ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಖು ಇಂದ ಪುನರ್ನಿರ್ದೇಶಿತ)
ಇಲಿ

ಇಲಿಯು ದಂಶಕಗಳ ಗಣಕ್ಕೆ ಸೇರಿದ, ವಿಶಿಷ್ಟ ಲಕ್ಷಣವೆಂಬಂತೆ ಚೂಪಾದ ಮೂತಿ, ಸಣ್ಣ ದುಂಡನೆಯ ಕಿವಿಗಳು, ಮತ್ತು ಒಂದು ಉದ್ದ ಬೆತ್ತಲೆ ಅಥವಾ ಬಹುತೇಕ ಬೋಳು ಬಾಲವನ್ನು ಹೊಂದಿರುವ ಒಂದು ಚಿಕ್ಕ ಸಸ್ತನಿ. ಸಾಮಾನ್ಯವಾದ ಮನೆ ಇಲಿಯು (ಮುಸ್ ಮುಸ್ಕುಲಸ್) ಅತ್ಯಂತ ಪರಿಚಿತವಾಗಿರುವ ಇಲಿ ಪ್ರಜಾತಿ. ಅದು ಒಂದು ಜನಪ್ರಿಯ ಸಾಕುಪ್ರಾಣಿ ಕೂಡ. ಇಲಿಯು ದಂಶಕವರ್ಗದ ಮಧ್ಯಮಗಾತ್ರದ ಉದ್ದಬಾಲದ ಪ್ರಾಣಿ (ರ್ಯಾಟ್). ಇದೇ ಹೆಸರಿನ ಪಂಗಡದ ಇನ್ನೊಂದು ಸದಸ್ಯ ಹೆಗ್ಗಣ. ಒಟ್ಟಾರೆ ಇವನ್ನು ಇಂಗ್ಲಿಷಿನಲ್ಲಿ ಲೇಮಿಂಗ್ಸ್ ಮತ್ತು ಮೋಲ್ಸ್ ಎಂದು ಕರೆದಿದೆ. ಇವುಗಳ ಮುಖ್ಯ ಲಕ್ಷಣಗಳು ಬೋಳಾದ ಹುರುಪೆಗಳು, ಉದ್ದ ಬಾಲ, ದೊಡ್ಡ ಕಣ್ಣುಗಳು ಮತ್ತು ಮೊನಚು ಮುಸುಡು, ಇವು ಬಲು ಚಟುವಟಿಕೆಯವು. ಈ ಜಾತಿಯಲ್ಲಿ ನೂರರಷ್ಟು ಪ್ರಭೇದಗಳಿವೆ. ಇವುಗಳ ವ್ಯಾಪ್ತಿ, ವಿತರಣೆ ಇಡೀ ಪ್ರಪಂಚಕ್ಕೆ ಅನ್ವಯಿಸುತ್ತದೆ. ಮೂಲತಃ ಇಲಿಯ ಉಗಮ ಮಧ್ಯ ಏಷ್ಯದಲ್ಲಿ ಆಗಿರಬಹುದು. ಕಾಲ-ಆಲಿಗೋಸೀನ್ (40 ದಶಲಕ್ಷ ವರ್ಷ ಪ್ರಾಚೀನ) ಕಲ್ಪದಿಂದೀಚೆಗೆ. ಇಲಿಗಳು ನೆಲಜೀವಿಗಳು. ಇವಿರದ ಊರಿಲ್ಲ. ಸಾಮಾನ್ಯವಾಗಿ ಯಾವ ಆಹಾರವೂ ತ್ಯಾಜ್ಯವಲ್ಲವಾದರೂ ಮನುಷ್ಯ ಮೆಚ್ಚುವ ಕಾಳುಕಡ್ಡಿಗಳು, ದಿನಸುಗಳು, ಅವನು ತಯಾರಿಸುವ ತಿಂಡಿ ತಿನಿಸುಗಳು ಇಲಿಗಳಿಗೆ ಬಲು ಪ್ರಿಯ. ಹೀಗಾಗಿ ಮನುಷ್ಯನ ದೊಡ್ಡ ಪಿಡುಗುಗಳಲ್ಲಿ ಇವೂ ಒಂದು. "ಅಲ್ಲೇನಿಲಿಗಳ ಕಾಟವೆ ಕಾಟ. ಅಲ್ಲಿಯ ಜನಗಳಿಗತಿ ಗೋಳಾಟ" ಎಂಬ ಜನಪ್ರಿಯ ಕವಿನುಡಿಯ ಹಿನ್ನೆಲೆ ಇಲ್ಲಿದೆ. ಆತ್ಮ ರಕ್ಷಣೆಗೋಸ್ಕರ ಇಲಿ ಸದಾ ಜಾಗರೂಕವಾಗಿರಬೇಕು. ಸಹಜವಾಗಿಯೇ ಅದರ ಸ್ವಭಾವ ಬಲು ಚುರುಕು; ನಿವಾಸ ಬಲು ಗುಪ್ತ. ಉಗ್ರಾಣದ ಮೂಲೆಗಳಲ್ಲಿ, ಸಾಮಾನು ಸರಂಜಾಮುಗಳ ಕೈಗೆಟುಕದ ಎಡೆಗಳಲ್ಲಿ, ಮರದ ಪೊಟರೆಗಳಲ್ಲಿ, ಕಲ್ಲ ಸೆರೆಗಳಲ್ಲಿ, ನೆಲದಡಿಯ ಬಿಲಗಳಲ್ಲಿ, ಇಲಿಗಳ ಠಾವು ಸಾಮಾನ್ಯ. ಕಚ್ಚಿ ಮೃದು ಮಾಡಿದ ಉಣ್ಣೆ, ಕಾಗದ ಬಟ್ಟೆ, ಹುಲ್ಲಿನ ತುಣುಕುಗಳು-ಇವನ್ನು ಸೇರಿಸಿ ಗೂಡು ಕಟ್ಟುತ್ತವೆ. ಸಂಚಾರ ಹೆಚ್ಚಾಗಿ ರಾತ್ರಿ ವೇಳೆ. ಆದರೆ ಜನ, ಇತರ ಶತ್ರುಪ್ರಾಣಿ ಸಂಚಾರವಿಲ್ಲವೆಂದು ಖಾತ್ರಿಯಾದಾಗ ಬಲು ಧೈರ್ಯದಿಂದ ಹಗಲು ಹೊತ್ತಿನಲ್ಲೂ ಹೊರಗೆ ಬಂದು ಕಣ್ಣಿಗೆ ಬಿದ್ದ ತಿಂಡಿ ತಿನ್ನುವುದುಂಟು. ಯಾರಾದರೂ ಬಂದೊಡನೆ ಅಥವಾ ಸಂಶಯಕಾರಣವಾದ ಸದ್ದು ಉಂಟಾದೊಡನೆ ಸರಕ್ಕನೆ ಬಿಲಕ್ಕೆ ಜಿಗಿದು ಬಿಡುತ್ತವೆ. ಆಹಾರವನ್ನು ಅಳಿಲಿನಂತೆ ಮುಂಗಾಲುಗಳಲ್ಲಿ ಹಿಡಿದು ಹಿಂಗಾಲುಗಳ ಮೇಲೆ ಕುಳಿತು ತಿನ್ನುವುದು ರೂಢಿ. ಇಲಿ ಬಹಳ ಎತ್ತರವ ಹಾರಲಾರದು. ಆದರೆ ಕಡಿದಾದ ಸ್ಥಳ ಏರಬಲ್ಲುದು. ವೇಗವಾಗಿ ಓಡುವಾಗ ಬೆಕ್ಕಿನಂತೆ ಹಿಂಗಾಲುಗಳಿಂದ ಕುಪ್ಪಳಿಸುತ್ತ ಮುಂಗಾಲುಗಳಿಂದ ಜಿಗಿಯುತ್ತ ಧಾವಿಸುತ್ತದೆ.

ಇಲಿಯ ಗಾತ್ರ ಪ್ರಭೇದಾನುಸಾರ ವ್ಯತ್ಯಾಸವಾಗುತ್ತದೆ. ಬಯೀಮಿಸ್ ಎಂಬವು ಉದ್ದದಲ್ಲಿ 100 ಮಿ. ಮೀ. ಗಿಂತಲೂ ಚಿಕ್ಕವು. ಮುಸ್ಕ್ರಟ್ ಎಂಬುವು 800 ಮಿ. ಮೀ. ಗಿಂತಲೂ ಹೆಚ್ಚು ಉದ್ದದವು. ಇಲಿಯ ಕೆಲವು ಮುಖ್ಯ ಪ್ರಭೇದಗಳು ಹೀಗಿವೆ : ಕೌಚ ಇಲಿ, ಪಾಲ್ಲಿಟ್ ಇಲಿ, ರಾಜಾ ಇಲಿ, ಗದ್ದಲ ಇಲಿ, ಹಾರು ಇಲಿ, ಚಿಂಚಿಲ್ಲ ಇಲಿ, ಥೈಲೆಂಡಿನ ಇಲಿ, ಸೂರಿಲಿ, ಸುಂಡಿಲಿ, ಮೂಗಿಲಿ, ಹೊಲದ ಇಲಿ, ಬಿಳಿಕಾಲಿನ ಇಲಿ, ಮರದಿಲಿ, ಹೆಗ್ಗಣ, ಕಾಡಿಲಿ, ಇವುಗಳಲ್ಲಿ ಕೆಲವು ಪ್ರಭೇದಗಳ ವಿವರಗಳನ್ನು ಮುಂದೆ ಕೊಟ್ಟಿದೆ. ಪಟ್ಟಿಯನ್ನು ಹೀಗೆಯೇ ಬೆಳೆಸಿಕೊಂಡು ಹೋಗಬಹುದು; ಎಷ್ಟು ಬೆಳೆಸಿದರೂ ಸದಸ್ಯರ ಹೆಸರು ಮುಗಿಯದು. ಒಂದೊಂದು ಪ್ರಭೇದವೂ ಬೆಳೆಯುವ ವೇಗವನ್ನು ಪರಿಶೀಲಿಸಿದರೆ ನಾವಿರುವುದು ಮನುಷ್ಯರ ಪ್ರಪಂಚದಲ್ಲಿಯೋ ಅಥವಾ ಇಲಿಗಳ ಪ್ರಪಂಚದಲ್ಲಿಯೋ ಎಂಬ ಸಂದೇಹ ಮೂಡುವಂತಿದೆ. ಒಂದು ಪ್ರಭೇದದ ಉದಾಹರಣೆ ಪರಿಶೀಲಿಸಬಹುದು. ಸುಗ್ಗಿ ಇಲಿ ಹೆಸರೇ ಸೂಚಿಸುವಂತೆ ಹೊಯ್ಲು ಸಮಯದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಎರಡು ಸಲ ಮರಿ ಹಾಕುತ್ತದೆ. ಏಪ್ರಿಲ್ ಮತ್ತು ಸೆಪ್ಟಂಬರ್ ತಿಂಗಳುಗಳು ಋತುಕಾಲಗಳು; ಆಗ ಗಂಡಿನ ತೀವ್ರ ಧ್ವನಿಯ ಸಿಳ್ಳಿನ ಆಕರ್ಷಣೆ ಪ್ರಾರಂಭ. ಹೆಣ್ಣಿಗೆ ಋತು ಮುಗಿದು ಸುಮಾರು ಇಪ್ಪತ್ತನಾಲ್ಕು ದಿವಸಗಳ ತರುವಾಯ ಮೂರರಿಂದ ಏಳರವರೆಗೆ ಜಡಮರಿಗಳು ಹುಟ್ಟುತ್ತವೆ. ಇವುಗಳ ಭಾರ 1/20 ಔನ್ನಿಗಿಂತಲೂ ಕಡಿಮೆ; ಇವುಗಳಿಗೆ ರೋಮದ ಕವಚವಿಲ್ಲ ; ನೋಡಲು ಕಂಗಳಿಲ್ಲ. ಮುಂದಿನ ಎಂಟು ದಿವಸಗಳಲ್ಲಿ ಕಣ್ಣುಗಳು ತೆರೆಯುತ್ತವೆ; ಮೊದಲ ಹಲ್ಲುಗಳು ಮೊಳೆಯುತ್ತವೆ. ಸುಮಾರು ಎರಡು ವಾರ ಪ್ರಾಯವಾಗುವಾಗ ತಾಯಿ ಇಲಿ ಮೊಲೆಯೂಡಿಸುವುದನ್ನು ನಿಲ್ಲಿಸುತ್ತದೆ; ಮತ್ತೆ ಹತ್ತು ದಿವಸಗಳಲ್ಲಿ ಮರಿ ಇಲಿಗಳು ಸ್ವತಂತ್ರವಾಗುವುವು. ಐದುವಾರಗಳು ಮುಗಿಯುವಾಗ ಹೊಸ ಪೀಳಿಗೆ ಪೂರ್ಣವಿಕಸನಗೊಂಡಿರುತ್ತದೆ. ಇಂಥ ಒಂದೊಂದು ಇಲಿಯ ಭಾರ ಸುಮಾರು 1/3 ಔನ್ಸ್. ಒಂದು ವರ್ಷ ಮುಗಿಯುವಾಗ ಸುಗ್ಗಿ ಇಲಿ ಮುದಿಯಾಗಿರುತ್ತದೆ. ಈ ಪ್ರಭೇದಕ್ಕಿಂತಲೂ ಅದೆಷ್ಟೋ ತೀವ್ರ ವೇಗದಿಂದ ವೃದ್ಧಿಯಾಗುವ ಇತರ ಪ್ರಭೇದಗಳು ಹಲವಾರು. ಆದರೆ ಇಲಿಗಳಿಗಿರುವ ಶತ್ರುಗಳ ಸಂಖ್ಯೆ ಏನೂ ಕಡಿಮೆಯಿಲ್ಲ. ಹಕ್ಕಿ, ಹಾವು, ಬೆಕ್ಕು, ನಾಯಿ ಮುಂತಾದುವೆಲ್ಲ ಇಲಿಯ ಸಹಜ ಶತ್ರುಗಳು. ಈ ಕಾರಣದಿಂದ ನಿಸರ್ಗದ ಸಮತೋಲ ಉಳಿದಿದೆ. ಬಿಳಿ ಮತ್ತು ಕಂದು ಇಲಿಗಳನ್ನು ಮನೆಯಲ್ಲಿ ಸಾಕುವುದಿದೆ. ಕೋಗಿಲೆಯಂತೆ ಹಾಡುವ ಇಲಿಗಳು, ವರ್ತುಲಾಕಾರವಾಗಿ ಓಡುವ, ಕುಣಿಯುವ ಇಲಿಗಳು ರೋಗಗ್ರಸ್ತ ಇಲಿಗಳೇ ವಿನಾ ಬೇರೆ ಪ್ರಭೇದಗಳಲ್ಲ. ಉದ್ದ ಬಾಲದ ಕಾಡಿಲಿಗಳು ಮನೆಯ ಇಲಿಗಳಿಗಿಂತ ದೊಡ್ಡವು. ಎಲ್ಲ ಸಸ್ತನಿಗಳಿಗಿಂತ ಇಲಿಗಳ ಸಂಖ್ಯೆ ಹೆಚ್ಚು.

ಇಲಿಗಳ ವಿವಿಧ ಜಾತಿಗಳು

[ಬದಲಾಯಿಸಿ]

ಮೈಸೂರು ರಾಜ್ಯದಲ್ಲೂ ಅದರ ಸುತ್ತ ಮುತ್ತಲೂ ಇರತಕ್ಕ ಕೆಲವು ಜಾತಿಯ ಇಲಿಗಳನ್ನೂ ಅವುಗಳ ಪ್ರಭೇದಗಳನ್ನೂ ಕೆಳಗೆ ಸೂಚಿಸಿದೆ.

ಹೆಗ್ಗಣ

[ಬದಲಾಯಿಸಿ]

ಬ್ಯಾಂಡಿಕೋಟ ಎಂಬ ಜಾತಿಗೆ ಸೇರಿದ್ದು ; ಈ ಹೆಸರು ತೆಲುಗಿನ ಪಂದಿಕೋಕು (ಹಂದಿ ಇಲಿ) ಎಂಬ ಹೆಸರಿನ ಅಪಭ್ರಂಶವಿರುವಂತೆ ತೋರುತ್ತದೆ. ಮೈಮೇಲಿನ ತುಪ್ಪಳದ ಅರ್ಧದಷ್ಟು ಭಾಗದಲ್ಲಿ ಮುಳ್ಳುಗಳಿವೆ. ಹೆಬ್ಬೆರಳನ್ನುಳಿದು ಮಿಕ್ಕ ಬೆರಳುಗಳಿಗೆ ಚೂಪಾದ ನಖಗಳುಂಟು. ಅಂಗಾಲಿನಲ್ಲಿ ಆರು ಮೆತ್ತೆಗಳಿವೆ. ಇದು ಮೂಷಕವರ್ಗದಲ್ಲೇ ದೊಡ್ಡ ಪ್ರಾಣಿ. ತಲೆಯಿಂದ ಬಾಲದಬುಡದವರೆಗೆ 12"-13" ; ಆದರೆ ಬಾಲವೇ 11"-13" ಇರುತ್ತದೆ. ಬಣ್ಣ ಮೇಲ್ಬಾಗದಲ್ಲಿ ಕಪ್ಪು ಮಿಶ್ರಿತ ಕಂದು ; ಪಕ್ಕಗಳಲ್ಲಿ ಬೂದು ಛಾಯೆ; ತಳಭಾಗ ಬೂದು ಮಿಶ್ರಿತ ಕಂದು. ಭಾರತ ಮತ್ತು ಸಿಂಹಳದ ಆದ್ಯಂತ ವ್ಯಾಪಿಸಿದೆ. ಆದರೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿರಳ. ಹಗಲು ಹೊತ್ತು ಬಿಲಗಳಲ್ಲಿ ಮರೆಯಾಗಿದ್ದು ರಾತ್ರಿ ವೇಳೆ ಸಿಕ್ಕಿದೆಡೆಗಳನ್ನೆಲ್ಲ ತೋಡಿ ಮಣ್ಣು ಗುಡ್ಡೆಹಾಕುವುದು ಇದರ ಸ್ವಭಾವ. ಊರು, ಗ್ರಾಮಗಳಲ್ಲೂ ವ್ಯವಸಾಯ ಪ್ರದೇಶಗಳಲ್ಲೂ ಇದರ ಉಪಟಳ ಹೆಚ್ಚು. ಕಾಳು ಕಡ್ಡಿಗಳನ್ನೂ ದವಸಧಾನ್ಯಗಳನ್ನೂ ಹಣ್ಣುಹಂಪಲು ತರಕಾರಿಗಳನ್ನೂ ಕತ್ತರಿಸಿ ತಿಂದು ಹಾಕಿ ನಷ್ಟ ಉಂಟುಮಾಡುತ್ತದೆ. ಹಾಗಿದ್ದರೂ ಇದು ಸಾಮಾನ್ಯವಾಗಿ ಅಂಜುಬುರುಕ ಪ್ರಾಣಿ : ನಾಯಿಗಳು ಇದನ್ನು ಬೇಟೆಯಾಡಿ ತಿಂದು ಬಿಡುತ್ತವೆ. ಆದರೂ ಒಮ್ಮೊಮ್ಮೆ ಶತ್ರುಗಳನ್ನು ಧೈರ್ಯದಿಂದ ಎರಡು ಕಾಲುಗಳ ಮೇಲೆ ಎದ್ದುನಿಂತು ಎದುರಿಸುವುದುಂಟು. ಈ ಜಾತಿಯ ಬ್ಯಾಂಡಿಕೋಟ ಮಲಬಾರಿಕ ಎಂಬ ಪ್ರಭೇದ ಎಲ್ಲ ಕಡೆಯೂ ಹರಡಿದೆ. ಎದುರಾಳಿಯನ್ನು ಕಂಡರೆ ಹಂದಿಯಂತೆ ಎಗರಿನಿಂತು ಎದುರಿಸುತ್ತದೆ. ಗಾತ್ರ ಸಾಧಾರಣ. ತುಪ್ಪಳ ಒರಟು. ಸ್ತನಗಳ ಸಂಖ್ಯೆ 16-18.

ಮುಖಮಲ್ ಹೆಗ್ಗಣ

[ಬದಲಾಯಿಸಿ]

ಇದರಲ್ಲಿ ಎರಡು ಜಾತಿಗಳಿವೆ. ಗುನೋಮಿನ್ ಮತ್ತು ರ್ಯಾಟಸ್, ಮೊದಲಜಾತಿಯ ಪ್ರಾಣಿಗಳಲ್ಲಿ ಸ್ತನಗಳು 10-12. ಉದರದ ಮೇಲಿನ ಕೂಲದ ಛಾಯೆ ಬಿಳಿ. ಮೇಲ್ಬಾಗದ ತಳಭಾಗದ ಬಣ್ಣಗಳು ಪಕ್ಕದಲ್ಲಿ ಬೆರೆತಿಲ್ಲ. ತಲೆ ಮೈ ಕೂಡಿ ಉದ್ದ 6"-9". ಇವೆರಡು ಜಾತಿಗಳಿಂದಲೂ ಬೆಳೆಗಳಿಗೆ ಭಾರಿ ಪ್ರಮಾಣದ ನಷ್ಟವುಂಟು. ದಕ್ಷಿಣ ಭಾರತದಲ್ಲಿ ಇವುಗಳ ಹಾವಳಿ ಬಲು ಹೆಚ್ಚು. ಬತ್ತ, ರಾಗಿ, ಮರಗೆಣಸು, ತೆಂಗಿನ ಸಸಿ, ತರಕಾರಿ, ಹಣ್ಣಿನ ಗಿಡ ಇವಕ್ಕೆಲ್ಲ ಭಾರಿನಷ್ಟ ಉಂಟುಮಾಡುತ್ತವೆ. ಗದ್ದೆ ಏರಿಗಳಲ್ಲಿ, ಕಾಲುವೆ ಪಕ್ಕದಲ್ಲಿ ಚರಂಡಿ ಸಂದುಗಳಲ್ಲಿ ಇವುಗಳ ವಾಸ. ಬಿಲ 20'-30'ಗಳಷ್ಟು ಆಳ. ಒಂದೊಂದು ಗೂಡಿಗೂ ನಾಲ್ಕೈದು ದ್ವಾರಗಳಿರುವುದುಂಟು. ಮುಖ್ಯ ಸುರಂಗದಿಂದ ನಾಲ್ಕೈದು ಉಪ ಸುರಂಗಗಳು ಕವಲೊಡೆದಿರುತ್ತವೆ. ಒಂದೊಂದು ಬಿಲದಲ್ಲೂ ಒಂದು ಜೊತೆ ಮಾತ್ರ ವಾಸಿಸುತ್ತವೆ. ಹುಲ್ಲು, ಎಲೆ, ಬಟ್ಟೆ ಚಿಂದಿ - ಇವನ್ನೆಲ್ಲ ಹಾಕಿ ಗೂಡಿನಲ್ಲಿ ಹಾಸಿಗೆ ಮಾಡಿ ಮರಿಗಳಿಗೆ ತಾಯಿ ಮೆತ್ತನೆಯ ಸ್ಥಳ ಕಲ್ಪಿಸುತ್ತದೆ. ಒಂದು ಸಲಕ್ಕೆ ಹತ್ತಕ್ಕಿಂತಲೂ ಹೆಚ್ಚು ಮರಿ ಹಾಕುತ್ತದೆ. ಬತ್ತ, ರಾಗಿ, ಹುಲ್ಲು-ಇವುಗಳ ತೆನೆಗಳನ್ನು ಸಾಗಿಸಿ ಗೂಡಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಮಖಮಲ್ ಹೆಗ್ಗಣಗಳು ಅತಿ ಚುರುಕು ; ಅಪಾಯದ ಕುರುಹನ್ನು ಬಲುಬೇಗ ಗ್ರಹಿಸಿ ಅಪಾಯ ಒದಗಿದಾಗ ಬಲು ಜಾಣ್ಮೆಯಿಂದ ಓಡಿಹೋಗಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತವೆ. ಕಳ್ಳ ಮಾರ್ಗಗಳಿಂದ ಗುಪ್ತ ಸ್ಥಳಕ್ಕೆ ಹೋಗಿ ಸೇರಿ ಬಿಡುತ್ತವೆ. ಕೆಲವೇಳೆ, ನೀರಿನಲ್ಲೂ ಅಡಗಿಕೊಳ್ಳುವುದುಂಟು. ವಿಧಿಯಿಲ್ಲದೆ ಶತ್ರುಗಳಿಗೆ ಸಿಕ್ಕಿದಾಗ ಸುಮ್ಮನೆ ಮಣಿಯುವುದಿಲ್ಲ. ಗುಟುರುಹಾಕಿ ವೀರಾವೇಶದಿಂದ ಕಾದಾಡಿ ಸಾಯುತ್ತವೆ. ಇದರ ಮರಿಗಳು ಹುಟ್ಟಿದ ಮೇಲೆ ಕೆಲವು ದಿವಸಗಳ ತನಕ ಕಣ್ಣು ಬಿಡುವುದಿಲ್ಲ ; ಆ ಕಾಲದಲ್ಲಿ ತಾಯಿಹೆಗ್ಗಣ ಮರಿಗಳಿಗೆ ಮೊಲೆಯೂಡಿಸಿ ಮಮತೆಯ ರಕ್ಷಣೆಯೀಯುತ್ತದೆ. ಆದರೂ ಕೆಲವು ಪ್ರಭೇದಗಳು ಅಪೂರ್ವವಾಗಿ ತಮ್ಮ ಮರಿಗಳನ್ನೇ ತಿಂದು ಬಿಡುವುವೆಂದು ವರದಿಯಾಗಿದೆ.

ಮನೆ ಇಲಿ

[ಬದಲಾಯಿಸಿ]

ರ್ಯಾಟಸ್ ರೌಟಿನಿ, ರ್ಯಾಟಸ್ ರೂಫಿಸೆಸ್ ಎಂಬೆರೆಡು ಪ್ರಭೇದಗಳನ್ನು ಈ ಹೆಸರಿನಿಂದ ಕರೆಯುವುದುಂಟು. ಇವಕ್ಕೆ ಕಪ್ಪಿಲಿ ಎಂಬ ಹೆಸರೂ ಉಂಟು. ರ್ಯಾ. ರೌಟನಿಗೆ ಉದರದ ಕೂದಲು ಸ್ಲೇಟಿನ ಬಣ್ಣ. ಮೇಲಿನ ಕೆಳಗಿನ ಬಣ್ಣಗಳು ಪಕ್ಕದಲ್ಲಿ ಬೆರೆತಂತಿವೆ. ಮಾನವನ ನಿವಾಸ ಇವುಗಳಿಗೆ ಬಹು ಪ್ರಿಯವೆನಿಸುವ ವಾಸಸ್ಥಳವಾದ್ದರಿಂದ ಇವಕ್ಕೆ ಈ ಹೆಸರು. ರ್ಯಾ. ರೂಫೆಸೆಸ್‍ಗೆ ಅಂಗಾಲಿನಲ್ಲಿ ಆರು ಅಥವಾ ಕಮ್ಮಿ ಮೆತ್ತೆಗಳು ಇರುತ್ತವೆ. ಒಟ್ಟು ಸ್ತನಗಳ ಸಂಖ್ಯೆ 8. ಮನೆ ಇಲಿ ಚಿಕ್ಕವು. ತಲೆ ದೇಹ 5"-8" ಉದ್ದ. ಇವು ಏಷ್ಯದಲ್ಲಿ ಉಗಮಿಸಿ ವಿಶ್ವದ ಇತರ ಖಂಡಗಳಿಗೆ ವಾಣಿಜ್ಯ ಸಾರಿಗೆಗಳ ಮೂಲಕ ಹರಡಿವೆ. ರ್ಯಾಟಸ್ ನಾರ್ವೀಜಿಕಸ ಎಂಬ ಪ್ರಭೇದ ಪ್ರಂಪಚದ ಅನೇಕ ಕಡೆ ಹರಡಿದೆ. ಎಲ್ಲ ಪ್ರಭೇದಗಳೂ ಮಾನವನೊಡನೆಯೂ ಅವನ ಕೃಷಿಕ್ಷೇತ್ರಗಳ್ಲೂ ವಾಸಿಸುತ್ತವೆ. ರ್ಯಾ. ನಾರ್ವೀಜಿಕಸ್ ಪ್ರಭೇದ ತೋಟ ಹೊಲಗಳಲ್ಲೂ ಇರುವುವು. ಇನ್ನು ಕೆಲವು ಪ್ರಭೇದಗಳು ಎತ್ತರದಲ್ಲಿ ಎಂದರೆ ಸೂರು, ಹಂಚಿನ ಸಂದು, ಮೇಲ್ಚಾವಣಿ ಮರಗಳ ಪೊಟರೆ ಇತ್ಯಾದಿ ಸ್ಥಳದಲ್ಲಿ ವಾಸಿಸುತ್ತವೆ. ಮನೆ ಇಲಿ ನೋಡಲು ಸಣ್ಣ ಪ್ರಾಣಿಯಾದರೂ ಅದರ ಪಿಡುಗು ವಿಪರೀತ. ಸಂಗ್ರಹಿಸಿಟ್ಟ ಕಾಳು ಕಡ್ಡಿ ದವಸಧಾನ್ಯಗಳನ್ನೆಲ್ಲ ಒಳಗೇ ತಿಂದುಹಾಕಿ ಸಿಪ್ಪೆಯನ್ನು ಹಾಗೇ ಉಳಿಸಿ ಹೋಗುತ್ತದೆ. ಇನ್ನು ಕೆಲವು ವೇಳೆ ತಿಂದೂ ಅದಕ್ಕೂ ಹೆಚ್ಚುಪಾಲನ್ನು ಹರಡಿ ಹೊಲಸುಮಾಡಿ ಕೆಡಿಸುತ್ತದೆ. ಜೊತೆಗೆ ಇದು ವರ್ಷಕ್ಕೆ 4-5 ಬಾರಿ, ಒಂದೊಂದು ಬಾರಿಗೂ 10-12 ಮರಿ ಹಾಕುವುದರಿಂದ ಇದರ ಸಂತಾನ ಬಹು ತೀವ್ರವೇಗದಲ್ಲಿ ಹೆಚ್ಚುತ್ತದೆ. ಇದರಿಂದಲೇ ಒಂದೊಂದು ಸ್ಥಳದಲ್ಲಿ ಇದ್ದಕ್ಕಿದ್ದ ಹಾಗೆಯೆ ಇವುಗಳ ಪಿಡುಗು ಎದ್ದು ತೋರುವುದು. ಬಿಳಿ ಹೊಟ್ಟೆಯ ರಾಟನಿ ಇಲಿ ತೆಂಗಿನ ಫಸಲಿಗೆ ಕಂಟಕ. ಮರದ ಮೇಲೆ ಪಟ್ಟಿಯಲ್ಲಿ ಗೂಡುಮಾಡಿಕೊಂಡು ತೆಂಗಿನ ಹೂವನ್ನು ತಿನ್ನುವುದು, ಎಳೆಯ ಕಾಯಿಗಳ ನೀರು ಹೀರಿ ಒಣಗಿಸುವುದು, ಹೀಚುಕಾಯಿಗಳನ್ನು ಕಡಿದೆಸೆಯುವುದು ಇತ್ಯಾದಿ ಕಾರ್ಯಗಳಿಂದ ತೋಟಕ್ಕೆ ತೀರ ನಷ್ಟವುಂಟುಮಾಡುತ್ತದೆ. ರೂಫಿಸೆಸ್ ಇಲಿಯಿಂದ ದವಸಧಾನ್ಯಗಳಿಗೂ ವಾಣಿಜ್ಯ ಪ್ರಮುಖತೆಯ ಸಂಬಾರಾದಿ ವಸ್ತುಗಳಿಗೂ ತೀರ ಅಪಾಯ ಸಂಭವಿಸುವುದುಂಟು. ಮಾನವನ ಆಹಾರ ಸಾಮಗ್ರಿಗಳ ನಾಶದಲ್ಲಿ ಈ ಇಲಿಗಳು ಮುಖ್ಯ ಪಾತ್ರ ವಹಿಸುತ್ತದೆ.

ಹುಲ್ಲಿಲಿ

[ಬದಲಾಯಿಸಿ]

ಮಿಲ್ಲರ್ಡಿಯ ಎಂಬ ಜಾತಿಯವನ್ನೂ ಮೂಸ್ ಎಂಬ ಜಾತಿಯವನ್ನೂ ಒಟ್ಟಿಗೆ ಜನಸಾಮಾನ್ಯದಲ್ಲಿ ಈ ಹೆಸರಿನಿಂದ ಕರೆಯುವುದುಂಟು. ಮಿಲ್ಲಾರ್ಡಿಯ ವಿಲ್ಟಾಡ ಎಂಬ ಪ್ರಭೇದವೇ ಮನೆಯ ಸುಂಡಿಲಿ. ಇದರ ಮೂತಿ ಕಿರಿದು, ಮೊನಚು. ಮೂಸ್ ಜಾತಿಯ ಇಲಿಗಳ ಉದರ ನೀಲಿಮಿಶ್ರಿತ ಬೂದುಬಣ್ಣವಾಗಿರುತ್ತದೆ. ಸಾಮಾನ್ಯವಾಗಿ ಇವು ತೀರ ಸಣ್ಣ ಜಾತಿಗಳು. ತೆಲೆ, ಮೈ ಉದ್ದ 5". ಕೂದಲು ಬಲು ನುಣುಪು. ಕುಷ್ಕಿ ಜಮೀನಿನ ಪೊದೆಗಳಲ್ಲೊ ಅವುಗಳ ಹತ್ತಿರದ ಬಿಲಗಳಲ್ಲೊ ವಾಸಿಸುತ್ತವೆ. ಕಲ್ಲುಗುಡ್ಡೆಗಳಲ್ಲೂ ಮಣ್ಣಿನ ಬಿರುಕುಗಳಲ್ಲೂ ಇತರ ಜಾತಿ ಇಲಿಗಳ ಬಿಲದಲ್ಲೂ ವಾಸಿಸುವುದುಂಟು. ಬಿಲ ಕೊರೆಯುವ ಶಕ್ತಿ ಅಷ್ಟಾಗಿ ಇದಕ್ಕೆ ಇಲ್ಲ. ಒಂದೇ ಗೂಡಿನಲ್ಲಿ ಹಲವಾರು ಇಲಿಗಳು ವಾಸಿಸುವುದುಂಟು. ಬತ್ತ, ಹತ್ತಿ ಮುಂತಾದ ಬೆಳೆಗಳಿಗೆ ಇವುಗಳಿಂದ ತುಂಬ ಹಾನಿಯುಂಟು. ಇವು ನೀರಿನಲ್ಲಿ ಇಳಿಯಲಾರವು. ಅನೇಕ ವೇಳೆ ಮಳೆಯನೀರಿನ ಪ್ರವಾಹ ಬಿಲಕ್ಕೆ ನುಗ್ಗಿ ಇವುಗಳ ಸಾವಿಗೆ ಕಾರಣವಾಗುತ್ತದೆ.

ಚಿಟ್ಟಿಲಿ

[ಬದಲಾಯಿಸಿ]

ಮೂಸ್ ಮಸ್ಕ್ಯುಲಿಸ್, ಮೂಸ್ ಡೂಬಿಯಸ್ ಮತ್ತು ಲೆಗ್ಗದ ಜಾತಿಯ ಕೆಲವು; ಪ್ರಭೇದಗಳ ಒಟ್ಟು ಹೆಸರು. ಮೂಸ್ ಮಸ್ಕುಲ್ಸ ಪ್ರಭೇದದ ಉದರ ಹೊಸಲು ಕಂಡು ಛಾಯೆಯ ಹಳದಿ. ಮೂಸ್ ಡೂಬಿಯಸ್ ಪ್ರಭೇದ ಕಡು ಇಲಿ; ಇದರ ಮೂತಿ ಬಲು ಉದ್ದ. ಲೆಗ್ಗಡ ಜಾತಿಯ ಪ್ರಭೇದಗಳು ಸಣ್ಣ ಗಾತ್ರದವು. ಮೊದಲಿಗೆ ಯೂರೋಪು ಉತ್ತರ ಆಫ್ರಿಕಗಳ ನಿವಾಸಿಗಳಾದ ಮೂಸ್ ಪ್ರಭೇದಗಳು ಕಾಲಕ್ರಮದಲ್ಲಿ ಭಾರತ ಮುಂತಾದ ದೇಶಗಳಿಗೂ ಹರಡಿದಂತೆ ತೋರುತ್ತದೆ. ಇವು ಗಾತ್ರದಲ್ಲಿ ಬಲುಸಣ್ಣ. ತೆಲ-ಮೈ ಉದ್ದ 2 1/2 "-3". ಬಾಲದ ಉದ್ದ 2 1/2" — 3 1/2". ಬಾಲದಲ್ಲಿ ಕೂದಲು ಕಡಿಮೆ. ವಾಸ ಹೆಚ್ಚಾಗಿ ಮನೆಗಳಲ್ಲಿ; ವಿರಳವಾಗಿ ತೋಟ ಹೊಲಗಳಲ್ಲಿ ತುಂಬ ಚಟುವಟಿಕೆಯಿಂದ ಕಂಬ, ಮರ, ಒರಟು, ಗೋಡೆ ಇವನ್ನು ಸರಾಗವಾಗಿ ಹತ್ತುತ್ತವೆ. ದೂರಕ್ಕೆ ಚಿಮ್ಮಿ ನಗೆಯುವುದೂ ಉಂಟು. ದವಸ ಧಾನ್ಯಗಳನ್ನು ತಿಂದುಹಾಕಿ ಮಾನವನಿಗೆ ನಷ್ಟವುಂಟುಮಾಡುತ್ತವೆ. ಒಂದೊಂದು ಸಲಕ್ಕೂ 7-8 ಮರಿಗಳಂತೆ ವರ್ಷಕ್ಕೆ ಮೂರು ನಾಲ್ಕು ಬಾರಿ ಈಯುತ್ತವೆ.

ಸುಂಡಿಲಿ

[ಬದಲಾಯಿಸಿ]

ವ್ಯಾಂಡಲೂರಿಯ ಜಾತಿಯ ಪ್ರಭೇದಗಳನ್ನು ಈ ಹೆಸರಿನಿಂದ ಕರೆಯುವುದುಂಟು. ಗಾತ್ರದಲ್ಲಿ ಇವು ಚಿಕ್ಕವು. ಮುಖದ ಮೇಲೆ ಕಪ್ಪು ಗುರುತುಗಳಿಲ್ಲ. ಮೈಬಣ್ಣ ಕಂದು. ಪಾದಗಳು ಬಿಳಿ. ತಲೆ-ಮೈ ಉದ್ದ 2 ಳಿ"- 3"; ಬಾಲದ ಉದ್ದವೂ ಅಷ್ಟೇ. ಹೊಲಗಳಲ್ಲಿ ಆಳವಾದ ಆದರೆ ತೀರ ಉದ್ದವಿಲ್ಲದ ಬಿಲಗಳಲ್ಲೂ ಕಲ್ಲು ರಾಶಿಗಳಲ್ಲೂ ವಾಸಿಸುತ್ತವೆ. ರಾಗಿ, ಹತ್ತಿ ಮುಂತಾದ ಬೆಳೆಗಳಿಗೆ ಸ್ವಲ್ಪ ಮಟ್ಟಿಗೆ ನಷ್ಟವುಂಟುಮಾಡುತ್ತವೆ.

ಮರ ಇಲಿ

[ಬದಲಾಯಿಸಿ]

ವ್ಯಾಂಡಲೂರಿಯ ಓಲಿರೋನಿಯ ಎಂಬ ಪ್ರಭೇದ ಮರಗಳಲ್ಲಿ ವಾಸಿಸುವುದು ಹೆಚ್ಚು. ಆದ್ದರಿಂದ ಈ ಹೆಸರು. ಇದರ ತುಪ್ಪಟ ಒರಟು. ಬಣ್ಣಗಳ ಸಂಖ್ಯೆ 6. ತಲೆ-ಮೈ ಉದ್ದ 2"-3", ಬಾಲದ ಉದ್ದ 3 1/2"-4 1/2". ಸ್ತನ ನಸುಗೆಂಪು, ತಳದಲ್ಲಿ ಬಿಳುಪು. ಮರಗಳಲ್ಲಿ ಎಲೆ ಹುಲ್ಲುಗಳಿಂದ ಗೂಡು ಕಟ್ಟುತ್ತದೆ. ತೆಂಗಿನ ಮರಗಳಲ್ಲೂ ಬಿದಿರು ಮೆಳೆಗಳಲ್ಲೂ ಗುಡಿಸಲ ಸೂರುಗಳಲ್ಲೂ ವಾಸಿಸುವುದುಂಟು.

ಪೊದೆ ಇಲಿ

[ಬದಲಾಯಿಸಿ]

ಗೋಲುಂಡ ಎಲಿಯಟಿ ಎಂಬ ಪ್ರಭೇದಕ್ಕೆ ಈ ಹೆಸರುಂಟು. ಗುಗ್ಹಂದಿಯೆಂದೂ ಇದನ್ನು ಕರೆಯುವುದುಂಟು. ತುಪ್ಪಳ ಒರಟು. ಮುಳ್ಳುಗಳಿಲ್ಲ. ಮೇಲಿನ ಬಣ್ಣ ಹಳದಿ ಮಿಶ್ರಿತ ಕಂದು ; ಕಪ್ಪು ನಸುಗೆಂಪು ಚುಕ್ಕೆಗಳುಂಟು; ಕೆಳಗೆ ಕಂದು ಮಿಶ್ರಿತ ಬಿಳಿ ಅಥವಾ ಬೂಲದು. ತೆಲೆ-ಮೈ ಉದ್ದ 4 ಳಿ" ಬಾಲದ ಉದ್ದ 4". ದಟ್ಟವಾದ ಪೊದೆಗಳಲ್ಲಿ ನಾರು ಕಡ್ಡಿಗಳನ್ನು ಹೆಣೆದು ಅಗಲವಾದ ಗೂಡು ಕಟ್ಟುತ್ತದೆ. ಇತರ ಜಾತಿಯ ಇಲಿಗಳಂತೆ ಚುರುಕಾಗಿಲ್ಲ. ನೆಗೆಯುವ ಸಾಮಥ್ರ್ಯವನ್ನೂ ಹೊಂದಿಲ್ಲ. ಕಂದ ಮೂಲಿಕೆಗಳು ಇದರ ಆಹಾರ. ಒಂಟೊಂಟಿಯಾಗಿ ವಾಸಿಸುವುದುಂಟು. ಸಿಲೋನಿನಲ್ಲಿ ಇವು ಕಾಫಿ ತೋಟದ ಬಳಿ ವಾಸಿಸುತ್ತ ಗಿಡದ ಎಲೆ, ಹೂ ಮೊಗ್ಗುಗಳನ್ನು ತಿಂದು ಹಾಕುತ್ತವೆ.

ಬಿಳಿ ಇಲಿ

[ಬದಲಾಯಿಸಿ]

ಟ್ಯಾಟೀರಾ ಕುವಿಯೇರಿ ಎಂಬ ಪ್ರಭೇದವನ್ನು ಬಿಳಿ ಇಲಿ ಎನ್ನುವರು. ತಲೆ-ಮೈ ಉದ್ದ 6 1/2"-8". ಹಿಂದಿನ ಪದದ ಉದ್ದ 1 1/2". ಕಣ್ಣು, ಕಿವಿ ಕಿರಿದು, ಮೊಂಡಾದ ಮುಸುಡಿ. ಸಣ್ಣ ಬಾಲ. ದೇಹದ ಮೇಲ್ಗಡೆ ಮಾಸಲು ಕಂದು ತಳದಲ್ಲಿ ಬೂದಿಮಿಶ್ರಿತ ಬಿಳುಪು. ಇವು ಉತ್ತ ಹೊಲಗಳ ಮಣ್ಣಿನಲ್ಲಿ ಬಿಲಮಾಡಿಕೊಂಡು ವಾಸಿಸುತ್ತವೆ. ಹೊರಗೆ ಬರಲೂ ಒಳಕ್ಕೆ ಹೋಗಲೂ ಹಲವಾರು ದ್ವಾರಗಳನ್ನು ಮಾಡಿಕೊಂಡಿರುತ್ತವೆ. ಸಂಶಯ ಹುಟ್ಟಿದೊಡನೆ ಅಪಾಯ ಕಂಡು ಬಂದ ಮಾರ್ಗವನ್ನುಳಿದು ಮಿಕ್ಕ ಯಾವುದಾದರೂ ದ್ವಾರದ ಮೂಲಕ ಜಾಣ್ಮೆಯಿಂದ ನುಸುಳಿ ತಪ್ಪಿಸಿಕೊಳ್ಳುವುವು. ಮರಿಗಳಿಗೆ ಗರಿಕೆ ಹುಲ್ಲಿನಿಂದ ಮೆತ್ತನೆಯ ಗೂಡನ್ನು ನಿರ್ಮಿಸುತ್ತವೆ. ಬಿಳಿಯ ಇಲಿ ರಾಗಿ, ಜೋಳ, ನವಣೆ, ಅವರೆ, ತೊಗರಿ, ಉದ್ದು, ಹೆಸರು, ಅಲಸಂದಿ, ಹುಚ್ಚೆಳ್ಳು, ಕಡಲೆಕಾಯಿ, ಹರಳು ಮಂತಾದವನ್ನು ತಿನ್ನುತ್ತದೆ. ಹುಲ್ಲು ಗೆಡ್ಡೆಗಳನ್ನೂ ತಿನ್ನುವುದುಂಟು. ಕೊಡತಿ ಹುಳುಗಳನ್ನು ತಿನ್ನುವುದನ್ನು ನೋಡಲಾಗಿದೆ. ವ್ಯವಸಾಯಕ್ಕೆ ತೊಂದರೆಯೊಡ್ಡುವ ಹುಲ್ಲುಗೆಡ್ಡೆಗಳನ್ನೂ ಕೊಡತಿ ಹುಳುಗಳನ್ನೂ ತಿನ್ನುವುದರಿಂದ ರೈತನಿಗೆ ಸ್ವಲ್ಪಮಟ್ಟಿಗಾದರೂ ಬಿಳಿಯ ಇಲಿ ಸಹಾಯಕ; ಆದರೆ ಅದು ದವಸಧಾನ್ಯಗಳಿಗೆ ಮಾಡುವ ನಷ್ಟದ ಪ್ರಮಾಣವನ್ನು ಪರಿಗಣಿಸಿದರೆ ಈ ಸಹಾಯ ಅಷ್ಟು ದೊಡ್ಡದೆನಿಸದು.

ಮೂಗಿಲಿ (ಶ್ರೂ)

[ಬದಲಾಯಿಸಿ]

ಇವು ಇಲಿಗಳಂತಿರುವ ಕೀಟಭಕ್ಷಕಗಳು. ಇನ್‍ಸೆಕ್ಟಿವೋರ ಎಂಬ ವರ್ಗಕ್ಕೆ ಸೇರಿದ ಸೋರಿಕೊ ಇಡಿಯಾ ಪಂಗಡಕ್ಕೆ ಸೇರಿವೆ. ಅವುಗಳಲ್ಲಿ ಕೆಲವು ನೆಲ ಜೀವಿಗಳು. ಉಳಿದವು ಜಲವಾಸಿಗಳು. ದಕ್ಷಿಣ ಅಮೆರಿಕದ ಉಷ್ಣವಲಯ ಮತ್ತು ಆಸ್ಟ್ರೇಲಿಯಗಳಲ್ಲಿ ಹೊರತು ಪ್ರಪಂಚದ ಮಿಕ್ಕೆಲ್ಲ ಭಾಗಗಳಲ್ಲೂ ಇವು ನೆಲೆಸಿವೆ. ದಕ್ಷಿಣ ಅಮೆರಿಕದಲ್ಲಿ ಕೂಡ ಇವು ಉತ್ತರಭಾಗಗಳಲ್ಲಿ ಗೋಚರಿಸುತ್ತವೆ. ಗಾತ್ರದಲ್ಲೂ ರೂಪದಲ್ಲೂ ಮೂಗಿಲಿಗಳು ಸಣ್ಣಿಲಿಗಳಂತೆ. ಆದರೆ ಇವಕ್ಕೆ ಉದ್ದವಾಗಿಯೂ ಮೊನಚಾಗಿಯೂ ಇರುವ ಮೂತಿಯುಂಟು. ಕಣ್ಣು ಚಿಕ್ಕದು, ಮೈಯನ್ನು ಮುಚ್ಚಿರುವ ತುಪ್ಪಳ ವೃದುವಾಗಿಯೂ ರೇಷ್ಮೆಯಂತೆಯೂ ಇದೆ. ಪುನುಗಿನಂಥ ವಾಸನೆಯನ್ನು ಹರಡುತ್ತವೆ. ಹುಳು, ಗೊಂಡಿಹುಳು, ಕೀಟ, ಕೀಟಗಳ ತತ್ತಿ ಮುಂತಾದವು ಇವಕ್ಕೆ ಆಹಾರ ಮರದ ದಿಮ್ಮಿಗಳ ಕೆಳಗೊ ಮರದ ಪೊಟರೆಗಳಲ್ಲೊ ಅಥವಾ ನೆಲದಲ್ಲೊ ಇವು ಸಾಮಾನ್ಯವಾಗಿ ಗೂಡುಗಳನ್ನು ಕಟ್ಟುತ್ತವೆ. ಆಕಾರ ಬಟ್ಟಲಿನಂತೆ ಒಣಹುಲ್ಲೇ ಕಟ್ಟುವ ಸಾಧನ. ಗೂಡಿಗೆ ಬಿಗಿಯಿಲ್ಲದ ಮುಚ್ಚಳಗಳಿರುತ್ತವೆ. ವರ್ಷಕ್ಕೆರಡು ಸಲ ಪ್ರತಿಯೊಂದು ಸಲವೂ 5-7 ಮರಿಗಳು ಹುಟ್ಟುತ್ತವೆ. ಸಂಪೂರ್ಣವಾಗಿ ಬೆಳೆಯುವವರೆಗೂ ಅವು ತಮ್ಮ ಹೆತ್ತವರೊಂದಿಗೆ ಗೂಡಿನಲ್ಲೇ ಇರುತ್ತವೆ. ಅವು ಬಾಳುವ ಕಾಲ ತುಂಬ ಕಿರಿದು. ಸುಮಾರು ಹದಿನೆಂಟು ತಿಂಗಳುಗಳಷ್ಟು ಮಾತ್ರ. ಲೋಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂಗಿಲಿಗಳು ಯಾವುವೆಂದರೆ ಉತ್ತರ ಅಮೆರಿಕದ ಮೋಟುಬಾಲದ ಮೂಗಿಲಿ-ಬ್ಲಾರಿನ ಬ್ರೆವಿಕಾವುಡ, ಯೂರೋಪು, ಆಫ್ರಿಕ ಮತ್ತು ಯೂರೋಪಿನ ಎರಡು ಬಣ್ಣಗಳ ಬಿಳಿ ಹಲ್ಲಿನ ಮೂಗಿಲಿಗಳು-ಕ್ರೊಸಿಡ್ಯೂರ ಲ್ಯೂಕೋಡಾನ್, ಯೂರೋಪಿನ ನೀರು ಮೂಗಿಲಿ-ನಿಯೋಮಿಸ್ ಫೋಡಿಯನ್ಸ್ ಮತ್ತು ಯೂರೋಷಿಯ ಮತ್ತು ಉತ್ತರ ಅಮೆರಿಕಗಳ ಸಾಮಾನ್ಯ ಮೂಗಿಲಿ-ಸೋರೆಕ್ಸ್ ಆರಾನಿಯಸ್. ಇಂಡಿಯದ ಸಾಮಾನ್ಯ ಮೂಗಿಲಿ-ಸೆನ್ ಕಸ್ ಕೊ ಇರೂಲಿಯಸ್ ಎಂಬುದು ಕೀಟಗಳನ್ನು ಹುಡುಕುತ್ತ ರಾತ್ರಿಯಲ್ಲಿ ಮನೆಯೊಳಕ್ಕೂ ಬರುತ್ತದೆ. ಅದರ ಕಂಕುಳಲ್ಲಿರುವ ಗ್ರಂಥಿಗಳಿಂದ ದ್ರವಿಸುವ ದ್ರವಕ್ಕೆ ಪುನುಗಿನ ವಾಸನೆ ಇದೆ. ಯೂರೋಪಿನ ನೀರು ಮೂಗಿಲಿಗಳಿಗೆ ಹೊಳೆಯುವ ತುಪ್ಪಳ ಇದೆ. ಇದು ಸುಲಭವಾಗಿ ನೀರಿನಲ್ಲಿ ನೆನೆಯುವುದಿಲ್ಲ. ಈ ಪ್ರಾಣಿಗಳು ತಮ್ಮ ಕಾಲದ ಅಧಿಕ ಅಂಶವನ್ನು ನೀರಿನಲ್ಲಿ ಕಳೆಯುತ್ತವೆ. ಮತ್ತು ಮುಂದಿನ ಕಾಲುಗಳನ್ನು ಚುಕ್ಕಾಣಿಯಂತೆ ಮಾತ್ರ ಉಪಯೋಗಿಸಿಕೊಳ್ಳುತ್ತ ಮೀನುಗಳಂತೆ ತಮ್ಮ ಮೈಯನ್ನು ಅಲುಗಾಡಿಸಿ ಈಜುತ್ತವೆ. ಉಸಿರಾಡುವುದಕ್ಕೆ ಪದೇ ಪದೇ ಮೇಲಕ್ಕೆ ಬರುತ್ತವೆ. ಇವು ನೀರಿನೊಳಗಿರುವ ಕಲ್ಲುಗಳನ್ನು ತಿರುವಿಹಾಕಿ ಮೀನಿನ ತತ್ತಿಗಳನ್ನು ತಿನ್ನುತ್ತವೆ. ಒಮ್ಮೊಮ್ಮೆ ಇವು ಆಹಾರವನ್ನು ಹುಡುಕುತ್ತ ನೆಲದ ಮೇಲಕ್ಕೂ ಬರುವುದುಂಟು. ಹೊಳೆಯ ದಡಗಳಲ್ಲಿ ಇವು ಹುಲ್ಲು, ಬೇರು ಮತ್ತು ಎಲೆಗಳಿಂದ ಗೂಡುಗಳನ್ನು ಕಟ್ಟುತ್ತವೆ. (ನೋಡಿ- ದಂಶಕಗಳು) (ಪಿ.ಎಸ್.ಆರ್.)

ಹತೋಟಿ

[ಬದಲಾಯಿಸಿ]

ಕೀಟಕವರ್ಗದ ಅನಂತರ ಮಾನವ ವರ್ಗಕ್ಕೆ ಅತ್ಯಂತ ಹೆಚ್ಚಿನ ಅಪಾಯಕಾರಿಯೆನಿಸಿರುವ ಪ್ರಾಣಿ ಮೂಷಕವರ್ಗ. ಈ ವರ್ಗದ ಪ್ರಾಣಿಗಳು ಮನುಷ್ಯ ಬೆಳೆಸುವ ಆಹಾರದಲ್ಲಿ ಗಣನೀಯ ಪ್ರಮಾಣವನ್ನು ತಿಂದು ಹಾಕುತ್ತವೆ; ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಚೆಲ್ಲಿ ಹೊಲಸುಗೊಳಿಸಿ ಹಾಳು ಮಾಡುತ್ತವೆ ; ಅವನ ಬಳಕೆಯ ಸಾಮಾನುಗಳಾದ ಮರಗಳು, ಚರ್ಮದ ಸಾಮಾನುಗಳು, ಬಟ್ಟೆಗಳು, ಸಾಬೂನುಗಳು, ನಯನಾಜೂಕಿನ ಸಾಮಾನುಗಳು- ಇವನ್ನೆಲ್ಲ ಕಡಿದು ಹಾಳು ಮಾಡುತ್ತವೆ. ಅಲ್ಲದೆ, ಮಾನವನ ಸಾಮೂಹಿಕ ಹನನಕ್ಕೆ ಕಾರಣವೆನಿಸುವ ಸಾಂಕ್ರಾಮಿಕ ರೋಗಗಳನ್ನೂ ಹರಡುತ್ತವೆ. ಇನ್ನು ಅವುಗಳಿಂದ ಮಾನವನಿಗಾಗುತ್ತಿರುವ ಉಪಯೋಗ ಅಷ್ಟೇನು ಹೇಳಿಕೊಳ್ಳುವಂಥ ಸ್ಥಿತಿಯದಲ್ಲ. ಆದ್ದರಿಂದ ಮಾನವನ ಹಿತದೃಷ್ಟಿಯಿಂದ ಮೂಷಕವರ್ಗದ ಹತೋಟಿ ಅನಿವಾರ್ಯವೆನಿಸುತ್ತದೆ. ತನ್ನ ಅಸ್ತಿತ್ತ್ವಕ್ಕೆ ಕುಠಾರಪ್ರಾಯವೆನಿಸುತ್ತಿರುವ ಇಲಿ ಹೆಗ್ಗಣಗಳನ್ನು ಪೂರ್ಣವಾಗಿ ನಾಶಮಾಡುವುದಂತೂ ಸಾಧ್ಯವೇ ಆಗದ ಕೆಲಸ. ಸಹಸ್ರಾರು ವರ್ಷಗಳಿಂದಲೂ ಮಾನವ ಅವುಗಳ ಕೋಟಲೆಯಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಅವು ಉಳಿದುಕೊಂಡೇ ಬಂದಿವೆ. ಈ ಕಾರ್ಯದಲ್ಲಿ ಸದಾ ಬೆಳೆಯುವ ಅವುಗಳು ಬಾಚಿಹಲ್ಲು, ಚಿಕ್ಕಮೈ, ಎಲ್ಲ ರೀತಿಯ ಆಹಾರವನ್ನೂ ತಿಂದು ಅರಗಿಸುವ ಬಲಯುತವಾದ ಜೀರ್ಣಾಂಗ. ದೂರಪ್ರದೇಶಗಳಲ್ಲಿ ಹರಡಿ ಹಬ್ಬುವ ಅವುಗಳ ಸಾಹಸ. ಇಂಥ ಸನ್ನವೇಶಗಳಿಗೂ ಹೊಂದಿಕೊಳ್ಳುವ ಅನುಸರಣಾ ಸಾಮಥ್ರ್ಯ. ಎಡರುತೊಡರುಗಳಿಂದ ಕಡೆಹಾಯುವ ಚಾಕಚಕ್ಯ. ಮೇಲಾಗಿ ತೀವ್ರಪ್ರದೇಶದಲ್ಲಿ ತಮ್ಮ ಸಮತಾನವನ್ನು ಹೆಚ್ಚಿಸಿಕೊಳ್ಳುವ ಅದ್ಭುತ ಶಕ್ತಿ-ಇವೆಲ್ಲ ಅವಕ್ಕೆ ನೇರವಾಗುತ್ತಿವೆ. ಆದರೂ ಮಾನವ ಅವುಗಳ ಹತೋಟಿಗಾದರೂ ಯತ್ನಿಸಬೇಕು. ಇದೊಂದು ಧರ್ಮಯುದ್ದವೆಂದು ಭಾವಿಸಿ ಸಾರ್ವತ್ರಿಕವಾಗಿ ಹತೋಟಿಕಾರ್ಯವನ್ನು ಆರಂಭಿಸಬೇಕು. ಮಾನವನ ಭವಿಷ್ಯದ ದೃಷ್ಟಿಯಿಂದ ಇದು ತೀರ ಅಗತ್ಯ.

ಗಮನಿಸಬೇಕಾದ ಅಂಶಗಳು

[ಬದಲಾಯಿಸಿ]

ಇಲ್ಲಿ ಹೆಗ್ಗಣಗಳ ಹತೋಟಿಗೆ ಬಳಸುವ ಕಾರ್ಯವಿಧಾನ ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರಬಾರದು. ಮೊದಲನೆಯದಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಹತೋಟಿ ಕಾರ್ಯಕ್ರಮ ಇರಬೇಕಾದುದು ಅಗತ್ಯ. ಹೊಲ ಗದ್ದೆ ಬಯಲುಕಾಡುಗಳಲ್ಲಿ ಕೈಗೊಳ್ಳುವ ಹತೋಟಿ ಕ್ರಮ ಮನೆಗಳಲ್ಲಿ ಸಾಧ್ಯವಾಗದು. ಎರಡನೆಯದಾಗಿ, ಶತ್ರುವಿನ ವಾಸದ ಸ್ಥಳ, ಅದರ ಆಹಾರವೆಂಥದು, ಈಯುವ ಕಾಲ ಯಾವುದು ಇತ್ಯಾದಿ ಅಂಶಗಳನ್ನು ಗಮಿನಿಸಬೇಕು. ಮೂರನೆಯದಾಗಿ, ಅನುಸರಿಸುವ ಕಾರ್ಯಕ್ರಮ ಮನುಷ್ಯನಿಗೆ ಅಥವಾ ಅವನ ಸನ್ನಿವೇಶಗಳಿಗೆ ಮಾರಕವಾಗಬಾರದು. ಎಂದರೆ ಅವನ ಮಕ್ಕಳು ಮರಿಗಳಿಗೆ ಅಪಾಯಕಾರಿಯಾಗಬಾರದು. ಪರಿಸರ ಕಲುಷಿತವಾಗಬಾರದು; ಆಹಾರ ಮತ್ತು ಬಳಸುವ ಇತರ ಪದಾರ್ಥಗಳು ಕಲುಷಿತಗೊಳ್ಳಬಾರದು; ವಾಸದ ಕಟ್ಟಡಕ್ಕೆ ಅಪಾಯವಾಗಬಾರದು. ನಾಲ್ಕನೆಯದಾಗಿ, ಅದಕ್ಕೆ ತಗಲುವ ವೆಚ್ಚ, ವಹಿಸಬೇಕಾದ ಶ್ರಮ- ಇವೆಲ್ಲ ಅತಿಯಾಗಬಾರದು. ಕೊನೆಯದಾಗಿ, ಆ ಕಾರ್ಯವನ್ನು ಸಾರ್ವತ್ರಿಕವಾಗಿ ಅನುಸರಿಸುವಾಗ ಉಪಕರಣಗಳು, ವಸ್ತುಗಳು, ಜನಸಹಾಯ, ಧನಸಹಾಯ, ತಾಂತ್ರಿಕ ನೆರವು ಇತ್ಯಾದಿಗಳನ್ನೆಲ್ಲ ಸಿದ್ಧಪಡಿಸಿಕೊಂಡೇ ಕಾರ್ಯ ಆರಂಭಮಾಡಬೇಕು.

ಹತೋಟಿಯ ವಿಧಾನಗಳು

[ಬದಲಾಯಿಸಿ]

ಇಲಿ ಹೆಗ್ಗಣಗಳ ಉಪಟಳವು ಸಾಮಾಜಿಕ ಸಮಸ್ಯೆಯೆಂಬುದು ಸ್ಪಷ್ಟವಾಗಿದ್ದರೂ ಅವುಗಳ ನಿಯಂತ್ರಣಕ್ಕೆ ನಿರ್ದಿಷ್ಟವೂ ಸಾರ್ವತ್ರಿಕವೂ ಆದ ಯೋಜನೆಗಳು ಪ್ರತ್ಯೇಕವಾಗಿ ಏರ್ಪಟ್ಟಿಲ್ಲ. ಕಟ್ಟಡಗಳ ನಿರ್ಮಾಣ ನಗರಗಳ ನೈರ್ಮಲ್ಯ, ಉಗ್ರಾಣಗಳ ನಿರ್ಮಾಣ ಇತ್ಯಾದಿಯಾದ ಕೆಲವು ಅನ್ಯಕಾರ್ಯ ಕ್ರಮಗಳ ಫಲವಾಗಿ ಸ್ವಲ್ಪಮಟ್ಟಿಗೆ ಅವುಗಳ ನಿಯಂತ್ರಣ ಕಾರ್ಯ ನಡೆಯುತ್ತಿದೆ. ಅವುಗಳ ಉಪಟಳವನ್ನು ತಡೆಯಲಾರದೆ ಪ್ರತಿ ಕುಟುಂಬವೂ ಅವನ್ನು ನಿಗ್ರಹಿಸಲು ಯತ್ನಿಸುತ್ತಲೇ ಇದೆ. ಆ ಕಾರ್ಯದಲ್ಲಿ ಅನುಸರಿಸುತ್ತಿರುವ ಹಲವಾರು ವಿಧಾನಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಸೂಚಿಸಿದೆ.

ಇಲಿ ಹೆಗ್ಗಣಗಳ ಪ್ರವೇಶಕ್ಕೆ ಅವಕಾಶವೀಯದ ತಡೆಗಳು

[ಬದಲಾಯಿಸಿ]

ನಮ್ಮ ವಾಸದ ಮನೆ, ಉಗ್ರಾಣ, ಅಂಗಡಿ, ಕಾರ್ಖಾನೆ ಇತ್ಯಾದಿಗಳನ್ನು ಕಟ್ಟುವಾಗಲೆ ಕಲ್ಲು ಸಿಮೆಂಟುಗಳ ತಳಪಾಯ ಹಾಕಿ ಕಟ್ಟುವುದರಿಂದಲೂ ಬಚ್ಚಲು ಗವಾಕ್ಷಿಗಳಿಗೆ ಲೋಹದ ಬಲೆ ಜೋಡಿಸುವುದರಿಂದಲೂ ಅವು ಒಳಕ್ಕೆ ಪ್ರವೇಶಿಸದಂತಾಗುತ್ತದೆ. ಕಾಲಕ್ರಮದಲ್ಲಿ ಅದು ಶಿಥಿಲವಾಗಿ ಅವು ಕೊರೆದುಕೊಂಡು ಒಳನುಗ್ಗಬಹುದು. ಆದ್ದರಿಂದ ಕಟ್ಟಡ ಕಟ್ಟಿದ ಮೇಲೂ ಎಚ್ಚರಿಕೆಯಿಂದ ಅಂದಂದಿಗೆ ದುರಸ್ತು ಕಾರ್ಯ ಮಾಡಿಕೊಳ್ಳುತ್ತಿರಬೇಕು.

ಪಾಷಾಣ ಪ್ರಯೋಗ

[ಬದಲಾಯಿಸಿ]

ಇದು ಮೂಷಕನಿಗ್ರಹಕ್ಕೆ ಬಳಸುತ್ತಿರುವ ಮುಖ್ಯ ಉಪಾಯ. ರಾಸಾಯನಿಕ ಅಥವಾ ಸಸ್ಯಜನ್ಯ ಪಾಷಾಣಗಳನ್ನು ಆಹಾರದೊಡನೆ ಸೇರಿಸಿ ಇಲಿ ಹೆಗ್ಗಣಗಳು ಅದನ್ನು ತಿನ್ನುವಂತೆ ಮಾಡಿ ಅವನ್ನು ಕೊಲ್ಲುವುದೇ ಈ ಉಪಾಯದ ಮುಖ್ಯೋದ್ದೇಶ. ಆದರೆ ಮನೆಗಳಲ್ಲಿ ಈ ವಿಧಾನವನ್ನು ಅನುಸರಿಸುವಾಗ ಎಚ್ಚರಿಕೆ ಅಗತ್ಯ. ಇಲಿಗೆ ಎಂದಿಟ್ಟ ಪಾಷಾಣ ಮಿಶ್ರಿತ ಆಹಾರವನ್ನು ಅಜಾಗರೂಕತೆಯಿಂದ ಮಕ್ಕಳು ಮರಿಗಳಾಗಲಿ ಇತರ ಪಶುಪ್ರಾಣಿಗಳಾಗಲಿ ಸೇವಿಸಿದರೆ ಅಪಾಯ. ಹತೋಟಿ ಕಾರ್ಯದಲ್ಲಿ ಬಳಸುವ ಪಾಷಾಣಗಳು ಅನೇಕ. ನಂಜಿನ ಕೊರಡು ಸಸ್ಯದಿಂದ ದೊರಕುವ ಸ್ಟ್ರಕ್ನೀನ್ ಎಂಬ ವಿಷವಸ್ತು ತೀಕ್ಷ್ಣವಾದ ಪಾಷಾಣ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಬೆಳೆಯುವ ಬೆಳ್ಳುಳ್ಳಿಯಂಥ ರೆಡ್ಸ್ಕಿಲ್ ಎಂಬ ಸಸ್ಯದ ಕೆಂಪು ಗೆಡ್ಡೆಯೂ ಅಷ್ಟೇ ಶಕ್ತಿಯುತವಾದ ಪಾಷಾಣವೆಂಬುದು ವ್ಯಕ್ತಪಟ್ಟಿದೆ. ಇವು ಸಸ್ಯಜನ್ಯಪಾಷಾಣಗಳು. ಖನಿಜ ಜನ್ಯ ಪಾಷಾಣಗಳಲ್ಲಿ ಅನೇಕ ಬಗೆಯವು ಬಳಕೆಯಲ್ಲಿವೆ. ಆರ್ಸೀನಿಯಸ್ ಆಕ್ಸೈಡನ್ನು (ಗೌರಿ ಪಾಷಾಣ) 17ನೆಯ ಶತಮಾನದಿಂದಲೂ ಈ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. 19ನೆಯ ಶತಮಾನದಲ್ಲಿ ರಂಜಕ ಮತ್ತು ಬೇರಿಯಂ ಕಾರ್ಬೋನೇಟುಗಳು; ಬಳಕೆಗೆ ಬಂದಿವೆ. ಆದರೆ ಆಧುನಿಕ ಬಾಕ್ಸೈಡ್ ಆ ಕಾರ್ಯಕ್ಕೆ ಹೆಚ್ಚು ಹೆಚ್ಚಾಗಿ ಬಳಕೆಯಲ್ಲಿದ್ದು ಅಮೆರಿಕದಲ್ಲಿ ಮುಖ್ಯವಾಗಿ ಫಾಲಿಯಂ ಸಲ್ಫೇಟ್ ಎಂಬ ವಸ್ತುವನ್ನು ಬಳಸುತ್ತಿದ್ದರು. ಇಲ್ಲಿ ಫಾಸ್ಪೇರ್ಡ್ ಥಯೋಬೋರಿಯ, ಸೋಡಿಯಂ, ಪ್ಲೋರೊ ಇವು ಬಳಕೆಕಾರಿಯೆಂದೆನಿಸುವ ಇಲಿ ಪಾಷಾಣಗಳು. ಮೇಲಿನ ಪಾಷಾಣಗಳನ್ನು ಕಂಡುಹಿಡಿದಂತೆ ಸಸ್ಯಪಾಷಾಣಗಳ ಬಳಕೆ ನಿಂತು ಹೋಗುತ್ತದೆ. ಇಲಿ ಹೆಗ್ಗಣಗಳ ಹತೋಟಿಗೆ ಪಾಷಾಣವನ್ನು ಆರಿಸಿಕೊಳ್ಳುವಾಗ ತೀಕ್ಷ್ಣತೆ, ಸರಬರಾಜು, ಬೆಲೆ- ಈ ನಾಲ್ಕು ಅಂಶಗಳ ಕಡೆಗೆ ಗಮನಕೊಡಬೇಕಾಗುತ್ತದೆ. ಅದನ್ನು ಪ್ರಯೋಗಿಸುವಾಗ ಕಾಳುಕಡ್ಡಿಗಳೊಡನೆ, ಬಿಸ್ಕತ್ತು ಅಥವಾ ರೊಟ್ಟಿ ಚೂರುಗಳಲ್ಲಿ ಸೇರಿಸಿಡಬೇಕು. ಬಳಸುವ ಯಾವುದೇ ಪಾಷಾಣವಾಗಲಿ ಅದರ ಇತರ ಅಂಶಗಳೊಡನೆ ಮಿಶ್ರಿವಾಗಿರಬಾರದು; ಅದರ ಮಾರಕ ಶಕ್ತಿ ಬಹುಬೇಗ ಕುಂದಿಹೋಗುವಂತಿರಬೇಕು; ಅವು ಇಲಿ ಹೆಗ್ಗಣದ ಅನ್ನನಾಳದ ರಸಗಳಲ್ಲಿ ಕರಗುವಂತಿರಬೇಕು; ಜೊತೆಗೆ ಅದರ ಮಾರಕಶಕ್ತಿ ತೀಕ್ಷ್ಣ ಸ್ವರೂಪವಾಗಿರಬೇಕು. ಪ್ರಯೋಗಿಸುವಾಗ ಅದನ್ನು ಮುಟ್ಟುವುದರಿಂದಲೋ ಆಹಾರ ನೀರುಗಳಿಗೆ ಸೋಂಕುವುದರಿಂದಲೊ ಇತರ ಬಿಸಿರಕ್ತ ಪ್ರಾಣಿಗಳಿಗೂ ಅಪಾಯ ತಟ್ಟುವುದುಂಟು. ಆದ್ದರಿಂದ ಅದನ್ನು ಪ್ರಯೋಗಿಸುವವರು ಆ ಅಂಶಗಳನ್ನೆಲ್ಲ ತಿಳಿದು ಎಚ್ಚರಿಕೆ ಚೀಟಿ ಅಂಟಿಸಿ ಭದ್ರವಾದ ಸ್ಥಳದಲ್ಲಿಟ್ಟು ಬೀಗಹಾಕಬೇಕು. ಆಕಸ್ಮಿಕವಾಗಿ ಇದನ್ನೇನಾದರೂ ಸೇವಿಸಿಬಿಟ್ಟರೆ ಬೆಕ್ಕು, ನಾಯಿ ಮುಂತಾದ ಸಾಕು ಪ್ರಾಣಿಗಳು ವಾಂತಿಮಾಡಲಾರವು. ಅಂಥ ಸಂಧರ್ಭಗಳಲ್ಲಿ ಬಳಸಿದ ಪಾಷಾಣದ ವಿವರವನ್ನು ವೈದ್ಯರಿಗೆ ನೀಡಿ ಚಿಕಿತ್ಸೆ ಮಾಡಿಸುವುದು ಅಗತ್ಯ.

ವಿಷವಾಯು ಪ್ರಯೋಗ

[ಬದಲಾಯಿಸಿ]

ಇದು ಇಲಿ ಹೆಗ್ಗಣಗಳ ಹತೋಟಿಗೆ ನಗರಗಳಲ್ಲಿ ಬಳಸುವ ಸಾಮಾನ್ಯ ವಿಧಾನ. ಇದನ್ನು ಎರಡು ರೀತಿಯಲ್ಲಿ ಬಳಸುವುದುಂಟು. ಪೀಪಾಯಿಗಳಲ್ಲಿ ಅನಿಲ ಅಥವಾ ದ್ರವರೂಪದಲ್ಲಿ ಅದುಮಿಟ್ಟಿರುವ ವಿಷವಸ್ತುವನ್ನು ಇಲಿಗಳು ವಾಸಿಸುವ ಕಟ್ಟಡ ಬಿಲ ಮುಂತಾದುವುಗಳ ಬಳಕೆ ಬಿಡುಗಡೆ ಮಾಡುವುದು ಒಂದು ವಿಧಾನ. ವಿಷವಸ್ತುವನ್ನು ಪುಡಿಯ ರೂಪದಲ್ಲಿ ಉದುರಿಸಿದಾಗ ಅದರಿಂದ ಗಾಳಿಯ ಸಂಪರ್ಕದಿಂದ ಹೈಡ್ರೂಸಯನಿಕ್ ಆಮ್ಲದ ಅನಿಲವನ್ನು ಉತ್ಪತ್ತಿಯಾಗಿಸುವುದು ಇನ್ನೊಂದು ವಿಧಾನ. ಆಗ ವಿಷವಾಯು ಆವರಣವನ್ನೆಲ್ಲ ಆಕ್ರಮಿಸಿ ಕಂಟಕಪ್ರಾಯವಾಗುವುದು. ಎರಡನೆಯ ವಿಧಾನಕ್ಕೆ ಸಯನೈಡ್ ಲವಣವನ್ನು ಬಳಸುವುದರಿಂದ ಅದನ್ನು ಸಯನೈಡ್ ಧೂಳು ಉದುರಿಸುವುದು (ಸಯನೈಡ್ ಡಸ್ಟಿಂಗ್) ಎನ್ನುವರು. ಈ ಲವಣಕ್ಕೆ ಸಯನೊಗ್ಯಾಸ್ ಎಂಬ ಹೆಸರೂ ಉಂಟು. ಸಯನೈಡ್ ವಾಯುವನ್ನು ಹೊರಗಡೆಯ ಬಿಲಗಳಿಗೆ ಹಾಯಿಸಿ ಇಲಿ ಹೆಗ್ಗಣಗಳನ್ನು ಹತೋಟಿಗೆ ತರುವುದು ಸುಲಭ. ಮನೆಯ ಬಿಲಗಳಿಗೆ ಹಾಯಿಸಿ ಇಲಿ ಹಾಯಿಸುವಾಗ ಎಲ್ಲ ರೀತಿಯ ಎಚ್ಚರಿಕೆಗಳನ್ನೂ ವಹಿಸಬೇಕಾಗುತ್ತದೆ. ಪುಡಿಯನ್ನು ಬಳಸುವಾಗ ಬಿಲದ ಆಳದಲ್ಲಿ ಒಂದು ಚಮಚದ ಮೂಲಕ ಪುಡಿಯನ್ನು ಇರಿಸಿ ಬಿಲದ ಬಾಯಿಗೆ ಹಸಿಮಣ್ಣು ಮೆತ್ತಿ ಮುಚ್ಚಬೇಕು. ಅದರಿಂದ ಉತ್ಪತ್ತಿಯಾಗುವ ಎಷ್.ಸಿ.ಎನ್. ಅನಿಲ ಬಿಲದೊಳಗೆ ತುಂಬಿಕೊಂಡು ಅಲ್ಲಿರುವ ಪ್ರಾಣಿಗಳು ಸಾಯುತ್ತವೆ. ಹೀಗೆಯೇ ಅವುಗಳಿರುವ ಬಿಲಗಳಿಗೆಲ್ಲ ವಿಷಪ್ರಯೋಗಿಸಬೇಕು. ವಿಷವಾಯುವನ್ನು ಪ್ರಯೋಗಿಸಲು ಸಯನೊಗ್ಯಸ್ ಪುಟ್ ಪಂಪ್ ಎಂಬ ರೇಚಕಯಂತ್ರವೊಂದನ್ನು ಬಳಸುವುದುಂಟು. ಪಂಪಿನ ಹೊರಕೊಳವೆಯ ಹೊರತುದಿಯ ಕೆಳಗೆ ಒಂದು ಪುಡಿ ತುಂಬುವ ಪಾತ್ರೆಯಿದೆ. ಅದರ ಹೊರ ತುದಿಯಿಂದ ಹೊರಟ ರಬ್ಬರ್ ಕೊಳವೆಯನ್ನು ಬಿಲದೊಳಕ್ಕೆ ಹಾಯಿಸಿ ರೇಚಕವನ್ನು ಒತ್ತುವುದರಿಂದ ಪುಡಿ ತೆಳ್ಳನೆ ದೂಳಿನಂತೆ ಬಿಲದೊಳಕ್ಕೆ ಸಾಗುತ್ತದೆ. ಸಾಕಷ್ಟು ಧೂಳು ಒಳಹೊಕ್ಕ ಅನಂತರ ರಬ್ಬರ್ ಕೊಳವೆಯನ್ನು ತೆಗೆದು ಬಿಲದ ಬಾಯನ್ನು ಮಣ್ಣಿನಿಂದ ಮುಚ್ಚಬೇಕು. ಹೀಗೆಯೇ ಇತರ ಬಿಲಗಳಿಗೂ ವಾಯುವನ್ನು ತುಂಬಿ ಮುಚ್ಚಬೇಕು. ವಿಷವಾಯು ಪ್ರಯೋಗಿಸುವವರು ಕೆಲವು ಎಚ್ಚರಿಕೆ ತೆಗೆದುಕೊಳ್ಳಬೇಕು. ಪುಡಿಯ ಮುಚ್ಚಳವನ್ನು ತೆರೆಯುವಾಗ ಮುಖ ಅದರೆಡೆಗೆ ತಿರುಗಿಸಬಾರದು; ಪುಡಿ ತೆಗೆದುಕೊಂಡೊಡನೆ ಡಬ್ಬಕ್ಕೆ ಮುಚ್ಚಳ ಹಾಕಿ ಮುಚ್ಚಬೇಕು. ಹುಡಿಯನ್ನು ಬಟ್ಟೆಯಮೇಲೆ ಚೆಲ್ಲಿಕೊಳ್ಳಬಾರದು. ಉಪಯೋಗಿಸಿದ ತರುವಾಯ ಡಬ್ಬವನ್ನು ಮುಚ್ಚಿ ತೇವವಿರದ ರಕ್ಷಿತ ಸ್ಥಳದಲ್ಲಿ ಇಟ್ಟಿರಬೇಕು; ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

ಯಂತ್ರೋಪಕರಣಗಳ ಬಳಕೆ

[ಬದಲಾಯಿಸಿ]

ಹಿಂದಿನಿಂದಲೂ ಇಲಿ ಹೆಗ್ಗಣಗಳ ಹತೋಟಿಗೆ ಕೆಲವು ಯಂತ್ರಗಳನ್ನು ಬಳಸುತ್ತಿರುವರು. ಅವುಗಳಲ್ಲಿ ಎರಡು ಮುಖ್ಯ ವಿಧಗಳುಂಟು. ಒಂದು ಪೆಟ್ಟಿಯ ಆಕಾರದಲ್ಲಿದ್ದು ಅದರ ತೆರೆದಿರುವ ಬಾಗಿಲಿಗೆ ಜೋಡಿಸಿರುವ ಸುರುಳಿಗೂ ಆಹಾರ ನೇತುಹಾಕಿರುವ ಕೊಕ್ಕೆಗೂ ಸಂಬಂಧವಿರುತ್ತದೆ. ಇಲಿ ಆಹಾರ ತಿನ್ನಲು ಒಳಕ್ಕೆ ಬಂದು ಆಹಾರವನ್ನು ಮುಟ್ಟಿದೊಡನೆ ಬಾಗಿಲು ಧಡೀರೆಂದು ಮುಚ್ಚಿಕೊಳ್ಳುವುದು. ಇನ್ನೊಂದು ಕತ್ತರಿಯ ವಿಧಾನ. ಹಲ್ಲಿನ ಅಂಚಿನ ತೆರದ ದವಡೆಯ ಕತ್ತರಿಯ ನಡುವೆ ಆಹಾರ ಇರುತ್ತದೆ. ಇಲಿ ಆಹಾರ ಇರುವ ಹಲಗೆಯಮೇಲೆ ಕಾಲಿಟ್ಟೊಡನೆ ಕತ್ತರಿಯ ದವಡೆಗಳು ಚಂಗನೆ ಒಟ್ಟುಗೂಡಿ ಇಲಿಯ ಬೆನ್ನುಮೂಳೆಯನ್ನು ಇರುಕಿಸಿ ಕತ್ತರಿಸುತ್ತದೆ. ಈ ವಿಧಾನಗಳಿಂದ ಇಲಿ ಹೆಗ್ಗಣಗಳ ಹತೋಟಿ ಅಷ್ಟಾಗಿ ಸಾಗಲಾರದು. ಅಲ್ಲದೆ ಆಕಸ್ಮಿಕವಾಗಿ ಒಮ್ಮೆ ಯಂತ್ರಗಳಿಂದ ತಪ್ಪಿಸಿಕೊಂಡ ಇಲಿ ಮತ್ತೆ ಅವುಗಳ ಬದಿಗೇ ಸುಳಿಯಲೊಲ್ಲದು.

ಮೂಷಕವರ್ಗದ ಸ್ವಾಭಾವಿಕ ವೈರಿಗಳ ಬಳಕೆ

[ಬದಲಾಯಿಸಿ]

ಹಾವುಗಳಿಗೆ ಇಲಿ ಬಹು ಮುಖ್ಯ ಆಹಾರವಾದ್ದರಿಂದ ಹಾವುಗಳು ಇಲಿಗಳ ಹತೋಟಿಗೆ ನೆರವಾಗುತ್ತದೆ. ಆದರೆ ಇಲಿಗಳ ಹಾವಳಿಗಿಂತ ಹಾವಿನ ಭೀತಿ ಮಾನವನಿಗೆ ಹೆಚ್ಚಿನ ಉಪಟಳವಾಗಬಹುದು. ಮೇಲಾಗಿ ಹಾವುಗಳನ್ನು ಮನೆಗಳಲ್ಲಿ ಅದಕ್ಕಾಗಿ ಬರಗೊಡುವುದು ಸಾಧ್ಯವಾಗದ ಕೆಲಸ. ಆದರೆ ಬೆಕ್ಕುಗಳಂಥ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದರಿಂದ ಅವು ಇಲಿಗಳನ್ನು ಕೊಂದುತಿಂದು ಬಲುಮಟ್ಟಿಗೆ ಹತೋಟಿಗೆ ತರುತ್ತವೆ. ನಾಯಿಗಳೂ ಈ ಕಾರ್ಯದಲ್ಲಿ ನೆರವಾಗಬಲ್ಲುವು. ಈಚೆಗೆ ಇಲಿಗಳಿಗೆ ಮಾರಕವಾಗಿರುವ ಕೆಲವು ರೋಗಕ್ರಿಮಿಗಳನ್ನು ಅವುಗಳ ಮೇಲೆ ಬಳಸುವುದು ನಡೆದಿದೆ. ಆದರೆ ಅವು ಮಾನವನಿಗೂ ಹರಡುವ ಸಂಭವವಿರುವುದರಿಂದ ಅದರ ಪ್ರಚಾರ ಅಷ್ಟಾಗಿ ಆಗಿಲ್ಲ.

ಇತರ ವಿಧಾನಗಳು

[ಬದಲಾಯಿಸಿ]

ಇಲಿಗಳ ಬಿಲಗಳಿಗೆ ನೀರು ತುಂಬುವುದು, ಬೆಂಕಿ ಇಡುವುದು. ಕಡ್ಡಿ ಕಸ ತುರುಕುವುದು ಇತ್ಯಾದಿಯಾಗಿ ಪ್ರಯತ್ನಿಸಿ ಅವು ಹೊರಗೆ ಬರುವಂತೆ ಮಾಡಿ ಹೊಡೆದು ಹಾಕುವುದು ಸಾಮಾನ್ಯವಾಗಿ ಪ್ರಪಂಚದ ಎಲ್ಲ ಕಡೆಯೂ ದಿನ ಬೆಳಗಾದರೆ ನಡೆಯುತ್ತಲೆ ಇರುತ್ತದೆ. ಇದು ವ್ಯಾಪ್ತಿಯ ದೃಷ್ಟಿಯಿಂದ ಇಲಿ ಹೆಗ್ಗಣಗಳ ನಿಯಂತ್ರಣಕ್ಕೆ ಸತತವಾಗಿ ನೆರವಾಗುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಲಿ&oldid=941942" ಇಂದ ಪಡೆಯಲ್ಪಟ್ಟಿದೆ