ದೇವಿಪ್ರಸಾದ ಶೆಟ್ಟಿ
ದೇವಿಪ್ರಸಾದ ಶೆಟ್ಟಿ | |
---|---|
ಜನನ | ಮೇ ೮, ೧೯೫೩ ಮಂಗಳೂರು, ಕರ್ನಾಟಕ, ಭಾರತ |
ವಿದ್ಯಾಭ್ಯಾಸ | Guy's Hospital London – Cardiothoracic Unit, (1983–1989) West Midlands Cardio-Thoracic Rotation Program (Trained in Cardiac Surgery) Kasturba Medical College, Mangalore, (1982) St. Aloysius Mangalore |
ಸಕ್ರಿಯ ವರ್ಷಗಳು | 1983–present |
ಗಮನಾರ್ಹ ಕೆಲಸಗಳು | Pulmonary Thromboembolectomy Neonatal open heart surgery Cardiomyoplasty Surgery Left Ventricular Assist Device Support |
Medical career | |
Profession | Chairman and founder, narayana health. cardiac surgeon |
Institutions | Kasturba Medical College, Mangalore Guy's Hospital United Kingdom B.M. Birla Hospital ಕೊಲ್ಕತ್ತ Manipal Hospital ಬೆಂಗಳೂರು |
Specialism | Cardiovascular Thoracic Surgery |
Notable prizes | ಪದ್ಮ ಭೂಷಣ award for Medicine in 2012 Schwab Foundation's award in 2005 Dr. B C Roy award in 2003 Sir M. Visvesvaraya Memorial Award in 2003 Ernst & Young – Entrepreneur of the Year in 2003 Rajyotsava award in 2002 Karnataka Ratna award in 2001 |
ದೇವಿ ಪ್ರಸಾದ್ ಶೆಟ್ಟಿ (ಜನನ 8 ಮೇ 1953) ಒಬ್ಬ ಭಾರತೀಯ ಹೃದಯ ಶಸ್ತ್ರಚಿಕಿತ್ಸಕ.ಅವರು ಭಾರತದಲ್ಲಿ 21 ವೈದ್ಯಕೀಯ ಕೇಂದ್ರಗಳ ಸರಪಳಿ, ನಾರಾಯಣ ಹೆಲ್ತ್ ನ ಅಧ್ಯಕ್ಷರಾಗಿದ್ದಾರೆ. ಅವರು 15,000 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೈಗೆಟುಕುವ ಆರೋಗ್ಯ ಸೇವೆಗೆ ನೀಡಿದ ಕೊಡುಗೆಗಾಗಿ 2004 ರಲ್ಲಿ ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ನಂತರ 2012 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. [೧] [೨]
ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ಡಾ.ದೇವಿಪ್ರಸಾದ ಶೆಟ್ಟಿಯವರು ಮೇ ೮, ೧೯೫೩ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 'ಕಿನ್ನಿಗೋಳಿ' ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆಗೆ ಇದ್ದ ಒಂಬತ್ತು ಮಕ್ಕಳಲ್ಲಿ ಎಂಟನೆಯವರಾಗಿದ್ದರು. ದುರ್ಗಾಪರಮೇಶ್ವರಿ ದೇವಿಯ ಭಕ್ತರಾದ ಅವರ ತಾಯಿ, ದುರ್ಗಾ ಪರಮೇಶ್ವರಿ ದೇವಿಯ ಕಾರುಣ್ಯ ತಮ್ಮ ಕರುಳಕುಡಿಯ ಮೇಲಿರಲೆಂದು ಮಗನಿಗೆ ‘ದೇವಿ ಪ್ರಸಾದ’ ಎಂದು ಹೆಸರಿಟ್ಟರು. ಬಾಲ್ಯದಲ್ಲಿ ದೇವಿ ಪ್ರಸಾದರು ಓದಿನಲ್ಲಿ ತುಂಬಾ ಜಾಣ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಅದರಲ್ಲೂ ಗಣಿತವೆಂದರೆ ಅವರಿಗೆ ಕಬ್ಬಿಣದ ಕಡಲೆಯಾಗಿತ್ತಂತೆ. ಶಾಲೆಯಲ್ಲಿನ ಡ್ರಾಯಿಂಗ್ ಟೀಚರ್ ಒಬ್ಬರಿಗೆ ದೇವಿ ಶೆಟ್ಟಿ ಬಗ್ಗೆ ವಿಶೇಷ ಅಕ್ಕರೆ. ಅವರು ಈ ಹುಡುಗನ ಮೇಲಿನ ಪ್ರೀತಿಯಿಂದ ತಮ್ಮ ಮನೆಯಲ್ಲಿ ಗಣಿತ ಹೇಳಿಕೊಡುತ್ತಿದ್ದರಂತೆ. ಐದನೆ ತರಗತಿಯಲ್ಲಿ ಕಲಿಯುತ್ತಿರುವಾಗ ದಕ್ಷಿಣ ಆಫ್ರಿಕಾದ ಸರ್ಜನ್ ಒಬ್ಬರು ಜಗತ್ತಿನ ಮೊದಲ ಹೃದಯ ಕಸಿಯನ್ನು ಮಾಡಿದರು, ಎಂದು ಕೇಳಿದಾಕ್ಷಣ ತಾನೂ 'ಹೃದಯ ಸರ್ಜನ್' ಆಗಬೇಕೆಂದು ನಿರ್ಧರಿಸಿದರು.
ಮನದಲ್ಲಿ ನಾಟಿದ ಎರಡು ಘಟನೆಗಳು
[ಬದಲಾಯಿಸಿ]ಚಿಕ್ಕಂದಿನಲ್ಲಿ ದೇವಿ ಪ್ರಸಾದರ ಬದುಕಿನಲ್ಲಿ ಹೀಗೊಂದು ಘಟನೆ ನಡೆಯಿತು. ಅದನ್ನು ದೇವಿ ಶೆಟ್ಟಿ ಹೀಗೆ ಬಣ್ಣಿಸುತ್ತಾರೆ.
ಒಂದು ಘಟನೆ
[ಬದಲಾಯಿಸಿ]“ಅದೊಂದು ಶನಿವಾರ ಮಧ್ಯಾಹ್ನ ಎನ್ನುವುದು ನನ್ನ ನೆನಪು. ಬೆಂಕಿಪೊಟ್ಟಣಗಳು ಹಾಗೂ ಕಡ್ಡಿಗಳಿಂದ ನಾನು ಕಾರು ತಯಾರಿಸಲು ಪ್ರಯತ್ನಿಸುತ್ತಿದ್ದೆ. ಹಳ್ಳಿಯಲ್ಲಿನ ಉಳಿದ ಮಕ್ಕಳೂ ಇಂಥ ಆಟವನ್ನೇ ಆಡುತ್ತಿದ್ದರು. ಬಾಂಬೆಯಲ್ಲಿದ್ದ ದೂರದ ಸಂಬಂಧಿಯೊಬ್ಬರೊಂದಿಗೆ ನನ್ನ ತಾಯಿ ಮಾತನಾಡುತ್ತಿದ್ದರು. ತಾನು ನೀಡಿದ ಚಿಕಿತ್ಸೆಗೆ ಯಾವುದೇ ಶುಲ್ಕ ಪಡೆಯದೆ, ತನ್ನ ಮಗುವನ್ನು ಉಳಿಸಿಕೊಟ್ಟ ಸರ್ಜನ್ ಒಬ್ಬರ ಬಗ್ಗೆ ಆಕೆ ನನ್ನ ತಾಯಿಗೆ ಹೇಳುತ್ತಿದ್ದಳು. ಅಂಥ ಅದ್ಭುತ ವ್ಯಕ್ತಿಗೆ ಜನ್ಮ ಕೊಟ್ಟ ತಾಯಿಯ ಉದರ ತಣ್ಣಗಿರಲೆಂದು ನನ್ನ ತಾಯಿ ಹಾರೈಸಿದ್ದು ನನ್ನ ಕಿವಿಗೆ ಬಿತ್ತು. ಅಂಥ ವ್ಯಕ್ತಿಗಳ ಕಾರಣದಿಂದಲೇ ಈ ಜಗತ್ತು ಇನ್ನೂ ಸುಂದರವಾಗಿದೆ ಎಂದು ಅಮ್ಮ ಹೇಳುತ್ತಿದ್ದಳು. ಆ ಸಮಯದಲ್ಲೇ ನನ್ನ ಬದುಕಿನ ಅರ್ಥ ಏನೆನ್ನುವುದನ್ನು ಕಂಡುಕೊಂಡೆ.”
ಮತ್ತೊಂದು ಘಟನೆ
[ಬದಲಾಯಿಸಿ]೧೯೬೭ ನೇ ಇಸವಿ. ದಕ್ಷಿಣ ಆಫ್ರಿಕಾದ 'ಕ್ರಿಸ್ಟಿಯನ್ ಬರ್ನಾರ್ಡ್' 'ಮೊದಲ ಹಾರ್ಟ್ ಟ್ರಾನ್ಸ್‌ಪ್ಲಾಂಟ್' ಮಾಡಿದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ಸುದ್ದಿಯನ್ನು ಶಾಲೆಯಲ್ಲಿ ಶಿಕ್ಷಕರೊಬ್ಬರು ತರಗತಿಗೆ ಓದಿಹೇಳಿದಾಗ ಬಾಲಕ ದೇವಿ ಪ್ರಸಾದನಿಗೆ 'ಮೈ ಜುಂ' ಎಂದಿತು. ವೈದ್ಯನಾದರೆ, 'ಬರ್ನಾರ್ಡ್' ಅವರಂತೆ 'ಹಾರ್ಟ್ ಸರ್ಜನ್' ಆಗಬೇಕು ಎಂದು ಹುಡುಗನಿಗೆ ಅನ್ನಿಸಿತು.
ವಿದ್ಯಾಭ್ಯಾಸ
[ಬದಲಾಯಿಸಿ]ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು 'ಕಿನ್ನಿಗೋಳಿಯ ಸೇಂಟ್ ಮೇರಿಸ್ ಶಾಲೆ'ಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರು. ಅವರು ಕಸ್ತೂರಬಾ ಮೆಡಿಕಲ್ ಕಾಲೇಜು, ಮಂಗಳೂರಿನಲ್ಲಿ ಮೆಡಿಸಿನ್ ನಲ್ಲಿ ಪದವಿ ಪ್ಡೆದು, ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಆಮೇಲೆ 'ಯುನೈಟೇಡ್ ಕಿಂಗ್ಡಮ್ ನ ಗೈಸ್ ಆಸ್ಪತ್ರೆ'ಯಲ್ಲಿ 'ಕಾರ್ಡಿಯಾಕ್ ಸರ್ಜರಿ' ಅಂದರೆ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ತರಬೇತಿ ಹೊಂದಿದರು.
ಇಂಗ್ಲೆಂಡಿನಲ್ಲೊಬ್ಬ ಆಪರೇಟಿಂಗ್ ಮೆನ್
[ಬದಲಾಯಿಸಿ]ಸೋದರನೊಬ್ಬ ಅಲ್ಲಿ ನೆಲೆಸಿದ್ದುದು ಕೂಡ ಅವರ ಆಸೆಗೆ ಪೂರಕವಾಗಿತ್ತು. ವೆಸ್ಟ್ ಮಿಡ್‌ಲ್ಯಾಂಡ್ಸ್ ಕಾರ್ಡಿಯೊ-ಥೊರಾಸಿಕ್ ರೊಟೇಷನ್ ಕಾರ್ಯಕ್ರಮದಡಿ ವಾಲ್ಸ್‌ಗ್ರೇವ್ ಆಸ್ಪತ್ರೆ ಹಾಗೂ ಬರ್ಮಿಂಗ್‌ಹ್ಯಾಂ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಸರ್ಜನ್ ಆಗಿ ತರಬೇತಿ ಪಡೆದರು. ಆನಂತರ ಲಂಡನ್‌ನ ಗೈಸ್ ಹಾಸ್ಪಿಟಲ್‌ನ ಕಾರ್ಡಿಯೊ ಥೊರಾಸಿಕ್ ವಿಭಾಗದಲ್ಲಿ ಸೇರಿಕೊಂಡು (1983-89) ಹೃದಯದ ಪದರಗಳ ಬಿಡಿಸತೊಡಗಿದರು. ‘ಗೈಸ್ ಹಾಸ್ಪಿಟಲ್’ನಲ್ಲಿ ದೇವಿ ಶೆಟ್ಟಿ ಕಾರ್ಯಕ್ಷಮತೆ ಎಷ್ಟು ಜನಪ್ರಿಯವಾಗಿತ್ತೆಂದರೆ, ಸಹೋದ್ಯೋಗಿ ಗೆಳೆಯರು ಅವರನ್ನು ‘ಆಪರೇಟಿಂಗ್ ಮೆನ್’ ಎಂದು ಕರೆಯುತ್ತಿದ್ದರು. ಅಲ್ಲವರು ವಾರದಲ್ಲಿ ಏಳು ದಿನವೂ ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. ಒಮ್ಮೆ ದೇವಿಶೆಟ್ಟಿ ತಮ್ಮ ಪತ್ನಿಯನ್ನು ಆಸ್ಪತ್ರೆಯಲ್ಲಿನ ಹಿರಿಯ ತಜ್ಞರಿಗೆ ಪರಿಚಯಿಸಿದರು. ಅವರು ದೇವಿಶೆಟ್ಟಿ ಅವರ ಪತ್ನಿಗೆ ಹೇಳಿದ್ದು: ‘ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ!’.
ಮನಕಲಕಿದ ಅಸಮಾನತೆ
[ಬದಲಾಯಿಸಿ]ಭಾರತಕ್ಕೆ ೧೯೮೯ರಲ್ಲಿ ಮರಳಿದ ದೇವಿ ಶೆಟ್ಟಿ ಅವರ ವೃತ್ತಿ ಆರಂಭಗೊಂಡಿದ್ದು ಕೋಲ್ಕತ್ತಾದಲ್ಲಿ. ಅಲ್ಲಿನ ಅನುಭವ ಅವರಿಗೆ ಬೇರೆಯದೇ ಲೋಕವೊಂದನ್ನು ಪರಿಚಯಿಸಿತು. ಅವರಿಗೆ ಕಾಣಿಸಿದ್ದು ದಾರುಣ ಬಡತನದ ಕಟು ವಾಸ್ತವ. ಜನಸಾಮಾನ್ಯರ ಕಷ್ಟ ಅವರಿಗೆ ಅರ್ಥವಾದದ್ದು ಆಗಲೇ.[೩]
ಬದುಕಿನ ಕಟುಸತ್ಯಗಳು
[ಬದಲಾಯಿಸಿ]ಪ್ರತಿ ಹಳ್ಳಿಯಲ್ಲೂ ಒಬ್ಬ ಶ್ರಿಮಂತ ವ್ಯಕ್ತಿ ಇರುತ್ತಾನೆ. ಆತನದ್ದು ದೊಡ್ಡ ಮನೆ. ಊರಿನಲ್ಲಿ ಉಳಿದವರದ್ದೆಲ್ಲ ಸಣ್ಣ ಸಣ್ಣ ಮನೆಗಳು. ಆದರೆ ಶ್ರಿಮಂತನಾಗಲೀ ಬಡವರಾಗಲೀ ತಿನ್ನುವುದು ಒಂದೇ ಬಗೆಯ ಆಹಾರವನ್ನು; ಪ್ರಮಾಣದಲ್ಲಿ ಕೊಂಚ ಹೆಚ್ಚುಕಡಿಮೆ ಇರಬಹುದು ಅಷ್ಟೇ. ಜಾನಪದ ಹಾಡು-ಕುಣಿತಗಳ ಪ್ರದರ್ಶನದ ಸಂದರ್ಭದಲ್ಲಿ ಶ್ರಿಮಂತ ಕುರ್ಚಿಯ ಮೇಲೆ ಕೂರುತ್ತಿದ್ದ, ಬಡವ ನೆಲದ ಮೇಲೆ ಕೂರುತ್ತಿದ್ದ. ಆದರೆ ಇಬ್ಬರಿಗೂ ದೊರೆಯುತ್ತಿದ್ದ ಮನರಂಜನೆ ಒಂದೇ ಬಗೆಯದಾಗಿತ್ತು. ದೊಡ್ಡ ಕಾಯಿಲೆಯೊಂದು ಬಂದಾಗ ಬಡವ ಮತ್ತು ಬಲ್ಲಿದ ಇಬ್ಬರೂ ಸಾಯುತ್ತಿದ್ದರು. ಅವರ ಬದುಕು ಹಾಗೂ ಸಾವಿನಲ್ಲಿ ಒಂದೇ ರೀತಿಯ ಸಮಾನತೆಯಿತ್ತು. ಆದರೆ ಈಗ? ಕೆಲವೇ ಸಾವಿರ ರೂಪಾಯಿಗಳು ತಮ್ಮಲ್ಲಿ ಇಲ್ಲದ ಕಾರಣ ಎಷ್ಟೊಂದು ಮಂದಿ ತಮ್ಮ ಇಷ್ಟಪಾತ್ರರನ್ನು ಕಳಕೊಂಡಿಲ್ಲ?’. ಇಂಥ ಅಸಹಾಯಕರಿಗೆ ನೆರವಾಗುವುದರಲ್ಲಿ ದೇವಿ ಶೆಟ್ಟಿ ತಮ್ಮ ಬದುಕಿನ ಸಾರ್ಥಕತೆ ಕಾಣುತ್ತಿದ್ದಾರೆ.
ಕಲ್ಕತ್ತಾಕ್ಕೆ ಪಾದಾರ್ಪಣೆ
[ಬದಲಾಯಿಸಿ]ಲಂಡನ್‌ನಿಂದ ೧೯೮೯ರಲ್ಲಿ ಭಾರತಕ್ಕೆ ಹಿಂತಿರುಗಿದ ದೇವಿಶೆಟ್ಟಿ, ವಿದೇಶದಲ್ಲಿನ ತಮ್ಮ ಅನುಭವವನ್ನು ಇಲ್ಲಿ ಸಂಸ್ಥೆಯೊಂದರ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು. ಇದರ ಫಲವಾಗಿ ರೂಪುಗೊಂಡಿದ್ದು ಕೋಲ್ಕತ್ತಾದ ಬಿ. ಎಂ. ಬಿರ್ಲಾ ಆಸ್ಪತ್ರೆ. ಭಾರತದಲ್ಲಿ ನವಜಾತ ಶಿಶುವಿನ (ಒಂಬತ್ತು ದಿನಗಳ ಹಸುಳೆ) ಮೊದಲ ಶಸ್ತ್ರಚಿಕಿತ್ಸೆಯನ್ನು ಡಾ. ದೇವಿ ಶೆಟ್ಟಿ ನೆರವೇರಿಸಿದ್ದು ಇಲ್ಲಿಯೇ. ಕೋಲ್ಕತ್ತಾದಲ್ಲಿದ್ದಾಗ ಮದರ್ ತೆರೇಸಾ ಅವರಿಗೆ ಚಿಕಿತ್ಸೆ ನೀಡಲು ಅವಕಾಶ ದೊರಕಿತ್ತು. ದೇವಿ ಶೆಟ್ಟಿ ಅವರ ಅನುಭವ ಬುತ್ತಿಯಲ್ಲಿನ ಸವಿನೆನಪುಗಳಲ್ಲೊಂದು. ತೆರೇಸಾ ಕೊನೆಯುಸಿರೆಳೆದದ್ದು ದೇವಿಶೆಟ್ಟಿ ಅವರ ಕಾಳಜಿಯ ಕಣ್ಣಳತೆಯಲ್ಲೇ.
ನಾರಾಯಣ ಹೃದಯಾಲಯ
[ಬದಲಾಯಿಸಿ]- ೨೦೦೧ರಲ್ಲಿ ಆರಂಭವಾದ ‘ನಾರಾಯಣ ಹೃದಯಾಲಯ’ ಪಾಕಿಸ್ತಾನದ ಹಸುಳೆ 'ನೂರ್ ಫಾತಿಮಾಳ ಶಸ್ತ್ರಚಿಕಿತ್ಸೆ'ಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಸ್ತುತ ವಿಶ್ವದ ಅತ್ಯುತ್ತಮ ಹೃದಯ ಚಿಕಿತ್ಸಾ ಕೇಂದ್ರಗಳಲ್ಲೊಂದಾಗಿ ಅದು ಪ್ರಸಿದ್ಧಿ ಹೊಂದಿದೆ.
- ಡಾ. ದೇವಿ ಶೆಟ್ಟಿ ಅವರ ‘ನಾರಾಯಣ ಹೃದಯಾಲಯ’ ಬೆಂಗಳೂರು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಮೈಸೂರಿಗೂ ಆಗಮಿಸಿದೆ. ದೇಶದ ವಿವಿದೆಡೆಗಳಲ್ಲಿ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ನಿರ್ಮಿಸಲು ತೊಡಗಿದೆ.
- ೨೦೦೧ ರಲ್ಲಿ ಶೆಟ್ಟಿಯವರು ಮುಲ್ಟಿ-ಸ್ಪೆಶಾಲಿಟಿ ನಾರಾಯಣ ಹೃದಯಾಲಯವನ್ನು ಬೆಂಗಳೂರಿನ ಹೊರವಲಯದಲ್ಲಿರುವ ಬೊಮ್ಮಸಂದ್ರದಲ್ಲಿ ಸ್ಥಾಪಿಸಿದರು. ಯಾಕೆಂದರೆ ಅವರ ದೂರದೃಷ್ಟಿಯನ್ನು ಅರ್ಥ ಮಾಡಿಕೊಳ್ಳುವ ಉದ್ಯೋಗದಾತ ಅವರಿಗೆ ದೊರಕಲಿಲ್ಲ.
- ಆರೋಗ್ಯದ ಕುರಿತಾದ ವೆಚ್ಚವು ಇನ್ನು ೮-೧೦ ವರ್ಷಗಳಲ್ಲಿ ೫೦% ಕಡಿಮೆ ಮಾಡಲು ಸಾಧ್ಯ ಎಂದು ನಂಬುತ್ತಾರೆ. ಮಿತ ವ್ಯಯ ಮತ್ತು ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವುದರಿಂದ ಇದು ಸಾಧ್ಯ ಎನ್ನುತ್ತಾರೆ.
- ಅವರ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯಲ್ಲದೆ, ಕಾರ್ಡಿಯೊಲೊಜಿ, ನ್ಯೂರೋಸರ್ಜರಿ ನರಕ್ಕೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆ, ಮಕ್ಕಳ ರಕ್ತಶಾಸ್ತ್ರ, ಹೃದಯಕಸಿ ಮತ್ತು ಇತರೆ ಚಿಕಿತ್ಸೆಗಳು ಲಭ್ಯ. ಈ ಹಾರ್ಟ್ ಆಸ್ಪತ್ರೆಯು ಜಗತ್ತಿನಲ್ಲಿಯೇ ಅತಿ ದೊಡ್ಡ ಆಸ್ಪತ್ರೆಯಾಗಿದ್ದು, ೧೦೦೦ ಬೆಡ್ಡುಗಳಿವೆ ಮತ್ತು ಪ್ರತಿ ನಿತ್ಯ ೩೦ ಪ್ರಮುಖ ಶಸ್ದ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ.
- ಆ ಅಸ್ಪತ್ರೆಯ ಕಟ್ಟಡದ ಜಾಗವು ಮೊದಲು ಒಂದು ಜವಗು ಪ್ರದೇಶವಾಗಿತ್ತು ಮತ್ತು ಅದನ್ನು ದುರಸ್ತಿಗೊಳಿಸಿ ಮತ್ತೆ ಪುನರ್ ಸ‍್ಥಾಪಿಸಲಾಯಿತು. ಈ ಹೆಲ್ತ್ ಸಿಟಿಯು ಪ್ರತಿನಿತ್ಯ ೧೫,೦೦೦ ಔಟ್ ಪೇಶ್ಂಟ್ ಗಳ ಬೇಡಿಕೆಯನ್ನು ಪೂರೈಸುವ ಇರಾದೆಯನ್ನು ಹೊಂದಿದೆ.
- ಆಗಸ್ಟ್ ೨೦೧೨ರಂದು ಶೆಟ್ಟಿಯವರು 'ಎಸೆನ್ಶನ್ ಹೆಲ್ತ್' ನ ಉಪ ಸಂಸ್ಥೆಯಾದ 'ಟ್ರಿಮೆಡ್ಕ್ಸ್' ನೊಟ್ಟಿಗೆ ಇಡೀ ಭಾರತದಾದ್ಯಂತ 'ಹೆಲ್ತ್ ಕೇರ'ನ್ನು ತೆಗೆದುಕೊಂಡು ಹೋಗುವ ಗುರಿಯಿದ್ದ 'ಜಂಟೀ ಸಾಹಸಕ್ಕೆ ಒಪ್ಪಂದ'ವನ್ನು ಘೋಷಿಸಿದರು. ಈ ಹಿಂದೆ ನಾರಾಯಣ ಹೃದಯಾಲಯವು ಎಸ್ಸೆನ್ಶ್ ನ ಸಹಭಾಗಿತ್ವದಲ್ಲಿ 'ಕೈಮ್ಯಾನ್ ಐಲ್ಯಾಂಡಿ'ನಲ್ಲಿ 'ಹೆಲ್ತ್ ಕೇರ್ ಸಿಟಿ'ಯನ್ನು ಸ್ಥಾಪಿಸಿದ್ದು, ಕೊನೆಗೆ ೨,೦೦೦ ಬೆಡ್ಡುಗಳನ್ನು ಯೋಜಿಸಲಾಗಿತ್ತು.
- ಡಾ.ಶೆಟ್ಟಿಯವರು ಕೊಲ್ಕೊತ್ತಾದಲ್ಲಿ 'ರಬಿಂದ್ರನಾಥ್ ಟಾಗೋರ್ ಇಂಟರ್ ನ್ಯಾಶನಲ್ ಕಾರ್ಡಿಯಕ್ ಸೈನ್ಸಸ್ ಸಂಸ್ಥೆ'ಯನ್ನು ಸ್ಥಾಪಿಸಿದರು.
- ಶೆಟ್ಟಿಯವರು ಕರ್ನಾಟಕ ಸರಕಾರದ ನೆರವಿನೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪ ೧,೦೦೦ ಕೋಟಿಯ ೫,೦೦೦ ಬೆಡ್ಡುಗಳುಳ್ಳ 'ಸೂಪರ್ ಸ್ಪೆಶಾಲಿಟಿ ಹೊಸ್ಪಿಟಲ್' ನ್ನು ಸ್ಥಾಪಿಸಲು 'ಗ್ಲೋಬಲ್ ಇನ್ವೆಸ್ಟಮೆಂಟ್ ಮೀಟ್' ಸಂದರ್ಭದಲ್ಲಿ 'ಎಮ್ ಓ ಯು', ಗೆ ಸಹಿ ಹಾಕಿದ್ದಾರೆ. ಇವರ ಕಂಪೆನಿಯು ಗುಜರಾತ್ ಸರಕಾರದೊಟ್ಟಿಗೆ ಅಹಮದಾಬಾದಿನಲ್ಲಿ ೫,೦೦೦ ಬೆಡ್ಡುಗಳುಳ್ಳ ಆಸ್ಪತ್ರೆಯನ್ನು ಸ್ಥಾಪಿಸಲು 'ಎಮ್.ಓ. ಯು.' ಗೆ ಸಹಿ ಹಾಕಿದ್ದಾರೆ.
- ಇವರ ಕಂಪೆನಿಯು ಮೈಸೂರಿನಲ್ಲಿ ೧೫೦ ಬೆಡ್ಡುಗಳ ಕಡಿಮೆ ವೆಚ್ಚದಲ್ಲಿ ಸರಕಾರ ಕೊಟ್ಟ ಸ್ಥಳದಲ್ಲಿ ಕಟ್ಟಿದ್ದಾರೆ. ಇಲ್ಲಿ ಏರ್ ಕಂಡೀಷನ್ ಗೆ ಬದಲು 'ಕ್ರೊಸ್ ವೆಂಟಿಲೇಶನ್' ನ್ನು ಬಳಸಿ ಖರ್ಚು ಕಡಿಮೆ ಮಾಡಲಾಗಿದೆ. ಅವರು ಏಳು ಸದಸ್ಯರನ್ನು ಒಳಗೊಂಡ 'ಬೋರ್ಡ್ ಆಫ್ ಗವರ್ನರ್ಸ್ ಪ್ಯಾನೆಲ್' ನ ಭಾಗವಾಗಿದ್ದರು. ಅವರ ಆಸ್ಪತ್ರೆಯು 'ಇಕೊನೊಮೀಸ್ ಆಫ್ ಸ್ಕೇಲ್' ನ್ನು ಅನೂಕೂಲಗಳನ್ನು ಬಳಸಿ, ವೆಚ್ಚವನ್ನು ತಗ್ಗಿಸಲಾಗುವಂತೆ ಮಾಡಿದ್ದಾರೆ. ಇದರಿಂದ ಶಸ್ತ್ರ ಚಿಕಿತ್ಸೆಯು ಅಮೇರಿಕಾಗಿಂತ ಹತ್ತು ಪಟ್ಟು ಕಡಿಮೆಯಾಗುತ್ತದೆ.
ಯಶಸ್ವಿನಿಎಂಬ ಆರೋಗ್ಯ ವಿಮೆ
[ಬದಲಾಯಿಸಿ]ಇದು ಜಗತ್ತಿನಲ್ಲಿಯೇ ಅತಿ ಕಡಿಮೆ ವೆಚ್ಚ ಹಾಗೂ ಎಲ್ಲ ಸವಲತ್ತನ್ನು ಒಳಗೊಂಡ ಆರೋಗ್ಯ ವಿಮೆಯಾಗಿದೆ. ತಿಂಗಳಿಗೆ ಕೇವಲ ೨೦/ ರೂಪಾಯಿಗಳ ಕಂತು. ಇದನ್ನು ಶೆಟ್ಟಿಯವರು ಮತ್ತು ಕರ್ನಾಟಕ ಸರಕಾರ ಜಂಟಿಯಾಗಿ ಬಡ ರೈತರಿಗಾಗಿ ಯೋಜಿಸಲಾಗಿದೆ. ಕರ್ನಾಟಕದಲ್ಲಿ ೪ ದಶಲಕ್ಷ ಜನ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರಶಸ್ತಿಗಳು ಮತ್ತು ಮನ್ನಣೆಗಳು
[ಬದಲಾಯಿಸಿ]- ಪದ್ಮ ಭೂಷಣ ಪ್ರಶಸ್ತಿ
- ಎಂತ್ರಪ್ರನರ್ ಆಫ್ ದಿ ಎಯರ್ ಎವಾರ್ಡ್ ೨೦೧೨
- ಕರ್ನಾಟಕ ರತ್ನ
- ಇಕೊನೊಮಿಸ್ಟ್ ಇನ್ನೊವೇಶನ್ ಎವಾರ್ಡ್ ಫೊರ್ ದಿ ಬಿಸಿನೆಸ್ ಪ್ರೊಸೆಸ್ ಎವಾರ್ಡ್
- ಹೊನರರಿ ಡಿಗ್ರಿ, ಯುನಿವ
ಉಲ್ಲೇಖಗಳು
[ಬದಲಾಯಿಸಿ]- ↑ "Dr. Devi Prasad Shetty – "The Poor Man's God". Archived from the original on 2016-03-23. Retrieved 2017-04-26.
- ↑ "HOW I DID IT Devi P. Shetty, Narayana Hrudayalaya". Archived from the original on 2013-12-01. Retrieved 2014-06-11.
- ↑ "Dr.Devi Prasad Shetty-Serving God and People-3". Archived from the original on 2016-03-05. Retrieved 2017-04-26.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- “How to take care of your Heart ….” Dr. Devi Prasad Shetty’s Invited Talk at CSIR- NAL Archived 2014-02-19 ವೇಬ್ಯಾಕ್ ಮೆಷಿನ್ ನಲ್ಲಿ.
- Within a Decade, All Indians will Have Access to High-tech Healthcare:Dr. Devi Shetty Archived 2017-03-12 ವೇಬ್ಯಾಕ್ ಮೆಷಿನ್ ನಲ್ಲಿ.
- Deprived Children Will Rewrite the Rules-Subrato Bagchi Archived 2015-06-01 ವೇಬ್ಯಾಕ್ ಮೆಷಿನ್ ನಲ್ಲಿ.