ಗಿಡಿಂಗ್ಸ್, ಫ್ರಾಂಕ್ಲಿನ್ ಹೆನ್ರಿ

ವಿಕಿಪೀಡಿಯ ಇಂದ
Jump to navigation Jump to search

ಗಿಡಿಂಗ್ಸ್, ಫ್ರಾಂಕ್ಲಿನ್ ಹೆನ್ರಿ[ಬದಲಾಯಿಸಿ]

(1885-1931)ಅಮೇರಿಕ ಸಂಯುಕ್ತ ಸಂಸ್ಥಾನಗಳ ಅತ್ಯಂತ ಪ್ರತಿಭಾವಂತರಾದ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬ. ಅಲ್ಲಿನ ಸಮಾಜಶಾಸ್ತ್ರದ ಸಕ್ರಮ ಬೆಳೆವಣಿಗೆಯ ಪ್ರವರ್ತಕನೆಂದು ಪ್ರಸಿದ್ಧನಾಗಿದ್ದಾನೆ. ಈತ ಹುಟ್ಟಿದ್ದು ಕನೆಕ್ಟಿಕಟ್ನ ಷರ್ಮನ್ ಎಂಬ ಪಟ್ಟಣದಲ್ಲಿ. ಈತನ ತಂದೆ ತಾಯಿಗಳು ಪ್ಯುರಿಟನ್ ಪಂಥಕ್ಕೆ ಸೇರಿದವರು.ಮನೆಯ ವಾತಾವರಣ ಬೌದ್ಧಿಕ ಜೀವನಕ್ಕೆ ಉತ್ತೇಜನ ಕೊಡುವ ರೀತಿಯದಾಗಿದ್ದುದರಿಂದ ಮೊದಲಿನಿಂದಲೂ ಈತನಿಗೆ ಓದುವ ಹವ್ಯಾಸ ಅಂಟಿ ಬಂತು. ಕಾಲೇಜು ಪ್ರವೇಶಿಸುವುದಕ್ಕೆ ಮೊದಲೇ ಅನೇಕ ಪ್ರೌಢಗ್ರಂಥಗಳನ್ನು ಓದಿದ್ದ.ಇದಲ್ಲದೆ ವಿವಾದಾಸ್ಪದವಾದ ಅನೇಕ ಬರೆವಣಿಗೆಗಳನ್ನೂ ಅಧ್ಯಯನ ಮಾಡಿ ತನ್ನ ಸ್ವಂತ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯನ್ನು ಪಡೆದಿದ್ದ. ಡಾರ್ವಿನ್, ಹಕ್್ಸಲಿ, ಜಾನ್ ಟಿಂಡಾಲ್ ಮತ್ತು ಸ್ಪೆನ್ಸರ್ ಇವರುಗಳ ಕೃತಿಗಳನ್ನು ವಿಮರ್ಶನದೃಷ್ಟಿಯಲ್ಲಿ ಈತ ಅಧ್ಯಯನ ಮಾಡಿದ್ದ.

ಗಿಡಿಂಗ್ಸ್ ನ ತಾತ್ತ್ವಿಕ ಹಿನ್ನೆಲೆಗೆ ರೂಪಕೊಟ್ಟಿದ್ದ ಬರೆವಣಿಗೆಗಾರರಲ್ಲಿ ಮುಖ್ಯರಾದವರು ಆಡಂ ಸ್ಮಿತ್, ಅಗಸ್ಟ ಕಾಂಟ್, ಎಲ್. ಎಫ್. ವಾರ್ಡ್ ಮತ್ತು ಜಾನ್ ಸ್ಟೂಯರ್ಟ್ ಮಿಲ್-ಇವರು. ಇವರು ನಿರೂಪಿಸಿದ ವ್ಯಕ್ತಿತ್ವವಾದ ಗಿಡಿಂಗ್ಸ್ ನ ಬರೆವಣಿಗೆಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಬರುತ್ತದೆ. ಒಟ್ಟಿನಲ್ಲಿ ವ್ಯಕ್ತಿತ್ವವಾದ ಗಿಡಿಂಗ್ಸ್ ನ ಸಮಾಜಶಾಸ್ತ್ರದ ಸೈದ್ಧಾಂತಿಕ ನಿಲುವಾಗಿದೆ.

ಗಿಡಿಂಗ್ಸ್ 1877ರಲ್ಲಿ ಯೂನಿಯನ್ ಕಾಲೇಜಿನ ಪದವೀಧರನಾಗಿ 1888ರಿಂದ ಆರು ವರ್ಷಗಳ ಕಾಲ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿ 1894ರಲ್ಲಿ ಕೊಲಂಬಿಯ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕನಾಗಿ ನೇಮಕಗೊಂಡರು. ನಂತರ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪುರ್ಣಾವಧಿ ಸಮಾಜಶಾಸ್ತ್ರ ಅಧ್ಯಾಪಕರಾದವರಲ್ಲಿ ಈತ ಮೊದಲನೆಯವ.

ಗಿಡಿಂಗ್ಸ್ ಸಮಾಜಶಾಸ್ತ್ರ ಕ್ಷೇತ್ರವನ್ನು ಪ್ರವೇಶಿಸಿದಾಗ, ಅದು ನೀತಿಶಾಸ್ತ್ರದ ಮತ್ತು ಇತಿಹಾಸತತ್ತ್ವಶಾಸ್ತ್ರದ ಭಾಗವಾಗಿ ಪರಿಗಣಿಸಲ್ಪಟ್ಟಿತು. ವ್ಯಕ್ತಿತ್ವವಾದದ ಜೊತೆಗೆ. ಅಗಸ್ಟ ಕಾಂಟನ ಲೋಕಸಿದ್ಧವಾದ ಮತ್ತು ಸ್ಪೆನ್ಸರನ ವಿಕಾಸವಾದಗಳು ಆಗ್ಗೆ ಗಿಡಿಂಗ್ಸ್ ನ ನೂತನ ಸಮಾಜಶಾಸ್ತ್ರ ನಿರೂಪಣೆಗೆ ಸ್ಫೂರ್ತಿ ನೀಡಿದುವು. ಗಿಡಿಂಗ್ಸ್ ಸಂಖ್ಯಾಕಲನ ಶಾಸ್ತ್ರದಲ್ಲಿ ಪ್ರಾವೀಣ್ಯಗಳಿಸಿದುದಲ್ಲದೆ, ತನ್ನ ಸಂಶೋಧನೆಗಳಲ್ಲಿ ಅದನ್ನು ಗಣನೀಯವಾಗಿ ಬಳಸಿಕೊಂಡ. ಅಂಕಿ ಅಂಶಗಳ ಪರಿಶೀಲನೆಯಿಂದ ಸಮಾಜಶಾಸ್ತ್ರದ ಘನತೆ ಹೆಚ್ಚುವುದೆಂದು ಆತ ನಂಬಿದ್ದ. ಸಮಾಜಶಾಸ್ತ್ರ ವಾಸ್ತವಾಂಶಗಳ ಆಧಾರದ ಮೇಲೆ ಅನುಗಮನ ತಾರ್ಕಿಕ ಮಾರ್ಗವನ್ನು ಅನುಸರಿಸಿ ತನ್ನ ತತ್ತ್ವಗಳನ್ನು ನಿರೂಪಿಸಬೇಕು-ಎಂಬುದು ಆತನ ನಿಲುವು.