ವಿಷಮಪರೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಗ್ನಿಪರೀಕ್ಷೆ ಇಂದ ಪುನರ್ನಿರ್ದೇಶಿತ)
ಅಗ್ನಿಪರೀಕ್ಷೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಅಗ್ನಿಪರೀಕ್ಷೆ ಹೆಸರಿನ ಚಲನಚಿತ್ರಕ್ಕಾಗಿ ಇಲ್ಲಿ ನೋಡಿ.
ಜಲಪರೀಕ್ಷೆ

ವಿಷಮಪರೀಕ್ಷೆ ಯಾತನಾಮಯ, ಅಥವಾ ಕನಿಷ್ಟಪಕ್ಷ ಅಹಿತಕರ, ಸಾಮಾನ್ಯವಾಗಿ ಅಪಾಯಕಾರಿ ಅನುಭವಕ್ಕೆ ಒಳಪಡಿಸುವ ಮೂಲಕ ಆರೋಪಿಯ ಅಪರಾಧ ಅಥವಾ ನಿರಪರಾಧಿತ್ವವನ್ನು ನಿರ್ಧರಿಸುವ ಒಂದು ಪ್ರಾಚೀನ ನ್ಯಾಯತೀರ್ಮಾನದ ಆಚರಣೆಯಾಗಿತ್ತು. ಈ ಪರೀಕ್ಷೆ ಜೀವನ ಅಥವಾ ಸಾವಿನ ಪರೀಕ್ಷೆಯಾಗಿತ್ತು ಮತ್ತು ಉಳಿಯುವಿಕೆ ನಿರಪರಾಧಿತ್ವದ ಸಾಕ್ಷಿಯಾಗಿತ್ತು. ಕೆಲವು ಸಂದರ್ಭಗಳಲ್ಲಿ, ಆರೋಪಿಯು ಗಾಯವನ್ನು ತಪ್ಪಿಸಿಕೊಂಡರೆ ಅಥವಾ ಅವನ ಗಾಯಗಳು ವಾಸಿಯಾದರೆ ಅವನನ್ನು ನಿರಪರಾಧಿಯೆಂದು ಪರಿಗಣಿಸಲಾಗುತ್ತಿತ್ತು.

ಕಾದಾಟ ಪರೀಕ್ಷೆಯು ವಿವಾದವಿರುವ ಇಬ್ಬರ ನಡುವೆ ನಡೆಯುತ್ತಿತ್ತು. ಅವರು ಅಥವಾ, ಕೆಲವು ಪರಿಸ್ಥಿತಿಗಳಲ್ಲಿ, ಗೊತ್ತುಪಡಿಸಿದ ಸರ್ವವಿಜೇತನು ಕಾದಾಡುತ್ತಿದ್ದನು/ರು, ಮತ್ತು ಕಾದಾಟದಲ್ಲಿ ಸೋತವನು ಅಥವಾ ಸೋತ ಸರ್ವವಿಜೇತನಿಂದ ಪ್ರತಿನಿಧಿಸಲ್ಪಟ್ಟ ಪಕ್ಷವನ್ನು ಅಪರಾಧಿ ಅಥವಾ ಜವಾಬ್ದಾರ ಎಂದು ಪರಿಗಣಿಸಲಾಗುತ್ತಿತ್ತು.

ಅಗ್ನಿಪರೀಕ್ಷೆಗೆ ಸಾಮಾನ್ಯವಾಗಿ ಆರೋಪಿಯು ಕೆಂಪಾಗಿ ಕಾದ ನೇಗಿಲಿನ ಮೊಳೆಗಳ ಮೇಲೆ ಸ್ವಲ್ಪ ದೂರ ನಡೆಯುವುದು ಅಥವಾ ಕೆಂಪಾಗಿ ಕಾದ ಕಬ್ಬಿಣದ ತುಂಡನ್ನು ಹಿಡಿಯುವುದು ಅಗತ್ಯವಿತ್ತು. ನಿರಪರಾಧಿತ್ವ ಸ್ವಲ್ಪವೂ ಗಾಯವಾಗದಿದ್ದರೆ ದೃಢಪಡುತ್ತಿತ್ತು, ಆದರೆ ಹೆಚ್ಚು ಸಾಮಾನ್ಯವಾಗಿ ಗಾಯಕ್ಕೆ ಪಟ್ಟಿ ಕಟ್ಟಿ, ಮೂರು ದಿನಗಳ ನಂತರ ಪುರೋಹಿತನು ಮರುಪರಿಶೀಲಿಸುತ್ತಿದ್ದನು ಮತ್ತು ದೇವರು ಮಧ್ಯೆ ಪ್ರವೇಶಿಸಿ ಗಾಯವನ್ನು ವಾಸಿಮಾಡಿದನು, ಅಥವಾ ಅದು ಹುಣ್ಣು/ವ್ರಣವೆಂದು ಘೋಷಿಸುತ್ತಿದ್ದನು; ಈ ಸಂದರ್ಭದಲ್ಲಿ ಆರೋಪಿಯನ್ನು ಗಡೀಪಾರು ಮಾಡಲಾಗುತ್ತಿತ್ತು ಅಥವಾ ಮರಣದಂಡನೆಗೆ ಗುರಿಪಡಿಸಲಾಗುತ್ತಿತ್ತು.

ಪ್ರಾಚೀನ ಭಾರತದಲ್ಲಿ, ಅಗ್ನಿಪರೀಕ್ಷೆಯಲ್ಲಿ, ಒಬ್ಬ ಪುರೋಹಿತನು ಮಂತ್ರಗಳಿಂದ ಅಗ್ನಿಯನ್ನು ಆವಾಹಿಸುತ್ತಿದ್ದನು. ಆವಾಹನೆಯ ನಂತರ, ಚಿತೆಯನ್ನು ರಚಿಸಿ ಅದಕ್ಕೆ ಬೆಂಕಿ ತಗುಲಿಸಲಾಗುತ್ತಿತ್ತು, ಮತ್ತು ಆರೋಪಿಗೆ ಅದರ ಮೇಲೆ ಕೂಡುವುದಕ್ಕೆ ಹೇಳಲಾಗುತ್ತಿತ್ತು. ಹಿಂದೂ ಪುರಾಣದ ಪ್ರಕಾರ, ಆರೋಪಿಯು ನಿರಪರಾಧಿಯಾಗಿದ್ದರೆ, ಅಗ್ನಿ ದೇವರು ಅವನನ್ನು ಸಂರಕ್ಷಿಸುತ್ತಿದ್ದನು, ಇಲ್ಲವಾದರೆ ಅವನು ಸುಟ್ಟು ಭಸ್ಮವಾಗುತ್ತಿದ್ದನು.