ವಿಷಯಕ್ಕೆ ಹೋಗು

ಜ್ಯೋತಿಷ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜ್ಯೋತಿಷ್ಯ ಇಂದ ಪುನರ್ನಿರ್ದೇಶಿತ)

ಜ್ಯೋತಿಷ್ಯ - ಜ್ಯೋತಿಯನ್ನು, ಗ್ರಹನಕ್ಷತ್ರಗಳನ್ನು ಕುರಿತ ಶಾಸ್ತ್ರ (ಅಸ್ಟ್ರಾಲೊಜಿ). ಈ ಶಾಸ್ತ್ರದಲ್ಲಿ ಎರಡು ವಿಭಾಗಗಳುಂಟು. ಒಂದು ಖಗೋಳ ವಿಜ್ಞಾನ; ಮತ್ತೊಂದು ಭವಿಷ್ಯಾವಧಾನ ಅಥವಾ ಫಲಜ್ಯೋತಿಷ. ಫಲ ಜ್ಯೋತಿಷಕ್ಕೆ ಖಗೋಳ ವಿಜ್ಞಾನ ಅಧಾರ. ಎರಡನ್ನೂ ಒಟ್ಟಾರೆಯಾಗಿ ಪ್ರತ್ಯಕ್ಷ ಪ್ರಮಾಣವಾದ ಶಾಸ್ತ್ರ ಎನ್ನುತ್ತಾರೆ. ಖಗೋಳಶಾಸ್ತ್ರದ ಗ್ರಹದ ನಕ್ಷತ್ರ ಮುಂತಾದುವು ನೆರವಾಗಿ ಪ್ರತ್ಯಕ್ಷ-ಕಣ್ಣಿಗೆ ಕಾಣುವವು. ಫಲಜ್ಯೋತಿಷ ಅನುಭವಪ್ರತ್ಯಕ್ಷ. ಕಣ್ಣಿಗೆ ಕಾಣುವುದನ್ನು ಆಧರಿಸಿ, ಅನುಭವಕ್ಕೆ ಕಾಣಬರುವುದನ್ನು ಜ್ಯೋತಿಷ ಅವಧಾನ ಮಾಡುತ್ತದೆ. ಭೂಮಿಯ ಚರಾಚರ ವರ್ಗಗಳ ಆಗುಹೋಗುಗಳ ಮೆಲೆ ಗ್ರಹನಕ್ಷತ್ರಾದಿ ಆಕಾಶಕಾಯಗಳು ಬೀರುವ ಪ್ರಭಾವದ ಸಮ್ಯಗ್‍ದರ್ಶನವನ್ನು ಜ್ಯೋತಿಷ ಮಾಡಿಕೊಡಲೆಳಸುತ್ತದೆ. ವಸ್ತು ಶಕ್ತಿಕೇಂದ್ರ. ಇಂಥ ಶಕ್ತಿಕೇಂದ್ರಗಳಾದ ಗ್ರಹನಕ್ಷತ್ರಗಳನ್ನೂ ಇವುಗಳನ್ನೊಳಗೊಂಡ ವಿಶ್ವಗಳನ್ನೂ ಇಂಥ ವಿಶ್ವಗಳನ್ನೊಳಗೊಂಡ ಬ್ರಹ್ಮಾಂಡಗಳನ್ನೂ ಇವುಗಳ ಕ್ರಿಯೆಪ್ರಕ್ರಿಯೆಗಳನ್ನೂ ಜ್ಯೋತಿಷ ತನ್ನ ಪರಿಗಣನೆಗೆ ತೆಗೆದುಕೊಳ್ಳುತ್ತದೆ; ಆದರೂ ಅದರ ಪ್ರಧಾನ ಲಕ್ಷ್ಯ ಮನುಷ್ಯ; ಅವನಿಗೆ ಮಾರ್ಗದರ್ಶನ ನೀಡುವುದು. ಅಷ್ಟಕ್ಕೆ ಜ್ಯೋತಿಷ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಖಗೋಳ ವಿಷಯಕವಾದ ಜ್ಯೋತಿಷವೇ ಸಂಹಿತೆ; ಜಾತಕ, ಮುಹೂರ್ತ ನಿರ್ಣಯ ಪ್ರಶ್ನೆ, ಇತ್ಯಾದಿ ವಿಷಯಕವಾದುದು ಫಲಿತ ವಿಭಾಗ.

ಸಾಮಾನ್ಯವಾಗಿ ಜನಫಲಿತ ವಿಭಾಗವನ್ನು ಜ್ಯೋತಿಷ ಎನ್ನುವುದು ವಾಡಿಕೆ, ಇದು ಪ್ರಯೋಜನಾಂಶ ಪ್ರಧಾನವಾದ ಭಾವನೆ; ಪ್ರಾಯೋಗಿಕವಾಗಿ ಜ್ಯೋತಿಷದ ಸಾರ್ಥಕತೆ. ಜಾತಕವನ್ನು ತೆಗೆದುಕೊಳ್ಳೋಣ. ಹೆರಿಗೆಯ ಕ್ಷಣದಲ್ಲಿ ಸಲ್ಲುವ ವಿಶ್ವಸಕ್ತಿಗಳ ಅಂತಿಮ ಪರಿಣಾಮ ಮಗುವಿನ ವ್ಯಕ್ತಿತ್ವದ ಮೇಲೆ, ಭವಿಷ್ಯದ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ-ಎಂದು ಜ್ಯೋತಿಷದ ನಂಬಿಕೆ. ಆ ಕ್ಷಣಕ್ಕೆ ಸರಿಯಾಗಿ ಪೂರ್ವ ದಿಗಂತದಲ್ಲಿ ಉದಯಿಸುವ ರಾಶಿ ಜನ್ಮಲಗ್ನ, ಚಂದ್ರನಿರುವ ನಕ್ಷತ್ರ ಜನ್ಮನಕ್ಷತ್ರ, ಆ ನಕ್ಷತ್ರವಿರುವ ರಾಶಿ ಜನ್ಮರಾಶಿ. ಸೂರ್ಯ ನಮ್ಮ ಗ್ರಹಮಂಡಲ ವ್ಯವಸ್ಥೆಗೆ ಅಧಿಶಕ್ತಿ. ಅವನಿಂದಲೇ ನಮ್ಮ ಪ್ರಪಂಚ, ಅದರ ಆಗುಹೋಗುಗಳು. ಸೂರ್ಯನಿಂದಲೇ ಕಾಲಗಣನೆ; ದಿವಸ, ವಾರ, ಮಾಸ, ಋತು, ವರ್ಷ-ಇವುಗಳ ವ್ಯವಸ್ಥೆ. ಚಂದ್ರನಿಂದಲೂ ಇಂಥ ಗಣನೆಯುಂಟು. ಸೂರ್ಯಚಂದ್ರಾದಿ ಗ್ರಹಗಳು ಚಲಿಸುವ ಅಕಾಶವೀಧಿಗೆ (ಭಚಕ್ರ) ಹೆಗ್ಗುರುತಾದ ಒಂಟಿ ಅಥವಾ ಗುಂಪು ತಾರೆಗಳನ್ನು ಅಶ್ವಿನಿ ಮುಂತಾದ 27 ನಕ್ಷತ್ರ ಮಂಡಗಳಾಗಿ ವಿಂಗಡಿಸಿದ್ದಾರೆ. ನಕ್ಷತ್ರಕ್ಕೆ ನಾಲ್ಕು ಪಾದ. ಒಂಬತ್ತು ನಕ್ಷತ್ರ ಪಾದಗಳಿಗೆ ಒಂದು ರಾಶಿಯಂತೆ ಭೂಚಕ್ರವನ್ನು ಮೇಷ ಮುಂತಾದ 12 ರಾಶಿಗಳಾಗಿ ವಿಂಗಡಿಸಿದ್ದಾರೆ. ಇದು ರಾಶಿಚಕ್ರ. ಸೂರ್ಯಪಥವನ್ನು ಚಂದ್ರಪಥ ಛೇದಿಸುವ ಸಂಪಾತ ಬಿಂದುಗಳು ರಾಹು ಕೇತುಗಳು; ಇವು ನವಗ್ರಹಗಳಲ್ಲಿ ಎಣಿಕೆಯಾಗಿದ್ದರೂ ಛಾಯಾಗ್ರಹಗಳೆಂದು ಪರಿಗಣನೆ. ಜನನ ಕಾಲದಲ್ಲಿ ಸೂರ್ಯಚಂದ್ರಾದಿ ಗ್ರಹಗಳು ಯಾವ ಯಾವ ನಕ್ಷತ್ರ, ಪಾದ, ಪಾದಾಂಶಗಳಲ್ಲಿರುತ್ತವೆಯೋ ಅವನ್ನು ಸೂಚಿಸುವ ರಾಶಿಚಕ್ರದ ನಕ್ಷೆ ಜಾತಕ, ರಾಶಿ ಕುಂಡಲಿ. ಸೂರ್ಯಚಂದ್ರರಿಗೆ ಒಂದೇ ಗತಿ (ಖುಜ್ಜು), ಮುಂದೆ ಸಾಗುವುದು ಪಶ್ಚಿಮದಿಂದ ಪೂರ್ವಕ್ಕೆ. ಇತರ ಗ್ರಹಗಳಿಗೆ ವಕ್ರಗತಿಯೂ ಉಂಟು, ಅವು ನಿಧಾನವಾಗಿ (ಮಂದ) ಹಿಂದೆ ಬಿದ್ದು (ವಕ್ರ) ನಿಂತು (ಸ್ತಂಭನ) ವೇಗವಾಗಿ (ಅತಿಚಾರ) ಚಲಿಸುತ್ತವೆ. ಸೂರ್ಯನಿಗೆ ಭೂಮಿಗೆ ಅತಿ ಸಮೀಪವಾಗಿ ಅತಿ ದೂರವಾಗಿ ಚಲಿಸುತ್ತವೆ. ಸೂರ್ಯ ಸಿಂಹರಾಶಿಯ ಅಧಿಪತಿ; ಚಂದ್ರ ಕಟಕಧಿಪತಿ. ಇತರ ಐದು ಗ್ರಹಗಳಿಗೆ ತಲಾ ಎರಡು ರಾಶ್ಯಾಧಿಪತ್ಯ. ಪ್ರತಿ ಗ್ರಹಕ್ಕೂ ಉಚ್ಚ ನೀಚ ಮೂಲ ತ್ರಿಕೋಣಗಳೆಂಬ ಆಯಕಟ್ಟಿನ ಸ್ಥಾನಗಳುಂಟು. ರಾಹುಕೇತುಗಳಿಗೂ ಇವೆಲ್ಲ ಉಂಟೆಂದು ಕೆಲವರ ಭಾವನೆ. ಗ್ರಹಗಲಿಗೆ ಶತ್ರುತ್ವ, ಮಿತ್ರತ್ವ, ತಾಟಸ್ಥ್ಯ ದೃಷ್ಟಿ, ವಿಶೇಷ ದೃಷ್ಟಿ ಉಂಟು; ಅವಸ್ಥಾಂತರಗಳುಂಟು. ಹಾಗೆಯೇ ವೇಧೆ. ಪ್ರತಿಗ್ರಹಕ್ಕೂ ನಕ್ಷತ್ರಗಳ ಒಡೆತನ ಉಂಟು, ಪ್ರತಿ ನಕ್ಷತ್ರಕ್ಕೂ ಅಧಿದೇವತೆಯುಂಟು. 12 ರಾಶಿಗಳು ನಕ್ಷತ್ರಖಚಿತ. ಇದು ನಿರಯನ ಭಚಕ್ರ, ಫಲಜ್ಯೋತಿಷಕ್ಕೆ ಯುಕ್ತ. ಲಗ್ನವೇ ಮುಂತಾದ 12 ಭಾವಗಳು ಅಥವಾ ಮನೆಗಳು ಜನನ ಕಾಲಾಪೇಕ್ಷ್ಯ ನಿರ್ಣೀತ. ಒಂದು ಭಾವ ಎರಡು ರಾಶಿಗಳಿಗೆ ಹರಡಿರಬಹುದು. ಲಗ್ನ ಮೊದಲ ಮನೆ, ತನು ಭಾವ. ಹೀಗೆ ಖಗೋಳದ ಎಲ್ಲ ಅಂಶ ಅಂತರಗಳಿಗೂ ಜೋತಿಷದ ಸಂಕೇತಗಳುಂಟು. ಅವೆಲ್ಲ ಲಕ್ಷಣಸೂಚಿಗಳು. ಈ ಎಲ್ಲ ಜ್ಯೋತಿಷಿಕ ಅಂಶಗಳನ್ನೂ ತೆಗೆದುಕೊಂಡು ಸಮನ್ವಯಗೊಳಿಸಿ ಫಲಿತಾಂಶವನ್ನು ತೋರಿಸುತ್ತಾರೆ. ಅದು ವ್ಯಕ್ತಿ ಲಕ್ಷಣದ ಸೂಚಿ, ಭವಿಷ್ಯ ಸೂಚಿ.

ಶನಿಯಿಂದ ಆಚೆಗೆ ಯೂರನಸ್, ನೆಪ್ಚೂನ್, ಪ್ಲೂಟೋ ಗ್ರಹಗಳಿರುವುದನ್ನು ಆಧುನಿಕ ಖಗೋಳವಿಜ್ಞಾನ ಕಂಡುಹಿಡಿದಿದೆಯಷ್ಟೆ. ಇವು ಸೂರ್ಯನ ಸುತ್ತ ಒಮ್ಮೆ ತಿರುಗಿ ಬರುವ ಕಾಲಾವಧಿ ಮನುಷ್ಯ ಜೀವಿತಕ್ಕಿಂತ ಅಧಿಕವಾಗಿರುವ ಕಾರಣ ಇವನ್ನು ಜಾತಕ ಸಂಬಂಧವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕೆಲವರ ಪರಿಗಣಿಸಬೇಕೆಂದು ಆಧುನಿಕರ ಮತ. ಅಂತೂ ಈ ಶನ್ಯತಿಗ ಗ್ರಹಗಳನ್ನು ನವಗ್ರಹಗಳ ಜೊತೆಗೆ ಅಳವಡಿಸುವ ಆಧುನಿಕ ಪ್ರಯತ್ನ ನಡೆದಿದೆ. ಭೂಲೋಕದ ದೀರ್ಘಾವಧಿ ವಿದ್ಯಮಾನಗಳಿಗೆ ಇವನ್ನು ಪರಿಗಣಿಸುತ್ತಾರೆ. ಅದಕ್ಕೆ ಮೇದಿನಿ ಜ್ಯೋತಿಷ ಎಂದು ಹೆಸರು. ಹಾಗೆಯೇ ನಕ್ಷತ್ರಖಚಿತವಾದ ಸ್ಥಿರ ನಿರಯನ ಭಚಕ್ರವನ್ನು ವರ್ಜಿಸಿ, ಸೂರ್ಯನ ಚಲನವನ್ನು ಅವಲಂಬಿಸುವ ಸಾಯನ ಚಲಿತ ಭಚಕ್ರವನ್ನು ಭವಿಷ್ಯಾವಧಾನಕ್ಕೂ ತೆಗೆದುಕೊಳ್ಳುವ ಆಧುನಿಕ ಪರಿಪಾಟಿ ಇದೆ, ಇದು ಪಶ್ಚಿಮದ ಪ್ರಭಾವ.

ಜ್ಯೋತಿಷದ ಕಠಿಣ ಭಾಗವೆಂದರೆ ಫಲಕಾಲವನ್ನು ನಿರ್ದೇಶಿಸುವುದು. ಇದಕ್ಕೆ ಸುಮಾರು ನಲವತ್ತು ವಿಧಾನಗಳಿವೆ. ಈ ದಶಾಭುಕ್ತಿ ವಿಧಾನಗಳಲ್ಲಿ ವಿಂಶೋತ್ತರಿ ಪದ್ಧತಿ ಅತ್ಯಂತ ವ್ಯಾಪಕ ಪ್ರಚಾರವುಳ್ಳದ್ದು. ಉತ್ತರ ಭಾರತದಲ್ಲಿ ಅಷ್ಟೋತ್ತರಿಗೆ ಮಾನ್ಯತೆಯುಂಟು. ವಿಂಶೋತ್ತರಿಯ ಪ್ರಕಾರ, ಮನುಷ್ಯನ ಪರಮಾಯುಷ್ಯ 120 ವರ್ಷಗಳು. ಈ ಆಯುರ್ದಾಯವನ್ನು ಒಂಬತ್ತು ಗ್ರಹಗಳಿಗೆ ವಿವಿಧ ಪ್ರಮಾಣಗಳಲ್ಲಿ ಹಂಚಿದ್ದಾರೆ; 120 ವರ್ಷಗಳ ಅವಧಿಯಲ್ಲಿ ಪ್ರತಿಗ್ರಹದ ದೆಶೆಯೂ ಒಮ್ಮೆ ನಡೆಯುತ್ತದೆ. ಪ್ರತಿದೆಶೆಗೂ ಒಂಬತ್ತು ಗ್ರಹಗಳ ಭುಕ್ತಿಯುಂಟು. ಪ್ರತಿ ಭುಕ್ತಿಗೂ ಒಳ ವಿಭಾಗಗಳುಂಟು. ಜನ್ಮ ನಕ್ಷತ್ರಾಧಿಪತಿಯದೇ ಪ್ರಥಮ ದೆಶೆ. ತರುವಾಯ ಇತರವು. ಒಂದೊಂದು ದೆಶೆಯಲ್ಲಿ ಒಂದೊಂದು ಭುಕ್ತಿಯ ಫಲವೂ ಬೇರೆ ಬೇರೆ. ಇದು ಆಯಾ ಜಾತಕದ ಪ್ರಕಾರ. ಮೊದಲು ಆಯುರ್ದಾಯ ನಿಷ್ಕರ್ಷೆ, ತರುವಾಯ ಫಲ ನಿರ್ಣಯ. ಅಷ್ಟೋತ್ತರಿಯ ಪ್ರಕಾರ ಮನುಷ್ಯನ ಪರಮಾಯುರ್ದಾಯ 108 ವರ್ಷಗಳು.

ಜನ್ಮ ಲಗ್ನದ ಪ್ರಾಧಾನ್ಯವನ್ನು ಪ್ರಸ್ತಾಪಿಸಿದೆಯಷ್ಟೆ. ಅದರಂತೆ ಆಧಾನ ಲಗ್ನವನ್ನೂ ಎಣಿಸುವುದುಂಟು. ಅದು ಗರ್ಭ ಲಗ್ನ ಆಧಾರದ ಮೇರೆಗೆ ಜನ್ಮ ಜ್ಯೋತಿಷದ ಪ್ರಕಾರ, ಜನ್ಮವೂ ಗರ್ಭವೂ ಕೆಲ ನಿರ್ದಿಷ್ಟ ಕಾಲಗಳಲ್ಲಿ ಮಾತ್ರ ಸಂಭವ. ಹಾಗೆಯೇ ಸಾವು, ಋತುಸ್ರಾವ ಒಟ್ಟಾರೆಯಾಗಿ ಇವೆಲ್ಲ ಗ್ರಹ ನಕ್ಷತ್ರ ಯೋಗಗಳ ಮೇರೆಗೆ ಸಂಭವ. ಅಪಸ್ಮಾರ ಉನ್ಮಾದಗಳೂ ಅಷ್ಟೆ. ರೋಗದ ಉಲ್ಬಣಗಳೂ ಅಷ್ಟೆ. ಪ್ರಾಣಿವರ್ಗಗಳಲ್ಲಿ ಕಂಡುಬರುವ ಜೈವಿಕ ಆವರ್ತಗಳನ್ನು ಜ್ಯೋತಿಷ ಸೂಚಿಸುತ್ತದೆ; ಸಂಖ್ಯಾಶಾಸ್ತ್ರೀಯವಾದ ಸಂಭವ ಸಾಧ್ಯತೆಗಳನ್ನು ಕೆಲವೊಮ್ಮೆ ಸರಾಸರಿಗಳನ್ನು ಸೂಚಿಸುತ್ತದೆ.

ಈಗ ಭಾರತದಲ್ಲಿ ಪ್ರಚಾರದಲ್ಲಿರುವುದು ಬಹುತೇಕ ಪರಾಶರ ಪದ್ಧತಿ. ಜೈಮಿನಿ ಪದ್ಧತಿಯನ್ನು ಹಲಕೆಲವು ಪ್ರಮೆಯಗಳಲ್ಲಿ ಅವಲಂಬಿಸುವುದುಂಟು. ಜ್ಯೋತಿಷ ವೇದ ಪ್ರಣೀತ; ವೇದಾಂಗ. ವೇದಾಂಗ ಜ್ಯೋತಿಷದಿಂದ ಸಿದ್ಧಾಂತಗಳು ಹುಟ್ಟಿಕೊಂಡವು. ದಿವ್ಯದೃಷ್ಟಿಗೆ, ಯೋಗದೃಷ್ಟಿಗೆ ಗೋಚರವಾದುದನ್ನು ಪರಾಶರಾದಿ ಋಷಿಗಳು ಜನಸಾಮಾನ್ಯರ ಪ್ರಯೋಜನಕ್ಕಾಗಿ ಅಳವಡಿಸಿಕೊಟ್ಟರು. ಉತ್ತರೋತ್ತರ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಇದನ್ನು ಸಿದ್ಧಾಂತಗಳ ರೂಪದಲ್ಲಿ ಆಗುಗೊಳಿಸಿದರು. ತರುವಾಯ ಕಾರಿಕೆಗಳೆಂಬ ವ್ಯಾಖ್ಯಾನಗಳು ಹುಟ್ಟಿದುವು. ಪರಾಶರೀಯ ಗ್ರಂಥಗಳು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಆರ್ಯಭಟೀಯ ಸೂರ್ಯಸಿದ್ಧಾಂತ ಸರ್ವಮಾನ್ಯವಾದ ಪ್ರಮಾಣ ಗ್ರಂಥ. ವರಾಹಮಿಹಿರರ ಪಂಚಸಿದ್ಧಾಂತಿಕ ಗ್ರಂಥದಿಂದ ಇತರ ಜ್ಯೋತಿಷಾಚಾರ್ಯರ ಪರಿಚಯವುಂಟಾಗುತ್ತದೆ. ಮಿಹಿರರ ಬೃಹತ್ ಜಾತಕ ಸಂಹಿತೆಗಳು ಪ್ರಮಾಣ ಗ್ರಂಥಗಳು. 12ನೆಯ ಶತಮಾನದಲ್ಲಿ ಭಾಸ್ಕರಾಚಾರ್ಯರ ಪರಕೀಯಾಕ್ರಮಣದ ಆಘಾತಗಳ ಪರಿಣಾಮವಾಗಿ ಜ್ಯೋತಿಷದ ಬೆಳೆವಣಿಗೆ ಕುಂಠಿತವಾಯಿತು. ಈಗ ಪಾಶ್ಚಾತ್ಯ ಪ್ರಭಾವ, ವೈಜ್ಞಾನಿಕ ವೈಚಾರಿಕ ಪ್ರಭಾವಗಳ ದೆಸೆಯಿಂದಾಗಿ ಜ್ಯೋತಿಷ ತನ್ನ ಉತ್ಕøಷ್ಟ ನಲೆಬೆಲೆಗಳನ್ನು ಮತ್ತೆ ಕಂಡುಕೊಳ್ಳುತ್ತಿದೆ. ಈ ಆಧುನಿಕ ನವೋದಯಕ್ಕಾಗಿ ಬಿ. ಸೂರ್ಯನಾರಾಯಣರಾಯರೇ ಮೊದಲಾದವರು ಸಲ್ಲಿಸಿರುವ ಸೇವೆ ಸ್ಮರಣೀಯ.

ಜಾತಕದಂತೆ ಮುಹೂರ್ತ: ಮುಹೂರ್ತ ಶಾಸ್ತ್ರದಲ್ಲಿ ಉದ್ದಿಷ್ಟ ಕಾಲವೇ ಜನ್ಮಲಗ್ನ. ಪ್ರಶ್ನಶಾಸ್ತ್ರದಲ್ಲೂ ಇದೇ ರೀತಿ. ಪ್ರಶ್ನೆಯ ಕಾಲವೇ ಜನ್ಮಲಗ್ನವೆಂದು ಪರಿಗಣನೆ. ಪ್ರಾಚೀನ ಭಾರತೀಯ ಋಷಿಗಳು ಉದಾರಚರಿತರು. ತಮ್ಮ ವೈಚಾರಿಕತೆಗೆ ನಿಲುಕಿದ, ಸಾಧುವಾಗಿ ಕಂಡ, ಪರಕೀಯ ಅಂಶಗಳನ್ನು ಸ್ವೀಕರಿಸಿದ್ದಾರೆ. ಗ್ರೀಕ್ ಸಿದ್ಧಾಂತಿಗಳನ್ನು ಯವನಾಚಾರ್ಯರೆಂದು ಗೌರವಿಸಿದ್ದಾರೆ. ಗ್ರೀಕ್ ಮೂಲಗಳಿಂದ ಕೆಲಭಾವನೆಗಳನ್ನೂ ಪಾರಿಭಾಷಿಕ ಶಬ್ದಗಳನ್ನೂ ಭಾರತೀಯರು ತೆಗೆದುಕೊಂಡಿದ್ದಾರೆ, ನಿಜ. ಆದರೆ ಗ್ರೀಕ್ ಜ್ಯೋತಿಷ ಪದ್ಧತಿ ಪ್ರಕ್ರಿಯೆಗಳಿಗೂ ಭಾರತೀಯವಕ್ಕೂ ಅರ್ಥಾರ್ಥಸಂಬಂಧವಿಲ್ಲ. ಜ್ಯೋತಿಷವನ್ನು ಲೋಕವಿಶಿಷ್ಟವನ್ನಾಗಿಸಿರುವ ನಕ್ಷತ್ರ ನಿರ್ಣಯ, ದಶಾಭುಕ್ತಿ ನಿರ್ಣಯ ಮುಂತಾದುವು ಅನನ್ಯವೂ ಪರಿಷ್ಕಾರವೂ ಅತಿ ಪ್ರಾಚೀನವೂ ಆದ ಭಾರತೀಯ ಸಿದ್ಧಿ. ಪ್ರಶ್ನಶಾಸ್ತ್ರ ಪರಕೀಯ ಪ್ರಭಾವಕ್ಕೆ ಸಂದ ಪದ್ಧತಿ ಎಂದು ಹೇಳುವುದುಂಟು. ಅದು ತಾಜಕ ಜ್ಯೋತಿಷ. ಇತ್ತೀಚಿನ ಶತಮಾನಗಳ ಬೆಳೆವಣಿಗೆ.

ಜ್ಯೋತಿಷ ಭಾರತೀಯ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದೆ. ಪ್ರಾಚೀನ ಭಾರತೀಯ ನಾಗರಿಕತೆಯ ಸಾಂಸ್ಕøತಿಕ, ಧಾರ್ಮಿಕ, ವ್ಯಾವಹಾರಿಕ ಪರಂಪರೆಗೆ ಸಂದ ವೇದ, ಉಪನಿಷತ್ತುಗಳೇ ಮುಂತಾದುವುಗಳೊಡನೆ ಸಂಗೋಪಾಂಗವಾಗಿ ಬೆಳೆದು ಅಖಂಡತೆಯನ್ನು ಆಯ್ದಿದೆ ಮತ್ತು ಅನುಭವ ಪ್ರಮಾಣವಾದ ವ್ಯಾವಹಾರಿಕ ಪ್ರಯೋಜನವನ್ನು ಸಾಧಿಸಿಕೊಂಡಿದೆ.

ಜ್ಯೋತಿಷಕ್ಕೆ ಜನ್ಮಾಂತರ ಕರ್ಮಸಿದ್ಧಾಂತಗಳು ಆಧಾರಭೂತ. ವ್ಯಕ್ತಿವ್ಯಕ್ತಿಗೂ ಇರುವ ಅಂತರಕ್ಕೆ ಇದೇ ಅದು ಕೊಡುವ ಹಿನ್ನೆಲೆ. ಜನ್ಮಾಂತರಗಳಿಂದ ಕೂಡಿಹಾಕಿಕೊಂಡು ಬಂದಿರುವ ಕರ್ಮ ಸಂಚಿತ. ಈ ಜನ್ಮದಲ್ಲಿ ಫಲಿಸುವ ಕರ್ಮಭಾಗ ಪ್ರಾರಬ್ಧ. ಈ ವರೆಗೆ ಈ ಜನ್ಮದಲ್ಲಿ ಸಂಪಾದಿಸಿ ಮುಂದಿನ ಜನ್ಮಕ್ಕೆ ಆರ್ಜಿಸಿಕೊಂಡು ಹೋಗುವ ಕರ್ಮಮೊತ್ತ ಆಗಮಿ. ಇದನ್ನು ಗ್ರಹನಕ್ಷತ್ರ ಸಂಕೇತಗಳ ಮೂಲಕ ಜಾತಕ ನಿರ್ದೇಶಿಸುತ್ತದೆ. ಮಾಡಿದ್ದುಣ್ಣೋ ಮಹಾರಾಯ. ಜನ್ಮ, ಜನ್ಮಜಾತವಾದ ಪ್ರವೃತ್ತಿಗಳು, ದೈಹಿಕ ಸಾಮಾಜಿಕ ಪರಿಸ್ಥಿತಿಗಳು ಕರ್ಮಾಧೀನ. ಅವನ್ನು ನಾವು ಬಳಸಿಕೊಳ್ಳುವ ಬಗ್ಗೆ ಆತ್ಮಾಧೀನ, ಮನೋದಾಢ್ರ್ಯ ಪ್ರಯತ್ನ ಪಾಟವಗಳನ್ನು ಅವಲಂಬಿಸಿದ್ದು. ಯೋಗಿಗಳು ಜನ್ಮಾಂತರದ ವಾಸನೆಗಳನ್ನು ಸುಟ್ಟು ಜೀವನ್ಮುಕ್ತರಾಗುತ್ತಾರೆಂದು ನಮ್ಮ ಅನೂಚಾನವಾದ ನಂಬಿಕೆ. ಇದು ಸಾಮಾನ್ಯರಿಗೆ ಅಲ್ಲ. ದೃಢಚಿತ್ತವುಳ್ಳವರು ತಮ್ಮ ಬದುಕನ್ನು ತಿದ್ದಿಕೊಳ್ಳಲು ಸಮರ್ಥರು. ಜನಸಾಮಾನ್ಯರು ಇಂದ್ರಿಯದಾಸರಾಗಿ ಜಾತಕದ ಮೇರೆಗೆ ಜೀವನ ಸಾಗಿಸುತ್ತಾರೆ. ಮನುಷ್ಯನಿಗೆ ಕರ್ಮಬಂಧನವೂ ಉಂಟು, ಕ್ರಿಯಾಸ್ವಾತಂತ್ರ್ಯವೂ ಉಂಟು. ವ್ಯಕ್ತಿ ಸಂಪೂರ್ಣವಾಗಿ ವಿಧಿವಶನೂ ಅಲ್ಲ, ಸ್ವತಂತ್ರನೂ ಅಲ್ಲ.

ಕೆಲವು ಅವಶ್ಯವಾದ ಕರ್ಮವಿಪಾಕಗಳನ್ನು ಮನುಷ್ಯ ಅನುಭವಿಸಲೇಬೇಕು. ಸುಖವೂ ದುಃಖದಂತೆ ಪ್ರಾರಬ್ಧ. ದುಸ್ಸಹವೂ ಅವಶ್ಯವೂ ಆದ ಪ್ರಾರಬ್ಧಕ್ಕೆ ಶಾಂತಿ ಮಂತ್ರ ತಂತ್ರ ಮಣಿಜಪಹೋಮಾದಿ ಪ್ರಶಮನೋಪಾಯಗಳ್ನು ಜ್ಯೋತಿಷ ವಿಧಿಸುತ್ತದೆ.

ಭೌಗೋಳಿಕ ಪರಿಮಿತಿಯಲ್ಲಿ ನಿರ್ಜೀವ ವರ್ಗಗಳ ಬಗ್ಗೆ ವಿಜ್ಞಾನ ಸಾಕಷ್ಟು ಖಚಿತವಾದ ನಿರ್ಣೀತವಾದ ಅವಧಾನ ಮಾಡಬಲ್ಲದು. ಆದರೆ ಖಗೋಳ ಪ್ರಮಾಣದ ವಸ್ತುರಾಶಿಯ ಬಗ್ಗೆ, ಪರಮಾಣು ಗರ್ಭಗಳ ಒಳಶಕ್ತಿಗಳ ಬಗ್ಗೆ ವೈಜ್ಞಾನಿಕ ಅವಧಾನ ಸಂಖ್ಯಾಶಾಸ್ತ್ರೀಯ ಸಂಭವವಾದವನ್ನು ಅವಲಂಬಿಸುತ್ತದೆ. ಜ್ಯೋತಿಷ ಸಜೀವ ವರ್ಗಗಳ ಅದರಲ್ಲೂ ಸಂಕೀರ್ಣವಾದ ಮನುಷ್ಯ ವ್ಯಕ್ತಿಯ ಮತ್ತು ವರ್ಗದ ಸ್ವೇಚ್ಛಾವರ್ತನೆಯನ್ನು ಕುರಿತು ಸಮ್ಯಗ್ ದರ್ಶನವನ್ನೂ ವಿವಿಧ ದರ್ಶನವನ್ನೂ ಮಾಡಿಕೊಡುವ ಶಾಸ್ತ್ರ. ಅದರಿಂದಾಗಿ ಅದು ಆರ್ಷೇಯವಾಗಿ ಸಂಖ್ಯಾಶಾಸ್ತ್ರವಿಧಾನಗಳ್ನು ಅವಲಂಬಿಸಿಕೊಂಡು ಬಂದಿದೆ.

ಆಧುನಿಕ ವಿಜ್ಞಾನ ಬಾಹ್ಯಾಕಾಶವನ್ನೂ ಪರಮಾಣು ಗರ್ಭವನ್ನೂ ಜೀವಶಾಸ್ತ್ರಗಳನ್ನೂ ಅಲ್ಲದೆ ಅಂತರರಾಷ್ಟ್ರೀಯ ಅಧ್ಯಯನಗಳನ್ನೂ ಬೆಳೆಸುತ್ತಿರುವಂತೆಲ್ಲ ತನ್ನ ಮುಂಚಿನ ನಿಯತಿ ನಿರ್ಧಾರಕ ಗಡಸು ಧೋರಣೆಯನ್ನು ಸಡಿಲಿಸಿ ವೈಚಾರಿಕ ಸಮಗ್ರತೆಯನ್ನು ಬೆಳೆಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಜ್ಯೋತಿಷದ ಸಿದ್ಧಾಂತಗಳು ಕಂದಾಚಾರವೆಂಬ ಅಸಡ್ಡೆಯನ್ನು ತೊರೆಯಬೇಕಾಗಿದೆ. ವೈಜ್ಞಾನಿಕ ಆವಿಷ್ಕಾರಗಳೂ ದಿನೇ ದಿನೇ ಹಲವಾರು ಜ್ಯೋತಿಷಕ ಕಲ್ಪನೆಗಳನ್ನೂ ಸಿದ್ಧಾಂತಗಳನ್ನೂ ಊರ್ಜಿತಗೊಳಿಸುತ್ತಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:




ಈ ಕೆಳಗಿನ ಮಾಹಿತಿ ಮೊದಲಿಗೆ ಇದ್ದದ್ದು - ಮೇಲಿನದನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಿಂದ ಸೇರಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ


  • ಇದು ತಪ್ಪಾಗಿ 'ಅಸ್ಟ್ರಾಲೊಜಿ' ಆಂಗ್ಲ ವಿಭಾಗಕ್ಕೆ ಕೊಂಡಿ ಹೊಂದಿದೆ. ಅದು ಜಗತ್ತಿನ ಇತರ ಜ್ಯೋತಿಷಶಾಸ್ತ್ರಕ್ಕೆ ಸಂಬಂಧಿಸಿದೆ.ಆದರೆ ಇಲ್ಲಿ ವಿಷಯ ಕೇವಲ ಪಂಚಾಂಗಕ್ಕೆ ಸೀಮಿತವಾಗಿದೆ. ತಲೆಬರಹ ಪಂಚಾಂಗ' ಎಂದು ಇರಬೇಕಿತ್ತು. ಸರಿಪಡಿಸಬೇಕು. 'ಜ್ಯೋತಿಷ್ಯ' ಪದಪ್ರಯೋಗ ತಪ್ಪು;'ಜ್ಯೋತಿಷ'-ಸರಿ; ಇದನ್ನೂ ಸರಿಪಡಿಸಬೇಕು. ಪಂಚಾಂಗದ ಮಾಹಿತಿಯೂ ಸಮಗ್ರವಾಗಿಲ್ಲ.(ರಾಶಿ = ಹಿಂದೂ ಸೌರಮಾನ ಮಾಸಗಳು ; ಜ್ಯೋತಿಷ ಪುಟ ಒಂದು ಚುಟುಕ ಇದೆ.

ಪಂಚಾಂಗ

[ಬದಲಾಯಿಸಿ]
ಪಾಶ್ಚಾತ್ಯ ಜೋತಿಷ್ಯದಲ್ಲಿ ಉಪಯೋಗಿಸಲಾಗುವ ಚಿಹ್ನೆಗಳು

ಜ್ಯೋತಿಷ್ಯವು ಬಾಹ್ಯಾಕಾಶದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಮುಖ್ಯವಾಗಿವೆ..
ಪಂಚಾಂಗ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ.ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.

ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.
ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.
ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.

ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.
ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರು ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲವೆಂಬುದನ್ನು ಗಮನಿಸಬೇಕು.

ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ.
ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ.

ನಕ್ಷತ್ರ

[ಬದಲಾಯಿಸಿ]

ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.

ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ.

ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ.

ಬವ, ಬಾಲವ ಮೊದಲಾದ ಕರಣಗಳು ಹನ್ನೊಂದು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು.

ರಾಶಿಗಳು

[ಬದಲಾಯಿಸಿ]

ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ ರಾಶಿಗಳಿವೆ

೧) ಮೇಷ

೨) ವೃಷಭ

೩) ಮಿಥುನ

೪) ಕರ್ಕಾಟಕ

೫) ಸಿಂಹ

೬) ಕನ್ಯಾ

೭) ತುಲಾ

೮) ವೃಶ್ಚಿಕ

೯) ಧನು

೧೦) ಮಕರ

೧೧) ಕುಂಭ

೧೨) ಮೀನ

ಗ್ರಹಗಳು

[ಬದಲಾಯಿಸಿ]

ಒಟ್ಟು ಒಂಬತ್ತು ಗ್ರಹಗಳು

೧) ಸೂರ್ಯ

೨) ಚಂದ್ರ

೩) ಮಂಗಳ

೪) ಬುಧ

೫) ಗುರು

೬) ಶುಕ್ರ

೭) ಶನಿ

೮) ರಾಹು

೯) ಕೇತು


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಅಕ್ಷರಕ್ಕೆ ಯಾವ ನಕ್ಷತ್ರ ಸೂಕ್ತ ಎಂದು ಕೂಲಂಕೂಷವಾಗಿ ತಿಳಿಯಿರಿ

|

ನಾಳೆಯ ರಾಶಿ ಭವಿಷ್ಯ