ವಿಷಯಕ್ಕೆ ಹೋಗು

ಗೂರಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಸ್ತಮ ಇಂದ ಪುನರ್ನಿರ್ದೇಶಿತ)

ಎದೆಹಿಡಿದಂತಾಗಿ ಉಸಿರಾಟಕ್ಕೆ ಬಲು ಕಷ್ಟವಾಗುವ, ಹಲವು ವೇಳೆ ಕೆಮ್ಮಿದಾಗ ಕಫ ಗೊರೋ ಗೊರೋ ಎಂಬ ಶಬ್ದಸಹಿತ ಉಸಿರು ಸಾಗುವ, ಶ್ವಾಸನಾಳದ ಹಠಾತ್ ಸಂಕುಚನದಿಂದ ತಲೆದೋರುವ ಒಂದು ಬೇನೆ ಆಸ್ತಮಾ. ಉಬ್ಬಸ, ಶ್ವಾಸಕಾಸ, ದಮ್ಮು ಪರ್ಯಾಯ ಪದಗಳು.

ಬೇನೆಯ ವಿವರ

[ಬದಲಾಯಿಸಿ]

ಉಸಿರನ್ನು ಮೂಗಿನ ಮೂಲಕ ಎಳೆದುಕೊಂಡಾಗ, ಮೂಗಿನಲ್ಲಿರುವ ಒಳಪೊರೆ ಒಳಹೋದ ವಾಯುವನ್ನು ಮೂರು ಮುಖ್ಯ ವಿಧಗಳಲ್ಲಿ ಹದಗೊಳಿಸುತ್ತದೆ. ಒಂದು, ಇರಬಹುದಾದ ದೂಳು ಮೊದಲಾದವನ್ನು ವಂದರಿ ಆಡಿದಂತೆ ತಡೆಹಿಡಿಯುತ್ತದೆ. ಎರಡು, ಅಗತ್ಯವಾದ ತೇವವನ್ನು ಕೂಡಿಸುತ್ತದೆ. ಮೂರು, ಉಷ್ಣತೆಯನ್ನು ದೇಹಕ್ಕೆ ತಕ್ಕಂತೆ ಹದಗೊಳಿಸುತ್ತದೆ. ಈ ರೀತಿ ಅಣಿಮಾಡಲ್ಪಟ್ಟ ವಾಯು ಪುಪ್ಪುಸಗಳೊಳಕ್ಕೆ ಸೆಳೆಯಲ್ಪಡುತ್ತದೆ. ಅಲ್ಲಿನ ಅತಿಪುಟ್ಟ ನಾಳಗಳಲ್ಲಿ (ಬ್ರಾಂಕಿಯೋಲುಗಳು) ವಾಯು ಸಾಗಿದ ಬಳಿಕ, ಬೆಲೂನಿನಂತೆ ತೆಳುಪೊರೆಯನ್ನು ಹೊಂದಿದ ಶ್ವಾಸಗೂಡುಗಳನ್ನು (ಆಲ್ವಿಯೋಲೈ) ಸೇರುತ್ತದೆ. ಶ್ವಾಸಗೂಡುಗಳು ತೆಳು ಪೊರೆಯ ಹೊರಮೈಯ್ಯಲ್ಲಿ ರಕ್ತದ ಸಣ್ಣ ಸಣ್ಣ ನಾಳಗಳು ಇರುತ್ತವೆ. ರಕ್ತ ಆಕ್ಸಿಜನ್ನನು ಶ್ವಾಸಗೂಡುಗಳಿಂದ ಹೀರುತ್ತದೆ. ರಕ್ತದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಶ್ವಾಸದಗೂಡುಗಳಿಗೆ ಪಸರಿಸುತ್ತದೆ. ಈ ಕಾರ್ಯ ಸಫಲವಾಗಬೇಕಾದರೆ ಶ್ವಾಸದ ಕಿರುನಾಳಗಳ ದ್ವಾರ ಸಾಕಷ್ಟು ತೆರೆದಿರಬೇಕು. ಕಿರುನಾಳಗಳ ಸುತ್ತಲೂ ಉಂಗುರದಂತಿರುವ ಮಾಂಸದ ಎಳೆಗಳಿರುತ್ತವೆ. ಇವು ಬಿಗಿದಾಗ ಶ್ವಾಸನಾಳಗಳ ದ್ವಾರ ಕಿರಿದಾಗುತ್ತದೆ. ಸಡಿಲಗೊಂಡಾಗ ದ್ವಾರ ಹಿರಿದಾಗುತ್ತದೆ. ಈ ರೀತಿಯಲ್ಲಿ ಶ್ವಾಸದ ಕಿರುನಾಳಗಳು ಅಗತ್ಯವಿದ್ದಷ್ಟು ಮಾತ್ರ ತೆರೆದಿರುತ್ತವೆ. ಹಾಗಾದಾಗ ಒಳ ಹೋಗುವ ವಾಯುವಿನ ಉಷ್ಣತೆ ಹದವಾಗಿರತ್ತದೆ. ಮತ್ತು ತೇವ ಅಗತ್ಯವಿದ್ದಷ್ಟು ಇರುತ್ತದೆ. ವಾಯುವನ್ನು ಹದಗೊಳಿಸುವ ವ್ಯವಸ್ಥೆ ಇದು. ಸ್ವಯಂಚಾಲಿತ ನರಗಳ ಮೂಲಕ, ವ್ಯಕ್ತಿಯ ಮನಸ್ಸಿನ ಇಚ್ಛಾ ಹತೋಟಿಗೆ ಸಂಪೂರ್ಣ ಹೊರತಾಗಿ ಹದಗೊಳಿಸುವಂತಿದೆ ಈ ಏರ್ಪಾಡು. ಇದು ಆಸ್ತಮಾ ಬೇನೆಯಲ್ಲಿ ಅಸ್ತವ್ಯಸ್ತವಾಗುತ್ತದೆ. ಸ್ವಯಂಚಾಲಿತನರಗಳು ಹಿಸ್ಟಮಿನ್ ಮತ್ತು ಲ್ಯುಕೊಟ್ರೈಯಿನ್ ಮತ್ತಿತರ ಸೈಟೊಕಿನ್ ವಸ್ತುಗಳಿಂದ ಕೆರಳಿಸಲ್ಪಡುತ್ತವೆ. ಆಗ ಶ್ವಾಸದ ಪುಟ್ಟನಾಳಗಳ ಸುತ್ತಲೂ ಇರುವ ದುಂಡು ಮಾಂಸದೆಳೆಗಳು ಸಂಕುಚಿತವಾಗುತ್ತವೆ. ಶ್ವಾಸನಾಳಗಳ ದ್ವಾರ ಕಿರಿದಾಗಿ ಶ್ವಾಸಗೂಡುಗಳಲ್ಲಿ ಇರುವ ವಾಯುವಿಗೆ ಹೊರಬರಲು ಕಷ್ಟವಾಗುತ್ತದೆ. ಈ ರೋಗ ವಿಂದು ಉರಿಯೂತ (ಇನ್ಫ್ಲಮೇಟರಿ) ರೋಗವೆಂದು ಪರಿಗಣಿಸಲ್ಪಟ್ಟಿದೆ. ಉಸಿರುನಾಳದ ಒಳಪದರು ಉಬ್ಬಿ ವಾಯುಮಾರ್ಗವನ್ನು ಕಿರಿದುಗೊಳ್ಳಿಸುತ್ತದೆ. ಹೀಗಾಗಿ ವ್ಯಕ್ತಿ ಶ್ರಮಪಟ್ಟುಕೊಂಡು, ಎದೆಯ ಗೂಡಿನ ಮಾಂಸಗಳೆಲ್ಲವನ್ನೂ ಬಳಸಿಕೊಂಡು ಉಸಿರಾಡಬೇಕಾಗುತ್ತದೆ. ಜೊತೆಗೆ ಗೂಡುಗಳಲ್ಲಿ ವಾಯುವಿನ ಒತ್ತಡ ಹೆಚ್ಚಾಗುತ್ತದೆ. ಆ ಕಾರಣದಿಂದ ಗೂಡಿನ ಪೊರೆಯಿಂದ ಹನಿಹನಿಯಾಗಿ ಕಫ ಸ್ರವಿಸುತ್ತದೆ. ಗಾಳಿಯ ತೇವ ಹೆಚ್ಚಾಗುತ್ತದೆ. ಉಷ್ಣತೆಯೂ ಕಡಿಮೆಯಾಗುತ್ತದೆ. ಉಬ್ಬಸದಿಂದ ನರಳುತ್ತಿರುವವರು ಎದೆಯಗೂಡಿನ ಎಲ್ಲ ಮಾಂಸಖಂಡಗಳನ್ನೂ ಬಳಸಬೇಕಾಗುವುದರಿಂದ ಗೂನುಬೆನ್ನು ಮಾಡಿಕೊಂಡು ತೋಳುಗಳನ್ನು ಮುಂದಕ್ಕೆ ಚಾಚಿಕೊಂಡು ಕೂರುವುದು ಸಾಮಾನ್ಯ.


ಹಿಸ್ಟಮಿನ್ ಲ್ಯುಕೊಟ್ರೈಯಿನ್ ಹಾಗೂ ಇತರ ಸೈಟೊಕಿನ್ ವಸ್ತುಗಳು ನರಗಳನ್ನು ಕೆರಳಿಸುತ್ತದೆ. ಅದು ಹೆಚ್ಚು ಉತ್ಪತ್ತಿಯಾದರೆ ನರಗಳು ಅತಿಯಾಗಿ ಕೆರಳಿಸಲ್ಪಡುತ್ತವೆ. ಆಗ ಆಸ್ತ್ಮ ಪರಿಸ್ಥಿತಿ ಉಂಟಾಗುತ್ತದೆ. ದೇಹದಲ್ಲಿ ಒಗ್ಗದಿಕೆಯ ಪರಿಸ್ಥಿತಿ ಉಂಟಾದಾಗ ಕೋಶಗಳಲ್ಲಿ ಸೈಟೊಕಿನ್‍ಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಒಗ್ಗದಿಕೆಯ ಪರಿಸ್ಥಿತಿ ಹಲವಾರು ಕಾರಣಗಳಿಂದ ಉಂಟಾಗಬಹುದು. ದೂಳು, ಹೊಗೆ, ಘಾಟು ಇತ್ಯಾದಿಗಳು ಮೂಗಿನ ಒಳಪೊರೆಗೆ ತಾಕಿದರೆ, ಕೆಲವು ಸ್ಥಿತಿಗಳಲ್ಲಿ ಅವು ಒಗ್ಗದಿಕಗಳಾಗಿ (ಅಲರ್ಜನ್ಸ್‌) ಒಗ್ಗದಿಕೆಯ ಪರಿಸ್ಥಿತಿಯನ್ನು ಉಂಟುಮಾಡುತ್ತವೆ. ಅನಂತರ ಅಂಥವರಿಗೆ ದೂಳು, ಹೊಗೆ ಘಾಟುಗಳು ಪುನಃ ತಾಕಿದರೆ ಆಸ್ತ್ಮ ಪರಿಣಮಿಸುತ್ತದೆ. ಮೂಗಿನಲ್ಲಿನ ಒಳಪೊರೆ ಫುಪ್ಪುಸಗಳಿಗೆ ದಿಡ್ಡಿ ಬಾಗಿಲು ಇದ್ದಂತೆ. ಆದ್ದರಿಂದ ದೇಹಕ್ಕೆ ಅಪಾಯಕಾರಿಯಾದ ವಸ್ತುಗಳು ವಾಯುವಿನ ಮೂಲಕ ಮೂಗನ್ನು ಪ್ರವೇಶಿಸಿದಾಗ ಒಳಪೊರೆ ಕೆರಳುತ್ತದೆ. ಮೇಲಿಂದ ಮೇಲೆ ಸೀನು ಬಂದು ಅಪಾಯಕಾರಿಯಾದ ವಸ್ತುಕಣಗಳನ್ನು ಒಳಪೊರೆ ಈ ರೀತಿ ಹೊರಹಾಕುತ್ತದೆ.

ಈ ಬೇನೆ ಹಠಾತ್ತನೆ ಬಡಿದು ಸ್ವಲ್ಪ ಹೊತ್ತು ಕಾಡಿ, ಅನಂತರ ಹಠಾತ್ತನೆ ಸಮಾಧಾನ ಸ್ಥಿತಿಗೆ ಇಳಿಯುತ್ತದೆ. ಯಾವ ವಯಸ್ಸಿನಲ್ಲೂ ಗೂರಲು ಕಾಣಬಹುದು. ಎಳೆಯ ಮಕ್ಕಳಲ್ಲಿ ಪಕ್ಕದ ಸೆಳೆತ, ಮಧ್ಯವಯಸ್ಕರಲ್ಲಿ ಉಬ್ಬಸ, ಮುದುಕರಲ್ಲಿ ಗೂರಲು ಇವೆಲ್ಲವೂ ಆಸ್ತಮಾ ರೂಪಗಳು. ಇದು ಹೆಂಗಸರಿಗಿಂತ ಗಂಡಸರಲ್ಲಿ ಎರಡರಷ್ಟು ಪಾಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆನುವಂಶಿಕವಾಗಿ ಕೆಲವು ಮನೆತನಗಳಲ್ಲಿ ಕಂಡುಬಂದರೂ ಆಸ್ತಮಾ ಬೇನೆಯ ಪ್ರವೃತಿ ಆನುವಂಶಿಕವೇ ಹೊರತು ಆಸ್ತಮದಲ್ಲ ಎಂಬುದು ಈಗ ಸಿದ್ಧಾಂತವಾಗಿದೆ. ಫುಪ್ಪುಸಗಳ ಇತರ ಕಾಯಿಲೆಗಳಿದ್ದಾಗ (ಉದಾಹರಣೆಗೆ ಬ್ರಾಂಕಿ ಎಸ್ಟೇಸಿಸ್, ಕ್ಷಯ ಇತ್ಯಾದಿ) ಅಂಥವರಲ್ಲಿ ಆಸ್ತಮಾ ಸಂಭವಿಸುವುದು ಹೆಚ್ಚು. ಹವಾಗುಣ ಮತ್ತು ಪರಿಸರದ ಪ್ರಭಾವದಿಂದ ಉಬ್ಬಸ ಕಾಣಿಸಿಕೊಳ್ಳುತ್ತದೆ ಎಂಬುದು ನಿರ್ವಿವಾದ. ಆದರೆ ಥಂಡಿ ಹವಾ ಇರುವಲ್ಲಿ ಕೆಲವರಿಗೆ ಆಸ್ತಮಾ ಬರುತ್ತದೆ. ಮೂಗಿನಲ್ಲಿ ಬೆಳೆಯುವ ದುರ್ಮಾಂಸ, ಮೂಗಿನ ಸೈನಸುಗಳಲ್ಲಿ ಕೀವು ತುಂಬುವಿಕೆ, ಗಂಟಲಿನಲ್ಲಿ ಅಡಿನಾಯ್ಡ್ಸ್ ಇವೆಲ್ಲವೂ ಆಸ್ತ್ಮಕ್ಕೆ ಪ್ರಚೋದಕಗಳಾಗಬಹುದು. ಆಸ್ತ್ಮ ಬೇನೆಯಿಂದ ನರಳುವಿಕೆ ಹೆಚ್ಚಾಗುತ್ತದೆ. ಆದರೆ ಈ ಬೇನೆ ಮಾರಕವಾಗುವುದು ಅತಿ ವಿರಳ.

ಭಾರತದಲ್ಲಿನ ಒಗ್ಗದಿಕೆಗಳು

[ಬದಲಾಯಿಸಿ]

ಭಾರತದಲ್ಲಿ ಉಸಿರಿನಿಂದ ಒಳಹೋಗುವ ಒಗ್ಗದಿಕಗಳಲ್ಲಿ ಮುಖ್ಯವಾದವನ್ನು ಇಲ್ಲಿ ಹೆಸರಿಸಿದೆ. ಅಭ್ಯಂಜನಕ್ಕೆ ಬಳಸಲ್ಪಡುವ ಸೀಗೆಕಾಯಿಪುಡಿಯ ಘಾಟು, ಅಡುಗೆಯ ಪದಾರ್ಥಗಳಾದ ಸಾರಿನಪುಡಿ, ಚಟ್ನಿಪುಡಿ, ಒಗ್ಗರಣೆಯ ವಸ್ತುಗಳು, ಮನೆಯನ್ನು ಗುಡಿಸುವಾಗ ಏಳುವ ದೂಳು ; ಗ್ರಾಮಗಳಲ್ಲಿನ ಹಗೇವು, ಅಟ್ಟ ಇಂಥವುಗಳಲ್ಲಿರುವ ಬೂಷ್ಟುಮಿಶ್ರಿತ ದೂಳು, ಸಾಂಬ್ರಾಣಿ ಹೊಗೆ, ಬಾಳಕ ಸಂಡಿಗೆ, ಮೀನು ಮೊದಲಾದವನ್ನು ಕರಿಯುವಾಗ ಬರುವ ಘಾಟು, ಅಸಂಖ್ಯಾತ ವಿಧವಿಧ ಮಸಾಲೆಪುಡಿಗಳ ಘಾಟು ಇತ್ಯಾದಿ.


ಆಹಾರದ ಅಪಥ್ಯ ಹಾಗೂ ವೈಯಕ್ತಿಕವಾದ ಒಗ್ಗದಿಕಗಳು

[ಬದಲಾಯಿಸಿ]

ಹೊತ್ತಾದ ಮೇಲೆ ಹೊಟ್ಟೆ ಬಿರಿವಷ್ಟು ತಿಂದರೆ ಆ ರಾತ್ರಿ ಆಸ್ತ್ಮ ಬರಬಹುದು. ಅದರಲ್ಲೂ ಸುಲಭವಾಗಿ ಜೀರ್ಣವಾಗದಂಥ ಉದ್ದಿನ ಪದಾರ್ಥಗಳು, ಕರಿದ ಖಾದ್ಯಗಳು, ಜಿಡ್ಡು ಹೆಚ್ಚಾದ ಭಕ್ಷ್ಯಗಳು, ಬಿರಿಯಾನಿ ಪಲಾವುಗಳು, ಕರಿದ ಅಥವಾ ಹುರಿದ ಬೀಜಗಳು ಮುಂತಾದವು ಆಸ್ತ್ಮಕಾರಿಗಳು. ಕೆಲವು ಪದಾರ್ಥಗಳನ್ನು ಬಲು ಸ್ವಲ್ಪ ಮೊತ್ತದಲ್ಲಿ ಸೇವಿಸಿದರೂ ಕೆಲವರಿಗೆ ಆಸ್ತ್ಮ ಬರುತ್ತದೆ. ಇದು ವೈಯಕ್ತಿಕ ಪ್ರತಿಕ್ರಿಯೆ, ಈರುಳ್ಳಿ ಕೆಲವರಿಗೆ ಆಸ್ತ್ಮ ಉಂಟುಮಾಡಿದರೆ ಏಡಿಯಿಂದ ತಯಾರಿಸಿದ ಪದಾರ್ಥ ಮತ್ತೆ ಕೆಲವರಿಗೆ ಆಸ್ತ್ಮ ತರಬಹುದು. ನಿರ್ನಾಳ ಗ್ರಂಥಿಗಳ ಅವ್ಯವಸ್ಥಿತ ಉಲ್ಬಣದಿಂದಾಗಿ ಆಸ್ತ್ಮ ಬರಬಹುದು. ಕೆಲವು ಮಹಿಳೆಯರಲ್ಲಿ ಋತುಕಾಲಕ್ಕೆ ಸುಮಾರು ಎರಡು ಮೂರು ದಿವಸಗಳ ಮೊದಲು ಆಸ್ತ್ಮ ಕಾಣಿಸಿಕೊಳ್ಳಬಹುದು. ಪ್ರೊಜೆಸ್ಟಿರಾನ್ ಮತ್ತು ಅಂಡಾಶಯದ ಅಂತಃಸ್ರಾವಗಳನ್ನು ಆ ಕಾಲದಲ್ಲಿ ಕ್ರಮವರಿತು ಉಪಯೋಗಿಸುವುದರಿಂದ ಆಸ್ತ್ಮವನ್ನು ಅಂಥವರಲ್ಲಿ ತಡೆಗಟ್ಟಬಹುದು. ಚರ್ಮವನ್ನು ಕೆರಳಿಸುವ ಕೆಲವು ಪದಾರ್ಥಗಳು ಆಸ್ತ್ಮವನ್ನು ಉಂಟುಮಾಡಬಹುದು. ಆದರೆ ಬಹುತೇಕ ಆಸ್ತ್ಮ ಉಂಟಾದಾಗ ಚರ್ಮದ ಕೆರಳುವಿಕೆಯಾದ ಪಿತ್ತದ ಗಂದೆ ಅಥವಾ ಇಸುಬು ಇರುವುದಿಲ್ಲ. ಪಿತ್ತದ ಗಂದೆ ಅಥವಾ ಇಸುಬು ಉಲ್ಬಣಗೊಂಡಾಗ ಆಸ್ತ್ಮ ಇರುವುದಿಲ್ಲ. ದೇಹ ಬಹಳ ಬಳಲಿದಾಗ, ಮನಸ್ಸಿನಲ್ಲಿ ಭಾವೋದ್ರೇಕ ಅತಿಯಾದಾಗ ಹಾಗೂ ಮಾನಸಿಕ ಆಘಾತವಾದಾಗ ಆಸ್ತ್ಮ ಉಂಟಾಗುವುದುಂಟು. ಒಗ್ಗದಿಕಗಳಿಂದ ಆಸ್ತ್ಮ ಸಂಭವಿಸಿದೆ ಎಂದು ಖಚಿತವಾಗಿ ತಿಳಿದರೂ ಮಾನಸಿಕ ಕಾರಣಗಳನ್ನು ನಿರ್ಲಕ್ಷಿಸಬಾರದು. ರೋಜಾಹೂವಿನ ಪರಾಗದಿಂದ ಆಸ್ತ್ಮ ಬರುತ್ತಿದ್ದ ಕೆಲವರು ಕಾಗದದ ರೋಜಾ ಹೂವನ್ನು ಮೂಸಿದಾಗಲೂ ಇತರ ಕಾರಣಗಳಿಂದಲೂ ಆಸ್ತ್ಮ ಬರಬಹುದು. ಸ್ವಯಂಚಾಲಿತ ನರಗಳ ಅವ್ಯವಸ್ಥಿತ ಉದ್ರೇಕದಿಂದ ಹೀಗಾಗುವುದುಂಟು. ಮಾನಸಿಕ ಕಾರಣಗಳಿಂದ ಉಂಟಾಗುವ ಆಸ್ತ್ಮ ಈ ಗುಂಪಿಗೆ ಸೇರಿದುದು.

ಸ್ವಲ್ಪಕಾಲ ಮಾತ್ರ ಆಸ್ತ್ಮ ಇದ್ದು ಅನಂತರ ಎಂದಿನ ಸಮಾಧಾನ ಸ್ಥಿತಿ ಬಂದರೆ ಆಗ ಶ್ವಾಸನಾಳಗಳ ಮೇಲಾಗಲಿ, ಶ್ವಾಸಗೂಡುಗಳ ಮೇಲಾಗಲಿ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಆದರೆ ಆಸ್ತ್ಮ ಹೆಚ್ಚುಕಾಲವಿದ್ದು, ಅತಿಯಾಗಿ ಕಾಡಿದರೆ, ಎಂಫೈ಼ಸೀಮ ಎಂಬ ಸ್ಥಿತಿ ಉಂಟಾಗಬಹುದು. ಶ್ವಾಸಗೂಡುಗಳು ಸಂಕುಚಿಸುವ ಸಾಮರ್ಥ್ಯವನ್ನು ಕಳೆದುಕೊಂಡು ಹಿರಿದಾಗಿ ಉಳಿಯುತ್ತವೆ. ಈ ಸ್ಥಿತಿಗೆ ಇಳಿದ ಮೇಲೆ ಪುನಃ ಮೊದಲಿದ್ದ ಆರೋಗ್ಯಸ್ಥಿತಿಗೆ ಬರಲು ಸಾಧ್ಯವಾಗದು.

ಗುಂಡಿಗೆ ಬೇನೆಯಿಂದಾಗುವ ಉಬ್ಬಸ : ಯಾವುದೇ ಕಾರಣದಿಂದಾಗಲಿ ಗುಂಡಿಗೆ ದುರ್ಬಲಗೊಂಡರೆ ರಕ್ತಪ್ರವಾಹದ ಮೊತ್ತ ಕಡಿಮೆಯಾಗುತ್ತದೆ. ಫುಪ್ಪುಸಗಳಲ್ಲಿ ಆಗ ರಕ್ತ ಹೆಚ್ಚಾಗುತ್ತದೆ. ರಕ್ತದ ಒತ್ತಡವೂ ಹೆಚ್ಚು ಆಗುತ್ತದೆ. ಶ್ವಾಸಗೂಡುಗಳ ಹೊರಪೊರೆಯಲ್ಲಿಂದ ರಕ್ತದ ದ್ರವಭಾಗ ಗೂಡುಗಳಿಗೆ ಹನಿಹನಿಯಾಗಿ ಸ್ರವಿಸುತ್ತದೆ. ಶ್ವಾಸಗೂಡುಗಳಲ್ಲಿ ದ್ರವ ಹೆಚ್ಚಾದಾಗ ಶ್ವಾಸಕಾರ್ಯಕ್ಕೆ ಅಡಚಣೆಯಾಗುತ್ತದೆ. ಹೆಚ್ಚು ಹೆಚ್ಚಾಗಿ ಆಗ ಉಸಿರಾಡಬೇಕಾಗುತ್ತದೆ. ಹಾಗೆ ಮೇಲೆ ಮೇಲೆ ಉಸಿರಾಡಿದಾಗ ಮಾತ್ರ ದೇಹಕ್ಕೆ ಅಗತ್ಯವಾದ ಆಕ್ಸಿಜನ್ ದೊರಕಲು ಸಾಧ್ಯ. ಇದೂ ಉಬ್ಬಸದಂತೆಯೇ ಕಂಡರೂ ಅದು ಆಸ್ತ್ಮವಲ್ಲ. ಆದರೆ ಇದಕ್ಕೆ ಕಾರಣ ಹೃದಯದ ನಿಶ್ಯಕ್ತಿ. ಈ ತೆರನಾದ ಉಬ್ಬಸಕ್ಕೆ ಹೃದಯದ ಚಿಕಿತ್ಸೆ ಅಗತ್ಯ.

ಮೂತ್ರಕೋಶಗಳ ಬೇನೆಯಿಂದುಂಟಾಗುವ ಉಬ್ಬಸ : ಮೂತ್ರಕೋಶಗಳಲ್ಲಿ ರೋಗ ಉಂಟಾದರೆ ರಕ್ತದಿಂದ ಅನಪೇಕ್ಷಿತ ಅಪಾಯಕಾರಿ ವಸ್ತುಗಳನ್ನು ಶೋಧಿಸಿ ಹೊರ ತೆಗೆಯುವ ಮೂತ್ರಪಿಂಡಗಳ ಕಾರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ರಕ್ತದ ಒತ್ತಡವನ್ನು ಹೆಚ್ಚಿಸುವುದರಿಂದ ಈ ಶೋಧನಕಾರ್ಯವನ್ನು ಮುಂದುವರಿಸಬಹುದು. ಆದರೆ ರಕ್ತದ ಒತ್ತಡ ಹೆಚ್ಚಾದರೆ ಹೃದಯಕ್ಕೆ ತ್ರಾಸ ಆಗುತ್ತದೆ. ಆಗಲೂ ಉಬ್ಬಸ ಚಿಹ್ನೆಗಳು ಕಾಣಿಸುತ್ತವೆ. ಈ ತೆರನಾದ ಉಬ್ಬಸಕ್ಕೆ ಮೂತ್ರಕೋಶಗಳ ಚಿಕಿತ್ಸೆ ಅಗತ್ಯ.

ಜಗತ್ತಿನಲ್ಲಿ ದಮ್ಮು ಅಥವಾ ಅಸ್ತಮಾ ಸೋಂಕಿನಿಂದ ಬಳಲುವವರು

[ಬದಲಾಯಿಸಿ]
  • ದೀರ್ಘ ಕಾಲ ಕಾಡುವ, ಉಸಿರಾಟದ ಕಾಯಿಲೆಗಳಾದ ಆಸ್ತಮಾ ಮತ್ತು ಸಿಒಪಿಡಿಯಿಂದಾಗಿ (ಕ್ರಾನಿಕ್‌ ಅಬ್ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ –ಶ್ವಾಸಕೋಶದ ಕಾಯಿಲೆ– ಸಾಮಾನ್ಯವಾಗಿ ಶ್ವಾಸಕೋಶದಲ್ಲಿನ ವಾಯು ಕೋಶಗಳು ಉಬ್ಬುವುದು, ಶ್ವಾಸನಾಳಗಳ ಉರಿಯೂತ) 2015ರಲ್ಲಿ ಜಗತ್ತಿನಾದ್ಯಂತ 32 ಲಕ್ಷಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಹೊಸ 1990 ಮತ್ತು 2015ರ ನಡುವಣ 25 ವರ್ಷಗಳ ಅವಧಿಯಲ್ಲಿ ಪ್ರಪಂಚದಾದ್ಯಂತ ದಾಖಲಾದ ಈ ಎರಡು ಕಾಯಿಲೆಗಳು ಮತ್ತು ಅದರಿಂದ ಸಾವು ಉಂಟಾದ ಪ್ರಕರಣಗಳ ಅಧ್ಯಯನ ಹೇಳಿದೆ.
  • ಜಗತ್ತಿನಲ್ಲಿ -:ಸಿಒಪಿಡಿಗೆ ಬಲಿಯಾದವರ ಸಂಖ್ಯೆ -2 ಲಕ್ಷ;ಆಸ್ತಮಾದಿಂದಾಗಿ ಅಸುನೀಗಿದವರು - 4 ಲಕ್ಷ:
  • ಭಾರತದಲ್ಲಿ-:2774.46: ಪ್ರತಿ 1 ಲಕ್ಷ ಜನರಲ್ಲಿ ಕಂಡು ಬಂದ ಸಿಒಪಿಡಿ ಪ್ರಕರಣ: 4021.72: ಪ್ರತಿ 1 ಲಕ್ಷ ಜನರಲ್ಲಿ ಕಂಡು ಬಂದ ಆಸ್ತಮಾ ಪ್ರಕರಣ.[]

ಚಿಕಿತ್ಸೆ

[ಬದಲಾಯಿಸಿ]

ಒಗ್ಗದಿಕೆಯ ಪ್ರತಿಕ್ರಿಯೆಯಿಂದ ಉಂಟಾದ ಆಸ್ತ್ಮರೋಗಿಗಳು ಯಾವ ಒಗ್ಗದಿಕಗಳಿಂದ ಆಸ್ತ್ಮ ಉಂಟಾಗುತ್ತದೆ ಎಂಬುದನ್ನು ಗಮನಿಸಿ ಅಂಥವನ್ನು ವರ್ಜಿಸಬೇಕು. ವರ್ಜಿಸಲು ಸಾಧ್ಯವಿರದಿದ್ದರೆ ಅವುಗಳ ವಿರುದ್ಧ ಪ್ರತಿರೋಧನ ಚಿಕಿತ್ಸೆ ಕೆಲವೊಂದು ನಿರ್ದಿಷ್ಟ ಸನ್ನಿವೇಶಗಳಲ್ಲಿ ಉಪಯುಕ್ತ. ಆಸ್ತ್ಮ ಕಾಣಿಸಿಕೊಂಡ ಬಳಿಕ ಬೀಟಾ ಅಡ್ರಿನೋಸೆಫ್ಪರ್ ಪ್ರಭಾವ ಹೆಚ್ಚಿಸುವ ಔಷಧಿಗಳನ್ನು ಬಳಸಬೇಕು. ಶ್ವಾಸದ ಪುಟ್ಟ ನಾಳಗಳನ್ನು ಈ ಔಷಧಿ ಹಿಗ್ಗಿಸುತ್ತದೆ. ಹಾಗಾಗಿ ಉಸಿರು ಆಡಲು ಹೆಚ್ಚು ಸರಾಗವಾಗುತ್ತದೆ. ಥಿಯೊಫಿಲಿನ್ ತರಹವೇ ಕಾರ್ಯವನ್ನು ಮಾಡುವ ಕೆಳಮಟ್ಟದ ಔಷಧಿ. ಈ ಆಸ್ತ್ಮದಲ್ಲಿ ದ್ರವ ಉಸಿರಹಾದಿ ಉರಿಯೂತದಿಂದ ಉಬ್ಬಿರುತ್ತದೆ. ಇದನ್ನು ನಿವಾರಿಸಲು ಕಾರ್ಟಿಕೊಸ್ಟೀರಾಯಿಡ್ ಔಷಧಿ ಸಹಾಯ ಮಾಡುತ್ತದೆ. ಆಸ್ತ್ಮ ಪರಿಸ್ಥಿತಿಯಲ್ಲಿ ಸರಾಗವಾಗಿ ಉಸಿರಾಡಲಾಗದೆ ಆ ದೇಹಕ್ಕೆ ಅಗತ್ಯವಾದ ಆಕ್ಸಿಜನ್ ಸಾಕಷ್ಟು ಮೊತ್ತದಲ್ಲಿ ದೊರೆಯುವುದಿಲ್ಲ. ಆಕ್ಸಿಜನ್ನನು ತೀವ್ರತೆರನಾದ ಆಸ್ತ್ಮ ರೋಗಿಗೆ ಒದಗಿಸಿದರೆ ಉಬ್ಬಸದ ಕಷ್ಟ ಕಡಿಮೆಯಾಗುತ್ತದೆ. ಫುಪ್ಪುಸಗಳಿಗೆ ಸೂಕ್ತವಾದ ವ್ಯಾಯಾಮ ದೊರೆಯುವಂತೆ ಉಸಿರಾಟದ ವ್ಯಾಯಾಮವನ್ನು ಅಭ್ಯಾಸಮಾಡಿದರೆ ಪ್ರಯೋಜನವುಂಟು. ಉಸಿರನ್ನು ಆದಷ್ಟು ದೀರ್ಘವಾಗಿ ಎಳೆದುಕೊಳ್ಳುವುದು ಅಷ್ಟೇ ಕಾಲ ಅದನ್ನು ಹಿಡಿದಿಡುವುದು, ಬಳಿಕ ಅದಕ್ಕಿಂತಲೂ ಹೆಚ್ಚುಕಾಲ ಉಸಿರನ್ನು ಹೊರಬಿಡುವುದು - ಇದೇ ಶ್ವಾಸ ವ್ಯಾಯಾಮದ ಮುಖ್ಯ ಅಂಶ. ಹೆಚ್ಚುಕಾಲ ಉಸಿರನ್ನು ಬಿಡುವುದರಿಂದ ಶ್ವಾಸಗೂಡುಗಳಲ್ಲಿ ಉಳಿಯಬಹುದಾದ ಕಶ್ಮಲಗಾಳಿಯ ಮೊತ್ತ ಗಮನೀಯವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಉಸಿರೆಳೆದುಕೊಳ್ಳುವಾಗ ಹೆಚ್ಚು ನಿರ್ಮಲ ವಾಯುವನ್ನು ತೆಗೆದುಕೊಳ್ಳಬಹುದು. ಅಲ್ಲದೆ ಈ ವ್ಯಾಯಾಮದಿಂದ ಶ್ವಾಸನಾಳಗಳ ಸಂಕುಚನ ಶಕ್ತಿಯೂ ಹೆಚ್ಚುತ್ತದೆ.


ಒತ್ತಡದಲ್ಲಿರುವ ಆಕ್ಸಿಜನ್ನನ್ನು ಬಳಸುವುದರಿಂದ ಅಥವಾ ದೀರ್ಘವಾಗಿ ಉಸಿರಾಡಿ ಹೆಚ್ಚು ಆಕ್ಸಿಜನ್ನನ್ನು ಶ್ವಾಸಗೂಡುಗಳಿಗೆ ಸೇವಿಸುವುದರಿಂದ ಅಲ್ಲಿರಬಹುದಾದ ಕಫದಂಥ ದ್ರವ ಕರಗಿ ಹೆಚ್ಚು ನೀರಾಗಿ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ. ಒಂದು ಸ್ಥಳದ ಹವದಿಂದ (ಹವ ಅಂದರೆ ವಾತಾವರಣದ ಉಷ್ಣತೆ, ಸಾಂದ್ರತೆ, ದ್ರವಯುಕ್ತತೆ ಮಾತ್ರ ಎನ್ನುವ ಅರ್ಥದಲ್ಲಿ ಈ ಪದವನ್ನು ಉಪಯೋಗಿಸಿದೆ) ಆಸ್ತ್ಮ ಬರುತ್ತದೆ ಎಂದು ಖಚಿತವಾದರೆ ಆ ಹವಾ ಬದಲಾಯಿಸುವುದು ಒಳ್ಳೆಯದು. ಆದರೆ ಹವಾ ಬದಲಾವಣೆಯಿಂದ ಆಸ್ತ್ಮವನ್ನು ತಡೆಯಬಹುದು ಎಂಬ ಸಾಮಾನ್ಯರ ಅಭಿಪ್ರಾಯ ಬಹುಪಾಲು ಉತ್ಪ್ರೇಕ್ಷೆಯಿಂದ ಕೂಡಿದುದು. ಆಸ್ತ್ಮ ಬಂದಿತಲ್ಲ ಎಂಬ ಭಯಪುರಿತ ಆತಂಕ ಆಸ್ತ್ಮವನ್ನು ಉಲ್ಬಣಗೊಳಿಸುತ್ತದೆ. ಈ ತೆರನ ಭಯಪುರಿತ ಆತಂಕವನ್ನು ಶಮನ ಮಾಡಲು ಮಾನಸಿಕ ಚಿಕಿತ್ಸೆಯನ್ನು ಮಾಡಬೇಕು.


ಆಸ್ತ್ಮ ಘೋರವಾದ, ವಾಸಿ ಮಾಡಲಾಗದ ಕಾಯಿಲೆ ಎಂದು ಜನರಲ್ಲಿ ಒಂದು ಮೂಢನಂಬಿಕೆ ಉಂಟು. ಈ ಬೇನೆಯಿಂದ ಆಯಃಪ್ರಮಾಣಕ್ಕೆ ತೊಂದರೆ ಇಲ್ಲ. ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು, ಅಲ್ಪ ಸ್ವಲ್ಪ ಚಿಕಿತ್ಸೆಯನ್ನು ಅಗತ್ಯವಾದಾಗ ಮಾಡಿಕೊಂಡರೆ ಆಸ್ತ್ಮ ರೋಗಿಗಳು ಕೂಡ ಎಲ್ಲರಂತೆಯೇ ಬಾಳಿ ಬದುಕಬಹುದು.

ಉಲ್ಲೇಖ

[ಬದಲಾಯಿಸಿ]
  1. ಆಸ್ತಮಾ, ಶ್ವಾಸಕೋಶ ಕಾಯಿಲೆ;21 Aug, 2017
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೂರಲು&oldid=1240139" ಇಂದ ಪಡೆಯಲ್ಪಟ್ಟಿದೆ