ವಿಷಯಕ್ಕೆ ಹೋಗು

ಅಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಯನ ಇಂದ ಪುನರ್ನಿರ್ದೇಶಿತ)

ಭೂಮಿಗೆ 3 ರೀತಿಯ ಚಲನೆಗಳಿವೆ. ಭೂಮಿಯ ಭ್ರಮಣಾವಧಿ ಎಂದರೆ ತನ್ನ ಕಕ್ಷೆಯ ಮೇಲೆ ತಾನೆ ಸುತ್ತಲು 23 ಗಂಟೆ, 56 ನಿಮಿಷ, ಮತ್ತು 4.09 ಸೆಕೆಂಡ್ ಬೇಕಾಗುತ್ತದೆ. ಇದರಿಂದಲೇ ನಮಗೆ ಹಗಲು-ರಾತ್ರಿಗಳಾಗುವುದು. ಭೂಮಿ ಸೂರ್ಯನ ಸುತ್ತ ಸುತ್ತಲು 365 ದಿನ, 6 ಗಂಟೆ, 9 ನಿಮಿಷ ಮತ್ತು 9.56 ಸೆಕೆಂಡ್ ಕಾಲ ತೆಗೆದುಕೊಳ್ಳುತ್ತದೆ. ಇದನ್ನು ಪರಿಭ್ರಮಣಾವಧಿ ಅಥವಾ ಪ್ರದಕ್ಷಿಣಾವಧಿ ಎನ್ನಬಹುದು. ಭೂಮಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಮುಗಿಸಿದರೆ ಅದನ್ನು ಒಂದು ವರ್ಷವೆಂದು ಹೇಳುತ್ತೇವೆ. ಇವುಗಳಲ್ಲದೆ ಭೂಮಿಯ ಮತ್ತೊಂದು ಚಲನೆ ಇದೆ. ಅದಕ್ಕೆ ಆಯನ ಎಂಬ ಹೆಸರಿದೆ. ಭೂಮಿಯ ಅಕ್ಷ, ಕಾಂತಿವೃತ್ತಕ್ಕೆ 231/2 ಡಿಗ್ರಿಗಳಷ್ಟು ಓರೆಯಾಗಿದೆ. ಹೀಗೆ ಓರೆಯಾಗಿರುವುದರಿಂದಲೇ ಭೂಮಿಯ ಮೇಲೆ ಋತುಮಾನಗಳುಂಟಾಗುತ್ತದೆ, ಭೂಮಿಯ ಮೇಲಿನ ವಿವಿಧ ಭಾಗಗಳಲ್ಲಿ ಹಗಲು-ರಾತ್ರಿಗಳ ವ್ಯತ್ಯಾಸವಾಗುತ್ತದೆ. ಹೀಗೆ ಓರೆಯಾದ ಭೂಮಿಯ ಅಕ್ಷವನ್ನು ಖಗೋಳದಲ್ಲಿ ಉತ್ತರ ದಿಕ್ಕಿಗೆ ವಿಸ್ತರಿಸಿದರೆ ಅಲ್ಲಿ ಧ್ರುವ ನಕ್ಷತ್ರ ಕಾಣುತ್ತದೆ. ಭೂಮಿ ಬುಗುರಿಯಂತೆ ತಿರುಗಿದರೂ, ಬುಗುರಿಯ ಮೊಳೆ ಸ್ಥಿರವೆಂದು ತೋರುವಂತೆ, ಭೂಮಿ ತನ್ನ ಅಕ್ಷದ ಮೇಲೆ ತಿರುಗಿದರೂ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಅದು ಸ್ಥಿರವಾಗಿರುವಂತೆ ತೋರುತ್ತದೆ. ಆದ್ದರಿಂದಲೇ ಭೂಮಿಯ ಉತ್ತರಾರ್ಧ ಗೋಳದಲ್ಲಿ ಧ್ರುವ ನಕ್ಷತ್ರ ಸ್ಥಿರವಾಗಿ ಸದಾ ಕಾಲ ಕಾಣುತ್ತದೆ. ಈ ಅಕ್ಷದ ತುದಿಯೇ ನಿಧಾನವಾಗಿ ತನ್ನ ದಿಕ್ಕನ್ನು ಬದಲಾಯಿಸುತ್ತದೆ. ಇದನ್ನೆ ಆಯನ ಅಥವಾ ವಿಷುವದ್ ಬಿಂದುಗಳ ಬದಲಾವಣೆ ಎನ್ನಬಹುದು. ಇದರ ಅವಧಿ 25,800 ವರ್ಷಗಳು. ಇದರಿಂದ ಭೂಮಿಯ ಮೇಲೆ ಋತುಗಳ ಆರಂಭದ ಸಮಯವೇ ಬದಲಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ನಾವು ಆಚರಿಸುವ ಸಂಕ್ರಾಂತಿ. ನಮ್ಮ ಹಿಂದಿನವರು ಸಂಕ್ರಾಂತಿ ಆಚರಿಸಲು ಪ್ರಾರಂಭಿಸಿದ ಕಾಲದಲ್ಲಿ ಉತ್ತರಾಯಣ ಜನವರಿ 14 ಆರಂಭವಾಗುತ್ತಿತ್ತೆನೊ. ಈಗ ಆಚರಣೆ ಮಾತ್ರ ಉಳಿದುಕೊಂಡಿದೆ. ನಿಜವಾದ ಉತ್ತರಾಯಣ ಆರಂಭವಾಗುವುದು ಡಿಸೆಂಬರ‍್ 22ಕ್ಕೆ. ಇದೂ ಸಹ ಬದಲಾವಣೆಯಾಗುತ್ತದೆ.

"https://kn.wikipedia.org/w/index.php?title=ಅಯನ&oldid=750648" ಇಂದ ಪಡೆಯಲ್ಪಟ್ಟಿದೆ