ಈಚಲು
ಈಚಲು | |
---|---|
At Purbasthali in Bardhaman District of West Bengal, India. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. sylvestris
|
Binomial name | |
Phoenix sylvestris |
ಈಚಲು
[ಬದಲಾಯಿಸಿ]ತೆಂಗಿನಮರದ(ಅಡಿಕೆ) ಕುಂಟುಂಬಕ್ಕೆ ಸೇರಿದ ಒಂದು ಜಾತಿ. ಇದರಲ್ಲಿ ಐದಾರು ಪ್ರಭೇದಗಳಿವೆ. ಮುಖ್ಯವಾದುವು ಖರ್ಜೂರದ ಮರ ಮತ್ತು ಈಚಲು. ಇವು ಆರ್ಥಿಕ ದೃಷ್ಟಿಯಿಂದಲೂ ಮುಖ್ಯವಾಗಿವೆ.ಈಚಲು ಜಾತಿಯ ಮರಗಳು ನೆಟ್ಟಗೆ ಬೆಳೆಯುತ್ತವೆ. ರೆಂಬೆಗಳಿರುವುದಿಲ್ಲ. ಕಾಂಡ ಉರುಟಾಗಿದ್ದು ಎಲೆಗಳ ತೊಟ್ಟಿನ ತಳಭಾಗಗಳಿಂದ ಮುಚ್ಚಿದೆ. ಒಂದು ಪ್ರಬೇಧದಲ್ಲಿ ಮಾತ್ರ ಕಾಂಡ ನೆಲದೊಳಗಿರುತ್ತದೆ. ಎಲೆಗಳು ಮರದ ತುದಿಯಲ್ಲಿ ಗರಿಯೋಪಾದಿಯಾಗಿ ಹರಡಿರುತ್ತವೆ. ಪ್ರತಿ ಗರಿಯೂ ಒಂದು ಸಂಯುಕ್ತ ಪತ್ರ. ಉಪಪತ್ರಗಳು ಗಡುಸಾಗಿ ಬೂದಿಬಣ್ಣವಾಗಿರುತ್ತದೆ. ತುದಿ ದಬ್ಬಳದ ಮೊನೆಯಂತಿದೆ. ಒಂದು ಪ್ರಭೇದದಲ್ಲಿ ಕಿರು ಎಲೆಗಳು ಹಸುರಾಗಿ ಮೃದುವಾಗಿದ್ದು ಮೊನೆ ಚೂಪಾಗಿರುವುದಿಲ್ಲ.
ಖರ್ಜೂರದ ಮರ ಮತ್ತು ಈಚಲು
[ಬದಲಾಯಿಸಿ]ಖರ್ಜೂರದ ಮರ ಮತ್ತು ಈಚಲು ಒಂದೇ ರೀತಿಯಾಗಿ ಕಂಡರೂ ಅವುಗಳಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಈಚಲು 30'-40' ಗಳ ಎತ್ತರಕ್ಕೆ ಬೆಳೆಯುತ್ತದೆ. ಖರ್ಜೂರದ ಮರ 100'-120' ಗಳ ಎತ್ತರಕ್ಕೆ ಬೆಳೆಯುತ್ತದೆ. ಸಸಿಗಳು ಖರ್ಜೂರದ ಬೇರಿನಿಂದ ಹುಟ್ಟುತ್ತದೆ. ಈಚಲು ಮರದಲ್ಲಿ ಸಸಿಗಳು ಬೇರಿನಿಂದ ಹುಟ್ಟುವುದಿಲ್ಲ. ಖರ್ಜೂರದ ಗರಿಯಲ್ಲಿ ಕಿರು ಎಲೆಗಳು ಎಲೆಯ ದಿಂಡಿಗೆ ಲಘುಕೋನದಲ್ಲಿ ಓರೆಯಾಗಿ ಜೋಡಣೆಗೊಂಡಿರುತ್ತವೆ. ಈಚಲು ಮರದಲ್ಲಿ ಕಿರು ಎಲೆಗಳು ದಿಂಡಿಗೆ ಸಮಕೋನದಲ್ಲಿ ಸೇರಿಕೊಂಡಿರುತ್ತವೆ.ಸಾಮಾನ್ಯವಾಗಿ ಈ ಮರಗಳು ನೀರು ಒರೆಸುವ ಬಂಜರು ಪ್ರದೇಶಗಳಲ್ಲಿ ಬೆಳೆಯುತ್ತವೆ. ಅರೇಬಿಯ ದೇಶ, ಭಾರತದ ರಾಜಾಸ್ತಾನದ ಮರಳುಗಾಡು ಪ್ರದೇಶ, ಗುಜರಾತು, ಪಂಜಾಬು-ಈ ಕೆಲವು ಪ್ರದೇಶಗಳಲ್ಲಿ ಇದರ ಬೆಳೆ ಹೆಚ್ಚು. ಮೈಸೂರು ರಾಜ್ಯದ ತುಮಕೂರು, ಚಿತ್ರದುರ್ಗ, ಮೈಸೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈಚಲು ಕಾಡುಗಳಿವೆ.[೧]
ಈಚಲು ಜಾತಿಯ ಮರ
[ಬದಲಾಯಿಸಿ]ಈಚಲು ಜಾತಿಯ ಮರಗಳನ್ನು ಗಂಡು ಈಚಲು, ಹೆಣ್ಣು ಈಚಲು ಎಂದು ಕರೆಯುವುದುಂಟು. ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಮರಗಳಲ್ಲಿ ಬರುವುದೇ ಇದಕ್ಕೆ ಕಾರಣ. ಈಚಲು ಮತ್ತು ಖರ್ಜೂರದ ಮರಗಳು ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್ ತಿಂಗಳಿಗಳಲ್ಲಿ ಹೂ ಬಿಡುತ್ತವೆ. ಕಾಯಿ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹಣ್ಣಾಗುತ್ತವೆ.ಈಚಲು ಮರದಿಂದ ನೀರಾ ಇಳಿಸುತ್ತಾರೆ. ಇದು ಹುಳಿತು ಹೆಂಡವಾಗುತ್ತದೆ. ಏಳೆಂಟು ವರ್ಷ ವಯಸ್ಸಿನ ಮರಗಳು ನೀರಾ ತೆಗೆಯುವುದಕ್ಕೆ ಪಕ್ವವಾಗಿರುತ್ತವೆ. ಒಂದು ಮರ ತನ್ನ ಜೀವಿತಕಾಲದಲ್ಲಿ ಸುಮಾರು 25-30 ವರ್ಷಗಳ ಕಾಲ ನೀರಾ ಕೊಡಬಲ್ಲುದು. ಸಾಮಾನ್ಯವಾಗಿ ಅಕ್ಟೊಬರ್-ನವೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಿ ನಾಲ್ಕರಿಂದ ಆರು ತಿಂಗಳ ಕಾಲ ನೀರಾ ಇಳಿಸುತ್ತಾರೆ. ನೀರಾದ ಪ್ರಮಾಣ ಚಳಿಗಾಲದಲ್ಲಿ ಹೆಚ್ಚಾಗಿದ್ದು ಬೇಸಗೆ ಬಂದಂತೆಲ್ಲ ಕಡಿಮೆಯಾಗುತ್ತ ಹೋಗುತ್ತದೆ.[೨]
ನೀರಾ ಇಳಿಸುವ ಕ್ರಮ ಈ ರೀತಿ ಇದೆ
[ಬದಲಾಯಿಸಿ]ಮರದ ತುದಿಯ ಒಂದು ಪಾಶ್ರ್ವದಲ್ಲಿನ ಕೆಳಗಿನ ಎಲೆಗಳನ್ನು ಕತ್ತರಿಸಿ ಹಾಕಿ ಅಲ್ಲಿನ ತೊಗಟೆಯನ್ನು ಸುಮಾರು 45 ಸೆಂ. ಮೀ. ಅಗಲದಷ್ಟು ಒಳಗಿನ ಬಿಳಿಯಭಾಗ ಕಾಣುವಂತೆ ತೆಗೆದುಹಾಕುತ್ತಾರೆ. ಕ್ರಮೇಣ ಅದು ಕಂದುಬಣ್ಣಕ್ಕೆ ತಿರುಗುತ್ತದೆ. ಕೆಲವು ದಿನಗಳಾದ ಮೇಲೆ, ಈ ತೆರೆದ ಸ್ಥಳದಲ್ಲಿ ಗಿ ಆಕಾರದಲ್ಲಿ ಗಾಯವನ್ನುಂಟು ಮಾಡಿ ಒಂದಷ್ಟು ಭಾಗವನ್ನು ತೆಗೆದುಹಾಕುತ್ತಾರೆ. ಅದರಿಂದ ರಸ ಸುರಿಯಲು ಪ್ರಾರಂಭವಾಗುತ್ತದೆ. ಅದನ್ನು ಬೊಂಬಿನ ನಳಿಕೆಯ ಮೂಲಕ ಒಂದು ಮಡಕೆಗೆ ಸುರಿಯುವಂತೆ ಮಾಡಿರುತ್ತಾರೆ. ಮಡಕೆಯ ಒಳಭಾಗಕ್ಕೆ ಸುಣ್ಣ ಬಳಿದಿರುತ್ತಾರೆ. ಮಾರನೆಯ ಬೆಳಗಿನ ಜಾವ (ಸೂರ್ಯೋದಯಕ್ಕೆ ಮುನ್ನ) ಮಡಕೆಯಲ್ಲಿ ಶೇಖರವಾಗಿರುವ ರಸವನ್ನು ಹೊರ ತೆಗೆದು, ಮತ್ತೆ ಮಡಕೆ ಕಟ್ಟುತ್ತಾರೆ. ಹೀಗೆ ಎರಡು ದಿನ ರಸವನ್ನು ಇಳಿಸಿದ ಮೇಲೆ ಮೂರು ದಿನಗಳ ಬಿಡುವು ಕೊಡುತ್ತಾರೆ. ಈ ರೀತಿ ಹಲವಾರು ಬಾರಿ ಹೊಸ ಹೊಸ ಗಾಯಗಳನ್ನು ಮಾಡಿ ನಾಲ್ಕಾರು ತಿಂಗಳುಗಳ ಕಾಲ ನೀರಾವನ್ನು ಇಳಿಸುತ್ತಾರೆ. ಅಲ್ಲದೆ ಹೆಚ್ಚು ಪ್ರಮಾಣದಲ್ಲಿ ನೀರಾ ಸುರಿಯುವಂತೆ ಮಾಡಲು ಕಾಯಿಗೊನೆಗಳನ್ನು ಕತ್ತರಿಸಿಬಿಡುತ್ತಾರೆ. ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಅನುಸರಿಸಿದರೂ ಕೆಲವು ಪ್ರದೇಶಗಳಲ್ಲಿ ಸಣ್ಣ ವ್ಯತ್ಯಾಸಗಳುಂಟು. ಬಂಗಾಳದಲ್ಲಿ ಕೆಳಗಿನ ಎಲೆಗಳ ಬುಡದಲ್ಲಿ ಗಾಯಮಾಡಿ ನೀರಾ ಇಳಿಸಿದರೆ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಮೇಲ್ಭಾಗದ ಎಲೆಗಳ ಬುಡದಲ್ಲಿ ಗಾಯಮಾಡಿ ತೆಗೆಯುತ್ತಾರೆ. ಈಚೆಗೆ ಹೊಸ ವಿಧಾನವೊಂದನ್ನು ಅನುಸರಿಸುತ್ತಾರೆ. ಇದರ ಪ್ರಕಾರ ತೊಗಟೆ ತೆಗೆದ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದೊಂದು ಸರ್ತಿಗೆ ಒಂದೊಂದರಿಂದ ಮಾತ್ರ ರಸ ಸುರಿಯುವಂತೆ ಮಾಡುತ್ತಾರೆ. ಇದರಿಂದ ಇನ್ನೆರಡು ಭಾಗಗಳಿಗೆ ಎರಡು ದಿನ ಬಿಡುವು ದೊರೆತಂತಾಗುತ್ತದೆ. ಈ ವಿಧಾನದಿಂದ ಸಾಮಾನ್ಯವಾಗಿ ಬರುವ ರಸದ ಪ್ರಮಾಣವನ್ನು ದ್ವಿಗುಣಗೊಳಿಸಬಹುದೆಂದು ಹೇಳುತ್ತಾರೆ. ಪ್ರತಿಯೊಂದು ಮರದಿಂದ ಸುಮಾರು 70-310 ಕಿ.ಗ್ರಾಂ. ನೀರಾ ಪಡೆಯಬಹುದೆಂದು ಅಂದಾಜು ಮಾಡಲಾಗಿದೆ.
ಈಚಲು ಬಳಕೆ
[ಬದಲಾಯಿಸಿ]ನೀರಾ ಸಿಹಿಯಾಗಿದ್ದು ಪುಷ್ಟಿದಾಯಕ ಹಾಗೂ ಚೇತೋಹಾರಿ ಪಾನೀಯವಾಗಿದೆ. ಇದರಲ್ಲಿ ಬಿ ಮತ್ತು ಸಿ ಜೀವಾತುಗಳು ಹೆಚ್ಚು ಪ್ರಮಾಣದಲ್ಲಿದ್ದು, ಪ್ರೋಟೀನುಗಳು, ಶರ್ಕರಗಳು, ರಂಜಕ, ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ ಲವಣಾಂಶಗಳು ಹೇರಳವಾಗಿವೆ. ಇದರಲ್ಲಿರುವ ಸಿ ಜೀವಾತು ಅಂಶ ಬಹುಕಾಲ ನಶಿಸದೇ ಇರುವುದು ಒಂದು ವಿಶಿಷ್ಟ ಗುಣ.ನೀರಾವನ್ನು ಬಹಳಕಾಲ ಕೆಡದಂತೆ, ಅದರ ಸಹಜ ಕಂಪು ಹೋಗದಂತೆ ಪ್ಯಾಶ್ಚರೀಕರಣ ಮಾಡಿ ಶೇಖರಿಸಬಹುದು. ಹಾಗೆ ಮಾಡುವಾಗ ಸೋಡಿಯಂ ಬೆಂಜೊóೀಯೇಟ್ ಮತ್ತು ಸಿಟ್ರಿಕ್ ಅಥವಾ ಮ್ಯಾಲಿಕ್ ಆಮ್ಲಗಳ ಮಿಶ್ರಣವನ್ನು ಇದರೊಂದಿಗೆ ಸೇರಿಸುತ್ತಾರೆ. ಅಲ್ಲದೆ ಅಮೋನಿಯಮ್ ಹೈಡ್ರಾಕ್ಸೈಡ್ ಅಥವಾ ಪಾಲುಡ್ರಿನ್ ಎಂಬ ವಸ್ತುವನ್ನು ಇದಕ್ಕೆ ಸೇರಿಸುವುದರಿಂದಲೂ ನೀರಾವನ್ನು ಸುರಕ್ಷಿತವಾಗಿ ಇಡಬಹುದು.ನೀರಾದಿಂದ ಬೆಲ್ಲವನ್ನೂ ತಯಾರಿಸುತ್ತಾರೆ. ಈಚಲು ಬೆಲ್ಲವನ್ನು ತಯಾರಿಸುವ ವಿಧಾನ ಈ ರೀತಿ ಇದೆ : ಹೊಸದಾಗಿ ಇಳಿಸಿದ ನೀರಾವನ್ನು ದೊಡ್ಡ ದೊಡ್ಡ ಕೊಪ್ಪರಿಗೆಗಳಲ್ಲಿ ಹಾಕಿ ಕುದಿಸುತ್ತಾರೆ. ಒಂದೇ ಸಮನೆ ಕುದಿಯುವಂತೆ ಮಾಡಲು, ಆಗಿಂದಾಗ್ಗೆ ಕಟ್ಟಿಕೊಳ್ಳುವ ಕೆನೆಯನ್ನು ತೆಗೆದುಹಾಕುತ್ತಾರೆ. ಹೀಗೆ ಕೆಲವು ಕಾಲ ಕುದಿಸಿ, ಹದವಾದ ಪಾಕ ಬಂದಾಗ ಅದನ್ನು ಆರಿಸಿ, ಗಾಳಿಯಾಡಿಸಿ, ಮಡಕೆಗಳಿಗೂ ತಟ್ಟೆಗಳಿಗೂ ಹಾಕುತ್ತಾರೆ. ಅದು ಗಟ್ಟಿಯಾಗಿ ಬೆಲ್ಲವಾಗುತ್ತದೆ. ಬೆಲ್ಲ ತಯಾರಿಸುವ ಉದ್ದೇಶವಿದ್ದರೆ, ನೀರಾ ಶೇಖರಿಸುವ ಮಡಕೆಗಳ ಒಳಭಾಗಕ್ಕೆ ಸುಣ್ಣವನ್ನು ಲೇಪಿಸುವುದಿಲ್ಲ. ಸುಣ್ಣ ಸವರಿದ್ದರೆ ಬೆಲ್ಲಕ್ಕೆ ಸರಿಯಾದ ಬಣ್ಣ ಬರುವುದಿಲ್ಲ. ಹಲವಾರು ಬಾರಿ ಕುದಿಸಿ ಶುದ್ಧೀಕರಿಸುವುದರಿಂದ ಸಕ್ಕರೆಯಷ್ಟು ಬಿಳುಪಾದ ಬೆಲ್ಲವನ್ನು ಪಡೆಯಬಹುದು. ಇದರಲ್ಲಿ ಬಿ ಜೀವಾತು ಗುಂಪಿನ ಡೈಯಾಮಿನ್. ರೈಬೊಫ್ಲೇವಿನ್, ನಿಕೊಟಿನಿಕ್ ಆಮ್ಲಗಳು, ಸಿ ಜೀವಾತು ಅಲ್ಲದೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೋಡಿಯಂ, ಪೊಟಾಸಿಯಂ ಲವಣಗಳು, ಹಲವು ಅಮೈನೋ ಆಮ್ಲಗಳು ಇವೆ. ಇದರಿಂದಾಗಿ ಈಚಲು ಬೆಲ್ಲ ಕಬ್ಬಿನ ಬೆಲ್ಲಕ್ಕಿಂತ ಉತ್ತಮ ಎನ್ನುತ್ತಾರೆ. ಈಚಲು ಬೆಲ್ಲವನ್ನು ತಯಾರಿಸುವಾಗ ಬರುವ ಕಾಕಂಬಿಯನ್ನು ತಿನ್ನುವುದಕ್ಕೂ ಮತ್ತು ಆಲ್ಕೊಹಾಲ್ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.ಹೆಂಡದಲ್ಲಿ 3.61% ರಷ್ಟು ಆಲ್ಕೊಹಾಲ್ ಇದ್ದು ಜೊತೆಗೆ ಸಕ್ಕರೆ, ಟಾರ್ಟಾರಿಕ್ ಆಮ್ಲ, ಗ್ಲಿಸರಾಲ್, ನೈಟ್ರೋಜನ್, ರಂಜಕ, ಥೈಯಾಮಿನ್ ಹಾಗೂ ರೈಬೊಫ್ಲೇವಿನ್ ಜೀವಾತುಗಳು ಹೆಚ್ಚಿನ ಪ್ರಮಾಣದಲ್ಲಿವೆ. ನೀರಾಕ್ಕಿಂತ ಇದು ಹೆಚ್ಚು ಪುಷ್ಟಿದಾಯಕ ಪಾನೀಯವೆಂದು ಕೆಲವರ ಅಭಿಪ್ರಾಯ.[೩]
ಉಪಯೋಗ
[ಬದಲಾಯಿಸಿ]ನೀರಾದಿಂದ ವಿನೆಗರನ್ನೂ ತಯಾರಿಸುತ್ತಾರೆ. ದೊಡ್ಡ ದೊಡ್ಡ ಕಾರ್ಬಾಯ್‍ಗಳಲ್ಲಿ ನೀರಾವನ್ನು ಗಾಳಿಯೊಂದಿಗೆ ಸಂಬಂಧವಿರದಂತೆ ಭರ್ತಿಮಾಡಿ 12 ರಿಂದ 15 ದಿನಗಳ ಕಾಲ 24o — 27o ಸೆಂ. ಗ್ರೇ. ಉಷ್ಣತೆಯಿರುವಂತೆ ಮಾಡಿ ಜೋಪಾನಿಸುತ್ತಾರೆ. ಈ ರೀತಿ ಇಡುವುದರಿಂದ ನೀರಾ ಹುಳಿಯಾಗುತ್ತದೆ. ಹೀಗೆ ಹುಳಿಯಾದ ನೀರಾವನ್ನು ಬೇರೆ ಪಾತ್ರೆಗಳಿಗೆ ಸುರಿದು, ಚೆನ್ನಾಗಿ ಗಾಳಿಯಾಡುವಂತೆ ಮಾಡಿ ಮೂರು ತಿಂಗಳು ಕಾಲ ಬಿಡುತ್ತಾರೆ. ಆಗ ನೀರಾ ಎಲ್ಲ ವಿನೆಗರ್ ಆಗಿ ಮಾರ್ಪಡುತ್ತದೆ. ಇದರಲ್ಲಿ 6.5% ಅಸಿಟಿಕ್ ಆಮ್ಲವಿರುತ್ತದೆ.ಈಚಲು ಹಣ್ಣುಗಳು ಖರ್ಜೂರದಷ್ಟು ಉತ್ಕøಷ್ಟವಲ್ಲದಿದ್ದರೂ ಸಿಹಿಯಾಗಿದ್ದು ತಿನ್ನಲು ಚೆನ್ನಾಗಿರುತ್ತದೆ. ಜೆಲ್ಲಿ, ಜಾಮ್, ಹಾಗೂ ವಿನೆಗರ್ ತಯಾರಿಕೆಯಲ್ಲಿ ಇವನ್ನು ಉಪಯೋಗಿಸುತ್ತಾರೆ.ಈಚಲು ಗರಿಗಳನ್ನು ಗುಡಿಸಲುಗಳಿಗೆ ಹೊದಿಸಲು ಉಪಯೋಗಿಸುತ್ತಾರೆ. ಅಲ್ಲದೆ ಅವುಗಳಿಂದ ಚಾಪೆ, ಬೀಸಣಿಗೆ, ಬುಟ್ಟಿ, ಪೊರಕೆಗಳನ್ನು ಮಾಡುತ್ತಾರೆ. ಇವುಗಳ ನಾರಿನಿಂದ ಹಗ್ಗವನ್ನೂ ತಯಾರಿಸುತ್ತಾರೆ. ಮರಗಳನ್ನು ಕಡಿದು ತಾತ್ಕಾಲಿಕ ಸೇತುವೆಗಳನ್ನು ಕಟ್ಟುವುದಕ್ಕೂ ಚಪ್ಪರಗಳ ಕಂಬಗಳಿಗೂ ಉಪಯೊಗಿಸುತ್ತಾರೆ. ಈಚಲು ತೊಗಟೆಯಲ್ಲಿ ಟ್ಯಾನಿಸ್ ಎಂಬ ವಸ್ತು ದೊರೆಯುತ್ತದೆ. ಈಚಲು ಬೀಜಗಳನ್ನು ಉತ್ತರಾಣಿ ಗಿಡದ ಬೇರಿನೊಂದಿಗೆ ಅರೆದು, ವೀಳೆಯದೆಲೆಯೊಂದಿಗೆ ಸೇವಿಸಿದರೆ ಚಳಿಜ್ವರ ವಾಸಿಯಾಗುವುದೆಂದು ಹೇಳುತ್ತಾರೆ. ಹಲ್ಲುನೋವಿನ ನಿವಾರಣೆಯಲ್ಲಿ ಈಚಲು ಬೇರನ್ನು ಉಪಯೋಗಿಸುತ್ತಾರೆ.ಈಚಲು, ತಾಳೆ, ಬಗನಿ, ತೆಂಗು ಮುಂತಾದ ಗಿಡಗಳಿಂದ ಹೆಂಡ ಇಳಿಸುವ ವಾಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಹೆಂಡವೇ ಈ ಮರಗಳ ಪರಮ ಪ್ರಯೋಜನವಲ್ಲ. ಹೀಗಿದ್ದರೂ ಜನ ತಿಳಿದೊ ತಿಳಿಯದೆಯೋ ಪಾನಕ್ಕಾಗಿ ಇವನ್ನು ಬಳಸುವುದು, ಸರ್ಕಾರ ಆದಾಯ ದೃಷ್ಟಿಯಿಂದ ಪಾನ ತಯಾರಿಕೆ ಮತ್ತು ವಿತರಣೆಯನ್ನು ನಡೆಸುವುದು-ಇವನ್ನು ಗಮನಿಸಿದ ಗಾಂಧೀಜಿ ಪಾನನಿರೋಧ ಚಳವಳಿಯನ್ನೂ ಈಚಲು ಮರ ನಿರ್ಮೂಲ ಕಾರ್ಯವನ್ನೂ ಕೈಗೊಂಡರು. ಭಾರತದ ಬಡತನದ ನಿವಾರಣೆಗೆ ಗಾಂಧಿ ರೂಪಿಸಿದ ಯೋಜನೆಗಳು ಎರಡು: ಒಂದು ಸ್ವದೇಶೀ ವಸ್ತುಗಳ ಬಳಕೆ. ಇನ್ನೊಂದು ಪಾನನಿರೋಧ. (ನೋಡಿ- ಪಾನನಿರೋಧ)
ಉಲ್ಲೇಖಗಳು
[ಬದಲಾಯಿಸಿ]- ↑ "ಈಚಲು". kn.wiktionary.org accessdate 24 October 2016.
- ↑ "ಮರಗಳ ಪರಿಚಯ ಒಂದು ಕೈಪಿಡಿ ಈಚಲು ಮರ". www.kanaja.in accessdate11 October 2016.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಈಚಲು ಗಿಡಗಳಿಗೆ ಬೇಡಿಕೆ". vijaykarnataka.indiatimes.com accessdate 24 October 2016.