ವಿಷಯಕ್ಕೆ ಹೋಗು

ಅಲಂಕಾರ ಶಿಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಲ೦ಕಾರ ಶಿಲೆಗಳು ಇಂದ ಪುನರ್ನಿರ್ದೇಶಿತ)
Amshuverma

ಅಲಂಕರಣ ಶಿಲೆಗಳು ವಿಶಿಷ್ಟವಾದ ರಚನೆ, ಬಣ್ಣ ಇರುವ ಉತ್ತಮ ಕೆತ್ತನೆ ಕೆಲಸಕ್ಕೆ ಒಳಗಾಗಿ ಕಟ್ಟಡದ ಸೌಂದರ್ಯ ವರ್ಧಿಸುವ ಕಲ್ಲುಗಳು. ಸುಂದರ ವಿಗ್ರಹಗಳು ಮತ್ತು ಇತರ ಅಲಂಕಾರ ಸಾಧನಗಳನ್ನು ಕಡೆಯುವುದರಲ್ಲಿಯೂ ಬಳಸುವರು. ಭಾರತದಲ್ಲೂ ಕರ್ನಾಟಕದಲ್ಲೂ ಈ ವರ್ಗದ ಅನೇಕ ಮನಮೋಹಕ ಶಿಲೆಗಳು ಸಿಗುತ್ತವೆ.

ಅಲಂಕರಣ ಶಿಲೆಗಳ ವಿಶೇಷ ಗುಣಗಳು

[ಬದಲಾಯಿಸಿ]
  • ದೆಹಲಿ, ಕರ್ನಾಟಕ ಈ ಪ್ರಾಂತ್ಯಗಳಲ್ಲಿ ಗತಕಾಲದ ಅನೇಕ ಭವ್ಯಸೌಧಗಳನ್ನು ವಿಂಧ್ಯಶಿಲಾಸ್ತೋಮಕ್ಕೆ ಸೇರಿದ ಒಂದು ಬಗೆಯ ಕೆಂಪುಬಣ್ಣದ ಜಲಜಶಿಲೆಯಿಂದ ನಿರ್ಮಿಸಿದ್ದಾರೆ. ನೂರಾರು ವರ್ಷಗಳಾದರೂ ಈ ಸೌಧಗಳು ಇಂದಿಗೂ ಭವ್ಯವಾಗಿ ರಾರಾಜಿಸುತ್ತಿವೆ. ಅಲ್ಲದೆ ಈಚೆಗೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ನವದೆಹಲಿಯ ಅನೇಕ ಭವ್ಯಸೌಧಗಳ ನಿರ್ಮಾಣಕ್ಕೂ ಈ ಕೆಂಪು ಮರಳುಶಿಲೆಯನ್ನೇ ಬಳಸಿದ್ದಾರೆ. ಇದು ಸಮಕಣ ರಚನೆಯನ್ನು ಹೊಂದಿರುವುದೆ ಅಲ್ಲದೆ ಶಿಲ್ಪಿಯ ಚಾಣಕ್ಕೆ ಸುಲಭವಾಗಿ ಬಗ್ಗುವ ವಿಶೇಷ ಗುಣವನ್ನು ಹೊಂದಿದೆ.
  • ಇವುಗಳಲ್ಲಿ ಕೆಂಬಣ್ಣದ ಜೊತೆಗೆ ಬಿಳಿ, ತಿಳಿಹಳದಿ, ಊದಾ ಮುಂತಾದ ಬಣ್ಣಗಳೂ ಉಂಟು. ಇವು ಬಹು ನಾಜೂಕಾದ ಕೆತ್ತನೆ ಕೆಲಸಕ್ಕೂ (ಫಿ಼ಲಿಗ್ರೀ ವರ್ಕ್) ಹೆಸರುವಾಸಿ. ಇದಕ್ಕೂ ಮಿಗಿಲಾದ ಸುಂದರಶಿಲೆ ಎಂದರೆ ಅಮೃತಶಿಲೆ-ಹಾಲ್ಗಲ್ಲು. ಇದು ಬಹುಮಟ್ಟಿಗೆ ಹಾಲಿನಂತೆ ಬಿಳುಪಾ ಗಿದ್ದರೂ ಇದರಲ್ಲಿ ನಾನಾ ವರ್ಣವೈವಿಧ್ಯಗಳಿವೆ. ತಿಳಿಹಸಿರು, ತಿಳಿಗೆಂಪು, ಕೃಷ್ಣವರ್ಣ, ಬಣ್ಣಬಣ್ಣದ ಚಿಕ್ಕೆಗಳು ಇತ್ಯಾದಿ. ಜಲಜ ಶಿಲಾವರ್ಗದ ಸುಣ್ಣಶಿಲೆ ಹೆಚ್ಚಿನ ಶಾಖ, ಒತ್ತಡಗಳ ಪ್ರಭಾವಕ್ಕೆ ಒಳಗಾಗಿ ಅಮೃತಶಿಲೆಯಾಗಿ ಮಾರ್ಪಡುತ್ತದೆ.
  • ಹೀಗಾಗಿ ಇದೊಂದು ರೂಪಾಂತರಿತಶಿಲೆ. ಕಣರಚನೆ ಒಂದೇಸಮನಾಗಿರುವ ಕಾರಣ ಇದು ಶಿಲ್ಪಕ್ಕೆ, ಕೆತ್ತನೆಗೆ ಬಹು ಒಪ್ಪವಾದ ಶಿಲೆ. ಅದರಲ್ಲೂ ಕಣಗಳ ಗಾತ್ರ ಸೂಕ್ಷ್ಮವಾಗಿದ್ದಲ್ಲಿ ವಿಗ್ರಹಗಳನ್ನು ಕಡೆಯುವುದಕ್ಕೆ ಬಹು ಉತ್ತಮ. ನಮ್ಮ ದೇಶದ ಅಮೃತಶಿಲೆ ಅರಾವಳಿ ಶಿಲಾಸ್ತೋಮಕ್ಕೆ ಸೇರಿದ್ದು ಜೋಧಪುರ ಬಳಿಯ ಮಕ್ರಾನ, ಅಜ್ಮೀರ್ನ ಖಾರ್ವಾ, ಜೈಪುರದ ಮಾಂಡ್ಲ ಮತ್ತು ಭೈನ್ಸ್ಲಾನ-ಈ ಪ್ರದೇಶಗಳಲ್ಲಿ ಸಿಗುತ್ತದೆ. ಜಬ್ಬಲ್ಪುರದ ಬಳಿ ನರ್ಮದಾನದಿ ಹಾದು ಹೋಗುವ ಇಕ್ಕೆಲಗಳಲ್ಲೂ ಬಣ್ಣಬಣ್ಣದ ಮನಮೋಹಕ ಅಮೃತಶಿಲೆಗಳಿವೆ.
  • ಜಗತ್ಪ್ರಸಿದ್ಧವಾದ ಸುಂದರ ತಾಜಮಹಲ್, ಅಬುವಿನ ಜೈನದೇವಾಲಯಗಳು, ಇತ್ತೀಚಿನ ಪಿಲಾನಿಯ ಸರಸ್ವತಿ ಮಂದಿರ ಮತ್ತು ದಯಾಲ್ಬಾಗ್ ಬಳಿಯ ರಾಧಾ ಸ್ವಾಮಿಮಂದಿರ ಮುಂತಾದವುಗಳ ನಿಮಾರ್ಣದಲ್ಲೂ ಅಮೃತಶಿಲೆಯನ್ನು ವಿಶೇಷವಾಗಿ ಬಳಸಿ ಸುಂದರ ಕೆತ್ತನೆಗಳನ್ನು ಮೂಡಿಸಿದ್ದಾರೆ.

ಕರ್ನಾಟಕದ ಅಲಂಕರಣ ಶಿಲೆಗಳು

[ಬದಲಾಯಿಸಿ]
  • ಕರ್ನಾಟಕ ಅಮೂಲ್ಯ ಖನಿಜಸಂಪನ್ಮೂಲಗಳನ್ನು ಹೊಂದಿದೆ. ಖನಿಜಗಳನ್ನಾಧರಿಸಿದ ಕೈಗಾರಿಕಾ ಪ್ರಗತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಲೋಹ ಖನಿಜಗಳಂತೆಯೇ ಅಲಂಕರಣ ಶಿಲೆಗಳೂ ರಾಜ್ಯದ ಬೊಕ್ಕಸಕ್ಕೆ ಹೇರಳ ಆದಾಯ ತರುವ ಸಂಪನ್ಮೂಲವೆನ್ನಿಸಿವೆ. ನಮ್ಮ ನಾಡಿನ ಶಿಲಾ ಬಳಕೆಗೆ ಸುರ್ದಿರ್ಘವಾದ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ಕಟ್ಟಡಗಳಿಗಾಗಿ ವಿಶೇಷವಾಗಿ ಅಲಂಕರಣ ವಸ್ತುವಾಗಿ ವೈವಿಧ್ಯಮಯ ಶಿಲೆಗಳನ್ನು ಉಪಯೋಗಿಸಿರುವುದನ್ನು ಕಾಣಬಹುದು.
  • ಅದರಲ್ಲೂ ಗ್ರಾನೈಟ್ ಮತ್ತು ಕರೀಕಲ್ಲಿನ ಹೇರಳ ಸಂಪನ್ಮೂಲ ನಮ್ಮ ನಾಡಿನಲ್ಲಿದೆ. ಅವುಗಳ ಬೇಡಿಕೆ ಮತ್ತು ಬಳಕೆ ದಿನೇದಿನೇ ಹೆಚ್ಚುತ್ತಿದೆ. ಅಲಂಕರಣ ಶಿಲೆಗಳನ್ನು ವಿಶೇಷವಾಗಿ ಬಳಸಿದ ನುರಿತ ಶಿಲ್ಪಿಗಳು ಅದ್ಭುತ ಸ್ಮಾರಕ, ದೇವಾಲಯ, ಮೂರ್ತಿಗಳನ್ನು ನಿರ್ಮಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಬೇಲೂರು, ಹಳೇಬೀಡುಗಳ ಹೊಯ್ಸಳರ ಕಲಾಕೃತಿಗಳು, ಶ್ರವಣಬೆಳಗೊಳದ ವಿಶ್ವವಿಖ್ಯಾತ ಬಾಹುಬಲಿಯ ವಿಗ್ರಹ, ಬೆಂಗಳೂರಿನ ಭವ್ಯ ವಿಧಾನಸೌಧ, ಹಂಪೆಯ ಸುಂದರ ಶಿಲಾರಥ ಮುಂತಾದವು ವಾಸ್ತುಶಿಲ್ಪದ ಉತ್ಕೃಷ್ಟ ಮಾದರಿಗಳು ಎನ್ನಿಸಿವೆ.
  • ನಾಡಿನುದ್ದಗಲಕ್ಕೂ ಕಂಡುಬರುವ ಬುರುಜುಗಳು, ದೇವಸ್ಥಾನ, ಶಿಲಾಶಾಸನ, ಕಲ್ಲುಕಂಬ, ಗರುಡಗಂಬ, ಮಾಸ್ತಿಕಲ್ಲು, ಯುದ್ಧಸ್ಮಾರಕಗಳು ಜೊತೆಗೆ ಭಿತ್ತಿಗಳ ಮೇಲೆ ಮೂಡಿಸಿದ ಕಲ್ಲು ಹೂಬಳ್ಳಿ, ದೇವತೆ, ಪ್ರಾಣಿಗಳು ಹೀಗೆ ಶಿಲೆಯಲ್ಲಿ ವಾಸ್ತುಶಿಲ್ಪ ಅರಳಿರುವುದನ್ನು ಎತ್ತಿ ತೋರಿಸುತ್ತದೆ. ಕರ್ನಾಟಕದಲ್ಲಿ ಬೆಟ್ಟಗುಡ್ಡಗಳಲ್ಲಿ ಮತ್ತು ನೆಲ ಮಟ್ಟದಲ್ಲಿ ವೈವಿಧ್ಯಮಯ ಶಿಲಾ ಸಂಪನ್ಮೂಲ ಅಡಗಿದೆ. ಇವುಗಳಲ್ಲಿ ಅಗ್ನಿಶಿಲೆಗಳಾದ ಗ್ರಾನೈಟ್, ಡಾಲೆರೈಟ್, ಬಸಾಲ್ಟ್ ಬಹು ಮುಖ್ಯವಾದ ಅಲಂಕರಣ ಶಿಲೆಗಳು.
  • ಇವಲ್ಲದೆ ಬೆಣಚುಕಲ್ಲು, ಬಳಪದ ಕಲ್ಲು, ಮರಳುಗಲ್ಲು, ಪದರುಶಿಲೆ, ಸುಣ್ಣಶಿಲೆ ಹಾಗೂ ಅನೇಕ ರೂಪಾಂತರಿತ ಶಿಲೆಗಳು ಶಿಲಾ ಉದ್ಯಮದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿವೆ. ಅಖಂಡವಾಗಿ ದೊರೆಯುವ ವೈವಿಧ್ಯಮಯ ಶಿಲೆಗಳನ್ನು ಗುರುತಿಸಿ ಸರ್ಕಾರದಿಂದ ಗುತ್ತಿಗೆ ಪಡೆದು ಕಲ್ಲು ಗಣಿಗಾರಿಕೆ ಮಾಡುತ್ತಿರುವ ಖಾಸಗಿ ಸಂಸ್ಥೆಗಳು ನಾಡಿನಾದ್ಯಂತ ಕಾರ್ಯಾಚರಣೆ ಮಾಡುತ್ತಿವೆ. ಉತ್ತಮ ತಂತ್ರಜ್ಞಾನದ ಫಲವಾಗಿ ಇಂದು ಯಾಂತ್ರೀಕರಣವಾಗಿರುವ ಶಿಲಾ ಗಣಿಗಾರಿಕೆ ಉದ್ಯಮದಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.
  • ಶಿಲೆಗಳ ಸ್ವಭಾವ, ಅವುಗಳಲ್ಲಿರುವ ಸೀಳು ಮುಂತಾದವುಗಳನ್ನಾಧರಿಸಿ ಹಲಗೆ, ಫಲಕ, ಘನಾಕೃತಿಗಳಾಗಿ ಕಲ್ಲನ್ನು ಗಣಿಯಿಂದ ತೆಗೆಯಲಾಗುತ್ತದೆ. ವಜ್ರದ ತುದಿ, ಬ್ಲೇಡು ಮುಂತಾದ ಸಾಧನಗಳಿಂದ ಶಿಲೆಯನ್ನು ಕೊರೆದು ಅಪೇಕ್ಷಿತ ರೂಪಕ್ಕೆ ತಂದು ಕತ್ತರಿಸಿ ಮೆರಗು ಕೊಟ್ಟು ಕಲ್ಲನ್ನು ಆಕರ್ಷಕ ಕಲ್ಲನ್ನಾಗಿ ಮಾಡುವ ಈ ಉದ್ಯಮ ಹಲವು ಕೋಟಿ ರೂಪಾಯಿಗಳ ಬಂಡವಾಳದೊಂದಿಗೆ ಬೆಳೆಯುತ್ತಿದೆ. ಅಲಂಕರಣ ಶಿಲೆಯಿಂದಾಗಿ ಗ್ರಾನೈಟ್ ಹೆಚ್ಚು ಪ್ರಾಮುಖ್ಯತೆ ಗಳಿಸಿದೆ.
  • ಈ ಶಿಲೆಯಲ್ಲಿನ ಖನಿಜಗಳ ಗಾತ್ರ, ಕಣಬಂಧ, ಆಕಾರ, ಬಣ್ಣ, ರಚನೆ ರಾಸಾಯನಿಕ ಸಂಯೋಜನೆ ಅಲಂಕರಣ ಶಿಲೆಯಾಗಲು ಹೆಚ್ಚು ಯುಕ್ತವೆನಿಸಿದೆ. ಅತ್ಯುತ್ತಮ ಬಣ್ಣ ಹೊಂದಿದ್ದೂ ಸೂಕ್ಷ್ಮ ಬಿರುಕುಗಳು ಮೂಡಿದ್ದರೆ, ಅಂತಹ ಶಿಲೆಯ ಮೌಲ್ಯ ಕಡಿಮೆ. ಅಲ್ಲದೆ ಪೈರೆಟ್, ಮ್ಯಾಗ್ನಟೈಟ್, ಸ್ಟೀನ್, ಟೂರ್ಮಲೀನ್ ಮುಂತಾದ ಖನಿಜಗಳಿದ್ದಲ್ಲಿ ಬೇಗ ಶಿಥಿಲವಾಗಿ ಶಿಲೆಯ ಗುಣಮಟ್ಟವನ್ನು ಕುಂದಿಸುತ್ತವೆ. ಸಾಮಾನ್ಯವಾಗಿ ಏಕರೂಪ ಬಣ್ಣವಿರುವ ಹೆಚ್ಚು ವ್ಯಾಪ್ತಿ ಇರುವ ಶಿಲೆಗಳು ಆಲಂಕರಣ ಶಿಲೆಯಾಗಿ ಹೆಚ್ಚು ಬೇಡಿಕೆಗಳಿಸುತ್ತವೆ.
  • ಗ್ರಾನೈಟ್ ಶಿಲೆಯನ್ನು ಸಾಧಾರಣವಾಗಿ ಮೀಟರಿನ ಅಳತೆಗಲ್ಲನ್ನಾಗಿ ಗಣಿಯಿಂದ ತೆಗೆಯುತ್ತಾರೆ. ಇಂದಿನ ದರದಲ್ಲಿ ಅತ್ಯುತ್ತಮ ಗುಣದ ಘನಾಕೃತಿಯ ಅಳತೆಗಲ್ಲು 1500 ಡಾಲರಿಗೂ ಹೆಚ್ಚು ಬೆಲೆ ಹೊಂದಿದೆ. ವಿಶೇಷವಾಗಿ ಹೊರ ದೇಶಗಳಲ್ಲಿ ಅಲಂಕರಣ ಶಿಲೆಗಳ ಬೇಡಿಕೆ ಹೆಚ್ಚಾ ಗುತ್ತಿದೆ. ಅಲಂಕರಣ ಶಿಲೆಯ ಉದ್ಯಮ ಈ ದಿನಗಳಲ್ಲಿ ವಾರ್ಷಿಕ ಸಾವಿರಾರು ಕೋಟಿ ರೂಪಾಯಿಗೂ ಹೆಚ್ಚಿನ ವಿದೇಶೀ ವಿನಿಮಯ ಗಳಿಸುತ್ತಿದೆ. ರಾಜ್ಯದಲ್ಲಿ ಆಲಂಕಾರಿಕ ಶಿಲೆಗಳು ವಿಸ್ತಾರವಾಗಿ ಹರಡಿದ್ದರೂ ಅವುಗಳನ್ನು ಸೂಕ್ತವಾಗಿ ಪತ್ತೆ ಹಚ್ಚಿ, ಉತ್ಪಾದನೆಯ ಕಾರ್ಯಾಚರಣೆ ಮಾಡುತ್ತಿರುವುದು ಕೇವಲ ಸೀಮಿತ ಪ್ರದೇಶದಲ್ಲಿ ಮಾತ್ರ. ಭೂಮಿಯಲ್ಲಿ ಅವುಗಳ ವ್ಯಾಪ್ತಿಯನ್ನು ವೈಜ್ಞಾನಿಕವಾಗಿ ಅರಿತು ಸಂಪನ್ಮೂಲದ ಪ್ರಮಾಣವನ್ನು ನಿಖರವಾಗಿ ಅಳೆದು ಸ್ಪಷ್ಟವಾದ ಜಾಡುಗಳನ್ನು ಇನ್ನೂ ಗುರುತಿಸಬೇಕಾಗಿದೆ.
  • ಆದ್ದರಿಂದ ಗ್ರಾನೈಟ್ ಗಣಿಗಾರಿಕೆ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಬೇಕಾಗಿದೆ. ಸದ್ಯದಲ್ಲಿ ಈ ಉದ್ಯಮ ಖಾಸಗಿಯವರ ಕೈಯಲ್ಲಿದ್ದು ಸಹಸ್ರಾರು ಮಂದಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಅಲಂಕರಣ ಶಿಲೆಗಳ ಉಪಯೋಗ ಕೂಡ ಬಹುಮುಖವಾಗಿದೆ. ಕಟ್ಟಡಗಳಿಗೆ ಮುಖ್ಯವಾಗಿ ಚಪ್ಪಡಿ ರೂಪದಲ್ಲಿ ನೆಲಹಾಸುಗಳಾಗಿ, ಭಿತ್ತಿಗಳ ಫಲಕವಾಗಿ, ಗೋರಿಗಳಲ್ಲಿ ಕೆತ್ತನೆಗಾಗಿ, ಉತ್ತಮ ಗುಣಮಟ್ಟದ ಹಲವು ರಂಗಿನ ಮೆರುಗು ಕೊಟ್ಟ ಗ್ರಾನೈಟನ್ನು ಬಳಸಲಾಗುತ್ತಿದೆ.
  • ಆಧುನಿಕ ಮನೆಗಳಲ್ಲಿ ಅಡುಗೆ ಮನೆಯ ಜಗುಲಿಯಿಂದ ಹಿಡಿದು ಹೂದಾನಿಗಳವರೆಗೆ ಗ್ರ್ಯಾನೈಟ್ ಬಳಕೆಯಾಗುತ್ತಿದೆ. ಇತ್ತೀಚೆಗೆ ಗ್ರಾನೈಟುಗಳಂತೆಯೇ ಮೆರಗು ಪಡೆಯುವ ಯಾವ ಶಿಲೆಯನ್ನೂ ಅಲಂಕರಣ ಶಿಲೆಯಾಗಿ ಬಳಸುವ ಪರಿಪಾಟ ಹೆಚ್ಚುತ್ತಿದೆ. ಅನಾರ್ಥೊಸೈಟ್, ಲೆಪ್ಟಿನೈಟ್, ಮರಳುಗಲ್ಲು, ಪಟ್ಟೆಶಿಲೆ, ಹಸುರು ಮಿಶ್ರಿತ ಕ್ವಾಟ್ಸೆರೈಟ್ ಎಲ್ಲವೂ ಬೇಡಿಕೆ ಗಳಿಸುತ್ತಿವೆ.

ಸಂಪನ್ಮೂಲ

[ಬದಲಾಯಿಸಿ]
  • ವಿವಿಧ ಬಣ್ಣದ ಶಿಲೆಗಳು ರಾಜ್ಯದಲ್ಲಿ ಲಭ್ಯವಿರುವುದರಿಂದ ಅವುಗಳ ದೇಶೀಯ ಹಾಗೂ ವಿದೇಶೀಯ ಬೇಡಿಕೆ ಹೆಚ್ಚುತ್ತಿದೆ. ಕರ್ನಾಟಕದ ಒಟ್ಟು 1,91,791 ಚ.ಕಿಮೀ ಪ್ರದೇಶದಲ್ಲಿ ಕೇವಲ ಶೇ 2.2 ಭಾಗ ಮಾತ್ರ ಉತ್ತಮ ದರ್ಜೆಯ ಅಲಂಕರಣ ಶಿಲಾ ಸಂಪನ್ಮೂಲವನ್ನು ಹೊಂದಿದೆಯೆಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಇದರಲ್ಲಿ ಶೇ 1 ಭಾಗ ಮಾತ್ರ ಗಣಿ ಕಾರ್ಯಾಚರಣೆಗೆ ಒಳಪಟ್ಟಿದೆ. ಈಗಿನ ಗಣಿಗಾರಿಕೆಯಿಂದ ಶೇ. 10 ಭಾಗ ಹೆಚ್ಚಳವಾದರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಲಾಭವಾಗಲಿದೆ. ಮೈಸೂರು, ಬಳ್ಳಾರಿ, ಬೆಂಗಳೂರು, ಮಂಡ್ಯ, ತುಮಕೂರು, ಕೋಲಾರ, ಚಿತ್ರದುರ್ಗ, ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿ ಅಲಂಕರಣ ಶಿಲೆಗಳ ಜಾಡು ವ್ಯಾಪಕವಾಗಿ ಹಂಚಿಕೆಯಾಗಿದೆ.
  • ವಾಸ್ತವವಾಗಿ ರಾಮನಗರದಿಂದ ಪ್ರಾರಂಭವಾಗಿ ಬಿಜಾಪುರದವರೆಗೆ ಹಬ್ಬಿರುವ ಕ್ಲೋಸ್ಪೆಟ್ ಗ್ರಾನೈಟ್ ಶಿಲಾ ಜಾಡು ಅಲಂಕರಣ ಶಿಲೆಗಳ ಉಗ್ರಾಣ ಎನಿಸಿದೆ. ವಿಶ್ವವಿಖ್ಯಾತವಾದ ಪಾಟಲವರ್ಣದ ಇಳಕಲ್ ಗ್ರಾನೈಟ್ ಸಂಪನ್ಮೂಲವಿರುವುದು ಈ ಜಾಡಿನಲ್ಲೇ. ಚಾಮರಾಜ ನಗರದ ಸುತ್ತಮುತ್ತ ನೈಸ್ ಶಿಲೆಗಳಲ್ಲಿ ಅಡ್ಡ ಹಾಯ್ದಂತೆ ಕಂಡುಬರುವ ಗಾಢ ಕಪ್ಪು ಬಣ್ಣದ ಡಾಲರೈಟ್ ಅಲಂಕರಣ ಶಿಲೆಯಾಗಿ ಉಳಿದೆಲ್ಲ ಶಿಲೆಗಳಿಗಿಂತ ಹೆಚ್ಚು ಬೇಡಿಕೆ ಮೌಲ್ಯ ಗಳಿಸಿದೆ. ಸರ್ ಥಾಮಸ್ ಹಾಲೆಂಡ್ ಎಂಬ ಭೂವಿಜ್ಞಾನಿ ಕಟ್ಟಡ ಕಲ್ಲುಗಳ ಪ್ರಾಮುಖ್ಯ ಕುರಿತಂತೆ ಅವುಗಳನ್ನು ಸೂಕ್ತವಾಗಿ ವಿಂಗಡಿಸಿದಲ್ಲಿ ದೇಶದ ಔದ್ಯೋಗಿಕ ಬೆಳೆವಣಿಗೆಗೆ ಮಾರ್ಗದರ್ಶನವಾಗಬಲ್ಲದು ಎಂದು ಈ ಶತಮಾನದ ಪ್ರಾರಂಭದಲ್ಲೇ ನುಡಿದಿದ್ದ.
  • ಅಲಂಕರಣ ಶಿಲೆಗಳ ಸಂಪನ್ಮೂಲವನ್ನು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮೀಕ್ಷೆ ಮಾಡಿ ನಮ್ಮ ರಾಜ್ಯದಲ್ಲಿ ಅದರ ಹಂಚಿಕೆಯ ಬಗ್ಗೆ ಕಾಲಕಾಲಕ್ಕೆ ವರದಿಗಳನ್ನು ನೀಡುತ್ತ ಬಂದಿದೆ. ಇತ್ತೀಚಿನ ಸಮೀಕ್ಷೆಯಂತೆ ಲಭ್ಯವಿರುವ 1,780 ಚ.ಕಿಮೀ ನಷ್ಟು ತಿಳಿಗೆಂಪು ಗ್ರಾನೈಟ್ ಸಂಪುನ್ಮಲದಲ್ಲಿ ಸದ್ಯದಲ್ಲಿ ಗುರುತಿಸುವುದು ಕೇವಲ 110 ಚ.ಕಿಮೀ ಮಾತ್ರ. ಬೂದುಬಣ್ಣದ ಗ್ರಾನೈಟ್ ಕರ್ನಾಟಕದಲ್ಲಿ ಸುಮಾರು 1,080 ಚ.ಕಿಮೀ ವ್ಯಾಪ್ತಿ ಹೊಂದಿದ್ದರೂ ಗಣಿ ಕಾರ್ಯಾಚರಣೆಗಾಗಿ ಗುರುತಿಸಿರುವ ಪ್ರದೇಶ 36ಚ.ಕಿ.ಮೀ. ಮಾತ್ರ. ಕರಿಕಲ್ಲಿನ ಉದ್ಯಮ ಉಳಿದೆಲ್ಲವು ಗಳಿಂಗಿಂತ ಹೆಚ್ಚು ಲಾಭ ಗಳಿಸುತ್ತಿದ್ದರೂ ಲಭ್ಯವಿರುವ 250ಚ.ಕಿಮೀ ಸಂಪನ್ಮೂಲದಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ಕೇವಲ 14ಚ.ಕಿಮೀ ಪ್ರದೇಶದಲ್ಲಿ ಮಾತ್ರ.
  • ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸು. 606 ದಶಲಕ್ಷ ಘನ ಮೀಟರುಗಳಷ್ಟು ಗ್ರಾನೈಟ್ ಸಂಪನ್ಮೂಲವಿದೆ. ಇದರಲ್ಲಿ 195 ಘನ ಕಿಮೀ ಸಂಪನ್ಮೂಲ ಅಥವಾ ಶೇ 30. ಭಾಗ ನಮ್ಮ ರಾಜ್ಯದ ಸಂಪನ್ಮೂಲವಾಗಿದೆ. ಒಂದು ಚ.ಕಿಮೀ ಪ್ರದೇಶದಲ್ಲಿ 10 ದಶಲಕ್ಷ ಘನ ಮೀಟರ್ ಅಥವಾ 25 ದಶಲಕ್ಷ ಟನ್ನು ಕಲ್ಲನ್ನು 10 ಮೀಟರ್ ಆಳದವರೆಗೆ ಗಣಿ ಮಾಡಬಹುದಾದರೂ ಅಲಂಕರಣ ಶಿಲೆಯಾಗಿ ಶೇ. 10ರಷ್ಟು ಭಾಗ ಮಾತ್ರ ಉಪಯೋಗಕ್ಕೆ ಬರುತ್ತದೆ. ಅಲಂಕರಣ ಶಿಲೆಯ ಜಿಲ್ಲಾವಾರು ಉತ್ಪಾದನೆಯ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳು ಲಭ್ಯವಿಲ್ಲ. 1980ರ ದಶಕದಲ್ಲಿ ರಾಜ್ಯದ ಗ್ರಾನೈಟ್ ಉತ್ಪಾದನೆ ಸುಮಾರು 78,000 ಟನ್ನುಗಳಿದ್ದು ಆಗಿನ ಮೌಲ್ಯ 34,695,000 ರೂಪಾಯಿಗಳಾಗಿತ್ತು.
  • 90ರ ದಶಕದಲ್ಲಿ ಕರ್ನಾಟಕ 274,052,000 ರೂಪಾಯಿ ಮೌಲ್ಯದ 560,000 ಟನ್ ಅಲಂಕರಣ ಶಿಲೆಗಳನ್ನು ಉತ್ಪಾದಿಸಿದೆ. ಬಹುತೇಕ ಐರೋಪ್ಯ ರಾಷ್ಟ್ರಗಳು, ಜರ್ಮನಿ, ವಿಶೇಷವಾಗಿ ಜಪಾನ್, ಇಟಲಿ, ಭಾರತದ ಅಲಂಕರಣ ಶಿಲೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳು. ಕಳೆದ 20 ವರ್ಷಗಳಲ್ಲಿ ಗ್ರಾನೈಟ್ ಉದ್ಯಮ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸಿದೆ. ಗ್ರಾನೈಟ್ನ ಶೇ.70 ಭಾಗ ಕಟ್ಟಡಗಳಿಗೂ, ಶೇ. 25 ಭಾಗ ಸ್ಮಾರಕಗಳಿಗೂ, ಶೇ. 5 ಭಾಗ ಶಿಲ್ಪಗಳಿಗೂ ಬಳಕೆಯಾಗುತ್ತಿದೆ. ದೇಶದ ಒಟ್ಟು ಗ್ರಾನೈಟ್ ರಫ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ. 40 ಭಾಗ. ಅಲ್ಲದೆ ಈ ಉದ್ಯಮ ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರಕಿಸಿದೆ.

ಐತಿಹಾಸಿಕ ಬೆಳೆವಣಿಗೆ

[ಬದಲಾಯಿಸಿ]
  • ಗ್ರಾನೈಟ್ ರಫ್ತು ವ್ಯಾಪಾರ ಸುಮಾರು 1930ರಲ್ಲಿ ಪ್ರಾರಂಭವಾಗಿ ಬೆಂಗಳೂರು ಉದ್ಯಮದ ಕೇಂದ್ರವಾಗಿ ಬೆಳೆಯಿತು. ವಿಶೇಷವಾಗಿ ಬೆಂಗಳೂರು, ದೊಡ್ಡಬಳ್ಳಾಪುರದ ಸುತ್ತಮುತ್ತ ಲಭ್ಯವಿರುವ ಗ್ರಾನೈಟ್ ಕಚ್ಚಾಶಿಲೆಗಳನ್ನಲ್ಲದೆ ಮೆರಗು ಕೊಟ್ಟ ಅಲಂಕರಣ ಶಿಲೆಗಳನ್ನು ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಆರಂಭದಲ್ಲಿ ಕೈ ಕೆಲಸಗಾರರಿಂದ ಗಣಿಗಾರಿಕೆ ಪ್ರಾರಂಭವಾಗಿ 70ರ ದಶಕದಲ್ಲಿ ಹೊಸತಂತ್ರಜ್ಞಾನದೊಂದಿಗೆ ರಫ್ತಿನ ಪ್ರಮಾಣ ದಲ್ಲೂ ಹೆಚ್ಚಳ ಕಂಡಿತು. ಗ್ರಾನೈಟ್ ಉದ್ಯಮ ಈ ದಶಕದಲ್ಲಿ ಹೆಚ್ಚು ಅಭಿವೃದ್ಧಿಯಾಯಿತು. ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಈ ಉದ್ಯಮವನ್ನು ಹೆಚ್ಚು ಬೆಳೆಸಿದವು.
  • ವಿಶೇಷವಾಗಿ ಕೊಳ್ಳೇಗಾಲ, ಚಾಮರಾಜನಗರದ ಕರಿಕಲ್ಲು ವಿದೇಶಗಳಿಂದ ಹೆಚ್ಚು ಬೇಡಿಕೆ ಪಡೆದವು. ವಾಷಿಂಗ್ಟನ್ನಿನಲ್ಲಿ ನಿಲ್ಲಿಸಿರುವ ವಿಯೆಟ್ನಾಂ ಯುದ್ಧ ಸ್ಮಾರಕ ಕೊಳ್ಳೇಗಾಲದ ಡಾಲರೈಟ್ (ಬ್ಲಾಕ್ ಗ್ರಾನೈಟ್) ಕಲ್ಲಿನಿಂದ ನಿರ್ಮಿತವಾಗಿದೆ. ರಾಜ್ಯದಲ್ಲಿ ಹಿಂದೆ ವಡ್ಡರು, ಕಲ್ಲು ಕುಟುಕರ ಜೀವನಾಧಾರವಾಗಿದ್ದ ಕಲ್ಲು ಉದ್ಯಮ ಈಗ ಕರ್ನಾಟಕದಲ್ಲಿ ಭಾರಿ ಉದ್ಯಮವಾಗಿ ಬೆಳೆದಿದೆ. ನಗರಗಳಲ್ಲಿ ಸಣ್ಣ ಮನೆಗಳಿಂದ ಹಿಡಿದು ಬಹುಮಹಡಿ ಕಟ್ಟಡಗಳವರೆಗೆ ಅಲಂಕರಣ ಶಿಲೆಗಳ ಬಳಕೆ ಹೆಚ್ಚುತ್ತಿದೆ.
  • ಗೋಡೆಗಳಿಗೆ ಹೊದಿಸುವ ತೆಳು ಹಲಗೆಗಳಾಗಿ, ಹೆಂಚುಗಳಾಗಿ ನೆಲ ಹಾಸುಗಳಾಗಿ, ಅಡುಗೆ ಮನೆಯ ಜಗಲಿಗಳಿಗೆ, ರುಬ್ಬು ಗುಂಡುಗಳಿಗೆ, ಗ್ರಾನೈಟ್ ಮತ್ತು ಡಾಲರೈಟ್ ಶಿಲೆಗಳ ಕಚ್ಚಾ ಕ್ಯೂಬುಗಳು ಮಂಗಳೂರಿನ ಬಂದರಿನಿಂದ ವಿದೇಶಕ್ಕೆ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಗ್ರಾನೈಟ್ ಉದ್ಯಮ ಕರ್ನಾಟಕದಲ್ಲಿ ಸುಮಾರು 6000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಆದಾಯ ತರುತ್ತಿದೆ. ರಾಜ್ಯದಲ್ಲಿ ಗ್ರಾನೈಟ್ ಸಂಸ್ಕರಿಸುವ ಇಪ್ಪತ್ತು ದೊಡ್ಡ ಘಟಕಗಳಿವೆ.

ಕಲ್ಲುಗಣಿಗಾರಿಕೆ ಮತ್ತು ಪರಿಸರ

[ಬದಲಾಯಿಸಿ]
  • ಕರ್ನಾಟಕದಲ್ಲಿ ಅಲಂಕರಣ ಗ್ರಾನೈಟ್ ರಫ್ತು ಮಾಡುವ 20 ಭಾರಿ ಕೈಗಾರಿಕೆಗಳಿವೆ. ಇವೆಲ್ಲವೂ ಸಂಪುರ್ಣವಾಗಿ ಖಾಸಗಿ ಒಡೆತನದಲ್ಲಿವೆ. ಪ್ರತಿ ಸಂಸ್ಥೆ ಈ ಉದ್ಯಮಕ್ಕೆ ಸರಾಸರಿ 15 ಕೋಟಿ ರೂಪಾಯಿಗಳ ಬಂಡವಾಳ ತೊಡಗಿಸಿದೆ. ವಾರ್ಷಿಕ 1,00,000 ಚ.ಮೀ ಅಲಂಕರಣ ಶಿಲೆಯನ್ನು ಉತ್ಪಾದಿಸುವ ಸಾಮಥರ್್ಯ ಈ ಘಟಕಗಳಿವೆ. ತ್ವರಿತವಾಗಿ ಆರ್ಥಿಕ ಲಾಭ ಗಳಿಸುತ್ತಿರುವ ಈ ಉದ್ಯಮ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ವ್ಯಾಪಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
  • 1972ರಲ್ಲಿ ಸ್ಟಾಕ್ಹೋಂನಲ್ಲಿ ನಡೆದ ಮಾನವ ಪರಿಸರ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯವನ್ನು 1977 ರಲ್ಲಿ ಭಾರತವೂ ತನ್ನ ಪರಿಸರ ರಕ್ಷಣೆಗೆ ಅಳವಡಿಸಿಕೊಂಡಿತು. ಉಳಿದ ಕೈಗಾರಿಕೆಗ ಳಂತೆ ಗಣಿಗಾರಿಕೆ ಅದರಲ್ಲೂ ವಿಶೇಷವಾಗಿ ಕಲ್ಲು ಗಣಿ ಕೈಗಾರಿಕೆ ಪರಿಸರದ ಮೇಲೆ ದೀರ್ಘಕಾಲಿಕ ದುಷ್ಪರಿಣಾಮ ಬೀರುತ್ತದೆ. ಮುಖ್ಯವಾಗಿ ಗಣಿಯಿಂದ ಉತ್ಪನ್ನವಾಗುವ ಸಣ್ಣ ಕಲ್ಲು ಚೂರು, ದೂಳು, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಫಲವತ್ತಾದ ನೆಲದ ಮೇಲು ಪದರ, ಗಣಿಗಾರಿಕೆಯಿಂದಾಗಿ ನಾಶವಾಗಿ ಕೃಷಿಗೆ ಅನುಪಯುಕ್ತವಾಗುತ್ತದೆ.
  • ಸುತ್ತಮುತ್ತಲಿನ ಸಸ್ಯರಾಶಿಯ ಮೇಲೆ ಕಲ್ಲು ಕಣಗಳು ಕುಳಿತು ದ್ಯುತಿಸಂಶ್ಲೇಷಣೆಗೆ ತಡೆಯೊಡ್ಡುತ್ತವೆ. ಇದರ ಫಲವಾಗಿ ಇಳುವರಿ ಕಡಿಮೆಯಾಗುತ್ತದೆ. ಕಲ್ಲು ಗಣಿ ಕಾರ್ಮಿಕರು ದೀರ್ಘ ಕಾಲ ದೂಳನ್ನು ಸೇವಿಸುವುದರಿಂದ ಬಹುಬೇಗ ಶ್ವಾಸಕೋಶ ರೋಗಕ್ಕೆ ಬಲಿಯಾಗುತ್ತಾರೆ. ಇದನ್ನು ಸಿಲಿಕೋಸಿಸ್ ಎಂದು ಗುರುತಿಸಿದ್ದಾರೆ. ಹತ್ತಿರದ ಬಾವಿಗಳ ನೀರು ಕೂಡ ಮಲಿನವಾಗುತ್ತದೆ. ಅರಣ್ಯಗಳಲ್ಲಿ ಉತ್ತಮ ದರ್ಜೆಯ ಅಲಂಕರಣ ಶಿಲೆಗಳು ಹಂಚಿಕೆಯಾಗಿದ್ದರೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅದನ್ನು ಗಣಿ ಮಾಡುವುದನ್ನು ಪರಿಸರ ಪ್ರೇಮಿಗಳು ವಿರೋಧಿಸುತ್ತಾರೆ.
  • ಕಲ್ಲು ಗಣಿಯ ಸುತ್ತಮುತ್ತ ಪರಿಸರ ಮಾಲಿನ್ಯ ನಿಯಂತ್ರಿಸಲು ಹಲವು ಉಪಾಯಗಳಿವೆ. ಟನ್ನುಗಟ್ಟಳೆ ದೂಳು ಶಮನ ಮಾಡುವ ಯಂತ್ರೋಪಕರಣಗಳನ್ನು ಬಳಸಿ ಪರಿಸರದ ಕಲುಷತೆಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದು. ಗಣಿ ಕಾರ್ಯ ಮುಗಿಯುವ ಮೊದಲೇ ಸುತ್ತ ನೆಡು ತೋಪು ಸೃಷ್ಟಿಸಿ, ಆ ಪ್ರದೇಶದಲ್ಲಿ ಹಸುರು ಬೆಳೆಯುವಂತೆ ನೋಡಿಕೊಳ್ಳಬಹುದು. ಗಣಿಗಾರಿಕೆಯ ಲಾಭದಲ್ಲಿ ಬರುವ ಒಂದು ಅಂಶವನ್ನು ಇದಕ್ಕಾಗಿ ವಿನಿಯೋಗಿಸಿದರೆ ಗಣಿಯ ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿಯಾಗುತ್ತದೆ, ಪರಿಸರ ಮಾಲಿನ್ಯವನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು.

ಅಲಂಕರಣ ಶಿಲೆಗಳ ಹಂಚಿಕೆ

[ಬದಲಾಯಿಸಿ]
ಅಲಂಕರಣ ಶಿಲೆಗಳ ವಿಧ ಶಿಲೆ ದೊರೆಯುವ ತಾಲ್ಲೂಕು/ಜಿಲ್ಲೆ
ಡಾಲರೈಟ್ ಚಾಮರಾಜನಗರ, ಯಳಂದೂರು,
ರೂಪಾಂತರಿತ(ಬ್ಲಾಕ್ ಗ್ರಾನೈಟ್) ಶಿಲೆಗಳು ವಿಶೇಷವಾಗಿ ಪೆನಿನ್ಸುಲಾರ್ ಕೊಳ್ಳೇಗಾಲ, ಮಳವಳ್ಳಿ ತಿರುಮಕೂಡಲು ನರಸೀಪುರ, ಹುಣಸೂರು, ಕನಕಪುರ,ಪಿರಿಯಾಪಟ್ಟಣ, ನಂಜನಗೂಡು, ಗುಂಡ್ಲುಪೇಟೆ, ಕಾರ್ಕಳ, ಮಂಡ್ಯ.
ಚಾರ್ನೋಕೈಟ್ ಮತ್ತು ಗ್ರಾನೈಟ್ ಶಿಲೆಗಳು, ಕಂದು ಮತ್ತು ಕೆಂಪು , ನಸುಗೆಂಪು ಗ್ರಾನೈಟ್, ಗ್ರಾನೈಟ್ ಜಾಡು ಇಳಕಲ್ಲು, ಕುಷ್ಟಗಿ, ಮಾಗಡಿ, ಕ್ಲೋಸ್ಪೆಟ್ ಸಿರಿಗುಪ್ಪ, ಬಳ್ಳಾರಿ, ಕೊಪ್ಪಲ್, ರಾಮನಗರ, ದೇವದುರ್ಗ, ಸುರಪುರ, ಲಿಂಗಸಗೂರು
ತಿಳಿಹಸುರು ಮಿಶ್ರಿತ ಡಾಲರೈಟ್ ಮತ್ತು ಗ್ರಾನೈಟ್ ಬೇಲೂರು, ಚಿಕ್ಕಮಗಳೂರು, ಶ್ರೀನಿವಾಸಪುರ, ಮಾಲೂರು, ಕೋಲಾರ, ಹೊಸಕೋಟೆ, ಬಳ್ಳಾರಿ, ಚಳ್ಳಕೆರೆ, ತಿಪಟೂರು, ನೆಲಮಂಗಲ, ಕುಣಿಗಲು
ನಸುಗೆಂಪು, ಹಸುರು, ಬೂದುಬಣ್ಣದ ಗ್ರಾನೈಟ್ ಗ್ರಾನೈಟ್ ಮತ್ತ ನಮೂನೆಯ ಗ್ರಾನೈಟ್ ದೇವದುರ್ಗ, ಮಾಗಡಿ, ತುಮಕೂರು, ಕ್ಲೋಸ್ಪೆಟ್ ಕೊಪ್ಪಳ, ಕೂಡ್ಲಿಗಿ, ರಾಮನಗರ, ಗುಡಿಬಂಡೆ, ಬಾಗೇಪಲ್ಲಿ, ಕೋಲಾರ
ಗ್ರಾನೈಟ್ ಪಾರ್ಫೀರಿ ಗೌರಿಬಿದನೂರು
ಬಹುವರ್ಣದ ಗ್ರಾನೈಟ್, ಗ್ರಾನೈಟ್ ಜಾಡು ಮತ್ತು ಪೆನಿನ್ಸುಲಾರ್ ಕನಕಪುರ, ಚನ್ನಪಟ್ಟಣ, ಯಲಬುರ್ಗಿ, ಕ್ಲೋಸ್ಪೆಟ್ ಕುಣಿಗಲು, ಮಳವಳ್ಳಿ, ತುಮಕೂರು, ಕುಷ್ಟಗಿ, ಮದ್ದೂರು, ಬೆಂಗಳೂರು, ಲಿಂಗಸಗೂರು, ಇಳಕಲ್ಲು, ನೈಸ್
ಬೂದುಬಣ್ಣದ ಗ್ರಾನೈಟ್ ಪೆನಿನ್ಸುಲಾರ್, ನೈಸ್ ಮತ್ತು ಅದರಲ್ಲಿ ಹಂಚಿಕೆಯಾಗಿರುವ ಗ್ರಾನೈಟ್ ಶಿರಾ, ಚಿಂತಾಮಣಿ, ಬಳ್ಳಾರಿ, ಚಿತ್ರದುರ್ಗ, ಗಂಗಾವತಿ, ದೇವದುರ್ಗ ಮತ್ತು ಹೆಗ್ಗಡದೇವನಕೋಟೆ

ಅಲಂಕರಣ ಶಿಲೆಗಳು

[ಬದಲಾಯಿಸಿ]
ವಾಣಿಜ್ಯ ಹೆಸರು ಭೂವೈಜ್ಞಾನಿಕ ಹೆಸರು
ಮೈಸೂರು ಬ್ಲಾಕ್ ಡಾಲರೈಟ್
ಬ್ಲಾಕ್ ಗೆಲಾಕ್ಸಿ ಗಾಬ್ರೊ
ಕುನ್ನಮ್ ಮತ್ತು ಚಾಮರಾಜನಗರ ಬ್ಲಾಕ್ ಡಾಲರೈಟ್
ಹಾಸನ್ ಗ್ರೀನ್ ಡಾಲರೈಟ್
ರೂಬಿ ರೆಡ್ ಕೆಂಪು ಗ್ರಾನೈಟ್
ಇಂಪೀರಿಯಲ್ ರೆಡ್ ಕ್ಲೋಸ್ಪೆಟ್ ಗ್ರಾನೈಟ್
ಕ್ಲೋಸ್ಪೆಟ್ ಗ್ರಾನೈಟ್ ಕಂದು ಪಾರ್ಪಿರಿಟಿಕ್
ರೆಡ್ ಮಲ್ಟಿ ಕಲರ್ ಕಂದು ಕೆಂಪುಮಿಶ್ರಿತ ನೈಸ್
ಕಾಶ್ಮೀರ್ ವೈಟ್ ಬಿಳಿ ಗ್ರಾನೈಟ್ ಮತ್ತು ನೈಸ್
ಫಿಷ್ಬೆಲ್ಲಿ ಗ್ರಾನೈಟ್ ಬಿಳಿ ಮತ್ತು ಬೂದು ನೈಸ್ ಮತ್ತು ಆಗನ್ ನೈಸ್, ಬೂದು ನೈಸ್
ಇಂಡಿಯನ್ ಸನ್ರೈಸ್ ಚಾರ್ನೋಕೈಟ್
ಶಿರಾ ಗ್ರೇ ಬೂದು ಗ್ರಾನೈಟ್
ಹಿಮಾಲಯನ್ ಬ್ಲೂ ಬೂದು ಮಿಶ್ರಿತ ನೈಸ್
ಕನಕಪುರ ಮಲ್ಟಿ ಕಲರ್ ಕೆಂಪು ಬೂದು ಮಿಶ್ರಿತ ನೈಸ್ ಮತ್ತು ಗ್ರಾನೈಟ್
ಇಳಕಲ್ ಪಿಂಕ್ ಗ್ರಾನೈಟ್
ಸರ್ವನ್ ರೋಸ್ ಮತ್ತು ಮಾಗಡಿ ಪಿಂಕ್ ಕ್ಲೋಸ್ಪೆಟ್ ಗ್ರಾನೈಟ್
ಪಿಂಕ್ ಫ್ಯಾಂಟಸಿ ಗ್ರಾನೈಟ್
ಕ್ವೀನ್ ರೋಸ್ ಗ್ರಾನೈಟ್