ವಿಷಯಕ್ಕೆ ಹೋಗು

ಉದಾಸೀನತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಪೇಕ್ಷೆ ಇಂದ ಪುನರ್ನಿರ್ದೇಶಿತ)

ಉದಾಸೀನತೆಯು ಅನಿಸಿಕೆ, ಭಾವನೆ, ಆಸಕ್ತಿ, ಮತ್ತು ಕಾಳಜಿಯ ಕೊರತೆ. ಉದಾಸೀನತೆಯು ಅನಾದರದ ಸ್ಥಿತಿ, ಅಥವಾ ಕಾಳಜಿ, ಉತ್ಸಾಹ, ಪ್ರೇರಣೆ, ಮತ್ತು/ಅಥವಾ ಭಾವೋದ್ವೇಗದಂತಹ ಭಾವನೆಗಳ ಮರೆಮಾಚುವಿಕೆ. ಉದಾಸೀನ ವ್ಯಕ್ತಿಯು ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ, ತತ್ವಶಾಸ್ತ್ರೀಯ ಮತ್ತು/ಅಥವಾ ಭೌತಿಕ ಜೀವನ ಮತ್ತು ವಿಶ್ವದಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಅವುಗಳ ಬಗ್ಗೆ ಕಾಳಜಿ ಹೊಂದಿರುವುದಿಲ್ಲ.

ಉದಾಸೀನನು ತನ್ನ ಜೀವನದಲ್ಲಿ ಗುರಿ/ಉದ್ದೇಶ, ಅರ್ಹತೆ, ಅಥವಾ ಅರ್ಥದ ಭಾವನೆಯನ್ನು ಹೊಂದಿಲ್ಲದಿರಬಹುದು. ಉದಾಸೀನ ವ್ಯಕ್ತಿಯು ಭಾವಶೂನ್ಯತೆ ಅಥವಾ ಜಡತೆಯನ್ನೂ ಪ್ರದರ್ಶಿಸಬಹುದು. ಸಕಾರಾತ್ಮಕ ಮನೋವಿಜ್ಞಾನದಲ್ಲಿ, ಉದಾಸೀನತೆಯನ್ನು ಒಂದು ಸವಾಲನ್ನು ಎದುರಿಸಲು ಅಗತ್ಯವಾದ ಕೌಶಲದ ಮಟ್ಟ ಹೊಂದಿಲ್ಲ ಎಂಬ ವ್ಯಕ್ತಿಗಳ ಅನಿಸಿಕೆಯ ಪರಿಣಾಮವೆಂದು ವಿವರಿಸಲಾಗುತ್ತದೆ. ಅದು ಯಾವುದೇ ಸವಾಲನ್ನು ಗ್ರಹಿಸದಿರುವ ಪರಿಣಾಮವೂ ಆಗಿರಬಹುದು (ಉದಾಹರಣೆಗೆ, ಸವಾಲು ಅವರಿಗೆ ಅಪ್ರಸ್ತುತ, ಅಥವಾ ವ್ಯತಿರಿಕ್ತವಾಗಿ, ಅವರು ಕಲಿತ ಅಸಹಾಯಕತೆಯನ್ನು ಹೊಂದಿರುತ್ತಾರೆ). ಉದಾಸೀನತೆಯು ಛಿದ್ರಮನಸ್ಕತೆ ಅಥವಾ ಬುದ್ಧಿಮಾಂದ್ಯದಂತಹ ಹೆಚ್ಚು ನಿರ್ದಿಷ್ಟ ಮಾನಸಿಕ ಸಮಸ್ಯೆಗಳ ಚಿಹ್ನೆಯಾಗಿರಬಹುದು. ಆದರೆ, ಉದಾಸೀನತೆಯು ಒಂದು ಹಂತಕ್ಕೆ ಎಲ್ಲ ವ್ಯಕ್ತಿಗಳು ಎದುರಿಸುವ ಸಂಗತಿಯಾಗಿದೆ. ಅದು ನಿರಾಶೆ, ಮ್ಲಾನತೆ, ಮತ್ತು ಒತ್ತಡಕ್ಕೆ ಒಂದು ಸಹಜ ಪ್ರತಿಕ್ರಿಯೆ. ಪ್ರತಿಕ್ರಿಯೆಯಾಗಿ, ಉದಾಸೀನತೆಯು ಈ ನಕಾರಾತ್ಮಕ ಅನಿಸಿಕೆಗಳನ್ನು ಮರೆಯುವ ರೀತಿಯಾಗಿದೆ. ಈ ಬಗೆಯ ಸಾಮಾನ್ಯ ಉದಾಸೀನತೆ ಸಾಧಾರಣವಾಗಿ ಕೇವಲ ಅಲ್ಪಾವಧಿಯಲ್ಲಿ ಅನಿಸುತ್ತದೆ ಮತ್ತು ಇದು ದೀರ್ಘಾವಧಿ ಅಥವಾ ಜೀವನಪರ್ಯಂತ ಸ್ಥಿತಿಯಾದಾಗ, ಹೆಚ್ಚು ಆಳದ ಸಾಮಾಜಿಕ ಮತ್ತು ಮಾನಸಿಕ ವಿಷಯಗಳು ಹೆಚ್ಚಾಗಿ ಇರುವ ಸಾಧ್ಯತೆಯಿರುತ್ತದೆ.

ಉದಾಸೀನತೆಯು ಕಡಿಮೆಯಾದ ಭಾವನಾತ್ಮಕ ಅಭಿವ್ಯಕ್ತಿಯನ್ನು ಸೂಚಿಸುವ ಕಡಿಮೆಯಾದ ಅನಿಸಿಕೆಯ ಪ್ರದರ್ಶನದಿಂದ ಬೇರೆಯಾಗಿದೆ.

ಉದಾಸೀನತೆಯ ಆಧುನಿಕ ಪರಿಕಲ್ಪನೆಯು ಮೊದಲನೇ ವಿಶ್ವಯುದ್ಧದ ನಂತರ ಹೆಚ್ಚು ಸುಪರಿಚಿತವಾಯಿತು, ಏಕೆಂದರೆ ಆಗ ಅದು ಸಿಡಿತಾಘಾತದ ವಿವಿಧ ರೂಪಗಳ ಪೈಕಿ ಒಂದಾಗಿತ್ತು. ಬಾಂಬ್ ದಾಳಿ ಮತ್ತು ಮಷೀನ್ ಗನ್ ಹೊಡೆತದ ನಡುವೆ ಕಂದಕಗಳಲ್ಲಿ ಇರುತ್ತಿದ್ದ, ಮೃತ ಮತ್ತು ಅಂಗಹೀನ ಒಡನಾಡಿಗಳಿಂದ ಹರಡಿದ ಯುದ್ಧಭೂಮಿಯನ್ನು ನೋಡಿದ ಸೈನಿಕರು, ಯುದ್ಧದಿಂದ ಮರಳಿದಾಗ ಸಾಮಾನ್ಯ ಸಾಮಾಜಿಕ ಸಂವಹನಕ್ಕೆ ನಿರ್ಲಿಪ್ತ ನಿಶ್ಚೇತತೆ ಮತ್ತು ಅನಾದರದ ಭಾವವನ್ನು ಬೆಳೆಸಿಕೊಂಡರು.