ಗುಡಿಸಲು ಕೈಗಾರಿಕೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗುಡಿ ಕೈಗಾರಿಕೆ ಇಂದ ಪುನರ್ನಿರ್ದೇಶಿತ)

ಗುಡಿಸಲು ಕೈಗಾರಿಕೆಗಳು ಮನೆಯಲ್ಲಿ ಅಥವಾ ಗುಡಿಸಿಲಿನಲ್ಲಿ ನಡೆಸುವ ಕೈಗಾರಿಕೆಗಳು, ಕುಟೀರ ಕೈಗಾರಿಕೆಗಳು (ಕಾಟೆಜ್ ಇಂಡಸ್ಟ್ರೀಸ್). ಬಡಗಿ,ಚಮ್ಮಾರ, ಅಕ್ಕಸಾಲಿಗ, ಕಮ್ಮಾರ , ಗೌರಿಗ (ಬಿದಿರಿನ ಕೆಲಸ) ಮುಂತಾದುವು ಇದರಲ್ಲಿ ಮುಖ್ಯವಾದುವು. ಇದು ನಾಗರಿಕತೆಯಷ್ಟೇ ಹಳೆಯದು. ಮನುಷ್ಯ ಸ್ವರಕ್ಷಣೆಗಾಗಿ ಮತ್ತು ಬೇಟೆಗಾಗಿ ಆಯುಧಗಳನ್ನೂ ಉಪಕರಣಗಳನ್ನೂ ತಯಾರಿಸ ತೊಡಗಿದಾಗ ಈ ಕೈಗಾರಿಕೆಯ ಉದಯವಾಯಿತು. ಅವನು ಮುಂದೆ ಉಡುಪು, ವ್ಯವಸಾಯದ ಉಪಕರಣ ಮುಂತಾದವನ್ನು ಮಾಡಲು ಪ್ರಾರಂಭಿಸಿದಾಗ ಇದು ಬೆಳೆಯಿತು. ಪುರಾತನ ನಾಗರಿಕತೆಗಳಲ್ಲಿ ನಾನಾ ಉಪಯುಕ್ತ ಮತ್ತು ಭೋಗ ವಸ್ತುಗಳ ಕೈಗಾರಿಕೆಗಳಿಗೆ ರಾಜರಿಂದಲೂ ಚಕ್ರವರ್ತಿಗಳಿಂದಲೂ ಶ್ರೀಮಂತರಿಂದಲೂ ಪೋಷಣೆಯಿತ್ತು. ಅವರು ತಯಾರಿಸಿದ ಸರಕುಗಳು ದೂರದ ಮಾರುಕಟ್ಟೆಗಳಲ್ಲಿ ವಿಕ್ರಯವಾಗುತ್ತಿದ್ದುವು. ಆದರೆ ಕೈಗಾರಿಕಾ ಕ್ರಾಂತಿಯಾದ ಮೇಲೆ ಉಂಟಾದ ತ್ವರಿತ ಮತ್ತ ವ್ಯಾಪಕವಾದ ಕೈಗಾರಿಕಾಕರಣ ಗೃಹ ಕೈಗಾರಿಕೆಗಳ ಕ್ಷೀಣ ದಶೆಗೆ ಕಾರಣವಾಯಿತು. ಆದರೂ ಈ ಕೈಗಾರಿಕೆಗಳು ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಕೆಲವು ಕಾರಣಗಳಿಂದಾಗಿ ಅವು ಇಂದಿಗೂ ಉಳಿದುಬಂದಿವೆ.

ಉಪಯುಕ್ತ ವಸ್ತುಗಳಿಗೆ ಬೇಡಿಕೆ[ಬದಲಾಯಿಸಿ]

ಕೆಲವು ಉಪಯುಕ್ತ ವಸ್ತುಗಳಿಗೆ ಬೇಡಿಕೆ ಸ್ಥಳೀಯವೂ ಪರಿಮಿತವೂ ಆಗಿರುತ್ತದೆ. ಅಂಥ ವಸ್ತುಗಳನ್ನು ದೊಡ್ಡ ಕೈಗಾರಿಕೆಗಳಲ್ಲಿ ಬೃಹದ್ಗಾತ್ರದಲ್ಲಿ ಉತ್ಪಾದನೆ ಮಾಡುವುದು ಸಾಧ್ಯವಿಲ್ಲ ಗುಡಿಸಿಲು ಕೈಗಾರಿಕೆಗಳಲ್ಲಿ ಅವನ್ನು ಸಣ್ಣ ಗಾತ್ರದಲ್ಲಿ ಉತ್ಪಾದಿಸಬಹುದು. ಅದೂ ಅಲ್ಲದೆ ಗೃಹ ಕೈಗಾರಿಕೆ ಗಳು ಜನಗಳ ರುಚಿ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಸರಕುಗಳನ್ನು ತಯಾರಿಸುತ್ತವೆ. ಈ ಕಾರಣಗಳಿಂದಾಗಿ ಗುಡಿಸಿಲು ಕೈಗಾರಿಕೆಗಳು ಈಗಿನ ಬೃಹತ್ ಕೈಗಾರಿಕಾ ಪ್ರಪಂಚದಲ್ಲೂ ಜೀವಂತವಾಗಿ ಉಳಿದಿವೆ. ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಪ್ರವರ್ಧಮಾನವಾಗಿವೆ. ಈಚೆಗೆ ಸರ್ಕಾರಗಳು ಇವಕ್ಕೆ ಉತ್ತೇಜನ ನೀಡುತ್ತಿವೆ. ಇದಕ್ಕೆ ನಾನಾ ಕಾರಣಗಳುಂಟು :

  1. ಈ ಕೈಗಾರಿಕೆಗಳು ಕೂಲಿಗಾರರ ಹೆಚ್ಚಳವಿರುವ ಮತ್ತು ಕಡಿಮೆ ಬಂಡವಾಳವಿರುವ ದೇಶಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.
  2. ಇವು ಸ್ಥಳೀಯವಾಗಿ ದೊರೆಯುವ ಕಚ್ಚಾಸಾಮಗ್ರಿ ಮತ್ತು ಕುಶಲತೆಯನ್ನು ಉಪಯೋಗಿಸಿಕೊಂಡು ಅನೇಕ ಉಪಯುಕ್ತ ಮತ್ತು ಅನುಭೋಗ ವಸ್ತುಗಳನ್ನು ತಯಾರಿಸುವುದರಿಂದ ದೇಶದ ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತವೆ.
  3. ಗುಡಿಸಲು ಕೈಗಾರಿಕೆಗಳು ಮನೆಯಲ್ಲೇ ಇರುವ ಮುದುಕರು, ಕುರುಡರು ಮತ್ತು ಮಕ್ಕಳುಗಳ ಸೇವೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಸಹಾಯಕವಾಗುತ್ತದೆ.
  4. ಸಮಾನ ಆರ್ಥಿಕ ಅವಕಾಶ ಕಲ್ಪಿಸುವುದಕ್ಕೂ ರಾಷ್ಟ್ರದ ವರಮಾನ ಮತ್ತು ಸಂಪತ್ತಿನ ಸಮಾನ ಹಂಚಿಕೆಗೂ ಕೆಲವು ದೇಶಗಳು ಗುಡಿಸಿಲು ಕೈಗಾರಿಕೆಗಳನ್ನು ಉತ್ತೇಜಿಸುತ್ತಿವೆ.
  • ಈ ರಂಗಗಳಲ್ಲಿ ಗೃಹಕೈಗಾರಿಕೆಗಳು ವ್ಯಾಪಕವಾಗಿ ಕಂಡುಬರುತ್ತವೆ; ಪುಸ್ತಕಗಳನ್ನು ಹೊಲಿಯುವುದು; ನೂಲಿಗೆ ಬಣ್ಣ ಕಟ್ಟುವುದು; ಬಟ್ಟೆಬರೆಗಳ ತಯಾರಿಕೆ; ಬೀಜಗಳಿಂದ ಎಣ್ಣೆ ತೆಗೆಯುವುದು; ಚಿನ್ನ, ಬೆಳ್ಳಿ ಮತ್ತು ಇತರ ಆಭರಣಗಳ ತಯಾರಿಕೆ; ಚರ್ಮವಸ್ತುಗಳ ತಯಾರಿಕೆ; ಚಾಪೆ ಹೆಣೆಯುವುದು: ಸಂಗೀತ ಸಾಧನಗಳ ತಯಾರಿಕೆ; ವ್ಯವಸಾಯೋಪಕರಣಗಳ ತಯಾರಿಕೆ: ಮಣ್ಣಿನ ಕೆಲಸ ಮತ್ತು ಕುಂಬಾರಿಕೆ; ಬಿದಿರು ಮತ್ತು ಅನೇಕ ಬೆತ್ತದ ಸಾಮಾನುಗಳ ತಯಾರಿಕೆ; ಜಮಖಾನದ ತಯಾರಿಕೆ; ಮಣ್ಣಿನ ಪ್ರತಿಮೆಗಳ ತಯಾರಿಕೆ; ತಾಮ್ರದ ಸಾಮಾನುಗಳ ತಯಾರಿಕೆ; ಗರಿಯಿಂದ ಸಾಮಾನುಗಳ ತಯಾರಿಕೆ; ಆಟದ ಸಾಮಾನುಗಳು ಮತ್ತು ಬೊಂಬೆ ಮಾಡುವುದು; ರಬ್ಬರ್ ವಸ್ತುಗಳು ಮತ್ತು ರಬ್ಬರ್ ಅಚ್ಚುಗಳು; ಕಸೂತಿ ಕೆಲಸ ಮತ್ತು ವಸ್ತುಗಳು.
  • ಗುಡಿಸಲು ಕೈಗಾರಿಕೆಗಳಲ್ಲಿ ತೊಡಕಿಲ್ಲದ ಮತ್ತು ಸಾಮಾನ್ಯವಾದ ಉತ್ಪಾದನ ತಂತ್ರಗಳನ್ನು ಉಪಯೋಗಿಸುತ್ತಾರೆ. ಅನೇಕ ಕೈಗಾರಿಕೆಗಳಲ್ಲಿ ಹಳೆಯ ಕಾಲದ ಯಂತ್ರ ಸಲಕರಣೆಗಳಿಂದ ಉತ್ಪಾದನ ಕಾರ್ಯ ನಡೆಯುತ್ತದೆ. ಕೆಲವರು ಸುಧಾರಿಸಿದ ಉತ್ಪಾದನ ಕ್ರಮ ಮತ್ತು ಉಪಕರಣಗ ಳನ್ನು ಬಳಸುವುದೂ ವಾಡಿಕೆಯಲ್ಲಿದೆ. ಈ ಕೈಗಾರಿಕೆಗಳು ತಾಂತ್ರಿಕ ಪ್ರಗತಿಯಿಂದ ಸಂಪೂರ್ಣವಾಗಿ ವಂಚಿತವಾಗಿಯೇನೂ ಇಲ್ಲ. ಆದರೆ ನವೀನ ಉತ್ಪಾದನ ವಿಧಾನಗಳನ್ನು ಅಳವಡಿಸುವುದರಲ್ಲಿ ನಿಧಾನ ಹೆಚ್ಚು. ಕೆಲವು ಕೈಗಾರಿಕೆಗಳಲ್ಲಿ ವಿದ್ಯುಚ್ಛಕ್ತಿಯನ್ನು ಬಳಸುವುದುಂಟು.
  • ಆಧುನಿಕ ಕಾರ್ಖಾನೆಗಳೊಂದಿಗೆ ಹೊಂದಿಕೊಂಡು ಉತ್ಪಾದನ ಕಾರ್ಯನಿರತರಾದ ಗುಡಿಸಿಲು ಕೈಗಾರಿಕೆಗಳು ಇವೆ. ಗಿರಣಿಯ ನೂಲನ್ನು ಬಳಸಿಕೊಂಡು ಮಗ್ಗದಲ್ಲಿ ಬಟ್ಟೆ ನೇಯುವುದು ಒಂದು ಉದಾಹರಣೆ. ಕಮ್ಮಾರರಲ್ಲಿ ತಿರುಗು ಯಂತ್ರದ ಬಳಕೆ ಹೆಚ್ಚುತ್ತಿದೆ. ಹೀಗೆ ನಿಧಾನವಾಗಿಯಾ ದರೂ ತಾಂತ್ರಿಕ ಪ್ರಗತಿ ಗುಡಿಸಿಲು ಕೈಗಾರಿಕೆಗಳ ಉತ್ಪಾದನ ಕ್ರಮವನ್ನು ಬದಲಾಯಿಸುತ್ತಿದೆ. ಅನೇಕ ಗುಡಿಸಿಲು ಕೈಗಾರಿಕೆಗಳಲ್ಲಿ ವಿಶೇಷ ಕುಶಲತೆಯ ಅವಶ್ಯಕತೆಯಿರುವುದಿಲ್ಲ. ಅನೇಕ ಉಪಯುಕ್ತ ಸರಕುಗಳನ್ನು ಸಾಧಾರಣವಾದ ಕುಶಲತೆಯಿಂದಲೇ ಉತ್ಪಾದಿಸಬಹುದು.
  • ಆದರೆ ಕೆಲವು ಕೈಗಾರಿಕೆಗಳಲ್ಲಿ ಉನ್ನತ ಮಟ್ಟದ ಕುಶಲತೆ ಮತ್ತು ಕೆಲಸಗಾರಿಕೆ ಅಗತ್ಯವಾಗುತ್ತದೆ. ವಂಶಪಾರಂಪರ್ಯವಾದ ಕೌಶಲದ ಬಲದಿಂದ ನಡೆಯುವ ಕೈಗಾರಿಕೆಗಳೂ ಉಂಟು. ಕುಶಲ ಕರ್ಮಿ ತನ್ನ ಮಕ್ಕಳಿಗೆ ತರಬೇತಿಕೊಟ್ಟು ಅವರನ್ನು ಆ ಕೆಲಸದಲ್ಲಿ ನಿಪುಣರನ್ನಾಗಿ ಮಾಡು ತ್ತಾನೆ. ಈ ಕಾರಣದಿಂದಾಗಿ ಕೆಲವು ಉತ್ಪಾದನ ವಿಧಾನಗಳು ಮತ್ತು ಕೌಶಲಗಳು ಕೆಲವೇ ಕುಟುಂಬಗಳಿಗೆ ಸೀಮಿತವಾಗಿರುತ್ತವೆ. ಈಚಿನ ವರ್ಷಗಳಲ್ಲಿ ಕೆಲವು ವೃತ್ತಿ ಸಂಸ್ಥೆಗಳು ಗುಡಿಸಿಲು ಕೈಗಾರಿಕೆಯಲ್ಲಿ ತೊಡಗಿರುವ ಮತ್ತು ತೊಡಗುವ ಕೆಲಸಗಾರರಿಗೆ ತರಬೇತು ಒದಗಿಸುತ್ತಿವೆ. *ಆದಾಗ್ಯೂ ಇದು ಸಾಕಷ್ಟು ವ್ಯಾಪಕವಾಗಿಲ್ಲ. ಗುಡಿಸಿಲು ಕೈಗಾರಿಕೆಯಲ್ಲಿ ತೊಡಗಿರುವ ಬಹಳ ಜನ ಯಾವ ವಿಧವಾದ ವ್ಯವಸ್ಥಿತ ತರಬೇತನ್ನೂ ಪಡೆದಿಲ್ಲದಿರುವುದೇ ಸಾಮಾನ್ಯವಾಗಿದೆ. ಎಲ್ಲ ಗುಡಿಸಿಲು ಕೈಗಾರಿಕೆಗಳಿಗೂ ಸಾಮಾನ್ಯವಾದ ಕೆಲವು ಸಮಸ್ಯೆಗಳುಂಟು. ಬಂಡವಾಳದ ಅಭಾವ ಒಂದು ಮುಖ್ಯ ಸಮಸ್ಯೆ. ಈ ಕೈಗಾರಿಕೆಗಳಿಗೆ ಅಲ್ಪ ಬಂಡವಾಳವೇ ಸಾಕಾದರೂ ಅಷ್ಟು ಬಂಡವಾಳವನ್ನು ಕೂಡ ಅನೇಕ ಉತ್ಪಾದಕರು ಹೊಂದಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಬೃಹತ್ ಕೈಗಾರಿಕೆಗಳಂತೆ ಇವಕ್ಕೂ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳು ಬೇಕಾಗುತ್ತವೆ. *ಉಪಕರಣಗಳು, ಯಂತ್ರಗಳು ಮತ್ತು ಕಟ್ಟಡಗಳಿಗಾಗಿ ದೀರ್ಘಾವಧಿ ಸಾಲಗಳು ಅಗತ್ಯ. ಕಚ್ಚಾ ಸಾಮಗ್ರಿಯನ್ನು ಕೊಳ್ಳಲು, ತಯಾರಾದ ಪದಾರ್ಥಗಳನ್ನು ಮತ್ತು ತಯಾರಿಕೆಗೆ ಬೇಕಾದ ವಸ್ತುಗಳನ್ನು ಶೇಖರಿಸಲು, ಮಾರಾಟ ಮಾಡಲು ಮತ್ತು ಕೆಲಸಗಾರರಿಗೆ ಕೂಲಿ ಕೊಡಲು ಅಲ್ಪಾವಧಿ ಸಾಲ ಬೇಕಾಗುತ್ತದೆ. ಗುಡಿಸಿಲು ಕೈಗಾರಿಕೆಗಳು ಸಂಘಟಿತ ಉದ್ಯಮಗಳಲ್ಲವಾದ್ದರಿಂದ ಬಂಡವಾಳ ಒದಗಿಸುವುದು ಮತ್ತು ಸಾಲ ಪಡೆಯುವುದು ಸುಲಭವಲ್ಲ. ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳಿಂದ ಹಣ ಪಡೆಯಲು ಇವು ಅಗತ್ಯವಾದ ಆಧಾರ ಮತ್ತು ಆಸ್ತಿ ಒದಗಿಸಲಾ ರವು. ಈ ಕಾರಣಗಳಿಂದಾಗಿ ಇವು ಸಂಘಟಿತ ಸಂಸ್ಥೆಗಳಿಂದ ಹಣ ಪಡೆಯುವುದು ಕಷ್ಟ. ಗುಡಿಸಿಲು ಕೈಗಾರಿಕೆಗಳಲ್ಲಿ ತೊಡಗಿರುವವರಿಗೆ ಅಗತ್ಯವಾದ ಬಂಡವಾಳ ಬಹುತೇಕ ಒದಗುತ್ತಿರುವುದು ಸಾಹುಕಾರರು ಮತ್ತು ವರ್ತಕರಿಂದ, ಸ್ನೇಹಿತರಿಂದ ಮತ್ತು ಸಂಬಂಧಿಕರಿಂದ ಹಣ ಪಡೆಯುವುದೂ ಸಾಮಾನ್ಯ. ಕೆಲವು ದೇಶಗಳಲ್ಲಿ ಸರ್ಕಾರಗಳು ಪರಿಮಿತ ಗಾತ್ರದಲ್ಲಿ ಈ ಕೈಗಾರಿಕೆಗಳಿಗೆ ಹಣ ಸಹಾಯ ಮಾಡುತ್ತವೆ. ಪರಿಸ್ಥಿತಿಗಳಲ್ಲಿ ಸಹಕಾರ ಸಂಘಗಳು ಹಣವನ್ನೂ ಕಚ್ಚಾ ಸಾಮಗ್ರಿಯನ್ನೂ ಒದಗಿಸುತ್ತವೆ.
  • ಭಾರತದಲ್ಲಿ ಈಗ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಇವಕ್ಕೆ ಹಣ ಒದಗಿಸಲು ಆಸಕ್ತಿ ವಹಿಸುತ್ತಿವೆ. ಇಷ್ಟಾದರೂ ಗುಡಿಸಿಲು ಕೈಗಾರಿಕೆಗಳ ಹಣಕಾಸಿನ ಸ್ಥಿತಿ ತೃಪ್ತಿಕರವಾಗಿಲ್ಲವೆಂದೇ ಹೇಳಬೇಕು. ಕಚ್ಚಾ ಸಾಮಗ್ರಿಯನ್ನು ಹೊಂದಿಸಿಕೊಳ್ಳುವುದು ಗುಡಿಸಲು ಕೈಗಾರಿಕೆ ಗಳ ಮತ್ತೊಂದು ಮುಖ್ಯ ಸಮಸ್ಯೆ. ವಿವಿಧ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಅವಕ್ಕೆ ನಾನಾ ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಚ್ಚಾ ಸಾಮಗ್ರಿಕೊಳ್ಳಲು ಮತ್ತು ಸಾಕಷ್ಟು ಶೇಖರಿಸಲು ಹಣ ಇರುವುದಿಲ್ಲ.
  • ಈ ವಿಚಾರದಲ್ಲಿ ಬೃಹದ್ಗಾತ್ರ ಕೈಗಾರಿಕೆಗಳ ಸ್ಥಿತಿ ಉತ್ತಮ ವಾದದ್ದು. ಹೆಚ್ಚು ಗಾತ್ರದಲ್ಲಿ ಕಚ್ಚಾ ಸಾಮಗ್ರಿಯನ್ನೂ ತಮಗೆ ಬೇಕಾದ ಇತರ ವಸ್ತುಗಳನ್ನೂ ಕೊಳ್ಳುತ್ತವೆ. ಆದ್ದರಿಂದ ಆ ಕೈಗಾರಿಕೆಗಳಿಗೆ ಅವನ್ನು ಕೊಳ್ಳುವಾಗ ಬೆಲೆಯಲ್ಲಿ ಮಿಗಿತಾಯವಾಗುತ್ತದೆ. ಗುಡಿಸಿಲು ಕೈಗಾರಿಕೆಗಳಿಗೆ ಈ ಅವಕಾಶಗಳಿರುವುದಿಲ್ಲ. ಈ ಉತ್ಪಾದಕರು ಕೆಲವು ವಾರಗಳಿಗೆ ಸಾಕಾಗುವಷ್ಟು ಕೂಡ ಕಚ್ಚಾ ಸಾಮಗ್ರಿಯನ್ನು ಕೊಂಡು ಶೇಖರಿಸುವುದಕ್ಕಾಗುವುದಿಲ್ಲ. ಅಲ್ಲದೆ ಇವರು ಅವನ್ನು ಅಲ್ಪ ಪ್ರಮಾಣಗಳಲ್ಲಿ ಕೊಳ್ಳುವುದರಿಂದ ಒಟ್ಟು ಕೊಳ್ಳುವಿಕೆಯ ಅನುಕೂಲಗಳು ಲಭ್ಯವಾಗುವುದಿಲ್ಲ.
  • ಗುಡಿಸಲು ಕೈಗಾರಿಕೆಯ ಉತ್ಪಾದಕರು ತಮಗೆ ಅಗತ್ಯವಾದ ಕಚ್ಚಾ ಸಾಮಗ್ರಿಯನ್ನು ವರ್ತಕರಿಂದಲೋ ದಳ್ಳಾಳಿಗಳ ಮೂಲಕವೋ ಪಡೆಯುತ್ತಾರೆ. ತಾವು ತಯಾರಿಸಿದ ವಸ್ತುಗಳನ್ನು ಸಾಮಾನ್ಯವಾಗಿ ಅವರಿಗೇ ಮಾರುತ್ತಾರೆ. ಕೆಲವು ವೇಳೆ ಕಚ್ಚಾಸಾಮಗ್ರಿಯನ್ನು ಸ್ಥಳೀಯ ವರ್ತಕರಿಂದ ಸಾಲದ ಮೇಲೆ ಪಡೆಯುತ್ತಾರೆ. ತಯಾರಿಸಿದ ವಸ್ತುಗಳನ್ನು ಮಾರಿದ ಮೇಲೆ ಅವರಿಗೆ ಹಣ ಸಂದಾಯ ಮಾಡುತ್ತಾರೆ. ಕಚ್ಚಾಸಾಮಗ್ರಿಯ ಮತ್ತು ಉತ್ಪಾದನೆಗೆ ಅಗತ್ಯವಾದ ಇತರ ವಸ್ತುಗಳ ಪುರೈಕೆ ಸಾಕಾಗದೆ ಗುಡಿಸಿಲು ಕೈಗಾರಿಕೆಗಳ ಉತ್ಪಾದನೆ ಆಗಾಗ್ಗೆ ನಿಲ್ಲುವುದು ಸಾಮಾನ್ಯ.

ವ್ಯವಸ್ಥಿತ ಮಾರುಕಟ್ಟೆಗಳಿಲ್ಲದಿರುವುದು[ಬದಲಾಯಿಸಿ]

  • ಗುಡಿಸಲು ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಪದಾರ್ಥಗಳನ್ನು ಮಾರಲು ವ್ಯವಸ್ಥಿತ ಮಾರುಕಟ್ಟೆಗಳಿಲ್ಲ. ಅವುಗಳ ಉತ್ಪಾದಕರು ಬೃಹದ್ಗಾತ್ರ ಕೈಗಾರಿಕೆಗಳಂತೆ, ತಮ್ಮ ಸರಕುಗಳ ಮಾರಾಟಕ್ಕೆ ಸೂಕ್ತವಾದ ಮತ್ತು ಸಂಘಟಿತವಾದ ಏರ್ಪಾಡು ಮಾಡಲು ಶಕ್ತರಲ್ಲ. ಅನೇಕ ವೇಳೆ ಸರಕುಗಳನ್ನು ನೇರವಾಗಿ ತಾವೇ ತಮ್ಮ ಹಳ್ಳಿಯ ಅಥವಾ ಸುತ್ತಮುತ್ತಲಿನ ಹಳ್ಳಿಗಳ ಗ್ರಾಹಕರಿಗೆ ವಿಕ್ರಯಿಸುತ್ತಾರೆ. ಕೆಲವರು ಹತ್ತಿರದ ಸಂತೆಗಳಿಗೆ ಸರಕುಗಳನ್ನು ತೆಗೆದುಕೊಂಡು ಹೋಗಿ ವಿಕ್ರಯಿಸುತ್ತಾರೆ. ಹಲವೊಮ್ಮೆ ಸರಕುಗಳನ್ನು ಪಟ್ಟಣಗಳಲ್ಲಿಯ ಸಗಟು ವ್ಯಾಪಾರಿಗೋ ಚಿಲ್ಲರೆ ವ್ಯಾಪಾರಿಗೋ ವಿಕ್ರಯಿಸುವುದುಂಟು. ದಳ್ಳಾಳಿಗಳನ್ನು ಅಥವಾ ಬಂಡವಾಳಿಗರನ್ನು ಆಶ್ರಯಿಸುವ ಸಂದರ್ಭಗಳಿಲ್ಲದಿಲ್ಲ. ಅವರಿಂದ ಸಾಲವನ್ನೊ ಕಚ್ಚಾ ಸಾಮಗ್ರಿಯನ್ನೊ ಪಡೆದಿದ್ದು, ತಾವು ಉತ್ಪಾದಿಸಿದ ಸರಕುಗಳನ್ನು ಅವರಿಗೇ ಒಪ್ಪಿಸುವುದುಂಟು.
  • ಅವರು ಆ ಸಾಮಾನುಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲೋ ದೂರದ ಮಾರುಕಟ್ಟೆಗಳಲ್ಲೋ ವಿಕ್ರಯಿಸಿ ಹೆಚ್ಚು ಲಾಭ ಪಡೆಯುವುದುಂಟು. ಗುಡಿಸಿಲು ಕೈಗಾರಿಕೆಗಳ ಸರಕುಗಳ ಮಾರಾಟ ಕಷ್ಟವಿರುವುದರಿಂದ ಕೆಲವು ದೇಶಗಳಲ್ಲಿ ಸರ್ಕಾರಗಳು ಇವುಗಳ ಮಾರಾಟಕ್ಕೆ ಸಂಸ್ಥೆಗಳನ್ನು ಸ್ಥಾಪಿಸಿವೆ. ಸಹಕಾರ ಸಂಘಗಳೂ ಇವುಗಳ ಮಾರಾಟಕ್ಕೆ ಸಹಾಯ ಮಾಡುತ್ತವೆ. ಗುಡಿಸಿಲು ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಹಲವು ಸರಕುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯುಂಟು.

ವಿವಿಧ ದೇಶಗಳಲ್ಲಿ[ಬದಲಾಯಿಸಿ]

  • ಹಿಂದುಳಿದ ದೇಶಗಳಲ್ಲಿ ಮಾತ್ರವಲ್ಲದೆ ಆರ್ಥಿಕಾಭಿವೃದ್ಧಿ ಹೊಂದಿದ ದೇಶಗಳಲ್ಲೂ ಗುಡಿಸಲು ಕೈಗಾರಿಕೆಗಳು ವ್ಯಾಪಕವಾಗಿವೆ. ದೊಡ್ಡ ಯಂತ್ರಗಳನ್ನು ಸ್ಥಾಪಿಸಲಾಗದ, ಸಣ್ಣ ಹಾಗೂ ಸೂಕ್ಷ್ಮ ಯಂತ್ರಗಳನ್ನು ಬಳಸಬೇಕಾಗಿರುವ, ಕೌಶಲಪೂರ್ಣವಾದ, ಉತ್ಪಾದನ ಕ್ಷೇತ್ರಗಳಲ್ಲಿ ಗುಡಿಸಲು ಕೈಗಾರಿಕೆಗಳಿವೆ. ಕೆಲವು ಗ್ರಾಹಕರು ಗುಡಿಸಿಲು ಕೈಗಾರಿಕೆಗಳ ವಸ್ತುಗಳನ್ನೇ ಬೇಡುವುದರಿಂದ ಕೆಲವು ವಲಯಗಳಲ್ಲಿ ಈ ಕೈಗಾರಿಕೆಗಳು ಉಳಿದುಕೊಂಡು ಬಂದಿವೆ. ಆರ್ಥಿಕವಾಗಿ ಹಿಂದುಳಿದಿರುವ ದೇಶಗಳಲ್ಲಿ ಕೆಲವು ಮುಖ್ಯ ಕಾರಣಗಳಿಗಾಗಿ ಗುಡಿಸಿಲು ಕೈಗಾರಿಕೆಗಳಿಗೆ ಉತ್ತೇಜನ ಕೊಡಲಾಗುತ್ತಿದೆ. ಈ ಕೈಗಾರಿಕೆಗಳು ನಿರುದ್ಯೋಗ ಸಮಸ್ಯೆಯನ್ನು ದಮನ ಮಾಡಲು ಸಹಾಯಕವಾಗುತ್ತವೆ.
  • ಸ್ಥಳೀಯವಾಗಿ ದೊರೆಯುವ ಕೌಶಲ, ಕಚ್ಚಾಸಾಮಗ್ರಿ ಮುಂತಾದವುಗಳನ್ನು ಉಪಯೋಗಿಸಿಕೊಂಡು ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ತಯಾರಿಸಿ ಅವರ ಬೇಡಿಕೆಗಳನ್ನು ಇವು ಪೂರೈಸುತ್ತವೆ. ದೇಶದ ಐಶ್ವರ್ಯ ಮತ್ತು ವರಮಾನಗಳ ವಿತರಣೆಯಲ್ಲಿ ಅಸಮತೆಯನ್ನು ಕಡಿಮೆ ಮಾಡಲು ಈ ಕೈಗಾರಿಕೆಗಳು ಸಹಾಯಕವಾಗುವುವೆಂದು ನಂಬಲಾಗಿದೆ. ಈ ಕಾರಣಗಳಿಗಾಗಿ ಹಿಂದುಳಿದ ರಾಷ್ಟ್ರಗಳು ಈ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಗುಡಿಸಿಲು ಕೈಗಾರಿಕೆಗಳು ಎಲ್ಲ ದೇಶಗಳಲ್ಲೂ ಕಂಡು ಬಂದರೂ ಅವುಗಳಲ್ಲಿ ತೊಡಗಿಸಿರುವ ಬಂಡವಾಳ, ಕೆಲಸ ಮಾಡುವ ಕೂಲಿ ಗಾರರು, ರಾಷ್ಟ್ರದ ವರಮಾನಕ್ಕೆ ಅವುಗಳ ಕೊಡುಗೆ ಇವುಗಳ ಬಗ್ಗೆ ಖಚಿತವಾದ ಅಂಕಿಅಂಶಗಳು ದೊರೆಯುವುದಿಲ್ಲ. ಪ್ರಪಂಚದ ಅತ್ಯಂತ ಮುಂದುವರಿದ ರಾಷ್ಟ್ರವಾದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಗುಡಿಸಿಲು ಕೈಗಾರಿಕೆಗಳು ಇವೆ.
  • ಆ ದೇಶದಲ್ಲಿ ಈ ಕೈಗಾರಿಕೆಗಳು ನಗರಗಳಲ್ಲೂ ಪಟ್ಟಣಗಳಲ್ಲೂ ವ್ಯಾಪಕವಾಗಿವೆ. ಅವು ವ್ಯವಸಾಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಅಪರೂಪ. ಆ ದೇಶದಲ್ಲಿ ಸಾಮಾನ್ಯವಾಗಿ ಕಸೂತಿ, ಕೃತಕ ಹೂ, ಗುಂಡು ಸೂಜಿ, ಗುಂಡಿಗಳು, ಮಕ್ಕಳ ಬಟ್ಟೆ, ಆಟಿಕೆ ಮತ್ತು ಗೊಂಬೆ, ರಟ್ಟಿನ ಪೆಟ್ಟಿಗೆ, ಆಹಾರ, ಒಡವೆ, ಕುಂಚ ಇತ್ಯಾದಿಗಳ ತಯಾರಿಕೆಯಲ್ಲಿ ತೊಡಗಿವೆ. ಕೆಲವು ವ್ಯವಸಾಯ ಪ್ರದೇಶಗಳಲ್ಲಿ ರೈತರ ಹೆಂಗಸರು ಬಟ್ಟೆಗಳನ್ನು ಮಾಡುವುದರಲ್ಲೂ, ಹೊಗೆಸೊಪ್ಪಿನ ವಸ್ತುಗಳ ತಯಾರಿಕೆಯಲ್ಲಿಯೂ ತೊಡಗಿರುತ್ತಾರೆ. ಅವರಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ನಗರದ ಉತ್ಪಾದಕರು ಒದಗಿಸುತ್ತಾರೆ. ಅನಂತರ ಅವರು ತಯಾರಿಸಿದ ವಸ್ತುಗಳನ್ನು ಮಾರಾಟಕ್ಕಾಗಿ ಸಂಗ್ರಹ ಮಾಡುತ್ತಾರೆ. ಬ್ರಿಟನ್ನಿನಲ್ಲಿ ಗುಡಿಸಿಲು ಕೈಗಾರಿಕೆಗಳು ಬಹಳ ಕಡಿಮೆ. ಇರುವ ಗುಡಿಸಿಲು ಕೈಗಾರಿಕೆಗಳಲ್ಲಿ ಬಹುಪಾಲು ಉಡುಪುಗಳ ತಯಾರಿಕೆಯಲ್ಲಿ ತೊಡಗಿವೆ.
  • ಕೆಲವು ಕಲಾತ್ಮಕ ವಸ್ತುಗಳೂ ತಯಾರಾಗುತ್ತವೆ. ಫ್ರಾನ್ಸಿನಲ್ಲಿ ಗುಡಿಸಿಲು ಕೈಗಾರಿಕೆಗಳು ಬಹಳವಾಗಿವೆ. ಅವುಗಳಲ್ಲಿ ಹೆಚ್ಚು ಮಂದಿ ಕೆಲಸಗಾರರು ಉಡುಪುಗಳ ತಯಾರಿಕೆ ಮತ್ತು ಕಸೂತಿ ಕೆಲಸದಲ್ಲಿ ತೊಡಗಿದ್ದಾರೆ. ಗುಡಿಸಲು ಕೈಗಾರಿಕೆಗಳಲ್ಲಿ ಪಾದರಕ್ಷೆ ತಯಾರಿಕೆ ಸಾಮಾನ್ಯ. ಪಾದರಕ್ಷೆ ಉದ್ಯಮಗಳಲ್ಲಿ ಬಹಳವಾಗಿ ಗಂಡಸರೇ ಕೆಲಸ ಮಾಡುತ್ತಾರೆ. ಇವು ನಗರಗಳ ಬಳಿ ಹೆಚ್ಚು. ಪ್ಯಾರಿಸ್ ಮತ್ತು ಇತರ ಮುಖ್ಯ ನಗರಗಳಲ್ಲಿ ಅನೇಕ ಗುಡಿಸಿಲು ಕೈಗಾರಿಕೆಗಳು ಕೃತಕ ಹೂಗಳು ಮತ್ತು ಇತರ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತವೆ. ಇನ್ನು ಕೆಲವು ಸರಿಗೆ, ಗರಿ ಕೆಲಸ, ಪೂಜಾವಸ್ತುಗಳು, ಒಡವೆ, ಕೆತ್ತನೆ ಕೆಲಸ, ಕೊಡೆ ಇತ್ಯಾದಿಗಳ ತಯಾರಿಕೆಯಲ್ಲಿ ತೊಡಗಿವೆ. ರಷ್ಯದಲ್ಲಿ ಕ್ರಾಂತಿಗೆ ಮುಂಚೆ ಗುಡಿಸಿಲು ಕೈಗಾರಿಕೆಗಳು ಅತ್ಯಂತ ವ್ಯಾಪಕವಾಗಿದ್ದುವು.
  • ಆಗ ಅವು ಬಹುಮಟ್ಟಿಗೆ ಕೃಷಿಗೆ ಅಗತ್ಯವಾದ ವಸ್ತುಗಳನ್ನು- ಮರದ ಸಾಮಾನು, ಮರದ ತಟ್ಟೆಗಳು ಮತ್ತು ಚಮಚ, ಆಟಿಕೆ, ಚಾಪೆ ಮುಂತಾದವನ್ನು-ಉತ್ಪಾದಿಸುತ್ತಿದ್ದುವು. ಚರ್ಮ ಹದಮಾಡುವುದು, ಕುರಿ ಚರ್ಮದಿಂದ ಉಡುಪು ತಯಾರಿಕೆ, ಇಟ್ಟಿಗೆ ಮತ್ತು ಹೆಂಚು ತಯಾರಿಕೆ-ಇವು ಇನ್ನೂ ಕೆಲವು ಕೈಗಾರಿಕೆಗಳು. ಈಚಿನ ವರ್ಷಗಳಲ್ಲಿ ರಷ್ಯದಲ್ಲಿ ಗುಡಿಸಿಲು ಕೈಗಾರಿಕೆಗಳು ಕ್ಷೀಣಿಸುತ್ತಿರುವಂತೆ ಕಾಣುತ್ತದೆ. ಈಗ ಇರುವ ಗುಡಿಸಿಲು ಕೈಗಾರಿಕೆಗಳಿಗೆ ಸರ್ಕಾರ ಮತ್ತು ಸಹಕಾರ ಸಂಘಗಳು ಕಚ್ಚಾ ಸಾಮಗ್ರಿ ಮತ್ತು ಬಂಡವಾಳ ಒದಗಿಸುತ್ತವೆ. ಇವು ಉತ್ಪತ್ತಿ ಮಾಡಿದ ವಸ್ತುಗಳನ್ನು ಸರ್ಕಾರ ಅಥವಾ ಸಹಕಾರ ಸಂಘಗಳು ಸಂಗ್ರಹಿಸಿ ಮಾರಾಟಕ್ಕೆ ತಕ್ಕ ವ್ಯವಸ್ಥೆ ಮಾಡುತ್ತವೆ.
  • ಭಾರತದಲ್ಲಿ ಗುಡಿಸಿಲು ಕೈಗಾರಿಕೆಗಳು ಪ್ರಾಚೀನ ಕಾಲದಿಂದಲೂ ಬಂದಿವೆ. ಬ್ರಿಟಿಷರ ಕಾಲದಲ್ಲಿ ಯಂತ್ರೋದ್ಯಮ ಕೈಗಾರಿಕೆಗಳ ಪೈಪೋಟಿಯಿಂದ ಇವು ಕ್ಷೀಣ ಸ್ಥಿತಿಗೆ ಬಂದಿದ್ದವು. ಸ್ವಾತಂತ್ರ್ಯದ ಅನಂತರ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು ಗೃಹ ಕೈಗಾರಿಕೆಗಳಿಗೆ ಉತ್ತೇಜ ನ ನೀಡಿ ಅವುಗಳ ಅಭಿವೃದ್ಧಿಗೆ ನಾನಾ ರೀತಿಯಲ್ಲಿ ಶ್ರಮಿಸುತ್ತಿವೆ. ಈ ಕೈಗಾರಿಕೆಗಳು ನಾನಾ ವಿಧವಾದ ಉಪಯುಕ್ತವಾದ ಮತ್ತು ಭೋಗವಸ್ತುಗಳನ್ನು ತಯಾರಿಸುತ್ತಿವೆ. ಗುಡಿಸಲು ಕೈಗಾರಿಕೆಗಳು ಮನೆಗೆಲಸದ ಪದಾರ್ಥಗಳಾದ ಕೊಡಗಳು, ನೀರಿನ ಹೂಜಿಗಳು, ಲೋಟಗಳು, ತಟ್ಟೆಗ ಳು ಮೊದಲಾದವನ್ನು ಹಿತ್ತಾಳೆ ಮತ್ತು ತಾಮ್ರದಿಂದ ತಯಾರಿಸುತ್ತಿವೆ. ಚಿನಿವಾರಿಕೆ ಭಾರತದ ಅತಿ ಪ್ರಾಚೀನ ಗುಡಿಸಲು ಕೈಗಾರಿಕೆ, ಇವು ಹಳ್ಳಿಗಳು, ಪಟ್ಟಣ ಮತ್ತು ನಗರಗಳಲ್ಲೂ ಹರಡಿವೆ.
  • ಇವು ಚಿನ್ನ ಮತ್ತು ಬೆಳ್ಳಿಯಿಂದ ಅನೇಕ ವಿಧವಾದ ಒಡವೆಗಳನ್ನು ತಯಾರಿಸುತ್ತಿವೆ. ಅಗರಬತ್ತಿ ಮತ್ತು ಧೂಪ ಸರಕು ಕೈಗಾರಿಕೆ ಕೆಲವು ಸಂಸಾರಗಳಲ್ಲಿ ಮಾತ್ರ ಕಾಣಬರುತ್ತದೆ. ಅವರಲ್ಲಿ ಮುಸಲ್ಮಾನರೇ ಹೆಚ್ಚು. ಶ್ರೀಗಂಧದ ಕೆತ್ತನೆ ಕೆಲಸ ಮತ್ತೊಂದು ಚಿರಪರಿಚಿತ ಗೃಹಕೈಗಾರಿಕೆ. ಸುಂದರ ಚಿತ್ರಗಳು, ದೇವರ ಮತ್ತು ಇತರ ಪ್ರತಿಮೆಗಳು ಶ್ರೀಗಂಧದ ಮರದಿಂದ ತಯಾರಾಗುತ್ತವೆ. ಇನ್ನೂ ಕೆಲವು ಗೃಹ ಕೈಗಾರಿಕೆಗಳು ಬೊಂಬು ಮತ್ತು ಬೆತ್ತದ ಕೆಲಸಗಳಲ್ಲಿ ತೊಡಗಿವೆ. ಅವು ಉಪಯುಕ್ತವಾದ ನಾನಾ ರೀತಿಯ ಬುಟ್ಟಿಗಳು, ಕುರ್ಚಿಗಳು, ಅಚ್ಚ ಮಣೆಗಳು ಮತ್ತು ಮಂಚಗಳನ್ನು ಸಹ ಉತ್ಪಾದಿಸುತ್ತವೆ. ಕೊಂಬಿನ ಬಾಚಣಿಗೆ, ಹೂವಿನ ಕುಂಡಗಳು, ಅಳತೆಕೋಲುಗಳು, ಆಟದ ಸಾಮಾನುಗಳು, ಹಕ್ಕಿಗಳು, ಬೂದಿ ಹರಿವಾಣಗಳು ಮುಂತಾದ ಉಪಯುಕ್ತವಾದ ಸಾಮಾನುಗಳ ತಯಾರಿಕೆಯೂ ಗುಡಿಸಲು ಕೈಗಾರಿಕೆಯೇ. ಗ್ರಾಮಪ್ರದೇಶಗಳಲ್ಲಿ ಅನೇಕ ಗುಡಿಸಿಲು ಕೈಗಾರಿಕೆಗಳುಂಟು. ಅವುಗಳಲ್ಲಿ ಬಹುಪಾಲು ಕೃಷಿ ಉಪಕರಣಗಳ ತಯಾರಿಕೆಯಲ್ಲಿ ತೊಡಗಿವೆ.[೧]

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ