ಕಗ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಗ್ಗ ಪದದ ಅರ್ಥ ಇಂದ ಪುನರ್ನಿರ್ದೇಶಿತ)



ಕಗ್ಗ ಎಂಬ ಪದಕ್ಕೆ ಹೊಸಗನ್ನಡದಲ್ಲಿ ಇರುವ ಅರ್ಥ ಎಲ್ಲರಿಗೂ ತಿಳಿದಿದೆ - ಕೆಲಸಕ್ಕೆ ಬಾರದ್ದು, ನಿಷ್ಪ್ರಯೋಜಕ, ನಿಸ್ಸತ್ವ ....ಇವೇ ಮೊದಲಾದ ಹೀನಾರ್ಥಗಳು ಕಂಡುಬರುತ್ತವೆ.

(ಕಗ್ಗ = {ನಾ} ೧. ಬೇಸರ ತರುವ ಹರಟೆ . {ಗು} ೨. ಕೆಲಸಕ್ಕೆ ಬಾರದ ......ಇದು ಕನ್ನಡ ರತ್ನ ಕೋಶ (ಪರಿಷ್ಕೃತ) ಪುಟ ೪೭)

ಕನ್ನಡಾಭಿಮಾನಿಗಳಿಗೆಲ್ಲರಿಗೂ ಈ ಪದವನ್ನು ಕೇಳಿದಕೂಡಲೇ ನೆನಪಿಗೆ ಬರುವುದು, ಸನ್ಮಾನ್ಯ ಡಿ.ವಿ.ಜಿ.ಯವರು. ಇವರ ಮಂಕುತಿಮ್ಮನ ಕಗ್ಗವು ಕನ್ನಡಿಗರ ಮನೆಮಾತಾಗಿದೆ. ಎಲ್ಲರ ಮೆಚ್ಚಿನ ಮನದ ಮಾತೂ ಆಗಿದೆ. ಅದನ್ನು ಯಾರೇ, ಯಾವಾಗಲೇ ಓದಲಿ, ಆಯಾ ಹೊತ್ತಿಗೆ, ಅವರವರ ಭಾವಕ್ಕೆ, ಸಂಸ್ಕಾರಕ್ಕೆ ತಕ್ಕಂತೆ ಅರ್ಥವಾಗುತ್ತಾ ಬರುತ್ತದೆ ಎಂಬುದು ಅನುಭವವೇದ್ಯ ವಾದುದು.

ಡಿ.ವಿ.ಜಿ. ಯವರು ತಮ್ಮ ಮಂಕುತಿಮ್ಮನ ಕಗ್ಗ ಕೃತಿಯಲ್ಲಿ ಆ ಪದವನ್ನು ಬಳಸಿರುವುದು ಎಷ್ಟು ಸೂಕ್ತವಾಗಿದೆ ಎನಿಸುವುದು, ಅದರ ನಿಜಾರ್ಥ, ಭಾವಾರ್ಥ, ಸೂಚ್ಯಾರ್ಥ, ಸಾಂದರ್ಭಿಕಾರ್ಥಗಳನ್ನು ತಿಳಿದು, ಅರಿತು ಪುನಶ್ಚರಣೆ ಮಾಡಿದಾಗ ಮಾತ್ರ.

"ಮಂಕುತಿಮ್ಮ", ವಾಸ್ತವವಾಗಿ "ಮಂಕ" ಅಲ್ಲ ; "ಕಗ್ಗ" ವಾಸ್ತವವಾಗಿ "ನಿಷ್ಪ್ರಯೋಜಕ" ಅಲ್ಲ ! ಉದಾತ್ತ ಆದರ್ಶಗಳನ್ನೂ , ನೀತಿಗಳನ್ನೂ ಕುರಿತು ಮಾತಾಡುವವರು, ಜನರ ಕಣ್ಣಿನಲ್ಲಿ ಮಂಕುಗಳು. ಅವರಾಡಿದ್ದು , ಲೋಗರ ತಿಳಿವಳಿಕೆಯಲ್ಲಿ ನೀರಸವಾದುದು, ಕಗ್ಗ .....ಆದರೆ "ಅರಿತು" ಓದಿದವರಿಗೆ ಅಂತಹವರು ಮಂಕುಗಳೂ ಅಲ್ಲ , ಅವರ ಮಾತು ಕಗ್ಗವೂ ಅಲ್ಲ  ! ಡಿ.ವಿ.ಜಿ. ಯವರ ಈ ಕೃತಿಯ ಶೀರ್ಷಿಕೆ ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೂ , ಅತ್ಯಫೂರ್ವವೂ ಹೌದು, ಎನಿಸುವುದು ಸಹಜ !!

"ಕಗ್ಗ" ಎಂಬ ಪದವು ತೋರಿಕೆಗೆ ದೇಶ್ಯ ಪದದಂತೆ ಕಂಡರೂ, ಯಾವುದೇ ಇತರ ದ್ರಾವಿಡ ಭಾಷೆಯಲ್ಲೂ ಅದಕ್ಕೆ ಜ್ಞಾತಿಪದಗಳಿಲ್ಲದಿರುವುದರಿಂದ, ಅದು ಬಹುಶಃ ದ್ರಾವಿಡವೂ ಅಲ್ಲ ; ಅಚ್ಚಕನ್ನಡವೂ ಅಲ್ಲವೆಂದೇ ಹೇಳಬಹುದು. ಅನ್ಯದೇಶ್ಯವಿರಬಹುದು ಎಂಬ ಊಹೆ ಇದೆ . "ನಿಷ್ಪ್ರಯೋಜಕ" ವೆಂಬ ಅರ್ಥವುಳ್ಳ "ಕಗ್ಗ" ಶಬ್ದಕ್ಕೆ ಪ್ರಾಚೀನ ಪ್ರಯೋಗಗಳಿಲ್ಲ . ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಪ್ರಕಾರ (ಸಂಪುಟ ೨ ಪುಟ ೧೩೬೬) ಆ ಅರ್ಥದ ಅತ್ಯಂತ ಪ್ರಾಚೀನ ಪ್ರಯೋಗವೆಂದರೆ ಕ್ರಿ.ಶ. ೧೭೭೭ ತುರಂಗ ಭಾರತದ್ದು. ಆ ಪ್ರಯೋಗ ಹೀಗಿದೆ :- ಆ ಮುನೀಶ್ವರನೆನ್ನ ಕೋಪದಿಂ ಝಂಕಿಸುತ ರುದ್ರನಂತೆ ಕಗ್ಗ ಭೂಸುರನೆನುತ್ತೆನ್ನ ವಂಚಿಸಿ ಶರಸಮುದ್ರವಂ ಬೇಡ್ದರ್ - ಈ ಪ್ರಯೋಗವನ್ನು ಎಚ್ಚರಿಕೆಯಿಂದ ಗಮನಿಸಿದರೆ, "ಕಗ್ಗ" ಪದಕ್ಕೆ ನಿಷ್ಪ್ರಯೋಜಕವೆನ್ನುವ ಅರ್ಥ ಹೊಂದುವುದಿಲ್ಲ . ಮುನೀಶ್ವರನು ರುದ್ರನಂತೆ ಕೋಪಿಸಿಕೊಂಡು ಅಬ್ಬರಿಸುತ್ತ, ತಾನು ಕಗ್ಗಭೂಸುರನೆಂದು ಹೇಳಿಕೊಳ್ಳುತ್ತ , ತನ್ನನ್ನು ವಂಚಿಸಿ (ಕಗ್ಗಭೂಸುರನೆನುತ್ತೆನ್ನ ವಂಚಿಸಿ ...ಎಂದು ಆ ಪಾಠವನ್ನು ತಿದ್ದಿಕೊಳ್ಳ ಬೇಕಾಗುತ್ತದೆ) ಬಾಣಸಮೂಹವನ್ನು ಬೇಡಿದನು ಎಂದು ಯಾವುದೋ ಪಾತ್ರವು ಆಡುವ ಮಾತು ಅದು. ಮುನೀಶ್ವರನು ತನ್ನನ್ನು ನಿಷ್ಪ್ರಯೋಜಕನೆಂದು ಹೇಳಿಕೊಳ್ಳುತ್ತಿಲ್ಲ ; ರುದ್ರನಂತೆ ಅಬ್ಬರಿಸುತ್ತಿರುವ ಅವನು ತನ್ನನ್ನು "ಖಡ್ಗ"ದ ಬ್ರಾಹ್ಮಣನೆಂದು ಕರೆದುಕೊಂಡಿರುವುದು ಸ್ಪಷ್ಟ .

"ಕಗ್ಗ" ಎನ್ನುವ ಪದಕ್ಕೆ ಖಡ್ಗ ಎನ್ನುವ ಅರ್ಥವಿದ್ದಿತೆಂಬುದನ್ನು ಅದೇ ನಿಘಂಟು ಸ್ಪಷ್ಟ ಪಡಿಸುತ್ತದೆ .

"https://kn.wikipedia.org/w/index.php?title=ಕಗ್ಗ&oldid=1157324" ಇಂದ ಪಡೆಯಲ್ಪಟ್ಟಿದೆ