರಾಗಾರದ ನಿರ್ದೇಶಕರೆಂದು ನೇಮಕ ಮಾಡಿತು. ಆಗಿನ್ನೂ ಕಣ್ಣು ಬಿಡುತಿದ್ದ ಪತ್ರಾಗಾರಕ್ಕೆ ಅವರು ಸುವ್ಯವಸ್ಥಿತ ರೂಪ ಕೊಟ್ಟರು. ವಿಶೇಷವಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಿದರು. ಅವರ ದೂರದೃಷ್ಟಿ ಮತ್ತು ಕಾರ್ಯತತ್ಪರತೆಯಿಂದ ಆ ಸಂಸ್ಥೆಯು ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಿತು. ದೇಶ ವಿದೇಶಗಳ ವಿದ್ವಾಂಸರು ಮಾಹಿತಿಗಾಗಿ ಅಲ್ಲಿಗೆ ಬರುವಂತೆ ಆಯಿತು. ಐದು ವರ್ಷದ ಸೇವೆಯನಂತರ ೧೯೫೭ ರಲ್ಲಿ ನಿವೃತ್ತರಾದರು. ನಿವೃತ್ತರಾದರೂ ಹೊಸ ಹೊಣೆ ಅವರನ್ನು ಹುಡಕಿಕೊಂಡು ಬಂದಿತು. ಕರ್ನಾಟಕ ವಿಶ್ವ ವಿದ್ಯಾಲಯದೇ ತಾನೆ ಪ್ರಾರಂಭವಾಗಿತ್ತು ಅದರ ಉಪಕುಲಪತಿಗಳಾಗಿದ್ದ ಡಾ. ಡಿ.ಸಿ ಪಾವಟೆಯವರ ಆಮಂತ್ರಣದ ಮೇರೆಗ ಅಲ್ಲಿನ ಇತಿಹಾಸ ವಿಭಾಗದ ಪ್ರಥಮ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರೆಂದು ಧಾರವಾಡಕ್ಕೆ ಹೋದರು ಜೊತೆಗೆ ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಯನ್ನು ನಿರ್ವಹಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಅವರ ಮಾರ್ಗದರ್ಶನದಲ್ಲಿ ಸಂಶೋಧಕರ ಪಡೆಯೇ ಸಿದ್ಧವಾಯಿತು,ಡಾ.ಎ.ಕೆ ಶಾಸ್ತ್ರಿ, ಡಾ.ಸೂರ್ಯನಾಥ ಕಾಮತ್,ಡಾ. ಜಿ.ಎಸ್ ದೀಕ್ಷಿತ್, ಜೋತ್ಸನಾ ಕಾಮತ್ ಮತ್ತು ಡಾ. ಬಸವರಾಜ್ ಮೊದಲಾದ ಸಂಶೋಧಕರ ದೊಡ್ಡ ಪಡೆಯೇ ಸಿದ್ಧವಾಯಿತು, ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಉತ್ತರ ಕರ್ನಾಟಕದ ಪ್ರಾಚ್ಯ ಸರ್ವೇಕ್ಷಣೆ ಮಾಡಿಸಿದರು. ಕತ್ತಲಲ್ಲಿದ್ದ ಶಾಸನಗಳು, ತಾಮ್ರ ಪತ್ರಗಳು ,ನಾಣ್ಯಗಳು, ಪುರಾತನ ಜಾನಪದ ವಸ್ತುಗಳನ್ನು, ಹೊರಬರಲು ಕಾರಣರಾದರು. ‘A guide to Kannanda research Museum,a Guide to Pattadakal temple,Karnataka inscriptions Volume-lV Ancient Indian thought and Institutions’-ಮೊದಲಾದ ಕೃತಿಗಳು ಹೊಸ ದೃಷ್ಠಿಕೋನ ಮೂಡಲು ಸಹಾಯಕವಾದವು. ಕೌಟಿಲ್ಯನ ಅರ್ಥ ಶಾಸ್ತ್ರ ಬರುವುದಕ್ಕಿಂತ ಬಹು ಮುಂಚೆಯೇ ಭಾರತದಲ್ಲಿ ರಾಜಕೀಯ ವಿಚಾರಧಾರೆ ಹರಿದುಬಂದಿತ್ತು ಎಂಬುದನ್ನು ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ ಕೌಟಿಲ್ಯನ ಅರ್ಥಶಾಸ್ತ್ರ ಒಂದು ಸೈದ್ಧಾಂತಿಕ ಗ್ರಂಥ ಮಾತ್ರವಲ್ಲ ಅದು ವ್ಯವಹಾರಿಕ ಮತ್ತು ಪ್ರಯೋಗಶೀಲ ಕೃತಿ ಎಂಬುದನ್ನು ಮೆಘಾಸ್ತಾನಿಸ್ ನ ಇಂಡಿಕಾ, ಅಶೋಕನ ಶಾಸನಗಳು ಒಳಗಿನ ಅಂಶಗಳ ತುಲನಾತ್ಮಕ ಅಧ್ಯಯನ ಮಾಡಿ ತೋರಿಸಿರುವರು. ಅಲ್ಲದೆ ಯುರೋಪಿನ ರಾಜಕೀಯ ತತ್ವಜ್ಞಾನಿ ಅರಿಸ್ಟಾಟಲ್,ಜಮ್ಮುರಬಿಗಳೊಡನೆ ಕೌಟಿಲ್ಯನ ಅರ್ಥ ಶಾಸ್ತ್ರವನ್ನು ತುಲನಾತ್ಮಕ ಅಧ್ಯಯನ ಮಾಡಿರುವರು, ಪ್ರಾಚೀನ ಭಾರತದಲ್ಲಿದ್ದ ಗಣ ರಾಜ್ಯಗಳಾದ ಲಿಚ್ಛವಿ, ಕೌಸಾಂಬಿ, ಪಾಟಲೀಪುತ್ರ ನಗರರಾಜ್ಯಗಳ ವಿಶ್ಲೇಷಣೆ ಮಾಡಿ ಅವುಗಳನ್ನು ಪ್ರಾಚೀನ ಗ್ರೀಕ್ ನ ಸ್ಪಾರ್ಟಾ ಮತ್ತು ಅಥೇನ್ಸಗಳ ಜೊತೆ ಅಧ್ಯಯನ ಮಾಡಿ ಪ್ರಜಾಪ್ರಭುತ್ವವು ಹೇಗೆ ಪ್ರಾಚೀನ ಭಾರದಲ್ಲೂ ಪ್ರಗತಿಪರವಾಗಿತ್ತು ಎಂಬುದನ್ನು ಎತ್ತಿ ತೋರಿಸಿರುವರು.

ಅವರ ಎರಡು ಸಂಪುಟಗಳಲ್ಲಿರುವ ೧೦೦೦ ಪುಟಗಳ ಸಂಪ್ರಬಂಧವು ಇತಿಹಾಸದ ಮೇಲೆ ಹೊಸ ಬೆಳಕು ಬೀರಿದೆ. ಇತಿಹಾಸ ವೆಂದರೆ ರಾಜರ ಯುದ್ದ ಕತೆ ಮಾತ್ರವಲ್ಲ ಸಾರ್ವಜನಿಕರ ಜೀವನ, ಜನಸಾಮಾನ್ಯರ ಬದುಕು, ಅಡಳಿತದಲ್ಲಿ ಅವರ ಪಾತ್ರಕ್ಕೆ ಒತ್ತು ನೀಡಿದೆ . ಇತಿಹಾಸದ ಅಧ್ಯಯನಕ್ಕೆ ಇದು ಹೊಸ ದಿಕ್ಸೂಚಿಯಾಗಿದೆ. ಅದರಿಂದ ವರ್ತಮಾನಕ್ಕೆ ಪ್ರೇರಣೆ ಮತ್ತು ಭವಿಷ್ಯಕ್ಕೆ ಮಾರ್ಗದರ್ಶನ ಸಿಗುವುದು ಸಾಧ್ಯ ಎಂಬ ಭಾವನೆ ಬಲವಾಗಿ ಬೆಳಸಿದರು. ಸನಾತನ ಕಾಲದ ರಾಜ್ಯಾಡಳಿತ ಜನಸಾಮಾನ್ಯರ ಊಟ, ಉಡಿಗೆ, ತೊಡುಗೆ, ಆಟ-ಪಾಠ ,ಸಂಘ ಸಂಸ್ಥೆ ,ಜಾತಿ ಉಪಜಾತಿ, ಮಹಿಳೆಯರ ಸ್ಥಿ ತಿ-ಗತಿ, ಕೇಂದ್ರೀಯ-ಪ್ರಾಂತೀಯ ಅಧಿಕಾರ ವಿಭಜನೆಗಳ ವಿವರ ಅಲ್ಲಿದೆ. ವಿಜಯನಗರ ಹಿಂದೂ ಸಾಮ್ರಾಜ್ಯವು ಭಾರತೀಯ ಸಂಸ್ಕೃತಿಗಳ ಸಂರಕ್ಷಣೆಗಾಗಿ ಉದಯವಾಯಿತು ಎಂಬ ಅಭಿಮಾನ ಅವರ ಬರಹಗಳಲ್ಲಿ ಓತಪ್ರೋತವಾಗಿದೆ. ೧೯೩೬ ರಲ್ಲಿ ನ ಅವರ ಕೃತಿಗಳಲ್ಲಿ ಅವರು ಒಬ್ಬ ಧರ್ಮ ಯೋಧನ ತೇಜಸ್ಸು ತೋರಿದ್ದಾರೆ. ಈ ಗ್ರಂಥದ ಆಧಾರ ಸೂಚಿಯೇ ಸುಮಾರು ೫೫ ಪುಟವಿದೆ ಅದರಲ್ಲಿ ಸಾವಿರಾರು ಪುಸ್ತಕಗಳ ಮತ್ತು ಲೇಖನಗಳ ಉಲ್ಲೇಖವಿರುವದೇ ಅವರ ಅಧ್ಯಯನದ ಅಗಾಧತೆಯನ್ನು ತೋರಿಸುತ್ತದೆ.

ಭಾರತದ ಸ್ವಾತಂತ್ರ್ಯ ಮತ್ತು ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಸಾಮ್ರಾಜ್ಯದ ೬೦೦ನೇವರ್ಷದ ಸಮಾರಂಭದ ಪ್ರಯುಕ್ತ ೧೯೩೬ ರಲ್ಲಿ ಪ್ರಕಟವಾದ ಕೃತಿಯಲ್ಲಿ ೧೬೫ ಸಂಶೋಧನಾತ್ಮಕ ಲೇಖನಗಳಿರುವ ಬೃಹತ್ ಸಂಪುಟದ ಸಂಪಾದನೆ ಮಾಡಿರುವರು. ರಾಷ್ಟ್ರಾಭಿಮಾನವನ್ನು ಕೆರಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡುವುದರ ಜೊತೆಜೊತೆಗೆ ಪ್ರಾದೇಶಿಕತೆಯ ಹಿರಿಮೆಯನ್ನು ಸಾರಿ ಕರ್ನಾಟಕ ಏಕೀಕರಣಕ್ಕೂ ಮುನ್ನುಡಿ ಬರೆಯಿತು.ಈ ರೀತಿಯ ಇತಿಹಾಸದ ಅಧ್ಯಯನವು ಹೊಸ ಸಮಾಜವನ್ನು ರೂಪಿಸುವುದು ಎಂದು ಪೂರ್ಣವಾಗಿ ಒಪ್ಪಿತವಾಗದಿದ್ದರೂ ಪ್ರೇರಣೆ ನೀಡಿರುವುದಂತೂ ಸತ್ಯ ಸಂಗತಿ.

ಕರ್ನಾಟಕದ ಸಮಗ್ರ ಚರಿತ್ರೆಯನ್ನು ಹತ್ತು ಸಂಪುಟಗಳಲ್ಲಿ ತರುವ ಯೋಜನೆಯನ್ನು ಹಮ್ಮಿಕೊಂಡಿದ್ದರು. ಅದರ ಅಂಗವಾಗಿ ಮೊದಲ ಸಂಪುಟದಲ್ಲಿ ತಾವು ಹುಟ್ಟಿ ಬೆಳೆದ ಪರಿಸರವಾದ ತುಳುನಾಡಿನ ಇತಿಹಾಸ, ಅಲ್ಲಿನ ಆಳರಸರ ಚಿತ್ರಣ ,ಸಾಮಾಜಿಕ ಜೀವನ ಮತ್ತು ಧಾರ್ಮಿಕ ನಂಬಿಕೆಗಳ ಸವಿವರವಾದ ಚಿತ್ರಣ ನೀಡಿದ್ದಾರೆ. ದಕ್ಷಿಣ ಭಾರತದ ಹಾಗೂ ಕರ್ನಾಟಕದ ಇತಿಹಾಸವನ್ನು ಬೆಳಕಿಗೆ ತಂದಿರುವವರಲ್ಲಿ ಅವರದು ದೊಡ್ಡ ಹೆಸರು. ಸ್ವಾತಂತ್ರ್ಯ ಪೂರ್ವದ ಅವರ ಕೃತಿಗಳಲ್ಲಿ ದೇಶಾಭಿಮಾನ ಮತ್ತು ಧರ್ಮಾಭಿಮಾನ ಎದ್ದು ಕಾಣುತಿದ್ದರೆ ಸ್ವಾತಂತ್ರ್ಯಾನಂತರದ ಕಾಲದ ಅವರ ಕೃತಿಗಳಲ್ಲಿ ವೈಚಾರಿಕತೆ ಮತ್ತು ವಸ್ತುನಿಷ್ಠತೆ ಬರಹದ ನಿರ್ದೇಶಕ ತತ್ವಗಳಾಗಿವೆ. 'India’s relation with East' ಹಾಗೂ 'India’s relations with west' ಕೃತಿಗಳಲ್ಲಿ ಪ್ರಾಚೀನ ಕಾಲದಲ್ಲಿ ರೋಮ್ ಮತ್ತು ಚೀನಾದೊಂದಿಗಿನ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ವಸ್ತು ನಿಷ್ಠವಾಗಿ ವಿಶ್ಲೇಷಿಸಿದ್ದಾರೆ.

ಅವರ ಸಂಶೋಧನಾ ವಿಧಾನವೂ ವಿಭಿನ್ನವಾಗಿತ್ತು. ತಮ್ಮ ಮಾಹಿತಿಯ ಮೂಲ ಶಾಸನ ಅಥವಾ ಸಾಹಿತ್ಯ ಯಾವುದೇ ಆಗಿರಲಿ ತಾವು ಬಳಸಿರುವುದನ್ನೆಲ್ಲ ಅಕ್ಷರಶಃ ಪುಟಗಟ್ಟಲೇ ಅಲ್ಪವಿರಾಮ ಪೂರ್ಣವಿರಾಮದ ವ್ಯತ್ಯಾಸವೂ ಇಲ್ಲದಂತೆ ತಮ್ಮ ಕೃತಿಯಲ್ಲಿ ದಾಖಲಿಸುವರು. ಅವು ಮೂಲದಷ್ಟೇ ನಿಖರವಾಗಿರುತಿದ್ದವು. ಅನೇಕ ಕಿರು ಹೊತ್ತಿಗೆಗಳನ್ನು ಜನಸಾಮಾನ್ಯರಿಗೆ ಮಾಹಿತಿ ನೀಡಲು ರಚಿಸಿರುವರು. ಚೀನಾಯಾತ್ರಿಕ ಹುಯಾನ್ ತ್ಸಾಂಗ್ ತನ್ನ ಪ್ರವಾಸ ಕಥನದಲ್ಲಿ ಹೆಸರಿಸಿದ ೭೭೩ ಬೌದ್ಧವಿಹಾರಗಳಿದ್ದ ’ಕೊಂಕಿನಪೊಲೋ’ ಮಧ್ಯಕಾಲೀನ ನಗರವಾದ ಕೊಪಣಪುರ ಅಥವಾ ಈಗಿನ ಕೊಪ್ಪಳ ಎಂದು ಮತ್ತು ಅವೆಲ್ಲವೂ ಮೊದಲು ಜೈನ ಬಸದಿಗಳಾಗಿದ್ದವೆಂದು ಸಾಧಿಸಿದ್ದಾರೆ. ಅವರ ಕೊನೆಯ ಕೃತಿ ೧೯೬೨ ರಲ್ಲಿ ರಚಿಸಿದ, “Ancient Indian thought and Institutions- “. ಇದು ಅವರ ಜೀವಾವಧಿಯ ಕೊನೆಯ ಹಂತದಲ್ಲಿ ಬರೆದ ಬಹು ಪ್ರಬುದ್ದ ಕೃತಿ. ಪ್ರಾಚೀನ ಭಾರತದ ವಿಚಾರಧಾರೆಗಳು ಪಾಶ್ಚಾತ್ಯ ವಿಚಾರಧಾರೆಗಳಿಗಿಂತ ಕಡಿಮೆ ಇರಲಿಲ್ಲ ಎಂಬ ಅಂಶವನ್ನು ವಿದ್ವತ್ಪೂರ್ಣವಾಗಿ ವಸ್ತುನಿಷ್ಠತೆಯಿಂದ ಇದರಲ್ಲಿ ನಿರೂಪಿಸಿರುವರು.

ಭಾರತದ ಇತಿಹಾಸಕಾರರು ದಕ್ಷಿಣಭಾರತ ಇತಿಹಾಸವನ್ನು ಕಡಗಣಿಸಿರುವದರ ಬಗ್ಗೆ ಅವರಗೆ ತೀವ್ರ ಅಸಮಾಧಾನವಿತ್ತು, ದಕ್ಷಿಣ ಭಾರತದಲ್ಲಿ ತಮಿಳರ ಪ್ರಾಭಲ್ಯದಿಂದ ಕರ್ನಾಟಕದ ಇತಿಹಾಸ ಕಡಗಣಿಸಲಾಗಿರುವುದನ್ನು ಅವರು ಕಂಡುಕೊಂಡಿದ್ದರು ಅದಕ್ಕಾಗಿಯೇ ಮಧ್ಯಯುಗದ ಕರ್ನಾಟಕದ ಇತಿಹಾಸದ ಮೇಲೆ ಗಮನ ಕೇಂದ್ರೀಕರಿಸಿ ಅಮೂಲ್ಯ ಕೃತಿಗಳನ್ನು ಹೊರತಂದರು.ಅವರ ಸಂಶೋಧನೆಗಳನ್ನು. ಸೂಕ್ಷ್ಮ ಮತ್ತು ವ್ಯಾಪಕ ಹಂತದಲ್ಲಿ ಮಾಡುವ ಈ ಪರಿಣತೆಯಿಂದಾಗಿ ಅವರು ಅಂತರಾಷ್ಟ್ರೀಯ ಮಟ್ಟದ ಇತಿಹಾಸಕಾರರಾಗಿ ಹೆಸರು ಪಡೆದರು. ಇತಿಹಾಸ ರಚನೆಯನ್ನೂ ಕ್ರಾಂತಿಯ ಕಹಳೆಯಾಗಿಸಿ ಹೊಸ ಇತಿಹಾಸ ರೂಪಿಸುವಲ್ಲಿ ಅವರ ಕೃತಿಗಳ ಸ್ಥಾನ ಮಹತ್ವವಾದುದು. ಲೇಖಕರು