ಆವಿಷ್ಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆವಿಷ್ಕಾರ ಇಂದ ಪುನರ್ನಿರ್ದೇಶಿತ)
ಆವಿಷ್ಕರಣ ಶಬ್ದದ ಇತರ ಬಳಕೆಗಳಿಗಾಗಿ ಆವಿಷ್ಕರಣ (ದ್ವಂದ್ವ ನಿವಾರಣೆ) ನೋಡಿ.

ಆವಿಷ್ಕರಣ ಎಂದರೆ ಒಂದು ಅನನ್ಯ ಅಥವಾ ನವೀನ ಉಪಕರಣ, ವಿಧಾನ, ರಚನೆ ಅಥವಾ ಪ್ರಕ್ರಿಯೆ. ಆವಿಷ್ಕರಣದ ಪ್ರಕ್ರಿಯೆಯು ಒಟ್ಟಾರೆ ಶಿಲ್ಪಶಾಸ್ತ್ರ ಮತ್ತು ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯೊಳಗಿನ ಪ್ರಕ್ರಿಯೆ. ಅದು ಒಂದು ಯಂತ್ರ ಅಥವಾ ಉತ್ಪನ್ನದಲ್ಲಿ ಸುಧಾರಣೆಯಾಗಿರಬಹುದು ಅಥವಾ ಒಂದು ವಸ್ತುವನ್ನು ಸೃಷ್ಟಿಸಲು ಹೊಸ ವಿಧಾನವಾಗಿರಬಹುದು ಅಥವಾ ಒಂದು ಫಲಿತಾಂಶವಾಗಿರಬಹುದು. ಸಂಪೂರ್ಣವಾಗಿ ಅನನ್ಯ ಕಾರ್ಯ ಅಥವಾ ಫಲಿತಾಂಶವನ್ನು ಸಾಧಿಸುವ ಆವಿಷ್ಕರಣವು ಆಮೂಲಾಗ್ರ ಬೆಳವಣಿಗೆಯಾಗಿರಬಹುದು. ಅಂತಹ ಕಾರ್ಯಗಳು ನವೀನವಾಗಿರುತ್ತವೆ ಮತ್ತು ಅದೇ ಕ್ಷೇತ್ರದಲ್ಲಿ ಪರಿಣತಿ ಪಡೆದ ಇತರರಿಗೆ ಸುವ್ಯಕ್ತವಾಗಿರುವುದಿಲ್ಲ. ಆವಿಷ್ಕಾರಕನು ಯಶಸ್ಸು ಅಥವಾ ವೈಫಲ್ಯದಲ್ಲಿ ದೊಡ್ಡ ಹೆಜ್ಜೆಯನ್ನು ಇಡುತ್ತಿರಬಹುದು.

ಕೆಲವು ಆವಿಷ್ಕರಣಗಳಿಗೆ ಪೇಟೆಂಟ್ ಪಡೆಯಬಹುದು. ಸ್ವಾಮ್ಯಪ್ರಮಾಣವು ಆವಿಷ್ಕಾರಕನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತದೆ ಮತ್ತು ಸಾಧಿಸಲಾದ ಆವಿಷ್ಕರಣವು ವಾಸ್ತವವಾಗಿ ಒಂದು ಆವಿಷ್ಕರಣ ಎಂದು ಕಾನೂನಾತ್ಮಕವಾಗಿ ಗುರುತಿಸುತ್ತದೆ. ಒಂದು ಆವಿಷ್ಕರಣಕ್ಕೆ ಸ್ವಾಮ್ಯಪತ್ರ ಪಡೆಯಲು ಬೇಕಾದ ನಿಯಮಗಳು ಹಾಗೂ ಅಗತ್ಯಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ ಮತ್ತು ಹಲವುವೇಳೆ ಸ್ವಾಮ್ಯಪತ್ರ ಪಡೆಯುವ ಪ್ರಕ್ರಿಯೆಯು ದುಬಾರಿಯಾಗಿರುತ್ತದೆ.

ಸಾಂಸ್ಕೃತಿಕ ಆವಿಷ್ಕರಣವು ಆವಿಷ್ಕರಣದ ಮತ್ತೊಂದು ಅರ್ಥವಾಗಿದೆ, ಇದರರ್ಥ ಜನರಿಂದ ಅಳವಡಿಸಿಕೊಳ್ಳಲಾದ ಮತ್ತು ಬೇರೆಯವರಿಗೆ ಸಾಗಿಸಲಾದ ಉಪಯುಕ್ತ ಸಾಮಾಜಿಕ ವರ್ತನೆಗಳ ನವೀನ ಸಮೂಹ.[೧] ಸಾಮಾಜಿಕ ಆವಿಷ್ಕರಣಗಳ ಸಂಸ್ಥೆಯು ಮ್ಯಾಗಜ಼ೀನ್‍ಗಳು ಮತ್ತು ಪುಸ್ತಕಗಳಲ್ಲಿನ ಅನೇಕ ಅಂತಹ ವಿಚಾರಗಳನ್ನು ಸಂಗ್ರಹಿಸಿತು. ಆವಿಷ್ಕರಣವು ಕಲಾತ್ಮಕ ಹಾಗೂ ವಿನ್ಯಾಸದ ಸೃಜನಾತ್ಮಕತೆಯ ಪ್ರಮುಖ ಅಂಶವೂ ಆಗಿದೆ. ಆವಿಷ್ಕರಣಗಳು ಹಲವುವೇಳೆ ಮಾನವ ಜ್ಞಾನ, ಅನುಭವ ಅಥವಾ ಸಾಮರ್ಥ್ಯದ ಎಲ್ಲೆಗಳನ್ನು ವಿಸ್ತರಿಸುತ್ತವೆ.

ಆವಿಷ್ಕರಣಗಳು ಮೂರು ಬಗೆಯದ್ದಾಗಿವೆ: ವೈಜ್ಞಾನಿಕ-ತಂತ್ರಜ್ಞಾನ ಸಂಬಂಧಿ (ವೈದ್ಯಶಾಸ್ತ್ರ ಸೇರಿದಂತೆ), ಸಮಾಜ ರಾಜಕೀಯ (ಅರ್ಥಶಾಸ್ತ್ರ ಮತ್ತು ನ್ಯಾಯಶಾಸ್ತ್ರ ಸೇರಿದಂತೆ), ಮತ್ತು ಮಾನವಿಕ, ಅಥವಾ ಸಾಂಸ್ಕೃತಿಕ.

ವೈಜ್ಞಾನಿಕ-ತಂತ್ರಜ್ಞಾನ ಸಂಬಂಧಿ ಆವಿಷ್ಕರಣಗಳಲ್ಲಿ ರೈಲುಮಾರ್ಗಗಳು, ವಾಯುಯಾನ, ಲಸಿಕೆ ಹಾಕುವಿಕೆ, ಬೆರಕೆತನ, ಪ್ರತಿಜೀವಿಕ, ಅಂತರಿಕ್ಷಯಾನ, ಪ್ರಕಾಶ ವಿಜ್ಞಾನ, ಪರಮಾಣು ಬಾಂಬ್, ಗಣಕ ಬಳಕೆ, ಅಂತರಜಾಲ, ಮತ್ತು ಸ್ಮಾರ್ಟ್‌ಫ಼ೋನ್ ಸೇರಿವೆ.

ಸಮಾಜ ರಾಜಕೀಯ ಆವಿಷ್ಕರಣಗಳಲ್ಲಿ ಸಾಮಾಜಿಕ ವರ್ತನೆಯ ರೀತಿಯನ್ನು ಬದಲಾಯಿಸುವ ಮತ್ತು ಮಾನವ ಪರಸ್ಪರ ಸಂವಹನ ಮತ್ತು ಸಂಘಟನೆಯ ಹೊಸ ರೂಪಗಳನ್ನು ಸ್ಥಾಪಿಸುವ ಹೊಸ ಕಾನೂನುಗಳು, ಸಂಸ್ಥೆಗಳು, ಮತ್ತು ಕಾರ್ಯವಿಧಾನಗಳು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. Artificial Mythologies: A Guide to Cultural Invention by Craig J. Saper (1997); Review of Artificial Mythologies. A Guide to cultural Invention, Kirsten Ostherr (1998)